ಕೆಲವು ತಿಂಗಳುಗಳ ಹಿಂದೆ ಯೂಟ್ಯೂಬ್‌ನಲ್ಲಿ ಹೀಗೇ ಹುಡುಕಾಡುತ್ತಿದ್ದಾಗ ಆಲಿಯಾ ರಶೀದ್ ಎಂಬ ಪಾಕಿಸ್ತಾನಿ ಗಾಯಕಿಯ ಧ್ರುಪದ್ ಶೈಲಿಯ ಹಿಂದುಸ್ತಾನಿ ಸಂಗೀತದ ವಿಡಿಯೋ ಸಿಕ್ಕಿತು. `ಆಹಾ ಎಂಥ ಪ್ರತಿಭೆ!’ ಎಂದು ಅಚ್ಚರಿಪಡುತ್ತಿದ್ದಂತೆ ಗೊತ್ತಾಗಿದ್ದು, ಆಕೆ ಕಲಿತಿದ್ದು ಭಾರತದಲ್ಲಿ, ಗುಂಡೇಚಾ ಸೋದರರಿಂದ! ಇನ್ನೂ ವಿಶೇಷ ಎಂದರೆ ಆಕೆ ತನ್ನ ಅಂಧತ್ವವನ್ನು ಗೆದ್ದು ಸಂಗೀತವನ್ನು ಬದುಕಿನ ಮುಖ್ಯ ಭಾಗವಾಗಿ ಸ್ವೀಕರಿಸಿದ್ದು. ಆಲಿಯಾ ರಶೀದ್ ಈಗ ಪಾಕಿಸ್ತಾನದ ಮೊದಲ ಮತ್ತು ಏಕೈಕ ಧ್ರುಪದ್ ಗಾಯಕಿ!! ಒಳಗಣ್ಣಿನ ಅಧಿನಾಯಕಿ.
ಹಿಂದುಸ್ತಾನಿ ಸಂಗೀತದಲ್ಲಿ ಧ್ರುಪದ್ ಗಾಯನ ಪ್ರಕಾರವು ಉಳಿದೆಲ್ಲ ಘರಾನಾಗಳಿಗಿಂತ ವಿಭಿನ್ನ. ಅಲ್ಲಿ ಸ್ವರಗಳ ಏರಿಳಿತಗಳನ್ನು ಲಯಬದ್ಧವಾಗಿ ಗೂಂಜನದಂತೆ ವ್ಯಕ್ತಪಡಿಸುವುದು ತುಂಬಾ ಕಷ್ಟದ ಕಾಯಕ. ಇಂಥ ಅಪರೂಪದ ಗಾಯನ ಪದ್ಧತಿಯಲ್ಲಿ ರಾಗಲಕ್ಷಣವನ್ನೂ ಬಿಂಬಿಸುವುದು ಸವಾಲಿನ ಕೆಲಸ. ಆಲಿಯಾ ರಶೀದ್ ಮಾತ್ರ ತನ್ಮಯರಾಗಿ ತಾವೆಂತಹ ಅಪ್ಪಟ ಪ್ರತಿಭೆ ಎಂದು ತೋರಿಸಿದ್ದಾರೆ.
`ದೇವರು ನಿಮ್ಮಿಂದ ಏನನ್ನಾದರೂ ಕಿತ್ತುಕೊಂಡರೆ ಇನ್ನೊಂದು ವಿಶೇಷವನ್ನು ಕೊಡುತ್ತಾನೆ. ನಾನು ಈ ಹಂತಕ್ಕೆ ಬಂದಿದ್ದರೆ ಅದಕ್ಕೆ ದೇವರ ಪವಾಡವೇ ಕಾರಣ’ ಎಂದು ಆಲಿಯಾ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸಂಗೀತ ಕಲಿಯುತ್ತಿದ್ದಂತೆ ತನಗೆ ಧ್ವನಿಗ್ರಹಣವು ಶೀಘ್ರವಾಗಿ ಒಲಿಯುತ್ತದೆ ಎಂಬುದು ಗೊತ್ತಾಯಿತು ಎಂದು ಆಕೆ ವಿವರಿಸಿದ್ದಾರೆ.
