ಅಕ್ಕು ಮತ್ತು ಲೀಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಗಮನ ಹರಿಸಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮನ್ನಣೆ ಒದಗಿಸಬೇಕು ಎಂದು ಮಿತ್ರಮಾಧ್ಯಮವು ಇಂದು (೫ ಅಕ್ಟೋಬರ್ ೨೦೧೨) ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ವಿನಂತಿಸಿದೆ. ಅವರನ್ನು ಮಿತ್ರಮಾಧ್ಯಮದ ಟ್ರಸ್ಟೀಗಳಾದ ಶ್ರೀ ಬೇಳೂರು ಸುದರ್ಶನ ಮತ್ತು ಶ್ರೀ ರಾಮನಾಥ ಜಿಪಿ ಮಯ್ಯರವರು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಕುರಿತು ಗಮನ ಹರಿಸುವುದಾಗಿ ಸಚಿವರು ಮಿತ್ರಮಾಧ್ಯಮಕ್ಕೆ ಭರವಸೆ ನೀಡಿದ್ದಾರೆ. ಮಿತ್ರಮಾಧ್ಯಮದ ಮನವಿಯ ಪೂರ್ಣಪಾಠ ಇಲ್ಲಿದೆ.
ಇವರಿಗೆ,
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು
ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವರು
ಕರ್ನಾಟಕ ಸರ್ಕಾರ
ವಿಧಾನಸೌಧ
ಬೆಂಗಳೂರು
ಮಾನ್ಯರೇ,
ವಿಷಯ: ಶ್ರೀಮತಿ ಅಕ್ಕು ಮತ್ತು ಲೀಲಾರವರ ವೇತನ : ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮನ್ನಣೆ ನೀಡಲು ವಿನಂತಿ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ ೨ ಅಕ್ಟೋಬರ್ ೨೦೧೨ರ ಗಾಂಧಿ ಜಯಂತಿಯಂದು ಶ್ರೀಮತಿ ಅಕ್ಕು ಮತ್ತು ಲೀಲಾರವರು ಬೆಂಗಳೂರಿಗೆ ಬಂದು ಪತ್ರಕರ್ತರ ಜೊತೆ ತಮ್ಮ ನೋವನ್ನು ಹಂಚಿಕೊಂಡಿರುತ್ತಾರೆ. ಸದರಿ ಪತ್ರಿಕಾಗೋಷ್ಠಿಗೆ ಬರುವಂತೆ ಮಿತ್ರಮಾಧ್ಯಮವೂ ಮಾಧ್ಯಮದ ಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿತ್ತು. ಈ ಕುರಿತ ಕೆಲವು ಪತ್ರಿಕಾ ತುಣುಕುಗಳನ್ನು ತಮ್ಮ ಅವಗಾಹನೆಗಾಗಿ ಸಲ್ಲಿಸುತ್ತಿದ್ದೇನೆ.
ಅಲ್ಲದೆ ಶ್ರೀಮತಿ ಅಕ್ಕು ಮತ್ತು ಲೀಲಾರವರ ವೇತನ ಕುರಿತಂತೆ ಇರುವ ಮಹತ್ವದ ಕೆಲವು ದಾಖಲೆಗಳನ್ನು ತಮ್ಮ ಗಮನಕ್ಕೆ ತರಲು ಈ ಪತ್ರದೊಂದಿಗೆ ಲಗತ್ತಿಸಿರುತ್ತೇನೆ. ದಿನಾಂಕ ೪ ಅಕ್ಟೋಬರ್ ೨೦೧೨ರಂದು ಲಂಡನ್ನಿನ ಟೆಲಿಗ್ರಾಫ್ ಪತ್ರಿಕೆಯಲ್ಲೂ ಈ ವಿಷಯವು ಪ್ರಕಟವಾಗಿದೆ. ಕರ್ನಾಟಕದ ಇಂಥ ಮಾನವ ಹಕ್ಕುಗಳ ನಿಸ್ಸೀಮ ನಿರ್ಲಕ್ಷ್ಯದ ಘಟನೆಯ ವಿದೇಶದ ಪತ್ರಿಕೆಗಳಲ್ಲಿ ಬಂದಿರುವುದು ನಮ್ಮ ರಾಜ್ಯಕ್ಕೆ, ಸರ್ಕಾರಕ್ಕೆ ಮತ್ತು ಜನತೆಗೆ ಅವಮಾನದ ವಿಷಯವೆಂದು ಮಿತ್ರಮಾಧ್ಯಮವು ಭಾವಿಸುತ್ತದೆ. ಆದರೆ ಈ ವಿಷಯವನ್ನು ಕರ್ನಾಟಕದ ಸರ್ಕಾರದ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದವರೆಗೆ ಎಳೆದು ತಂದು, ಆಮೇಲೆ ಅದು ಕೊಟ್ಟ ತೀರ್ಪನ್ನೇ ಎರಡೂವರೆ ವರ್ಷಗಳಿಂದ ಪಾಲಿಸದೇ ಹೋಗಿರುವುದು ಕೂಡಾ ಅತ್ಯಂತ ದುರದೃಷ್ಟಕರ ಸಂಗತಿ.
ತಾವು ದಯಮಾಡಿ ಈ ವಿಷಯದ ಬಗ್ಗೆ ತತ್‌ಕ್ಷಣವೇ ಸಂಬಂಧಿಸಿದ ಕಡತವನ್ನು ತರಿಸಿ, ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲನೆಗೆ ಸೂಕ್ತ ಆದೇಶವನ್ನು ನೀಡಿ ೪೨ ವರ್ಷಗಳಿಂದ ಅನ್ಯಾಯ ಅನುಭವಿಸಿದ ಇಬ್ಬರು ತಾಯಂದಿರಿಗೆ ನ್ಯಾಯ ಒದಗಿಸಲು ಮಿತ್ರಮಾಧ್ಯಮವು ಈ ಮೂಲಕ ವಿನಂತಿಸಿಕೊಳ್ಳುತ್ತದೆ.
ತಮ್ಮ ವಿಶ್ವಾಸಿ
(ಬೇಳೂರು ಸುದರ್ಶನ)
(ರಾಮನಾಥ ಜಿಪಿ ಮಯ್ಯ)
ಟ್ರಸ್ಟೀಗಳು