ನಿಮ್ಮಲ್ಲಿ ಎಷ್ಟು ಜನ ಇನ್‌ಲ್ಯಾಂಡ್ ಲೆಟರ್‍, ಪೋಸ್ಟ್ ಕಾರ್ಡ್‌, ಕವರ್‌ಗಳನ್ನು ಬಳಸಿ ನಿಮ್ಮದೇ ಕೈಬರಹದಲ್ಲಿ ಕಾಗದ ಬರೆದಿದ್ದೀರಿ ಎಂದು ನನಗೆ ಗೊತ್ತಿಲ್ಲ. ಆ ಅನುಭವ ಇದ್ದವರಿಗೂ ಇಲ್ಲದವರಿಗೂ ಈ ಬ್ಲಾಗ್ ಅನ್ವಯಿಸುತ್ತದೆ! ನಾನು ಬಾಲ್ಯದಿಂದಲೂ ಇನ್‌ಲ್ಯಾಂಡ್‌ ಲೆಟರ್‍, ಕವರ್‍, ಪೋಸ್ಟ್‌ ಕಾರ್ಡ್‌ ಬಳಸಿದವ. ಆದ್ದರಿಂದ ಈ ಬ್ಲಾಗಿನಲ್ಲಿ `ನಾನು’ ಹೆಚ್ಚಾಗಿರುತ್ತದೆ!   ನಿನ್ನೆ ಕಚೇರಿಯಲ್ಲಿ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿದ ನಿವೃತ್ತ ಅಧಿಕಾರಿಯೊಬ್ಬರು ಸಿಕ್ಕಿದಾಗ ಈ ಬ್ಲಾಗ್‌ ನನ್ನೊಳಗಿಂದ ಧುಮ್ಮಿಕ್ಕಿತು!   

ನನ್ನ ಬದುಕಿನಲ್ಲಿ ಅಂದಾಜು ಐದು ಸಾವಿರ ಅಂಚೆ ಪತ್ರಗಳನ್ನು ಬರೆದಿರಬಹುದು ಎಂದುಕೊಂಡಿದ್ದೇನೆ; ಎಷ್ಟು ಜನ ಈ ಕಾಗದಗಳನ್ನು ಇಟ್ಟುಕೊಂಡಿರಬಹುದು, ನನಗೆ ಗೊತ್ತಿಲ್ಲ. ೧೯೮೨ರವರೆಗೆ ನನಗೆ ಬಂದ ಪತ್ರಗಳನ್ನು ನಾನು  ಉಜಿರೆಯ ಸಿದ್ಧವನದ ಹಿತ್ತಲಿನಲ್ಲಿ ಸುಟ್ಟಿದ್ದನ್ನು, ಕೆಲವರು ವಿನಂತಿಸಿದ ಹಾಗೆ ಅವರವರ ಪತ್ರಗಳನ್ನು ಹಿಂದಿರುಗಿಸಿದ್ದು ಬಿಟ್ಟರೆ, ನನಗೆ ಬಂದ ಪತ್ರಗಳಲ್ಲಿ ಬಹಳಷ್ಟನ್ನು – ಸುಮಾರು ೬೦೦ ಇರಬಹುದು – ಇನ್ನೂ ಇಟ್ಟುಕೊಂಡಿದ್ದೇನೆ! ಶಿವರಾಮು, ನಾ ಡಿಸೋಜಾ, ದತ್ತಾತ್ರೇಯ ಹೊಸಬಾಳೆ, ನ ಕೃಷ್ಣಪ್ಪ, ಹೊವೆ ಶೇಷಾದ್ರಿ ಬರೆದ ಹಲವು ಪತ್ರಗಳು ಅದರಲ್ಲಿವೆ; ನಾನು ಎಂದೂ – ಈಗಲೂ- ಭೇಟಿ ಮಾಡಿರದ ಹಲವು ವ್ಯಕ್ತಿಗಳ ಪತ್ರಗಳಿವೆ. ಬಸ್ಸಿನಲ್ಲಿ ಸಿಕ್ಕಿದ್ದ ಸಂತನೊಬ್ಬ ತನ್ನದೇ ಇಂಗ್ಲಿಶಿನಲ್ಲಿ ಬರೆದ ಪತ್ರಗಳಿವೆ; ಮೆಜೆಸ್ಟಿಕ್ಕಿನಲ್ಲಿ ಎಂದೋ ಸಿಕ್ಕಿದ್ದ ಎಸ್‌ಯುಸಿಐ ಕಾರ್ಯಕರ್ತೆ ಬರೆದ ಪತ್ರವಿದೆ; ತುಮಕೂರಿನ ಹಾದಿಯಲ್ಲಿ ಸಿಕ್ಕಿದ ಶಿಕ್ಷಿತ ಭಿಕ್ಷುಕ ಊದಿನ ಕಡ್ಡಿ ಪ್ಯಾಕೆಟಿನ ಹಿಂಭಾಗದಲ್ಲಿ ಬರೆದ ವಾಕ್ಯಗಳೂ ಇವೆ; ಸಮಾಜಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಡಲು ಮುಂದಾದ ಸ್ನೇಹಿತೆಯ ಖಚಿತ ವಾಕ್ಯಗಳಿವೆ; ನನ್ನ ದಿಕ್ಕೇಡಿ ಬದುಕಿನ ಬಗ್ಗೆ ಕಟುವಾಗಿ ಬರೆದ ಸ್ನೇಹಿತರ ಪತ್ರಗಳಿವೆ; ಇನ್ನೂ ಏನೇನೋ ಇವೆ ಬಿಡಿ.  `ಶಂಕರನಾರಾಯಣನ ಸೈಕಲ್ಲು ಪುರಾಣ’ ಎಂಬ ನನ್ನ ಕಥೆ (ಹೌದು, ನನ್ನದೇ ಕಥೆ!)ಯ ಕೊನೆಗೆ ಬರುವಂತೆ ಎಂದೋ ಒಮ್ಮೆ ಅವುಗಳನ್ನು ಸುತ್ತಲೂ ಹಾಸಿ ಕೂತು ಓದುತ್ತೇನೆ. ನಾನು ಅವರಿಗೆ ಏನು ಬರೆದಿದ್ದೆ ಎಂಬ ಸುಳಿವೂ ಅಲ್ಲಲ್ಲಿ ಸಿಗುತ್ತದೆ. ನಾನು ಬರೆದು ಅಂಚೆಗೆ ಹಾಕದ ಸುಮಾರು ೧೦೦ ಕಾಗದಗಳೂ ಅದರಲ್ಲಿವೆ! ಈಗಿನ ಲೆಕ್ಕದಲ್ಲಿ ದಶಕಗಳಿಂದ ಡ್ರಾಫ್ಟ್ ಆಗಿಯೇ ಉಳಿದಿವೆ!!