`ನನಗೆ ಸಭಾಂಗಣ ತುಂಬಿದೆಯೆ ಎಂದು ತಿಳಿಯುವುದಿಲ್ಲ. ವಾತಾವರಣ ಹೇಗಿದೆ ಎಂದು ಗೊತ್ತಾಗುವುದಿಲ್ಲ. ಆದರೆ ನನ್ನ ಆರನೆಯ ಇಂದ್ರಿಯದ ಮೂಲಕವೇ ನಾನು ನನ್ನ ಸಭಿಕರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಅರಿಯುತ್ತೇನೆ’ ಎಂದು ಖಚಿತವಾಗಿ ತಿಳಿಸುವ ಆಲಿಯಾಗೆ ಚಪ್ಪಾಳೆಗಳೇ ಸಂದೇಶ ಕೊಡುತ್ತವೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಹುಟ್ಟಿ, ಪಾಕಿಸ್ತಾನದಲ್ಲಿ ಬೆಳೆದ ಆಲಿಯಾ ರಶೀದ್ ಲಾಹೋರಿನ ಇಖ್‌ಬಾಲ್ ಕಾಲೇಜಿನಲ್ಲಿ ಇಂಟರ್‌ಮೀಡಿಯೇಟ್ ಮಾಡಿದರು. ೧೯೯೯ರಲ್ಲಿ ರಾಝಾ ಖಾಸಿಂ ಎಂಬ ಸಂಗೀತ ಶಾಸ್ತ್ರಜ್ಞರ ಪರಿಚಯವಾಗಿದ್ದೇ ಅವರ ಬದುಕು ಬದಲಾಯಿತು. ಅವರ ಸಂಜನ್ ನಗರ್ ಫಿಲಾಸಫಿ ಎಂಡ್ ಆರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಲಿಯಾರ ಹಾಡುಗಳು ಧ್ವನಿಮುದ್ರಣಗೊಂಡವು.
೨೦೦೧ರಲ್ಲಿ ಅದೇ ರಾಝಾ ಖಾಸಿಂರವರು ಆಕೆಗೆ ಹೆಚ್ಚಿನ ಶಿಕ್ಷಣ ಕೊಡಿಸಲು ಧನಸಹಾಯ ಮಾಡಿ ಭೋಪಾಲದ ರಮಾಕಾಂತ್ ಗುಂಡೇಚಾ ಮತ್ತು ಉಮಾಕಾಂತ್ ಗುಂಡೇಚಾ ಸೋದರರ ಬಳಿಗೆ ಕಳಿಸಿದರು. ಆಕೆಗೆ ಈ ಸಂಗೀತ ಶಿಕ್ಷಣ ಸಿಗಲಿ ಎಂದು ಸಲಹೆ ನೀಡಿದವರಲ್ಲಿ ವಾಶಿಂಗ್ಟನ್‌ನ ಶುಭಾ ಶಂಕರನ್ ಮತ್ತು ಅವರ ಪತಿ ಬ್ರಿಯಾನ್ ಸಿಲ್ವರ್ ಕೂಡಾ ಸೇರಿದ್ದಾರೆ. ಆಗ ಪಾಕಿಸ್ತಾನದಲ್ಲಿ ಭಾರತದ ರಾಯಭಾರಿಯಾಗಿದ್ದ ವಿಜಯ್ ನಂಬಿಯಾರ್ ಆಕೆಗೆ ವೀಸಾ ಕೊಡಿಸುವಲ್ಲಿ ಸಹಕರಿಸಿದರು. ತನ್ನ ತಾಯಿಯೊಂದಿಗೆ ಬಂದ ಆಲಿಯಾ ಭೋಪಾಲದಲ್ಲಿ ಧ್ರುಪದ್ ಗಾಯನ ಶೈಲಿಯನ್ನು ಔಪಚಾರಿಕವಾಗಿ ರೂಢಿಸಿಕೊಂಡರು. ಧ್ರುಪದ್ ಗಾಯನವು ಸರಿಸುಮಾರಾಗಿ ವೇದಮಂತ್ರಗಳನ್ನು ಪಠಿಸುವ ಕ್ರಮವನ್ನು ಹೋಲುತ್ತದೆ. `ಮೊದಲು ನನಗೆ ಈ ಧ್ರುಪದ್ ಯಾಕಾದರೂ ಹಾಡಬೇಕು? ಈ ರಾಮ,ಈ ಗಣೇಶ ಯಾರು? ಅವರ ಬಗ್ಗೆ ನಾನೇಕೆ ಹಾಡಬೇಕು? ಇದೆಲ್ಲ ಇಸ್ಲಾಮೀ ವಿರೋಧಿಯಲ್ಲವೆ ಎಂದೆನ್ನಿಸಿತ್ತು’ ಎಂದು ಆಲಿಯಾ ಇನ್ನೊಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ದುಬಾಯಿಯಲ್ಲಿದ್ದ ತನ್ನ ತಂದೆಗೆ ತಾಯಿಯೇ ಕೇವಲ ಒಂದು ವರ್ಷ ಭಾರತಕ್ಕೆ ಹೋಗುತ್ತೇವೆ ಎಂದು ಸುಳ್ಳು ಹೇಳಿದ್ದನ್ನೂ ಆಲಿಯಾ ಮರೆತಿಲ್ಲ. ಕೊನೆಗೆ ಆಕೆ ನಾಲ್ಕು ವರ್ಷಗಳ ಕಾಲ ಭಾರತದಲ್ಲಿ ಕಲಿಕೆ ಮುಂದುವರಿಸಿದರು.
