ಸವಿನೆನಪುಗಳು ಒಂದೇ ಎರಡೇ!
- ದರ್ಭಾಂಗದಲ್ಲಿ `ಮಹಾರಾಜಾಧಿರಾಜ ಕಾಮೇಶ್ವರ ಸಿಂಗ್ ಕಲ್ಯಾಣಿ’ ಫೌಂಡೇಶನ್ ಎಂಬ ಪ್ರತಿಷ್ಠಾನವಿದೆ. ಅವರು ಪ್ರಕಟಿಸಿದ `ಕಲ್ಯಾಣಿ ಕೋಶ’ ಎಂಬ ಮೈಥಿಲಿ-ಇಂಗ್ಲಿಶ್ ನಿಘಂಟನ್ನು ಪಡೆಯಲು ಭಾರತವಾಣಿಯಿಂದ ಪತ್ರ ಹೋಗಿತ್ತು. ಮೊದಲು ರಾಯಧನವನ್ನು ಪಡೆದು ಪ್ರಕಟಿಸಲು ಅನುಮತಿ ನೀಡುವುದಾಗಿ ತಿಳಿಸಿದ ಪ್ರತಿಷ್ಠಾನದ ಮುಖ್ಯಸ್ಥರು `ಭಾರತವಾಣಿ’ಯ ಉದ್ದೇಶಗಳನ್ನು ತಿಳಿದು, ಯಾವುದೇ ಹಣವನ್ನೂ ಪಡೆಯದೇ ಹಕ್ಕನ್ನು ಕೊಟ್ಟರು.
- ಒಡಿಶಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಅಡಗಿ ಕೂತಿದ್ದ `ಎನ್‌ಸೈಕ್ಲೋಪೀಡಿಯಾ ಒರಿಸಾನ’ ಎಂಬ ನಾಲ್ಕು ಸಂಪುಟಗಳ ವಿಶ್ವಕೋಶವನ್ನು ನಮ್ಮ ಕ್ಷೇತ್ರ ಪ್ರತಿನಿಧಿ ಶ್ರೀ ಗೋಪಿನಾಥ್ ಸಾಹುರವರು ಶೋಧಿಸಿ, ಪಡೆದು ಕಳಿಸಿದರು.
- `ಭಾರತವಾಣಿ’ಗೆ ನೆರವು ನೀಡಿ ಎಂದಕೂಡಲೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ|| ಮನು ಬಳಿಗಾರರು `ಸಂಕ್ಷಿಪ್ತ ಕನ್ನಡ ನಿಘಂಟು’ ಕೃತಿಯನ್ನು ತಕ್ಷಣವೇ ನೀಡಿದರಲ್ಲದೆ, ಎಂಟು ಸಂಪುಟಗಳ ಬೃಹತ್ `ಕನ್ನಡ-ಕನ್ನಡ ನಿಘಂಟು’ ಕೃತಿಯನ್ನೂ ನೀಡಿದರು.
- `ಭಾರತವಾಣಿ’ ಯೋಜನೆಯನ್ನು ತಿಳಿದ ಮೈಸೂರಿನವರೇ ಆದ ಸಂಕೇತಿ ಭಾಷಾ ಕಾರ್ಯಕರ್ತ ಶ್ರೀ ಪ್ರಣತಾರ್ತಿಹರನ್‌ರವರು ಸಂಕೇತಿ ಭಾಷೆಯ ಬಗ್ಗೆ ತಾವೇ ರೂಪಿಸಿದ ಹನ್ನೆರಡು ಸಂಪುಟಗಳನ್ನು ನೀಡಿದರು.
- ಮೈಸೂರು ವಿಶ್ವವಿದ್ಯಾಲಯದ ಆಗಿನ ಉಪಕುಲಪತಿ ಡಾ|| ಕೆ ಎಸ್ ರಂಗಪ್ಪನವರು ಭಾರತವಾಣಿಯ ಮೊದಲ ಒಪ್ಪಂದಕ್ಕೆ ಸಹಿ ಹಾಕಿ ವಿವಿಯ ಎಲ್ಲ ಕೋಶಗಳನ್ನು, ಇಂಗ್ಲಿಶ್-ಕನ್ನಡ ನಿಘಂಟನ್ನು ಕೊಟ್ಟರು.
