ನೀವು `ತಂಬಾಕು ವಿರೋಧಿ ದಿನ’ ಎಂದು ಆರೂವರೆ ಸೆಕೆಂಡುಗಳಲ್ಲಿ ಓದುತ್ತೀರಿ ಎಂದುಕೊಳ್ಳೋಣ. ಅಷ್ಟುಹೊತ್ತಿಗೆ ಅದೇ ತಂಬಾಕಿನಿಂದ ವಿಶ್ವದ ಯಾವುದೋ ಮೂಲೆಯಲ್ಲಿ ಒಬ್ಬರು ತಂಬಾಕಿನ ಸೇವನೆಯಿಂದಲೇ ಸತ್ತಿರುತ್ತಾರೆ. ಈ ಮಾಹಿತಿಪತ್ರವನ್ನು ಕೈಯಲ್ಲಿ ಹಿಡಿದು ಓದುತ್ತಿರುವ ನಿಮಗೆ ಅಭಿನಂದನೆಗಳು.
ಪ್ರತಿವರ್ಷದ ಮೇ ೩೧ರ ದಿನವನ್ನು `ವಿಶ್ವ ತಂಬಾಕು ವಿರೋಧಿ ದಿನ’ವಾಗಿ ಆಚರಿಸುತ್ತೇವೆ. ಈ ದಿನಾಚರಣೆಯ ಹಿಂದಿನ ಕಾರಣ ತೀರಾ ಸರಳ: ಪ್ರತಿವರ್ಷ ತಂಬಾಕಿನ ಸೇವನೆಯಿಂದ ವಿಶ್ವದಾದ್ಯಂತ ೬೦ ಲಕ್ಷ ಜನರು ಸಾಯುತ್ತಿದ್ದಾರೆ. ಈ ಸಾವುಗಳಲ್ಲದೆ ಪ್ರತಿವರ್ಷವೂ ಸಾವಿರಾರು ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟವೂ ತಂಬಾಕಿನಿಂದ ಉಂಟಾಗುತ್ತಿದೆ. ಕ್ರಿ.ಶ. ೨೦೩೦ರ ಹೊತ್ತಿಗೆ ತಂಬಾಕಿನಿಂದ ಪ್ರತಿವರ್ಷ ಅಕಾಲಿಕ ವಯಸ್ಸಿಗೇ ಸಾಯುವ ಸಂಖ್ಯೆ ೮೦ ಲಕ್ಷಕ್ಕೆ ಏರಲಿದೆ. ಇವರಲ್ಲಿ ಭಾರತದಂಥ ಮಧ್ಯಮ ಪ್ರಮಾಣದ ಮತ್ತು ಕೆಳ ವರಮಾನದ ದೇಶಗಳಲ್ಲಿ ಇರುವವರೇ ಹೆಚ್ಚು. ವರ್ಷಕ್ಕೆ ಒಂದು ಕೋಟಿ ಜನರು ತಂಬಾಕಿನಿಂದಲೇ ಸಾಯುವ ಕಾಲವೂ ದೂರವಿಲ್ಲ! ಭಾರತ ದೇಶದಲ್ಲಂತೂ ೨೦೨೦ರ ಹೊತ್ತಿಗೆ ತಂಬಾಕಿಗೆ ಬಲಿಯಾಗುವವರ ಸಂಖ್ಯೆ ಬೇರೆಲ್ಲ ದೇಶಗಳಿಗಿಂತ ತುಂಬಾ ಹೆಚ್ಚು ಎಂದು ಅಧಿಕೃತ ವರದಿಗಳೇ ಹೇಳಿವೆ. ಹೀಗೆ ಸಾಯುವವರೆಲ್ಲರೂ ತಂಬಾಕು ಸೇವನೆ ಮಾಡದಿದ್ದರೆ ಇನ್ನೂ ೧೪ ವರ್ಷಗಳ ಕಾಲ ಬದುಕಿರುತ್ತಿದ್ದರು. ದುರಂತ ಎಂದರೆ, ಸಿಗರೇಟು ಹೊಗೆಯನ್ನಷ್ಟೇ ಪಡೆಯುವ ಧೂಮಪಾನಿಗಳಲ್ಲದವರೂ (ಪಕ್ಕದವರ ಧೂಮಪಾನದಿಂದ ಬರುವ ಹೊಗೆ ಕುಡಿಯುವವರು, ಅಂದರೆ ಪ್ಯಾಸಿವ್ ಸ್ಮೋಕರ್‍ಸ್) ತಂಬಾಕಿನ ವಿಷಕ್ಕೆ ಬಲಿಯಾಗುತ್ತಿದ್ದಾರೆ.
