ಅವತ್ತು ಆನ್ ಮ್ಯೋಂಗ್ ಚೋಲ್ ಸೆರೆಮನೆ ನಂಬರ್ ೧೧ಕ್ಕೆ ಬಂದಾಗ ಅದರ ಮೊಗಸಾಲೆಯಲ್ಲಿ ಚಿಂದಿ ಹೊದ್ದ ಪ್ರಾಣಿಗಳು ಓಡಾಡುತ್ತಿರುವುದನ್ನು ಕಂಡ. ಇವರೇನು ಮನುಷ್ಯರೆ ಎಂದು ಅಚ್ಚರಿಪಟ್ಟ. ಅವರೆಲ್ಲ ಸರಾಸರಿ ಐದು ಅಡಿ ದಾಟಿದವರೇ ಅಲ್ಲ; ನಡೆದಾಡುವ ಅಸ್ತಿಪಂಜರಗಳಂತೆ ದೇಹ. ಎದ್ದು ಕಾಣುವ ಮೂಳೆಗಳು. ಚೋಲ್‌ಗೆ ತಲೆಯ ಮೇಲೆ ಸುತ್ತಿಗೆಯಿಂದ ಹೊಡೆದಂತೆ ಆಘಾತವಾಯ್ತಂತೆ. ಅವರ ಮುಖದ ಮೇಲೆಲ್ಲ ಹೊಡೆತ ತಿಂದ ಗೀರುಗಳು, ಗಾಯಗಳು. ಹಲವರಿಗೆ ಕಿವಿಯೇ ಇಲ್ಲ. ಕೆಲವರಿಗೆ ಒಂದೇ ಕಣ್ಣು. ಅಥವಾ ಇದ್ದ ಇನ್ನೊಂದು ಕಣ್ಣೂ ಸೊಟ್ಟ.
ಗುಲಾಗ್ ಎಂದು ರಶ್ಯಾದಲ್ಲಿ ಕರೆಯುವ ಯಾತನಾಶಿಬಿರಗಳು ಉತ್ತರ ಕಒರಿಯಾದಲ್ಲೂ ಹೇರಳವಾಗಿವೆ. ಅದರ ಒಂದು ದೃಶ್ಯ ಇದು. ಇಂಥ ಗುಲಾಗ್‌ಗಳಲ್ಲಿರೋ ಬಂಧಿಗಳಲ್ಲಿ ಶೇ. ೩೦ ಜನರಿಗೆ ಇಂಥ ವಿಕಲಾಂಗತೆ ಸಹಜವಂತೆ. ಶೇ. ೧೦ರಷ್ಟು ಜನರಿಗೆ ಊರುಗೋಲಿಲ್ಲದೆ ನಡೆಯಲಾಗದು.
ಚೋಲ್ ಆ ಗುಲಾಗ್‌ನಲ್ಲಿ ಎಂಟು ವರ್ಷಗಳ ಕಾಲ ಟ್ರಕ್‌ಚಾಲಕನಾಗಿದ್ದ, ಕಾವಲುಗಾರನಾಗಿದ್ದ. ಅಂಥ ಗುಲಾಗ್‌ಗಳಲ್ಲಿ ೨೦ರಿಂದ ೩೦ ವರ್ಷ ಬದುಕಿದರೆ ಹೆಚ್ಚೆಂದು ಚೋಲ್ ಹೇಳುತ್ತಾನೆ. ಬದುಕಿದವರ ಸೊಂಟವಂತೂ ೯೦ ಡಿಗ್ರಿ ಬಾಗಿರುವುದು ಅತಿ ಸಹಜ. ಊಟಕ್ಕಿಲ್ಲದಿದ್ದರೂ ದಿನಾಲೂ ೪೦ ಪೌಂಡ್ ಹೊರೆಯನ್ನು ಬೆನ್ನಿನ ಮೇಲೆ ಹೊತ್ತು ಸಾಗಿಸುವ ಈ ಬಂಧಿಗಳು ೫೦ ವರ್ಷ ದಾಟುವ ಹೊತ್ತಿಗೆ ಸತ್ತೇಹೋಗುತ್ತಾರೆ. ಅದೂ ಒಳ್ಳೆಯದೇನೋ… ಇಂಥ ನರಕಕ್ಕಿಂತ ಸಾವೇ ವಾಸಿ.