- ಗುಜರಾತಿನ ಆದಿಪುರದಲ್ಲಿರುವ ಸಿಂಧಾಲಜಿ ಇನ್‌ಸ್ಟಿಟ್ಯೂಟ್‌ನವರು ಕೇವಲ ಪತ್ರವನ್ನು ನೋಡಿಯೇ ತಮ್ಮ `ಸಿಂಧಿ- ಹಿಂದಿ – ಇಂಗ್ಲಿಶ್’ ನಿಘಂಟನ್ನು ಕಳಿಸಿಯೇಬಿಟ್ಟರು. ಅವರು ಯಾರು ಎಂದು ನಮಗೆ ಇನ್ನೂ ಪರಿಚಯವಾಗಿಲ್ಲ!
- ತ್ರಿಪುರಾ ಸರ್ಕಾರದ ಶಿಕ್ಷಣ ಇಲಾಖೆಯು `ಭಾರತವಾಣಿ’ಯ ಪತ್ರವನ್ನು ಕಂಡಕೂಡಲೇ ತನ್ನ ಎಲ್ಲ ಪಠ್ಯಪುಸ್ತಕಗಳ ಸಿಡಿಗಳನ್ನು ದೊಡ್ಡ ಬಾಕ್ಸಿನಲ್ಲಿ ಕಳಿಸಿಕೊಟ್ಟಿತು. ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ,ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳೂ ಹೀಗೆಯೇ ಬೆಂಬಲ ನೀಡಿದವು.
- ದಿಲ್ಲಿಯ ಸಿಎಸ್‌ಟಿಟಿಯು ನೂರಾರು ಪದಕೋಶ – ನಿಘಂಟುಗಳನ್ನು ರೂಪಿಸಿದೆ. ಅದಂತೂ ಯೋಜನೆಯ ಉದ್ಘಾಟನೆಗೆ ಮುನ್ನವೇ ಟ್ರಕ್ಕಿನಲ್ಲಿ ತನ್ನೆಲ್ಲ ಪ್ರಕಟಣೆಗಳ ಪ್ರತಿಗಳನ್ನು ರವಾನಿಸಿತು. ಕೇಂದ್ರೀಯ ಹಿಂದಿ ನಿರ್ದೇಶನಾಲಯವೂ ಹೀಗೆಯೇ ತನ್ನ ಅಮೂಲ್ಯ ನಿಘಂಟುಗಳನ್ನು ಕಳಿಸಿಕೊಟ್ಟಿತು.
- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮಾವರ್‌ರವರಂತೂ ಆದರಿಸಿ ಕರೆದು ಪುಸ್ತಕಗಳನ್ನು ಕಳಿಸಿಕೊಟ್ಟರು.
- ಇತ್ತೀಚೆಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಶ್ರೀ ಬಿದ್ದತಂಡ ತಮ್ಮಯ್ಯ ಮತ್ತು ರಿಜಿಸ್ಟ್ರಾರ್ ಶ್ರೀ ಉಮರಬ್ಬ, , ವಿಶ್ವ ಕೊಂಕಣಿ ಕೇಂದ್ರದ ಶ್ರೀ ಬಸ್ತಿ ವಾಮನ್ ಶೆಣೈ – ಭಾರತವಾಣಿ ಜೊತೆಗೆ ಒಪ್ಪಂದಕ್ಕೆ ಖುಷಿಯಿಂದ ಸಹಿ ಹಾಕಿ ಕಳಿಸಿಕೊಟ್ಟರು.
ಭಾರತವಾಣಿಯಂತಹ ಯೋಜನೆಯಲ್ಲಿ ಕೆಲಸ ಮಾಡುತ್ತಿರುವುದು ಒಂದು ಸಾಧನೆಯಲ್ಲ; ಸೌಭಾಗ್ಯ. ಇದು ನನಗೆ ಕೇವಲ ವೃತ್ತಿಯಲ್ಲ; ನನ್ನ ಬದುಕಿನ ನೋಟವನ್ನು ಬದಲಿಸಿದ ಪ್ರವೃತ್ತಿಯೂ ಹೌದು. ಲಖ್ನೋದಲ್ಲಿ ಆಗಿನ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿಯವರು `ಭಾರತವಾಣಿ’ ಯೋಜನೆಯನ್ನು ಉದ್ಘಾಟಿಸಿ ಇಂದಿಗೆ (೨೫ ಮೇ) ಒಂದು ವರ್ಷವೇ ಆಯಿತು. ದೊಡ್ಡ ಕನಸುಗಳನ್ನು ಹೊತ್ತ ಯೋಜನೆಗೆ ಇಂದು ವರ್ಷ ಏನೂ ಅಲ್ಲ. ಸಾವಿರಾರು ಭಾಷೆಗಳ ವೈವಿಧ್ಯಮಯ ದೇಶದಲ್ಲಿ ಈವರೆಗೂ ಸರ್ಕಾರದ ವತಿಯಿಂದ ಬಹುಭಾಷಾ ಆನ್‌ಲೈನ್ ಜ್ಞಾನ/ಮಾಹಿತಿ ವೇದಿಕೆಯೇ ಇರಲಿಲ್ಲ ಎಂಬ ವಾಸ್ತವದ ಹಿನ್ನೆಲೆಯಲ್ಲಿ ನೋಡಿದಾಗ ನಮ್ಮ ಈ ಪುಟ್ಟ ಹೆಜ್ಜೆಯೂ ದೊಡ್ಡದಿರಬಹುದೇನೋ ಎಂದು ಭಾಸವಾಗುತ್ತದೆ, ಅಷ್ಟೆ! `ಡಿಜಿಟಲ್ ಇಂಡಿಯಾ’ದ ಹಲವು ಕನಸುಗಳಲ್ಲಿ ಇದೂ ಒಂದು. ಈ ಕನಸು ನನಸಾಗಿಸುವಲ್ಲಿ ನನ್ನ ತಂಡ ಸದಾ ನಿರತವಾಗಿದೆ ಎಂಬ ಖುಷಿ ನನ್ನದು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಡಳಿತದಲ್ಲಿ ಒಂದು ಮಹತ್ವದ ಯೋಜನೆಯಲ್ಲಿ ಭಾಗಿಯಾಗಿದ್ದೇನೆ ಎಂಬ ಹೆಮ್ಮೆ ನನಗಿದೆ.
ಒಂದು ವರ್ಷದಲ್ಲಿ `ಭಾರತವಾಣಿ’ಯು ಗಮನಾರ್ಹವಾಗಿ ಸಾಧಿಸಿದ್ದೇನು? ಅಂಕಿ ಅಂಶಗಳಲ್ಲಿ ಹೇಳುವುದಾದರೆ, ಬಗೆಬಗೆಯ ಭಾಷೆಗಳ ೨೨೨ ನಿಘಂಟು / ಪದಕೋಶಗಳನ್ನು ಭಾರತವಾಣಿಯು ಪ್ರಕಟಿಸಿದ್ದು, ಅದರಲ್ಲೂ ೫೧ ಇಂಥ ಕೃತಿಗಳು ಆಂಡ್ರಾಯ್ಡ್ ಆಪ್‌ನಲ್ಲಿ ಸಿಗುತ್ತಿರುವುದು ನಮ್ಮ ಹೆಮ್ಮೆಯ ಕಾರ್ಯ. ಈ ಪುಟವನ್ನು ಮೀರಿಸುವ ಇನ್ನಾವುದೇ ಪುಟ ನಮಗೆ ಈವರೆಗೂ ಸಿಕ್ಕಿಲ್ಲ. ಇದಲ್ಲದೆ ಭಾರತೀಯ ಭಾಷೆಗಳ ಕಲಿಕೆ ಕುರಿತು ನೂರಾರು ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ತಾಣದ `ಜ್ಞಾನಕೋಶ’ದ ಕೆಲಸ ಇದೀಗ ಆರಂಭವಾಗಿದೆ. ವಿವಿಧ ರಾಜ್ಯಗಳಿಗೆ ಸೇರಿದ ಸಾವಿರಕ್ಕೂ ಹೆಚ್ಚು ಪಠ್ಯಪುಸ್ತಕಗಳಿವೆ. ೫೦೦ಕ್ಕೂ ಹೆಚ್ಚು ವಿಡಿಯೋಗಳಿವೆ. ಮುಂದೆ ಮಾಡಬೇಕಾದ ಕೆಲಸ ಬಹಳಷ್ಟಿದೆ. ಅವನ್ನು ಕಾಲಕ್ರಮೇಣ ತಿಳಿಸುವೆ.