ಸಿಗರೇಟು – ಬೀಡಿಯ ಧೂಮಪಾನ ಮಾಡುವ ಜನರ ಜಾಗತಿಕ ಪ್ರಮಾಣದಲ್ಲಿ ಚೀನಾದ ಪಾಲು ಶೇ. ೩೦ ಇದ್ದರೆ, ಎರಡನೇ ಸ್ಥಾನ ಪಡೆದ ಭಾರತವು ಶೇ. ೧೦ರ ಪಾಲು ಹೊಂದಿದೆ.
ಅವತಾರ ಹಲವು, ಅಪಾಯ ಒಂದೇ…
ತಂಬಾಕನ್ನು ಬೀಡಿ, ಸಿಗರೇಟು, ನಶ್ಯದ ಪುಡಿ, ಹುಕ್ಕಾ, ಜರ್ದಾ, ಗುಟಖಾ, ಸಿಗಾರ್, ಚುಟ್ಟಾ, ಧೂಮ್‌ತಿ, ಪೈಪ್, ಚೆರೂತ್, ಚಿಲುಮೆ, ಹೂಕ್ಲಿ, ಖೈನಿ, ಮಾವಾ, ಬಜ್ಜರ್, ಸ್ನೂಸ್, ಮಿಶ್ರಿ, ಗುಲ್, ಗುಧಾಕು, – ಹೀಗೆ ನಾನಾ ಹೆಸರುಗಳಿರುವ ಚಟಗಳ ಅವತಾರಗಳಲ್ಲಿ ಕಾಣಬಹುದು. ಒಣ ತಂಬಾಕಿನ ಎಲೆಗಳನ್ನು ಎಲೆ-ಅಡಿಕೆ(ಪಾನ್,ಸುಪಾರಿ)ಯೊಂದಿಗೆ ನೇರವಾಗಿಯೂ ಜಗಿಯುತ್ತಾರೆ. ಇತ್ತೀಚೆಗಂತೂ ಭಾರತದಲ್ಲಿ ಗುಟಖಾ ರೂಪದಲ್ಲಿ ತಂಬಾಕಿನ ಸೇವನೆಯು ವಿಪರೀತವಾಗಿದೆ.
ಮನುಷ್ಯರು ಸುಮಾರು ಎಂಟು ಸಾವಿರ ವರ್ಷಗಳ ಹಿಂದೆಯೇ ತಂಬಾಕನ್ನು ಬಳಸುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ಮಾನಸಿಕವಾಗಿ ಮಾದಕ ಪರಿಣಾಮ ಬೀರುವ ತಂಬಾಕನ್ನು ವಿವಿಧ ದೇಶ-ಪ್ರದೇಶಗಳಲ್ಲಿ ಜನರು ವಿವಿಧ ರೂಪಗಳಲ್ಲಿ ಸೇವಿಸುತ್ತಿದ್ದರು. ಈಗ ಸಿಗರೇಟ್ ರೂಪದ ಬಳಕೆಯು ವಿಶ್ವವ್ಯಾಪಿಯಾಗಿದೆ. ಸಿಗರೇಟು ತಯಾರಿಸುವ ಕಂಪನಿಗಳು ಹದಿಹರೆಯದ ಯುವಸಮುದಾಯವನ್ನು ಸಿಗರೇಟು ಸೇದುವ ಚಟಕ್ಕೆ ಬೀಳಿಸಲು ಬಗೆಬಗೆಯ ಜಾಹೀರಾತು, ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತಿವೆ.