ಗುಂಡೇಚಾ ಸೋದರರಲ್ಲಿ ಕಲಿಯುವಾಗ ಆಲಿಯಾ ದಿನಾಲೂ ಬೆಳಗ್ಗೆ ೪ ಗಂಟೆಗೆ ಏಳುತ್ತಿದ್ದರು; ೭ ಗಂಟೆಯವರೆಗೆ ಅಭ್ಯಾಸ ಮಾಡಿ ಆಮೇಲೆ ಉಪಾಹಾರ; ಮತ್ತೆ ೯ ಗಂಟೆಯಿಂದ ೧ ಗಂಟೆವರೆಗೆ ಅಭ್ಯಾಸ ಮುಂದುವರಿಕೆ ; ಊಟದ ನಂತರ ಕೊಂಚ ವಿರಾಮ. ಮತ್ತೆ ಸಂಜೆ ೫ರಿಂದ ೮ ಗಂಟೆವರೆಗೆ ಅಭ್ಯಾಸ. ಹೀಗೆ ದಿನಾಲೂ ಸರಾಸರಿ ಎಂಟು ಗಂಟೆಗಳ ಕಾಲ ಅವರು ಅಭ್ಯಾಸ ಮಾಡಿದ್ದರಿಂದಲೇ ಧ್ರುಪದ್ ಗಾಯನ ಅವರಿಗೆ ಒಲಿಯಿತು. ಮೊದಲು ಗುಂಡೇಚಾ ಮನೆಯಲ್ಲೇ ವಾಸವಾಗಿದ್ದ ಆಲಿಯಾ ಅಲ್ಲಿ ಚಿಕನ್ ಊಟ ಸಿಗುತ್ತದೆ ಎಂದು ಭ್ರಮಿಸಿದ್ದರು; ಗುಂಡೇಚಾ ಸೋದರರು ಕಟ್ಟಾ ಜೈನರು!
ಈ ಮಧ್ಯೆ ಆಲಿಯಾ ಅಭ್ಯಾಸವನ್ನು ಕಡೆಗಣಿಸಿ ಪ್ರತಿಭಟಿಸಿದ ದಿನಗಳೂ ಇದ್ದವು. ರಾಖಿ ಕಟ್ಟುವುದೆಂದರೆ ಸೋದರತ್ವದ ಸಂಕೇತ ಎಂದು ಗುಂಡೇಚಾ ಸೋದರರು ತಿಳಿಸಿಹೇಳುವುದಕ್ಕೆ ಸಾಕುಸಾಕಾಯಿತು. ಅದಾದ ಮೇಲೆ ಗಣೇಶ ವಂದನೆ ಹಾಡುವುದನ್ನೂ ಆಲಿಯಾ ವಿರೋಧಿಸಿದ್ದರು; ಆಗ ಅವರ ತಂದೆ ತಾಯಂದಿರಿಂದ ಬಂದ ಹತ್ತು ಪುಟಗಳ ಬ್ರೈಲ್ ಲಿಪಿಯ ಪತ್ರ ಅವರನ್ನು ಬದಲಿಸಿತು.
ಕಾರ್ಗಿಲ್ ಯುದ್ಧದ ದಿನಗಳಲ್ಲೇ ಆಲಿಯಾ ಭಾರತಕ್ಕೆ ಬಂದಿದ್ದು; ಆದ್ದರಿಂದ ಗುಂಡೇಚಾ ಸೋದರರು ಆಕೆಯ ಬಗ್ಗೆ ಹೆಚ್ಚು ಪ್ರಚಾರ ಮಾಡದೆಯೇ ಉಳಿಸಿಕೊಂಡರು. ಅಂಧ ಪಾಕಿಸ್ತಾನಿ ಯುವತಿಯೊಬ್ಬಳು ತಮ್ಮ ಮನೆಯಲ್ಲಿ ಇದ್ದಾರೆಂಬುದನ್ನೇ ಕೆಲವು ಕಾಲ ಮರೆಮಾಚಿದ್ದರಂತೆ.
ಬಾಲ್ಯದಿಂದಲೇ ಸೂಫಿ ಸಂತರ ಹಾಡುಗಳನ್ನು ಕೇಳುತ್ತ, ಗುನುಗುನಿಸುತ್ತ ಬೆಳೆದ ಆಲಿಯಾ ಈಗ ಧ್ರುಪದ್ ಶೈಲಿಯಲ್ಲಿ ಸೂಫಿ ಗೀತೆಗಳನ್ನು ಹಾಡುವ ಹೊಸ ಪ್ರಯೋಗವನ್ನು ರೂಢಿಸಿಕೊಂಡಿದ್ದಾರೆ. ಈಗ ಲಾಹೋರಿನ ನ್ಯಾಶನಲ್ ಕಾಲೇಜ್ ಆಫ್ ಆರ್ಟ್ಸ್‌ನ ಸಂಗೀತವಿಜ್ಞಾನ ವಿಭಾಗದಲ್ಲಿ ಶಿಕ್ಷಕಿಯಾಗಿರುವ ಅವರು ಸಂಜನ್ ನಗರ ಶಾಲೆಯಲ್ಲೂ ಸಂಗೀತ ಕಲಿಸುತ್ತಾರೆ. ಧ್ರುಪದ್ ಅಂಗದ ಗಾಯನಕ್ಕೆ ಬೇಕಾದ ಪಕ್ಕಾವಾಜ್ ಕಲಿಯವುದಕ್ಕೆಂದು ತನ್ನ ಶಿಷ್ಯ ಅತೀಖ್ ಉಲ್ ರಹಮಾನರನ್ನು ಭಾರತಕ್ಕೆ ಕಳಿಸಿಕೊಟ್ಟಿರುವ ಆಲಿಯಾಗೆ ಸಂಗೀತವೇ ಭಾರತ – ಪಾಕಿಸ್ತಾನದ ನಡುವಣ ಕಂದರವನ್ನು ಮರೆಸುತ್ತದೆ ಎಂಬ ನಂಬಿಕೆ ಇದೆ.
`ಅಂಧತ್ವವು ದೊಡ್ಡ ವಿಷಯವೇ ಅಲ್ಲ; ಅಂಧರೆಂಬ ಕಾರಣಕ್ಕೆ ಏನೂ ಆಡದಿರುವುದೇ ದೊಡ್ಡ ವಿಕಲಾಂಗತೆ’ ಎಂದು ಆಲಿಯಾ ಹೇಳುತ್ತಾರೆ.
ಹೆಚ್ಚುವರಿ ಮಾಹಿತಿಗಳು:
- ಆಲಿಯಾ ರಶೀದ್ ಸೇರಿದಂತೆ ಪಾಕಿಸ್ತಾನದ ನಶಿಸುತ್ತಿರುವ ಸಂಗೀತ ಪರಂಪರೆಯ ಬಗ್ಗೆ ದಿಲ್ಲಿಯ ಯೂಸುಫ್ ಸಯೀದ್ `ಖ್ಯಾಲ್ ದರ್ಪಣ್’ ಎಂಬ ಒಂದು ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.( https://www.youtube.com/watch?v=pxv8cYzW84g)
- ೨೦೧೨ರಲ್ಲಿ ಆಲಿಯಾ ರಶೀದ್ ಮತ್ತು ಅಮಿತಾ ಸಿನ್ಹಾ ನಡೆಸಿಕೊಟ್ಟ ಧ್ರುಪದ್ ಜುಗಲ್‌ಬಂದಿಯು ತುಂಬಾ ಪ್ರಸಿದ್ಧ: https://www.youtube.com/watch?v=3AjhKNCkcc0
- ಆಲಿಯಾ ರಶೀದ್‌ರ ಕೆಲವು ವಿಡಿಯೋಗಳು ಇಲ್ಲಿವೆ: