ನನ್ನ ವೃತ್ತಿಜೀವನದಲ್ಲಿ ಮೂವತ್ತಕ್ಕೂ ಹೆಚ್ಚು ಕೆಲಸಗಳನ್ನು ಮಾಡಿದ್ದೇನೆ ಅನ್ನೋದು ಒಳ್ಳೆ ಸುದ್ದಿಯೋ, ಕೆಟ್ಟದೋ ಗೊತ್ತಿಲ್ಲ! ಆದ್ರೆ ಈ ಕೆಲಸಗಳನ್ನು ಮಾಡುವಾಗ ಹಲವು ಬಗೆಯ ಕುಶಲತೆಗಳನ್ನು ಕಲಿತಿದ್ದು ಮಾತ್ರ ನಿಜ. ಅವುಗಳಲ್ಲಿ ಕೆಲವು ಕಾಲಬಾಹಿರವಾಗಿವೆ ಅನ್ನೋದೂ ವಾಸ್ತವವೇ! ( ಕೆಲಸಕ್ಕೆ ಸೇರುವ ಮುನ್ನ ಒಟ್ಟು ಹನ್ನೊಂದು ಊರುಗಳಲ್ಲಿ ಹದಿನೈದು ಶಾಲೆಗಳಲ್ಲಿ ಓದಿದ್ದೆ!)
1991ರವರೆಗೆ ಕೇವಲ ಕವನ ಬರೆಯುವುದೇ ಜೀವನ ಎಂದು ತಿಳಿದು, ಎಬಿವಿಪಿಯ ‘ವಿದ್ಯಾರ್ಥಿ ಪಥ’ ಮ್ಯಾಗಜಿನ್ ಮಾಡುತ್ತ ಲೇಖನಗಳನ್ನು ಬರೆಯಲು ಆರಂಭಿಸಿದ ನಾನು ಆಮೇಲೆ ಪತ್ರಕರ್ತನಾದೆ. ಲೆಟರ್ ಪ್ರೆಸ್ ಹೇಗೆ ಕೆಲಸ ಮಾಡುತ್ತದೆ, ಅದರಲ್ಲಿ ಗ್ಯಾಲಿ ಪ್ರಿಂಟ್ ಅಂದರೇನು, ಪ್ರೂಫ್ ಹಾಕುವುದು ಹೇಗೆ, ಫೈ ಆಗುವುದು ಅಂದ್ರೇನು ಅನ್ನೋದನ್ನೆಲ್ಲ ಈ ಕಾಲದಲ್ಲಿ ಕಲಿತೆ. ಡಿಎಂಎಂ ಫೌಂಡ್ರಿ, ಡಿಎಂಎಂ ಬ್ಲಾಕ್ ಮೇಕಿಂಗ್ – ಎಲ್ಲ ಗೊತ್ತಾಗಿದ್ದು ಆಗ್ಲೇ! ಗೋಡೆ ಬರಹ (ವಾಲ್ ರೈಟಿಂಗ್), ಕರಪತ್ರ ವಿನ್ಯಾಸ ಇತ್ಯಾದಿ ಕಲಿತಿದ್ದೂ ಎಬಿವಿಪಿಯಿಂದಲೇ. ಪೋಸ್ಟರ್ ಹಚ್ಚುವುದೂ ಒಂದು ಕಲೆ ಎಂದು ಅರಿವಾಗಿದ್ದೂ ಆ ಕಾಲದಲ್ಲಿ ದಾವಣಗೆರೆಯನ್ನು ಸರಿರಾತ್ರಿ ಸುತ್ತಿದಾಗಲೇ. ಚೀನಾದ ಟಿಯಾನನ್ಮನ್ ನರಮೇಧವಾದಾಗ ರೋಷ ಉಕ್ಕಿ ಮೆಜೆಸ್ಟಿಕ್ಕಿನಲ್ಲಿ ಒಬ್ಬನೇ ಗೋಡೆ ಬರಹ ಮಾಡಲು ಹೋಗಿ ಕುಡುಕರಿಂದ ಹೊಡೆಸಿಕೊಂಡಿದ್ದೂ ಒಂದು ಇತಿಹಾಸ!
ಈ ಕಾಲದಲ್ಲೇ ನಾಡೋಜ ಎಸ್ ಆರ್ ರಾಮಸ್ವಾಮಿಯವರ ಸೂಚನೆಯಂತೆ ಉತ್ಥಾನ ಪತ್ರಿಕೆಗೆ ವಿಜ್ಞಾನ ಲೇಖನಗಳನ್ನು ಚಿತ್ರ ಸಹಿತ ಬರೆದೆ.
ಆ ಕಾಲದ ಆಫ್ ಸೆಟ್ ಮುದ್ರಣದ ಉಪವೃತ್ತಿಗಳಾದ ಪೇಸ್ಟಪ್ (ಅದರಲ್ಲಿ ಕಪ್ಪು ಬಿಳುಪು ಪೇಸ್ಟಪ್ ಬೇರೆ, ಫೋರ್ ಕಲರ್ ಪೇಸ್ಟಪ್ ಬೇರೆ, ಪುಸ್ತಕದ ಪೇಸ್ಟಪ್ ಬೇರೆ, ಟ್ಯಾಬ್ಲಾಯ್ಡ್ ಪೇಸ್ಟಪ್ ಬೇರೆ!!), ಫೋಟೋ ನೆಗೆಟಿವ್ – ಪಾಸಿಟಿವ್, ಪ್ಲೇಟ್ ಮೇಕಿಂಗ್ (ಇದರಲ್ಲಿ ಮೂರು ವಿಧ: ಡೀಪ್ ಎಚ್, ಎಕ್ಸ್ಪೋಜರ್, ಅಲ್ಬುಮಿನ್) ಕಲಿತೆ.
ಈಗ ಇವೆಲ್ಲ ನಿಮಗೆ ಗ್ರೀಕ್ ಭಾಷೆಯಾಗಿ ಕಂಡಿರಬಹುದು. ಈ ವೃತ್ತಿಗಳೇ ಈಗ ಇಲ್ಲ ಬಿಡಿ!
ಪತ್ರಕರ್ತನಾದ ಮೊದಲ ಇನಿಂಗ್ಸ್ನಲ್ಲಿ ಎಡಿಟ್ ಪುಟಕ್ಕೆಂದು ಸುಮಾರು ಎಂಬತ್ತು ಲೇಖನಗಳನ್ನು ಅನುವಾದಿಸಿ / ಸ್ವಂತ ಬರೆದು ಇಟ್ಟುಕೊಂಡಿದ್ದೆ. ಹೀಗೆ ನನ್ನ ಬರವಣಿಗೆಯ ಅಭ್ಯಾಸ ಶುರುವಾಯ್ತು. ಆ ಕಾಲದಲ್ಲೇ ಪಿಯುಸಿ ದಿನಗಳಲ್ಲಿ ಒಂದು ಕಥೆ ಬರೆದು ಬಹುಮಾನ ಗಿಟ್ಟಿಸಿಕೊಂಡ ನೆನಪಿನಲ್ಲಿ ಮಯೂರಕ್ಕೆ ಒಂದು ಕಥೆ ಬರೆದು ಕಳಿಸಿ ಅದೂ ಪ್ರಕಟವಾಗಿ ಕತೆಗಾರನಾದೆ! ಒಟ್ಟಿನಲ್ಲಿ ಬರೆದಿದ್ದು ಹೆಚ್ಚೆಂದರೆ ಇಪ್ಪತ್ತು ಕತೆಗಳು. ಅವುಗಳಲ್ಲಿ ಒಂದು ಇಂಗ್ಲಿಶ್ ಕತೆಯೂ ಸೇರಿದೆ! ಹುಡುಗುತನದ ಭರಾಟೆಯಲ್ಲಿ ಪುಂಖಾನುಪುಂಖವಾಗಿ ಕವನಗಳನ್ನು ಬರೆದಿದ್ದೂ ನಿಜ.
ಈಗ ಕತೆ – ಕವನ ಬರೆಯುವುದರಲ್ಲಿ ಯಾವ ಆಸಕ್ತಿಯೂ ಇಲ್ಲದೇ ಹೋಗಿದೆ!