ತಂಬಾಕು: ಮಾರಕ ರೋಗಗಳಿಗೆ ಕಾರಣ
ತಂಬಾಕು ಸೇವನೆಯು ಮನುಷ್ಯನ ದೇಹವನ್ನು ಹಾಳುಗೆಡಹುತ್ತದೆಯೇ ವಿನಃ ಎಂದಿಗೂ ಪ್ರಯೋಜನಕಾರಿಯಲ್ಲ. ವಿಶ್ವಸಂಸ್ಥೆಯು ಪ್ರಕಟಿಸಿರುವ ಒಂದು ಪೋಸ್ಟರಿನಲ್ಲಿ ತಂಬಾಕಿನಿಂದ ಯಾವ್ಯಾವ ಭೀಕರ ಕಾಯಿಲೆಗಳು ಬರುತ್ತವೆ ಎಂದು ವಿವರಿಸಿದ್ದಾರೆ. ದೇಹವೆಲ್ಲ ಚರ್ಮವೆಲ್ಲ ಊದಿಕೊಂಡು ದೇಹದ ತುಂಬೆಲ್ಲ ತುರಿಕೆ, ಕೆಂಪು ದಡಸಲುಗಳಾಗುವ ಸೋರಿಯಾಸಿಸ್ ರೋಗವು ಬರುವುದು ಅತಿ ಸಾಮಾನ್ಯ. ತಂಬಾಕು ಸೇವಿಸುವವರ ಕಣ್ಣುಗಳು ಬಹುಬೇಗ ಪೊರೆಗಟ್ಟುತ್ತವೆ. ರೆಟಿನಾ ಶಿಥಿಲವಾಗಿ ಕಣ್ಣುಗಳ ದೃಷ್ಟಿ ಕಳೆದುಕೊಳ್ಳುತ್ತವೆ. ತುಟಿ ಮತ್ತು ಕಣ್ಣುಗಳ ಸುತ್ತ ಇರುವ ಚರ್ಮವು ದುರ್ಬಲವಾಗಿ ಒಣಗುತ್ತವೆ; ದೇಹದ ಚರ್ಮವು ವಯಸ್ಸಿಗೆ ಮೊದಲೇ ಮುದಿಯಾಗುತ್ತದೆ. ತಂಬಾಕಿನಿಂದ ರಕ್ತನಾಳಗಳ ಒಳಗೋಡೆಯ ಮೇಲೆ ಕಿಟ್ಟವನ್ನು ಬೆಳೆಸುತ್ತದೆ; ಇದರಿಂದ ಕಿವಿ ಕೇಳುವ ಶಕ್ತಿಯೂ ಕುಂದುತ್ತದೆ. ತಂಬಾಕಿನಲ್ಲಿ ಇರುವ ೪೦ಕ್ಕೂ ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ಎಂಬ ಕುಖ್ಯಾತ, ಭೀಕರ ಕಾಯಿಲೆಗೆ ಕಾರಣವಾಗಿವೆ. ಶ್ವಾಸಕೋಶದ ಕ್ಯಾನ್ಸರಿಗೆ ತಂಬಾಕು ಸೇವನೆಯು ನೂರಕ್ಕೆ ೯೦ರಷ್ಟು ಕಾರಣ. ತಂಬಾಕಿನಿಂದ ಬಾಯಿಯ ಕ್ಯಾನ್ಸರ್, ಜಠರದ ಕ್ಯಾನ್ಸರ್, ಮೂಗಿನ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ – ಹೀಗೆ ಎಲ್ಲ ಭೀಕರ ಕ್ಯಾನ್ಸರ್ ರೋಗಗಳು ತಂಬಾಕಿನಿಂದ ಬಹುಬೇಗ ಆವರಿಸುತ್ತವೆ ಎಂದು ಅಧ್ಯಯನಗಳು ಖಚಿತಪಡಿಸಿವೆ. ತಂಬಾಕಿನಿಂದ ಹಲ್ಲುಗಳು ಹಳದಿಯಾಗಿ ಹಾಳಾಗಿಹೋಗುತ್ತವೆ. ಇವಲ್ಲದೆ ತಂಬಾಕು ಸೇವನೆಯಿಂದ ಶ್ವಾಸಕೋಶದ ಪುಗ್ಗೆಗಳಲ್ಲಿ ತೂತಾಗುತ್ತದೆ; ಅಂಥ ರೋಗಿಗಳಿಗೆ ಆಮ್ಲಜನಕ ಹೀರುವ ಶಕ್ತಿ ಕುಂದುತ್ತದೆ.
ತಂಬಾಕಿನ ಅಪಾಯಕಾರಿ ದುರ್ಗುಣಗಳು ಇಷ್ಟಕ್ಕೇ ಮುಗಿದಿಲ್ಲ! ಹೆಚ್ಚು ಹೆಚ್ಚು ಸಿಗರೇಟು ಸೇದುವವರ ರಕ್ತವು ಆಮ್ಲಜನಕವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದರಿಂದ ಅಂಥ ತಂಬಾಕು ವ್ಯಸನಿಗಳ ಮೂಳೆಗಳು ಶಿಥಿಲವಾಗುತ್ತವೆ. ಈ ರೋಗವನ್ನು ಆಸ್ಟಿಯೋಪೋರೋಸಿಸ್ ಎನ್ನುತ್ತಾರೆ. ಜಗತ್ತಿನಲ್ಲಿ ಮೂರರಲ್ಲೊಂದು ಹೃದಯಾಘಾತವಾಗುವುದು ತಂಬಾಕು ಸೇವನೆಯಿಂದಲೇ ಎಂಬುದು ಕಟು ಸತ್ಯ. ಭಾರತದಂಥ ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರತಿವರ್ಷ ಹೃದಯಾಘಾತದಿಂದಲೇ ಆರು ಲಕ್ಷ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ತಂಬಾಕು ಸೇವನೆಯಿಂದ ಹೃದಯ ಬಡಿತದ ವೇಗ ಹೆಚ್ಚಿ ಉದ್ವೇಗಕ್ಕೆ ಕಾರಣವಾಗುತ್ತದೆ. ರಕ್ತನಾಳಗಳೂ ಸಂಕುಚಿತಗೊಂಡಿರುತ್ತವೆ. ಇಂಥವರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗಗಳು ಅತ್ಯಂತ ಸಾಮಾನ್ಯ.
