ಜಾತ್ ಕಹಾ ಹೋ
ಅಕೇಲೀ ಗೋರೀ
ಜಾನೇ ನ ಪಾಯೋ
ಜಾತ್ ಕಹಾ ಹೋ
ಅಕೆ ಅಕೇಲಿ ಗೋರಿ
ಜಾನೇ ನ ಪಾಯೋ ರೇ
ಜಾತ್ ಕಹಾ ಹೋ
ಮೇರೀ ಅಕೇಲೀ
ಅಕೇಲೀ ಗೋರಿ
ಗೋರಿ…
ಜಾತ್ ಕಹಾ ಹೋ
ಮೇರೀ ಅಕೇಲೀ ಗೋರಿ
ಜಾನೇ ನ ಪಾಯೋ ರೇ
ಜಾತ್ ಕಹಾ ಹೋ
ಕೇಸರ್ ಮಾಂಗ್ ಕಾ
ಮೋರೀ ಕೇಸರ್ ರಂಗ್ ಕೆ
ಮಧ್‌ಭರೇ ಹೋಟ್
ಹೋಲಿ ಖೇಲತ್ ಕನ್ಹಾ ರೇ
ಜಾತ್ ಕಹಾ ಹೋ ಅಕೇಲೀ
ಜಾತ್ ಕಹಾ ಹೋ ಅಕೇಲೀ
ಜಾತ್ ಕಹಾ ಹೋ
ಭೈರವಿ ರಾಗದಲ್ಲಿ ಸುರ್‌ಶ್ರೀ ಕೇಸರ್‌ಬಾಯ್ ಕೇರ್‍ಕರ್ ಹಾಡುತ್ತಿದ್ದರೆ ಹಾಗೇ, ಹಾಗೇ ನೀವು ಕಳೆದುಹೋಗುತ್ತೀರಿ. ನಿಮ್ಮ ಸ್ಮೃತಿ ಪಟಲದಲ್ಲಿ ಎಲ್ಲೋ ಕುಳಿತ ಆ ಬಾಲೆಯ ನೆನಪು ನಿಮ್ಮನ್ನು ಕಾಡದೇ ಇರುವುದಿಲ್ಲ. ಆ ಬಾಲೆ ಎಲ್ಲಿದ್ದಾಳೋ, ಹೇಗಿದ್ದಾಳೋ, – ನಮಗೆ ಕಲ್ಪನೆಯೇ ಬರದಿರಬಹುದು. ಆದರೆ ಕೇಸರ್‌ಬಾಯ್ ಕೇರ್‍ಕರ್ ಕಂಠಸಿರಿಯಲ್ಲಿ ಮೂಡಿದ ಈ ಎದೆಮೀಟುವ ಪುಟ್ಟ ಹಾಡು ಭೂಮಿ – ಸೌರವ್ಯೂಹವನ್ನೆಲ್ಲ ದಾಟಿ ಅಕ್ಷರಶಃ ೧.೨೧ ಲಕ್ಷ ಕೋಟಿ ಮೈಲುಗಳ ದೂರವನ್ನೂ ದಾಟಿದೆ. ಅಲ್ಲೆಲ್ಲೋ ನಡೆದುಹೋಗುತ್ತಿರುವ ಬಾಲೆಗೆ ಈ ಹಾಡು ಕೇಳಿಸಿದರೆ, ಭೂಮಿಗೆ ಬರಬಹುದೇನೋ!