ಹೊಸದಿಗಂತ ಸೇರಿದ ಮೇಲೆ ಸುದ್ದಿಗಳ ಅನುವಾದ, ಸಂಪಾದನೆ ಎಲ್ಲ ಕಲಿತೆ. ಅಲ್ಲಿ ಬ್ರಾಡ್ಶೀಟ್ ಪೇಜಿನೇಶನ್ ಕಲಿತಿದ್ದು, ಎರಡೇ ದಿನಗಳಲ್ಲಿ ಪೇಜ್ ಕಟ್ಟುವ ಕಲೆಯನ್ನು ರೂಢಿಸಿಕೊಂಡಿದ್ದು ಆ ಕಾಲದ ಒಂದು ಸಾಹಸ.
ಯಾವುದೇ ವಿಷಯದ ಬಗ್ಗೆ ಲೇಖನ ಬರೆದರೆ ಅದರ ಮುಂದಿನ ಆಗುಹೋಗುಗಳ ಬಗ್ಗೆ ಒಂದು ಕಣ್ಣಿಡುವುದು ನನ್ನ ಚಟ. ಸಿಂಧೂ ಲಿಪಿ, ಟಿಬೆಟ್, ಚೀನಾ, ಕಸ ನಿರ್ವಹಣೆ, ಜೈವಿಕ ಇಂಧನ, ಇಂಧನ ನೀತಿ, ಕನ್ನಡ ಭಾಷಾ ತಂತ್ರಜ್ಞಾನ, ಹಿಂದುಸ್ತಾನಿ ಸಂಗೀತ, – ಹೀಗೆ ಹಲವು ವಿಷಯಗಳನ್ನು ಹಿಂಬಾಲಿಸುತ್ತ ಸಾಕಷ್ಟು ಸಮಯ ಕಳೆದಿದ್ದೇನೆ….. ಅಲ್ಲ ಕೂಡಿದ್ದೇನೆ. ಕಲಿವ ತವಕದಲ್ಲಿ ನನಗೆ ತುಂಬಾ ಆಸಕ್ತಿಯಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ.
ಒಂದು ಸಲ ಪ್ರಕಾಶಕನಾಗಿ ಹದಿನೈದು ಪುಸ್ತಕಗಳನ್ನು ಪ್ರಕಟಿಸಿದೆ. ಆಮೇಲೆ ಪುಸ್ತಕ ಮಾರಾಟದ ರಾಜಕೀಯ – ಭ್ರಷ್ಟ ಆಚರಣೆಗಳನ್ನು ಕಂಡು ಅದನ್ನು ನಿಲ್ಲಿಸಿದೆ.
ಹಿಂದುಸ್ತಾನಿ ಸಂಗೀತದ ಸೆಳೆತ ಎಷ್ಟಾಯ್ತು ಅಂದ್ರೆ ಬಾನ್ಸುರಿ ಕಲಿಯಲೂ ಶುರು ಮಾಡಿದೆ. ವಿಧಿಯಾಟಕ್ಕೆ ನನ್ನ ಗುರುಗಳನ್ನು ಕಳೆದುಕೊಂಡೆ. ಆದ್ರೂ ಏನೇನೋ ಬಾರಿಸ್ತಾ ಹಾಗೇ ಗುರುಗಳ ನೆನಪಿನಲ್ಲಿ ಸಮಯ ಕಳೆಯುತ್ತೇನೆ. ಕಚೇರಿ ಕೊಡುವ ಗುರಿಗಿಂತ ಕಲಿಯಬೇಕಾದ್ದೆಷ್ಟು ಇದೆ, ಇದೆಂತಹ ಅಗಾಧ ಜ್ಞಾನ ಸಾಗರ ಎಂದು ಅಚ್ಚರಿಪಡುವುದರಲ್ಲೇ ನನಗೆ ಸಮಾಧಾನವಿದೆ. ಶ್ರುತಿ, ಲಯ, ರಾಗ, ಗೇಯತೆ, ಭಾವ, – ಏನೆಲ್ಲ ಕಾಂಬಿನೇಶನ್ಗಳಲ್ಲಿ ರಸಭರಿತ ಚೀಸ್ ಸೃಷ್ಟಿಸಬೇಕಿದೆ ಎಂಬ ಅರಿವಿನಿಂದ ಮೂಕನಾಗಿದ್ದೇನೆ.