ತಂಬಾಕಿನ ಧೂಮಪಾನದಿಂದ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಉಡುಗುತ್ತದೆ. ಊಟವಾದ ಮೇಲೆ ಆಹಾರದ ಆಮ್ಲವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಇರುವುದೇ ಇಲ್ಲ. ಪರಿಣಾಮವಾಗಿ ತೀವ್ರಮಟ್ಟದ ಅಲ್ಸರ್ ರೋಗ ಉಂಟಾಗುತ್ತದೆ. ತಂಬಾಕಿನಿಂದ ಬೆರಳುಗಳು, ಉಗುರುಗಳು ಹಳದಿಯಾಗುತ್ತವೆ.
ತಂಬಾಕು ಸೇವಿಸುವ ಮಹಿಳೆಯರಲ್ಲಿ ಶಿಶುಜನನದ ಸಮಸ್ಯೆಗಳು ತಲೆದೋರುತ್ತವೆ; ಗರ್ಭಪಾತದ ಪ್ರಕರಣಗಳೂ ಗಮನಾರ್ಹ. ಪುರುಷರಲ್ಲಂತೂ ವೀರ್‍ಯಾಣುಗಳ ಪ್ರಮಾಣವೇ ಕುಸಿದು ಷಂಡತ್ವ ಕವಿಯುತ್ತದೆ. ಇಡೀ ದೇಹದ ತುಂಬೆಲ್ಲ ನಾಳಗಳು ಬಿಗಿದುಕೊಂಡು ರಕ್ತಸಂಚಾರವೇ ಕಟ್ಟಿಹೋಗುವಂಥ ಬೂರ್ಗರ್‍ಸ್ ಕಾಯಿಲೆಯೂ ಬರುತ್ತದೆ.
ಹೀಗೆ ತಂಬಾಕಿನಿಂದ ಮನುಷ್ಯನ ದೇಹವು ರೋಗಗಳ ಗೂಡಾಗುತ್ತದೆ ಎಂದಮೇಲೆ ತಂಬಾಕು ಸೇವನೆ ಎಂಥ ಅಪಾಯಕಾರಿ ಎಂದು ಊಹಿಸಬಹುದು.
ತಂಬಾಕು ಬೆಳೆಯುವ ಪ್ರದೇಶಗಳ ಕೃಷಿ ಕಾರ್ಮಿಕರೂ `ಗ್ರೀನ್ ಟೊಬಾಕ್ಕೋ ಸಿಕ್‌ನೆಸ್’ ಸೇರಿದಂತೆ ಹಲವು ಬಗೆಯ ರೋಗಗಳಿಗೆ ತುತ್ತಾಗುತ್ತಾರೆ.
ಪರಿಸರ ನಾಶ
ತಂಬಾಕು ಬೆಳೆಯು ಅಪಾರ ಪ್ರಮಾಣದಲ್ಲಿ ಕಾಡಿನ ನಾಶಕ್ಕೆ ಕಾರಣವಾಗಿದೆ. ತಂಬಾಕಿನ ಎಲೆಗಳನ್ನು ಹದ ಮಾಡಲು ನಿಗಿನಿಗಿ ಉರಿಯುವ ಕೆಂಡಗಳ ದೊಡ್ಡ ಒಲೆ ಬೇಕು. ಇಂಥ ಬೆಂಕಿಗೆ ಪ್ರದೇಶದ ಅತ್ಯುತ್ತಮ ಮರಗಳು ಬಲಿಯಾಗಿವೆ. ತಂಬಾಕು ಹೆಚ್ಚಾಗಿ ಬೆಳೆಯುವ ಮೈಸೂರು ಸೀಮೆಯಲ್ಲಿ ನೂರಾರು ವರ್ಷಗಳಷ್ಟು ಹಳೆಯ ಸಾವಿರಾರು ಹಿಪ್ಪೆ, ಆಲದ ಮರಗಳು ಕಟಾವಾಗಿವೆ. ಬ್ರೆಝಿಲ್ ದೇಶದಲ್ಲಿ ಹೀಗೆ ಹಸಿ ಮರಗಳ ಕಟಾವಿನಿಂದಾಗಿ ಕಾಡುಗಳೆಲ್ಲ ಬರಿದಾಗಿವೆ; ತಂಬಾಕು ಹದಮಾಡಲು ಉರುವಲು ಸಿಗದೇ ಆ ದೇಶದ ತಂಬಾಕು ಉತ್ಪಾದನೆ ತಗ್ಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಭಾರತದಲ್ಲಿ ೧೦೦ ಕೋಟಿ ಟನ್ ಸೌದೆಯನ್ನು ತಂಬಾಕು ಹದಮಾಡಲೆಂದೇ ಉರಿಸಲಾಗಿದೆ! ತಂಬಾಕು ಬೆಳೆಯಿಂದ ಕೀಟನಾಶಕಗಳ ವಿಪರೀತ ಬಳಕೆಯಾಗಿ ನೆಲವೆಲ್ಲ ವಿಷಮಯವಾಗುತ್ತದೆ; ಅತಿ ಕೃಷಿಯಿಂದ ಮಣ್ಣಿನ ಸವಕಳಿ ಹೆಚ್ಚುತ್ತದೆ.