ಚೋಲ್ ಕೆಲಸ ಮಾಡುತ್ತಿದ್ದ ಗುಲಾಗ್‌ಗಳು ಸಾಮಾನ್ಯರನ್ನು ಸೆರೆಯಿಟ್ಟ ಸ್ಥಳಗಳಲ್ಲ. ಕ್ವಾನ್‌ಲಿಸೋ ಎಂದು ಕರೆಯುವ ಈ ಗುಲಾಗ್‌ಗಳಲ್ಲಿ ರಾಜಕೀಯ ಖೈದಿಗಳು, ಅವರ ಕುಟುಂಬದ ಸದಸ್ಯರೇ ಹೆಚ್ಚು. ಈ ಗುಲಾಗ್‌ಗಳ ಬಗ್ಗೆ ಲೀ ಸೂನ್ ವೋಕ್ ಎಂಬಾಕೆ ಅನುಭವದಿಂದ ಬರೆದ ‘ಐಸ್ ಆಫ್ ದಿ ಟೈಲ್‌ಲೆಸ್ ಅನಿಮಲ್ಸ್ (ಬಾಲವಿಲ್ಲದ ಪ್ರಾಣಿಗಳ ಕಣ್ಣುಗಳು)’ ಮತ್ತು ಕಾಂಗ್ ಚೋಲ್ ಹ್ವಾನ್ ಬರೆದ ‘ಅಕ್ವೇರಿಯಮ್ಸ್ ಆಫ್ ಪ್ಯೋಂಗ್‌ಯಾಂಗ್: ಟೆನ್ ಯಿಯರ್ಸ್ ಇನ್ ದಿ ನಾರ್ತ್ ಕೊರಿಯನ್ ಗುಲಾಗ್’ ಪುಸ್ತಕಗಳನ್ನು ಓದಿದರೆ ನಿಮ್ಮ ಬೆನ್ನುಹುರಿಯಲ್ಲಿ ಚಳುಕು ಮೂಡಬಹುದು.
ಸಾಮಾನ್ಯವಾಗಿ ಇಂಥ ಗುಲಾಗ್‌ಗಳು ೨೦ ಮೈಲಿ ಉದ್ದವೂ ೧೦-೨೦ ಮೈಲಿ ಅಗಲವೂ ಇರುವ ವಿಸ್ತಾರವಾದ ಸೆರೆಮನೆಗಳು. ಈ ಗುಲಾಗ್‌ಗಳ ಒಳಗೇ ಹಳ್ಳಿಗಳೂ ಇರುತ್ತವೆ. ಎತ್ತರದ ಗೋಡೆಗಳು, ಕಣ್ಗಾವಲು ಗೋಪುರಗಳು, ೧೩ ಅಡಿ ಎತ್ತರದ ಮುಳ್ಳುತಂತಿ ಬೇಲಿಗಳು – ಎಲ್ಲವೂ ಇವೆಂಥ ಉನ್ನತ ಭದ್ರತೆಯ ಸೆರೆಮನೆಗಳು ಎಂಬುದನ್ನು ಸಾಬೀತು ಮಾಡುತ್ತವೆ.
೧೯೮೦ರಲ್ಲಿ ಉತ್ತರ ಕೊರಿಯಾದ ನಾಯಕನಾಗಿ ಕಿಮ್ ಜೊಂಗ್ ಇಲ್ ಆಯ್ಕೆಯಾದ ಕೂಡಲೇ ಈ ಗುಲಾಗ್‌ಗಳಿಗೆ ತಳ್ಳಿದವರ ಸಂಖ್ಯೆಯಲ್ಲಿ ಶೇ. ೮೦ರಷ್ಟು ಹೆಚ್ಚಳವಾಯ್ತು. ತನ್ನ ನಾಯಕತ್ವವನ್ನು ವಿರೋಧಿಸಿದ ಸಾವಿರಾರು ಜನರನ್ನು ಕಿಮ್ ನಿರ್ದಯವಾಗಿ ಗುಲಾಗ್‌ಗೆ ತಳ್ಳಿದ. ಉತ್ತರ ಕೊರಿಯಾದ ಯೋಜಿತ ಆರ್ಥಿಕತೆಗೆ ಈ ಗುಲಾಗ್‌ಗಳೇ ಬೆನ್ನುಮೂಳೆಗಳಂತೆ ಆಧಾರವಾದವು. ಕಮ್ಯುನಿಸ್ಟ್ ಪಾರ್ಟಿಯ ಎಲ್ಲ ನೇತಾರವರ್ಗಕ್ಕೆ ಆಹಾರದಿಂದ ಹಿಡಿದು ಸಕಲ ಸೌಕರ್ಯಗಳನ್ನೂ ನೀಡುವ ಗುಲಾಮರ ಕಾರ್ಖಾನೆಗಳಾಗಿ ಗುಲಾಗ್‌ಗಳು ಈಗಲೂ ಹಗಲಿರುಳೂ ಕಾರ್ಯಾಚರಿಸುತ್ತಿವೆ. ದಕ್ಷಿಣ ಹಾಮ್‌ಗ್ಯೋಂಗ್‌ನಲ್ಲಿರುವ ಕ್ರಮಸಂಖ್ಯೆ ೧೫ರ ಕ್ವಾನ್‌ಲಿಸೋದಲ್ಲಿ ೫೦ ಸಾವಿರ ಜನ ಖೈದಿಗಳು ಜಿಪ್ಸಮ್ ಗಣಿ, ಚಿನ್ನದ ಗಣಿ, ಜವಳಿ ಕಾರ್ಖಾನೆ, ಮೆಕ್ಕೆಜೋಳದ ಭಟ್ಟಿ ಕೇಂದ್ರ, – ಹೀಗೆ ಹಲವು ಕಾಮಗಾರಿಗಳಲ್ಲಿ ನಿರತರು. ಸೈನಿಕರ ಕೋಟುಗಳಿಗೆ ಬೇಕಾದ ಮೊಲದ ಚರ್ಮಕ್ಕಾಗಿ ಮೊಲ ಸಾಕಣೆ ಮಾಡುವವರೂ ಇವರೇ. ಕ್ರಮಸಂಖ್ಯೆ ೨೫ರ ಕ್ವಾನ್‌ಲಿಸೋದಲ್ಲಿ ರೆಫ್ರಿಜರೇಟರ್‌ಗಳು, ಸೀಗಲ್ ಬ್ರಾಂಡ್ ಬೈಸಿಕಲ್‌ಗಳು ತಯಾರಾಗುತ್ತವೆ. ಕ್ರಮಸಂಖ್ಯೆ ೧೪ ಮತ್ತು ೨೨ರ ಕ್ವಾನ್‌ಲಿಸೋಗಳಲ್ಲಿ ಪ್ರತಿ ವರ್ಷ ಒಂದು ಲಕ್ಷ ಟನ್ ಮಾಂಸ ಸಿದ್ಧವಾಗಿ ಕಮ್ಯುನಿಸ್ಟ್ ನಾಯಕರ ಹೋಟೆಲುಗಳ ಹೊಟ್ಟೆ ಸೇರುತ್ತದೆ. ಕಾರ್ಮಿಕ ಮರುಶಿಕ್ಷಣ ಶಿಬಿರ (ಕ್ಯೋವಾಸೋ) ಕ್ರಮಸಂಖ್ಯೆ ೧ರಲ್ಲಿ (ಮರುಶಿಕ್ಷಣ ಎಂದರೆ ಬೇರೇನೂ ಅಲ್ಲ, ಇನ್ನೊಂದು ಥರದ ಸೆರೆಮನೆ ಅಷ್ಟೆ) ಆರು ಸಾವಿರ ಖೈದಿಗಳು ಎಡಬಿಡದೆ ಶ್ರಮವಹಿಸಿ ಸೈನಿಕರ ಸಮವಸ್ತ್ರ ತಯಾರಿಸುತ್ತಾರೆ;ಅವರು ನೇಯ್ದ ಸ್ವೆಟರ್‌ಗಳು ಜಪಾನಿಗೆ ರಫ್ತಾಗುತ್ತವೆ. ಇವರೆಲ್ಲ ಹೊಲಿಗೆ ಯಂತ್ರದ ಕೆಳಗೇ ಮಲಗುತ್ತಾರೆ. ತಪ್ಪು ಮಾಡಿದರೆ ಶಿಕ್ಷೆ; ಮರಣ ಕಾದಿಟ್ಟ ಬುತ್ತಿ.
ಐವತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಗುಲಾಗ್‌ಗಳಲ್ಲಿ ಈವರೆಗೆ ಕನಿಷ್ಟ ೧೦ ಲಕ್ಷ ಜನ ಸತ್ತಿರಬಹುದು ಎಂಬುದು ಒಂದು ಅಂದಾಜು. ೧೯೫೮-೬೦ರ ಅವಧಿಯಲ್ಲಿ ಚೀನಾ ಪರವಾಗಿದ್ದರು ಎನ್ನಲಾದ ೯೦೦೦ ಪಕ್ಷದ ಕಾರ್ಯಕರ್ತರನ್ನು ಕೊಂದ ಕಿಮ್ ಸಾವಿರಾರು ಜನರನ್ನು ಗುಲಾಗ್‌ಗೆ ಕಳಿಸಿದ. ಅರೆ, ಉತ್ತರ ಕೊರಿಯಾಗೆ ಚೀನಾ ಬೆಂಬಲ ನೀಡಿದೆಯಲ್ಲ ? ಹೌದು. ಆದರೆ ಚೀನಾದ ಹೆಸರನ್ನೂ ತನ್ನ ಪ್ರಜೆಗಳು ಉಸುರಬಾರದು ಎಂಬುದು ಕಿಮ್‌ನ ವಾದ. ಹಾಗೇ ೧೯೬೭ರಲ್ಲಿ ಮತ್ತೆ ಸರ್ವೆ ನಡೆಸಿದ ಕಿಮ್ ೭೦ ಸಾವಿರ ಜನರನ್ನು ಗುಲಾಗ್‌ಗೆ ತಳ್ಳಿದ.
ಉತ್ತರ ಕೊರಿಯಾದ ಎಲ್ಲ ಪ್ರಜೆಗಳೂ ಮೂರು ವರ್ಗಕ್ಕೆ ಸೇರಿದವರು: ಕೋರ್ ಕ್ಲಾಸ್ (ಇವರು ಕಿಮ್‌ನ ಅಪ್ಪಟ ನಿಷ್ಠಾವಂತರು); ವೇವರಿಂಗ್ ಕ್ಲಾಸ್ (ಇವರು ಸದಾ ಗೂಢಚರ್ಯೆಗೆ ಒಳಗಾದವರು); ಹೋಸ್ಟೈಲ್ ಕ್ಲಾಸ್ (ಇವರು ಶತ್ರುಗಳು ಎಂದೇ ತೀರ್ಮಾನವಾಗಿದೆ). ಕೋರ್ ಕ್ಲಾಸ್‌ಗೆ ಸೇರಿದವರ ಸಂಖ್ಯೆ ಶೇ. ೩೦. ಇನ್ನು ಇವರಿಗೂ ಮೇಲ್ಪಟ್ಟು ಎಲೈಟ್‌ಕ್ಲಾಸ್ ಇದೆ. ಅವರೆಲ್ಲರೂ ಕಿಮ್‌ನ ಅರಮನೆಯ ಸೌಭಾಗ್ಯದಲ್ಲಿ ಇರುವವರು. ಅವರ ಸಂಖ್ಯೆ ಎರಡು ಲಕ್ಷದಷ್ಟು. ಇಡೀ ದೇಶದ ಬಹುತೇಕ ಸಂಪನ್ಮೂಲ, ಆಹಾರ – ಎಲ್ಲವೂ ಈ ಎರಡು ಲಕ್ಷಕ್ಕೇ ಖರ್ಚಾಗುತ್ತದೆ.
ಈ ಗುಲಾಗ್‌ಗಳಲ್ಲಿ ಕಎಲಸ ಮಾಡುವ ಸೈನಿಕರು ಒಂದು ಸಾಸಿವೆ ಕಾಳಿನಷ್ಟೂ ಕರುಣೆ, ಮಾನವೀಯತೆ ಹೊಂದಬಾರದೆಂದು ಅವರಿಗೆಲ್ಲ ವಿಶೇಷ ತರಬೇತಿ ನೀಡಲಾಗಿದೆ. ಹೊಡೆತ ಮತ್ತು ವಧೆ ಕೈಗೊಂಡ ಜವಾನರಿಗೆ ಶಿಕ್ಷೆಯಿಲ್ಲ; ಬದಲಿಗೆ ಭಕ್ಷೀಸು.
ಟ್ರಕ್ಕಿನಲ್ಲಿ ಮನುಷ್ಯರನ್ನು ತುಂಬಿದ ಬಾಕ್ಸ್‌ಗಳು
೨೦೦೪ರ ಈ ಘಟನೆ ಕೇಳಿ. ಡೈಲಿ ಸೈಟ್ ಕ್ರಮಸಂಖ್ಯೆ ೨ ಎಂದು ಕರೆಯುವ ಸ್ಥಳದಲ್ಲಿ ಒಂದು ರಾಸಾಯನಿಕ ಸ್ಥಾವರವಿದೆ. ಅದರ ಹತ್ತಿರ ಹೋಗುವುದಕ್ಕೇ ಆಗದಂಥ ಕೆಟ್ಟ ವಾಸನೆ ಹರಡಿರುತ್ತದೆ.
‘ಒಮ್ಮೆ ನಾನು ಆ ಘಟಕದ ಪವರ್ ಕಂಟ್ರೋಲ್ ವ್ಯವಸ್ಥೆಯ ಮೇಲುಸ್ತುವಾರಿಗೆ ಹೋಗಿದ್ದೆ. ಆಗ ಫ್ರೀಜರ್ ಟ್ರಕ್‌ನಂತೆ ಕಾಣಿಸಿದ ಒಂದು ಟ್ರಕ್ ಬರ್‍ತಾ ಇತ್ತು. ಅಲ್ಲಿದ್ದ ಮ್ಯಾನೇಜರನ ಮುಖದಲ್ಲಿ ಎಂಥದ್ದೋ ವಿಚಿತ್ರ ಭಾವ. ಆ ಸುರಂಗದ ಬಾಗಿಲು ತೆರೆಯಿತು. ಟ್ರಕ್ಕು ಮರೆಯಾಯಿತು. ಆ ಕ್ಷಣದಲ್ಲಿ ನನಗೆ ಒಂದು ದೃಶ್ಯ ಕಂಡುಬಂತು. ಟ್ರಕ್ಕಿನಲ್ಲಿ ಎರಡು ಅಲ್ಯೂಮಿನಿಯಮ್ ಬಾಕ್ಸ್‌ಗಳಿದ್ದವು. ಅವುಗಳಿಗೆ ಬಾಗಿಲಿನಂಥ ಮುಚ್ಚಳಗಳಿದ್ದವು. ಆ ಮುಚ್ಚಳಗಳಿಗೆ ಕಿಟಕಿಗಳಿದ್ದವು. ಎರಡೂ ಪೆಟ್ಟಿಗೆಗಳ ಒಳಗೆ ಮನುಷ್ಯರ ಕೈಗಳು ಅಲುಗಾಡುತ್ತಿದ್ದುದನ್ನು ನಾನು ಕಣ್ಣಾರೆ ಕಂಡೆ’ ಎಂದು ಅಲ್ಲಿದ್ದ ಒಬ್ಬ ಇಂಜಿನಿಯರ್ ಬರೆದಿದ್ದನ್ನು ಕಿಮ್ ಸಾಂಗ್ ಹುನ್ ಎಂಬ ವಿಶ್ವಸಂಸ್ಥೆ ಅಧಿಕಾರಿ ಸಂಗ್ರಹಿಸಿದ್ದಾರೆ.
ಕೊನೆಗೆ ನೋಡಿದರೆ, ತಿಂಗಳಿಗೆ ಎರಡು ಸಲ ಇಂಥ ಟ್ರಕ್ಕುಗಳು ಬರುತ್ತವೆ. ರಾಸಾಯನಿಕ ಶಸ್ತ್ರಾಸ್ತ್ರಗಳಿಗೆ ದ್ರವ ಅನಿಲವನ್ನು ಬಳಸುವುದಕ್ಕೆ ಸಜೀವ ಪ್ರಯೋಗ ಮಾಡುವುದಕ್ಕೆಂದೇ ಈ ಖೈದಿಗಳನ್ನು ಪೆಟ್ಟಿಗೆಗಳಲ್ಲಿ ತರಲಾಗುತ್ತದೆ. ಉತ್ತರ ಕೊರಿಯಾದಲ್ಲಿ ಸಾರಿನ್, ಮಸ್ಟರ್ಡ್ ಗ್ಯಾಸ್‌ನಂಥ ಮಾರಕ ರಾಸಾಯನಿಕಗಳನ್ನು ತಯಾರಿಸಲು ಬೇಕಾದ ಕನಿಷ್ಠ ಐದು ಸಾವಿರ ಟನ್‌ನಷ್ಟು ರಾಸಾಯನಿಕ ಇದೆ ಎಂಬುದು ದಕ್ಷಿಣ ಕೊರಿಯಾದ ಅಂದಾಜು.