(ಪೊಳಲಿಯಲ್ಲಿ ಇತ್ತೀಚೆಗೆ ನಡೆದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮೆಲ್ಲರ ಹೆಮ್ಮೆ, ಕನ್ನಡ ಕಂಪ್ಯೂಟಿಂಗ್‌ನ ಪಿತಾಮಹ, ಶ್ರೀ ಕೆ ಪಿ ರಾವ್‌ ಮಾಡಿದ ಭಾಷಣದ ಪೂರ್ಣಪಾಠ. ಈ ಭಾಷಣವು ನಿಮ್ಮಲ್ಲಿ ಭಾಷೆ-ಸಂಸ್ಕೃತಿಯ ಬಗ್ಗೆ ಚಿಂತನೆಗೆ ಹಚ್ಚಲಿ ಎಂದು ಆಶಿಸುತ್ತೇನೆ – ಬೇಳೂರು ಸುದರ್ಶನ. ಪಠ್ಯವನ್ನು ನೀಡಿದ ಶ್ರೀ ಕೆ ಪಿ ರಾವ್‌ರಿಗೆ ನನ್ನ ಹೃತ್ಪೂರ್ವಕ ವಂದನೆಗಳು)

ಪೊಳಲಿಯ ಈ ಪವಿತ್ರ ಪರಿಸರದಲ್ಲಿ ನಾವೆಲ್ಲ ಸೇರಿಕೊಂಡಿರುವುದಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಕಾರಣರೆಂದರೆ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಯೋಜಕರು. ಇವರ ಧೈರ್ಯವನ್ನು ನಾವು ನಿಜವಾಗಿ ಮೆಚ್ಚಿಕೊಳ್ಳಬೇಕು. ಯಾಕೆಂದರೆ ಒಬ್ಬ ಸಾಹಿತಿಯಲ್ಲದ ನನ್ನಂತಹ ಸಾಮಾನ್ಯನನ್ನು ಇದಕ್ಕೆ ಅಧ್ಯಕ್ಷನನ್ನಾಗಿ ಆರಿಸಿದ್ದರ ಧೈರ್ಯಕ್ಕೆ ಅವರನ್ನು ಮೆಚ್ಚಿಕೊಳ್ಳಲೇಬೇಕು. ನನ್ನ ಕನಸು ನನ್ನ ಪೂರ್ವಪುಣ್ಯವೋ ಎಂಬಂತೆ ಸಾಕಾರವಾಗಿರುವುದಕ್ಕೆ ಸಂತೋಷಪದುತ್ತೇನೆ. ನನ್ನನ್ನು ಈ ವಿಶೇಷ ಗೌರವಕ್ಕೆ ಆರಿಸಿಕೊಂಡಿರುವುದರ ಮುಖ್ಯ ಕಾರಣ ನಾನು ಪೊಳಲಿಗೆ ಹೆಚ್ಚು ದೂರದವನಲ್ಲ, ಕಿನ್ನಿಕಂಬಳದವನು ಎಂಬುದಿರಬಹುದು. ಪೊಳಲಿಗೂ ನನಗೂ ಒಂದು ೬೦-೭೦ ವರ್ಷದ ಸಂಬಂಧ, ಸಾಹಿತ್ಯಲೋಕಕ್ಕೆ ನನ್ನ ಸಂಬಂಧ ಒಂದು ರೀತಿಯಲ್ಲಿ ಬಹಳ ದೂರ.

ಲೇಖನದಿಂದ ಪ್ರಾರಂಭವಾಗುವ ಸಾಹಿತ್ಯಕೃತಿಯ ಸೃಜನ ಮೊದಲ ಕೆಲಸವಾದರೆ ಮುದ್ರಣ- ಪ್ರಕಾಶನದ್ದು ಅಷ್ಟೇ ಅಗತ್ಯವಾಗಿರುವಂತಹ ಎರಡನೆಯ ಹೆಜ್ಜೆ. ಅತ್ತಿಮಬ್ಬೆಯನ್ನು ನಾವು ನೆನಪಿಟ್ಟುಕೊಳ್ಳುವುದು ಅವಳು ಲೇಖಕಿಯಂತ ಅಲ್ಲ, ಪೊನ್ನನ ಶಾಂತಿಪುರಾಣವನ್ನು ಪ್ರಕಾಶನ ಮಾಡಿದಳು ಅನ್ನುವುದಕ್ಕಾಗಿ. ಬರಹದ ಮೊದಲು ಪ್ರಕಾಶನ ಪಾಠದಿಂದ ನಡೆಯುತ್ತಿತ್ತು. ಬಾದರಾಯಣ-ವ್ಯಾಸ ಪ್ರತಿಷ್ಠಾನದ ಅದ್ಭುತ ಕಾರ್ಯದಿಂದಾಗಿ ಮಾನವನ ಪ್ರಪ್ರಥಮ ಅಪೌರುಷೇಯ ವೇದವೆಂಬ ಜ್ಞಾನನಿಧಿ ಪ್ರಕಾಶನಗೊಂಡು ಉಳಿದು ಬಂದಿದೆ. ಆದರೆ ಮಹಾಭಾರತದ ಪರಾಶರವ್ಯಾಸರ ಕಾಲಕ್ಕೆ ಗಣೇಶನ ಲೇಖನದ ಸಹಾಯ ಬೇಕಾಯಿತು.

ನಾನು ಹುಟ್ಟಿ ಬೆಳೆದ ಕಿನ್ನಿಕಂಬಳ ದ.ಕ ಕ್ಕೆ ವಿಶಿಷ್ಟವಾಗಿರುವಂತಹ ಬಹುಭಾಷಾ, ಬಹುಸಂಸ್ಕೃತಿ, ಬಹುಲಿಪಿಗಳಿಂದ ಕೂಡಿದ ಊರು. ನಾವು ಮೊದಲನೆಯದಾಗಿ ಕಲಿತುದು ಭಾಷಾಪ್ರೀತಿ. ಕನ್ನಡ, ದಖ್ಖನಿ, ಕೊಂಕಣಿ, ತುಳು, ಬ್ಯಾರಿ, ಮರಾಠಿ ಮುಂತಾದ ಹಲ ಭಾಷೆಗಳ ನೆಲ ನನ್ನ ಊರು. ನನಗೆ ಯಾರೂ ಅಕ್ಷರ ಕಲಿಸಲಿಲ್ಲ. ನಾನಾಗಿಯೇ ಕಲಿತದ್ದು. ನೋಡಿ ಕಲಿತದ್ದು, ಮಾಡಿ ಕಲಿತದ್ದು. ನನ್ನ ತಂಗಿ ನನ್ನಿಂದ ಒಂದು ವರ್ಷ ಹತ್ತು ತಿಂಗಳ ಅನಂತರ ಹುಟ್ಟಿದಳು. ಅವಳ ಪುಣ್ಯಾಹಕ್ಕೆ ಪುರೋಹಿತರು ಬಂದು ಮಂಡಲಗಳನ್ನು ಬರೆಯಬೇಕಾಗಿದ್ರೆ ಅದನ್ನು ನೋಡಿ ನಾನು ಕೂಡಾ ಬರೆಯಲು ಕಲಿತೆ. ತುಳು ಲಿಪಿಯಲ್ಲಿ ‘ಶ್ರೀ’ ಮತ್ತು ‘ಗಂ’ ಬರೆದು ಒಂದು ಲಕ್ಷ್ಮಿ ಮತ್ತು ಇನ್ನೊಂದು ಗಣಪತಿ ಎಂದು ಪುಣ್ಯಾಹ ಮಾಡುತ್ತಿದ್ದರು. ಆ ಸಂಜೆಯ ಒಳಗೆ ನಮ್ಮ ಮನೆಯಲ್ಲಿಡೀ ಗಣಪತಿ ಮತ್ತು ಲಕ್ಷ್ಮಿ ತುಂಬಿಹೋಗಿದ್ದರಂತೆ – ನನ್ನ ಕಾರ್ಯಭಾರಗಳಿಂದ. ಅಕ್ಷರಾಭ್ಯಾಸ ನಾನು ಮಾಡಿದ್ದು ಹೀಗೆ, ತುಳು ಅಥವಾ ಗ್ರಂಥಲಿಪಿಯಿಂದ. ಹೀಗೆ ತಗಲಿದ ಸ್ವಾಧ್ಯಾಯ ಮತ್ತು ಸ್ವಂತ ಪ್ರಯತ್ನದಿಂದಲೇ ಏನನ್ನೂ ಕಲಿಯಬಹುದು, ಕಲಿಯುತ್ತಿರಬೇಕು, ಇನ್ನೊಬ್ಬರು ಹೇಳಿ ಅಲ್ಲ ಎನ್ನುವ ಹುಚ್ಚು ಇನ್ನೂ ಬಿಟ್ಟಿಲ್ಲ. ಬಾಗಲೋಡಿ ದೇವರಾಯರು ಮುಂತಾದ ಕೆಲವು ಜನ ಕಿನ್ನಿಕಂಬಳದವರಲ್ಲಿ ಇದು ಇಳಿದು ಬಂದುದನ್ನು ನಾನು ನೋಡಿದ್ದೇನೆ. ಗುರುಕಂಬಳದ ಉರ್ದು ಶಾಲೆಯ ಮಕ್ಕಳು ಅವರ ಪ್ರಾಥಮಿಕ ಶಾಲೆಯ ಅನಂತರ ನಂತರ ನಮ್ಮೊಡನೆ ಸೇರಿಕೊಳ್ಳುತ್ತಿದ್ದರು. ಕನ್ನಡವನ್ನು ಅವರಿಗೆ ಕಲಿಸುವ ಕೆಲಸ ನಮಗೇ – ಹಳೆಯ ವಿದ್ಯಾರ್ಥಿಗಳಿಗೆ ಇತ್ತು. ನನ್ನ ಸಹಪಾಠಿಯಾಗಿ ಬಂದ ಬಾಝಿ ಮಹಮ್ಮದ್ ಹುಸೇನ್ ನನಗೆ ಉರ್ದು ಕಲಿಸಿದ, ನಾನು ಅವನ ಕನ್ನಡ ಸುಧಾರಿಸಿಕೊಟ್ಟೆ. ಹೀಗೆ ನಾವೆಲ್ಲಾ ಬಹುಭಾಷೆ ಮತ್ತು ಬಹುಲಿಪಿಯ ಸಂಸ್ಕೃತಿಯಲ್ಲೇ ಬೆಳೆದವರು- ಕೇಳುವ ಕಿವಿ, ನೋಡುವ ಕಣ್ಣು ಮುಕ್ತ ಮನಸ್ಸು ಇವಿಷ್ಟೇ ಭಾಷಾ ಕಲಿಕೆಯ ಅಗತ್ಯವಾಗಿತ್ತು.

ಭಾಷೆ ಅನ್ನುವುದು ಯೋಚನೆಗಳನ್ನು ಶಬ್ದ ರೂಪದಲ್ಲಿ ಹೇಳುವ ಪ್ರಯತ್ನವಾದರೆ ಬರಹ ಅನ್ನೋದು ಅದನ್ನು ಮೂರ್ತರೂಪದಲ್ಲಿ ಅಥವಾ ಆಡಿದ ಮಾತನ್ನು ಸಂಜ್ಞಾರೂಪದಲ್ಲಿ ಕಣ್ಣಿಗೆ ಕಾಣಿಸುವ, ನಾಳೆ ಉಳಿಯುವ ರೂಪದಲ್ಲಿ ಪುನಃಸೃಷ್ಟಿಸುವ ಪ್ರಕ್ರಿಯೆ. ನಮ್ಮ ಪುರಾತನರು ಮೊದಲಿಗೆ ಬರಹಕ್ಕೆ ಹೆಚ್ಚು ಪ್ರಾಮುಖ್ಯ ಕೊಡದಿದ್ದರೂ, ನಿಧಿದ್ಯಾಸನ ಎಂಬ ಉಳಿಸಿ ಹಂಚಿ ಬೆಳೆಸುವ ಅದೃಶ್ಯ ಪ್ರಕ್ರಿಯೆಗೆ ಬಹಳ ಮಹತ್ತ್ವ ಕೊಡುತ್ತಿದ್ದರು.

ಕನ್ನಡದ ಬರಹ ಹೇಗೆ ಬಂತು? ಎಲ್ಲಿಂದ ಬಂತು? ಮೊಟ್ಟಮೊದಲು ಕ್ರಿಸ್ತ ಪೂರ್ವ ಮೂರನೆಯ ಶತಮಾನದ ಅಶೋಕನ ಶಾಸನಗಳ ರೂಪದಲ್ಲಿ ಇಲ್ಲಿ ಬರಹ ಮೊದಲನೆಯದಾಗಿ ಅವತರಿಸಿತು ಅನ್ನುವ ವಿಷಯವನ್ನು ಪ್ರೊ. ಷಡಕ್ಷರ ಶೆಟ್ಡರು ತಮ್ಮ ವಿಶೇಷವಾದ ಗ್ರಂಥ “ಹಳಗನ್ನಡ”ಲ್ಲಿ ಪ್ರಸ್ತಾಪಿಸಿ ಪ್ರಸಿದ್ಧಿಸಿದರು. ಪ್ರೊ. ಷಡಕ್ಷರ ಶೆಟ್ಡರು ಮೊನ್ನೆ ಮೊನ್ನೆ ಗಂಗಾವತಿಯಲ್ಲಿ ಜರಗಿದ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳದನ ಅಧ್ಯಕ್ಷರಾಗಿದ್ದವರು ಅಲ್ಲಿ ಇದೇ ವಿಷಯವನ್ನು ಪುನಃ ಎತ್ತಿದರು. ಲಿಪಿ ಕರ್ನಾಟಕಕ್ಕೆ ಬಂದಾಗ ಎರಡು ಮೂರು ಜಾಗಗಳಿಂದ ಹೊರಟಿದ್ದರೂ ಕೂಡ ಬಹುಶಃ ಕರ್ನಾಟಕದಲ್ಲಿ ತನ್ನದೇ ಆದ ಯಾವುದೋ ಒಂದು ಸಂಜ್ಞಾಲಿಪಿ ಇದ್ದಿರಬಹುದು. ಈ ಲಿಪಿಯನ್ನೇ ಸುಧಾರಿಸಿಕೊಂಡು, ಅದನ್ನೂ ಒಳಗೊಂಡು ಕನ್ನಡಲಿಪಿ ಬ್ರಾಹ್ಮೀಲಿಪಿಯಿಂದ ಬೇರೆ ಆಗಿ ಬೆಳೆಯಿತು ಎನ್ನುವುದಕ್ಕೆ ಕೆಲವು ರೀತಿಯ ಪುರಾವೆಗಳು ನಮ್ಮಲ್ಲಿ ಇವೆ. ಆದರೆ ಕನ್ನಡದ ‘ಅ’ ಅನ್ನುವ ಅಕ್ಷರದ ರೂಪವಿರಲಿ ಅಥವಾ ‘ರ’ ಮತ್ತು ‘ಳ’ಗಳ ರೂಪಗಳಾಗಲಿ ಹೇಗೆ ವಿಕಸನಗೊಂಡುವು ಮತ್ತು ಯಾಕೆ ಇವು ಬ್ರಾಹ್ಮೀಲಿಪಿಯಿಂದ ವಿಕಸನಗೊಳ್ಳಲು ಸಾಧ್ಯವಿಲ್ಲ ಎಂಬುದನ್ನು ನಾನು ಜ್ಯಾಮಿತಿ ಮತ್ತು ಗಣಿತಗಳ ಪ್ರಮೇಯಗಳಿಂದ ತೋರಿಸುವ ಪ್ರಯತ್ನ ಮಾಡಿದ್ದಿದೆ.

ಕರ್ನಾಟಕದ ಲಿಪಿ, ಮುದ್ರಣ, ಪ್ರಕಾಶನದ ಇತಿಹಾಸದಲ್ಲಿ ದ.ಕ. ಕ್ಕೆ ವಿಶೇಷ ಸ್ಥಾನವಿದೆ. ಮಂಗಳೂರು ಅಂದಿಗೂ ಇಂದಿಗೂ ದ.ಕ.ದ ಮುಖ್ಯಪಟ್ಟಣ. ಕನ್ನಡಲಿಪಿಯ ವಿಕಸಿತರೂಪ ಬಂದದ್ದು ಅತ್ತಾವರ ಅನಂತಾಚಾರ್ಯರಂತವರು ಕನ್ನಡದ ಲಿಪಿಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡುದರಿಂದ. ಆರ್ಥೋಗ್ರಫಿ ಅಂತ ನಾವು ಇಂಗ್ಲಿಷಿನಲ್ಲಿ ಹೇಳುವ ಅಂತರಾಕ್ಷರ ಲೇಖನ ನಿಯಮಗಳಿವೆ. ಮಂಗಳೂರಿನಲ್ಲಿ ಕನ್ನಡ ನಿಯಮಗಳನ್ನು ನಿಶ್ಚಯಿಸುವವರೆಗೆ ಕರ್ನಾಟಕದಲ್ಲಿ ಅಲ್ಲಲ್ಲಿ ಬೇರೆ ಬೇರೆ ನಿಯಮಗಳಿದ್ದುವು. ತುಳುವಿನಲ್ಲಿ ಮುದ್ರಿತ ಬೈಬಲ್ ಪ್ರತಿಗಳನ್ನು ನೀವು ನೋಡಿದರೆ ಅದರಲ್ಲಿ ‘ವೊ’ ಬರೆಯುವುದು ‘ವೋ’ ಬರೆಯುವುದು ಅಥವಾ ‘ಕೊ’ ಬರೆಯುವುದು ತೆಲುಗಿನಲ್ಲಿ ನಾವು ಬರೆಯುವುದಕ್ಕೆ ಸಮಾನವಾಗಿತ್ತು. ಕನ್ನಡ ನಿಯಮಗಳನ್ನು ಕೊಟ್ಟವರು ಅನಂತಾಚಾರ್ಯರು, ಅಥವಾ ಬಾಸೆಲ್ ಮಿಶನ್ ನ ಪ್ರೆಸ್ನ ಅಯ್ಯನವರು. ಕನ್ನಡ ಲಿಪಿಗೆ ಇದು ದ.ಕ. ದ. ಮಹಾ ಕೊಡುಗೆ. ಕಬ್ಬಿಣವನ್ನು ಮೇಣದಷ್ಟು ಸುಲಭದಲ್ಲಿ, ಕೆತ್ತುವ ಚಾಕಚಕ್ಯತೆ ಇದ್ದ ಅನಂತಾಚಾರ್ಯರು ಸೃಷ್ಡಿಸಿದ ಸುಂದರ ಅಕ್ಷರಗಳೇ ಅಕ್ಷರ ಸೌಂದರ್ಯದ ಮಾನದಂಡ – ಕನ್ನಡ, ದೇವನಾಗರಿ, ಉರ್ದು ಮುಂತಾದ ಲಿಪಿಗಳಲ್ಲಿ. ನಾನು ಆಮೇಲೆ ಕೆಲಸಮಾಡುತ್ತಿದ್ದ ಮೊನೋಟೈಪ್ ಎನ್ನುವ ಕಂಪೆನಿಯಲ್ಲಿ ಬೃಂದಾವನ ಎಂಬ ಸುಂದರ ಟೈಪ್ ನ ಮೂಲ ಮಂಗಳೂರು ಪ್ರೆಸ್ನಲ್ಲಿ, ಒಂದು ಕಾಲದಲ್ಲಿ ಅನಂತಾಚಾರ್ಯರು ಮಾಡಿದ ಅಕ್ಷರಗಳಂತೆ. ಇವತ್ತು ನೀವು ನನ್ನಂತಹ ಒಬ್ಬ ಆಧುನಿಕ ಅಕ್ಷರ ಕಾರ್ಯಕರ್ತನನ್ನು ಅಧ್ಯಕ್ಷನಾಗಿ ಆರಿಸಿ ಇದು ಮಂಗಳೂರಿನ ಮಿಶನರಿಗಳಿಗೂ, ಅನಂತಾಚಾರ್ಯರಂತಹ ಅಕ್ಷರ ಪ್ರತಿಭೆಗೂ ಕೊಡುವಂತಹ ಗೌರವವೆಂದು ವಿನಮ್ರನಾಗಿ ಸ್ವೀಕರಿಸುತ್ತಿದ್ದೇನೆ.

ಬಾಸೆಲ್ ಮಿಶನ್ ಪ್ರೆಸ್ಸಿನವರಾಗಲಿ ಕೊಡಿಯಾಲ್ ಬೈಲ್ ಪ್ರೆಸ್ಸಿನವರಾಗಲಿ , ಭಾರತಪ್ರೆಸ್ಸಿನವರಾಗಲಿ ಮಂಗಳೂರು ಪ್ರೆಸ್ಸಿವರೇ ಆಗಲಿ ಕನ್ನಡ ಲಿಪಿಯನ್ನು ಬರೇ ಕನ್ನಡ ಮುದ್ರಣಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳಲಿಲ್ಲ. ಆ ಕಾಲದಲ್ಲಿ ತುಳು ಕನ್ನಡ ಮತ್ತು ಕೊಂಕಣಿ ಮೂರು ಭಾಷೆಗಳ ಸಾಹಿತ್ಯವನ್ನೂ ಕೂಡ ಕನ್ನಡ ಲಿಪಿಯಲ್ಲಿ ಬರೆಸಿದರು. ಬೇಕಿದ್ದರೆ ಬ್ಯಾರಿಬಾಷೆ, ಕೊಡವ ಭಾಷೆಯನ್ನು ಕೂಡ ಕನ್ನಡದಲ್ಲಿ ಬರೆಯಬಹುದು ಎಂಬ ದಾರಿ ತೊರಿಸಿದವರು ಆ ಕಾಲದ ಪ್ರಕಾಶಕರು.

.ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಭಾಷಣಗಳು ದಿಕ್ಸೂಚಿ ಭಾಷಣಗಳಂತಿರುವ ಅರಿವಿನಿಂದ ನನ್ನ ಮುಖ್ಯ ವಿಷಯವಾದ ತಂತ್ರಜ್ಞಾನ ಮತ್ತು ಅಕ್ಷರಗಳು – ಲಿಪಿ- ಭಾಷೆಗಳ ಸಂಬಂಧದ ಬಗ್ಗೆ ನನಗೆ ತಿಳಿದಷ್ಟು ಹೇಳುತ್ತೇನೆ. ಅಕ್ಷರಗಳಿಗೂ ಲೋಹ ವಿಜ್ಞಾನಕ್ಕೂ ಬಹಳ ಹತ್ತಿರದ ಸಂಬಂಧವಿತ್ತು. ಕಬ್ಬಿಣ ಸಂಶೋಧಿಸಲ್ಪಟ್ಟ ಮೇಲೆ ಅದು ತಾಮ್ರ ಪಟ, ಶಿಲೆ ಅಥವಾ ತಾಡಪತ್ರದ ಮೇಲೆ ಕೊರೆಯುವುದನ್ನು ಸಾಧ್ಯ ಮಾಡಿತು. ಅಲ್ಲಿಯವರೆಗೆ ಬರೆಯುವುದೆಲ್ಲಾ ಮರಳು ಅಲ್ಲವಾದರೆ ಆವೆ ಮಣ್ನಿನ ಮೇಲೆ ಆಗುತ್ತಿತ್ತು. ಲೇಖಕ ಪ್ರಕಾಶಕರ ಮಧ್ಯೆ ‘ಲಿಪಿಸಂಯೋಜಕ’ ‘ಮುದ್ರಕ’ ಅಂತ ಹೇಳುವಂತಹ ಕೆಲಸಗಳೂ ಬರಬೇಕಾಯಿತು.

ಸಾಧಾರಣ ೬೦ ವರ್ಷಕ್ಕೆ ಹಿಂದೆ ಮುಂಬಯಿಗೆ ಹೋದಾಗ ಲೈನೋಟೈಪ್ ಎಂಬ ಯಂತ್ರವಿದೆ, ಅದರಲ್ಲಿ ಸುಮ್ಮನೆ ಟೈಪ್ ಮಾಡಿದರೆ ಮುದ್ರಣದ ಪುಟ ತಯಾರಾಗುತ್ತದೆಂದು ಕೇಳಿದೆ. ಆ ಯಂತ್ರವನ್ನು ಮುಂಬಯಿಯಲ್ಲಿ ನಡೆಸುತ್ತಿದ್ದವರು ನಮ್ಮ ಮಂಗಳೂರಿನವರೇ ಸಿಕ್ವೇರಾ ಎನ್ನುವವರು. ಲೋಹ ಕರಗಿಸಿ ಎರಕ ಹೊಯ್ಯುತ್ತಾ ದೊಡ್ಡ ಶಬ್ದಮಾಡಿಕೊಂಡು ಲೈನ್ ಮೇಲೆ ಲೈನ್ ಸೇರಿಸುವ, ಎರಕವಾದೊಡನೆ ಅಕ್ಷರಮಾತೃಕೆಗಳು ಪುನಃ ಗೂಡು ಸೇರುವುದನ್ನು ನೋಡುವುದೇ ಒಂದು ಪರಮಾಶ್ಚರ್ಯ.

ಕಿಟ್ಟೆಲ್ ಅವರ ಮತ್ತು ಬ್ರಿಗ್ಗ ಕಾಲದಲ್ಲಿ ಬಾಸೆಲ್ ಮಿಶನ್ ಇಂಗ್ಲಿಷ್ ಲಿಪಿಯ ಅಕ್ಷರಗಳಲ್ಲಿ ಅಷ್ಟಿಷ್ಟು ಬದಲಾವಣೆ ಮಾಡಿಕೊಂಡು ಭಾರತೀಯ ಭಾಷೆಗಳನ್ನೂ ಮುಖ್ಯವಾಗಿ ಕನ್ನಡ ಮತ್ತು ತುಳುವನ್ನು ಹೇಗೆ ಓದಿಕೊಳ್ಳಬಹುದು ಅನ್ನುವ ವಿಷಯದಲ್ಲಿ ತುಂಬಾ ಸಂಶೋಧನೆ ನಡೆಸಿದರು. ಈಗ ಘನ ಸರಕಾರದವರು ಕನ್ನಡ ಟ್ರಾನ್ಸ್ಲಿಟರೇಶನ್ ಹಾಗೆ ಹೀಗೆ ಎಂದು ದೊಡ್ಡದೊಡ್ಡದು ಮಾತನಾಡುತ್ತಾ ಇದ್ದಾರೆ. ಇದನ್ನು ಆ ಕಾಲದಲ್ಲೇ ಮಾಡಿ ಮುಗಿಸಿದವರು ಕಿಟ್ಟೆಲ್ ಅಯ್ಯನವರು. ಅದಕ್ಕೆ ಒಂದು ರೀತಿಯಲ್ಲಿ ಪುನರ್ಜನ್ಮ ಕೊಡಲು ಪ್ರಯತ್ನಮಾಡಿದ್ದು ನಾನು ಮತ್ತು ನನ್ನ ಮೊಮ್ಮಗಳು. ಆ ಕಾಲದಲ್ಲಿ ತುಳುವಿನ ಎ ಮತ್ತು ಎ* ಅಕ್ಷರಗಳನ್ನು ಅರ್ಥವ್ಯತ್ಯಾಸವಿರುದರಿಂದ ದಾಖಲಿಸುವಾಗ ಬೇರೆಬೇರೆಯಾಗಿ ದಾಖಿಲಿಸಬೇಕು. ಅದಕ್ಕೆ ಇಂಗ್ಲಿಷ್ಲಿಪಿಯ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಸಾಧ್ಯವಿದೆ. ಮೇಲೊಂದು ಬೊಟ್ಟು ಕೆಳಗೊಂದು ಬೊಟ್ಟು ಇಡಬಹುದು. ಇದನ್ನು ನಾವು ಮರೆತು ಏನೋ ಅನ್ಯಾಯ ಮಾಡುತ್ತಿದ್ದೇವೆ ಎಂದು ಅನಿಸುತ್ತದೆ. ೧೮೭೩ನೇ ಇಸವಿಯಲ್ಲಿ ಮದ್ರಾಸಿನಲ್ಲಿ – ಆ ಕಾಲದಲ್ಲಿ ನಾವು ಮದ್ರಾಸ್ ರಾಜ್ಯಕ್ಕೆ ಸೇರಿದ್ದವರು- ಮೊನಿಯರ್ ವಿಲಿಯಮ್ಸ್ ಅವರ ಅಧ್ಯಕ್ಷತೆಯಲ್ಲಿ ಒಂದು ದೊಡ್ಡ ಮೀಟಿಂಗ್ ಮಾಡಿದರು. ಎಲ್ಲ ಭಾರತೀಯ ಭಾಷೆಗಳಿಗೂ ಒಂದು ಸಮಾನಲಿಪಿ – ಇಂಗ್ಲಿಷ್ ಸಾಕು. ಇಂಗ್ಲಿಷಿನಲ್ಲಿ ನಾವು ಅದನ್ನು ಹೇಗೆ ಬರೆಯ ಬೇಕೆಂತ ನಿಶ್ಚಯ ಮಾಡಿ ಇಷ್ಟೆಲ್ಲಾ ಲಿಪಿಗಳು ಬೇಡ ಎಂದು ಯೋಚಿಸಿ ಹೆಚ್ಚು ಕಡಿಮೆ ನಿಶ್ಚಯವೇ ಮಾಡಿದರು. ಒಬ್ಬ ಲಿಪಿಕಾರ – ಬ್ರಾಹ್ಮೀಲಿಪಿಯನ್ನು ಕಂಡುಹುಡುಕಿದ ಜೇಮ್ಸ್ ಪ್ರಿನ್ಸೆಪ್ – ಲಿಪಿಯೆನ್ನುವುದು ಒಂದು ದೇಶದ ಸಂಸ್ಕೃತಿ. ಒಂದು ಸಮಾಜದ ಒಂದು ಸಮೂಹ ಸಂಸ್ಕೃತಿ, ಇದನ್ನು ಕೊಲ್ಲಬೇಡಿ. ಎಷ್ಟು ಲಿಪಿ ಇದೆಯೋ ಅಷ್ಟೆಲ್ಲ ಬರಲಿ. ಯಾವುದನ್ನೂ ಬಿಟ್ಟು ಹಾಕಬೇಡಿ ಎಂದು ಜಗಳಾಡಿ ದೊಡ್ಡ ದೊಡ್ಡ ಹೆಸರಿನವರ ಮನವೊಲಿಸಿ ಲಿಪಿವೈವಿಧ್ಯವನ್ನು ಉಳಿಸುವ ಪ್ರಯತ್ನ ಮಾಡಿದರು. ಅದರಿಂದಾಗಿ ಇವತ್ತು ನಾವು ನಮ್ಮ ಕನ್ನಡ ಲಿಪಿಯನ್ನು ನೋಡುವ ಹಾಗಿದೆ. ಇಲ್ಲದಿದ್ದರೆ ಕನ್ನಡ ಲಿಪಿಯನ್ನು ಬರೇ ಮ್ಯೂಸಿಯಂಗಳಲ್ಲಿ ನೋಡುವ ಅಗತ್ಯ ಬೀಳುತ್ತಿತ್ತೋ ಏನೋ.

ಲೈನೋಟೈಪ್, ಮೊನೊಟೈಪ್ ನಮ್ಮಿಂದ ಏನಾದರೂ ಮಾಡಲಿಕ್ಕಾಗುವ ಯಂತ್ರ ಅಲ್ಲ ಎಂದು ನಿಶ್ಚಯವಾಯಿತು. ನಾನದರಲ್ಲಿ ಕಂಡ ಒಂದೇ ವೈಶಿಷ್ಟ್ಯ ಎಂದರೆ ಟೈಪ್ ರೈಟರಿನ ಹಾಗೆಯೇ ಇರುವಂತಹ ಕೀಲಿಮಣೆಯಿಂದ ಬೇಕಾದ ಅಕ್ಷರಗಳನ್ನು ಆರಿಸಲಿಕ್ಕೆ ಸಾಧ್ಯವಿತ್ತು. ಮಾತಿನಲ್ಲಿ ಏಕತೆಯನ್ನು ಹೊಂದಿದ ಶಬ್ದ ಲಿಪಿಯಲ್ಲಿ ಅನೇಕತೆಯನ್ನು ಹೊಂದುವುದರಿಂದ ಏನು ಕಳಯಿತು, ಏನು ಲಭಿಸಿತು – ಆಶ್ಚರ್ಯ. ಒಂದೇ ರೀತಿಯಾಗಿ ಉಚ್ಚರಿಸುತ್ತೇವೆ. ಆದರೂ ಬರೆಯುವುದು ಬೇರೆ ಬೇರೆ ರೀತಿ. ಅದೇ ವ್ಯಂಜನಗಳು, ಅದೇ ಸ್ವರಗಳು ಆದರೆ ಹೇಳಿದರೆ ಕೇಳುತ್ತದೆ ಆದರೆ ಬರೆದರೆ ಓದಲಾಗುವುದಿಲ್ಲ. ಇದೆಲ್ಲದಕ್ಕೂ ಒಂದು ತಾಂತ್ರಿಕ ಸಮಾಧಾನ ಇದೆಯೇ ಎಂದು ಯೋಚಿಸುತ್ತಿದ್ದೆ. ಕಂಪ್ಯೂಟರುಗಳು ಜ್ಞಾನವಾಹಿನಿಗೆ ಪ್ರವೇಶಿಸಿದ ಕಾಲದಲ್ಲಿ ಅಲ್ಲಿ ನನ್ನ ಪ್ರಶ್ನೆಗಳಿಗೆ ಸಮಾಧಾನ ಇರಬಹುದೆಂದು ಯೋಚಿಸಿದೆ.

ವಿಚಿತ್ರ ಕಾರಣಗಳಿಂದ ನಾನು ೧೯೭೨ರಲ್ಲಿ ಟಾಟಾ ಪ್ರೆಸ್ಸಿಗೆ ಸೇರಬೇಕಾಗಿ ಬಂತು. ಟಾಟಾ ಪ್ರೆಸ್ಸಿನವರು ಒಂದು ಹೊಸ ಇಲೆಕ್ಟ್ರಾನಿಕ್ ಅಕ್ಷರ ಸಂಯೋಜಕ ಯಂತ್ರ ಫೋಟೋಟೈಪ್ ಸೆಟ್ಟಿಂಗ್ – ಖರೀದಿಸಿದ್ದರು. ಲೈನೋಟೈಪ್ ನಂತಹ ದೊಡ್ಡ ಯಂತ್ರಗಳಿಂದ ಆಗ ಆಗುತ್ತಿದ್ದ ಕೆಲಸವನ್ನು ಬಹಳ ಸುಲಭ ರೀತಿಯಲ್ಲಿ ಲೋಹವನ್ನೇ ಉಪಯೋಗಿಸದೆ ಬರೇ ಫಿಲ್ಮ್ ಮತ್ತು ಅಕ್ಷರಗಳ ಚಿತ್ರಗಳನ್ನು ಉಪಯೋಗಿಸಿಕೊಂಡು ಮುದ್ರಿಸ ಬಹುದಾಗಿತ್ತು. ಲಿಪಿ ಜೋಡಿಸುವ ಕೆಲಸವನ್ನು ಯಾವುದೇ ಲೋಹದ ಮೊಳೆಗಳ ಉಪಯೋಗ ಮಾಡದೆ ಬರೇ ಬೆಳಕನ್ನು ಉಪಯೋಗಿಸಿ ಮಾಡಬಹುದಾಗಿತ್ತು. ಬೆರಳಚ್ಚು ಮಾಡಿದ ಅಕ್ಷರಗಳು ಬೆಳಕಚ್ಚಿನೀಂದ ಸುಂದರವಾಗಿ ಮೂಡಿಬರುತ್ತಿತ್ತು. ಇದನ್ನು ಯಾರಾದರೂ ನಡೆಸುವವರು ಅವರಿಗೆ ಬೇಕಾಗಿತ್ತು. ಅವರಿಗೆ ಸಿಕ್ಕಿದ್ದು ಬರೇ ನಡೆಸುವವರಲ್ಲ, ನನ್ನಂತಹ ಇದನ್ನು ಸುಧಾರಿಸುವವರು.

ಈ ಕಾಲದಲ್ಲಿ ಶ್ರೀ ಇರಾವತಂ ಮಹಾದೇವನ್ ಅನ್ನುವಂತಹವರು- ನಿಮಗೆ ಗೊತ್ತಿದ್ದರೆ ತಮಿಳುನಾಡಿನಲ್ಲಿ ಈಗ ತಮಿಳು ಕಲ್ಚರ್ ಅಥವಾ ತಮಿಳು ಅಕ್ಷರ ಸಂಸ್ಕೃತಿಗೆ ಅಧ್ವರ್ಯು ಆಗಿರುವವರು – ಭಾರತ ಸರ್ಕಾರದಲ್ಲಿ ಸೆಕ್ರೆಟರಿ ಡಿಪಾರ್ಟ್ ಮೆಂಟ್ ಆಫ್ ಫೈನಾನ್ಸ್ ಆಗಿದ್ದವರು. ಅವರು ಸಿಂದೂ ಲಿಪಿಯ ಮೇಲೆ ಪ್ರೀತಿಯಿಂದ ಒಂದು ಪುಸ್ತಕ ಬರೆಯುವ ಪ್ರಯತ್ನ ಮಾಡಿದರು. ಇಂಡಸ್ ವ್ಯಾಲಿ ಸ್ಕ್ರಿಪ್ಟ್ ಕಾನ್ಕಾರ್ಡೆನ್ಸ್ ಎಂದು ಅದರ ಹೆಸರು.ಇದರಲ್ಲಿ ಇಂಗ್ಲಿಷಿನ ಜೊತೆಗೆ ಸಿಂಧೂ ಲಿಪಿಯ ಅಕ್ಷರಗಳು ಬೇಕಾಗಿತ್ತು. ಇದನ್ನು ಬ್ಲಾಕಿನಲ್ಲಿ ಮಾಡುವುದು ಮುದ್ರಿಸುವುದು ಬಹಳ ಕಷ್ಟವಿತ್ತು. ಮಹಾದೇವನ್ ಅವರ ಗ್ರಂಥ ಟಾಟಾ ಇನ್ಟಿಟ್ಯೂಟಿನ ಕಂಪ್ಯೂಟರಿನಲ್ಲಿ ತಯಾರಾಗುತ್ತಿತ್ತು. ಆ ಕಾಲದ ಕಂಪ್ಯೂಟರುಗಳು ಅಕ್ಷರ ಸಂಕೇತಗಳನ್ನು ಕೊಡಬಹುದಲ್ಲದೆ ಅದರ ರೂಪವನ್ನು ಕೊಡುವಷ್ಟು ಬುದ್ಧಿ ಅವುಗಳಿಗೆ ಇರಲಿಲ್ಲ. ಈಗ ಸಾಧ್ಯವಿದೆ. ಈ ಫೋಟೋ ಟೈಪ್ ಯಂತ್ರಕ್ಕೆ ಅಕ್ಷರಗಳನ್ನು ಸೃಷ್ಟಿಸುವ ಕೆಲಸವನ್ನು ನಾನು ಮಾಡಬೇಕಾಯಿತು. ಸಿಂಧೂಲಿಪಿಯ ಮುದ್ರೆಗಳು ಯಾವ ರೂಪದಲ್ಲಿ ಬರಬೇಕೆನ್ನುವುದನ್ನು ಒಂದು ರೀತಿಯಲ್ಲಿ ಪೂರ್ವನಿಶ್ಚಯ ಮಾಡಿದವನು ಆ ಕಾಲಕ್ಕೆ ನಾನು. ಮಹಾದೇವನ್ ಅವರ ಪುಸ್ತಕಕ್ಕಾಗಿ. ಸಿಂಧೂ ಲಿಪಿಯ ಕೆಲಸ ಮುಗಿದ ಕೂಡಲೇ ಅದೇ ಯಂತ್ರವನ್ನು ಉಪಯೋಗಿಸಿ ಕನ್ನಡದ ನಾಲ್ಕು ಸಾಲು ಅಕ್ಷರಗಳನ್ನು ನಾನು ಆಗಲೇ ಟಾಟಾ ಪ್ರೆಸ್ಸಿನಲ್ಲಿ ಪ್ರಿಂಟ್ ಮಾಡಿದ್ದೆ. ಇದು ಸಾಧಾರಣ ೭೩-೭೪ನೇ ಇಸವಿಯಲ್ಲಿ. ಕೆಲವೇ ವರುಷಗಳಲ್ಲಿ ಪರದೇಶಗಳಲ್ಲಿ ತಯಾರಿಸಿದ ಭಾರತೀಯ ಭಾಷೆಗಳ ಫೊಟೊಸೆಟ್ಟಿಂಗ್ ಯಂತ್ರಗಳ ಗಡಣವೇ ನಮ್ಮ ದೇಶಕ್ಕೆ ದಾಳಿ ಇಟ್ಟವು. ಇಂದು ಅವೆಲ್ಲಾ ಎಕ್ಸಿಬಿಶನ್ ಮತ್ತು ಅಟ್ಟಗಳಲ್ಲಿ ಸೇರಿಹೋಗಿದೆ. ಲೈನೋಟೈಪ್, ಬತ್Fಹೋಲ್ಡ್, ಮೋನೋಟೈಪ್ ಅಂತವರು ಕೂಡಾ ಇಂತಹ ಯಂತ್ರಗಳನ್ನು ಮಾಡಿದರು. ದೇವನಾಗರಿ ಪ್ರಿಂಟ್ ಮಾಡಲು ೧೮೦ ಲಿಪಿಅಂಶಗಳು ಮತ್ತು ಅವುಗಳಿಗೆ ೧೨೦ ಕೀಲಿಗಳಿದ್ದವು. ಕಂಪ್ಯೂಟರಿನಿಂದ ಇದನ್ನು ಹೇಗಾದರೂ ಸುಧಾರಿಸಲು ಸಾಧ್ಯವಿದೆಯಾ ಅನ್ನುವಂತಹದು ನಮ್ಮ ಒಂದು ಯೋಚನೆಯೇ ಆಗಿತ್ತು.

ಮೊನೊಟೈಪ್ ಆ ಕಾಲದಲ್ಲಿ ಒಂದು ವಿಶಿಷ್ಟವಾದಂತಹ ಲೇಸರ್ ಕಾಂಪ್ ಎಂಬ ಯಂತ್ರವನ್ನು ತಯಾರಿಸುತ್ತಿದ್ದರು. ಲೋಹಗಳ ಮೊಳೆಗಳ ಆ ಕಾಲದಲ್ಲಿ ಇದು ಎಲ್ಲವನ್ನೂ ಮೀರಿದ ಡಿಜಿಟಲ್ ಯಂತ್ರವಾಗಿತ್ತು. ಇದರಲ್ಲಿ ಅಕ್ಷರಗಳು ಮಾಯಾಲೋಕದಲ್ಲಿ ಇರುವವುಗಳು. ಚಿತ್ರಗಳಿರುವ ಬದಲಿಗೆ ಮಾಯಾಚಿತ್ರಗಳು. ಕಂಪ್ರ್ಯೂಟರಿನ ಚಿತ್ರಗಳೇ ಆಗಿ ಉಳಿದಿದ್ದುವು. ಲೇಸರ್ ಕಾಂಪ್ ಅನ್ನುವ ಈ ಯಂತ್ರ ಡೇವಿಡ್ ಹೆಡ್ಜ್ ಲೆಂಡ್ ಎನ್ನುವವನ ಕೇಂಬ್ರಿಜ್ ಯೂನಿವರ್ಸಿಸಿಟಿಯ ಪಿ.ಎಚ್ಡಿ ಪ್ರಬಂಧ ಸಹಿತ ಸಂಶೋಧನೆ. ಲೇಸರ್ ಕಿರಣವನ್ನು ಆನ್ ಆಫ್ ಆನ್ ಆಫ್ ಮಾಡಿಕೊಂಡು ಹೇಗೆ ನಾವು ಅಕ್ಷರಗಳನ್ನು ಬರೆಯಬಹುದು, ಫೋಟೋ ಗ್ರಾಪಿಕ್ ಫಿಲಂನ ಮೇಲೆ ಹೇಗೆ ಇದರಿಂದ ಅಕ್ಷರಗಳನ್ನು ಮೂಡಿಸಬಹುದು ಎಂಬುದು ಅವನ ಸಂಶೋಧನೆಯ ವಿಷಯವಾಗಿತ್ತು. ಅದನ್ನೇ ಒಂದು ಯಂತ್ರವಾಗಿ ಉಪಯೋಗಮಾಡಿಕೊಂಡು ಇಂಗ್ಲಿಷಿಗೆ ಸರಿಯಾಗುವ ಡಿಜಿಟಲ್ ಟೈಪ್ ಗೆ ನಾಂದಿಯಾದರು. ಮದರಾಸಿನ ದ. ಹಿಂದೂ ಪತ್ರಿಕೆಯವರು ಈ ಯಂತ್ರದ ಮೊದಲ ಗ್ರಾಹಕರು. ಲೋಕದಲ್ಲೇ ಪ್ರಪಥಮ ಲೇಸರ್ ಮುದ್ರಿತ ದಿಜಿಟಲ್ ಪೇಪರ್ ಹಿಂದೂ ಆದದ್ದು ಹೀಗೆ ಮೋನೋಟೈಪಿನ ಲೇಸರ್ ಕಾಂಪಿನಲ್ಲಿ.

ಲೇಸರ್ ಕಾಂಪನ್ನು ಇತರ ಭಾರತೀಯ ಭಾಷೆಗಳಿಗೂ ಉಪಯೋಗ ಮಾಡಲಿಕ್ಕೆ ಸಾಧ್ಯವಿದೆಯೋ ಎಂದು ಪ್ರಯತ್ನಿಸುವ ಸಂತೋಷದ ಕೆಲಸ ನನ್ನ ಪಾಲಿಗೆ ಬಂತು. ನಮ್ಮ ಮೊದಲನೆಯ ಗಿರಾಕಿ ಸಿಕ್ಕಿದ್ದು ಆಂಧ್ರಭೂಮಿ, ಹೈದರಾಬಾದಿನ ಪತ್ರಿಕೆ. ಇವರಿಗೆ ಇಂಗ್ಲೀಷೂ ಬೇಕಿತ್ತು. ಆದರೊಡನೆ ತೆಲುಗು ಕೂಡಾ. ಒಂದೇ ಮೆಶಿನನ್ನು. ಲೇಖನ ಅಥವಾ ಮುದ್ರಣಯಂತ್ರವನ್ನು ಎರಡೂ ಲಿಪಿಗಳಿಗೆ ಉಪಯೋಗಿಸಬೇಕಾಗಿತ್ತು. ಇಂಗ್ಲಿಷಿಗಂತು ಇಂಗ್ಲಿಷ್ ಕೀಬೋರ್ಡು ಇದೆ, ಕಂಪ್ಯೂಟರ್ ಇದ್ದಾವೆ, ಹೇಗೋ ಪ್ರಿಂಟ್ ಮಾಡಿಕೊಡಬಹುದು. ತೆಲುಗನ್ನು ಹೇಗೆ ಮಾಡಬೇಕು? ಈ ಸಮಸ್ಯೆ ನನ್ನ ಮುಂದೆ ಬಂತು. ನಾನು, ನನ್ನ ಸಹಯೋಗಿಗಳು ದೇವಾಶೀಷ್ ಬ್ಯಾನರ್ಜಿ ಅನ್ನುವವರು ಸೇರಿಕೊಂಡು ಇದಕ್ಕೆ ಉತ್ತರ ಹುಡುಕಿದೆವು. ತೆಲುಗು ಮತ್ತು ಕನ್ನಡದಂತೆ ದಕ್ಷಿಣದ ಭಾರತೀಯ ಭಾಷೆಗಳ ಒಂದು ವೈಶಿಷ್ಟ್ಯವೆಂದರೆ ಸ್ವರಾಕ್ಷರಗಳು ಶಬ್ದದ ಪ್ರಾರಂಭದಲ್ಲಿ ಮಾತ್ರ ಬರುತ್ತಾವಲ್ಲದೆ ಮಧ್ಯದಲ್ಲಿ ಬರುವುದಿಲ್ಲ. ಹಿಂದಿಯಲ್ಲಿ ಅದು ಬರುತ್ತದೆ. ಒಂದೇ ಕೀಲಿ ‘ಐ ‘ ಒತ್ತಿದರೆ ಶಬ್ದ ದ ಪ್ರಾರಂಭದಲ್ಲಿ ಇದ್ದರೆ ಅದು “ಇ” ಯಾವುದೇ ವ್ಯಂಜನದ ಅನಂತರ ಬಂದರೆ ವ್ಯಂಜನದ ಇಕಾರವಾಗುವ ನಿಯಮವನ್ನು ಕಂಡು ಕೊಂಡೆ. ಹೊಸ ಕೀಲಿಗಳ ಅಗತ್ಯವಿಲ್ಲದೆ ನಾವು ಉಪಯೋಗಿಸಲು ಸಾಧ್ಯವಾಯಿತು. ಆದ್ದರಿಂದ ೨೬ಕೀಲಿಗಳ ಒಳಗೇ ಸ್ವರ ಅಕ್ಷರಗಳಿಗೇ ನಾವು ಯಾವ ಒಂದು ಪ್ರತ್ಯೇಕ ಜಾಗವನ್ನೂ ಕೊಡದೆ ಸ್ವರಸಂಜ್ಞೆಗಳಿಗೆ ಮಾತ್ರ ಒಂದು ಜಾಗವನ್ನು ಕೊಟ್ಟು ಅದನ್ನು ನಾವು ಮಾಡುವುದು ಸಾಧ್ಯವಾಯಿತು. ಇವತ್ತಿಗೂ ಅದು ಹಾಗೆ ಉಳಿದಿದೆ. ಅದರಲ್ಲೀ ಏನೂ ಬದಲಾವಣೆಗಳ ಅಗತ್ಯವಿಲ್ಲ.ಇದನ್ನೇ ಸ್ವಲ್ಪ ಮುಂದುವರಿಸಿ ಟ್ರಾನ್ಸ್ ಲಿಟರೇಶನಿಗೆ ಉಪಯೋಗಿಸಿದರೆ ಇನ್ನಷ್ಟು ಅನುಕೂಲವಾಗುವುದರಲ್ಲಿ ನಮಗೇನೂ ಸಂಶಯಗಳಿಲ್ಲ. ಕೆಲವು ದಿವಸದಲ್ಲಿ ಇನ್ನೊಂದು ತೆಲುಗು ಪತ್ರಿಕೆ “ಈ ನಾಡು” ಮೊನೊಟೈಪ್ ಯಂತ್ರಗಳನ್ನು ಕೊಂಡರು. ಒಂದಿಷ್ಟೂ ಬದಲಾವಣೆಗಳಿಲ್ಲದೆ ಅದೇ ತಂತ್ರಾಂಶವನ್ನು ಉಪಯೋಗಿಸಿದೆವು. ಒಂದು ತಿಂಗಳು ರಾತ್ರಿ ಹಗಲು ನಾವು ಮಾಡಿದ ಕೆಲಸ ಇಷ್ಟು ಎಲ್ಲದಕ್ಕೂ ಕಾರಣವಾಗಿದೆ ಅನ್ನುವುದು ಇವತ್ತಿಗೂ ನಮಗಾಶ್ಚರ್ಯ. ಯಾವ ಕೆಲಸಕ್ಕೂ ಕಾಲ ಒದಗಿ ಬರಬೇಕು. ನಾವು ಅಲ್ಲಿ ಇದ್ದೆವು ನಮ್ಮಿಂದ ಸಾಧ್ಯವಾಯಿತು. ನಾವಲ್ಲವಾದರೆ ಇನ್ಯಾರೋ ಮಾಡುತ್ತಿದ್ದರೋ ಏನೋ. ಆದರೆ ನಮ್ಮ ಅಕ್ಷರ ಜ್ಞಾನ ಭಾರತೀಯ ಭಾಷೆಗಳನ್ನು ಕಂಪ್ಯೂಟರಿನಲ್ಲಿ ಸೇರಿಸುವ ಸಮಸ್ಯೆಯನ್ನು ಸಾಧಾರಣ ಕೀಲಿಮಣೆಯಲ್ಲಿ ಸಾಧ್ಯವಾಗಿಸಿತು ಎನ್ನುವುದು ನಮಗೊಂದು ಹೆಮ್ಮೆ.

ಬೆಂಗಳೂರಿನಲ್ಲಿ ಇದೇ ಕಾಲದಲ್ಲಿ ರೆವರೆಂಡ್ ಕ್ರೋ ಎನ್ನುವ ಅಮೇರಿಕನ್ ಮಿಶನರಿ ಇದ್ದರು. ಬೈಬಲ್ಲನ್ನು ಮೂಲ ಅರೈಮಿಕ್ ನಲ್ಲಿ ಓದಿ ತೆಲುಗಿಗೆ ಭಾಷಾಂತರಿಸಿದ್ದರು. ೪೦೦ರಷ್ಟು ಪುಟಗಳ ತೆಲುಗು ಬೈಬಲ್ಲಿನ ಯಾವ ಅಕ್ಷರ ಎಷ್ಟು ಸಾರಿ ಬಂದಿದೆ ಎಂದು ನಿಖರವಾಗಿ ಹೇಳಬಲ್ಲವರು. ನನಗೆ ಅರೈಮಿಕ್ ಕಲಿಸಿದ ಗುರುಗಳು. ಮುಂದೆ ನಾನು ಸೇಡಿಯಾಪು ಕೃಷ್ಣ ಭಟ್ಟರ ಹೆಸರಿನಲ್ಲಿ ಬಿಡುಗಡೆ ಮಾಡಿದ ಎಡಿಟರಿನ ತೆಲುಗು ಆವೃತ್ತಿಯ ಮೊದಲ ಉಪಯೋಗ ಕರ್ತ. ಭಾರತೀಯ ಭಾಷೆಗಳನ್ನು ತಪ್ಪುಗಳಿಲ್ಲದೆ ಸೇರಿಸುವ ಸಮಸ್ಯೆಗಳನ್ನು ನನಗೆ ಮನಗಾಣಿಸಿದವರು. ಕೊನೆಗೆ ಸೇಡಿಯಾಪು ಕೃಷ್ಣ ಭಟ್ಟರ ಹೆಸರಿನಲ್ಲಿ ಬಿಡುಗಡೆಯಾದಾಗ ಆ ಕೀಲಿಮಣೆ ಪರಿಪೂರ್ಣತೆಯನ್ನು ಹೊಂದಿತು.

ಉಡುಪಿಯ ತುಳು ನಿಘಂಟು ಯೋಜನೆಯ ವಿಷಯ ನನಗೆ ತಿಳಿದುದು ಸಾಧಾರಣ ಇದೇ ಸಮಯದಲ್ಲಿ. ಹರಿದಾಸ ಭಟ್ಟರು ತುಳು ಅಕ್ಷರ ಟಂಕನದ ಸಮಸ್ಯೆಗಳನ್ನು ನನಗೆ ತಿಳಿಸಿದರು. ನಾನಾಗಲೇ ಉಪಯೋಗಿಸುತ್ತಿದ್ದ ಕನ್ನಡ ಎಡಿಟರನ್ನೇ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ತುಳುವಿಗೆ ಹೇಗೆ ಉಪಯೋಗಿಸಬಹುದೆಂದು ತೋರಿಸಿದೆ. ನಮ್ಮ ಮಾತೃ ಭಾಷೆ ತುಳುವಿನಲ್ಲಿ ಇಂತಹ ಕೆಲಸವಾಗುವುದನ್ನು ನೋಡಿ ಸಂತೋಷವಾಯಿತು. ಮುಂದಿದ್ದೆಲ್ಲಾ ನಿಮ್ಮ ಕಣ್ಣಮುಂದೆ ಇರುವುದೇ. ಎರಡನೆಯ ಸಂಪುಟದಿಂದ ಪ್ರಾರಂಭಿಸಿ ಇರುವುದೆಲ್ಲಾ ನನ್ನ ಅಕ್ಷರಗಳು, ನನ್ನ ಎಡಿಟರ್.

ಮುಂದೆ ಏನು ಮಾಡಬೇಕು, ಕಂಪ್ಯೂಟರುಗಳಿಗೆ ಇಷ್ಟು ಮಾತ್ರ ಕೆಲಸವೇ ಬರಿಯ ಮುದ್ರಣಕ್ಕಾಗಿ ಪುಟಗಳನ್ನು ತಯಾರುಮಾಡುವುದು ಮಾತ್ರವೇ ಬೇರೆ ಏನಾದರೂ ಮಾಡಲು ಸಾಧ್ಯ ಇದೆಯೇ ಎಂದು ಯೋಚಿಸುತ್ತಿದ್ದೆ. ಈ ಸಮಯ ಕಾರಣಾಂತರಗಳಿಂದ ಸ್ವಯಂಪ್ರೇರಿತ ಅಥವಾ ಸ್ವಯಂಘೋಷಿತ ಅಜ್ಞಾತವಾಸದಲ್ಲಿ ಇರಬೇಕಾಯಿತು. ನಿಜವಾಗಿಯಾದರೆ ಸಣ್ಣ ಕೆಲಸಗಳನ್ನು ಮಾಡಿ, ಚಳವಳಿಗಳಲ್ಲಿ ಘೋಷಣೆಗಳನ್ನು ಕೂಗಿ, ಎಲ್ಲರಿಗೂ ಕಾಣುವ ಹಾಗೆ ಇಂತಹ ಮಹಾಕಾರ್ಯ ಮಾಡಿದ್ದೇನೆ ಎಂದು ಹೇಳಿಕೊಳ್ಳುವ, ಹೊಗಳಿಸಿಕೊಳ್ಳುವ ಜನರ ಮಧ್ಯದಲ್ಲಿ ನನ್ನನ್ನು ಯಾರೂ ಗಮನಿಸಿಯೇ ಇಲ್ಲವಲ್ಲಾ ಅಂತ ದುಃಖವಾಗುತ್ತಿತ್ತು. ಗುರುತಿಸಿ ಏನು ಮಾಡಬೇಕು? ಹರಿದಾಸ ಭಟ್ಟರಿಗೆ ಇದು ಅರ್ಥವಾಗಿತ್ತು ಇದು ಒಳ್ಳೆ ಕೆಲಸ ಅಂತ ಹೇಳಿದರು. ಅವರ ಪ್ರೇರಣೆಯಂದ ಮತ್ತು ನಾವು ಮೂವರು ಪದ್ಮನಾಭರ ಉತ್ಸಾಹದಿಂದಾಗಿ ನಾವು ತುಳುವಿನ ಕೆಲಸಕ್ಕೆ ಅದನ್ನು ಉಪಯೋಗಿಸಿದೆವು.