ಒಟ್ಟಾರೆ ತಂಬಾಕಿನ ಬೆಳೆಯಿಂದ ಬರುವ ವರಮಾನಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಪಾಲು ಹಣವು ಕಾಯಿಲೆಗಳ ವಿರುದ್ಧದ ಚಿಕಿತ್ಸೆಗೆ ಮತ್ತು ಇತರೆ ಸಮಸ್ಯೆಗಳಿಗೆ ಖರ್ಚಾಗುತ್ತದೆ. ಆದ್ದರಿಂದ ತಂಬಾಕು ಬೆಳೆದಷ್ಟೂ ಸಮಾಜಕ್ಕೆ ನಷ್ಟವೇ ಹೆಚ್ಚು.
ತಂಬಾಕಿಗೆ ಸರ್ಕಾರದ್ದೇ ಬೆಂಬಲ
ಹೀಗಿದ್ದೂ ಭಾರತದಲ್ಲಿ ತಂಬಾಕು ಬೆಳೆಯ ಕೃಷಿಯು ಅತ್ಯಂತ ಪ್ರಧಾನ ಕೃಷಿಯಾಗಿರುವುದು ವಾಸ್ತವ. ಭಾರತ ಸರ್ಕಾರದ ತಂಬಾಕು ಮಂಡಳಿ, ಕೃಷಿ ಸಂಶೋಧನಾ ಸಂಸ್ಥೆಗಳು ಮತ್ತು ಇಂಡಿಯನ್ ಟೊಬಾಕ್ಕೋ ಕಂಪನಿ ಎಂಬ ಖಾಸಗಿ ಸಂಸ್ಥೆ, ತಂಬಾಕು ಅಭಿವೃದ್ಧಿ ನಿರ್ದೇಶನಾಲಯ, ಟೊಬಾಕ್ಕೋ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಇಂಡಿಯನ್ ಸೊಸೈಟಿ ಆನ್ ಟೊಬಾಕ್ಕೋ ಸೈನ್ಸ್ – ಇವು ಭಾರತದಲ್ಲಿ ತಂಬಾಕು ಕೃಷಿ ಮತ್ತು ಉದ್ದಿಮೆಯನ್ನು ಪ್ರೋತ್ಸಾಹಿಸುತ್ತಿರುವ ಕೆಲವು ಸಂಸ್ಥೆಗಳು. ಹಲವು ವಿಶ್ವವಿದ್ಯಾಲಯಗಳಲ್ಲಿ ಹೊಸ ತಂಬಾಕಿನ ತಳಿಗಳ ಕುರಿತೂ ಸಂಶೋಧನೆಗಳು ನಡೆಯುತ್ತಿವೆ. ತಂಬಾಕಿನ ಇಳುವರಿ ಹೆಚ್ಚಿಸುವ, ಅದರ `ರುಚಿಯನ್ನು’ ಉತ್ತಮಪಡಿಸುವ ಈ ಕ್ರಮಗಳು ರೈತರಿಗೆ ಆಕರ್ಷಣೆ ಒಡ್ಡುತ್ತವೆ. ರೈತರು ತಂಬಾಕು ಮಂಡಳಿಗೆ ನೋಂದಾವಣೆಯಾಗಿಯೇ ತಂಬಾಕು ಬೆಳೆಯಬೇಕು ಎಂಬ ನಿಯಮವಿದೆ. ಆದರೆ ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅನಧಿಕೃತವಾಗಿ ತಂಬಾಕು ಬೆಳೆಯುತ್ತಿದ್ದಾರೆ. ತಂಬಾಕು ಬೆಳೆಗೆ ನಿಶ್ಚಿತ ಬೆಲೆ ಮತ್ತು ಮಾರುಕಟ್ಟೆ ಇರುವುದರಿಂದ ರೈತರು ಸಹಜವಾಗಿಯೇ ತಂಬಾಕು ಬೆಳೆಯುತ್ತಾರೆ. ಭಾರತ ಸರ್ಕಾರದ ವಾಣಿಜ್ಯ ಸಚಿವಾಲಯವು ತಂಬಾಕು ವ್ಯಾಪಾರ ಕುರಿತಂತೆ ಹಲವು ಉತ್ತೇಜಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಭಾರತವು ತಂಬಾಕನ್ನು ರಫ್ತು ಮಾಡುವ ಪ್ರಮುಖ ದೇಶ. ಅಲ್ಲದೆ ಕರ್ನಾಟಕದಲ್ಲಿ ಬೆಳೆಯುವ ತಂಬಾಕಿಗೆ ವಿಶೇಷ ಬೇಡಿಕೆಯೂ ಇದೆ.
