2020 ರ ಫೆಬ್ರುವರಿ 15 ರಂದು ಧಾರವಾಡದಲ್ಲಿ ನಡೆದ ಡಾ. ಸಿ ಆರ್‌ ಯರವಂತೇಲಿಮಠ್‌ ಸನ್ಮಾನ ಸಮಿತಿ ಸಂಘಟಿಸಿದ್ದ ಅನುವಾದ ಕುರಿತ ರ ಆಷ್ಟ್ರೀಯ ಸಂಕಿರಣದಲ್ಲಿ ನಾನು ಮಂಡಿಸಿದ ಕೆಲವು ವಿಚಾರಗಳ ಆಯ್ದ ಭಾಗಗಳು ಇಲ್ಲಿವೆ:

Would you please elaborate on the idea of translation as an artistic process?

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಎಂಬ ಕವನವನ್ನು ಓದಿದಾಗ, ಹಾಡಿದಾಗ ಅನುವಾದ ಎಂಬುದು ಮಹತ್ವದ ಕಾರ್ಯ ಎಂಬ ಭಾವ ಮೂಡುತ್ತದೆ.  ಸಂತ ಜಾನ್‌ ಹೆನ್ರಿ ನ್ಯೂಮನ್‌ ಬರೆದ ಕವನವನ್ನು ಬಿಎಂಶ್ರೀ ಅವರು ಕನ್ನಡಕ್ಕೆ ತಂದ ಬಗೆಯಿಂದಾಗಿ ಈ ಕವನವು ೧೮೭ ವರ್ಷಗಳ ನಂತರವೂ ನಮ್ಮ ಎದೆಯಲ್ಲಿ ಬೆಚ್ಚಗೆ ಕುಳಿತಿದೆ.  ಒಂದು ಕವನವೇ ಇರಲಿ, ಒಂದು ಜೀವನಚರಿತ್ರೆಯೇ ಇರಲಿ, ಯಾವುದೇ ಸೃಜನಶೀಲ ಅಥವಾ ಸೃಜನೇತರ ಕೃತಿಯ ಅನುವಾದ ಕ್ರಿಯೆಯನ್ನು ಕಲೆಯ ಕುಸುರಿ ಎಂದು ತಿಳಿದೇ ಮಾಡಬೇಕು.

Under what circumstances, the translator uses adaptation method?

ಒಂದು ಕೃತಿಯು ನಮ್ಮ ಭೂಭಾಗಕ್ಕೆ, ಸಂಸ್ಕೃತಿ ಪರಂಪರೆಗೆ ಹೊಂದುತ್ತದೆ ಎಂದಾಗ ಮಾತ್ರ ಅಡಾಪ್ಟೇಶನ್‌ ವಿಧಾನ ಸರಿ ಅನ್ನಿಸುತ್ತೆ. ಕರುಣಾಳು ಬಾ ಬೆಳಕೆ ಹಾಡಿನಲ್ಲಿ ಯಾವುದೇ ಭೂಭಾಗವಿಲ್ಲ. ಅದೊಂದು ದೈವಿಕ ನಿವೇದನೆ.

How do we negotiate the requirements of SL with TL?

ಮೂಲ ಭಾಷೆಯಲ್ಲಿ ಬಳಸಿದ ಪ್ರತಿಮೆಗಳನ್ನು, ನಮ್ಮ ಪರಂಪರಾಗತ ಸಾಹಿತ್ಯದ ಭಾಷೆಯಲ್ಲಿ ಹೇಗೆ ರೂಪಾಂತರಿಸಬಹುದು ಎಂಬುದನ್ನೇ ಮೊದಲು ಗಮನಿಸಬೇಕು.

ಸೃಜನೇತರ ಸಾಹಿತ್ಯದಲ್ಲಿ ಮುಖ್ಯವಾಗಿ ಆಯಾ ಕಾಲದಲ್ಲಿ ಚಾಲ್ತಿಯಲ್ಲಿ ಇರುವ ಪದಗಳನ್ನೇ ಬಳಸಲು ಆದ್ಯತೆ ನೀಡಬೇಕು; ಹೊಸ ಪದಗಳನ್ನು ಸೃಷ್ಟಿಸುವುದನ್ನು ಆದಷ್ಟೂ ಮಾಡಬಾರದು.

ಪ್ರತಿಯೊಂದೂ ವಿಷಯದ ಕುರಿತ ಅನುವಾದಕ್ಕೆ ಅದರದ್ದೇ ಆದ ಪದಸಂಗ್ರಹ ಇರುತ್ತದೆ ಅಥವಾ ಇರಬೇಕಾಗುತ್ತದೆ. ಅದಕ್ಕೆಂದೇ ನೂರಾರು ಪದಕೋಶಗಳು ರೂಪುಗೊಂಡಿವೆ. ಒಂದು ವಿಷಯದ ಒಂದು ಪದಕ್ಕೆ ಇನ್ನೊಂದು ವಿಷಯದಲ್ಲಿ ಬೇರೆಯದೇ ಆದ ಅರ್ಥ ಇರುತ್ತದೆ. ಅವನ್ನೆಲ್ಲ ಗಮನಿಸಿಕೊಂಡು ನಮ್ಮ ಪರಿಕರಗಳನ್ನು ಸಜ್ಜುಗೊಳಿಸಬೇಕು.

ಈಗ ಭಾರತವಾಣಿ ಜಾಲತಾಣದಲ್ಲಿ ೧೬೫ಕ್ಕೂ ಹೆಚ್ಚು ಪದ ಹುಡುಕಾಟದ ಯುನಿಕೋಡ್‌ ಪಠ್ಯದ ನಿಘಂಟು ಪದಕೋಶಗಳು, ೪೦೦ಕ್ಕೂ ಹೆಚ್ಚು ಪಿಡಿಎಫ್‌ ಪದಕೋಶಗಳು ಇವೆ. ಇಂತಹ ಆನ್‌ಲೈನ್‌ ಸಹಾಯ ಪುಟಗಳನ್ನು ಎದುರಿಗೆ ಇಟ್ಟುಕೊಂಡರೆ ಮೂಲ ಭಾಷೆಯಿಂದ ಉದ್ದೇಶಿತ ಭಾಷೆಗೆ ಅನುವಾದ ಮಾಡುವುದು ಸುಲಭವಾಗುತ್ತದೆ. ಏಕೆಂದರೆ ಇಂತಹ ಬಹೂಭಾಷಾ ಕೋಶಗಳನ್ನು ನೋಡುವುದರಿಂದ ಬೇರೆ ಭಾಷೆಗಳಲ್ಲಿ ಏನೇನೆಲ್ಲ ಅರ್ಥಗಳಿವೆ ಎಂಬುದು ತಿಳಿಯುತ್ತದೆ.

Should the translator be creative in translation?

ಖಂಡಿತ. ಯಾವುದೇ ಅನುವಾದವಾದರೂ ಅದು ಒಂದು ಸೃಜನಶೀಲ ಕಾರ್ಯವೇ ಆಗಿರುತ್ತದೆ. ಆದರೆ ಅನುವಾದದ ಒಳಗೆ ನಮ್ಮ ಸೃಜನಶೀಲತೆಯ ಪ್ರಯೋಗ ಮಾಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸಬೇಕು. ಅಂದರೆ ಅನುವಾದಕ ಯಾವತ್ತೂ ಸೃಜನಶೀಲ ವ್ಯಕ್ತಿಯೇ.

What are the qualities of good translation in your opinion?

ಅತ್ಯುತ್ತಮ ಅನುವಾದ ಎಂದರೆ ಅದು ಅನುವಾದಿತ ಕೃತಿ ಎಂದು ಗೊತ್ತಾಗದ ಹಾಗೆ ಇರಬೇಕು ಎಂಬುದು ಎಲ್ಲರಿಗೂ ತಿಳಿದಿರುವ ಮಾನದಂಡ. ಸ್ಥಳನಾಮಗಳ, ಅಂಕಿತ ನಾಮಗಳ ಹಿನ್ನೆಲೆಯಲ್ಲಿ ಅನುವಾದ ಎಂದು ಗುರುತಿಸುವ ಸಾಧ್ಯತೆ ಇರುತ್ತದೆ. ಸಮಕಾಲೀನ ಭಾಷೆಯ ಹಿನ್ನೆಲೆಯಲ್ಲಿ  ಅನುವಾದ ಮಾಡುವುದು, ಪದಗಳ ಮಿತಿಯನ್ನು ಮೀರದೇ ಇರುವುದು – ಇವೆರಡೂ ನಾನು ಬಯಸುವ ಇನ್ನೆರಡು ಮಾನದಂಡಗಳು.

Is there any definite method of translation for translating a particular text? If yes/No Explain

ಖಂಡಿತ ಒಂದು ಖಚಿತ ವಿಧಾನ ಇದೆ. ಯಾವುದೇ ಮೂಲ ಕೃತಿಯನ್ನು ಪೂರ್ಣ ಓದದೆಯೇ, ಅದರಲ್ಲಿ ಇರುವ ಅನುವಾದದ ತೊಡಕುಗಳನ್ನು ಪಟ್ಟಿ ಮಾಡಿಕೊಳ್ಳದೆಯೇ ಅನುವಾದಕ್ಕೆ ಹೊರಡಲೇಕೂಡದು.

ಅನುವಾದ ಕ್ರಿಯೆಯಲ್ಲಿ ವೇಗ ಪಡೆಯುವುದು ಮುಖ್ಯ ಅಂಶ. ಮೊದಲ ಕೆಲವು ಪುಟಗಳನ್ನು ಮಾಡುತ್ತಿದ್ದ ಹಾಗೆಯೇ ನಮಗೆ ಮೂಲಕೃತಿಯ ಓಘ, ಶೈಲಿ, ಲಯ ಎಲ್ಲವುಗಳ ಬಗ್ಗೆ ಒಂದಷ್ಟು ಮಾಹಿತಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ವೇಗವನ್ನು ಕಡಿಮೆ ಮಾಡಿಕೊಳ್ಳದೆಯೇ, ಕೆಲವೊಮ್ಮೆ ಹೆಚ್ಚಿಸಿಕೊಂಡು ಅನುವಾದ ಮಾಡಬೇಕು.

ಸೃಜನಶೀಲ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ  ಯಾವುದೇ ಕಾರಣಕ್ಕೂ ಯಂತ್ರಾನುವಾದದಿಂದ ಪ್ರೇರಣೆ ಪಡೆಯಬಾರದು. ಯಂತ್ರಾನುವಾದವು ಈಗಲೂ ತುಂಬಾ ಸುಧಾರಿಸಬೇಕಿದೆ.

How do you differentiate the term transcreation from translation?

ಟ್ರಾನ್ಸ್‌ಕ್ರಿಯೇಶನ್‌ ನ್ನು ಮರುಸೃಷ್ಟಿ ಎಂದೇ ಕರೆಯಬಹುದು. ಇಲ್ಲಿ ಮೂಲ ಕೃತಿಕಾರರಿಗಿಂತ ಮರುಸೃಷ್ಟಿ ಮಾಡಿದ ಲೇಖಕರೇ ಮುಖ್ಯವಾಗುತ್ತಾರೆ. ಕಾದಂಬರಿಯಿಂದ ನಾಟಕ, ಕಥೆಯಿಂದ ಸಿನೆಮಾ – ಹೀಗೆ ಮಾಧ್ಯಮಗಳೂ ಬದಲಾಗುತ್ತವೆ. ಇಲ್ಲಿ ಎರಡೂ ಪದಗಳು ಹೊಳೆಯಿಸುವ ಅರ್ಥಗಳೇ ಬೇರೇ ಬೇರೆ. ಅನುವಾದದಲ್ಲಿ ಅನುವಾದಕರ ಪಾತ್ರ ಕೇವಲ ಭಾಷಾಂತರ. ಆದರೆ ಟ್ರಾನ್ಸ್‌ಕ್ರಿಯೇಶನ್‌ನಲ್ಲಿ ಅದು ರೂಪಾಂತರವೇ ಆಗಿಬಿಡುತ್ತದೆ.

Would you please give an example of best translated text for its artistic excellence?

ವಿ ಸ ಖಾಂಡೇಕರ ಅವರ ಯಯಾತಿ ಮರಾಠಿ ಕೃತಿಯ ಕನ್ನಡ ಅನುವಾದ ನನ್ನ ಮಟ್ಟಿಗೆ ಅತ್ಯಂತ ಗುಣಮಟ್ಟದ ಅನುವಾದ. ಇಡೀ ಕಾದಂಬರಿಯ ಗಂಭೀರತೆಯನ್ನು, ಆಳ ಅಗಲಗಳನ್ನು ಅದು ಚೆನ್ನಾಗಿ ಹಿಡಿದಿಟ್ಟಿದೆ. ಅದರ ಕಾದಂಬರಿ ಆವೃತ್ತಿಯನ್ನು ವಿ ಎಂ ಇನಾಂದಾರ್‌ (ಅವರು ನನ್ನ ಅತ್ಯಂತ ಮೆಚ್ಚಿನ ಕನ್ನಡ ಕಾದಂಬರಿಕಾರರೂ ಹೌದು) ಕನ್ನಡಕ್ಕೆ ತಂದರೆ, ನಾಟಕ ಆವೃತ್ತಿಯನ್ನು ಶ್ರೀ ಗಿರೀಶ್‌ ಕಾರ್ನಾಡ್‌ ತಂದಿದ್ದಾರೆ. ಎರಡೂ ಕೃತಿಗಳು ಶ್ರೇಷ್ಠವೇ ಎಂಬುದು ನನ್ನ ಅಭಿಪ್ರಾಯ.

What are the major issues encountered during translation of poetry?

ಕಾವ್ಯ ಮೂಡಿಸುವ ಛಾಯೆಗಳನ್ನು ಮತ್ತೊಂದು ಭಾಷೆಯಲ್ಲಿ ಪಡಿಮೂಡಿಸುವುದು ನಿಜಕ್ಕೂ ಸವಾಲಿನ ಕೆಲಸ. ಕಿಂದರಿ ಜೋಗಿ ನೀಳ್‌ಗವನವನ್ನು ಕುವೆಂಪು ಕನ್ನಡಕ್ಕೆ ತಂದಾಗ ಅದನ್ನು ಹೇಗೆ ರೂಪಾಂತರಿಸುತ್ತಲೇ ಅನುವಾದದ ಗುಣಗಳನ್ನೂ ಉಳಿಸಿಕೊಂಡರು ಎಂಬುದನ್ನು ಗಮನಿಸಬೇಕು.

ನಾನು ಕಾವ್ಯ ಅನುವಾದದಲ್ಲಿ ಅನುಭವಿಯಲ್ಲ. ಆದ್ದರಿಂದ ಇಲ್ಲಿ ಹೆಚ್ಚು ಹೇಳಲಾರೆ.

Film adaptations

ಯಾವುದೇ ಲಿಖಿತ ಕೃತಿಯನ್ನು ರಂಗದ ಮೇಲೆ ತರುವಾಗ ಹಲವು ಸವಾಲುಗಳಿರುತ್ತವೆ. ಮಾಧ್ಯಮದ ಮಿತಿ ಅಥವಾ ಅವಕಾಶಗಳು ಇಂತಹ ಮರುಸೃಷ್ಟಿಯಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ. ಮಲೆಗಳಲ್ಲಿ ಮದುಮಗಳು ಎಂಬ ಬೃಹತ್‌ ಕಾದಂಬರಿಯನ್ನು ನಾಟಕಕ್ಕೆ ತರುವಾಗ ಏನಾಯ್ತು, ಸಿನೆಮಾಗೆ ತರುವಾಗ ಏನಾಯ್ತು ಎಂಬುದನ್ನು ನಾವು ಗಮನಿಸಬೇಕು. ಇದು ಒಂದೇ ಭಾಷೆಯ ಮಾಧ್ಯಮ ಬದಲಾದರೇ ಇಷ್ಟೆಲ್ಲ ಗಮನಿಸಬೇಕು ಎಂದರೆ, ಒಂದು ಭಾಷೆಯ ಲಿಖಿತ ಕೃತಿಯನ್ನು ಇನ್ನೊಂದು  ಭಾಷೆಯ ರಂಗಕೃತಿಯಾಗಿ, ಬೆಳ್ಳಿ ತೆರೆಯ ಕೃತಿಯಾಗಿ ಮೂಡಿಸುವಾಗ ಸವಾಲುಗಳು ಹಲವುಪಟ್ಟು ಹೆಚ್ಚುತ್ತವೆ.

How do you consider translation as a cultural bridge between two cultures?

ಅನುವಾದವು ಕೇವಲ ಒಂದು ದೇಶದ ಸಂಸ್ಕೃತಿಯನ್ನು ಇನ್ನೊಂದು ದೇಶಕ್ಕೆ ಪರಿಚಯಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ತೆಲುಗಿನ ಜನಸಾಮಾನ್ಯರ ಕಾವ್ಯವನ್ನು ಕನ್ನಡಕ್ಕೆ  ತಂದಾಗ, ಅಥವಾ ಒಡಿಶಾ ರಾಜ್ಯದ ಬುಡಕಟ್ಟು ಜನರ ಕಾವ್ಯವನ್ನು ಒಡಿಯ ಭಾಷೆಗೆ ತಂದಾಗಲೂ ನಮಗೇ ಗೊತ್ತಿರದ ಹೊಸ ವಿಷಯಗಳು ಸಿಗುತ್ತವೆ. ಜೀವ ವೈವಿಧ್ಯ ಹೆಚ್ಚಾಗಿ ಇರುವಲ್ಲೇ ಜನಸಂಸ್ಖೃತಿ ವೈವಿಧ್ಯವೂ ಇರುತ್ತದೆ ಎಂಬುದನ್ನು ಈಗಾಗಲೇ ವೈಜ್ಞಾನಿಕವಾಗಿ ಸಾಬೀತು ಮಾಡಿದ್ದಾರೆ. ಆದ್ದರಿಂದ ವಿಶೇಷವಾಗಿ ಇಂತಹ ವೈವಿಧ್ಯಮಯ ಪ್ರದೇಶಗಳಿಂದ ಮೂಡುವ ಸಾಹಿತ್ಯ ಕೃತಿಗಳ ಅನುವಾದದಿಂದ ನಮ್ಮ ಸಂಸ್ಕೃತಿಯ ಅರಿವು ವಿಸ್ತರಿಸುತ್ತದೆ.

In the present context of the world as a global village, what do you think about the role of translation?

ರಾಬರ್ಟ್‌ ಮೆಕ್‌ಲುಹಾನ್‌ ಕಟ್ಟಿದ ವಿಶ್ವಗ್ರಾಮ ಅರ್ಥಾತ್‌ ಗ್ಲೋಬಲ್‌ ವಿಲೇಜ್‌ ಎಂಬುದು ನನ್ನ ಪ್ರಿಯವಾದ ಪದಗುಚ್ಛ. ಇಲ್ಲಿ ಅನುವಾದಕ್ಕೆ ದೊಡ್ಡ ಪಾತ್ರವಿದೆ. ಅದಕ್ಕೆಂದೇ ಈಗ ವಿಶ್ವದಾದ್ಯಂತ ಯಂತ್ರಾನುವಾದದ ಬಹುದೊಡ್ಡ ತಂತ್ರಜ್ಞಾನ ಆಂದೋಲನ ಆರಂಭವಾಗಿದೆ. ಮಾರುಕಟ್ಟೆ ಶಕ್ತಿಗಳಿಗೂ ಅನುವಾದ ಬೇಕು; ವೈವಿಧ್ಯವನ್ನು ಉಳಿಸಿಕೊಳ್ಳಲೂ ಅನುವಾದ ಬೇಕು. ನಮ್ಮ ದೇಶದಲ್ಲಿ ಇರುವ ತ್ರಿಭಾಷಾ ಸೂತ್ರ, ರಾಜ್ಯಭಾಷೆ, ಮಾತೃಭಾಷೆ, ಆಡಳಿತ ಭಾಷೆ, ರಾಷ್ಟ್ರೀಯ ಭಾಷೆ – ಈ ಎಲ್ಲಾ ಸಮಸ್ಯೆಗಳಿಗೂ ಯಂತ್ರಾನುವಾದದಲ್ಲಿ ಖಚಿತ ಪರಿಹಾರ ಇದೆ.