ನಾನು ಬರೆದ ಕಾಗದಗಳೆಲ್ಲವೂ ಅವರವರಿಗೇ ತಲುಪಿದ್ದವು. ಅವುಗಳನ್ನು ಅವರವರಿಗೆ ತಲುಪಿಸಿದ ಅಂಚೆ ಅಣ್ಣಂದಿರು, ಅಕ್ಕಂದಿರು ಎಂದೂ ನಾನು ಕಾಗದದಲ್ಲಿ ಬರೆದಿದ್ದೇನೆಂದು ಇಣುಕುವ ಗೋಜಿಗೆ ಹೋಗಲಿಲ್ಲ. ಯಾವುದೋ ಅಂಚೆ ಡಬ್ಬಿಯಲ್ಲಿ ಹಾಕಿದ ಪತ್ರವು ಅಷ್ಟೇ ಖಾಸಗಿಯಾಗಿ ವಿಳಾಸದಾರರಿಗೆ ತಲುಪುತ್ತಿದ್ದವು. ಅವುಗಳಿಗೆ ನಾನು ಪಾಸ್‌ವರ್ಡ್‌ ಹಾಕಿರಲಿಲ್ಲ; ಅವುಗಳನ್ನು ಯಾರೂ ಕಾಣದಂತೆ ಮುಚ್ಚಿರಲಿಲ್ಲ. ಆಮೇಲೆ ಬಂದ ಇನ್‌ಲ್ಯಾಂಡ್‌ ಲೆಟರ್‌ಗಳು ತುಂಬಾ ತೊಂದರೆ ಕೊಟ್ಟವು ಎಂದು ಕೇಳಿ ಬಲ್ಲೆ; ಬಳಸಿಲ್ಲ. ನನ್ನ  ಹಸಿಬಿಸಿ ಪ್ರೇಮಪತ್ರಗಳು, ದ್ವೇಷವನ್ನು ಹೊತ್ತ ಪ್ಯಾರಾಗಳು, ತಮಾಶೆಯ ವಾಕ್ಯಗಳು, ಪ್ರವಾಸದ ವಿವರಗಳು – ಎಲ್ಲವೂ ಖಾಸಗಿಯಾಗೇ ಉಳಿದುಕೊಂಡವು. ಇಂದು ನಾವು ಬಳಸುವ ಈ ಮೈಲ್, ಖಾಸಗಿ ಮೆಸೇಜ್ – ಎಲ್ಲವೂ ಎಷ್ಟೋ ಎನ್‌ಕ್ರಿಪ್ಟ್ ಆಗಿದ್ದರೂ, ಖಾಸಗಿಯಾಗಿ ಉಳಿದಿಲ್ಲ. ನನ್ನ ಖಾಸಗಿತನ ಸೋರಿಹೋಗಿದೆ ಎಂದು ದೂರಿದರೂ, ಆ ದೂರನ್ನು ಒಂದು ಯಂತ್ರವೇ ತನಗೆ ತಿಳಿದ ಮಟ್ಟಿಗೆ ಪರಿಶೀಲಿಸುತ್ತದೆ; ಪ್ರತ್ಯುತ್ತರ ಕೊಡಬೇಡಿ, ಇದು ನೋ ರಿಪ್ಲೇ ಐಡಿ ಎಂದು ಮುಖಕ್ಕೆ ರಾಚುವಂತೆ ಹೇಳುತ್ತದೆ.

ಆ ನನ್ನ ದಿನಗಳಲ್ಲಿ ನಾನು ನನ್ನ ಆಗಿನ ಸ್ನೇಹಿತೆಗೆ ಆಪ್ತವಾಗಿ ಕವರ್‌ನಲ್ಲಿ ಕಾಗದ ಬರೆಯುತ್ತಿದ್ದೆ; ಅದನ್ನು ಆಕೆಗೆ ತಲುಪಿಸುತ್ತಿದ್ದುದು ಅವಳ ಅಪ್ಪ! ಏಕೆಂದರೆ ಆ ಹಳ್ಳಿಯಲ್ಲಿ ಅವರೇ ಅಂಚೆಯ ಅಣ್ಣ ಆಗಿದ್ದರು. ಒಮ್ಮೆ ನನ್ನ ಕಾಗದ ಅವಳಿಗೆ ತಲುಪಿಲ್ಲ ಎಂದು ಅನುಮಾನವಾಗಿ ಅಂಚೆ ಇಲಾಖೆಗೆ ದೂರು ಕೊಟ್ಟಿದ್ದೆ. ಅದಕ್ಕೆ ಪಾಪ, ಆ ಒಳ್ಳೆಯ ಅಣ್ಣ ಮತ್ತು ಅಪ್ಪ ಸಮಜಾಯಶಿ ಕೊಡಬೇಕಾಗಿ ಬಂದಿತ್ತು. ಮತ್ತೊಮ್ಮೆ ಅವರು ಸಿಕ್ಕಾಗ ಏನೂ ಬೇಸರಿಸದೆ, `ನೀನು ದೂರು ಕೊಡೋ ಬದಲು ನನಗೇ ತಿಳಿಸಬಹುದಿತ್ತಲ್ಲ ಮಾರಾಯ, ನನ್ನ ಮಗಳದ್ದಿರಬಹುದು, ಇನ್ನಾರದ್ದೋ ಇರಬಹುದು, ನಾನು ಈ ಊರಿನಲ್ಲಿ ಯಾರ ಪತ್ರವನ್ನೂ ನೋಡುವುದಿಲ್ಲ; ದಶಕಗಳಿಂದ ಈ ಕೆಲಸ ಮಾಡಿಕೊಂಡು ಬಂದಿದ್ದೇನೆ’ ಎಂದು ಖಾಸಗಿ ವಿವರಣೆ ನೀಡಿದಾಗ ನನಗೆ ಬೇಜಾರಾಗಿತ್ತು. ಅಂಥ ಒಳ್ಳೆಯ ಅಪ್ಪ ಮತ್ತು ನಮ್ಮೆಲ್ಲರ ಖಾಸಗಿತನವನ್ನು ಎಂದೆಂದೂ ಮುಟ್ಟದೆ ಕೆಲಸ ಮಾಡಿದ ಅಂಚೆಯ ಅಣ್ಣ.