ಸಿಗರೇಟು ಸೇವನೆಯು ಸಾಮಾಜಿಕ ಸ್ಥಾನಮಾನ, ಪ್ರತಿಷ್ಠೆ, ಘನತೆಯ ಸಂಕೇತ, ಬುದ್ಧಿವಂತ ವ್ಯಕ್ತಿತ್ವದ ಚಿಹ್ನೆ – ಹೀಗೆಲ್ಲ ಸಿಗರೇಟು ಸಂಸ್ಥೆಗಳು ಪ್ರಚಾರ ಮಾಡಿ ಹದಿಹರೆಯದವರನ್ನು ಸಿಗರೇಟು ಸೇವನೆಗೆ ದೂಡುತ್ತವೆ. ಒಮ್ಮೆ ತಂಬಾಕಿನ ಮಾದಕತೆಗೆ ಸೋತರೆ ಸಾಕು, ಯುವಕ-ಯುವತಿಯರು ಜೀವನವಿಡೀ ಸಿಗರೇಟಿನ ದಾಸರಾಗುತ್ತಾರೆ. ಇದೇ ಸಿಗರೇಟು ಸಂಸ್ಥೆಗಳ ಮಾರುಕಟ್ಟೆ ಷಡ್ಯಂತ್ರ. ಸಿಗರೇಟು ಸೇವನೆಯಿಂದ ಮೆದುಳು ಜಾಗೃತವಾಗುತ್ತದೆ, ಸೃಜನಶೀಲತೆ – ಕ್ರಿಯಾಶೀಲತೆ ಹೆಚ್ಚುತ್ತದೆ ಎಂಬ ಹಸಿಸುಳ್ಳು ಮತ್ತು ಭ್ರಮೆಗಳನ್ನು ಸಿಗರೇಟು ಸಂಸ್ಥೆಗಳು ಮೂಡಿಸುತ್ತವೆ. ತಂಬಾಕಿನ ಅಪಾಯಗಳ ಬಗ್ಗೆ ಎಷ್ಟೇ ಅಧಿಕೃತ ಅಧ್ಯಯನಗಳು ಪ್ರಕಟವಾದರೂ ಅವನ್ನೆಲ್ಲ ತಂಬಾಕುಪರ ವ್ಯಾಪಾರಿ ಗುಂಪುಗಳು ತಿರಸ್ಕರಿಸುತ್ತವೆ. ಅಲ್ಲದೆ ಕ್ರಿಕೆಟ್ ಮುಂತಾದ ಆಟೋಟಗಳನ್ನು ಪ್ರಾಯೋಜನೆ ಮಾಡುವುದರ ಮೂಲಕ, ಸಿಗರೇಟ್ ಬ್ರಾಂಡಿನಲ್ಲೇ ಬಾಟಲಿ ನೀರು, ಅಂಗಿ ಮುಂತಾದ ವಸ್ತುಗಳನ್ನು ಮಾರುವ ಮೂಲಕ ತಂಬಾಕಿನ ಪರವಾಗಿ ಪ್ರಭಾವ ಬೀರುತ್ತವೆ. ಮಿನಿ ಸಿಗರೇಟುಗಳ ಮೂಲಕ ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಸೆಳೆಯುತ್ತಿವೆ.ಜೀವ ತೆಗೆಯುವ ತಂಬಾಕನ್ನು ಮಾರುವ ಐಟಿಸಿ ಕಂಪನಿಯು ಭಾರತೀಯ ಜೀವವಿಮಾ ನಿಗಮದ ಜೊತೆಸೇರಿ ವಿಮೆಪತ್ರಗಳನ್ನು ಮಾರಿದ್ದಂತೂ ವಿಪರ್ಯಾಸವಾಗಿದೆ. ತಂಬಾಕನ್ನು ನಿಷೇಧಿಸಿದರೆ ಬೀಡಿ, ಸಿಗರೇಟು ಕಾರ್ಮಿಕರ ಬಾಳು ಬೀದಿ ಪಾಲಾಗುತ್ತದೆ ಎಂಬ ಬೆದರಿಕೆಯನ್ನೂ ತಂಬಾಕು ಲಾಬಿಯು ಹಾಕುತ್ತಲೇ ಇದೆ.