ಕೆಲಸಗಳನ್ನು ಜಂಪ್ ಮಾಡುತ್ತ ಮಾಡುತ್ತ ಕೊಳೆನೀರನ್ನು ಶುದ್ಧೀಕರಿಸುವುದನ್ನು ಕಲಿತೆ; ಪೇಜಿನೇಶನ್ ತಂತ್ರಾಂಶಗಳನ್ನೂ ಕರಗತ ಮಾಡಿಕೊಂಡೆ (ಪೇಜ್ ಮೇಕರ್, ಎಂ ಎಸ್ ಪಬ್ಲಿಶರ್, ಕ್ವಾರ್ಕ್ ಎಕ್ಸ್ಪ್ರೆಸ್, ಇನ್ಡಿಸೈನ್, ಸ್ಕ್ರೈಬಸ್ ಹೀಗೆ); ಸ್ವಲ್ಪ ರಾಜಕೀಯ ಪ್ರಚಾರದ ಕಲೆಯನ್ನೂ ರೂಢಿಸಿಕೊಂಡೆ; ಸಿನೆಮಾ – ಪುಸ್ತಕ ವಿಮರ್ಶೆ ಬರೆದೆ.
ವಿಜ್ಞಾನ, ತಂತ್ರಜ್ಞಾನದ ಲೇಖನಗಳನ್ನು ಬರೆಯುತ್ತ ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮವನ್ನೂ ಶುರು ಮಾಡಿದೆ. ಆದರೆ ಸಹಭಾಗಿಗಳ ಅನೈತಿಕ ವರ್ತನೆಯಿಂದ ಬೇಸತ್ತು ದೂರ ಉಳಿದೆ. ಈ ಹೊತ್ತಿನಲ್ಲಿ ಮನುಷ್ಯರನ್ನು ದ್ವೇಷಿಸುವುದೂ ಎಷ್ಟು ಅಗತ್ಯ ಎಂಬುದನ್ನು ಕಲಿತೆ.
ಹೌದು ಕಣ್ರೀ, ಅಪ್ಪಟ ಮನುಷ್ಯನಲ್ಲಿ ದ್ವೇಷವೂ ಮನೆ ಮಾಡಿರುತ್ತದೆ. ಅದಿಲ್ಲದೆ ಹೋದರೆ ಬದುಕೊಂದು ಲೈಫೇ ಅಲ್ಲ!!
ನೀವು ನಂಬುವುದಾದರೆ, ಮಿತ್ರ ನಾಗೇಂದ್ರ ಸಾಗರನ ಜೊತೆ ಪ್ರವಾಸ ಹೋಗಿದ್ದಾಗ ಸಿಕ್ಕಿದ ಬಿದಿರಿನಲ್ಲಿ ನಾನೇ ತಯಾರಿಸಿದ ಕೊಳಲಿನಿಂದ ಈಗಲೂ ಸ್ವರ ಹೊರಡುತ್ತದೆ. ಎರಡು ವರ್ಷಗಳ ಹಿಂದೆ ಆಂಡ್ರಾಯ್ಡ್ ಸ್ಟುಡಿಯೋ ಬಳಸದೆಯೇ ಪರೀಕ್ಷಾರ್ಥ ಕನ್ನಡ ನಿಘಂಟು ಆಪ್ ನ್ನೂ ಮಾಡಿದೆ. ಓಸಿಆರ್ ತಂತ್ರಜ್ಞಾನ ಬಂದಮೇಲೆ ಟೆಸೆರಾಕ್ಟ್ ಬಳಸಲು ನಾನೇ ಗೂಗಲ್ ಮಾಡಿ ಬ್ಯಾಚ್ ಪ್ರಾಸೆಸ್ ಕೋಡ್ ನ್ನು ಕಂಪೈಲ್ ಮಾಡಿದೆ. ಅದರ ಮೂಲಕ ಸುಮಾರು 11 ಲಕ್ಷ ಪುಟಗಳನ್ನು ಓಸಿಆರ್ ಮಾಡಿದ್ದರಲ್ಲಿ ನನ್ನ ಪಾಲು 4 ಲಕ್ಷ ಪುಟಗಳು.