ಯುವಲ್‌ ನೋವಾ ಹರಾರಿ ಎಂಬ ಇಸ್ರೇಲಿ ತತ್ವಶಾಸ್ತ್ರಜ್ಞ  ಬರೆದ  21 Lessons for the 21st Century  ಪುಸ್ತಕದಲ್ಲಿ  ಕೃತಕ ಬುದ್ಧಿಮತ್ತೆಯು ಮುಂದಿನ ದಶಕಗಳಲ್ಲಿ ಮಾಡುವ ಎಲ್ಲ ಪರಿಣಾಮಗಳ ಚಿತ್ರಣ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಹಿಂದೆ ೧೯೯೯ರಲ್ಲಿ ಕಂಪ್ಯೂಟರ್‌ ಬುದ್ಧಿಮತ್ತೆಯ ಸಹಾಯದೊಂದಿಗೆ ಈ ಕಾಲದ ಅತ್ಯುತ್ತಮ ಚದುರಂಗ ಆಟಗಾರ ವಿಶ್ವನಾಥನ್‌ ಆನಂದ್‌ ಮತ್ತು ಕಾರ್ಪೋವ್‌  ಆಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ.

ಅನುವಾದವನ್ನೇ ಈಗ ಲೋಕಲೈಸೇಶನ್‌ ಅಥವಾ ದೇಸೀಕರಣ ಎಂದು ಕರೆಯುತ್ತಿದ್ದೇವೆ. ತಂತ್ರಜ್ಞಾನ ಬೆಳೆದಂತೆಲ್ಲ ಹೊಸ ಹೊಸ ಪದಗಳು, ಪದಗುಚ್ಛಗಳು ಬಂದಿವೆ. ಅವನ್ನೆಲ್ಲ ಬೇರೆ ಬೇರೆ ಭಾಷೆಗಳಿಗೆ ಅನುವಾದಿಸುವ ಕೆಲಸವನ್ನೇ ಲೋಕಲೈಸೇಶನ್‌ ಎಂದು ಕರೆದಿದ್ದೇವೆ. ಇಂದು ಲೋಕಲೈಸೇಶನ್‌ ಎಂಬುದು ಅತ್ಯಂತ ದೊಡ್ಡ ಉದ್ಯಮ ರಂಗವಾಗಿದೆ. ಬೃಹತ್‌ ಕಾಸಗಿ ಐಟಿ ಸಂಸ್ಥೆಗಳು ಇವನ್ನೆಲ್ಲ ದುಡ್ಡು ಕೊಟ್ಟು ಮಾಡುತ್ತಿವೆ; ಅಥವಾ ಕ್ರೌಡ್‌ಸೋರ್ಸಿಂಗ್‌ ಮೂಲಕ, ಕೊಲಾಬೊರಾಟಿವ್‌ ಆನ್‌ಲೈನ್‌ ಸಾಧನಗಳ ಮೂಲಕ ಮಾಡುತ್ತಿವೆ. ಆದ್ದರಿಂದ ಅನುವಾದದ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಾಗಿದೆ; ಆದರೆ ಅದಕ್ಕೆ ಬೇಕಾದ ಪರಿಣತಿಯ ಅಂಶಗಳೂ ಬದಲಾಗಿವೆ. ಟ್ರಾಡೋಸ್‌ ತಂತ್ರಾಂಶದ ಮೂಲಕ ಅನುವಾದ ಮಾಡುತ್ತ ಹೋದರೆ ಅದು ಕೃತಕ ಬುದ್ಧಿಮತ್ತೆಯನ್ನು ಬಳಸಿ, ಹಿಂದೆ ಮಾಡಿದ ಕೆಲಸವನ್ನೆಲ್ಲ  ನೆನಪಿನಲ್ಲಿ  ಇಟ್ಟುಕೊಳ್ಳುತ್ತದೆ.

ಕನ್ನಡದಿಂದ ತೆಲುಗಿಗೆ ಸೆಕೆಂಡಿಗೆ ಒಂದು ಲಕ್ಷ ವಾಕ್ಯಗಳನ್ನು (ಪದಗಳನ್ನಲ್ಲ – ಗಮನಿಸಿ) ಯಂತ್ರಾನುವಾದ (ಮೆಶಿನ್‌ ಟ್ರಾನ್ಸ್‌ಲೇಶನ್‌) ಮಾಡುವ `ಸಾರ’ ತಂತ್ರಾಂಶವನ್ನು ಹೈದರಾಬಾದ್‌ ವಿಶ್ವವಿದ್ಯಾಲಯದ ಪ್ರೊ|| ಕವಿ ನಾರಾಯಣಮೂರ್ತಿಯವರು ರೂಪಿಸಿದ್ದಾರೆ. ಒಂದು ಭಾರತೀಯ ಭಾಷೆಯಿಂದ ಇನ್ನೊಂದು ಭಾರತೀಯ ಭಾಷೆಗೆ  ಅನುವಾದ ಮಾಡುವ ಭಾರತದ ಅತ್ಯುತ್ತಮ ಎನ್ನಬಹುದಾದ  ತಂತ್ರಾಂಶವಿದು. ೧೯೮೭ರಿಂದ ಆರಂಭಿಸಿ ೩೦ ವರ್ಷಗಳ ಪರಿಶ್ರಮ ಮತ್ತು ಅನುಭವದಿಂದ ಈ ತಂತ್ರಾಂಶವನ್ನು ರೂಪಿಸಲಾಗಿದೆ.