ವ್ಯಸನ ಬಿಡಿಸಲು ಹಲವು ಕ್ರಮಗಳು
ಈ ನಡುವೆಯೂ ಭಾರತ ಸರ್ಕಾರದ ಆರೋಗ್ಯ ಸಚಿವಾಲಯವು ಸಿಗರೇಟು ಪ್ಯಾಕುಗಳ ಮೇಲೆ, ತಂಬಾಕಿನ ಉತ್ಪನ್ನಗಳ ಮೇಲೆ `ತಂಬಾಕು ಕ್ಯಾನ್ಸರಿಗೆ ಕಾರಣ’ ಎಂಬ ಸೂಚನೆ ಮತ್ತು ಚಿತ್ರಗಳನ್ನು ಪ್ರಕಟಿಸುವುದನ್ನು ಕಡ್ಡಾಯ ಮಾಡಿದೆ. ಸಿಗರೇಟಿನ ಮೇಲೆ ಅತ್ಯಧಿಕ ಪ್ರಮಾಣದ ತೆರಿಗೆಯನ್ನೂ ವಿಧಿಸುತ್ತಲೇ ಬಂದಿದೆ. ತಂಬಾಕಿನ ಬಳಕೆಯನ್ನು ನಿಲ್ಲಿಸಲು ಹೀಗೆ ಸರ್ಕಾರಗಳು, ಸ್ವಯಂಸೇವಾ ಸಂಸ್ಥೆಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಈಗಾಗಲೇ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಹಲವು ರಾಜ್ಯಗಳಲ್ಲಿ ಗುಟಖಾವನ್ನು ನಿಷೇಧಿಸಲಾಗಿದೆ; ಆದರೆ ಕರ್ನಾಟಕವು ನಿಷೇಧ ಹೇರಿಲ್ಲ.
ತಂಬಾಕು ಬೆಳೆಯುವ ರೈತರು ಕಬ್ಬು, ಹತ್ತಿ, ಶೇಂಗಾ, ಆಲೂಗೆಡ್ಡೆ, ಮೆಕ್ಕೆಜೋಳ ಮುಂತಾದ ಬೆಳೆಗಳನ್ನು ಬೆಳೆದರೆ ತಂಬಾಕಿಗಿಂತ ಹೆಚ್ಚು ಆದಾಯವನ್ನು ಪಡೆಯಬಹುದು. ಆದರೆ ಈ ಬಗ್ಗೆ ರೈತರನ್ನು ಜಾಗೃತಗೊಳಿಸುವ ಕೆಲಸ ಇನ್ನೂ ಆಗಿಲ್ಲ.
ನಾವೇನು ಮಾಡಬಹುದು?
- ಮೇ ೩೧ರ `ವಿಶ್ವ ತಂಬಾಕು ವಿರೋಧಿ ದಿನ’ದ ಸಂದರ್ಭದಲ್ಲಿ ನಾವು ತಂಬಾಕಿನ ಬಳಕೆಯನ್ನು ನಿಲ್ಲಿಸಲು ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು:
- ನಿಮ್ಮ ಮನೆಯಲ್ಲಿ, ನೆರೆಹೊರೆಯಲ್ಲಿ, ಕಚೇರಿಯಲ್ಲಿ ಧೂಮಪಾನಿಗಳಿದ್ದರೆ, ಅವರು ಈ ಕೂಡಲೇ ಧೂಮಪಾನ ಬಿಡುವಂತೆ ಪ್ರೇರೇಪಿಸಿ. ತಂಬಾಕಿನ ಅಪಾಯಗಳನ್ನು ಅವರಿಗೆ ವಿವರಿಸಿ. ಈ ಮಾಹಿತಿಪತ್ರವನ್ನು ಅವರಿಗೆ ನೀಡಿ.