`ನಿಮ್ಮ ಸಂದೇಶಗಳು ಮೊದಲಿನಿಂದ ಕೊನೇವರೆಗೆ ಎನ್‌ಕ್ರಿಪ್ಟ್ ಆಗಿವೆ’ ಎಂದು ವಾಟ್ಸಪ್‌ನಲ್ಲಿ ಭರವಸೆ ಓದುವಾಗ `ಅರೆ, ಅಂಚೆ ಇಲಾಖೆಯ ಸಿಬ್ಬಂದಿ ಎಂದೂ ಈ ಘೋಷಣೆಯನ್ನು ಮಾಡದೆಯೇ ಶತಮಾನ ದಾಟಿಯೂ ಅದೇ ಕೆಲಸವನ್ನು ಮಾಡಿಕೊಂಡು ಬಂದಿಲ್ಲವೆ?’ ಅನ್ನಿಸುತ್ತದೆ.

ನಮ್ಮ ಫೇಸ್‌ಬುಕ್‌ ಸಂದೇಶಗಳು, ಎಸ್‌ಎಂಎಸ್‌ಗಳು, ಪ್ರೈವೇಟ್‌ ಮೆಸೇಜ್‌ಗಳು ಎಲ್ಲವೂ ನಾವು ಹೇಳಬೇಕಾದ್ದನ್ನು ತಕ್ಷಣವೇ ಮುಟ್ಟಿಸುತ್ತವೆಯೇನೋ ನಿಜ. ಹಾಗಂತಲೇ ನಾವೂ ತಕ್ಷಣಕ್ಕೇ ಸ್ಪಂದಿಸುತ್ತ ಮನಸ್ಸಿಗೆ ಬಂದಿದ್ದನ್ನೆಲ್ಲ ಗಳಹುವ ಚಟಕ್ಕೆ ಬಿದ್ದಿದ್ದೇವೆ. ಮೊನ್ನೆ ನನಗೆ ಕರೆ ಮಾಡಿದ ಪತ್ರಕರ್ತ ಮಿತ್ತರೊಬ್ಬರು  `ನಾವು ತುಂಬಾ ರಿಯಾಕ್ಷನರಿ ಮನೋಭಾವ ಬೆಳೆಸಿಕೊಳ್ತಾ ಇದೀವಿ ಅನ್ಸಲ್ವ?’ ಎಂದು ಆತಂಕದಿಂದ  ಕೇಳಿದ್ದರು. ನಿಜವೇ. ಒಂದು ಕಾಗದವನ್ನು ಅಚ್ಚುಕಟ್ಟಾಗಿ, ಪ್ಯಾರಾಗಳನ್ನು ಜೋಡಿಸಿ, ಬೇರೆ ಬೇರೆ ಬಣ್ಣಗಳಲ್ಲಿ ಬರೆಯುವಾಗ ನನ್ನೊಳಗೇ ಕ್ಷಣಕ್ಷಣಕ್ಕೂ ನಡೆಯುತ್ತಿದ್ದ ವಿಚಾರಗಳ ಸರಣಿಯನ್ನು ನಾನು ಫೇಸ್‌ಬುಕ್‌ ಗೋಡೆಯ ಮೇಲೆ ಬರೆಯುವಾಗ ಹೊಂದಿರುವುದಿಲ್ಲ. ಒಂದು ಕಾಗದವನ್ನು ಬರೆದು ನೀಟಾಗಿ ಮಡಚಿ, ಅಂದವಾಗಿ ವಿಳಾಸ ಬರೆದು, ಒಳಗಿನ ಕಾಗದವು ಅಂಟದಂತೆ ಮುಚ್ಚಿ, ಅಂಟಿಸಿ ಅಂಚೆಗೆ ಹಾಕುವ ಆ ಪ್ರೀತಿ, ಶ್ರದ್ಧೆ  ಮತ್ತು ಕಾಗದದ ಬಗೆಗಿನ ಗೌರವ ಈಗ ಉಳಿದಿಲ್ಲ. ಫೋನುಗಳೇ ಸಿಕ್ಕಿರುವಾಗ ಕಾಗದವೇಕೆ ಎಂದು ಕೇಳುವವರೇ ಹೆಚ್ಚು. ಅಂಚೆ ಕಾಗದವನ್ನು ಬರೆಯುವಾಗ, ವಿಳಾಸದಾರರನ್ನು ನಾವು ಎಷ್ಟು ಗೌರವದಿಂದ ಕಾಣುತ್ತಿದ್ದೆವು; ಪ್ರೀತಿ ಅಥವಾ ದ್ವೇಷವನ್ನು ಹೊರಹಾಕಲು ಎಷ್ಟೆಲ್ಲ ಮಾನಸಿಕ ಸಿದ್ಧತೆ ನಡೆಸುತ್ತಿದ್ದೆವು….

ನಮ್ಮ ಯುವ ಪೀಳಿಗೆಗೆ ಇನ್‌ಲ್ಯಾಂಡ್ ಲೆಟರ್‌ ಬರೆದೇ ಗೊತ್ತಿಲ್ಲ; ಕವರ್‍, ಪೋಸ್ಟ್ ಕಾರ್ಡನ್ನು ನೋಡಿಯೂ ಇಲ್ಲ. ಫೋನಿನಲ್ಲಿ, ಈಮೈಲಿನಲ್ಲಿ ಅಥವಾ ಮೆಸೆಂಜರ್‌ಗಳಲ್ಲಿ ನೀವು ಎಷ್ಟೇ ಬರೆದರೂ, ಅದು ಕಾಗದದ ಮೇಲೆ ಬರೆದ ಹಾಗೆ ಹರಳುಗಟ್ಟಿರುವುದಿಲ್ಲ ಎಂದು ನನಗೇ ಖಚಿತವಾಗಿ ಅನ್ನಿಸಿದೆ.  ಹೆಚ್ಚೆಂದರೆ ನೀವು ಈ ಥರ ವರ್ಡ್‌ ಪ್ರಾಸೆಸರಿನಲ್ಲಿ ಬರೆದು ಕಳಿಸಿದರೆ ಮಾತ್ರವೇ ಅದೊಂದು ಸಾಧಾರಣ ಮಟ್ಟದ ಪತ್ರವಾಗಬಹುದು; ಮಾಹಿತಿ, ಭಾವ ಎಲ್ಲವೂ ಇದ್ದರೂ, ಅದರಲ್ಲಿ ಕಾಗದದಲ್ಲಿ ಕೈಯಾರೆ ಬರೆಯುವಾಗಿನ ಆಪ್ತತೆ, ಒಳಗೊಳ್ಳುವಿಕೆ, ಯೋಚಿಸಿದ ಹಾಗೆಯೇ ಕಾಟು – ಚಿತ್ತು ಇಲ್ಲದೆ ಬರೆಯುವ ಶಿಸ್ತು – ಇವನ್ನು ನೀವು ಸಾಧಿಸಲಾರಿರಿ. ಏಕೆಂದರೆ ಈ ಕೀಲಿಮಣೆಯಲ್ಲಿ ಬ್ಯಾಕ್‌ಸ್ಪೇಸ್‌ ಕೀಲಿಯು ಅಗಲವಾಗಿಯೂ, ತಕ್ಷಣಕ್ಕೆ ಸಿಗುವಂಥದ್ದೂ ಆಗಿದೆ!

