ದಶಕಗಳ ಹಿಂದಿನ ಅಚ್ಚುಗಳನ್ನು ಪೇರಿಸಿದ ಕೋಣೆ; ಅತಿಹಳೆಯ ಪತ್ರಿಕಾ ತುಣುಕುಗಳನ್ನೂ ಜತನದಿಂದ ಕಾಪಿಟ್ಟ ಕಪಾಟುಗಳು; ಹೊರಗೆ ಆವರಿಸಿಕೊಂಡ ಸಾಲುಮರಗಳು; ಒಳಗೆ ಕೊರೆಯುತ್ತಿದ್ದ ಥಂಡಿ ಛಳಿ; ರೆಡ್‌ಆಕ್ಸೈಡ್‌ನೆಲದ ಹಾಸಿನಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ ಹಳೆಯ ಮೇಜುಗಳು; ಅವುಗಳನ್ನು ದಶಕಗಳಿಂದ ಬಳಸುತ್ತಿದ್ದ ಶ್ರೀ ಎಂ. ಕೃಷ್ಣಪ್ಪ, ಶ್ರೀ ಕಾ.ರ. ಆಚಾರ್ಯರಂತಹ ಕಟು ಶಿಸ್ತಿನ ಬಳಗ; 44 ವರ್ಷಗಳಿಂದ ಒಂದು ವಾರವೂ ಬಿಡದೆ (ತುರ್ತುಸ್ಥಿತಿ ಹೊರತುಪಡಿಸಿ) ಬೆ.ಸು.ನಾ. ಮಲ್ಯ ಮಾಮರ ಘನತೆವೆತ್ತ ಸಂಪಾದಕತ್ವ! ಅವರ ಸ್ಥಾನಕ್ಕೆ ನಾನು ನಿಯುಕ್ತಿಯಾಗಿದ್ದು ನನ್ನ ಬದುಕನ್ನೇ ಬದಲಿಸಿದ್ದು ನಿಜ. ಎರಡು ವರ್ಷಗಳ ಕಾಲ ವಿಕ್ರಮದ ಸಂಪಾದಕನಾಗಿ ವೈಯಕ್ತಿಕವಾಗಿ ಮಾಡಿದ ಸಾಧನೆಯೇನೂ ಇಲ್ಲ; ಮಲ್ಯ ಮಾಮರ ಪತ್ರಿಕಾಧರ್ಮದ ಪರಂಪರೆಯನ್ನು ಜತನದಿಂದ ಕಾಯ್ದುಕೊಂಡೆ ಎಂಬ ವಿಶ್ವಾಸವೂ ನನ್ನದಲ್ಲ. ಆದರೂ, ವಿಕ್ರಮದ ಚಹರೆಯನ್ನು ಬದಲಾಯಿಸಬೇಕೆಂಬ ಹಲವರ ತುಡಿತಕ್ಕೆ ಪ್ರತಿನಿಧಿಯಾಗಿ ಒಂದಷ್ಟು ಕೆಲಸ ಮಾಡಿದೆ ಎನ್ನಬಲ್ಲೆ. ಆ ಕಾಲದಲ್ಲಿ ಡಾ॥ಶಿವರಾಮ ಕಾರಂತರೊಂದಿಗೂ ಪತ್ರ ಸಂಪರ್ಕ ಮಾಡುವ ಅವಕಾಶವನ್ನೂ ವಿಕ್ರಮ ಒದಗಿಸಿತು. ಇದ್ದ ಕ್ಷಣಗಳನ್ನೆಲ್ಲ ಸಮಾಜಕ್ಕಾಗಿಯೇ ಕೊಟ್ಟ ಶ್ರೀ ಅರಕಲಿ ನಾರಾಯಣ, ನನ್ನನ್ನು ‘ವಿಕ್ರಮ’ಕ್ಕೆ ಎಳೆತಂದ ಶ್ರೀ ದಾ.ಮ. ರವೀಂದ್ರ ಆಗಾಗ ಕರೆದು ನೀಡಿದ ಕಿವಿಮಾತುಗಳೂ ನನಗೆ ರಕ್ಷೆಯಾದವು. ಕೇಸರಿ ಮುದ್ರಣಾಲಯವು ಮುಚ್ಚಿದಾಗ ಉಂಟಾದ ಸನ್ನಿವೇಶದಲ್ಲಿ ನಾನೂ ವಿಕ್ರಮದ ಪುಟಗಳನ್ನು ಪೇಸ್ಟಪ್ ಮಾಡಿ ಮುದ್ರಣಕ್ಕೆ ಸಿದ್ಧಗೊಳಿಸಿದೆ ಎಂಬ ನೆನಪು ಹಸುರಾಗಿದೆ. ‘ವಿಕ್ರಮ’ ಪತ್ರಿಕೆಗೆ ನಾನೂ ಸಂಪಾದಕನಾಗಿದ್ದೆ ಎಂಬುದು ಗರ್ವದ ಸಂಗತಿಯಲ್ಲ; ಗೌರವದ ಅನುಭವ. 1981 ರಲ್ಲಿ ಹೂವಿನಹಡಗಲಿಯಲ್ಲಿ ಪಿಯುಸಿ ಓದುವಾಗ ವಿಕ್ರಮ ಪತ್ರಿಕೆಯ ಏಜೆಂಟನಾಗಿ ಪತ್ರಿಕೆಗಳನ್ನು ಹಂಚುತ್ತಿದ್ದ ನಾನು1996 ರಲ್ಲಿ ಪತ್ರಿಕೆಯ ಸಂಪಾದಕನಾಗಿದ್ದು ಬದುಕಿನ ದೊಡ್ಡ ತಿರುವು.