ಬೆಂಗಳೂರಿನ ಗ್ನಾನಿ ಎಂಬ ಸ್ಟಾರ್ಟ್‌ಅಪ್‌ ಸಂಸ್ಥೆಯು  ಮಾತಿನಿಂದ ಲಿಪಿಗೆ, ಲಿಪಿಯಿಂದ ಇನ್ನೊಂದು ಭಾಷೆಗೆ, ಆ ಭಾಷೆಯ ಲಿಪಿಯಿಂದ ಆ ಭಾಷೆಯ ಧ್ವನಿಗೆ ಪರಿವರ್ತಿಸುವ ತಂತ್ರಾಂಶವನ್ನು ರೂಪಿಸಿದೆ. ಇದು ಗೂಗಲ್‌ ರೂಪಿಸಿದ ವಾಯ್ಸ್‌ ಟೈಪಿಂಗ್‌ ತಂತ್ರಾಂಶಕ್ಕಿಂತ ಹೆಚ್ಚು ನಿಖರವಾಗಿದೆ. ಕಿಬೋ ಎಂಬ ಸಂಸ್ಥೆಯ ದೃಷ್ಟಿ ಸವಾಲಿನ ಸಮುದಾಯಕ್ಕಾಗಿ ಪುಸ್ತಕಗಳನ್ನು ಸ್ಕಾನ್‌ ಮಾಡಿ ಓದುವ, ಅನುವಾದಿಸುವ ಸಾಧನವನ್ನು ಅಭಿವೃದ್ಧಿಪಡಿಸಿದೆ. ಹೀಗೆ ಹಲವು ಹೊಸ ಹೊಸ ಸಂಸ್ಥೆಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿ ಇಂತಹ ಸಾಧನಗಳನ್ನು ರೂಪಿಸುತ್ತಿದ್ದಾರೆ.

ಕೇಂದ್ರ ಸರ್ಕಾರವೂ ಈ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ಕೆಲವು ವರ್ಷಗಳಿಂದ ಮಾಡುತ್ತಲೇ ಬಂದಿದೆ. ಕೆಲವು ಇಲಾಖೆಗಳ ಆಡಳಿತ ದಾಖಲೆಗಳನ್ನು ಹಿಂದಿಗೆ  ಮತ್ತು ಕೆಲವು  ಭಾರತೀಯ ಭಾಷೆಗಳಿಗೆ ಅನುವಾದಿಸುವ ಸಾಧನಗಳನ್ನು ರೂಪಿಸಿದ್ದರೂ ಕ್ರಮಿಸಬೇಕಾದ ದಾರಿ ಇನ್ನೂ ದೂರ ಇದೆ.

In the context of India, how do you consider the translation helps in understanding real India and its culture?

ಇದಕ್ಕೇ ಮೊದಲೇ ಉತ್ತರಿಸಿದ್ದೇನೆ!

‘Translation is a unifying force’ please elaborate in the context of India- unity in diversity

ವಿವಿಧತೆಯಲ್ಲಿ ಏಕತೆ ಎಂದರೆ ವಿವಿಧತೆಗಳನ್ನು ಕರಗಿಸಿ ಏಕತೆ ಮೂಡಿಸುವುದಲ್ಲ; ವಿವಿಧತೆಗಳನ್ನು ಅರಿತು ನಾವೆಲ್ಲರೂ ಒಂದೇ ಬಗೆಯ ಜೀವನಶೈಲಿಗೆ, ಒಂದೇ ಬಗೆಯ ಸವಾಲುಗಳಿಗೆ ಒಡ್ಡಿಕೊಂಡವರು ಎಂಬುದನ್ನು ಪರಸ್ಪರ ಅರಿಯಲು.  ಒಂದು ಭಾಷೆಯಲ್ಲಿ ಯಾವುದೇ ಜ್ಞಾನವು ಹೆಚ್ಚಾಗಿ ಸೃಷ್ಟಿಯಾಗಿದ್ದರೆ ಅದನ್ನು ಬೇರೆ ಭಾಷೆಗೆ ತರುವುದರಿಂದ ಆ ಭಾಷೆಯ ಶ್ರೀಮಂತಿಕೆ ಹೆಚ್ಚಿಸಬಹುದು (ಮೈಸೂರು ವಿವಿ ವಿಶ್ವಕೋಶಗಳು)

Global understanding and international peace is possible through understanding each other’s culture: please elaborate

ಮತೀಯ ವಿಷಮತೆಗಳನ್ನು ತಗ್ಗಿಸಬೇಕು ಎಂದರೆ ಎಲ್ಲ ಮತಧರ್ಮಗಳ ಗ್ರಂಥಗಳು ಎಲ್ಲ ಭಾಷೆಗಳಿಗೂ ಅನುವಾದ ಆಗಬೇಕು. ಪ್ರಸ್ತುತ ನಡೆಯುತ್ತಿರುವ ಸಂಘರ್ಷಗಳು ಕೇವಲ ಮತೀಯ ಹಿನ್ನೆಲೆಯವು ಮಾತ್ರವೇ ಅಲ್ಲ; ಅವುಗಳಿಗೆ ಇಂಧನ ಸವಾಲಿನ, ಮಾರುಕಟ್ಟೆ ವಿಸ್ತರಣೆಯ ಹಲವು ಆಯಾಮಗಳಿವೆ. ಆದ್ದರಿಂದ ಅನುವಾದದ ಮೂಲಕ ಪರಸ್ಪರ ಸಂಸ್ಕೃತಿಗಳನ್ನು ಅರಿತು ಶಾಂತಿ ನೆಲೆಸುತ್ತದೆ ಎಂಬ ಖಚಿತ ನಂಬಿಕೆ ನನ್ನದಲ್ಲ. ಶಾಂತಿ ನೆಲೆಸಲು  ದೇಶಗಳ ನಡುವೆ ನಂಬಿಕೆ, ಸೌಹಾರ್ದತೆ ಇದ್ದರೆ ಸಾಕು.

Which translated Indian texts do you think has changed the image of India in the outside world?

ನಮ್ಮ ದೇಶದ ವೇದ, ಉಪನಿಷತ್ತುಗಳು ನಮ್ಮ ಪರಂಪರೆಯ ಜ್ಞಾನದ ಬಗ್ಗೆ ವಿದೇಶಗಳಲ್ಲಿ ಅರಿವು ಮೂಡಿಸಲು ಕಾರಣವಾಗಿವೆ. ಇಲ್ಲಿ ಭಾರತದ ವರ್ಚಸ್ಸು ಬದಲಾಯಿತು ಎನ್ನುವುದಕ್ಕಿಂತ ಭಾರತದ ಬಗ್ಗೆ ಇನ್ನಷ್ಟು ಮಾಹಿತಿ ಸಿಗುವಂತಾಯಿತು ಎನ್ನಬಹುದು.      ‌ 

What’s the role of translation in transforming society? Renaissance, Reformation and New Learning

ನನಗೆ ಈ ಬಗ್ಗೆ ಹೆಚ್ಚಿನ ಅರಿವಿಲ್ಲ. ಕ್ಷಮಿಸಿ.

How do you consider translation as a profession?

