ಮೊದಲು ಇದೇನು ಮಿಡತೆಯೇ ಎಂದು ನೋಡಿದ ಅವರಿಗೆ, ಅದು ಜಿರಲೆ ಎಂದು ಗೊತ್ತಾದಾಗ ಅಚ್ಚರಿ. ಸರಿ, ಅದನ್ನು ಪ್ರಯೋಗಾಲಯಕ್ಕೆ ತಂದು ನಿಕಟ ಪರೀಕ್ಷೆಗೆ ಒಡ್ಡಿದಾಗ ಅದು ಈವರೆಗೂ ನೋಡಿರದ ಜಿರಲೆಯ ಜೀವಜಾತಿ ಎಂಬುದು ಖಚಿತವಾಯಿತು. ಆಮೇಲಿನ ನಾಲ್ಕು ವರ್ಷಗಳ ಕಾಲ ಅವರಿಬ್ಬರ ಸಂಶೋಧನಾ ಸಮಯವೆಲ್ಲ ಹಾರುವ ಜಿರಲೆಗೇ ಮೀಸಲಾಯಿತು. 2010ರಲ್ಲಿ ಅವರು ಈ ಜಿರಲೆಯ ಬಗ್ಗೆ ಸಂಶೋಧನಾ ಲೇಖನವನ್ನು ಪ್ರಕಟಿಸಿದರು. `ಸಾಲ್ಟೋಬ್ಲಾಟೆಲ್ಲಾ (ಹಾರುವ ಚಿಕ್ಕ ಜಿರಲೆ) ಮಾಂಟಿಸ್ ಟ್ಯಾಬುಲಾರಿಸ್ (ಟೇಬಲ್ ಮೌಂಟನ್ ರಾಷ್ಟ್ರೀಯ ಉದ್ಯಾನದಲ್ಲಿ ಸಿಕ್ಕಿದ್ದಕ್ಕಾಗಿ)’ ಎಂಬ ನಾಮಕರಣದೊಂದಿಗೆ ವಸುಂಧರೆ ಜೀವಜಾಲದ ಇನ್ನೊಂದು ಕೌತುಕ ಪ್ರಕಟವಾಯಿತು. ಕಪ್ಪೆಯಂತೆ ಜಿಗಿಯುವ ಈ ಜಿರಲೆಗೆ ಲೀಪ್ರೋಚ್ (ಲೀಪ್ – ಕುಪ್ಪಳಿಸು) ಎಂಬ ಹೆಸರನ್ನೂ ಇಡಲಾಗಿದೆ.2006 ಎನ್ನುವುದು ಕ್ರಿಸ್ತಶಕದ ವರ್ಷ. ಆದರೆ ಜಿರಲೆಗಳ ಜೀವಜಾತಿಯು ಸರೀಸೃಪಗಳು ಹುಟ್ಟಿದ್ದಕ್ಕಿಂತ ಐದೂವರೆ ಕೋಟಿ ವರ್ಷಗಳ ಮುನ್ನವೇ ಭೂಮಿಯ ಮೇಲೆ ಹಾಯಾಗಿತ್ತು ಎನ್ನುವುದನ್ನು ಗಮನಿಸಿ! ಸರೀಸೃಪಗಳು ಹುಟ್ಟಿದ್ದೇ 16 ಕೋಟಿ ವರ್ಷಗಳ ಹಿಂದೆ, ಕಣ್ಮರೆಯಾಗಿಯೇ ಆರೂವರೆ ಕೋಟಿ ವರ್ಷಗಳಾಗಿವೆ. ಎಂದಮೇಲೆ, ಜಿರಲೆಯ ಗಟ್ಟಿ ಜೀವವನ್ನು ಊಹಿಸಿಕೊಳ್ಳಿ! ಇಲ್ಲಿ ಕಂಡ ಜಿರಲೆಗಳ ಗಾತ್ರ ಮೂರೂವರೆ ಅಂಗುಲದಷ್ಟು ಉದ್ದ.
ನಿಮಗೆ ಈ ಬಗ್ಗೆ ಇನ್ನೂ ಖಚಿತ ದಾಖಲೆ ಬೇಕೆ? ಹಾಗಾದರೆ ಅಮೆರಿಕಾದ ಓಹಿಯೋ ವಿಶ್ವವಿದ್ಯಾಲಯದ ತಂಡವು ಹುಡುಕಿದ ಕಲ್ಲಿದ್ದಲು ಗಣಿಸಾಲಿನ ಪಳೆಯುಳಿಕೆಗಳನ್ನು ನೋಡಿ. ಅವರ ಪ್ರಕಾರ ಜಿರಲೆಗಳು 30 ಕೋಟಿ ವರ್ಷಗಳಿಂದಲೂ ಇಲ್ಲಿ ಜೀವಿಸಿದ್ದವು!
ಇನ್ನು ಕೀಟನಾಶಕಗಳನ್ನೇ ತನ್ನ ಮಹಾನ್ ಅಸ್ತ್ರ ಎಂದು ಜಿರಲೆಗಳನ್ನು ಮನೆಯಲ್ಲಿ, ಕಚೇರಿಯಲ್ಲಿ ಸಾಯಿಸುತ್ತಿರುವ ಮನುಷ್ಯ ಯಾವ ಲೆಕ್ಕ? ನ್ಯೂಯಾರ್ಕ್ ನಗರದ ಆಸುಪಾಸಿನ ಮಕ್ಕಳಲ್ಲಿ ಆಸ್ತಮಾ ರೋಗವು ಹೆಚ್ಚುತ್ತಿರುವುದಕ್ಕೆ ಜಿರಲೆಗಳೇ ಕಾರಣ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ ತಾಜಾ ಸುದ್ದಿಯೂ ಈ ಮಾತನ್ನೇ ಸಮರ್ಥಿಸುತ್ತದೆ ಅಲ್ಲವೆ?
ಊರು, ಕೇರಿ, ಟ್ರಂಕು, ಅಟ್ಟ, ಅಡುಗೆ ಮನೆ, ಕಾಡು, ಮೈಕ್ರೋವೇವ್ ಒಲೆ, ಹಳೆಯ ಪ್ರೀತಿಯ ಕಾಗದದ ಓಲೆ, ಕಪಾಟು, ಮೇಜಿನ ಡ್ರಾಯರ್, – ನೀವು ಊಹಿಸಿದಲ್ಲೆಲ್ಲ, ಅಥವಾ ದೇವರು ಇರೋ ಸಾಮಾನ್ಯವಾದ ಪ್ರದೇಶಗಳಲ್ಲಿ ಜಿರಲೆಯನ್ನೂ ನೋಡಿರುತ್ತೀರಿ. ಜಿರಲೆಯನ್ನು ನೋಡಲೇಬಾರದು ಎನ್ನುವವರು ಮೂಲೆ – ಮೂಲೆಗಳನ್ನೂ ಹೊಕ್ಕು ಜಿರಲೆಗಳನ್ನು ನಿವಾರಿಸುವ ಹಿಟ್, ಬೇಗಾನ್ ಮುಂತಾದ ಕೀಟನಾಶಕಗಳನ್ನು ಮಾಲ್ ಗಳಿಂದ ತರುತ್ತ, ಅದನ್ನು ಪದೇ ಪದೇ ಸಿಂಪಡಿಸಿ ಇಡೀ ಮನೆಯನ್ನು ವಿಷಮಯಗೊಳಿಸುತ್ತ ಹಾಯಾಗಿ ಸೋಫಾದ ಮೇಲೆ ಕೂತು ಟಿವಿ ನೋಡಲು ಯತ್ನಿಸುತ್ತಾರೆ. ಸೋಫಾದ ಮೂಲೆಯೊಂದರಲ್ಲೋ, ಓವೆನ್ ನ ಮುಚ್ಚಳದ ಸಂದಿಯಲ್ಲೋ, ವಾಶ್ ಬೇಸಿನ್ ನ ತಳದಲ್ಲೋ, ಜಿರಲೆಯ ಮೊಟ್ಟೆಯೊಳಗೆ ಮರಿಯೊಂದು ಬೆಚ್ಚಗೆ ಕೂತಿರುತ್ತೆ. ಏನೂ ಆಹಾರ ಸಿಗದಿದ್ರೂ ಪರವಾಗಿಲ್ಲ…. ವರ್ಷಗಳ ಕಾಲ ತನ್ನದೆ ಮೊಟ್ಟೆಯ ಕವಚವನ್ನೇ ತಿಂದುಕೊಂಡೋ, ಸುತ್ತಮುತ್ತ ಇರುವ ಇನ್ನಾವುದೋ ಆಹಾರದ ಕಣವನ್ನು ಜಗಿಯುತ್ತಲೋ… ಜಿರಲೆ ಬದುಕುತ್ತದೆ; ಬೆಳೆಯುತ್ತದೆ.
