ಹೆಗ್ಗೋಡು ಮನು ಆ ವಿಸಿಟಿಂಗ್‌ ಕಾರ್ಡನ್ನು ಪೋಸ್ಟ್‌ ಮಾಡದೇ ಇದ್ದಿದ್ದರೆ ನಾನು ನನ್ನ ಬದುಕಿನ ಅತ್ಯಂತ ಇಂಟೆರೆಸ್ಟಿಂಗ್‌ ಕೆಲಸದ ಈ ಬ್ಲಾಗ್‌ ಬರೆಯುತ್ತಿರಲಿಲ್ಲ! ಏನೂ ಬರೆಯುವುದು, ಓದುವುದು ಬೇಡ ಎಂಬ ಮೂಡಿನಲ್ಲೇ ದಿನ ಕಳೆಯುತ್ತಿರುವ ನನಗೆ ಕೆಲವರಿಗಾದರೂ ಮಾಹಿತಿ ಹಂಚಿಕೊಳ್ಳಲು ಒಂದಷ್ಟು ಬರೆಯೋಣ ಅನ್ನಿಸಿ….

1999-2001ರ ಆ ದಿನಗಳನ್ನು ಜನ ಡಾಟ್‌ಕಾಮ್‌ ಯುಗ ಎಂದು ಕರೆಯುತ್ತಿದ್ದರು. ಎಲ್ಲೆಂದರದಲ್ಲಿ ಹೊಸ ವೆಬ್‌ಸೈಟ್‌ ಹುಟ್ಟಿಕೊಳ್ಳುತ್ತಿತ್ತು. ಪ್ರತಿಯೊಂದೂ ವೆಬ್‌ಸೈಟ್‌ ಆರಂಭವಾದಾಗ ಒಂದು ಕ್ರಾಂತಿಯೇ ಆಗಿಬಿಟ್ಟಿತು ಎಂಬ ಚರ್ಚೆ ಮಾಧ್ಯಮದ ಪಡಸಾಲೆಗಳಲ್ಲಿ ಕೇಳಿ ಬರುತ್ತಿತ್ತು. ಅಷ್ಟು ಹೊತ್ತಿಗೆ ಕಂಪ್ಯೂಟರ್‌ ಖರೀದಿಸಿ, ಸ್ವತಃ ನಾನೇ ಮೋಡೆಮ್‌ (೧೪.೪ ಕೆಬಿಪಿಎಸ್‌ ವೇಗದ್ದು!!!!) ಜೋಡಿಸಿ, ಯಾಹೂ ವೆಬ್‌ಸೈಟ್‌ ತೆರೆಯುತ್ತಿದ್ದೆ; ಅಷ್ಟಕ್ಕೇ ನನ್ನ ಪತ್ರಕರ್ತ ಮಿತ್ರರು ಕಂಪ್ಯೂಟರ್‌ ಪರಿಣತ ಎಂದು ಗೌರವಿಸಿ ಹೋದಾಗೆಲ್ಲ ಚಾ ಕೊಡುತ್ತಿದ್ದರು.

ಆಗ ನಾಗಸಂದ್ರ ಸರ್ಕಲ್‌ ಬಳಿ ಈಗಿನ ಸುವಿಖ್ಯಾತರಾದ ಪರಮೇಶ್ವರ ಗುಂಡ್ಕಲ್, ಗಣೇಶ ಯಲ್ಲಾಪುರ ಮತ್ತು ವಿನಾಯಕ ಭಟ್‌ ತದ್ದಲಸೆ (ಭವಿತ) ಒಂದು ರೂಮು ಮಾಡ್ಕೊಂಡಿದ್ದರು. ನಾನು ಮನೆಯಲ್ಲಿ ಕೂರಲಾಗದೆ ಅವರ ರೂಮಿಗೆ ಆಗಾಗ ಹೋಗಿ ಹರಟೆ ಹೊಡೆಯುತ್ತಿದ್ದೆ. ಒಂದು ದಿನ ಪರಮೇಶ್ ‘ಅಲ್ಲಾ ಸರ್‍, ನೀವು ಡಾಟ್‌ಕಾಂ ಯುಗದಲ್ಲಿಯೂ ಯಾಕೆ ಮನೇಲೇ ಇರಬೇಕು? ನಿಮಗೆ ಆ ರಂಗದಲ್ಲಿ ಕೆಲಸ ಮಾಡೋ ಅರ್ಹತೆ ಇಲ್ವೆ?’ ಎಂದು ಕಿಚಾಯಿಸಿದ. ಅದನ್ನೇ ಚಾಲೆಂಜ್‌ ಆಗಿ ತೆಗೆದುಕೊಂಡ ನಾನು “ಇನ್ನೊಂದು ತಿಂಗಳಲ್ಲಿ ಡಾಟ್‌ಕಾಮ್‌ ರಂಗವನ್ನು ಪ್ರವೇಶಿಸಿ ಕ್ರಾಂತಿ ಮಾಡುತ್ತೇನೆ” ಎಂದು ಅಲ್ಲೇ ಚಾ ಮೇಲೆ ಪ್ರಮಾಣ ಮಾಡಿ ಘೋಷಿಸಿದೆ!