ಈಗಲೂ ತನ್ನ ಪತ್ರಿಕಾಧರ್ಮವನ್ನು ಪಾಲಿಸಿಕೊಂಡು ಬಂದಿರುವ ವಿಕ್ರಮ ಬಹುಶಃ ಕನ್ನಡ ಪತ್ರಿಕಾರಂಗದ ಹಿರಿಯಣ್ಣ. ಕನ್ನಡನಾಡಿನಲ್ಲಿ ಭಾರತೀಯ ಚಹರೆಗಳನ್ನು ಛಾಪಿಸಲು ನಿರಂತರ ಶ್ರಮಿಸುತ್ತಿರುವ ಏಕೈಕ ನೈಜ ಪತ್ರಿಕೆ. ‘ವಿಕ್ರಮ’ದ ಕಟ್ಟಡ ಬದಲಾಗಿದೆ; ಅದರ ಕಾಯಕ ಬದಲಾಗಿಲ್ಲ. ಜನ ಬದಲಾಗಿದ್ದಾರೆ; ಜನಸಮಷ್ಟಿ ಹಿತದ ಧೋರಣೆ ಬದಲಾಗಿಲ್ಲ. ಕನ್ನಡ ಸಾರಸ್ವತ ಲೋಕದ ದಿಗ್ಗಜರೆಲ್ಲರೂ ‘ವಿಕ್ರಮ’ದ ಲೇಖಕ ಬಳಗದಲ್ಲಿದ್ದಾರೆ. ಅವರಲ್ಲಿ ವೈಚಾರಿಕ ಮತಭೇದಗಳನ್ನು ಹೊಂದಿದವರೂ ಇದ್ದಾರೆ ಎಂಬುದು ವಿಶೇಷ.

 70 ರ ಪ್ರೌಢ ‘ವಿಕ್ರಮ’ಕ್ಕೆ ನನ್ನ ಶರಣು ಶರಣಾರ್ಥಿಗಳು.

 ವಿಕ್ರಮ’ದ ಆಶಯಗಳು ತ್ರಿವಿಕ್ರಮ ಜಯ ಸಾಧಿಸುವಲ್ಲಿ ನನ್ನದೂ ಒಂದು ಪುಟ್ಟ ಹೊಣೆ ಅಷ್ಟೆ  !

ಮೂಲ: http://vikrama.in/ಏಜೆಂಟನಾಗಿದ್ದ-ನಾನು-ಸಂಪಾದಕ/

Share.
Leave A Reply Cancel Reply
Exit mobile version