೧೯೭೭ರಲ್ಲಿ ಭೂಮಿಯಿಂದ ಆಗಸಕ್ಕೆ ಚಿಮ್ಮಿದ ವೊಯೇಜರ್ ೧ ವ್ಯೋಮನೌಕೆಯಲ್ಲಿ ಕೇಸರ್‌ಬಾಯಿ ಕೇರ್‍ಕರ್‌ರ ಈ ಹಾಡು ಭದ್ರವಾಗಿದೆ. ಅದರೊಂದಿಗೇ ಸಂಗೀತ ಮೋಡಿಗಾರ ಮೊಝಾರ್ಟ್, ಬಾ ಮತ್ತು ಚಕ್ ಬೆರ್‍ರಿ – ಇವರ ಸಂಗೀತವೂ ಸೇರಿದೆ. ಭೂಮಿಯ ಮನುಸಂಕುಲದ ಶ್ರೇಷ್ಠ ಸಂಗೀತಗಾರರ ಈ ಕೃತಿಗಳನ್ನು ಚಿನ್ನ ಲೇಪಿತ ತಾಮ್ರದ ತಟ್ಟೆಯೊಂದರಲ್ಲಿ ದಾಖಲಿಸಲಾಗಿದೆ. ಎಂದೋ ಒಂದು ದಿನ ವಿಶ್ವದ ಆ ತುದಿಯಲ್ಲಿರುವ ಸಂವೇದನಾಶೀಲ ಹೃದಯವೊಂದು ಈ ಹಾಡುಗಳನ್ನು, ಸಂಗೀತವನ್ನು ಕೇಳಲಿ ಎಂಬುದು ಮನುಷ್ಯನ ನಿರೀಕ್ಷೆ. ಕೊಂಚ ಅತಿನಿರೀಕ್ಷೆಯೇ! ಆದರೆ ತಪ್ಪು – ಸರಿ ಎಂದು ಹೇಳಲಾಗದ ಅಯೋಮಯ ಸ್ಥಿತಿ ನಮ್ಮದು.
ಕಾರಣವಿಷ್ಟೆ: ೧೩೮೨ ಕೋಟಿ ವರ್ಷಗಳ ಹಿಂದೆ ಮಹಾಸ್ಫೋಟ ಸಂಭವಿಸಿಯೇ ಈ ಬ್ರಹ್ಮಾಂಡ ಮೂಡಿತು ಎಂದು ವಿಜ್ಞಾನಿಗಳು ತರ್ಕಿಸಿದ್ದಾರೆ; ಈ ಬ್ರಹ್ಮಾಂಡದಲ್ಲಿ ಇರುವ ಅಸಂಖ್ಯ (ಎಣಿಸಲು ಸಾಧ್ಯವಿಲ್ಲ, ಆದರೆ ಖಚಿತ ಸಂಖ್ಯೆಯಲ್ಲೇ ಇರಬಹುದು ಎನ್ನಿ!) ನಕ್ಷತ್ರಪುಂಜಗಳ ಯಾವುದೋ ಒಂದು ಮೂಲೆಯ ಯಾವುದೋ ಒಂದು ಸೂರ್ಯನನ್ನು ಹೋಲುವ ನಕ್ಷತ್ರವೂ, ಅದನ್ನು ಸುತ್ತುವ ಹೆಚ್ಚುಕಡಿಮೆ ಭೂಮಿತೂಕದ, ವಾತಾವರಣವೂ ಇರುವ ಗ್ರಹವೂ ಇದ್ದಿದ್ದೇ ಹೌದಾದರೆ, ಅಲ್ಲೊಂದು ಜೀವವೂ ಇರಬಹುದು ಎಂಬ ತರ್ಕ ಇಲ್ಲಿದೆ. ಗಣಿತದ ಪ್ರಕಾರವೂ ಈ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನೆರಡು ವರ್ಷಗಳಲ್ಲಿ ಜೇಮ್ಸ್ ವೆಬ್ ಗಗನ ದೂರದರ್ಶಕವು ಭೂಮಿಥರದ ಗ್ರಹಗಳನ್ನು ಹುಡುಕಲೆಂದೇ ನಿಯೋಜನೆಗೊಳ್ಳಲಿದೆ. (ಈ ಲೇಖನದ ಮುಖ್ಯ ವಿಷಯ ಅನ್ಯಗ್ರಹ ಜೀವಿಗಳ ಕುರಿತಾಗಿ ಅಲ್ಲ! ಈ ಬಗ್ಗೆ ಇತ್ತೀಚೆಗೆ ಬಂದ ಶ್ರೀ ಸಿ ಆರ್ ಸತ್ಯ ಬರೆದ ಲೇಖನ ಇಲ್ಲಿದೆ ಓದಿ).
೧೯೬೩ರಲ್ಲಿ ಕೇಸರ್‌ಬಾಯಿ ಕೇರ್‍ಕರ್‌ರ ಗಾಯನದ ವಿವಿಧ ಚೀಸ್‌ಗಳಿರುವ ಇಎಎಲ್‌ಪಿ ೧೨೭೮ಕ್ಯು ಎಂಬ ಗ್ರಾಮಾಫೋನ್‌ನ ಒಂದನೇ ಬದಿಯ ಐದನೆಯ ಹಾಡಾಗಿ `ಜಾತೆ ಕಹಾ ಹೋ’ ಮೂಡಿದೆ. ಗ್ರಾಮಾಫೋನ್ ಕಂಪನಿ ಆಫ್ ಇಂಡಿಯಾ ಬಿಡುಗಡೆ ಮಾಡಿದ ಈ ಆಲ್ಬಮ್‌ನಲ್ಲಿ ಲಲತ್ (ಲಲಿತ್?), ತೋಡಿ, ಕುಕುಭ ಬಿಲಾವಲ್, ದೇಸಿ, ಲಲಿತಾ ಗೌರಿ, ನಟ ಕಾಮೋದ್, ಗೌಡ ಮಲ್ಹಾರ್, ಮಾಲಕೌನ್ಸ್ ರಾಗಗಳ ಗಾಯನವೂ ಇದೆ.
ಕೇಸರ್‌ಬಾಯಿ ಕೇರ್‍ಕರ್‌ರ ಈ ಹಾಡೇ ಏಕೆ ವೋಯೇಜರ್‌ನ ಸಂಗ್ರಹ ಸೇರಿತು?
`ಇಲ್ಲಿಂದ ೧೦೦ ಕೋಟಿ ವರ್ಷಗಳ ನಂತರ ನಮ್ಮ ಭೂಮಿಯು ಧೂಳಿನಂತಾದಾಗ, ಖಂಡಗಳೆಲ್ಲವೂ ಗುರುತೇ ಸಿಗದಂತೆ ಬದಲಾದಾಗ, ಮನುಕುಲವು ಊಹಿಸಲೇ ಸಾಧ್ಯವಿಲ್ಲದಂತೆ ವಿಕೃತಗೊಂಡಾಗ ಅಥವಾ ನಶಿಸಿಹೋದಾಗ, ವೋಯೇಜರ್‌ನಲ್ಲಿ ಇರುವ ಧ್ವನಿಗಳು ನಮ್ಮ ಪರವಾಗಿ ಉಳಿದುಕೊಳ್ಳುತ್ತವೆ’ ಹಾಗಂತ ಖ್ಯಾತ ವಿಜ್ಞಾನ ಸಂವಹನಕಾರ ಕಾರ್ಲ್ ಸಗಾನ್ ಹೇಳಿದ್ದನ್ನು ನೆನಪಿಸಿಕೊಳ್ಳಿ!
ಗೋವಾದ ಗುಡ್ಡಬೆಟ್ಟಗಳ ನಡುವಿನ ಹಳ್ಳಿಯಲ್ಲಿ ಹುಟ್ಟಿದ ಕೇಸರ್‌ಬಾಯಿ ಭಾರತವೇ ಮೆಚ್ಚಿಕೊಂಡ ಮಹಾನ್ ಹಿಂದುಸ್ತಾನಿ ಗಾಯಕಿಯಾದರು. ಅವರು ಹುಟ್ಟಿದ ಒಂದು ಶತಮಾನದ ನಂತರವೇ ನಾವು ಅವರ ದಿವ್ಯ ಚಹರೆಯನ್ನು ನೆನಪಿಸಿಕೊಳ್ಳುತ್ತಿದ್ದೇವೆ. ಈ ಕುರಿತು ಅನ್‌ಟೋಲ್ಡ್ ಎಂಬ ಜಾಲತಾಣವು ಅಪರೂಪದ ದಾಖಲೀಕರಣ ಮಾಡಿದೆ. ಕೇಸರ್‌ಬಾಯಿ ಕೇರ್‍ಕರ್‌ರ ಮರಿ ದಾಯಾದಿ ಶಲಾಕ ಕೇರ್‍ಕರ್‌ರನ್ನೇ ಮಾಡೆಲ್ ಮಾಡಿಕೊಂಡು ಜಾತೆ ಕಹಾ ಹೋ ಹಾಡಿನ ಹಿನ್ನೆಲೆ ಕಥೆಯನ್ನು ಚಿತ್ರೀಕರಿಸಿದೆ. ಕಪ್ಪು ಬಿಳುಪಿನಲ್ಲಿರುವ ಈ ಚಿತ್ರಗಳು ಹಾಡಿಗೆ ತಕ್ಕಂತೆಯೇ ಒಂದು ಬಗೆಯ ಗತಕಾಲದ ಸ್ಮರಣೆಯನ್ನು ತಂದುಕೊಡುತ್ತವೆ (ಉಳಿದವರು ಕಂಡಂತೆ ಸಿನೆಮಾದಲ್ಲೂ ಇಂಥ ತಂತ್ರದ ಬಳಕೆಯಾಗಿತ್ತು). ಕೇಸರ್‌ಬಾಯಿ ಕೇರ್‍ಕರ್‌ರ ಆ ಹಳೆಯ ಮನೆಗಳಲ್ಲೇ ಈ ಛಾಯಾಗ್ರಹಣ ನಡೆಯಿತು.ಶಲಾಕರಲ್ಲಿ ಕೇರ್‌ಬಾಯಿಯವರ ಅದೇ ಮುಗುಳ್ನಗೆ, ಅದೇ ಕೆನ್ನೆ, ಅದೇ ಕಡುಗಪ್ಪು ಉದ್ದ ತಲೆಗೂದಲು – ಎಲ್ಲವನ್ನೂ ಕಂಡ ಅನ್‌ಟೋಲ್ಡ್ ತಂಡಕ್ಕೆ ಅಚ್ಚರಿ, ಖುಷಿ ಎರಡೂ ಆಯಿತಂತೆ.
ಕೇಸರ್‌ಬಾಯಿ ಕೇರ್‍ಕರ್‌ರ ಸಂಗೀತ ಪರಂಪರೆಯನ್ನು ಅವರ ಕುಟುಂಬದಲ್ಲಿ ಅನುಸರಿಸಿಕೊಂಡು ಹೋದವರಿಲ್ಲ ಎಂಬುದೂ ವಾಸ್ತವ. ದಿನಕ್ಕೆ ೧೮ ತಾಸು ರಿಯಾಜ್ ಮಾಡುತ್ತಿದ್ದ ಆ ಮಹಾತಾಯಿಯ ನಾದದ ಅಲೆಯಲ್ಲಿ ಬೀದಿಯಲ್ಲಿ ಹೋಗುತ್ತಿದ್ದವರೆಲ್ಲರೂ ಮೀಯುತ್ತಿದ್ದರು. `ಮಾಯಿ, ನಿಮ್ಮ ಗಾಯನದ ಗ್ರಾಮಾಫೋನ್ ರೆಕಾರ್ಡ್ ಆಗಬೇಕು’ ಎಂದರೆ `ಇಲ್ಲ, ನನ್ನ ಸಂಗೀತವನ್ನು ಕೇಳುವವರು ಮೆಹಫಿಲ್‌ಗೆ ಬಂದು ಕೂರಬೇಕು’ ಎಂದು ಕೇಸರ್‌ಬಾಯಿ ಹೇಳುತ್ತಿದ್ದರೆಂದು ಅವರ ಮೊಮ್ಮಗಳು ಇಳಾ ಚೂರಿ ನೆನಪಿಸಿಕೊಳ್ಳುತ್ತಾರೆ. ಆದರೀಗ, ಅವರ ಒಂದು ಹಾಡು ವಿಶ್ವಖ್ಯಾತರೊಂದಿಗೆ ಸೇರಿಕೊಂಡು ಅಂತರತಾರಾ ವಲಯವನ್ನು ಪ್ರವೇಶಿಸಿದೆ.
`ವರ್ಲ್ಡ್ ಮ್ಯೂಸಿಕ್’ ಎಂಬ ಪದಗುಚ್ಛವನ್ನು ಚಾಲ್ತಿಗೆ ತಂದ ರಾಬರ್ಟ್ ಬ್ರೌನ್ ಎಂಬ ಸಂಗೀತತಜ್ಞರ ಪ್ರಕಾರ ಕೇಸರ್‌ಬಾಯಿಯವರ ಈ ಕೃತಿಯು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರತಿನಿಧಿಸುವ ಅತ್ಯುತ್ತಮ ಉದಾಹರಣೆ. ಅವರ ಸಲಹೆಯ ಮೇರೆಗೇ ಈ ಹಾಡು ಆಯ್ಕೆಯಾಯಿತು.
ಕೇಸರ್‌ಬಾಯಿಯವರ ಹಾಡು ಅಡಕವಾದ ಇತಿಹಾಸದ ಇನ್ನೊಂದು ವಿಶಿಷ್ಟತೆ ನೋಡಿ: ಅವರು ನಿಧನರಾಗಿದ್ದು ೧೯೭೭ರ ಸೆಪ್ಟೆಂಬರ್ ೧೬. ವೋಯೇಜರ್ ೧ ಗಗನಕ್ಕೆ ಚಿಮ್ಮಿದ್ದು ಅದೇ ೧೯೭೭ರ ಸೆಪ್ಟೆಂಬರ್ ೫!
ಮುಂಬಯಿಯಲ್ಲಿರುವ ನ್ಯಾಶನಲ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್‌ನ ಭೈರವಿ ರಾಗದ ಅಲೆಗಳ ವಿಶ್ಲೇಷಣೆಯ ಪುಟದಲ್ಲಿ ಕೇಸರ್‌ಬಾಯಿಯವರ `ಜಾತ್ ಕಹಾ ಹೋ’ ಹಾಡನ್ನೂ ಕೇಳಿ ಎಂಬ ಉಲ್ಲೇಖವಿದೆ.
ಹಿಂದುಸ್ತಾನಿ ಸಂಗೀತದ ಒಂದು ವಿಶೇಷ ಎಂದರೆ ಸಾಹಿತ್ಯವನ್ನು ಬಿಟ್ಟೂ ಗಾಯನವು ಒಂದು ಭಾವವನ್ನು ಮೀಟುತ್ತದೆ. ಭೈರವಿ ರಾಗವೂ ಹಾಗೆಯೇ. ಭಕ್ತಿ, ವಿರಕ್ತಿ, ಕರುಣೆ – ಹೀಗೆ ಹಲವು ರಸಗಳನ್ನು ಬಿಟ್ಟುಕೊಡುವ ಭೈರವಿಯನ್ನು ಪದಗಳಿಲ್ಲದೆಯೇ ಆಸ್ವಾದಿಸಬಹುದು. ಇಲ್ಲಿ ಮಾತ್ರ ಪದಗಳು ಭಾವತರಂಗಗಳೊಂದಿಗೆ ಹದವಾಗಿ ಮಿಳಿತಗೊಂಡು ಅಪೂರ್ವ ಅನುಭೂತಿ ಕೊಟ್ಟಿವೆ.
ಹೆಚ್ಚಿನ ಮಾಹಿತಿಗೆ
ಯುಟ್ಯೂಬಿನಲ್ಲಿ ಕೇಸರ್‌ಬಾಯಿಯವರ ಹಲವು ಸುದೀರ್ಘ ಗಾಯನ ಕಡತಗಳಿವೆ. ಕೇಳಿ ಆನಂದಿಸಿ.