ನಾನು ಹಾಗೆ ಚಾಲೆಂಜ್‌ ಸ್ವೀಕರಿಸೋದಕ್ಕೂ, ಆನ್‌ಲೈನ್ ಬೆಂಗಳೂರು ಎಂಬ (ಕೊಮ್ಯಾಟ್‌ ಸಂಸ್ಥೆ) ಡಾಟ್‌ಕಾಮ್‌ ನನ್ನನ್ನು ಕೆಲಸಕ್ಕೆ ಕರೆಯೋದಕ್ಕೂ ಸರಿ ಹೋಯ್ತು. ಕ್ರೆಸೆಂಟ್ ರಸ್ತೆಯಲ್ಲಿದ್ದ ಆ ಡಾಟ್‌ಕಾಮ್‌ ಆಫೀಸಿನಲ್ಲಿ ನಾನು ೧೪ ಸಾವಿರ ರೂ. ಸಂಬಳದ ಕೆಲಸಕ್ಕೆ ಸೇರಿಬಿಟ್ಟೆ. ಎಲ್ಲೆಡೆಯೂ ಹದಿಹರೆಯದ ಯುವಕ-ಯುವತಿಯರು. ನಾನೊಬ್ಬನೇ ೩೫ರ ಹರೆಯದ ಮುದುಕ. ಆದ್ರೂ ಪಾಪ, ಅಲ್ಲಿರೋರೆಲ್ಲ ನನಗೆ ವಿಶೇಷ ಗೌರವ ಕೊಟ್ಟರು. (ಅಲ್ಲೇ ನನಗೆ ಮಾಸ್ಟರ್‌ ಮಂಜುನಾಥ್‌ ಕೂಡಾ ಪರಿಚಯವಾಯ್ತು ಅನ್ನಿ). ಆದರೆ ಕೆಲಸ? ಅದೊಂದೇ ಇರಲಿಲ್ಲ. ನಾನು ಎರಡು ತಿಂಗಳು ಸಂಬಳ ತಗೊಂಡ ಮೇಲೆ ಹೇಳಿಬಿಟ್ಟೆ: ದಯವಿಟ್ಟು ಕೆಲಸಾನೂ ಕೊಡಿ. ಇಲ್ಲಾಂದ್ರೆ ಕೆಲಸ ಬಿಡುವೆ. ಬಿಟ್ಟೆ ಕೂಡಾ.