ನೆನಪಿಡಿ: ಜಿರಲೆಯ ಮೇಲೆ ಸಂಶೋಧನೆ ನಡೆಸುವುದು ಹಕ್ಕಿ ವೀಕ್ಷಣೆಯಂತೆ, ವ್ಯೋಮಯಾನದಂತೆ ಪ್ರಸಿದ್ಧಿಯನ್ನು ಪಡೆಯದೇ ಇರಬಹುದು. ಆದರೆ ಈ ಸಂಶೋಧನೆಗಳು ನಿಜಕ್ಕೂ ಬೆಲೆಬಾಳುವ ಚಟುವಟಿಕೆ ಎಂದು `ಲೈಫ್ ಆನ್ ಎ ಲಿಟಲ್ ನೌನ್ ಪ್ಲಾನೆಟ್’ ಪುಸ್ತಕದ ಲೇಖಕ, ಸುಪ್ರಸಿದ್ಧ ಕೀಟವಿಜ್ಞಾನಿ ಹೋವಾರ್ಡ್ ಎನ್ ಸೈನ್ ಇವಾನ್ಸ್ ಹೇಳಿದ್ದಾರೆ. ಆದ್ದರಿಂದ ನೀವು ಜಿರಲೆಯ ಮೇಲೆ ಬರೆದ ಈ ಲೇಖನವನ್ನು ಎಲ್ಲೋ ಎಸೆದು ಜಿರಲೆಗೆ ಆಹಾರವಾಗಿ ನೀಡುವಂತಿಲ್ಲ! ಅವರ ಮಾತನ್ನು ಗಂಭೀರವಾಗಿಯೇ ತೆಗೆದುಕೊಂಡ ವಿಲಿಯಂ ಜೆ ಬೆಲ್, ಲೂಯಿಸ್ ರೋತ್ ಮತ್ತು ಕ್ರಿಸ್ತೈನ್ ಎ ನಲೇಪಾ ಎಂಬ ತಜ್ಞರು ಜಿರಲೆಯ ಬಗ್ಗೆ `ಕಾಕ್ರೋಚಸ್ – ಇಕಾಲಜಿ, ಬಿಹೇವಿಯರ್ ಎಂಡ್ ನ್ಯಾಚುರಲ್ ಹಿಸ್ಟರಿ’ ಎಂಬ ಪುಸ್ತಕವನ್ನು ಬರೆದರು; ಅದನ್ನು ಪ್ರತಿಷ್ಠಿತ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು ಪ್ರಕಟಿಸಿದೆ. 247 ಪುಟಗಳ ಈ ಪುಸ್ತಕದಲ್ಲಿ ಜಿರಲೆಯ ಸಮಸ್ತ ವಿವರಗಳಿವೆ.