ಅನುವಾದವು ಒಂದು ವೃತ್ತಿ, ಅದು ಸಾಕಷ್ಟು ವರಮಾನ ಒದಗಿಸುತ್ತದೆ ಎಂದು ನಾನೂ ನಂಬಿದ್ದೇನೆ. ಆದರೆ ಈಗ ಯಂತ್ರಾನುವಾದದ ಅಭಿವೃದ್ಧಿಯಿಂದ ನನ್ನ ನಂಬಿಕೆಗಳೂ ಪ್ರಶ್ನೆಗೆ ಒಳಗಾಗಿವೆ. ಯಾವುದೇ ಯಂತ್ರಾನುವಾದವು ಮನುಷ್ಯ ನಿರ್ವಹಣೆಯಿಂದ ಮಾತ್ರವೇ ಸೂಕ್ತವಾದ ಗುಣಮಟ್ಟದಲ್ಲಿ ರೂಪುಗೊಳ್ಳುತ್ತದೆ. ಆದ್ದರಿಂದ ಅನುವಾದವನ್ನು ವೃತ್ತಿ ಎಂದು ಪರಿಗಣಿಸುವಾಗ ಈ ಎಲ್ಲ ಎಚ್ಚರಗಳನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಸೃಜನಶೀಲ ಸಾಹಿತ್ಯದಲ್ಲಿ ಮನುಷ್ಯರಿಗೆ ಮಾತ್ರ ಚೆನ್ನಾಗಿ ಅನುವಾದ ಮಾಡಲು ಬರುತ್ತದೆ ಎಂಬುದು ಈ ಕಾಲದ ಸತ್ಯ. ಆದ್ದರಿಂದ ಇನ್ನೂ ಕೆಲವು ದಶಕಗಳ ಕಾಲ ಅನುವಾದ ರಂಗವು ವೃತ್ತಿಪರವಾಗೇ ಇರುತ್ತದೆ ಎಂದು ನಾನು ನಂಬಿದ್ದೇನೆ. ಸರ್ಕಾರದ ನೀತಿಗಳು, ಭಾಷೆಗಳು ಮುಂದಿನ ದಿನಗಳಲ್ಲಿ ಉಳಿಯುವ ಬಗೆ, ನಾಗರಿಕರ ಮಾನಸಿಕತೆ ಇವೆಲ್ಲವೂ ಮುಂದಿನ ದಿನಗಳಲ್ಲೂ ಅನುವಾದಕ್ಕೆ ಪ್ರೋತ್ಸಾಹದಾಯಕವಾಗಿದ್ದರೆ ಅನುವಾದಕರಿಗೆ ಉತ್ತಮ ಅವಕಾಶಗಳಿವೆ.

What are the career opportunities for the good translators?

ನಮಗೆ ಇಷ್ಟವಾಗುವ ಸಾಹಿತ್ಯವನ್ನು ನಮ್ಮ ಅರಿವಿನ ಭಾಷೆಗೆ ಅನುವಾದಿಸುವ ಸೃಜನಶೀಲ ಅನುವಾದ ರಂಗ ಸದಾ ಮುಕ್ತವಾಗಿದೆ.

ಉಳಿದಂತೆ ಮಾಧ್ಯಮರಂಗದಲ್ಲಿ ಅನುವಾದ ಮತ್ತು ಸಂಪಾದನೆ ಮಾಡುವ ಪತ್ರಿಕಾಕಾಯಕದ ಕೆಲಸಗಳು ಡಿಜಿಟಲ್‌ ಮಾಧ್ಯಮವನ್ನೂ ಒಳಗೊಂಡಂತೆ ಇರುತ್ತವೆ.

ವಿಜ್ಞಾನ –  ತಂತ್ರಜ್ಞಾನ ರಂಗದಲ್ಲಿ ಮೊದಲೇ ಹೇಳಿದ ಹಾಗೆ ದೇಸೀಕರಣದ ಕೆಲಸಗಳು ಸಾಕಷ್ಟಿವೆ.

ಮೈಸೂರು ವಿಶ್ವವಿದ್ಯಾಲಯವು ಪ್ರಕಟಿಸಿರುವ ವಿಶ್ವಕೋಶಗಳು ಇರಬಹುದು, ಅಥವಾ ವಿಷಯ ವಿಶ್ವಕೋಶಗಳು ಇರಬಹುದು – ಇಂತಹ ದೇಶಕ್ಕೇ ವಿಶಿಷ್ಟವಾದ ಜ್ಞಾನ ಮೂಲಗಳನ್ನು ಎಲ್ಲ ಭಾರತೀಯ ಭಾಷೆಗಳಿಗೆ ಅನುವಾದಿಸುವ ಬಹುದೊಡ್ಡ ಅವಕಾಶ ಇದೆ. ಕೇಂದ್ರ ಸರ್ಕಾರದ ಸಂಸ್ಥೆಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ.

ಕೇಂದ್ರ ಸರ್ಕಾರದ ಸಮಗ್ರ ಮಾಹಿತಿಗಳನ್ನು ಆಯಾ ಭಾರತೀಯ ಭಾಷೆಗಳಲ್ಲಿ ನೀಡುವ ಬಹುದೊಡ್ಡ ಕೆಲಸ ಇನ್ನೂ ಆಗಬೇಕಿದೆ. ಕೇಂದ್ರ ಸರ್ಕಾರವು ಈ ಹಿಂದೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಲವು ಭಾಷೆಗಳಲ್ಲಿ ಪ್ರಕಟಿಸಿತು. ಅನುವಾದಕರು ಸಂಘಟಿತರಾಗಿ ಭಾಷಾಭಿವೃದ್ಧಿ ಮತ್ತು ಮಾಹಿತಿ ಹಂಚಿಕೆಯ ಹಿನ್ನೆಲೆಯಲ್ಲಿ ಸಕ್ರಿಯರಾಗಿ ಅಭಿಯಾನ ನಡೆಸಿದರೆ ಈ ಕೆಲಸಗಳಿಗೆ ಕೇಂದ್ರ ಸರ್ಕಾರವೂ ಒಪ್ಪುತ್ತದೆ ಎಂಬ ವಿಶ್ವಾಸ ನನ್ನದಾಗಿದೆ. ಕಾಯ್ದೆ ಕಾನೂನುಗಳು, ಮಾನದಂಡ ದಾಖಲೆಗಳು, – ಹೀಗೆ ಲಕ್ಷಗಟ್ಟಲೆ ಪುಟದ ಅನುವಾದದ ಕೆಲಸ ಬಾಕಿ ಇದೆ ಎಂಬುದೇ ನನ್ನ ಅಭಿಪ್ರಾಯ.  ಕೇಂದ್ರ ಸರ್ಕಾರದ ಬಜೆಟ್‌ ಕೂಡಾ ಮಂಡನೆಯಾದ ದಿನದಂದೇ ಹಲವು  ಭಾರತೀಯ ಭಾಷೆಗಳಲ್ಲಿ  ಪ್ರಕಟವಾಗುವ ಸಾಧ್ಯತೆ ಇದೆ.

ಇ – ಆಡಳಿತದಲ್ಲಿ  ವಿವಿಧ ಇಲಾಖೆಗಳ ಪದಕೋಶ, ಇಲಾಖಾ ದಾಖಲೆಗಳನ್ನು ಕನ್ನಡಕ್ಕೆ ಅನುವಾದಿಸುವ ಮಾರುಕಟ್ಟೆ ಇನ್ನಷ್ಟೇ ಬೆಳೆಯಬೇಕಿದೆ. ಕನ್ನಡದ ಅನುಷ್ಠಾನದ ಪ್ರಯತ್ನಗಳು ಹೆಚ್ಚಾದಂತೆಲ್ಲ ಈ ಅವಕಾಶಗಳು ತೆರೆದುಕೊಳ್ಳುತ್ತವೆ.

ಶಿಕ್ಷಣ ರಂಗದಲ್ಲಿ ನ್ಯಾಶನಲ್‌ ಟ್ರಾನ್ಸ್‌ಲೇಶನ್‌ ಮಿಶನ್‌ ಕಾರ್ಯವ್ಯಾಪ್ತಿಗಳು ವಿಸ್ತಾರವಾದರೆ ಮತ್ತು ವೇಗ ಪಡೆದರೆ, ಪಠ್ಯಪುಸ್ತಕಗಳನ್ನು ಅನುವಾದಿಸುವ ಅತ್ಯುತ್ತಮ ಅವಕಾಶಗಳು ಇವೆ. ಇಲ್ಲಿಯೂ ಕನ್ನಡ ಪದಗಳನ್ನು ರೂಪಿಸಬೇಕಾದ ಸವಾಲಿದೆ ಎಂಬುದನ್ನು ಮರೆಯುವಂತಿಲ್ಲ.

World of technology and role of translation

ಇದಕ್ಕೆ ಈಗಾಗಲೇ ಉತ್ತರಿಸಿದ್ದೇನೆ.

  1. CAT tools (computer-assisted translation)
  2. Machine Translation (MT)
  3. CMS – Content Management System
  4. TMS – Translation Management System (information systems and translation service portals)

ಇನ್ನು ದ್ವಿಭಾಷಿ ಅಥವಾ ಇಂಟರ್‌ಪ್ರಿಟರ್‌ ಎಂಬ ಮಹತ್ವದ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆನ್‌ಲೈನ್‌ ರಿಮೋಟ್‌ ಇಂಟರ್‌ಪ್ರಿಟಿಂಗ್‌ ಎಂಬ ಹೊಸ ವಿಧಾನಗಳೂ ಕಾಲಿಟ್ಟಿವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಅನುವಾದ ಮತ್ತು ದ್ವಿಭಾಷಿ ಸಂಸ್ಥೆಯನ್ನು ಸ್ಥಾಪಿಸಲಿದೆ ಎಂದು ನನ್ನ ಮೂಲಗಳು ತಿಳಿಸಿವೆ.

ಅನುವಾದದ ಲಿಖಿತ ಪ್ರಕ್ರಿಯೆಯ ಹಾಗೆಯೇ ಮೌಖಿಕ ಅನುವಾದ ತಂತ್ರಜ್ಞಾನವು ಈಗ ತುಂಬಾ ಜನಪ್ರಿಯವಾಗುತ್ತಿದೆ. ಇದರಿಂದ ಯಾವುದೇ ಭಾಷೆಯ ವ್ಯಕ್ತಿ ಇನ್ನೊಂದು ಭಾಷೆಯ ವ್ಯಕ್ತಿಯ ಜೊತೆಗೆ ಸುಲಭವಾಗಿ ಮಾತುಕತೆ ನಡೆಸಬಹುದು. ಮಧ್ಯದಲ್ಲಿ ಒಂದು ಮೊಬೈಲ್‌ ಇದ್ದರೆ ಸಾಕು! ಈಗ ಇಯರ್‌ಬಡ್‌ ನಂತಹ ಪುಟ್ಟ ಸಾಧನಗಳೂ ಬಂದಿದ್ದು ನೀವು ಸಹಜವಾಗಿಯೇ ಬೇರೆ ಭಾಷಿಗನೊಂದಿಗೆ ಮಾತುಕತೆ ನಡೆಸಬಹುದು.

Advertisement industry and Translation

ಜಾಹೀರಾತು ರಂಗದಲ್ಲಿ, ಸಿನೆಮಾ ರಂಗದಲ್ಲಿ ಅನುವಾದದ ಮತ್ತು ಕಾಪಿರೈಟಿಂಗ್‌ನ ಕೆಲಸಗಳು ಬಹಳಷ್ಟಿವೆ. ಸಬ್‌ಟೈಟಲ್‌ಗಳು ಮುಂದಿನ ದಿನಗಳಲ್ಲಿ ಯಂತ್ರಾನುವಾದದ ಮೂಲಕ ಗುಣಮಟ್ಟದಿಂದ ಕೂಡಿರುತ್ತವೆ ಎಂಬ ಊಹೆ ನನ್ನದು.

What’s your opinion about taking up translation as hobby or profession?

ನೀವು ಸೃಜನಶೀಲ ಕೃತಿಗಳನ್ನು ಅನುವಾದ ಮಾಡುವಿರಾದರೆ ಅದು ಒಂದು ಹವ್ಯಾಸ. ಏಕೆಂದರೆ ಮೂಲ ಲೇಖಕರಿಗೆ ಕೊಡುವ ರಾಯಲ್ಟಿಯ ಹೊರತಾಗಿ ನಿಮಗೆ ಸಿಗುವ ಸಂಭಾವನೆ ತುಂಬಾ ಕಡಿಮೆ.

ಆದರೆ ವೃತ್ತಿಪರ ಅನುವಾದ ಮಾಡಲು ಮುಂದಾದರೆ ಅದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕು.  ನಿಮ್ಮ ಕಪಾಟಿನಲ್ಲಿ ಸಾಕಷ್ಟು ನಿಘಂಟುಗಳಿರಬೇಕು. ಹಾಗೆಯೇ ತಂತ್ರಜ್ಞಾನವನ್ನು ಬಳಸಿ ಬೇಗನೆ ಗುಣಮಟ್ಟದ ಅನುವಾದ ಮಾಡಲು ತಿಳಿದಿರಬೇಕು. ಯುನಿಕೋಡ್‌ನಲ್ಲಿ ಅಕ್ಷರ ಜೋಡಣೆ,  ಕಂಪ್ಯೂಟರ್‌ ಜ್ಞಾನ, ಆನ್‌ಲೈನ್‌ ಕೊಲಾಬೊರೇಟಿವ್‌ ಕೆಲಸ ಇತ್ಯಾದಿ ತಂತ್ರಜ್ಞಾನದ ಅರಿವು ಇದ್ದಷ್ಟೂ ಹೆಚ್ಚು ಅವಕಾಶಗಳು ಸಿಗುತ್ತವೆ.

Awards and rewards for good translators

ಕುವೆಂಪು ಭಾಷಾ ಭಾರತಿಯು ಸ್ಥಾಪನೆಯಾಗಿರುವುದೇ ಕನ್ನಡ ಅನುವಾದ ಅಭಿಯಾನಕ್ಕಾಗಿ. ಅಲ್ಲಿ ಈಗಾಗಲೇ ಹಲವು ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ೨೪ ಭಾಷೆಗಳಲ್ಲಿ  ಶ್ರೇಷ್ಠ ಅನುವಾದ ಪ್ರಶಸ್ತಿಗಳನ್ನು ನೀಡುತ್ತಿದೆ.

Translation careers in India and abroad

ಆನ್‌ಲೈನ್‌ನಲ್ಲಿ ಹಲವು ಸಂಸ್ಥೆಗಳು ಅನುವಾದದ ಕೆಲಸ ಕೊಡುವ ಬಗ್ಗೆ ಪ್ರಚಾರ ಮಾಡುತ್ತಿವೆ. ಇಂತಹ ಸಂಸ್ಥೆಗಳನ್ನು ಅತ್ಯಂತ ಜಾಗರೂಕವಾಗಿ ನೋಡಿ ಸಂಪರ್ಕಿಸಬೇಕು. ದಿಲ್ಲಿ, ಬೆಂಗಳೂರಿನಲ್ಲಿ, ಹಲವು ಮಹಾನಗರಗಳಲ್ಲಿ  ಈ  ಸಂಸ್ಥೆಗಳ ಕಚೇರಿಗಳು ಇರುತ್ತವೆ. ಅಂತಹ ಸಂಸ್ಥೆಗಳಲ್ಲಿ ಅನುವಾದದ ಕೆಲಸಗಳು ಸಿಗುತ್ತವೆ. ಇಂತಹ ಸಂಸ್ಥೆಗಳ ಕರಾರು ಪತ್ರಗಳನ್ನು ಸೂಕ್ರವಾಗಿ ಪರಿಶೀಲಿಸಿಕೊಳ್ಳಬೇಕು.

How do you consider translation as knowledge creation process?

೨೧ನೆಯ ಶತಮಾನದ ಮೂರನೇ ದಶಕದಲ್ಲಿ ಹೆಜ್ಜೆ ಇಟ್ಟಿರುವ ಈ ಸಂದರ್ಭದಲ್ಲಿ ಜ್ಞಾನ ಸೃಷ್ಟಿಗೆ ಅನುವಾದವೇ ಮೂಲ. ನಗರೀಕರಣ ಮತ್ತು ಜಾಗತೀಕರಣದ ಈ ಸಂದರ್ಭದಲ್ಲಿ, ಹಲವು ಜಾಗತಿಕ ವಿಷಯಗಳು ಪರಸ್ಪರ ಬೆರೆತು ಸಂಕೀರ್ಣವಾಗಿರುವ ಈ ಹೊತ್ತಿನಲ್ಲಿ ಅನುವಾದವೇ ಜಾಗತಿಕ ಸೌಹಾರ್ದತೆಯ ಪ್ರಮುಖ ಅಂಶ. ಕಳೆದ ವರ್ಷವಷ್ಟೇ  ಸರಿಯಾದ ಅನುವಾದ ಮಾಡಲಿಲ್ಲ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷನು ತನ್ನ ಅನುವಾದಕಿಯನ್ನು ಸೆರೆಮನೆಗೆ ಅಟ್ಟಿದ್ದು ನೆನಪಾಗುತ್ತಿದೆ.

ಇಂದು ನಾವು ಕೇವಲ ಕನ್ನಡ ಸಾಹಿತ್ಯವನ್ನು ಓದಿದರೆ ಸಾಕಾಗುವುದಿಲ್ಲ. ಇಂಗ್ಲಿಶಿನಲ್ಲಿ ನಾಗತಿಕ ಚಿಂತನೆಗಳು ಮೂಡುತ್ತಿವೆ. ಆಫ್ರಿಕಾದ ನೆಲದಿಂದ, ದಕ್ಷಿಣ ಅಮೆರಿಕಾದ ನೆಲದಿಂದ, ರಶಿಯಾದಿಂದ ಹಲವು ಹೊಸ ಧ್ವನಿಗಳು, ಮನುಕುಲಕ್ಕೆ ಬೇಕಾದ ಮಹತ್ವದ ಚಿಂತನೆಗಳು ಮೂಡುತ್ತಿವೆ. ಅವನ್ನೆಲ್ಲ ನಾವು ಜ್ಞಾನಮೂಲವೆಂದೇ ತಿಳಿದು ಸ್ವೀಕರಿಸಬೇಕಿದೆ.

What do say about the future of translation studies? Please elaborate..

ಅನುವಾದ ರಂಗದ ಅಧ್ಯಯನವು ತುಂಬಾ ಸಂಕೀರ್ಣವಾದುದು. ರಾಷ್ಟ್ರೀಯ ಅನುವಾದ ಮಿಶನ್‌ ಈ ಕುರಿತು ಒಂದು ಮ್ಯಾಗಜಿನ್‌ನ್ನು ಪ್ರಕಟಿಸುತ್ತಿದೆ. ನಾನು ಅಕಡೆಮಿಕ್‌ ಅನುವಾದಕನಲ್ಲ. ಆದ್ದರಿಂದ ಈ ಬಗ್ಗೆ ನನ್ನಲ್ಲಿ ಹೆಚ್ಚು ಮಾಹಿತಿ ಇಲ್ಲ. ಆದರೆ ಅನುವಾದವನ್ನು ಒಂದು ಅಕಾಡೆಮಿಕ್‌ ವಿಷಯವಾಗಿ ನೋಡಿದಾಗ ಮುಂದಿನ ದಿನಗಳಲ್ಲೂ ಅನುವಾದದ ಹಲವು ಆಯಾಮಗಳ ಬಗ್ಗೆ ಅಧ್ಯಯನ ನಡೆಯುವುದು ಅವಶ್ಯ ಎಂಬುದೇ ನನ್ನ ಅಭಿಪ್ರಾಯ.

Share.
Leave A Reply Cancel Reply
Exit mobile version