ಅಂಕಿ-ಅಂಶಗಳನ್ನು ಮೀರಿದ ಸಂಗತಿಯೆಂದರೆ `ಭಾರತವಾಣಿ’ಯಲ್ಲಿ ಈವರೆಗೆ ೮೪ ಭಾರತೀಯ ಭಾಷೆಗಳಿಗೆ ವೇದಿಕೆ ಒದಗಿಸಿದ್ದು ಮತ್ತು ಈ ಎಲ್ಲಾ ಭಾಷೆಗಳಲ್ಲೂ ಒಂದಲ್ಲ ಒಂದು ಕೃತಿ ಇರುವುದು. ಕಿರುಭಾಷೆಗಳಲ್ಲಿ ಒಂದಾದರೂ ಭಾಷಾ ಕಲಿಕೆ ಮಾಹಿತಿ ಪುಸ್ತಕವನ್ನು ಸಂಗ್ರಹಿಸುವುದು ಹರಸಾಹಸವಾಗಿದೆ. ಹಕ್ಕುಸ್ವಾಮ್ಯವನ್ನೂ ಪಡೆದು ಪ್ರಕಟಿಸುವುದು ಸುಲಭಸಾಧ್ಯವಲ್ಲ ಎಂಬುದು ಅರಿವಾಗಿದೆ. ಮುಕ್ತಜ್ಞಾನದ ಮಾನಸಿಕತೆಯನ್ನು ಈ ಸಂಸ್ಥೆಗಳಲ್ಲಿ ಮೂಡಿಸಬೇಕು; ಆಗಲೇ `ಭಾರತವಾಣಿ’ಗೆ ನೆರವು ಸಿಗುತ್ತದೆ. ನನ್ನ ಮಿತ್ರ, (ಗಾಯಕ-ಕಲಾವಿದ-ಶಿಕ್ಷಕ-ನಟ!) ಲಕ್ಷ್ಮೀನಾರಾಯಣ ಹಾಡಿದ ಈ ಹಾಡಿನಲ್ಲಿ ಭಾರತವಾಣಿಯ `ಭಾರತವಾಣಿ ಗೀತೆ’ಯಲ್ಲಿ ಈ ಭಾಷೆಗಳ ಪಟ್ಟಿಯೇ ಇದೆ. ದಯವಿಟ್ಟು ಕೇಳಿ.
ಪರಿಸರ ವೈವಿಧ್ಯ ಇರುವೆಲ್ಲೆಡೆ ಭಾಷಾ ವೈವಿಧ್ಯವೂ ಇದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ವಿಚಾರ. ಆದ್ದರಿಂದ ಪೂರ್ವ ಭಾರತದ ಒಡಿಶಾ, ಜಾರ್ಖಂಡ್, ಛತ್ತೀಸ್‌ಗಢ, ಪೂರ್ವಾಂಚಲದ ರಾಜ್ಯಗಳಲ್ಲಿ ಇರುವ ಸುಮಾರು ೧೦೦ ಭಾಷೆಗಳು `ಭಾರತವಾಣಿ’ಯ ಪಟ್ಟಿಯಲ್ಲಿವೆ. ಪಂಥಾಹ್ವಾನ ದೊಡ್ಡದೇ. ಒಂದೊಂದು ಭಾಷೆಯ ಕೃತಿಗಳು ಸಿಕ್ಕಿದಾಗಲೂ ನಾನು ವೈಯಕ್ತಿಕವಾಗಿ ತುಂಬ ಖುಷಿಪಟ್ಟಿದ್ದೇನೆ. ಈ ಭಾಷೆಗಳನ್ನು ಈಗಲೂ ಉಳಿಸಿಕೊಂಡು ಬಂದ ಸಮುದಾಯದ ಎಲ್ಲರಿಗೂ ಮನದಲ್ಲೇ ಗೌರವಪೂರ್ವಕ ನಮಿಸಿದ್ದೇನೆ. ಭಾಷೆಗಳು ಉಳಿಯುವುದು ಓರಾಟಗಾರರಿಂದಲ್ಲ, ಅದನ್ನೇ ಉಸಿರಾಡಿಕೊಂಡು ಬದುಕುವವರಿಂದ ಎಂಬ ಸತ್ಯವನ್ನು ಮನಗಂಡಿದ್ದೇನೆ.
ಭಾರತವಾಣಿ ಯೋಜನೆಯನ್ನು ಜಾರಿಗೊಳಿಸುತ್ತಿರುವ ಭಾರತೀಯ ಭಾಷಾ ಸಂಸ್ಥಾನದ ಹಿಂದಿನ, ಈಗಿನ ನಿರ್ದೇಶಕರು, ಅಧಿಕಾರಿಗಳು – ಎಲ್ಲರೂ ಈ ಯೋಜನೆಯ ಸಾಕಾರಕ್ಕಾಗಿ ತಮ್ಮ ನೆರವನ್ನು ನೀಡಿದ್ದಾರೆ ಎಂಬ ಮಾತು ಔಪಚಾರಿಕವಾದರೂ ಅತ್ಯವಶ್ಯ. ಅದರಲ್ಲೂ ಭಾರತವಾಣಿ ಯೋಜನೆಯ ಉದ್ಘಾಟನೆಗಿಂತ ಮುನ್ನ ಇದ್ದ ಚಂದನ್‌ಸಿಂಗ್, ಶ್ರೀಕಾಂತ್‌ಕುಮಾರ್, ಬೋರ್ನಿನಿ ಲಾಹಿರಿ ಎಂಬ ಮೂವರ ಕೊಡುಗೆಯನ್ನಂತೂ ನಾನು ಎಂದಿಗೂ ಮರೆಯಲಾರೆ! ದಿನ-ವಾರಗಳ ಲೆಕ್ಕವಿಲ್ಲದೆ, ರಜೆಯನ್ನು ಕೇಳದೆ ಕೆಲಸ ಮಾಡಿದ ಈ ಮೂವರನ್ನು ನಾನು ಮನಸಾರೆ ಅಭಿನಂದಿಸುತ್ತೇನೆ. ಭಾಷಾ ಶಾಸ್ತ್ರಜ್ಞರಾದ ಈ ಮೂವರೂ ಕಂಪ್ಯೂಟರಿನಲ್ಲಿ ವಿಡಿಯೋ ಕನ್ವರ್ಶನ್‌ನ್ನೂ ಕಲಿತರು; ವರ್ಡ್‌ಪ್ರೆಸ್ ಡ್ಯಾಶ್‌ಬೋರ್ಡನ್ನೂ ನಿರ್ವಹಿಸಿದರು; ಎಫ್‌ಟಿಪಿ ಮಾಡಿದರು!!
ನನಗೆ ಕಾಲಕಾಲಕ್ಕೆ ಸಲಹೆ ಕೊಟ್ಟ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಸುಖಬಿಂದರ್ ಸಿಂಗ್ ಸಂಧುರವರನ್ನು ಮರೆಯಲಾದೀತೆ? ಆ ದಿನಗಳಲ್ಲಿ ನನ್ನ ನಿರೂಪಣೆಗಳನ್ನು ಕೇಳಿ, ಸಲಹೆ ನೀಡಿದ, ವಿವಿಧ ಸಂಸ್ಥೆಗಳಿಗೆ ಭಾರತವಾಣಿಯನ್ನು ಬೆಂಬಲಿಸಲು ಸೂಚನೆ ನೀಡಿದ ಸಚಿವೆ ಶ್ರೀಮತಿ ಸ್ಮೃತಿ ಇರಾನಿಯವರ ಕ್ರಿಯಾಶೀಲತೆ ಅನುಕರಣೀಯ.
ಭಾರತವಾಣಿಯ ಈಗಿನ ಎಲ್ಲ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಿಗೂ ನನ್ನ ಕೃತಜ್ಞತೆಗಳು.
ಈಗ ಯೋಜನೆಯು ಒಂದು ವರ್ಷ ಎಂಬ ಪುಟ್ಟ ಮಾರ್ಗವನ್ನು ಕ್ರಮಿಸಿದೆ. ಸಮಯಬದ್ಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇನ್ನಷ್ಟು ಮಾಹಿತಿಪೂರ್ಣವಾಗುವ ಕನಸು ನಮ್ಮದು ; ಬೆಂಬಲ ನಿಮ್ಮದು!
Project Website: www.bharatavani.in
Project App on Android: http://bit.ly/1XYqodI
Project App on Windows: http://bit.ly/2a2Ew19
FACEBOOK: https://www.facebook.com/bharatavani/
Office website: www.ciil.org