ಈ ಪುಸ್ತಕದಲ್ಲಿ ಹೇಳಿದಂತೆ ಜಿರಲೆಗಳ ಗುಣ ಹೀಗಿದೆ:
• ಜಿರಲೆಗಳು ಇರುವೆಗಳ ಹಾಗೆ ಆಹಾರವನ್ನು ಸಂಗ್ರಹಿಸುವ, ಸಾಮೂಹಿಕವಾಗಿ ಆಹಾರ ಹುಡುಕುವ ಉಸಾಬರಿಗೆ ಹೋಗುವುದಿಲ್ಲ. ಪ್ರತೀ ಜಿರಲೆಯೂ ತನಗೆ ಸಿಕ್ಕಿದ ಆಹಾರವನ್ನು ಅಲ್ಲೇ ಮುಗಿಸುತ್ತದೆ. ಬೇರೆ ಜಿರಲೆಯ ಚಿಂತೆ ಅದಕ್ಕಿಲ್ಲ. ಜಿರಲೆಯೊಂದು ಸತ್ತರೆ ಅದೂ ಆಹಾರವೇ! ಆದರೆ ಇಟ್ಟ ಮೊಟ್ಟೆಯ ಮೇಲೆ ಸ್ವಲ್ಪ ಕಾಳಜಿ ಇರುತ್ತದಂತೆ. ಜಿರಲೆಯ ಮರಿಗಳಿಗೂ ತಮ್ಮ ಅಪ್ಪ – ಅಮ್ಮ ಯಾರು ಎಂದು ತಿಳಿಯುತ್ತದಂತೆ.
• ಜಿರಲೆಗಳು ಏನು ಸಿಕ್ಕರೂ ತಿನ್ನುತ್ತವೆ; ಅದಕ್ಕೇ ಅವಕ್ಕೆ ಭೂಮಿಯ ಕಸ ಗುಡಿಸುವವರು ಎಂಬ ಖ್ಯಾತಿಯೂ ಇದೆ. ಪ್ರಾಣಿಜನ್ಯ, ಸಸ್ಯಜನ್ಯ – ಯಾವ ಆಹಾರವೂ ಪರವಾಗಿಲ್ಲ.
• ಜಿರಲೆಗಳು ಮಣ್ಣಿನಲ್ಲಿ ಗೂಡು ಕೊರೆಯುವುದೂ ಇದೆ. ಕಾಂಗರೂ ಇಲಿಗಳ ದರಗಳಲ್ಲಿ ಜಿರಲೆಗಳು ಗೂಡು ಕಟ್ಟಿವೆ.
• ಕಾಡಿನಲ್ಲಿ ಸಾಮಾನ್ಯವಾಗಿ ಮೇಲ್ಪದರದಲ್ಲೇ ಬದುಕುವ ಜಿರಲೆಗಳು ಸತ್ತ ಸಸ್ಯಗಳನ್ನೂ ತಿನ್ನುತ್ತವೆ. ದರಕಲು (ಒಣ ಎಲೆಗಳ ಹಾಸು) ಇರುವಲ್ಲಿ ಜಿರಲೆಗಳ ಸಂತತಿ ಹೆಚ್ಚು. ಜೈವಿಕ ಕಸವನ್ನು ಕರಗಿಸುವಲ್ಲಿ ಜಿರಲೆಗಳ ಪಾತ್ರ ಪ್ರಮುಖ.
• ಜಿರಲೆಗಳ ದೇಹದ ಮೇಲೆ ಮೀಥೇನ್ ಹೊರಸೂಸುವ ಬ್ಯಾಕ್ಟೀರಿಯಾಗಳು ಇರುತ್ತವೆ. ಹೀಗಾಗಿ ವಾತಾವರಣದಲ್ಲಿ ಮೀಥೇನ್ ಹೆಚ್ಚಾಗಲು ಜಿರಲೆಗಳು ಒಂದು ನಿರಾಕರಿಸಲಾರದ ಕಾರಣ!