ಸೇಡಿಯಾಪು ತಂತ್ರಾಂಶವನ್ನು ಮಾಡಿದ ಕೂಡಲೇ ಕೆಲವರಿಗೆಲ್ಲ ಕೊಟ್ಟೆ. ಇದನ್ನು ಸರಿಯಾಗಿ ಉಪಯೋಗ ಮಾಡಿದವರು ಚೆನ್ನಾಗಿ ಇದೆ ಎಂದು ಹೇಳಿ ಒಳ್ಳೆಯ ಮಾತು ಹೇಳಿದವರು ಆಗ ಹಂಪಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರರಾಗಿದ್ದ ಡಾ. ಕೆ.ವಿ. ನಾರಾಯಣ ಮತ್ತು ಉಪಕುಲಪತಿ ಚಂದ್ರಶೇಖರ ಕಂಬಾರರು. ಕನ್ನಡ ವಿಶ್ವವಿದ್ಯಾಲಯ ಹಂಪೆ ಆಗ ತಾನೇ ಪ್ರಾರಂಭವಾಗಿದ್ದು. ಅವರು ಇದನ್ನು ಪೂರ್ಣವಾಗಿ ಉಪಯೋಗ ಮಾಡಲು ಪ್ರಾರಂಭಿಸಿದರು. ಅಲ್ಲಿಯ ಎಲ್ಲಾ ಜನಗಳು ನಮ್ಮ ಮಿತ್ರರು ಆ ಕಾಲದಲ್ಲಿ ಇದ್ದವರು. ಕೆ. ವಿ. ನಾರಾಯಣ, ಶ್ರೀನಿವಾಸ ರಾಜು, ಓ ಎಲ್. ಎನ್, ಮಲ್ಲೇಪುರಂ, ರಹಮತ್ ಅವರೆಲ್ಲ ಇದನ್ನು ಉಪಯೋಗ ಮಾಡಿದರು. ನಾನು ಅವರಿಗೆ ಒಂದು ಮಾತು ಹೇಳಿದೆ: ‘ನೋಡಿ ಬರೇ ಒಂದು ಚೀಟಿ ಬರೆಯುವುದಿದ್ದರೂ ನೀವು ಕಂಪ್ಯೂಟರ ಉಪಯೋಗ ಮಾಡಿ.ಯಾಕೆಂದರೆ ನಿಮಗೆ ಗೊತ್ತಿಲ್ಲದೆ ನೀವು ಬರೆದುದೆಲ್ಲಾ ಉಳಿಯುತ್ತದೆ. ಕಳೆದು ಹೋಗುವುದಿಲ್ಲ. ಆ ಶಬ್ದಗಳು ನೆಮಗೆ ಬೇಕಾದಾಗ ಸಿಗುತ್ತವೆ. ಒಂದು ದಿವಸ ನಿಮಗೆ ಸಿಗುವುದು ಶಬ್ದಸಾಗರ ಶಬ್ಬಭಂಡಾರ.. ಶಬ್ದಗಳು ಹೇಗೆ ಉಪಯೋಗ ಆಗಿದೆ ಇದನ್ನೆಲ್ಲ ನೋಡಲು ಹೊಸ ಪ್ರೋಗ್ರಾಂ ಬರೆಯುತ್ತೇವೆ. ಅದಕ್ಕೇನೂ ಯೋಚನೆ ಇಲ್ಲ. ಕಂಪ್ಯೂಟರ್ ಈಗ ಇದ್ದಹಾಗೆ ಇರುವುದಿಲ್ಲ. ಇದಕ್ಕಿಂತ ಎಷ್ಟೋ ಡೊಡ್ಡದಾಗುತ್ತವೆ. ಶಬ್ಬಭಂಡಾರದಿಂದ ಏನೇನೋ ವಿಶೇಷ ಮಾಡಲು ಸಾಧ್ಯವಾಗುತ್ತದೆ. ಆಗ ಅವುಗಳಿಗೆ ಆ ಶಬ್ದಗಳ ಅಗತ್ಯ ಬೀಳುತ್ತವೆ. ಆದುದರಿಂದ ನೀವು ಏನೇ ಬರೆಯುವುದಿದ್ದರೂ ಕಂಪ್ಯೂಟರಿನಲ್ಲೇ ಬರೆಯಿರಿ’ ಎಂದು ಹೇಳಿದೆ ಯಾರಿಗೂ ಅರ್ಥವಾಗಲಿಲ್ಲ. ಕೆ.ವಿ ನಾರಾಯಣ ಬಹುಶಃ ಸ್ವಲ್ಪ ಪ್ರಯತ್ನ ಮಾಡಿದರು

ಮಣಿಪಾಲಕ್ಕೆ ಬಂದು ಅಧ್ಯಾಪನವನ್ನು ವೃತ್ತಿಯಾಗಿ ಸ್ವೀಕರಿಸಿದ ಮೇಲೆ ನನಗೆ ಒಂದು ರೀತಿಯ ದೊಡ್ಡ ಹತಾಶಭಾವ ಬಂತು. ಹೊಸ ಮಕ್ಕಳಿಗೆ ಚರಿತ್ರೆಗಳು ಬೇಡ. ಪರೀಕ್ಷೆಯಲ್ಲಿ ಏನು ಓದಿದರೆ ಪಾಸಾಗಬಹದು ಅಷ್ಟು ಸಾಕು. ಇದಲ್ಲದೆ ಇನ್ನಾವುದೂ ಅವರಿಗೆ ಬೇಕಾಗುವುದಿಲ್ಲ. ಆಗಲಿ ನಮ್ಮ ಸುಖ ನಾವು ಎಲ್ಲಿ ಕಂಡುಕೊಳ್ಳಬೇಕು?

ಧ್ವನ್ಯಾಧಾರಿತ ಕೀಲಿಮಣೆ ಅಭಿವೃದ್ಧಿಮಾಡಿದ ಮೇಲೆ ನನ್ನ ಒಂದು ದೊಡ್ಡ ಕನಸು ನನಸಾಯಿತು ಅಂತ ಹೇಳಬಹುದು . ಇದೇ ಮಾದರಿಯ ಧ್ವನ್ಯಾಧಾರಿತ ಕೀಲಿಮಣೆಗಳನ್ನು ಯಾವ ಲಿಪಿಗಳಿಗೂ ನಾವು ಬಳಿಸಿಕೊಳ್ಳಬಹುದು. ಬಹುಶಃ ಭಾರತದ ಎಲ್ಲ ಭಾಷೆಗಳಿಗೂ ಇದನ್ನು ಬಳಸಿಕೊಳ್ಳುವ ಸಾಧ್ಯತೆಗಳನ್ನು ನಾನು ನೋಡಿದೆ. ೧೯೮೫ನೇ ಇಸವಿಯಲ್ಲಿ ಇನ್ನೂ ಮೈಕ್ರೋಸಾಪ್ಟ್ನ ವಿಂಡೋಸ್ ಹುಟ್ಟದೆ ಇರುವ ಕಾಲದಲ್ಲಿ ಕೂಡ ಹೀಗೆ ಡಾಸ್ನಲ್ಲಿ ಅಥವಾ ಸಿಪಿಎಂ. ನಲ್ಲಿ ನಮ್ಮ ಸೇಡಿಯಾಪು ತಂತ್ರಾಂಶವನ್ನು ನಾನು ಕನ್ನಡಕ್ಕೆ ಬರೆದೆ. ಆದರೆ ಇದರದ್ದೇ ಹಿಂದಿ ಆವೃತ್ತಿ, ತಮಿಳು ಆವೃತ್ತಿ, ತೆಲುಗು ಆವೃತ್ತಿ, ಬಾಂಗ್ಲಾ ಆವೃತ್ತಿ, ದೇವನಾಗರಿ ಮತ್ತು ಒರಿಯಾ ಆವೃತ್ತಿಗಳನ್ನು ಕೂಡ ನಾನು ಪ್ರಚಾರ ಮಾಡಿದೆ. ಬೇರೆಲ್ಲಿಯೂ ಅದು ಪ್ರಚಾರಗೊಳ್ಲಲಿಲ್ಲ. ಸಹೃದಯಿಗಳು ಅಥವಾ ಸರಕಾರಗಳು ಇಂದಿನಂತೆ ಅಂದೂ ಕಣ್ಣು ತೆರೆಯಲಿಲ್ಲ.ಕನ್ನಡದವರು ಅದನ್ನು ಒಪ್ಪಿಕೊಂಡಿರುವುದು ನನಗೊಂದು ಸಂತೋಷದ ವಿಷಯ. ನನ್ನ ಅನಂತರ ಬಂದ “ಬರಹ”ದ ಶ್ರೀ ವಾಸು ಅವರೂ ಅಂತರ್ಯದಲ್ಲಿ ಇದಕ್ಕೆ ಸಮಾನವಾದ ಆದರೆ ಬಾಹ್ಯ ರೂಪದಲ್ಲಿ ಇದಕ್ಕೆ ಭಿನ್ನವಾದ ಕೀಲಿಮಣೆಯನ್ನು ಪ್ರಸಿದ್ಧಿಸಿದರು ಮತ್ತು ಸೇಡಿಯಾಪು ಕೀಲಿಮಣೆಯ ಶಾಸ್ತ್ರೀಯತೆಯನ್ನು ಒಪ್ಪಿಕೊಂಡರು.

ಇಲ್ಲಿ ನಾನು ಒಂದು ಮಾತು ಹೇಳಬೇಕು – ನನಗೆ ತಿಳಿದಿರುವ ಯಾವ ಲಿಪಿಯೂ ಕೂಡ ಸಂಪೂರ್ಣವೂ ಅಲ್ಲ, ಸ್ವಯಂಪೂರ್ಣವೂ ಅಲ್ಲ, ತಪ್ಪಿಲ್ಲದ್ದೂ ಅಲ್ಲ, ಶುದ್ಧ ಶಾಸ್ತ್ರೀಯವೂ ಅಲ್ಲ. ಭಾಷೆಯಲ್ಲಿ ನಾವು ಮಾತನಾಡುವಾಗ ಸ್ವರಬದ್ಧತೆ ಇದೆ, ಅಕ್ಷರಗಳಿಗೆ, ಅಂತಹ ಸ್ವರಸಂಬಂಧಗಳಿಲ್ಲ. ನಮ್ಮ ಭಾಷಾಮೋಹ ಇದ್ದಹಾಗೆ ಲಿಪಿಮೋಹವೂ ಕೂಡ ಕೆಲವರಿಗೆ ಇರುತ್ತದೆ ಅನ್ನುವುದು ನನಗೆ ಅರ್ಥವಾದ ಮೇಲೆ ಇದರಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲಾಂತ ನಾನು ಬಿಟ್ಟುಬಿಟ್ಟೆ.

ಸೇಡಿಯಾಪು ಅಥವಾ ಕೆ.ಪಿ. ರಾವ್ ಕೀಬೋರ್ಡು ಆಗ ನಾನು ಹಾಕಿದ ಮೇಲೆ ಕೂಡ ಕೆಲವು ಜನಗಳು ಕೆಲವು ಕಾರಣಗಳಿಗೆ ಬೇರೆ ರೀತಿಯ ಕೀಲಿಮಣೆಗಳನ್ನು ಉಪಯೋಗಮಾಡಿಕೊಂಡರು. ಇದು ಕೆಲವರ ಸ್ವಪ್ರತಿಷ್ಠೆಯ ವಿಷಯವಲ್ಲದೆ ಅಗತ್ಯ ಯಾರಿಗೂ ಇರಲಿಲ್ಲ. ನಾನು ಪ್ರಿಂಟಿಂಗ ಅಥವಾ ಮುದ್ರಣ ಕಲೆಯಿಂದ ಬಂದವನಾದ್ದರಿಂದ ಅಲ್ಲಿಯ ಅಗತ್ಯಗಳು ಏನು, ಅಲ್ಲಿಯ ಕೀಲಿಮಣೆಗಳ ಉಪಯೋಗ ಸಮಸ್ಯೆಗಳೇನು ಎಂದು ಗೊತ್ತು.

ಈಗ ನಾವು ಏನು ಯುನೀಕೋಡ್ ಅನ್ನುತ್ತೇವೋ ಅದರ ಒಂದು ಪೂರ್ವರೂಪವನ್ನೇ ನಾವು ಆಗ ಸೃಷ್ಟಿಸಿದೆವು. ಆ ಕಾಲದಲ್ಲಿ ಭಾರತ ಸರ್ಕಾರದವರು ಇಸ್ಕೀ ಹೆಸರಿನ ಇಂಡಿಯನ್ ಸ್ಟಾಂಡಡ್F ಕೋಡ್ ಫಾರ್ ಇನ್ಫೋರ್ಮೇಶನ್ ಎಕ್ಸಚೇಂಜ್ ಮಾಡಿಕೊಂಡಿದ್ದರು, ಭಾರತೀಯ ಭಾಷೆಗಳಿಗಾಗಿ. ಇದರ ಪೂರ್ವಾರ್ಧ ಹೆಚ್ಚುಕಡಿಮೆ ಸರಿಯಾಗಿತ್ತು. ಆದರೆ ಅದರ ಉತ್ತರಾರ್ಧ ಪೂರಾ ಅಶಾಸ್ತ್ರೀಯವಾಗಿತ್ತು. ಸೇಡಿಯಾಪು ಮಾಡಿದಾಗ ನಮ್ಮದೇ ಹೊಸ ಸೃಷ್ಟಿಯ ಬದಲಿಗೆ ಇಸ್ಕೀಯ ಪೂರ್ವಾರ್ಧವನ್ನೇ ಉಪಯೋಗಿಸಿದೆ. ನಾವು ಮೂರ್ತಿ ಭಂಜಕರಲ್ಲ. ಇದ್ದದ್ದನ್ನು ಉಳಿಸಿಕೊಂಡೇ ಎಲ್ಲರೊಡನೆ ಗೋವಿಂದ ಅನ್ನುವುದೇ ತತ್ತ್ವ. ಸರ್ಕಾರದವರು ಮಾಡದೇ ಇದ್ದರೂ ನಾವಾದರೂ ಮಾಡಬೇಕಲ್ಲ. ನಮ್ಮ ಸರಕಾರದಲ್ಲಿ ಯುನೀಕೋಡನ್ನಾಗಲೀ ಇಸ್ಕೀಯನ್ನಾಗಲೀ ಪ್ರಾರಂಭ ಮಾಡುವವರು ಮಾಡುತ್ತಿರುವವರು, ಮಾಡಿದವರು ಇವರಿಗಾರಿಗೂ ಭಾಷಾಜ್ಞಾನ ಲಿಪಿಜ್ಞಾನ ಅಥವಾ ವ್ಯಾಕರಣಜ್ಞಾನ ಯಾವುದೂ ಅಷ್ಟಾಗಿ ಇರಲಿಲ್ಲ. ಎಲ್ಲೋ ಎಲ್ಲಿಂದಲೋ ಬಂದವರು, ಯಾವುದೋ ಐ.ಎ.ಎಸ್. ಆಫೀಸರುಗಳು, ಯಾರೋ ವಿಜ್ಞಾನಿಗಳು, ತಂತ್ರಜ್ಞಾನಿಗಳು ಬರಹ ಬರುತ್ತಿತ್ತು.ಅದಕ್ಕಿಂತ ಹೆಚ್ಚಿನದ್ದು ಅವರಿಗೆ ಇರಲಿಲ್ಲ ಎನ್ನುವುದೇ ಒಂದು ದೊಡ್ಡ ದುಃಖ. ಇದರಿಂದಾಗಿಯೇ ನಾವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ. ಪ್ರತಿಭಾಷೆಗೂ ಪ್ರತಿಲಿಪಿಗೂ ಯುನಿಕೋಡಂತ ಮಾಡುತ್ತಾ ಇದ್ದಾರೆ. ನಿಜವಾಗಿ ನೋಡಿದರೆ ಪ್ರತಿ ಲಿಪಿಗೂ ಒಂದು ಹೊಸ ಯುನೀಕೋಡಿನ ಅಗತ್ಯ ಇಲ್ಲ. ಒಂದೇ ಯುನೀಕೋಡ್. ದೇವನಾಗರಿ ಅಥವಾ ಅಂಥಾದ್ದಕ್ಕೆ ಮಾಡಿದರೆ ಅದನ್ನು ಎಲ್ಲಾ ಭಾಷೆಗಳಿಗೂ ಅನ್ವಯವಾಗು ಹಾಗೆ ಮಾಡಬಹುದು. ಕೀಲಿಮಣೆಯಾಗಲಿ, ಯುನಿಕೋಡಾಗಲಿ ಎರಡೂ ಧ್ವನಿಯಾಧಾರಿತ ಲಿಪಿಯಾಧಾರಿತ ಅಲ್ಲ ಎನ್ನುವುದನ್ನು ಈ ಪ್ರಭೃತಿಗಳು ಮರೆತೇ ಬಿಟ್ಟರು.

ಬಹುಶಃ ಭಾರತೀಯ ಬಾಷೆಗಳಲ್ಲೇ ಆಗಲಿ, ಇನ್ನು ಯಾವುದೇ ಭಾಷೆಗಳಲ್ಲೇ ಆಗಲಿ ಕೆಲಸ ಮಾಡಿದವರು ಕಂಪ್ಯೂಟರುಗಳಲ್ಲಿ ಭಾಷೆಯ ಸಾಹಿತ್ಯವನ್ನು ಸೇರಿಸಿಕೊಳ್ಳುವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದವರು ಸರಕಾರದವರೂ ಅಲ್ಲ ಸರಕಾರ ಕೃಪಾಪೋಷಿತರೂ ಅಲ್ಲ, ವಿ.ವಿಗಳಂತೂ ಅಲ್ಲ.. ಮೊದಲನೆಯದಾಗಿ ಹಾಗೆ ನೋಡಿದರೆ ಅದರಲ್ಲಿ ಕೆಲಸ ಮಾಡಿದವರು ಫೋಟೋಟೈಪ್ ಸೆಟ್ಟಿಂಗ್ ಯಂತ್ರಗಳನ್ನು ಮಾಡುತ್ತಿದ್ದವರು, ಮುದ್ರಣ ಮಾಧ್ಯಮದವರು ಅಥವಾ ಮುದ್ರಣ ಮಾಧ್ಯಮಕ್ಕೆ ಸಾಮಗ್ರಿ ಪೂರಕರು.ಅವರಿಗದು ಅಗತ್ಯವಿತ್ತು. ಈ ಮೊದಲು ಹೇಳಿದ ಹಾಗೇ ಕೆ.ಪಿ.ರಾವ್. ಕೀಬೋಡ್Fನ ಪ್ರಾರಂಭವಾದುದು ಮೊನೋಟೈಪ್ ನಯಂತ್ರಗಳಿಗಾಗಿ. ಇದರಲ್ಲಿ ಯಾವ ಸರಕಾರದ ಸಹಾಯವನ್ನೂ ನಾವು ಕೇಳಿಲ್ಲ. ಸರಕಾರಕ್ಕೂ ಹೋಗಲಿಲ್ಲ. ನಾವು ಮಾಡಿದ್ದು. “ಹಂ ಕರೇ ಸೋ ಕಾಯದಾ ‘ ನಾವೇ ದಾರಿ ತೋರಿಸಿದವರು. ಸರಕಾರಕ್ಕಿಂತ ಹೆಚ್ಚು ಯೋಚಿಸಿದೆವು. ನಮ್ಮ ಕರ್ನಾಟಕ ಸರಕಾರ ಇರಲಿ, ಭಾರತ ಸರಕಾರ ಇರಲಿ ಯಾರೂ ತಿಳಿದಿದ್ದವರನ್ನು ಹತ್ತಿರ ಸೇರಿಸುವುದಿಲ್ಲ. ಈಗಂತೂ ದೊಡ್ಡದೊಡ್ದಾಗಿ ಇಂಡಿಯನ್ ಇನ್ಟಿಟ್ಯೂಟ್ ಆಫ್ ಇನ್ಫೋಮೇಶನ್ ಟೆಕ್ನೊಲೊಜಿಯ ಎಲ್ಲಾ ಕಡೆಯಲ್ಲೂ ಪ್ರಾರಂಭ ಮಾಡುತ್ತಾ ಇದ್ದಾರೆ ಈಗ ಧಾರವಾಡದಲ್ಲಿ ಮಾಡಬೇಕೆಂತ ಹೊರಟಿದ್ದಾರಂತೆ. ಕೆಲವು ಪಂಡಿತರು ಅವರ ಕಾಲದಲ್ಲೇ ಇರುವವರು, ಅವರ ಕೂಪದಲ್ಲೇ ಇರುವವರು. ಕೆಲವು ಇಂಗ್ಲಿಷ್ ಕಂಪ್ಯೂಟರ್ ವಿಜ್ಞಾನಿಗಳು ಅವರ ಲೋಕದಲ್ಲೇ ಇರುವವರು. ಇವರು ಒಬ್ಬರಿಗೊಬ್ಬರು ಮಾತನಾಡುತ್ತಾ ಕಾಲ ಕಳೆಯುತ್ತಾರಲ್ಲದೆ ಯಾವ ಸರಕಾರಿ ಇನ್ಟಿಟ್ಯೂಶನಗ್ಗಳೂ ಕೂಡ ಭಾಷಾವಿಷಯದಲ್ಲಿ ಏನೂ ಮಹಾಕಾರ್ಯಗಳನ್ನು ಮಾಡಲಿಲ್ಲ. ಭಾಷಾಕಾರ್ಯ ಬೇರೆ. ಲಿಪಿಕಾರ್ಯ ಬೇರೆ. ಅದರ ಯಾಂತ್ರೀಕರಣ ಬೇರೆ. ಇದು ಇವರಿಗೆ ಯಾವುದೂ ಅರ್ಥ ಆಗುವ ಹಾಗೆ ಕಾಣುವುದಿಲ್ಲ. ಇದು ಆಗಬೇಕಾಗಿತ್ತು ಆದರೆ ಆಗಿಲ್ಲ.

ಕಳೆದ ಒಂದು ಒಂದೂವರೆ ವರ್ಷಗಳಿಂದ ನನ್ನ ತಲೆಯನ್ನು ಹುಳುಕಾಗಿಸಿದಂತ ಯಾವುದೋ ಒಂದು ವಿಷಯಕ್ಕೆ ಒಂದು ಎರಡು ಉತ್ತರಗಳನ್ನು ಕಂಡುಹುಡುಕಲಿಕ್ಕೆ ನಾನು ಪ್ರಯತ್ನ ಮಾಡಿದ್ದೇನೆ. ಎರಡುಮೂರು ತಿಂಗಳ ಹಿಂದೆ ದೇವಂ ಮತ್ತು ಅದಿತಿ ಎಂಬ ಎರಡು ಅಕ್ಷರವಿನ್ಯಾಸಗಳನ್ನು ರೂಪಿಸಿದೆವು. ಇವೆರಡೂ ದೇವನಾಗರಿಯ ವಿನ್ಯಾಸಗಳು. ಆದ್ರೆ ದೇವಂ ಅನ್ನುವುದರಲ್ಲಿ ಅಕ್ಷರ ರೂಪಗಳು ಕನ್ನಡ ಇದ್ದುವು, ಅದಿತಿ ಎನ್ನುವುದರಲ್ಲಿ ಇಂಗ್ಲಿಷಿನಲ್ಲಿದ್ದವು- ಕಿಟ್ಟೆಲ್ ಅವರು ನಮಗೆ ಕೊಟ್ಟಿದ್ದರೋ ಆ ರೂಪದಲ್ಲಿದ್ದವು. ಪಠ್ಯದ ಮೂಲರೂಪ ದೇವನಾಗರಿಯಲ್ಲಿದ್ದರೂ ಅದನ್ನು ಕನ್ನಡದಲ್ಲಿ ಬೇಕಾಗಿದ್ದರೆ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ಬೇಕಾಗಿದ್ದರೆ ಇಂಗ್ಲಿಷಿನಲ್ಲಿ ಓದಿಕೊಳ್ಳುವ ಹಾಗೆ ಈ ಲಿಪಿರೂಪಗಳ ಸೃಷ್ಟಿಯಾಗಿತ್ತು.

ಇದು ಸಮನ್ವಯಕ್ಕೆ ಒಂದು ಸಾಧನ. ಆದರೆ ಇದರ ವ್ಯಾಪಕ ಉಪಯೋಗಕ್ಕೆ ತೊಂದರೆಯಾಗಿರುವುದು ಎಲ್ಲಕ್ಕಿಂತ ಹೆಚ್ಚು ಇದು ನಮ್ಮ ಭಾರತಸರಕಾರದವರು, ಎರಡನೆಯವರು ವಿಂಡೋಸ್ ಅನ್ನೋದನ್ನು ಸೃಷ್ಟಿಮಾಡಿದಂತಹ ಮೈಕ್ರೋಸಾಪ್ಟ್ ನವರು. ಯುನಿಕ್ಸ್ ಅಥವಾ ಲೈನೆಕ್ಸ್ ನಲ್ಲಿ ಇನ್ನೊಂದು ಅಕ್ಷರ ರೂಪದಲ್ಲಿ ಓದುವುದಕ್ಕೆ ಏನೇನೂ ಸಮಸ್ಯೆಗಳು ಇಲ್ಲ. . ವಿಂಡೋಸ್ ನ ಒಳಗೆ ಒಂದು ಯುನೀಸ್ಕೈಬ್ ಎಂಬ ಒಂದು ಕೆಟ್ಟ ಪ್ರೋಗ್ರಾಮ್ ಇದೆ. ಇದು ಪ್ರತಿ ಭಾಷೆಗೂ ಅಥವಾ ಪ್ರತಿ ಲಿಪಿಗೂ ವಿಶೇಷವಾಗಿರುತ್ತದೆ.. ಎಲ್ಲಾ ಭರತೀಯ ಲಿಪಿಗಳಿಗೂ ಒಂದೇ ಯುನಿಕೋಡು ಮಾಡುವ ಸಾಧ್ಯತೆ ಇತ್ತು. ಕೆಲವು ಹೊಸ ಅಕ್ಷರಗಳು, ಹೆಚ್ಚು ಅಕ್ಷರಗಳು ಹೆಚ್ಚು ಸ್ವರಗಳು ಹೆಚ್ಚು ವ್ಯಂಜನಗಳು ಬೇಕಾಗಬಹುದು. ಕೆಲವು ತಮಿಳು ಫಾಂಟ್ ಗಳಲ್ಲಿ (ಪಂಚಾಂಗಂ ತಮಿಳು) ನಾಗರಿಯ ಎಲ್ಲಾ ಅಕ್ಷರಗಳು ಇವೆ. ಸಾಮಾನ್ಯ ತಮಿಳಿಗೆ ಎಷ್ಟು ಸಾಕೋ ಅಷ್ಟನ್ನು ಮಾತ್ರ ಉಪಯೋಗಿಸಿದರಾಯಿತು. ಬೇಕಾದಾಗ ಅಗತ್ಯವಿದ್ದಾಗ ಎಲ್ಲಾ ಅಕ್ಷರಗಳೂ ಅಲ್ಲಿಯೇ ಲಭ್ಯವಿರುತ್ತವೆ.

ಎಲ್ಲಾ ಭಾರತೀಯ ಭಾಷೆಗಳಿಗೆ ಸಮಾನ ಯುನೀಕೋಡ್ ಸಾಧ್ಯ ಇದೆ. ಇದು ಆಗಬೇಕಾಗಿತ್ತು ಆದರೆ ಆಗಲಿಲ್ಲ..ಈಗ ಏನು ಮಾಡಲೂ ಸಾಧ್ಯವಿಲ್ಲ ಕನ್ನಡಕ್ಕೆ ಈಗಿದ್ದಂತೆ ಅದರದೇ ಯುನೀಕೋಡ್ ಬೇಕೇ, ಬದಲಿಸಬೇಕೇ, ಮುಂದೆ ತುಳು, ಕೊಡವ, ಕೊಂಕಣಿ, ಅರೆಭಾಷೆಗಳಿಗೂ ಹೊಸಾ ಹೊಸಾ ಯುನೀಕೋಡ್ ಬೇಕೇ. ಕಳೆದ ಒಂದು ಒಂದೂವರೆ ವರ್ಷಗಳಿಂದ ನನ್ನ ತಲೆಯನ್ನು ಹುಳುಕಾಗಿಸಿದಂತ ಯಾವುದೋ ಒಂದು ವಿಷಯಕ್ಕೆ ಒಂದು ಎರಡು ಉತ್ತರಗಳನ್ನು ಕಂಡುಹುಡುಕಲಿಕ್ಕೆ ನಾನು ಪ್ರಯತ್ನ ಮಾಡಿದ್ದೇನೆ. ನಿಮೆಗೆಲ್ಲ ಗೊತ್ತಿರಲೂಬಹುದು ಗೊತ್ತಿಲ್ಲದೇ ಇರಬಹುದು. ಒಂದು ಎರಡುಮೂರು ತಿಂಗಳ ಹಿಂದೆ ದೇವಂ ಮತ್ತು ಅದಿತಿ ಅಂತ ಎರಡು ಅಕ್ಷರವಿನ್ಯಾಸಗಳನ್ನು ನಾವು ರೂಪಿಸಿದೆವು. ಇವೆರಡೂ ದೇವನಾಗರಿಯ ಅಕ್ಷರವಿನ್ಯಾಸಗಳು. ಆದರೆ ದೇವಂ ಅನ್ನುವುದರ ಅಕ್ಷರ ರೂಪಗಳು ಕನ್ನಡ, ಅದಿತಿ ಎನ್ನುವುದರ ಅಕ್ಷರರೂಪಗಳು ಇಂಗ್ಲಿಷ್ನಲ್ಲಿದ್ದವು. ಅಥವಾ ಕಿಟ್ಟೆಲ್ ಅವರು ಕೊಟ್ಟಿದ್ದರೋ ಆ ಇಂಗ್ಲಿಷ್ ರೂಪದಲ್ಲಿದ್ದವು. ಮೂಲ ಸಾಹಿತ್ಯ ದೇವನಾಗರಿಯಲ್ಲಿದ್ದರೂ ಅದನ್ನು ಕನ್ನಡದಲ್ಲಿ ಬೇಕಾಗಿದ್ದರೆ ಕನ್ನಡದಲ್ಲಿ , ಇಂಗ್ಲಿಷ್ನಲ್ಲಿ ಬೇಕಾಗಿದ್ದರೆ ಇಂಗ್ಲಿಷ್ನಲ್ಲಿ ಓದಿಕೊಳ್ಳಲು ಸುಲಭ ಸಾಧ್ಯವಾಗುವ ಹಾಗೆ ಈ ಲಿಪಿರೂಪಗಳ ಸೃಷ್ಟಿಯಾಗಿತ್ತು.

ಇದಕ್ಕೆ ಒಂದು ವಿಶೇಷ ಉದಾಹರಣೆ – ಕೊಂಕಣಿ ವಿಕೀಪೀಡಿಯಾ. ವಿಕೀಪೀಡಿಯಾ ತಮಗೆ ಗೊತ್ತಿರಬಹುದುದು ವಿಕಿಪೀಡಿಯಾ ಅನ್ನುವುದು ಒಂದು ಮಹಾ ಎನ್ಸೈಕ್ಲೋಪೀಡಿಯಾ -ವಿಶ್ವಕೋಶ ಕಂಪ್ಯೂಟರಗಳಲ್ಲಿದ್ದು ಇರುವಂತಹದು. ವಿಕಿಪೀಡಿಯಾ ಇಂಗ್ಲಿಷಿನಲ್ಲಿ ಪ್ರಾರಂಭವಾದರೂ ಜರ್ಮನ್ ಮತ್ತು ಬೇರೆ ಭಾಷೆಗಳ ಅವತರಣಿಕೆಗಳು ಇವೆ. ಈಗ ವಿಶ್ವದ ಎಲ್ಲಾ ಭಾಷೆಗಳಲ್ಲೂ ಇದೆ. ಕನ್ನಡ ತುಳುವಿಗೂ ಇದು ಬರುತ್ತಾ ಇದೆ. ಇದು ಕೊಂಕಣಿಯಲ್ಲಿ ಕೆಲವು ದಿನಗಳಿಂದ ಇದೆ. ಕೊಂಕಣಿ ಒಂದು ರೀತಿಯಲ್ಲಿ ಲಿಪಿರಹಿತ ಭಾಷೆ ಅಥವಾ ವಿವಿಧ ಲಿಪಿಗಳಲ್ಲಿ ಹೇಳಬಹುದಾದ ಭಾಷೆ. ಕೊಂಕಣಿ ಭಾಷೆಯಲ್ಲಿ ಇರುವುದನ್ನೇ ಗೋವಾದ ಸುತ್ತಮುತ್ತ ದೇವನಾಗರಿಯಲ್ಲಿ ಬರೆಯುತ್ತಾರೆ. ನಮ್ಮಲ್ಲಿ ಕನ್ನಡದಲ್ಲಿ ಬರೆಯುತ್ತಾರೆ. ದಕ್ಷಿಣದಲ್ಲಿ ಮಲೆಯಾಳಂನಲ್ಲಿ ಬರೆಯುತ್ತಾರೆ. ಭಾಷೆ ಕೊಂಕಣಿ. ಲಿಪಿ ದೇವನಾಗರಿ, ಅಥವಾ ಕನ್ನಡ ಅಥವಾ ಮಲಯಾಳ. ಎರಡು ರೀತಿಯ ಸಮಸ್ಯೆಗಳು ಇದರಲ್ಲಿದ್ದಾವೆ. ದೇವನಾಗರಿಯಲ್ಲಿ ಬರೆದದ್ದನ್ನು ಕನ್ನಡದವರಿಗೆ ಓದಲಿಕ್ಕೆ ಬರುವುದಿಲ್ಲ. ಕನ್ನಡದಲ್ಲಿ ಬರೆದುದನ್ನು ದೇವನಾಗರಿಯವರಿಗೆ ಓದಲು ಬರುವುದಿಲ್ಲ. ಮಲೆಯಾಳಿಗೆ ಎರಡನ್ನೂ ಓದಲಿಕ್ಕೆ ಬರುವುದಿಲ್ಲ. ಒಂದು ರೀತಿಯಲ್ಲಿ ಇದು ದೊಡ್ಡ ಸಮಸ್ಯೆ ಅಲ್ಲ. ಇತ್ತೀಚೆಗೆ ವರ್ಷದ ಹಿಂದೆ ತುಳು ಪ್ರೇಮಿಗಳು, ಉತ್ಸಾಹಿಗಳು ಇಡೀ ತುಳುಲೆಕ್ಸಿಕನ್ನನ್ನು ಕಂಪ್ಯೂಟರಿನಲ್ಲಿ ಹಾಕಿದರು. ತುಳು ಡಿಕ್ಟನರಿ ತುಳು ಲೆಕ್ಸಿಕನ್ ಕಂಪ್ಯೂಟರಗಳಲ್ಲಿ ಹಾಕಿದಾಗ ಇದೇ ಸಮಸ್ಯೆ ಬಂತು. ತುಳು ಭಾಷೆ ಕನ್ನಡ ಲಿಪಿಯಲ್ಲಿ ತುಳುಲೆಕ್ಸಿಕನ್ ತಯಾರಾಯಿತು. ಕನ್ನಡ ಲಿಪಿ ಬಾರದವರು ಹಾಗೂ ತುಳುಭಾಷೆ ಬರುವವರಿಗೆ ಇದು ಉಪಯೋಗವಿಲ್ಲವಾಯಿತು. ಇಂತಹ ಗ್ರಂಥದ ಅಗತ್ಯ ಎಲ್ಲಕ್ಕಿಂತ ಹೆಚ್ಚು ಬೇಕಾಗಿರುವುದು ಹೊರನಾಡ, ಹೊರದೇಶದ ಕನ್ನಡ ಲಿಪಿಯರಿಯದ ತುಳುಭಾಷೆ ಬರುವವರಿಗೆ. ಕನ್ನಡ ಲಿಪಿ ಬರುವವರಿಗೆ ಇಲ್ಲಿನವರಿಗೆ ತುಳುನಿಘಂಟಿನ ಅಗತ್ಯ ಹೆಚ್ಚಿಲ್ಲ. ಆದುದರಿಂದ ಇಷ್ಟು ಪ್ರಯತ್ನಪಟ್ಟು ಇಷ್ಟು ಕಷ್ಟಪಟ್ಟು ಮಾಡಿದ ಕೆಲಸ ಉಪಯೋಗವಿಲ್ಲದೆ ಹೋಯಿತು. ಈ ಸಮಸ್ಯೆಗೊಂದು ಉತ್ತರವನ್ನು ನಾನು ಕಂಡುಹುಡುಕಿಕೊಂಡಿದ್ದೇನೆಂದು ಹೇಳಬಹುದು. ಉದಾ: ಬೊಂಬಾಯಿಯಲ್ಲಿರುವ ತುಳು ಭಾಷಿಕರು ಇಂಗ್ಲಿಷಿನಲ್ಲೋ ನಾಗರಿಯಲ್ಲೋ ಶಬ್ದಗಳನ್ನು ಹುಡುಕಿಕೊಳ್ಳಲಿಕ್ಕೆ ಸಾಧ್ಯ. ಯುನಿಕೋಡಿನ ಮೂಲ ಉದ್ದೇಶ ಇದಾಗಬೇಕಾಗಿತ್ತು. . ಯುನಿಕೋಡ್ ಎಲ್ಲಾ ಭಾರತೀಯ ಭಾಷೆಗಳಿಗೂ ಎಲ್ಲಾ ಲಿಪಿಗಳ ಹಂಗಿಲ್ಲದೆ ಸಮಾನ ಶಾಸ್ತ್ರೀಯ ಸ್ವರಾಧಾರಿತ ಸಂಚಯನ ಶಿಸ್ತಾಗಿ ಬರಬಹುದಾಗಿತ್ತು. ನಿಮಗೆ ಬೇಕಾದ ಲಿಪಿಯಲ್ಲಿ ಬರೆದುಕೊಳ್ಳುವುದು ಬೇಕಾದ ಲಿಪಿಯಲ್ಲಿ ಓದಿಕೊಳ್ಳುವುದು ಸಾಧ್ಯವಿತ್ತು. ನಮ್ಮ ಕನಸಿನ ಯುನಿಕೋಡ್ ಇದ್ದದ್ದು ಹಾಗೆ. ಆದರೆ ಈ ವ್ಯಾಪಾರಿಗಳು, ಸರಕಾರಗಳು, ಪಂಡಿತರು ಎಲ್ಲ ಸೇರಿಕೊಂಡು ಇದನ್ನು ನಮ್ಮಿಂದ ದೂರಮಾಡಿದರು ಅಂತ ಇವತ್ತಿಗೂ ದುಃಖ ಇದೆ. ಈಗಂತೂ ತುಳು, ಕೊಂಕಣಿ, ಅರೆಭಾಷೆ, ಕೊಡವ, ನಾಳೆ ನನ್ನ ಮನೆಮಾತು ಮತ್ತು ನಿಮ್ಮಮನೆಮಾತಿಗೂ ಹೊಸ ಯುನಿಕೋಡ್ ಬೇಕೆಂಬ ಸ್ವಪ್ರತಿಷ್ಟೆಯ ಸಮಸ್ಯೆಯಾಗಿದೆ. .

ತುಳು ಭಾಷೆ ಅಥವಾ ತುಳು ಲಿಪಿಗೆ ಇನ್ನೊಂದು ಯುನಿಕೋಡ್ನ ಅಗತ್ಯವಿಲ್ಲ. ಮಲಯಾಳ ಆರ್ಥೋಗ್ರಫಿ ಮತ್ತು ಮಲಯಾಳದ ಅಕ್ಷರ ಸಮೃದ್ಧಿ ತುಳುವಿಗೆ ಬೇಕಾದಷ್ಟು ಸಾಕು. ಬರಿಯ ಅಕ್ಷರಗಳ ರೂಪ ಏನೋ ಬದಲಾಯಿತು ‘ಣ’ ಹಾಗೆ ಬರೆಯುವ ಬದಲಿಗೆ ಹೀಗೆ ಬರೆದರು. ‘ಕ’ ಹೀಗೆ ಬರೆಯುವ ಬದಲಿಗೆ ಹಾಗೆ ಬರೆದರು ಎಂಬ ಕಾರಣಕ್ಕಾಗಿ ಒಂದು ಹೊಸ ಯುನೀಕೋಡಿನ ಅಗತ್ಯವೇ ಇಲ್ಲ. ನಾನು ಮೊದಲೇ ಹೇಳುತ್ತಿದ್ದ ಹಾಗೆ, ಒಂದು ಲಿಪಿ ಇನ್ನೊಂದು ಲಿಪಿಯಿಂದ ಬೇರೆಯಾಗಿರುವುದು ಒಂದು ಅಕ್ಷರರೂಪಗಳಿಂದ, ಎರಡು, ಅಕ್ಷರಬಾಹುಳ್ಯದಿಂದ, ಮೂರು, ಅಕ್ಷರಸಂಯೋಜನೆಯ ನಿಯಮಗಳಿಂದ. ಇದೆಲ್ಲ ಸಮಾನವಾಗಿರುವುದರಿಂದ ಹಳೆಯ ಮಲಯಾಳಂ ಮತ್ತೆ ಹಳೆತುಳುವಿಗೆ ಒಂದು ಹೊಸ ಲಿಪಿಯ ಅಗತ್ಯವೂ ಇಲ್ಲ. ಒಂದು ಹೊಸ ಯುನಿಕೋಡಿನ ಅಗತ್ಯವೂ ಇಲ್ಲ.

ಒಂದು ಪ್ರಶ್ನೆ. ತುಳುಭಾಷೆಯಲ್ಲಿ ಕನ್ನಡಲಿಪಿಯಲ್ಲಿ ಬರೆದರೆ ಅದು ಕನ್ನಡ ಸಾಹಿತ್ಯವೇ ತುಳುಸಾಹಿತ್ಯವೇ?. ಮಲೆಯಾಳಲಿಪಿಯಲ್ಲಿ ಕೊಂಕಣಿಭಾಷೆಯದೊಂದು ಕಥೆ ಬರೆದರೆ ಅದು ಕೊಂಕಣಿ ಸಾಹಿತ್ಯವೇ ಮಲಯಾಳಿಸಾಹಿತ್ಯವೇ? ಕೇಂದ್ರಸಾಹಿತ್ಯ ಅಕಾಡೆಮಿಯ ದೃಷ್ಟಿಯಲ್ಲಿ ಎಂಟನೇ ಪರಿಚ್ಛೇದದಲ್ಲಿ ಯಾವ ಭಾಷೆ ಬರುವುದಿಲ್ಲವೋ ಅದರಲ್ಲಿ ಬರೆದ ಸಾಹಿತ್ಯ ಸಾಹಿತ್ಯವೇ ಅಲ್ಲ. ಆದುದರಿಂದ ನಮ್ಮ ತುಳು ಅಥವಾ ಇನ್ನು ಕೆಲವೆಲ್ಲ ಕೊಡವ ಅಥವಾ ಬ್ಯಾರಿಭಾಷೆಯ ಸಾಹಿತ್ಯ ಸಾಹಿತ್ಯ ಆಗಿಯೇ ಉಳಿಯುವುದಿಲ್ಲ.ತುಳುಅಕಾಡೆಮಿ, ಕೊಂಕಣಿ ಅಕಾಡೆಮಿ, ಬ್ಯಾರಿ ಅಕಾಡೆಮಿ ಹಾಗಾದರೆ ಯಾವ ಲಿಪಿಯಲ್ಲಿ ಸಾಹಿತ್ಯ ಸೃಷ್ಟಿಸಬೇಕು.

ಭಾಷಾಪ್ರೇಮದ ಹಾಗೆಯೇ ಕೆಲವರಿಗೆ ಲಿಪಿಪ್ರೇಮವೂ ಬರುತ್ತದೆ. ಬೋರ್ಡುಗಳಲ್ಲಿ ಪೀಟ್ಜಾ ಹಟ್ ಕನ್ನಡದಲ್ಲಿ ಇಲ್ಲವಾದರೆ ಅದನ್ನು ಓದಬಾರದಂತೆ. ನನಗೆ ತಿಳಿದಂತೆ ಎಲ್ಲಕ್ಕಿಂತ ಮಿಗಿಲಾದ ಲಿಪಿಯೂ ಇಲ್ಲ, ಭಾಷೆಯೂ ಇಲ್ಲ. ತಾಯಿ ತಂದೆಗಳಿಲ್ಲದೆ ಮಗ ಹುಟ್ಟುವುದಿಲ್ಲ ಆದರೆ ಒಬ್ಬ ತಂದೆ ಮತ್ತು ಒಬ್ಬ ತಾಯಿ ಮಾತ್ರ ಲೋಕ ಮಾನ್ಯರು, ಬಾಕಿಯವರಲ್ಲ ಎನ್ನುವುದು ಮೂರ್ಖತನ.

ಇನ್ನು ಭಾಷಾಪ್ರೇಮ. ಭಾಷೆಯಲ್ಲಿ ಇಷ್ಟು ಅಕ್ಷರಗಳಿರಬೇಕೇ. ಮಹಾಪ್ರಾಣಗಳು ಬೇಕೇ ಬೇಡವೇ ಅಂತ ದೊಡ್ಡ ಚರ್ಚೆಗಳು ನಡೆಯುತ್ತಾ ಇವೆ. ಭಾಷೆಗೆ ಹಲವು ಆಯಾಮಗಳಿವೆ.ಸಂತೆಯ ವ್ಯವಹಾರಭಾಷೆ, ಶಾಲೆಯ ಕಲಿಕೆಯ ಭಾಷೆ, ಸಾಮಾನ್ಯ ಮಾತಿನ ಭಾಷೆ, ಸಾಹಿತ್ಯ ಭಾಷೆ, ಪತ್ರಿಕೆಯ ಭಾಷೆ, ಶಾಸ್ತ್ರ ಭಾಷೆ, ವಿಜ್ಞಾನದ ಭಾಷೆ, ಆರಾಧನೆಯ ಭಾಷೆ, ಗುಪ್ತ ಭಾಷೆ, ವಿವಿಧ ಕಾರ್ಯ ಕ್ಷೇತ್ರಗಳ ಭಾಷೆ ಇತ್ಯಾದಿ. ಒಂದು ಸಮಾನ ಲಿಪಿ ಇವುಗಳಿಗೆಲ್ಲ ಹೆಚ್ಚಿನ ಸರತಿ ಸಾಕಾದರೂ, ಶಬ್ದಗಳ ಅಗತ್ಯ ವಿವಿಧವಾಗಿರುತ್ತದೆ. ಹೆಚ್ಚಾಗಿ ಸಮಾನ ಪದಗಳನ್ನು ಹುಡುಕಿ ಪ್ರಯಾಸಪೂರ್ವಕ ಸೇರಿಸುವುದಕ್ಕಿಂತ ಇದ್ದಕ್ಕಿದ್ದ ಹಾಗೆ ಪರ ಭಾಷಾ ಶಬ್ದಗಳನ್ನು ಉಪಯೋಗಿಸುವುದೂ ಸುಲಭ ಮತ್ತು ಸೂಕ್ತ. ಅಪಾರ್ಥಗಳೊಡನೆ ಅನರ್ಥಗಳನ್ನು ಸೃಷ್ಟಿಸುವುದಕ್ಕಿಂತ ಉಪಯೋಗದಲ್ಲಿರುವ ಶಬ್ದಗಲೇ ಲೇಸು. ಕೆಲವು ವಿದ್ವಾಂಸರು ಕನ್ನಡ ವ್ಯವಹಾರಭಾಷೆಗಳಲ್ಲಿ ಇಷ್ಟೆಲ್ಲ ಅಕ್ಷರಗಳ ಅಗತ್ಯವಿಲ್ಲ; ಅದರಿಂದ ಕಲಿಕೆ ಸುಲಭವಾಗುವುದೆಂದು ಹೇಳುತ್ತಾರೆ. ನಾವು ಮಾತನಾಡುವ ಕನ್ನಡದಲ್ಲಿ ಎಷ್ಟು ಶುದ್ಧ ಕನ್ನಡ?. ಸರಿಯಾಗಿ ಲೆಕ್ಕ ಹಾಕಿದರೆ ಅರ್ಧಕ್ಕರ್ಧ ಸಂಸ್ಕೃತಶಬ್ದಗಳು, ದ್ರಾವಿಡಶಬ್ದಗಳು ಬಹಳ ಕಡಮೆ.ಮತ್ತೆ ಇಂಗ್ಲಿಷ್ ಶಬ್ದಗಳು ಬಾಕಿ ಎಲ್ಲ ಶಬ್ದಗಳಿಗಿಂತ ಹೆಚ್ಚು. ಇದನ್ನು ನೀವು ಸುಧಾರಿತ ಲಿಪಿಗಳಲ್ಲಿ ಬರೆಯಲಿಕ್ಕೆ ಸಾಧ್ಯ ಇದೆಯೋ ಅಪಾರ್ಥಗಳಾಗದೆ ಬರೆಯಲು ಸಾಧ್ಯ ಇದೆಯೋ ಎನ್ನುವುದು ಒಂದು ಸಮಸ್ಯೆ. ಯಾವ ಭಾಷೆ ಯಾವ ಲಿಪಿಯಲ್ಲೇ ಇದ್ದರೂ ಕೂಡ ಅದು ಬೆಳೆಯುತ್ತಾ ಹೋಗಬೇಕಲ್ಲದೆ ಅದು ಇಳಿಯುತ್ತಾ ಹೋಗಬಾರದು ಅದು ಕಳೆಯುತ್ತಾ ಹೋಗಬಾರದು. ಲಿಪಿಯನ್ನು ಕತ್ತರಿಸುವುದರೀಂದ ಬೇರೆ ಭಾಷೆಗಳ ಶಬ್ದಗಳನ್ನು ಅದರಂತೆ ಉಚ್ಚರಿಸುವ ಸಾಮಥ್ಯವನ್ನೇ ಆ ಲಿಪಿ ಕಳೆದುಕೊಳ್ಳುತ್ತದೆ.

ಆದುದರಿಂದ ನನ್ನ ವಿನಂತಿ ಕನ್ಡಡ ಲಿಪಿಯಲ್ಲಿ ಇನ್ನೂ ಕಳೆಯಲು ಹೋಗಬೇಡಿ. ಬೇಕಾಗಿದ್ದರೆ ಇನ್ನೊಂದಷ್ಟು ಸ್ವರಗಳನ್ನು ಸೇರಿಸಿಕೊಳ್ಳಿ. ಕನ್ನಡ ಲಿಪಿ ಎನ್ನೋದು ಇವತ್ತಿನ ಮಟ್ಟಿಗೆ ಬರೇ ಕನ್ನಡದವರ ಸೊತ್ತಲ್ಲ. ನಾವು ತುಳುಭಾಷಿಕರಾಗಲಿ ಅಥವಾ ಬ್ಯಾರಿ ಭಾಷಿಕರಾಗಲಿ ಎಲ್ಲರೂ ಕೊಡವ ಕೊಂಕಣಿ ಹವ್ಯಕ ಯಾವುದನ್ನೇ ಬರೆಯಬೇಕಾಗಿದ್ದರೂ ಈ ಪ್ರದೇಶದಲ್ಲಿ ನಾವು ಕನ್ನಡದ ಲಿಪಿಯನ್ನೇ ಉಪಯೋಗ ಮಾಡುತ್ತೇವೆ. ಕನ್ನಡಲಿಪಿ ಇದ್ದ ಹಾಗೆಯೇ ಸಾಕೇ ಇದನ್ನು ಬರೆಯೋದಕ್ಕೆ. ತುಳುನಿಘಂಟು ಮಾಡಿದಾಗ. ಬತ್ತೆ ಮತ್ತು ಬತ್ತೆ* ಎನ್ನುವ ಎರಡು ಎಕಾರಗಳು, ಒಕಾರಗಳ ವ್ಯತ್ಯಾಸಗಳು ಉ* ಕಾರದ ಅಗತ್ಯ ಇದನ್ನೆಲ್ಲ ಕನ್ನಡ ಲಿಪಿಯಲ್ಲಿ ಸರಿಯಾಗಿ ತೋರಿಸುವ ಪ್ರಯತ್ನ ಮಾಡಬೇಕಾಅಯಿತು. ಬ್ರಿಗ್ಗ್ಸ್ , ಕಿಟ್ಟೆಲ್ ರಂತಹ ಪೂರ್ವಾಚಾರ್ಯರು ಇಂಗ್ಲಿಷ್ ನಲ್ಲಿ ಅದಕ್ಕೊಂದು ಅನುಕೂಲವನ್ನು ಮಾಡಿದ್ದರು. ಕನ್ನಡದಲ್ಲಿ ಅದನ್ನು ಮಾಡಬೇಕಾದರೆ ಲಿಪಿ ಬದಲಾವಣೆ ಮಾಡಿಕೊಳ್ಳಬೇಕಾಯಿತು. ಅದು ಲಿಪಿವೃದ್ಧಿ. ಲಿಪಿ ಕಡಿತ ಅಲ್ಲ. ತುಳುವನ್ನು ಬರೆಯಬೇಕಾಗಿದ್ದರೆ ಹೇಗೋ ಹಾಗೆಯೇ ಬ್ಯಾರಿ ಭಾಷೆಯನ್ನು ಕೊಡವವನ್ನು. ಕೊಂಕಣಿಯನ್ನು ಬರೆಯಬೇಕಾಗಿದ್ದರೆ ನಮಗೆ ಇನ್ನಷ್ಟು ಲಿಪಿ ಸಂಜ್ಞೆಗಳು ಬೇಕಾಗುತ್ತವೆ.

ಇದಕ್ಕೆಲ್ಲ ನಾವು ಅನುಕೂಲಗಳನ್ನು ಇಟ್ಟುಕೊಳ್ಳೋಣ ಎನ್ನುವುದು ನಮ್ಮ ಗುರಿಯಾಗಬೇಕು.ಈಗ ದೇವನಾಗರಿಯಲ್ಲಿ ಇರುವಂತಹದ್ದು ಯೂನಿಕೋಡ್ ವರ್ಷನ್ ೬.೩. ಇದರಲ್ಲಿ ಹೆಚ್ಚು ಕಡಿಮೆ ನಮ್ಮ ಪ್ರಾಂತದ ಎಲ್ಲಾ ಭಾಷೆಗಳಿಗೂ ಬೇಕಾದ ಎಲ್ಲಾ ಸ್ವರಗಳನ್ನು ಸೇರಿಸಿಕೊಳ್ಳುವ ಅನುಕೂಲತೆಗಳಿವೆ. ಸರಕಾರದವರು ಎಚ್ಚೆತ್ತುಕೊಳ್ಳದಿದ್ದರೆ ಪ್ರಯತ್ನಮಾಡದಿದ್ದರೆ ಲಿಪಿಯ ಮೋಹ ನಮಗೆ ಇಲ್ಲದಿದ್ದರೆ ನಾವು ದೇವನಾಗರಿ ಲಿಪಿಯಲ್ಲಿ ನಮ್ಮ ಪ್ರಾಂತದ ಎಲ್ಲಾ ಭಾಷೆಗಳಿನ್ನೂ ಬರೆದುಕೊಳ್ಳಬಹುದು. ಇದು ಕನ್ನಡದ ಉಪಕಾರವೇ ಅಪಕಾರವೇ ಅಪಚಾರವೇ ಉಪಚಾರವೇ. ಇದಕ್ಕೆಲ್ಲ ಉತ್ತರಗಳನ್ನು ಕಂಡುಹುಡುಕುವವರು ಯಾರು, ಮೊದಲೇ ಗೊತ್ತಿದ್ದಹಾಗೆ ಸರಕಾರದವರು ಇದರಲ್ಲಿ ಮಾಡಿದ್ದು ಕಡಿಮೆ, ಮಾಡಬೇಕಾದುದು ಬಹಳ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲೋ ಇನ್ನೆಲ್ಲೋ ಆ ಸಿಬ್ಬಂದಿ ಬರುತ್ತಾರೆ ಹೋಗುತ್ತಾರೆ. ಬಂದವರಿಗೆ ಮೊದಲಿನವರು ಏನುಮಾಡಿದರು ಗೊತ್ತಿಲ್ಲ. ಕಡತಗಳನ್ನು ಹೋಗಿ ಓದುವವರಿಲ್ಲ ಇರುವುದು ಒಂದಾದರೆ ಇರದೆ ಇರುವುದು ಹತ್ತು. ಆಮೇಲೆ ಸ್ವಜನೋಪಚಾರಗಳು ನಮ್ಮ ಅಜ್ಞಾನದಿಂದ ಈ ಭಾಷಾಜ್ಞಾನ ನಮ್ಮಲ್ಲಿ ರುವಂತದ್ದನ್ನು ನಾವು ಕಳೆದುಕೊಳ್ಲುತ್ತಾ ಇದ್ದೇವಲ್ಲ ಇದೇ ನನ್ನ ದುಃಖ.

ಹೀಗೆ ಕಂಪ್ಯೂಟರುಗಳ ಭ್ರಮಾಲೋಕದಲ್ಲಿ ಅಂದರೆ ಅವುಗಳ ವರ್ಚುವಲ್ ಲೋಕದಲ್ಲಿ ಕನ್ನಡ ಅಥವಾ ಯಾವುದೇ ಭಾರತೀಯ ಭಾಷೆಗಳನ್ನು ಹೇಗೆ ಸೇರಿಸಬಹುದು ಹೇಗೆ ಉಳಿಸಿಕೊಳ್ಳಬಹುದು ಎನ್ನುವ ವಿಷಯದಲ್ಲಿ ಸ್ವಲ್ಪ ಆಗಲೇ ಹೇಳಿದೆ. ಭಾಷೆ ಮತ್ತು. ಬರಹ ಎರಡೂ ಒಂದರಿಂದ ಒಂದು ಬೇರೆಯಾದ ಪ್ರಕ್ರಿಯೆಗಳು. ಭಾಷೆಯಲ್ಲಿ ನಾವು ಸಂವಹನ ಮಾಡಬೇಕಾದ ಯೋಚನೆಗಳನ್ನೇ ಬರಹದಲ್ಲೂ ಕಾಣಿಸಬಹುದು. ಯಾವುದೇ ಭಾರತೀಯ ಭಾಷೆಯೇ ಇರಲಿ, ಅದರ ಧ್ವನಿರೂಪ ಒಂದಾದರೆ ಅದರ ಚಿತ್ರರೂಪ ಅಥವಾ ದೃಶ್ಯರೂಪ ಲಿಪಿಯ ಕಾರಣದಿಂದಾಗಿ ಬೇರೆ ಇರುತ್ತದೆ. ನಾವು ಹೇಳಿದ್ದನ್ನೆ ನಮಗೆ ಬೇಕಾದ ಲಿಪಿಗಳಲ್ಲಿ ನಾವು ಬರೆದುಕೊಳ್ಳಲಿಕ್ಕೆ ಸಾಧ್ಯವಿದೆ. ನಮ್ಮಲ್ಲಿ ಸಾಧಾರಣವಾಗಿ ಇರುವ ಲಿಪಿಗಳಲ್ಲಿ ಅಥವಾ ಸುಮ್ಮನೆ ಕೆಲವು ಸಂಜ್ಞೆಗಳನ್ನು ನಾವು ಮಾಡಿಕೊಂಡು ಅದಕ್ಕೆ ಇಂತ ಧ್ವನಿರೂಪಾಂತ ನಾವು ಮೊದಲೇ ನಿಶ್ಚಯ ಮಾಡಿಕೊಳ್ಳಲಿಕ್ಕೆ ಕೂಡಾ ಬರುತ್ತದೆ. ಒಂದು ರೀತಿಯಲ್ಲಿ ಯಾವ ಲಿಪಿಕ್ರಮ ಅಥವಾ ಲಿಪಿ ಸಿಸ್ಟಮ್ ನಾವು ಉಪಯೋಗ ಮಾಡದಿದ್ದರೂ ಕೂಡ ಬಹುಶಃ ಅದಕ್ಕೆ ಅದರದ್ದೇ ನಿಯಮಗಳಿಂದ ಅದನ್ನು ಸೇರಿಕೊಳ್ಳಬಹುದು ಎಂದು ಮೊದಲೇ ಹೇಳಿದ್ದೇನೆ. ಹಾಗೆಯೇ ಪ್ರತಿಯೊಂದು ಭಾಷೆಗೂ ಅದರದ್ದೇ ನಿಯಮಗಳಿರುತ್ತವೆ. ಅಕ್ಷರರೂಪಗಳಿರುತ್ತಾವೆಂತ ಕೂಡ ಹೇಳಿದ್ದೇನೆ.

ಕಂಪ್ಯೂಟರುಗಳು ಬಂದಮೇಲೆ, ಅದು ಕೂಡ ಈ ಹೊಸ ಕಾಲದಲ್ಲಿ ಇದನ್ನೆಲ್ಲ ನಾವು ಒಂದೇ ರೀತಿಯಲ್ಲಿ ಒಂದು ಸಮಾನರೂಪದಲ್ಲಿ ಒಂದೇ ಯಂತ್ರದಲ್ಲಿ ಸೃಷ್ಟಿಸಿಕೊಳ್ಳಲಿಕ್ಕೆ ಮತ್ತು.ಉಪಯೋಗಮಾಡಿಕೊಳ್ಳಲಿಕ್ಕೆ ಸಾಧ್ಯವಿದೆ. ಮೊನೊಟೈಪ್ ಲೈನೊಟೈಪ್ ಅಂತ ದೈತ್ಯಯಂತ್ರಗಳ ಕಾಲದಲ್ಲಿ ಒಂದೊಂದು ಒಂದೊಂದು ಕೆಲಸ ಮಾಡಬೇಕಾಗಿದ್ದರೆ ಈಗ ಅದರ ಅಗತ್ಯ ಇಲ್ಲದೆ ಅವುಗಳನ್ನೆಲ್ಲ ದೃಶ್ಯರೂಪದಲ್ಲಿ ಹೇಳುವುದು ಅಥವಾ ಶಬ್ದರೂಪದಲ್ಲಿ ಕಂಪ್ಯೂಟರುಗಳಲ್ಲೇ ಉಳಿಸಿಕೊಳ್ಳುವುದು ಸಾಧ್ಯವಾಗಿದೆ.. ಅದಕ್ಕೆ ಬೇಕಾದ ಸಂಜ್ಞಾಸಿಸ್ಟಮ್ಗಳನ್ನು ಅಥವಾ ಸಂಜ್ಞೆಯ ಕ್ರಮಗಳನ್ನು ನಾವೇ ಮೊದಲೇ ನಿಶ್ಚಯಮಾಡಿಕೊಂಡು ಅಲ್ಲೇ ಉಪಯೋಗ ಮಾಡಿದ್ದೇವೆ. ಬೆಳಕಚ್ಚು ಅಥವಾ ಪೋಟೋಟೈಪ್ ಸೆಟ್ಟಿಂಗ್ ಅದರ ಮೊದಲ ಹೆಜ್ಜಯಾಗಿದ್ದರೆ ಲೇಸರ್ ಪ್ರಿಂಟಿಂಗ್ ಅದರ ಎರಡನೇ ಹೆಜ್ಜೆ. ಲೇಸರ್ ಪ್ರಿಂಟಟಿಂಗಿನಲ್ಲಿ ಬೆಳಕಿನ ಕಿರಣವನ್ನು ನಮಗೆ ಬೇಕಾದ ಅಕ್ಷರಗಳನ್ನು ಬರೆಯುವ ಹಾಗೆ ಸಂಯೋಜನೆ ಮಾಡಲಿಕ್ಕೆ ಬರುತ್ತದೆ. ಅದು ಯಾವ ಅಕ್ಷರವನ್ನು ಹೇಗೆ ಬರೆಯಬೇಕು ಅನ್ನುವ ಕಲಾಪ ಕೂಡ ಕಂಪ್ಯೂಟರಿನ ಒಳಗೇ ಇರುತ್ತದೆ. ಅದೇ ಕಂಪ್ಯೂಟರ್ ಒಂದು ರೀತಿಯಲ್ಲಿ ಇನ್ನೊಂದು ಕ್ರಮದಲ್ಲಿ ಅಕ್ಷರಗಳನ್ನು ಸೇರಿಸಿಕೊಂಡಿದ್ದರೆ ಅದನ್ನು ಆ ಕ್ರಮಕ್ಕೆ ಅಗತ್ಯವಾಗುವ ಹಾಗೆ ಮುದ್ರಿಸಲಿಕ್ಕೆ ಬರುತ್ತದೆ.

ಈಗ ೧೯೯೦ರ ಅನಂತರ ಕಂಪ್ಯೂಟರುಗಳು ಸುಲಭವಾಗಿ ನಮಗೆ ಸಿಕ್ಕುವ ಕಾರಣದಿಂದ ಅವುಗಳ ವ್ಯಾಪ್ತಿ ಬಹಳ ದೊಡ್ಡದಿರುವುದರಿಂದ ಈ ಸಂಬಂಧಗಳನ್ನು ವಿವಧ ರೀತಿಗಳಲ್ಲಿ ಅರ್ಥೈಸಲು ಮತ್ತು ಉಪಯೋಗಿಸಲು ಸಾಧ್ಯವಿದೆ. ಇದು ಕನ್ನಡದಲ್ಲಿ ಇನ್ನೂ ಬಹಳ ದೂರ ಇದೆ. ಆದರೆ ಆಗಬೇಕಾಗಿದೆ.ಇಂತಹ ಸಂಬಂಧ ಪ್ರತಿ ಭಾಷೆಗೂ ಅದರದೇ ರೀತಿಯಲ್ಲೇ ಇರುತ್ತದೆ. ಆದರೆ ಲಿಪಿ ಬದಲಾವಣೆಯಿಂದ ಅದು ಬದಲಾಗುವುದಿಲ್ಲ. ಹತ್ತುತ್ತೇನೆ ಅಂದರೆ ಒಂದು ಜಾಗದಲ್ಲಿ ಒಂದು ಅರ್ಥವಾದರೆ ಇನ್ನೊಂದು ಊರಿನಲ್ಲಿ ಅದಕ್ಕೆ ಬೇರೆಯೇ ಅರ್ಥಗಳಿರಬಹುದು. ಇದನ್ನೇ ನೀವು ಶಬ್ದಶಃ ಭಾಷಾಂತರಮಾಡಿದರೆ ಅಥವಾ ಶಬ್ದಶಃ ರೂಪಾಂತರಮಾಡಿದರೆ ಇದರ ಒಳಗಿನ ಅರ್ಥ ಅಥವಾ ಒಳಗಿನ ಸಂವೇದನೆ ಇನ್ನೊಬ್ಬನಿಗೆ ಅರ್ಥವಾಗದೇ ಇರಬಹುದು. ಶಬ್ದಗಳಲ್ಲಿ ಕೂಡಾ ನಮ್ಮ ಭಾವಗಳನ್ನು ಎಷ್ಟು ರೀತಿಯಲ್ಲಿ ಪ್ರಕಟಮಾಡಬಹುದು ಅನ್ನುವುದು ಪ್ರಶ್ನೆ.ಇದು ಕವಿಗಳ ಕಾವ್ಯ ರಸಿಕರ ಪ್ರಶ್ನೆಯಾದರೆ, ಇದು ನಮ್ಮ ಶಬ್ದಶಿಲ್ಪಿಗಳ ಅಥವಾ ಶಬ್ದಸಂಯೋಜಕರ ಪ್ರಶ್ನೆ ಕೂಡಾ ಹೌದು. ಒಂದು ಕಾವ್ಯದ ಭಾಗವನ್ನು ನಾವು ಇನ್ನೊಂದು ಭಾಷೆಗೆ ಕಂಪ್ಯೂಟರಿನಿಂದ ಭಾಷಾಂತರ ಮಾಡಿದರೆ ಆ ಕಾವ್ಯದ ರಸವನ್ನು ನಾವು ಹೇಗೆ ಉಳಿಸಿಕೊಳ್ಳಲು ಸಾಧ್ಯ – ಇದು ತಂತ್ರಜ್ಞರಿಗೆ ಸವಾಲು. ಕಾವ್ಯರಸ ಎಲ್ಲಿದೆ ಅನ್ನೋದನ್ನು ಒಂದು ಯಂತ್ರ ಕೂಡ ಅರ್ಥಮಾಡಿಕೊಳ್ಳಬಲ್ಲುದೇ?..

ಈ ಸಾಧ್ಯತೆಗಳು ಇವತ್ತಿಗೆ ಹೆಚ್ಚಿಂದ ಹೆಚ್ಚು ಸಾದೈವಾಗುತ್ತಾ ಇವೆ. ಬಹುಶಃ ಬೇಂದ್ರೆಯವರ ಒಂದು ಕವನವನ್ನು ಹಿಂದಿಗೆ ಭಾಷಾಂತರ ಮಾಡಿ ಅದು ಇಲ್ಲಿನಷ್ಟೇ ಪರಿಣಾಮಕಾರಿಯಾಗಿ ಪುನಃ ಸೃಷ್ಟಿಯಾಗುವುದನ್ನು ನೋಡುವ ದಿನಗಳು ಬರಬಹುದು. ಇದಕ್ಕೆ ಬೇಕಾದುದು ಮೂರು. ಅತಿವ್ಯಾಪ್ತವಾದಂತ ಶಬ್ದಸಂಪತ್ತು. ಮೊದಲನೆಯದು, ಎರಡನೆಯದು ಅರ್ಥಸಂಪತ್ತು. ಬೇರೆಬೇರೆ ಸಂದರ್ಭಗಳಲ್ಲಿ ಈ ಶಬ್ದಗಳಿಗೆ ಏನು ಭಾವಾರ್ಥಗಳು ಹುಟ್ಟಬಹುದು ಅನ್ನುವದರ ಯಾಂತ್ರೀಕರಣ ಈಗ ಸಾಧ್ಯವಾಗಿದೆ. ಮೂರನೆಯದು ಜನಬಲ. ಇದು ಯಾರೋ ಒಬ್ಬನಿಂದ ಆಗುವ ಕೆಲಸವೇ ಅಲ್ಲ. ಅಂತರ್ಜಾಲ ಬಂದಿರುವುದರಿಂದ ಈಗ ಇಂತಹದು ಕೂಡಾ ಸಾಧ್ಯವಾಗಿದೆ. ಅಂತರ್ಜಾಲದ ಸಹಾಯದಿಂದ ಇಡಿಯ ಸಮಾಜವೇ – ಪ್ರತಿಯೊಬ್ಬ ಕಂಪ್ಯೂಟರ್ ಬಳಕೆದಾರನೂ ತಮ್ಮ ಅಳಿಲಸೇವೆಯೀಂದ ಮಹಾ ಜ್ಞಾನನಿಧಿಯನ್ನೇ ಸೃಷ್ಟಿಸುವಂತಹ ಕಾರ್ಯಗಳು ಸಾಧ್ಯವಾಗುತ್ತಿದೆ.

ಇದಕ್ಕೊಂದು ಚಿಕ್ಕ ಉದಾಹರಣೆ ವಿಕಿಪೀಡಿಯಾ ವಿಶ್ವಕೋಶ. ಒಂದು ಕಾಲದಲ್ಲಿ ವಿಕಿಪೀಡಿಯಾ ಯಾರೋ ಕೆಲವು ಅಸಾಮಾನ್ಯರ ಪ್ರಯತ್ನಗಳಾಗಿ ಪ್ರಾರಂಭವಾದುದು ತಮಗೆ ತಿಳಿದುದನ್ನು ಇತರರೊಡನೆ ಹಂಚಿಕೊಳುವುದಕ್ಕಾಗಿ. ಇದು ಮುಂದೆ ಬೆಳೆದು ಲೋಕ ವ್ಯಾಪಿಯಾಗಿ ಎನ್ಸೈಕ್ಲೋಪೀಡಿಯಾ ಬ್ರಿಟಾನಿಕದಂತಹವರು ತಮ್ಮ ಅಂಗಡಿಮುಚ್ಚುವ ಸ್ಥಿತಿಬಂದಿದೆ. .ಭಾರತದ ಎಲ್ಲ ವಿಶ್ವಕೋಶಗಳಿಗೂ ನಮ್ಮೆಲ್ಲ ವಿಶ್ವಕೋಶಗಳಿಗೂ ಇದೇ ಸಮಾಧಾನ. ಹೀಗೆ ಸಾಮಾಜಿಕ ಜಾಲತಾಣಗಳು, ಸಾಮಾಜಿಕ ಜಾಲಪ್ರಪಂಚ ವಿಶ್ವವ್ಯಾಪಿಯಾಗಿದೆ.

ಇದು ಬಹುಶಃ ೧೯೯೯ರ ಅನಂತರದ ಬೆಳವಣಿಗೆ. ಅದು ಸೇಡಿಯಾಪು ತಂತ್ರಾಂಶ ಹೊರಬಂದ ಕಾಲಕ್ಕೆ ಆದುದು. ಸಮನ್ವಯಕ್ಕೆ ಅದೂ ಕಾರಣವಾಗಿರಬಹುದೆಂದು ಒಂದು ರೀತಿಯ ಸಂತೋಷ. ಆ ಕಾಲದಲ್ಲಿ ಇದ್ದುದು ಬರೇ ಡಾಸ್ ನಲ್ಲಿ ತಯಾರಿಸಿದ್ದು. ತೊಂಬತ್ತಮೂರನೆಯ ಇಸವಿಯಲ್ಲಿ ಪ್ರೊ. ಶ್ರೀಧರ್, ಅಮೇರಿಕದಲ್ಲಿ ಸ್ಟೋನಿ ಬ್ರೂಕ್ ವಿ.ವಿ. ಯಲ್ಲಿಯವರು, ಕನ್ನಡದ ಸೇಡಿಯಾಪು ಹೆಸರಿನ ಸಾಮಾನ್ಯ ತಂತ್ರಾಂಶವನ್ನು ವಿ.ವಿ.ಯ ತಾಣದಲ್ಲಿ ಹಾಕಿದರು. ಆದುದರಿಂದ ಪ್ರಾರಂಭದ ದಿನಗಳಲ್ಲೇ ಅಂತರ್ಜಾಲದಲ್ಲಿ ಕಾಣಿಸಿದ ಮೊದಲ ಭಾರತೀಯ ಭಾಷಾ ತಂತ್ರಾಂಶವೆಂಬ ಹೆಗ್ಗಳಿಕೆ ಕನ್ನಡದ್ದು ಮತ್ತು ಸೇಡಿಯಾಪುವಿನದು ಎಂದು ಹೆಮ್ಮೆಯಿಂದ ಹೇಳಬಹುದು. ಅದರೊಡನೆ ದೇವನಾಗರಿ ಮತ್ತು ಬೇರೆಭಾಷೆಗಳಿದ್ದರೂ ಕನ್ನಡವನ್ನು ಕೆಲವರಾದರೂ ನೋಡಿ ನನ್ನ ವಿಳಾಸ ಹುಡುಕಿ ನನಗೆ ಪತ್ರ ಬರೆದಿದ್ದರು. ಅದಕ್ಕೆ ನಾನು ಉತ್ತರ ಕೊಡಲು ಸಾಧ್ಯವಾಗಲಿಲ್ಲ. ಆಗ ನನ್ನಲ್ಲಿ ಇಂಟರ್ನೆಟ್ ಇರಲಿಲ್ಲ. ೨೦೦೦ದವರೆಗೆ ಇಂಟರ್ನೆಟ್ ಸುಲಭವಾಗಿರಲಿಲ್ಲ. ಶ್ರೀಧರ್ ಅವರದು ಭಾಷಾಲೋಕದಲ್ಲಿ ಎಲ್ಲರಿಗೂ ಗೊತ್ತಿರುವ ಹೆಸರು. ಅವರು ಸೇಡಿಯಾಪು ತಂತ್ರಾಂಶವನ್ನು ಆ ಕಾಲದಲ್ಲೇ ಅಂತರ್ಜಾಲದಲ್ಲಿ ಸೇರಿಸಿ ನಮಗೂ ಒಂದು ಪ್ರಾಥಮಿಕ ಸದಸ್ಯತ್ವವನ್ನು ಕೊಡಿಸಿದರು…

ಸಾಮಾಜಿಕ ಜಾಲತಾಣಗಳು ಜ್ಞಾನತಾಣವಾಗಿ, ಜ್ಞಾನವೃದ್ಧಿ ಮತ್ತು. ಜ್ಞಾನಾಭಿವೃದ್ಧಿ ಮುಂತಾದ ಸಾಧ್ಯತೆಗಳನ್ನು ಸಾಧಿಸುವ ಕಾಲ ಬಂದಿದೆ.ಇದಕ್ಕೆ ನಮ್ಮ ಕನ್ನಡ ಹೊರತಾಗಿರಬಾರದು. ಕೆಲವು ದಿವಸಗಳ ಹಿಂದೆ ಬೆಂಗಳೂರಿನ ನಮ್ಮ ಮಿತ್ರರು ಸೇರಿಕೊಂಡು ವಚನಸಂಚಯ ಅನ್ನುವಂತಹ ಒಂದು ಕಾರ್ಯವನ್ನು ಪ್ರಾರಂಭ ಮಾಡಿದರು.ನನ್ನ ಸೇಡಿಯಾಪುವಿನ ಮೊದಲ ಉಪಯೋಗಕಾರರೂ ಆಗಿದ್ದ ಪ್ರೋ ಒ. ಎಲ್. ನಾಗಭೂಷಣ ಸ್ವಾಮಿಯವರು, ಓಂ ಶಿವಪ್ರಕಾಶ್, ಪವಿತ್ರಾ, ದೇವು ಅಂತ ಕೆಲವು ಮಿತ್ರರು ವಸುಧೇಂದ್ರ, ಇಸ್ಮಾಯಿಲ್ ಸಹಯೋಜಕರು ಸೇರಿಕೊಂಡು ಇಂಥದ್ದೊಂದು ಕಾರ್ಯವನ್ನು ಸಾಧ್ಯ ಮಾಡಿದರು. ವಚನಸಂಚಯದಲ್ಲಿ ನಮಗೆ ಗೊತ್ತಿಲ್ಲದ ನಾವು ಹೆಸರು ಕೇಳಿರದ ಶಿವಶರಣರ ವಚನಗಳೆಲ್ಲ ಒಂದೇ ಜಾಲತಾಣದಲ್ಲಿ ಸಿಗುತ್ತವೆ. ಇದನ್ನು ಯಾರು ಬೇಕಾದರೂ ನೋಡಬಹುದು ಬೇಕಾದುದನ್ನು ಹುಡುಕಬಹುದು,. ಬದಲಾಯಿಸಬಹುದು, ಸೇರಿಸಬಹುದು, ಸುಧಾರಿಸಬಹುದು ಅಥವಾ ಸುಧಾರಿಸುವುದಕ್ಕೆ ಬೇಕಾದಂತಹ ಸಲಹೆಗಳನ್ನು ಕೊಡಬಹುದು. ಶಬ್ದ ಪ್ರಯೋಗಗಳು, ಅರ್ಥ ವ್ಯಾಪ್ತಿ ಮೊದಲಾದ ವಿಷಯಗಳ ಸಂಶೋಧನೆ ಮಾಡಬಹುದು. ಕೆಲವೇ ವರ್ಷಗಳಲ್ಲಿ ಇದು ಅತಿಪೂರ್ಣವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ. ವಚನಸಂಚಯ ಒಂದು ಪ್ರಾರಂಭ ಮಾತ್ರ. ಇದೇ ಮಾದರಿಯಲ್ಲಿ ಜಾಲಭಂಡಾರಗಳು ಆಗಬೇಕು,

ನನ್ನಂತಹವನಿಂದ ಆದ ಒಂದು ಚಿಕ್ಕ ಕಾಣಿಕೆ – ನನ್ನ ಮೊಮ್ಮಗಳು ಮಾಡಿದ್ದ ಅದಿತಿ ಅಕ್ಷರಗಳ ಮುಂದಿನ ಹೆಜ್ಜೆಯಾಗಿ ಕಿಟ್ಟೆಲ್ ಅನ್ನುವ ಕನ್ನಡ ಫಾಂಟು ತಯಾರಿಸಿದೆವು. ಕನ್ನಡದ ಕಿಟ್ಟೆಲ್ ಫಾಂಟ್ ನ ವೈಶಿಷ್ಟವೆಂದರೆ ಅದರಲ್ಲಿ ಇರುವ ಲಿಪಿ-ಅಕ್ಷರರೂಪ ಕಿಟ್ಟೆಲ್ ಅವರು ಕೊಟ್ಟ ಸುಧಾರಿತ ಇಂಗ್ಲಿಷ್. ಇದನ್ನು ಉಪಯೋಗಿಸಿದರೆ ಕನ್ನಡ ಲಿಪಿಯಲ್ಲಿರುವ ವಚನಸಂಚಯದ ವಚನಗಳನ್ನು ಕನ್ನಡ ಬರಹ ತಿಳಿಯದವರು ಇಂಗ್ಲಿಷ್ ಅಕ್ಷರಗಳಲ್ಲಿ ಓದಬಹುದು. ಹೀಗೆ ವಚನಗಳನ್ನು ಕನ್ನಡದ ಲಿಪಿಯ ಬಂಧನದಿಂದ ಮುಕ್ತಗೊಳಿಸಲು ಸಾಧ್ಯ.

ಹಾಗೆಯೇ ಕನ್ನಡ ಲಿಪಿಯಲ್ಲಿರುವ ಜ್ಞಾನವನ್ನೆಲ್ಲಾ ಬೇರೆ ಭಾರತೀಯ ಲಿಪಿಗಳಲ್ಲಿ ಓದುವಂತಾಗಬೇಕು ಬೇರೆ ಭಾಷೆಗಳ ಜ್ಞಾನವನ್ನು ಕನ್ನಡ ಲಿಪಿಯಲ್ಲಿ ಓದಲು ಸಾಧ್ಯವಾಗಬೇಕು ಇದು ನಮ್ಮ ಗುರಿ, ಉದ್ದೇಶ, ಆಸೆ ಮತ್ತು ಕನಸು.

ಬರೆದುದನ್ನು ಓದುವುದು, ಓದಿದುದನ್ನು ಮಾತಿನಲ್ಲಿ ಹೇಳುವುದು, ಹೇಳಿದುದನ್ನು ಬರೆಯುವುದು ಎಲ್ಲಾ ಕಂಪ್ಯೂಟರ್ ಗಳಲ್ಲಿ ಸಾಧ್ಯ, ಇದು ಸುಲಭ ಸಾಧ್ಯವಾಗಿ ಜನರಿಗೆ ದೊರಕಬೇಕು.

ಇನ್ನು ನಮ್ಮ ಕರ್ನಾಟಕದ ವಿಶಿಷ್ಟ ಸಮಸ್ಯೆ. ಬೆಂಗಳೂರಿನಲ್ಲಿ ಇಷ್ಟು ಸಾಫ್ಟ್ವೇರ್ ಕಂಪೆನಿಗಳು ಅಥವಾ ತಂತ್ರಜ್ಞಾನಗಳು ಮಾಹಿತಿತಂತ್ರಜ್ಞಾನಗಳ ವಿಶಿಷ್ಟ ಜನಗಳು ಕಂಪ್ಯೂಟರ್ ತಂತ್ರಜ್ಞಾನದ ಜನಗಳು ಬಹುಶಃ ಭಾರತ ದೇಶದಲ್ಲಿ ಇರುವವರಲ್ಲಿ ಅರ್ಧಾಂಶ ಬೆಂಗಳೂರಿನಲ್ಲೇ ಇದ್ದಾರೆ. ಇವರು ಇಲ್ಲಿದ್ದು ಕನ್ನಡಕ್ಕಾಗಿ ಏನು ಮಾಡಿದರು ನಮಗೇನು ಕೊಟ್ಟರು ಎಂದು ಹೇಳುವಂತಹದು ಬಹಳ ಸಾಮಾನ್ಯ. ಕನ್ನಡ ಪರ ಚಳವಳಿಗಾರರಿಗೂ, ಸಂಘಟನೆಗಳಿಗೂ ಇದು ಒಳ್ಳೆಯ ಗ್ರಾಸ. ಅವರು ಹೇಳುತ್ತಾ ಇದ್ದಾರಂತೆ, ನೀವು ಕಂಪೆನಿಗಳೆಲ್ಲ ತುಂಬ ದುಡ್ಡು ಮಾಡುತ್ತಾ ಇದ್ದೀರಿ. ನಿಮ್ಮ ಸ್ವಲ್ಪಾಂಶವನ್ನಾದರೂ ಭಾಷಾಭಿವೃದ್ಧಿಗೆ ದೇಶ ಅಥವಾ ಲೋಕಾಭಿವೃದ್ಧಿಗೆ ಉಪಯೋಗಮಾಡಿ ಅಂತ. ಆದರೆ ಈ ತಂತ್ರಜ್ಞಾನ ಕಂಪೆನಿಗಳಲ್ಲಿರುವ ಕನ್ನಡಿಗರೇ ಆಗಲಿ ಅಥವಾ ಪರ ಭಾಷಿಕರೇ ಆಗಲಿ ಅವರಿಗೆ ಕನ್ನಡದಲ್ಲಿ ಏನು ವಿಶಿಷ್ಟತೆಗಳಿವೆ, ಕನ್ನಡದಲ್ಲಿ ಇರುವುದೇನು ಅಂತ ತಿಳಿಸುವ ಪ್ರಯತ್ನಗಳನ್ನು ಯಾರೂ ಮಾಡಿದ ಹಾಗೆ ತೋರುವುದಿಲ್ಲ. ಅವರವರ ಭಾಷೆಗಳಿಗೆ ಕನ್ನಡದಲ್ಲಿರುವ ವಿಶೇಷಗಳನ್ನು ಭಾಷಾಂತರಮಾಡಿ ಹಾಕಿದರೂ ಕೂಡಾ ಅದು ಕನ್ನಡದ ಕೆಲಸವೇ. ಅದರಿಂದ ಎಲ್ಲವರ ಉದ್ಧಾರವಾಗಬಹುದು ಎಂದು ನಂಬಿದವನು ನಾನು. ಪರ ಭಾಷಿಕರು ತಮ್ಮ ಭಾಷಾ ಸಂಪತ್ತನ್ನು ಕನ್ನಡಕ್ಕೆ ಕೊಡಬೇಕು, ಕನ್ನಡದ ನೆಲದಲ್ಲಿ ಇರುವುದರಿಂದ ಕನ್ನಡ ಜನಗಳಿಗೆ ಈ ಉಪಕಾರ ಮಾಡಬೇಕು ನಮ್ಮ ಜ್ಞಾನ ಇನ್ನಷ್ಟು ವೃದ್ಧಿಯಾಗಬೇಕು ಎಂದು ನಂಬಿದವನು.

ಲಿಪಿಮೋಹ ಅಗತ್ಯವೇ? ಈ ಲೋಕದಲ್ಲಿ ಯಾವ ಲಿಪಿಯೂ ಸಂಪೂರ್ಣ ಮತ್ತು ಪರಿಪೂರ್ಣವಾಗಿ ಇಲ್ಲ. ಕನ್ನಡದ ಅಕ್ಷರಗಳನ್ನೇ ನೀವು ನೋಡಿ, ಮ ಯ ಮತ್ತು. ಝ ಅಥವಾ ಅದರ ಕಾಗುಣಿತ, ಒತ್ತುಗಳು, ಅಕ್ಷರರೂಪ ಹಾಗೆಯೇ ಸ್ವಲ್ಪಮಟ್ಟಿಗೆ ‘ವ’ ದರೂಪಗಳು ‘ಇದು ಯಾವುದೂ ಶಾಸ್ತ್ರೀಯವೂ ಅಲ್ಲ, ಸರಿಯೂ ಅಲ್ಲ. ಒಂದೇ ನಿಯಮಕ್ಕೆ ಒಳಪಟ್ಟವುಗಳೂ ಅಲ್ಲ. ನಿಯಮಬಾಹಿರತೆಗಳು ಎಲ್ಲ ಲಿಪಿಗಳಲ್ಲೂ ಇರಿತ್ತವೆ. ‘ಕ’ ಮತ್ತು. ಖ ಅಕ್ಷರಗಳಿಗೆ ಏನು ಸಂಬಂಧ?. ಇಂತಹ ವೈಚಿತ್ರ್ಯಗಳು ಎಲ್ಲ ಅಕ್ಷರಪ್ರಕಾರಗಳಲ್ಲೂ ಭಾರತದೇಶದಲ್ಲಿವೆ. ಬಹುಶ ಲೋಕದಲ್ಲೇ ಇವೆ. ನಮ್ಮದೇ ಬಹಳ ಸರಿ. ಬಾಕಿಯೆಲ್ಲ ತಪ್ಪು ಅನ್ನುವ ಅಧಿಕಪ್ರಸಂಗ ನಮಗೆ ಬೇಡ. ಅದನ್ನು ಬಿಟ್ಟುಬಿಟ್ಟು ಎಲ್ಲ ಲಿಪಿಗಳನ್ನೂ ನಾವು ಪ್ರೀತಿಸೋಣ. ಎಲ್ಲಾ ಭಾಷೆಗಳನ್ನೂ ಪ್ರೀತಿಸೋಣ.

ಒಂದಾನೊಂದು ಕಾಲದಲ್ಲಿ ಮುದ್ರಣದ ಅನುಕೂಲಕ್ಕಾಗಿ ಅಕ್ಷರ ಸುಧಾರಣೆಯಾಗಬೇಕೆಂಬ ಚಳವಳಿ ಹುಟ್ಟಿತು. .ಕೇರಳದಲ್ಲಿ ಕೆಲ ಪತ್ರಿಕೆಗಳು ಇದನ್ನು ಪ್ರಾರಂಭಿಸಿಯೇ ಬಿಟ್ಟವು. ಧ್ವನ್ಯಾಧರಿತ ಕೀಲಿಮಣೆಗಳ ಉಪಯೋಗದಿಂದ ಈ ಸಮಸ್ಯೆ ತಪ್ಪಿತು. ಲಿಪಿಗಳಿಗೂ ಒಂದು ಪರಂಪರೆಯಿದೆ. ಅವುಗಳನ್ನು ಕಂಪ್ಯೂಟರ್ ಗಳ ಉಪಯೋಗದಿಂದ ಅದನ್ನು ಉಳಿಸಬಹುದು. ಅಳಿಸುವ ಅಗತ್ಯವಿಲ್ಲ.

ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ ಅನ್ನೋದೇ ನನ್ನ ಒಂದು ಆಶಯ.

ಅಧ್ಯಾಪಕನಾಗಿ ಪಾಠ ಮುಗಿಸುವಾಗ ಕೆಲ ಕಾಲ ನೀಲ ಗಗನವೆಂಬ ಯೋಚನೆಗಳನ್ನು ಹಂಚಿಕೊಳ್ಳುವ ಕ್ರಮವಿದೆ. ನಿಮಗೇನು ಬೇಕು ಹೇಳಿ. ಅದು ಕಂಪ್ಯೂಟರ್ ಗಳಿಂದ ಈಗ ಸಾಧ್ಯವೇ, ಮುಂದೆ ಸಾಧ್ಯವಾಗಬಹುದೇ ಎಂದು ಚರ್ಚಿಸೋಣ ನಮ್ಮ ಯೋಚನೆಗಳನ್ನು ಹಂಚಿಕೊಳ್ಳೋಣ ಎಂಬುದು ಇದರ ಗುರಿ. ಇಲ್ಲಿ ಅದು ಸ್ವಲ್ಪ ಕಷ್ಡ ಸಾಧ್ಯ. ನನ್ನಿಂದ ಏನಾಗಬೇಕು ಹೇಳಿ ಯೋಚಿಸಲು ಬಿಡಿ., ನಾನು ಅಲ್ಲದಿದ್ದರೆ ನನ್ನಂತಹವರು ಇದನ್ನು ಮಾಡಿ ತೋರಿಸಲಿಕ್ಕೆ ಯಾವಾಗಲೂ ತಯಾರಾಗಿರುತ್ತಾರೆ.

ಕೆಲವು ಪ್ರಶ್ನೆ- ಮನೆ ಕೆಲಸಗಳೊಂದಿಗೆ ನನ್ನ ಮಾತು ಮುಗಿಸುತ್ತೇನೆ-

೧. ಕಂಪ್ಯೂಟರ್ ಗಳಿಂದಾಗಿ ಬರಹ ಎನ್ನುವುದು ಅಳಿಸಿ ಹೋಗಬಹುದೇ? ಬರಹವಿಲ್ಲದೆ ಸಂವಹನ ಸಾಧ್ಯವಾದರೆ ಬರಹವೇಕೆ ಬೇಕು.

೨. ಸಾಹಿತಿ ಸಾಹಿತ್ಯ ಸೃಷ್ಟಿ ಮಾಡುವ ಉದ್ದೇಶವೇನು? ಸಂಭಾವನೆಗಾಗಿಯೇ, ಸಂವಹನಕ್ಕಾಗಿಯೇ, ಸ್ವಸಂತೊಷಕ್ಕಾಗಿಯೇ, ಪ್ರೋ. ಹ್ಯೂಬೆಲ್.

೩. ಅರಿವನ್ನು ಹರಡುವುದಕ್ಕೆ ಹೊಸ ತಂತ್ರಗಳು ಬರಬಹುದೇ? ಗ್ರೀಕ್ ಮಾತ್ರೆ ನುಂಗಿ ನೀರು ಕುಡಿದರೆ ಗ್ರೀಕ್ ಭಾಷೆ ತಿಳಿಯಲು ಸಾದ್ಯವಿದೆಯೇ?

೪. ಇತ್ಯಾದಿ.

ಪ್ರಪಂಚ ಪತ್ರಿಕೆಯಲ್ಲಿ ಒಂದು ಧ್ಯೇಯ ವಾಕ್ಯವಿರುತ್ತಿತ್ತು. ಅಂತರ್ಜಾಲದ ಈ ಯುಗದಲ್ಲಿ ಅದನ್ನು ಹಿಗ್ಗಿಸಿ ಲೋಕವೇ ನನ್ನ ಶಾಲೆ ಮಾನವಕುಲವೇ ನನ್ನ ಗುರು ಲಿಪಿ ಭಾಷೆಗಳ ಬಂಧನದಿಂದ ಹೊರಗೆ ಯೋಚಿಸೋಣ ಎಂಬುದೇ ನಮ್ಮ ಗುರಿ.
.
ಲೋಕಕ್ಕೆಲ್ಲಾ ಒಳಿತಾಗಲಿ.

Share.
Leave A Reply Cancel Reply
Exit mobile version