- ತಂಬಾಕು ಸೇವನೆಯೂ ಒಂದು ವ್ಯಸನ. ಆದ್ದರಿಂದ ಅದನ್ನು ಒಮ್ಮೆಲೇ ಬಿಡುವುದು ಮಾನಸಿಕವಾಗಿ ಕಷ್ಟಸಾಧ್ಯ. ಆದ್ದರಿಂದ ಧೂಮಪಾನಿಗಳಿಗೆ ಮತ್ತು ತಂಬಾಕು ಬಳಕೆದಾರರಿಗೆ ಕ್ರಮೇಣವಾಗಿ ತಂಬಾಕು ಬಳಕೆ ಬಿಡಲು ಸಲಹೆ ನೀಡಿ. ಮೊದಲು ವಾರಕ್ಕೊಂದು ದಿನ, ಆಮೇಲೆ ಎರಡು ದಿನ – ಹೀಗೆ ಬಳಕೆಯನ್ನು ತಗ್ಗಿಸಲು ಯತ್ನಿಸಿ.
- ಸಾರ್ವಜನಿಕ ಪ್ರದೇಶಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಧೂಮಪಾನ ಮಾಡುತ್ತಿರುವವರ ವಿರುದ್ಧ ಹತ್ತಿರದ ಪೊಲೀಸ್ ಕೇಂದ್ರಗಳಿಗೆ ಹೋಗಿ ದೂರು ನೀಡಿರಿ.
- ಯಾವುದೇ ಸಂದರ್ಭದಲ್ಲಿಯೂ ಧೂಮಪಾನದ ಹೊಗೆಯನ್ನು ಸೇವಿಸಬೇಡಿ. ಅಂಥ ಸಂದರ್ಭದಲ್ಲಿ ಧೂಮಪಾನಿಗಳಿಗೆ ನಿಷ್ಠುರವಾಗಿ ಮತ್ತು ವಿನಯದಿಂದ ನಿಮ್ಮ ವಿರೋಧವನ್ನು ತಿಳಿಸಿ.
- ಶಾಲಾ ಕಾಲೇಜುಗಳ ೧೦೦ ಅಡಿ ವ್ಯಾಪ್ತಿಯಲ್ಲಿ ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಮಾರಾಟವು ನಿಷೇಧವಾಗಿದೆ. ನಿಮ್ಮ ಪ್ರದೇಶದಲ್ಲಿ ಈ ನಿಯಮ ಉಲ್ಲಂಘನೆಯಾಗಿದ್ದರೆ ಆರೋಗ್ಯ ಇಲಾಖೆಗೆ, ಸ್ಥಳೀಯಾಡಳಿತಕ್ಕೆ ದೂರು ನೀಡಿರಿ.
- ನೀವು ಭಾಗವಹಿಸುವ ಕಾರ್ಯಕ್ರಮ, ಕೌಟುಂಬಿಕ ಆಚರಣೆಗಳಲ್ಲಿ ಈ ಮಾಹಿತಿಪತ್ರವನ್ನು ಅಥವಾ ತಂಬಾಕಿನ ಅಪಾಯವನ್ನು ಬಿಂಬಿಸುವ ಯಾವುದೇ ಮಾಹಿತಿಯನ್ನು ಹಂಚಲು ಆರಂಭಿಸಿ. ಹೀಗೆ ಮಾಡಲು ನಿಮ್ಮ ಸ್ನೇಹಿತರನ್ನೂ ಪ್ರೇರೇಪಿಸಿ.
- ಕಾಲೇಜು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ತಂಬಾಕಿನ ಅಪಾಯಗಳನ್ನು ಮನವರಿಕೆ ಮಾಡಿರಿ. ಅವರಲ್ಲಿ ಇರುವ ಗೊಂದಲಗಳನ್ನು ನಿವಾರಿಸಿ. ಸಿಗರೇಟು ಸೇದುವುದು ಪ್ರತಿಷ್ಠೆಯಲ್ಲ, ಜೀವಕ್ಕೇ ಮಾರಕ ಎಂಬ ಅಂಶವನ್ನು ಅವರಿಗೆ ತಿಳಿಹೇಳಿ.
- ತಂಬಾಕಿನ ಅಪಾಯಗಳನ್ನು ತಿಳಿಸುವ ಪೋಸ್ಟರ್‌ಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ, ಯುವಸಮುದಾಯವು ಭಾಗವಹಿಸುವ ತಾಣಗಳಲ್ಲಿ ಅಂಟಿಸಿ.
- ಅಂತರಜಾಲದಲ್ಲಿ (ಇಂಟರ್‌ನೆಟ್) ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಬಗ್ಗೆ ನಡೆಯುವ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ.