ಎಂಡೋಸಲ್ಫಾನ್: ಹೆಸರು ಕೇಳಿದರೆ ನಮ್ಮ ಮೈ ನಡುಗಬೇಕಾಗಿತ್ತು.

ABOVE: Eight month old Sainaba lives in the Kasaragod district close to where Endosulfan has been sprayed. She suffers from hydrocephalus ©Shree Padre

 

ಇದು ವಸುಂಧರೆಯ ಮೇಲಿನ ಬಹುತೇಕ ಎಲ್ಲ ಜೀವಿಗಳನ್ನೂ ಸಾಯಿಸುವಂಥ ಕಟು ವಿಷ. ಮನುಷ್ಯನ ದೇಹವನ್ನು ಸರಾಗವಾಗಿ ಸೇರಿಕೊಳ್ಳುವ ಈ ವಿಷ ನರವ್ಯವಸ್ಥೆಯನ್ನೇ ಹಾಳುಗೆಡಹುತ್ತದೆ. ರಕ್ತವನ್ನು ಹಾಳುಮಾಡುತ್ತದೆ. ಮೂತ್ರಪಿಂಡಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಈ ವಿಷದಿಂದ ಕ್ಯಾನ್ಸರ್ ಕೂಡಾ ಬರುತ್ತದೆ.

ಬೆಳೆಗಳ ಕೀಟಬಾಧೆ ನಿವಾರಿಸಲೆಂದು ವಿಮಾನಗಳ ಮೂಲಕವೂ ಸಾವಿರಾರು ಎಕರೆಗಳ ಮೇಲೆ ಎರಚುವ ಎಂಡೋಸಲ್ಫಾನ್ ಮನುಷ್ಯನ ದೇಹದೊಳಗೆ ಸರಕ್ಕನೆ ಇಳಿದು ತಲೆನೋವು ತರುತ್ತದೆ. ತಲೆ ತೊರುಗುತ್ತೆ; ವಾಂತಿಯಾಗುತ್ತೆ. ಮಾನಸಿಕ ವಿಭ್ರಮೆಯೂ ಉಂಟಾಗುತ್ತೆ. ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತೆ…… ಸಾವು ನಿಧಾನವಾಗಿ ಎರಗುತ್ತೆ. ವಿಷಬಾಧೆಗೆ ಒಳಗಾದವರು ನರಳಿ ನರಳಿ ಸಾಯುತ್ತಾರೆ.

ಇಷ್ಟೆಲ್ಲ ಕೇಳಿಯೂ ನಿಮಗೆ ನಡುಕ ಬಂದಿಲ್ಲವಾದರೆ ಮುಂದೆ ಓದಿ: ಸ್ಟಾಕ್‌ಹೋಮ್ ಸಮಾವೇಶದಲ್ಲಿ ಎಂಡೋಸಲ್ಫಾನನ್ನು ಪರ್ಸಿಸ್ಟೆಂಟ್ ಆರ್ಗಾನಿಕ್ ಮಾಲಿನ್ಯಕಾರಕ’ ಎಂದು ಘೋಷಿಸಲಾಗಿದೆ. ಅಂದರೆ ಇದು ವಾತಾವರಣದಲ್ಲಿ ಇದ್ದೇ ಇರುತ್ತದೆ. ಕರಗಿಹೋಗುವ ಬದಲು ಜೀವಿಗಳಲ್ಲಿ ಇನ್ನಷ್ಟು ಸ್ಥಿರವಾಗಿ ಸ್ಥಾಪನೆಗೊಳ್ಳುತ್ತೆ. ಎಲ್ಲೋ ಬೀಸಿದ ಗಾಳಿಗೆ ಇದು ಹಿಮಾಲಯಕ್ಕೇನು, ಆರ್ಕಟಿಕ್ ದ್ವೀಪಕ್ಕೂ ಹೋಗಿದೆ. ಹಿಮಕರಡಿಗಳಲ್ಲೂ ಎಂಡೋಸಲ್ಫಾನ್ ಇದೆ.

ಎಂಡೋಸಲ್ಫಾನ್ ಪಸೆಯಿಂದ ಗಾಸಿಗೊಳಗಾದ ಮಕ್ಕಳು ಹೇಗಿದ್ದಾರೆ ಎಂದು ನೀವೇ ಈ ಚಿತ್ರಗಳನ್ನು ನೋಡಿ ತಿಳಿದುಕೊಳ್ಳಿ. `ಅಡಿಕೆ ಪತ್ರಿಕೆ’ಯ ಸಂಪಾದಕ ಶ್ರೀ ಪಡ್ರೆಯವರೇ ಈ ಚಿತ್ರಗಳನ್ನು ತೆಗೆದಿದ್ದಾರೆ. ಅವರು ಎಂಡೋಸಲ್ಫಾನ್ `ಪರಿಣಾಮ’ಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ; ಹೋರಾಡಿದ್ದಾರೆ. ಅವರ ಚಿತ್ರಗಳಾದರೂ ನಿಮ್ಮನ್ನು ಕದಲಿಸಬಹುದು ಎಂದು ನಿರೀಕ್ಷಿಸಬಹುದೆ?

ವಿಶ್ವ ಆರೋಗ್ಯ ಸಂಸ್ಥೆಯೇನೋ ಎಂಡೋಸಲ್ಪಾನನ್ನು ಎರಡನೇ ವರ್ಗದ, ಮಧ್ಯಮ ಮಾರಕ ವಿಷ ಎಂದು ವರ್ಗೀಕರಿಸಿದೆ. ಆದರೆ ಅಮೆರಿಕಾದ ಪರಿಸರ ಸಂರಕ್ಷಣಾ ಸಂಸ್ಥೆಯ ಪ್ರಕಾರ ಇದು ವರ್ಗ ೧ಬಿಯಲ್ಲಿ `ಅತಿ ಮಾರಕ’ ಪಟ್ಟಿಯಲ್ಲಿ ಇದೆ.

Sruthi from Padre, Kerala, was born with staghorn limbs. Her mother died of cancer and her father is very ill. Since 2002, the community has taken care of her. Now a bright oung student, Sruthi has undergone multiple surgeries and every year she has to undergo ar�ficial limb modification.

 

ಭಾರತದಂಥ ಅಭಿವೃದ್ಧಿಶೀಲ ದೇಶಗಳಲ್ಲಿ ವಿಶ್ವದ ಒಟ್ಟಾರೆ ಕೀಟನಾಶಕ ಉತ್ಪನ್ನದ ಶೇ. ೨೫ರಷ್ಟು ಬಳಕೆಯಾಗುತ್ತಿದೆ. ಆದರೆ ಈ ದೇಶಗಳಲ್ಲೇ ಕೀಟನಾಶಕಗಳಿಗೆ ಸತ್ತ ಶೇ. ೯೯ರಷ್ಟು ಜನ ಜೀವಿಸಿದ್ದರು.

ಈಗ ಸೌದಿ ಅರೇಬಿಯಾದಿಂದ ಹಿಡಿದು ಮಾಲಿಯರೆಗೆ, ಕಾಂಬೋಡಿಯಾದಿಂದ ಹಿಡಿದು ಐರೋಪ್ಯ ಸಮುದಾಯದವರೆಗೆ ೬೨ ದೇಶಗಳು ಎಂಡೋಸಲ್ಪಾನನ್ನು ನಿಷೇಧಿಸಿವೆ.

ಭಾರತ? ನಿಮ್ಮ ಊಹೆ ನಿಜ; ಭಾರತದಲ್ಲಿ ಎಂಡೋಸಲ್ಫಾನ್ ನಿಷೇಧವಾಗಿಲ್ಲ; ಬದಲಿಗೆ ಎಂಡೋಸಲ್ಫಾನ್ ಉತ್ಪಾದನೆಯಲ್ಲಿ ಭಾರತವೇ ನಾಲ್ಕನೇ ಸ್ಥಾನದಲ್ಲಿದೆ. ಹೇಗಿದೆ ನೋಡಿ…….. ವಿಷ ತಯಾರಿಯಲ್ಲೂ ಭಾರತದ್ದು ದಾಖಲೆ! ದೀಪಾವಳಿ ದಿನ ಪಟಾಕಿ ಹಚ್ಚಿ ಸಂಭ್ರಮ ಆಚರಿಸೋಣವೆ?

ಐವತ್ತು ವರ್ಷಗಳ ಹಿಂದೆ ಎಂಡೋಸಲ್ಫಾನ್ ಮೇಲೆ ಹಕ್ಕುಸ್ವಾಮ್ಯವಿತ್ತು; ಈಗಿಲ್ಲ. ಭಾರತದೊಂದಿಗೆ ಚೀನಾ, ಇಸ್ರೇಲಿನಲ್ಲೂ ಎಂಡೋಸಲ್ಫಾನ್ ಉತ್ಪಾದನೆ ಅವಿರತವಾಗಿ ಸಾಗಿದೆ.  ೨೦೦೭ ಮತ್ತು ೨೦೦೮ರ ಎರಡೇ ವರ್ಷಗಳಲ್ಲಿ ಭಾರತದಿಂದ ೭೫ ಕೋಟಿ ರೂ. ಬೆಲೆಯ ಎಂಡೋಸಲ್ಪಾನ್ ರಫ್ತಾಗಿದೆ. ಹಿಂದುಸ್ತಾನ್ ಇನ್‌ಸೆಕ್ಟಿಸೈಡ್ ಸಂಸ್ಥೆಯು ವರ್ಷಕ್ಕೆ ೧೬೦೦ ಟನ್ ಎಂಡೋಸಲ್ಫಾನ್  ಉತ್ಪಾದಿಸುತ್ತೆ. ಈ ಸಂಸ್ಥೆಯು ಭಾರತ ಸರ್ಕಾರದ ಒಂದು ಉದ್ಯಮ ಎಂಬುದನ್ನು ನಿಮ್ಮ ಗಮನಕ್ಕೆ ವಿನಮ್ರವಾಗಿ ತರಬಯಸುವೆ. ಭಾರತದಲ್ಲಿ ಎಕ್ಸೆಲ್ ಇಂಡಸ್ಟ್ರೀಸ್ ಲಿಮಿಟೆಡ್, ಕೋರಮಂಡಲ್ ಫರ್ಟಿಲೈಸರ್ಸ್ ಲಿಮಿಟೆಡ್, ಇ ಐ ಡಿ ಪ್ಯಾರಿ ಸಂಸ್ಥೆಗಳೂ ಭಾರೀ ಪ್ರಮಾಣದಲ್ಲಿ ಎಂಡೋಸಲ್ಫಾನ್ ಉತ್ಪಾದಿಸುತ್ತಿವೆ.

 

Photo credit : EJF

ಎಂಡೋಸಲ್ಫಾನ್‌ಗೆ ನೂರಾರು ಹೆಸರು: ಅಗ್ರಿಸಲ್ಪಾನ್, ಅಫಿಡಾನ್, ಐಕಿಡೋ, ಅಲೋದಾನ್, ಎಂಡೋಫಾನ್, ಎಂಡೋ ಫ್ಲೋ, ಥಿಯೋನೇಟ್, ವೆಲ್ಡೋಸಲ್ಫಾನ್…… ನೂರಾರು ರಕ್ಕಸ ಹೆಸರುಗಳು.
ಎಂಡೋಸಲ್ಫಾನ್ ಹೇಗಿರುತ್ತೆ ಎಂದು ಕಲ್ಪಿಸಿಕೊಳ್ಳುತ್ತಿದ್ದೀರಾ? ಬೇಡ. ಸೀದಾ ಯಾವುದೇ ಹಣ್ಣಿನ ಮಾರುಕಟ್ಟೆಗೆ ಹೋಗಿ. (ಈಗ ಮಾಲ್‌ಗಳಿಗೆ ಹೋಗುವುದೇ ಇನ್ನೂ ಸುಲಭ ಎನ್ನುತ್ತೀರ?) ದ್ರಾಕ್ಷಿ ಹಣ್ಣನ್ನು ಖರೀದಿಸಿ.

 

Photo credit: EJF

ದ್ರಾಕ್ಷಿ ಖರೀದಿಸಿದರೆ ನೀವು ಎಂಡೋಸಲ್ಪಾನ್ ಖರೀದಿಸಿದ ಹಾಗೆಯೇ. ನೀವು ತೊಳೆದರೂ ಹೋಗದಂತೆ ದ್ರಾಕ್ಷಿಯ ಮೇಲೆ ಕೂತಿರುತ್ತಲ್ಲ…. ಬಿಳಿಯ ಹುಡಿ ಹುಡಿ ಪಸೆ….. ಅದೇ ಎಂಡೋಸಲ್ಫಾನ್. ನೀವು ದಿನಾ ಕುಡಿಯುವ ಚಹಾ, ನೀವು ಖರೀದಿಸುವ ಹತ್ತಿ ಬಟ್ಟೆಗಳು, ಸಮುದ್ರಪುಷ್ಟ (ಅಂದರೆ ಮೀನು, ಏಡಿ), ಸಂಬಾರ ಪದಾರ್ಥಗಳು, ಮಕ್ಕಳ ಆಹಾರ – ಹೀಗೆ ಸರಿಸುಮಾರು ಎಲ್ಲ ಆಹಾರಪದಾರ್ಥಗಳಲ್ಲೂ ಎಂಡೋಸಲ್ಫಾನ್ ಇದೆ. ಒಂದು ರೀತಿಯಲ್ಲಿ ಸರ್ವಾಂತರ್ಯಾಮಿ ವಿಷ.

ನಿಮಗೆ ಖಾತ್ರಿಯಾಗಿರದಿದ್ದರೆ ಕೇಳಿ: ಅಮೆರಿಕಾದಲ್ಲಿ ಮಾರಾಟವಾಗುವ ೫೦೦೦ ಆಹಾರ ಪದಾರ್ಥಗಳ ಪೈಕಿ ೭೦೦ರಲ್ಲಿ ಎಂಡೋಸಲ್ಫಾನ್ ಇರೋದನ್ನು ಆ ದೇಶದ ಆಹಾರ ಮತ್ತು ಔಷಧ ಆಡಳಿತವೇ ಪತ್ತೆ ಹಚ್ಚಿದೆ. ೨೦೦೮ರಲ್ಲಿ ಐರೋಪ್ಯ ಸಮುದಾಯದ ಹಣ್ಣಿನ ಸೂಪರ್ ಮಾರುಕಟ್ಟೆಗಳಲ್ಲಿ ಶೇ. ೯೯ರಷ್ಟು ದ್ರಾಕ್ಷಿಯಲ್ಲಿ ಎಂಡೋಸಲ್ಫಾನ್ ಮತ್ತು ಇತರೆ ಆರು ಬಗೆಯ ವಿಷಗಳಿದ್ದವು. ನ್ಯೂಝೀಲ್ಯಾಂಡಿನ ಚೆರ್ರಿ ಟೊಮ್ಯಾಟೋಗಳಲ್ಲಿ, ಸ್ಟ್ರಾಬೆರ್ರಿಗಳಲ್ಲಿ, ಹಂದಿ ಮಾಂಸದಲ್ಲಿ, ಬಟಾಣಿಯಲ್ಲಿ, ಬೀನ್ಸಿನಲ್ಲಿ….. ಎಂಡೋಸಲ್ಫಾನ್ ಇದೆ.  ಬೆಳೆದ ಮಾನವರನ್ನಷ್ಟೇ ಅಲ್ಲ, ಗರ್ಭದಲ್ಲಿರೋ ಭ್ರೂಣಗಳನ್ನೂ ಎಂಡೋಸಲ್ಫಾನ್ ಬಿಟ್ಟಿಲ್ಲ.
`ಎಷ್ಟು ಜನ ಸತ್ತಿದ್ದಾರೆ ಮಹಾ?’ ಎಂಡೋಸಲ್ಫಾನ್‌ನಿಂದ ಎಂದು ಹಸಿರು ಕ್ರಾಂತಿಯ ಹರಿಕಾರರೆಲ್ಲ ಕೇಳಬಹುದು. ಸಹಜ. ೧೯೮೨ ರಿಂದ ೧೯೯೧ರ ನಡುವೆ ಬ್ರೆಝಿಲ್‌ನಲ್ಲಿ ೩೧೩ ಜನ ಎಂಡೋಸಲ್ಫಾನ್‌ನಿಂದಲೇ ಸತ್ತಿದ್ದಾರೆ. ೨೦೦೮ರಲ್ಲಿ ಜಾರ್ಖಂಡದಲ್ಲಿ ಎಂಡೋಸಲ್ಫಾನ್‌ಯುಕ್ತ ಹಾಲು ಕುಡಿದ ೬೦ ಮಕ್ಕಳು ಅಸ್ವಸ್ಥರಾಗಿ, ಐವರು ಸತ್ತರು.  ಆಫ್ರಿಕಾದಲ್ಲಿ ವಿಷಪೂರಿತವಾಗಿ ಸತ್ತವರಲ್ಲಿ ಅರ್ಧಕ್ಕರ್ಧ ಜನ ಎಂಡೋಸಲ್ಪಾನ್‌ನ ರುದ್ರನರ್ತನಕ್ಕೆ ಬಲಿಯಾದವರು.

ಉಳಿದಂತೆ ಎಂಡೋಸಲ್ಫಾನ್ ಜನರನ್ನು ಸಾವಿನ ಬಳಿ ಒಯ್ಯುತ್ತದೆ ಅಷ್ಟೆ.

ಕೋಟಿಗಟ್ಟಳೆ ಜನರ ಹಸಿವು ಅಡಗುವುದಕ್ಕೆ ಒಂದಷ್ಟು ಜನ ಸತ್ತರೆ ಪರವಾಗಿಲ್ಲ ಎಂಬ ಸ್ಥಿತಿ ಇರೋವಾಗ, ಎಂಡೋಸಲ್ಫಾನ್ ಸುರಿದ ಪರಿಣಾಮವಾಗಿ ಸತ್ತ ಲಕ್ಷಾಂತರ ಮೀನುಗಳಿಗೆ, ವಿವಿಧ ಜಲಚರಗಳಿಗೆ ಯಾರು ಕಣ್ಣೀರು ಹಾಕುತ್ತಾರೆ ಹೇಳಿ?

೨೦೦೮ರ ನವೆಂಬರಿನಲ್ಲಿ ನಡೆದ ಜಾಗತಿಕ ಸಮಾವೇಶದಲ್ಲಿ  ಎಂಡೋಸಲ್ಫಾನನ್ನು ನಿಷೇಧಿಸುವ ಬಗ್ಗೆ ಭಾರತ – ಚೀನಾಗಳು ವಿರೋಧಿಸಿದ್ದರಿಂದ ನಿರ್ಣಯವಾಗಲಿಲ್ಲ. ಈಗ ಈ ನಿರ್ಣಯದ ಚರ್ಚೆ ೨೦೧೦ಕ್ಕೆ ಮುಂದೂಡಲ್ಪಟ್ಟಿದೆ.

————————————
ಎಂಡೋಸಲ್ಫಾನ್ ಬಗ್ಗೆ ದಿ ಎನ್‌ವಿರಾನ್‌ಮೆಂಟಲ್ ಜಸ್ಟಿಸ್ ಫೌಂಡೇಶನ್ ಪ್ರಕಟಿಸಿದ ಪುಸ್ತಕದಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸೌಜನ್ಯ: EJF(2009) End of the Road for Endosulfan: pushing for a global ban on a deadly pesticide. Environmental Justice Foundation, London, UK.
ಈ ಸಂಸ್ಥೆಯ ವೆಬ್‌ಸೈಟಿನಿಂದ ಪುಸ್ತಕವನ್ನು  ಉಚಿತವಾಗಿ ಪಡೆಯಬಹುದು.

Share.

1 Comment

  1. ಬಹಳ ಒಳ್ಳೇ ವಿಷಯ ..ನಿಜವಾಗಿ ಇದ್ದನು ರೈತರು ಹಾಗೂ ಸರ್ಕಾರ ಅರ್ಥ ಮಾಡಿಕೊಂಡು ,ಎನ್ಡೊಸುಲ್ಫನ್ ಕೆಮಿಕಲ್ ನ ನಿಷೇದ ಮಾಡಬೇಕು..ನಿಮಿಂದ ಇಂತಹ ಹೊಸ ಲೇಖನಗಳು ಪ್ರಕಟವಾಗುತಲೆ ಇರಬೇಕು. ವಂದನೆಗಳು.

Leave A Reply Cancel Reply
Exit mobile version