ಅದಾಗಿ ಕೆಲವೇ ದಿನಗಳಲ್ಲಿ ಆಪ್ಟ್‌ ಟಿವಿ ಎಂಬ ಉದಯ ನ್ಯೂಸ್‌ ಮಾಡುತ್ತಿದ್ದ ಸಂಸ್ಥೆಗೆ ಸೇರಿಕೊಂಡೆ. ಇಲ್ಲಿಂದ ಸುದ್ದಿಗಳನ್ನು ಅಲ್ಲಿಗೆ ಈಮೈಲ್‌ ಮೂಲಕ ಕಳಿಸಬೇಕು. ದುರದೃಷ್ಟವಶಾತ್‌ ಆ ಕಾಲದಲ್ಲೇ ಡಾ|| ರಾಜ್‌ ಅಪಹರಣ ಪ್ರಕರಣ ನಡೆಯಿತು! ಅದನ್ನೆಲ್ಲ ಕ್ಷಣಕ್ಷಣವೂ ವರದಿ ಮಾಡಲು ನಾನೇನು ಈ ಕಾಲದ ವರದಿಗಾರನೆ? ಈ ಇಲಿಪಂದ್ಯದ ಪತ್ರಿಕೋದ್ಯಮ ಬೇಡವೇ ಬೇಡ ಅಂತ ಅದನ್ನೂ ಬಿಟ್ಟೆ.

ಅಷ್ಟುಹೊತ್ತಿಗೆ ಏಸಿಯಾನೆಟ್‌ ಸಂಸ್ಥೇಯವರು ಒಂದು ಭಯಂಕರ ಡಾಟ್‌ಕಾಮ್‌ ಶುರು ಮಾಡುತ್ತಿದ್ದಾರೆಂದೂ, ಅದಕ್ಕಾಗಿ ಕೆಲವರು ಗೌಪ್ಯವಾಗಿ ಅರ್ಜಿ ಹಾಕಿದ್ದಾರೆಂದೂ ನಾರಾಯಣ ಅಮ್ಮಚ್ಚಿ ತಿಳಿಸಿ, ನನಗೂ ಅರ್ಜಿ ಹಾಕಲು ಸೂಚಿಸಿದ. ನಾನು ಉಪಾಯ ಮಾಡಿ ಅವನಿಂದ ಡಾಟ್‌ಕಾಮ್‌ ಮುಖ್ಯಸ್ಥನ ಮೊಬೈಲ್‌ ಸಂಖ್ಯೆ ಪಡೆದೆ. ಬೆಳಗ್ಗೆ ಎದ್ದು ಚಾ ಕುಡಿದು ಆರಾಮಾಗಿ ಅವನಿಗೆ ನನ್ನ ಲ್ಯಾಂಡ್‌ಲೈನಿನಿಂದ ಒಂದು ಮಿಸ್‌ ಕಾಲ್‌ ಕೊಟ್ಟೆ. ಫೋನ್‌ ನೋಡುತ್ತ ಕೂತೆ.

ಐದೇ ನಿಮಿಷಗಳಲ್ಲಿ ಕರೆ ಬಂತಲ್ಲ! ನನ್ನ ಪರಿಚಯ ಹೇಳಿಕೊಂಡು ಸಂದರ್ಶನಕ್ಕೆ ಹಾಜರಾದೆ! ಲಿ ಮೆರಿಡಿಯನ್‌ನಲ್ಲಿ ಸಂದರ್ಶನ. ಡಾಟ್‌ಕಾಮ್‌ ಸಿಇಓ ಅಲ್ಲದೆ ಇನ್ನೊಬ್ಬಾಕೆಯೂ ಅಲ್ಲಿದ್ದರು. ಇಬ್ಬರಿಗೂ ನನ್ನ ಪ್ರೊಫೈಲ್‌ ನೋಡಿ ತುಂಬಾ ಸಂತೋಷವಾಯ್ತು. ಸಂಬಳ ಎಷ್ಟು ನಿರೀಕ್ಷೆ ಮಾಡ್ತೀರಿ ಎಂದು ಕೇಳಿದರು.ನಾನು ಮೊದಲೇ ನನ್ನ ಆಪ್ತ ರಂಗನಾಥರ ಬಳಿ ಚರ್ಚಿಸಿಕೊಂಡಿದ್ದ ಹಾಗೆ ’೪೦ ಸಾವಿರ ಕೊಡಿ, ಪರ್ವಾಗಿಲ್ಲ’ ಎಂದೆ. ಅವರು ‘ಸರ್‌ ಈಗ ೨೫ರಿಂದ ಶುರು ಮಾಡ್ತೀವಿ, ಆಮೇಲೆ ೫೦ ಕೊಡ್ತೀವಿ. ಖಂಡಿತ ಬನ್ನಿ’ ಎಂದರು! ಹೀಗೆ ಆ ಕಾಲದಲ್ಲಿ ಅತಿಹೆಚ್ಚು ಸಂಬಳ ಪಡೆದ ಡಾಟ್‌ಕಾಮ್‌ ಪತ್ರಕರ್ತನಾಗಿಬಿಟ್ಟೆ. ನನ್ನ ಜೊತೆಗೆ ರಾಜು ಅಡಕಳ್ಳಿಯೂ ಸೇರಿಕೊಂಡ.  