ನಾನು ಕೇವಲ ಕಾಗದದ ವಿಚಾರವಾಗಿ ಪ್ರಬಂಧ ಬರೆಯಲು ಹೊರಟಿಲ್ಲ. ಕಾಗದದ ನೆಪದಲ್ಲಿ ನಾವೆಷ್ಟು ಖಾಸಗಿತನವನ್ನು ಕಳೆದುಕೊಂಡುಬಿಟ್ಟಿದ್ದೇವೆ ಎಂದು ವಿಷಾದಿಸುತ್ತ ಬರೆಯುತ್ತಿದ್ದೇನೆ. ನನ್ನ ಮಗನಿಗೇ ನಾನು ಹೆಚ್ಚು ಕಾಗದ ಬರೆಯಲಿಲ್ಲ. ಅವನು ಕಾಲೇಜು ಮುಗಿಸುವವರೆಗೆ ಮನೆಯಲ್ಲೇ ಇದ್ದ. ಅವನ ಬದುಕಿನಲ್ಲಿ ಭೌತಿಕ ತುಮುಲಗಳಿರಲಿಲ್ಲ. ಅವನಿಗೆ ಈಗ ಈ ಮೈಲ್‌ ಬರೆದರೂ ಅವನಿಗೆ ನನ್ನ ಭಾವಗಳು ಕೈಬರಹದ ಮೂಲಕ ತಲುಪಿದರೆ ಮಾತ್ರವೇ ನನ್ನ ನಿಜ ಪರಿಚಯ ಆಗಬಹುದೇನೋ ಅನ್ನಿಸುತ್ತದೆ. ನಾನು ಅಲೆಮಾರಿಯಾಗಿ ಎಲ್ಲೆಲ್ಲೋ ಬದುಕಿದ್ದರಿಂದ ಕಾಗದಗಳೇ ನನ್ನ ಜೀವಾಳವಾಗಿದ್ದವು. ದಾವಣಗೆರೆಯ ಮಂಡಿಪೇಟೆಯಲ್ಲಿದ್ದ (ಈಗಲೂ ಇದೆಯೆ ಗೊತ್ತಿಲ್ಲ) ಸಿವಿ ಹಾಸ್ಟೆಲ್‌ನಲ್ಲಿ ದಿನವೂ ಅಂಚೆಯವನು ಬರುತ್ತಾನಾ ಎಂದು ನೋಡುವುದೇ ನನ್ನ ಕೆಲಸವಾಗಿತ್ತು; ಬಿಟ್ಟಿ ಊಟದಿಂದಲೇ ಉಸಿರು ಹಿಡಿದುಕೊಂಡಿದ್ದ ನನಗೆ ಆ ದಿನಗಳಲ್ಲಿ ಕಾಗದಗಳು ಬರದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ! ಆ ಕಾಲದಿಂದಲೂ ನಾನು ಕಾಪಿಟ್ಟುಕೊಂಡಿರುವ ೨೦-೩೦ ದಿನನಚರಿ ಪುಸ್ತಕಗಳಲ್ಲಿ ಯಾವ ದಿನ ಯಾರಿಗೆ ಯಾವ ಬಗೆಯ ಪತ್ರ ಬರೆದೆ ಎಂಬೆಲ್ಲ ಲೆಕ್ಕಗಳಿವೆ; ಯಾರಿಂದ ಪತ್ರ ಬಂತು ಎಂಬ ಪಟ್ಟಿಯೂ ಅಲ್ಲಲ್ಲಿ ಇದೆ. ಈ ಲೆಕ್ಕವೇ ಈಗ ಇಲ್ಲ. ಇನ್‌ಬಾಕ್ಸ್ ತುಂಬಿದ ಕೂಡಲೇ ಹಳೆಯದನ್ನು ಮುಲಾಜಿಲ್ಲದೆ ಬಿಸಾಡುವ ಅನಿವಾರ್ಯತೆ ನಮ್ಮೆದುರಿಗೆ ಇದೆ. (ನನ್ನ ಮೆಚ್ಚಿನ ಚೀನೀ ಲೇಖಕನನ್ನು ಹುಡುಕಲು ಬರೆದ ಪತ್ರಗಳಿರುವ ಯಾಹೂ ಮೈಲನ್ನು ನಾನಿನ್ನೂ ಸಕ್ರಿಯವಾಗಿ ಇಟ್ಟುಕೊಂಡಿದ್ದೇನೆ; ಅದು ಕೇವಲ ಆರ್ಕೈವ್‌.).

ನೀವು ಗೂಗಲ್‌ ಆರಂಭಿಸಿದ `ಅಲ್ಲೋ’ ಬಳಸಬೇಡಿ ಎಂದು ರಹಸ್ಯ ಬಯಲು ಕಾರ್ಯಕರ್ತ ಎಡ್ವರ್ಡ್‌ ಸ್ನೋಡೆನ್‌ ಹೇಳಿರಬಹುದು; ಅದು `ಅಲ್ಲೋ’ ಗೆ ಮಾತ್ರ ಸೀಮಿತವಲ್ಲ. ಮುಕ್ತ ತಂತ್ರಾಂಶದ, ಗ್ನು – ಲಿನಕ್ಸ್‌ ಪಿತಾಮಹ ರಿಚರ್ಡ್‌ ಸ್ಟಾಲ್‌ಮನ್‌ನನ್ನು ನಾನು (ಈಗಲ್ಲ, ೧೪ ವರ್ಷಗಳ ಹಿಂದೆ) ವಿಜಯ ಕರ್ನಾಟಕದ ಸಾಪ್ತಾಹಿಕಕ್ಕಾಗಿ ಈಮೈಲ್‌ ಸಂದರ್ಶನ ಮಾಡಿದಾಗ ಅವರು `ನಾನು ಜಗತ್ತಿನ ಯಾವುದೋ ಮೂಲೆಯಲ್ಲಿದ್ದೇನೆ; ಮೊಬೈಲ್‌ ಬಳಸುವುದಿಲ್ಲ; ನನ್ನ ಖಾಸಗಿತನವನ್ನು ನನಗೇ ಬಿಡಿ’ ಎಂದು ಬರೆದಿದ್ದು ನೆನಪಾಗುತ್ತಿದೆ. ಅದಾಗಿ ೧೦ ವರ್ಷಗಳ ಹಿಂದೆ ಅವರು ಬೆಂಗಳೂರಿಗೆ ಓಪನ್‌ ಜನರಲ್ ಲೈಸೆನ್ಸ್‌ ಕಾರ್ಯಾಗಾರಕ್ಕೆ ಬಂದಾಗ ನಾವು ಕೆಲವರ ಜೊತೆಗೆ ಮಾತಾಡುತ್ತ `ಪ್ರೈವಸಿ ನಾಶವೇ ಇಂಟರ್‌ನೆಟ್‌ನ ಅತಿದೊಡ್ಡ ಅಪಾಯ’ ಎಂದು ವಿವರಿಸಿದ್ದರು.

ಇಂಟರ್‌ನೆಟ್‌ನ ಹಲವು ಪ್ರಯೋಜನಗಳನ್ನು ಪಡೆದ, ಪಡೆಯುತ್ತಿರುವ ನಾನು ಅದನ್ನು ಖಂಡತುಂಡವಾಗಿ ವಿರೋಧಿಸುವುದು ಆಗದ ಮಾತು. ಆದರೆ ಇಂಟರ್‌ನೆಟ್‌-ಫೇಸ್‌ಬುಕ್‌ ಅದೇ ಬದುಕಾಗಬಾರದು ಎಂಬ ಕಾಳಜಿಯನ್ನು ಉಳಿಸಿಕೊಳ್ಳಲು ನಾನೂ ನಿಮ್ಮಂತೆಯೇ ಶತಾಯಗತಾಯ ಪ್ರಯತ್ನಿಸುತ್ತಿದ್ದೇನೆ. ನಾನು ಅಥವಾ ನೀವು ಈಗಲಾದರೂ ಒಂದು ಆಪ್ತ ಪತ್ರವನ್ನು ಕಾಗದದಲ್ಲಿ ಬರೆದರೆ ಅದನ್ನು ಯಾವುದೇ ಮಧ್ಯಪ್ರವೇಶ, ಡಿಸ್‌ಕ್ಲೈಮರ್‍, ಖಾಸಗಿತನದ ಭರವಸೆ – ಏನನ್ನೂ ಕೊಡದೆಯೇ ತಲುಪಿಸಲು ಅಂಚೆ ಇಲಾಖೆಯು ಈಗಲೂ ಸಿದ್ಧವಿದೆ. ಅಲ್ಲಲ್ಲಿ ಅಂಚೆ ಡಬ್ಬಗಳೂ ಇವೆ. ಈಮೈಲ್‌ನಿಂದಾಗಿ ಬಡಾವಣೆಗಳು, ಪಿನ್‌ಕೋಡ್‌ಗಳ, ಹಂತ-ಬ್ಲಾಕ್‌-ತಿರುವುಗಳ ಲೆಕ್ಕವನ್ನೇ ಮರೆತಿರುವ, ಹತ್ತಿರದವರ ಅಂಚೆ ವಿಳಾಸವನ್ನೇ ಮರೆತುಬಿಟ್ಟಿರುವ ನಾವು ಈಸಲು ಸಿದ್ಧರಾಗಬೇಕಷ್ಟೆ. ವಿವಿಧ ಕಾನೂನು ಅಗತ್ಯಗಳಿಗಾಗಿ ಅಡ್ರೆಸಿಗೆ ಒಂದು ಪ್ರೂಫ್‌ ಇದೆಯೇ ಹೊರತು, ಅಡ್ರೆಸನ್ನು ನಮಗಾಗಿ ಬಳಸುವ ಇರಾದೆಯನ್ನೇ ಮರೆತಿದ್ದೇವೆ.

ನಮ್ಮೆಲ್ಲ ಅಕ್ಷರಗಳೂ ಅಂಕಾಕ್ಷರಗಳಾಗಿ ಹೋಗುವ ಮುನ್ನ, ನಮ್ಮೆಲ್ಲರ ಮನದೊಳಗೆ ಬೀಡುಬಿಟ್ಟಿರುವ ನಮ್ಮದೇ ಕೈಬರಹಗಳು, ನಮ್ಮದೇ ಶೈಲಿಗಳು ನಮ್ಮ ಕೈಬಿಡುವ ಮುನ್ನ, ನಮ್ಮೆಲ್ಲ ಚಿಂತನೆಗಳು ದಿಢೀರ್‌ ಪ್ರತಿಕ್ರಿಯೆಯ ಬೆಂಕಿಯಲ್ಲಿ ಚಟಚಟನೆ ಉರಿದು ಹೋಗುವ ಮುನ್ನ, ಮೇಜಿನ ಮೇಲಿರುವ ಕಂಪ್ಯೂಟರನ್ನು ಬದಿಗೆ ಸರಿಸಿ, ಬಿಳಿಹಾಳೆಯನ್ನು ತೆರೆದು ಒಂದಾದರೂ ಪತ್ರವನ್ನು ಬರೆಯಬೇಕಿದೆ.

Share.
Leave A Reply Cancel Reply
Exit mobile version