• ಮನುಷ್ಯರಿಗೂ ಜಿರಲೆ ಆಹಾರ ಎಂದು ಇಲ್ಲಿ ಹೇಳಬೇಕಾಗಿಲ್ಲ. ಚೀನಾದಲ್ಲಿ ಜಿರಲೆಗಳ ಉಪ್ಪಿನಕಾಯಿ ಸಿಗುತ್ತದೆ. ಔಷಧವಾಗಿಯೂ ಜಿರಲೆಯನ್ನು ಬಳಸುತ್ತಾರೆ. (ಜಿರಲೆಯ ಮೆದುಳಿನಲ್ಲಿ ಇರುವ ಕೋಶಗಳು ಮನುಷ್ಯನ ಮೇಲೆ ದಾಳಿ ಮಾಡುವ, ಬಹು ಔಷಧಿಗೂ ಬಗ್ಗದ ಬ್ಯಾಕ್ಟೀರಿಯಾಗಳ ವಿರುದ್ಧ ರಕ್ಷಣೆ ಒದಗಿಸುತ್ತವೆ. ಇದು ಪಾಕಿಸ್ತಾನ ಮೂಲದ ನಾಟಿಂಗ್ ಹ್ಯಾಮ್ ವಿಶ್ವವಿದ್ಯಾಲಯದ ನವೀದ್ ಖಾನ್ ಸಂಶೋಧನೆ.) ಅಮೆರಿಕಾದ ಜಾಜ್ ಸಂಗೀತಗಾರ ಲೂಯಿಸ್ ಆರ್ಮ್ ಸ್ಟ್ರಾಂಗ್ ಚಿಕ್ಕವನಾಗಿದ್ದಾಗ ಕಾಯಿಲೆ ಬಿದ್ದರೆ ಅವನ ತಾಯಿ ಜಿರಲೆಗಳನ್ನೇ ಬೇಯಿಸಿ ಕೊಡುತ್ತಿದ್ದಳಂತೆ.
• ನರಜೀವಶಾಸ್ತ್ರ (ನ್ಯೂರೋಬಯಾಲಜಿ) ಪ್ರಯೋಗಗಳಿಗೆ ಜಿರಲೆಯೇ ಶ್ರೇಷ್ಠ.
ಕೊನೆಗೆ ಹೇಳುವುದಿಷ್ಟೆ: ನೀವು ಜೀವನ ಪೂರ್ತಿ ಸುಮ್ಮನೆ ಕುಳಿತಿದ್ದರೆ ಜಿರಲೆಗಳು ಬಂದು ನಿಮ್ಮನ್ನು ತಿಂದು ಮುಗಿಸಬಹುದು. ಎಚ್ಚರವಿರಲಿ ! ನಿಮ್ಮ ತ್ಯಾಗಭಾವ ಸ್ವಾಗತಾರ್ಹ ; ಆದರೆ ಜಿರಲೆಗಳು ನೀವು ಇಲ್ಲದೆಯೂ ಬದುಕುತ್ತವೆ, ಗೊತ್ತಿರಲಿ.
ಕೃತಜ್ಞತೆಗಳು: ಈ ಲೇಖನಕ್ಕಾಗಿಯೇ ಹಾರುವ ಜಿರಲೆಯ ಒಳ್ಳೆಯ ಚಿತ್ರಗಳನ್ನು ಕಳಿಸಿಕೊಟ್ಟ ಕೇಪ್ ಟೌನ್ ವಿಶ್ವವಿದ್ಯಾಲಯದ ಛಾಯಾಗ್ರಾಹಕಿ ಕ್ಯಾಥರೀನ್ ಟ್ರಾಟ್ ಮತ್ತು ಪ್ಯಾಟ್ರೀಶಿಯಾ ಲೂಕಾಸ್ ಗೆ ವಂದನೆಗಳು.
• ಹಾರುವ ಜಿರಲೆಯ ಸಂಶೋಧನಾ ಪ್ರಬಂಧವನ್ನು ಓದಬಯಸುವವರು ಇಲ್ಲಿ ಕ್ಲಿಕ್ ಮಾಡಿ.
• ಜಿರಲೆಯ ಮೇಲೆ ಬರೆದ ಪುಸ್ತಕವನ್ನು ಓದುವ ಬಯಕೆ ಇದ್ದರೆ beluru @ gmail.com ಗೆ ಈ ಮೈಲ್ ಮಾಡಿ. ಸಾಫ್ಟ್ ಪ್ರತಿಯನ್ನು ಕಳಿಸಿಕೊಡುತ್ತೇನೆ.
• ಜಿರಲೆಗಳ ಪಳೆಯುಳಿಕೆ ಸುದ್ದಿಗಾಗಿ, ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
• ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ – ಈ ಲೇಖನದಲ್ಲಿ ನಮ್ಮ ಭೂಮಿಯ ಮೇಲೆ ನಾವು ಕಂಡುಕೊಂಡ ಹೊಸ ಜೀವಜಾತಿಗಳ ನುಡಿಚಿತ್ರವಿದೆ. ಓದಿ.