ಕನಿಂಗ್‌ ಹ್ಯಾಮ್‌ ರಸ್ತೆಯಲ್ಲಿ ಪುಟ್ಟ ಕಚೇರಿ. ಅದಕ್ಕೆ ಬೇಕಾದ ಕಂಪ್ಯೂಟರ್‍ಗಳ ಕಾನ್‌ಫಿಗರೇಶನ್‌ಗಳನ್ನೂ ನಾನೇ ರೂಪಿಸಿದೆ. ಕೆಲಸ ಏನು ಎಂದಿದ್ದಕ್ಕೆ ‘ನಮ್ಮದು ಪೇಮೆಂಟ್‌ ಗೇಟ್‌ವೇ ಪ್ರಾಜೆಕ್ಟು. ಆದರೆ ಅದನ್ನು ಪ್ರಚುರಗೊಳಿಸಲು ದಕ್ಷಿಣ ಭಾರತದ ಭಾಷೆಗಳಲ್ಲಿ ಉತ್ತಮ ಕಂಟೆಂಟ್‌ ಹಾಕಬೇಕಿದೆ’ ಎಂದು ಉತ್ತರ ಬಂತು. ಅಲ್ಲದೆ ಈ ಪ್ರಾಜೆಕ್ಟು ೧೨೮ ಬಿಟ್‌ ಎಸ್‌ಎಸ್‌ಎಲ್‌ ಎನ್‌ಕ್ರಿಪ್ಶನ್ ಮೂಲಕ ಕಾರ್ಯಾಚರಿಸುತ್ತದೆ ಎಂಬ ವಿಚಿತ್ರ ಸುದ್ದಿಯೂ ಸಿಕ್ಕಿತು.

ಮನೆಗೆ ಬಂದವನೇ ಈ ೧೨೮ ಬಿಟ್‌ ಎಂದರೇನು ಎಂದು ಹುಡುಕಿ ತೆಗೆದೆ. ಸುಮಾರು ೫೦೦ ಪುಟದಷ್ಟು ಮಾಹಿತಿ ಪ್ರಿಂಟ್‌ ಹಾಕಿದೆ (ನನ್ನ ಹತ್ರ ಆಗಲೇ ೫ ಎಂಪಿ ಲೇಸರ್‍ ಪ್ರಿಂಟರ್‍ ಇತ್ತು. ಈಗಲೂ ಅದು ಇದೆ!!). ಸ್ಪೈರಲ್‌ ಬೈಂಡ್‌ ಮಾಡಿ, ಓದಿ,  ಮರುದಿನ ಮೀಟಿಂಗಿಗೆ ತಗೊಂಡು ಹೋದೆ. ನಮ್ಮ ಕಚೇರಿಯ ಮುಖ್ಯಸ್ಥೆ (ತಮಿಳು) ತಬ್ಬಿಬ್ಬಾದಳು! ಇದೆಲ್ಲ ಪ್ರಾಜೆಕ್ಟಿಗೆ ಬೇಕಾಗಲ್ಲ; ನಾವು ಸಾಹಿತ್ಯ, ಸಂಸ್ಕೃತಿ ಬಗ್ಗೆ ಬರೆದ್ರೆ ಸಾಕು ಎಂದಳು. ಆಫ್‌ಕೋರ್ಸ್‌, ಕನ್ನಡ ಸಾಹಿತ್ಯದ ಗಂಧಗಾಳಿಯೂ ಆಕೆಗಿರಲಿಲ್ಲ. ಅಂತೂ ಆ ಮೀಟಿಂಗಲ್ಲಿ ಚೆನ್ನಾಗಿ ನೆನಪಿರೋದು ಅಂದ್ರೆ ಕೆಳಗಡೆ ಪಿಡಜಾ ಹಟ್‌ನಿಂದ ತಂದ ಬಿಸಿಬಿಸಿ ಪಿಡಜಾ ಮಾತ್ರಚೆನ್ನಾಗಿ ಕತ್ತರಿಸಿದೆವು.  

ಸರಿ, ಯೋಜನೆಗಾಗಿ ಕಂಟೆಂಟ್‌ ಸಂಗ್ರಹ ಮಾಡಬೇಕಲ್ಲ? ಈ ಹಿನ್ನೆಲೆಯಲ್ಲಿ ಒಂದಷ್ಟು ಲೇಖನಗಳನ್ನು ಬರೆದಿದ್ದಾಯಿತು. ಕೆಲವು ಕನ್ನಡ ಕಣ್ಮಣಿಗಳ ವೆಬ್‌ ಪುಟಗಳನ್ನೂ ಮಾಡಬೇಕು ಎಂಬ ಉಮೇದಿನಲ್ಲಿ ಹಲವಾರು ಕನ್ನಡ ಕಲಾವಿದರನ್ನು ಸಂಪರ್ಕಿಸಿದೆವು. ಆ ಕಾಲದಲ್ಲೇ ನಾನು ಧಾರವಾಡಕ್ಕೆ ಹೋಗಿ ರುದ್ರವೀಣೆಯ ಪಂಡಿತ್‌ ಬಿಂದು ಮಾಧವ ಪಾಠಕ್‌, ಸಿತಾರಿನ ಉಸ್ತಾದ್‌ ಬಾಲೇಖಾನ್‌ ಮತ್ತು ಹಿಂದುಸ್ತಾನಿ ಸಂಗೀತದ ಧ್ರುವತಾರೆ ಗಂಗೂಬಾಯಿ ಹಾನಗಲ್ಲರ ಮನೆಗೆ ಹೋಗಿದ್ದು. ಹಿಂದುಸ್ತಾನಿ ಸಂಗೀತದ ಹುಚ್ಚು ಅಲ್ಲಿಂದಲೇ ಶುರುವಾಯ್ತು ಅನ್ನಿ.

ಹೀಗೆ ಒಂದೆರಡು ತಿಂಗಳು ಕೆಲಸ ನಡೆಯಿತು. ಸಂತೋಷಕುಮಾರ ಗುಲ್ವಾಡಿ, ಪಂಡಿತ ಪರಮೇಶ್ವರ ಭಟ್ ಆದಿಯಾಗಿ ಹಲವು ಸಿನೆಮಾ ನಟರು, ಕಲಾವಿದರು ನಮ್ಮ ಕಚೇರಿಗೆ ಬಂದು ಮಾತುಕತೆ ನಡೆಸಿದ್ದರು. ಈ ಡಾಟ್‌ಕಾಮ್‌ ಎಂದರೆ ಏನೋ ಕ್ರಾಂತಿ ಎಂಬ ಭ್ರಮೆಯನ್ನು ನಾವು ಅವರಲ್ಲಿ ಮೂಡಿಸಹೊರಟಿದ್ದೆವು.

ಮಾರ್ಕೆಂಟಿಂಗ್‌ ತಂಡವಾಗಿ ಇಬ್ಬರನ್ನು ಸೇರಿಸಿಕೊಳ್ಳಲಾಯಿತು (ಅವರಿಬ್ಬರೂ ಆಮೇಲೆ ಮದುವೆಯಾಗಿ ಮಿಯಾಮಿಗೆ ಹೋಗಿ ಸೆಟಲ್‌ ಆದರು). ಒಮ್ಮೆ ನಾನು ನನ್ನ ಪತ್ರಕರ್ತ ಮಿತ್ರನನ್ನು ಸಹಕಾರ ಕೇಳಲೆಂದೇ ಭೇಟಿ ಮಾಡಬೇಕಿತ್ತು. ಅದಕ್ಕೆಂದೇ ಸಂಜೆ ಹೊರಟಿದ್ದೆ. ಈ ತಮಿಳು ಮುಖ್ಯಸ್ಥೆಗೆ ಅದೇನು ಅನ್ನಿಸಿತೋ, ಏನು ಕಚೇರಿ ಸಮಯ ಆಗೇ ಇಲ್ಲ, ಹೊರಟಿದೀಯ ಅಂದುಬಿಟ್ಟಳು.

ಮರುದಿನ ನನ್ನ ರಾಜೀನಾಮೆ ಪತ್ರ ಪ್ರಿಂಟೌಟ್‌ ತೆಗೆದುಕೊಂಡೇ ಹೋಗಿದ್ದೆ. ಆಕೆ ಬಂದ ಕೂಡಲೇ ರಾಜೀನಾಮೆ ಕೊಟ್ಟು, ನನ್ನೆಲ್ಲ ಪುಸ್ತಕಗಳನ್ನು ಎತ್ತಾಕೊಂಡು ಹೊರಬಂದೆ.

ವಾಸ್ತವದಲ್ಲಿ ಈ ಪ್ರಾಜೆಕ್ಟ್‌ ತುಂಬಾ ದಿನ ಇರಲ್ಲ ಎಂದು ನನಗೆ ಅವಳ ಮತ್ತು ಮುಂಬಯಿ ಮುಖ್ಯ ಕಚೇರಿಯ ವರ್ತನೆಯಿಂದಲೇ ಅನ್ನಿಸಿತ್ತು. ಬಾಯಿಬಿಟ್ಟು ಹೇಳಲಿಲ್ಲ. ಆಮೇಲೆ ಆ ಕಂಪನಿಯ  ಸಿಇಓನಿಂದ ಹಿಡಿದು ಎಲ್ಲರೂ ಚೆನ್ನಾಗಿ ವಿಮಾನಯಾನ, ಐಷಾರಾಮಿ ಹೋಟೆಲ್‌ ವಾಸ ಎಂದು ಕಂಪೆನಿಗೆ ಖರ್ಚು ಹಾಕಿಸಿದರೆಂದೂ, ಸಿಬ್ಬಂದಿಗೆ ಸಂಬಳ ಕೊಡದೆ ಸತಾಯಿಸಿದರೆಂದೂ ಆಮೇಲೆ ತಿಳಿದುಬಂತು.

ಇಷ್ಟಾಗಿ ಈ ಕೆಲಸವನ್ನು ತಾನು ಕೊಡಿಸಿದ್ದೆಂದು ಇನ್ನೊಬ್ಬ ಪತ್ರಕರ್ತನು ಮತ್ತೊಬ್ಬನ ಬಳಿ ಹೇಳಿದ್ದು ಇತ್ಯಾದಿ ಬಾಕ್ಸ್‌ ಐಟಂಗಳನ್ನು ಎಷ್ಟು ಬೇಕಾದ್ರೂ ಬರೀಬಹುದು. ಸದ್ಯಕ್ಕೆ ಇಷ್ಟು ಸಾಕು.

ಅನಂತರ ಕೆಲವೇ ದಿನಗಳಲ್ಲಿ ನನಗೆ ೪೦ ಸಾವಿರ ಸಂಬಳದ ಇನ್ನೊಂದು ಡಾಟ್‌ಕಾಮ್‌ ಕೆಲಸ (ಟಿಎಂಜಿ ಟಿವಿ ಚಾನೆಲ್‌) ಸಿಕ್ಕಿದ್ದು ಇನ್ನೊಂದು ಇತಿಹಾಸ! ಅದರ ವಿಸಿಟಿಂಗ್‌ ಕಾರ್ಡನ್ನು ಯಾರಾದ್ರೂ ಇಲ್ಲಿ ಹಾಕಿದರೆ ಬರೆಯಬಹುದೇನೋ! ಆದ್ರೆ ಆ ದಿನಗಳ ಬಗ್ಗೆ ನಾನು ‘ನಾಯಿಬೆಲ್ಟು’ ಎಂಬ ಕತೆಯನ್ನೇ ಬರೆದಿದ್ದೇನೆ. ಬಿಡುವಿದ್ದರೆ ಓದಿ.

Share.
Leave A Reply Cancel Reply
Exit mobile version