ಹಂಪಿ ಕನ್ನಡ ವಿವಿಗಾಗಿ ನಾಲ್ಕು ಪಠ್ಯಪುಸ್ತಕಗಳನ್ನು ಬರೆದೆ. ಸದ್ಯ ನಾಲ್ಕು ವಿವಿಗಳ ಯಾವುದೋ ಪಠ್ಯಪುಸ್ತಕಗಳಲ್ಲಿ (ನನಗೆ ಗೌರವ ಪ್ರತಿ ಕಳಿಸಲ್ವಲ್ಲ!!) ನನ್ನ ನುಡಿಚಿತ್ರಗಳಿವೆ ಎಂದು ಬಲ್ಲೆ. ವಿವಿಗಳಲ್ಲಿ ಗೋಷ್ಠಿಗಳನ್ನು ನಡೆಸಿಕೊಟ್ಟಿದ್ದೇನೆ; ಜೆ ಎನ್ ಯು ನ ಅಂತಾರಾಷ್ಟ್ರೀಯ ಸೆಮಿನಾರಿನಲ್ಲಿ ಕನ್ನಡ ತಂತ್ರಜ್ಞಾನ ಕುರಿತ ಪ್ರಬಂಧ ಮಂಡಿಸಿದ್ದೇನೆ (ಇನ್ನೊಬ್ಬ ತಜ್ಞರೂ ಜೊತೆಯಾಗಿದ್ದರು ಅನ್ನಿ).
ಭಾರತವಾಣಿ ಯೋಜನೆಯ ಮೂಲಕ ಭಾರತೀಯ ಭಾಷೆಗಳ ಅತಿದೊಡ್ಡ ನಿಘಂಟು ಪದಕೋಶ ಸಂಗ್ರಹದ ಆಪ್ ಮಾಡಿದ್ದು ನನ್ನ ಜೀವನದ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ.
ನಮಗೆ ದುಡಿಯುವ ಅನಿವಾರ್ಯತೆ, ಕಲಿಯುವ ತವಕ ಇದ್ದರೆ, ಚಿಕ್ಕ ದುಡಿಮೆಯೂ ಖುಷಿ ಕೊಡುತ್ತದೆ; ಒಂದಷ್ಟು ಕಲಿಸುತ್ತಲೂ ಇರುತ್ತದೆ ಎಂದು ಹೇಳಲು ಇಷ್ಟೆಲ್ಲ ಬರೆದೆ. ಯಾಕಂದ್ರೆ ನಾನು ಸೆಕೆಂಡ್ ಪಿಯುಗೇ ಶಿಕ್ಷಣ ನಿಲ್ಲಿಸಿದ್ದು ಎಂಬ ಕೀಳರಿಮೆ ನನ್ನಲ್ಲಿತ್ತು; ಈಗ್ಲೂ ಸ್ವಲ್ಪ ಇದೆ. ಅದನ್ನು ಮೀರಲು ನಾನು ಹಲವು ಕೆಲಸಗಳನ್ನು ಕಲಿತೆ; ಸ್ಪರ್ಧೆಯಲ್ಲಿ ಅರ್ಹತೆ ಗಿಟ್ಟಿಸಲು ಹೆಣಗಿದೆ. ಹೊರತು ಇದರಲ್ಲಿ ಕೊಳಲು ಬಿಟ್ಟರೆ, ನಾನಾಗೇ ಕಲಿಯಬೇಕಾದ ಸಂಗತಿಗಳು ಇಲ್ಲವೇ ಇಲ್ಲ.
ಇಂದಿನ ಹಲವು ಯುವಕ – ಯುವತಿಯರು ವಿದ್ಯಾರ್ಹತೆ ಆಧಾರದಲ್ಲಿ ಒಂದು ನಿರ್ದಿಷ್ಟ ಕೆಲಸವನ್ನೇ ಸರಿಯಾಗಿ ಮಾಡದೇ ಇರೋದನ್ನು ನೋಡ್ತಾ ಇದ್ದಾಗ, ನಾನೇ ಹುಚ್ಚನಾ ಅಂತ ಅನ್ನಿಸಿಬಿಟ್ಟಿದೆ. ಉದಾಹರಣೆಗೆ: ಕೋರೆಲ್ ಡ್ರಾ ಗೊತ್ತಿದ್ದವರಿಗೆ ಇಂಕ್ ಸ್ಕೇಪ್ ಇದೆ ಅನ್ನೋದೇ ಗೊತ್ತಿರಲ್ಲ!!
ಆದ್ರೆ ಜಗತ್ತು ತುಂಬಾ ಬದಲಾಗಿದೆ. ನನಗೆ ಗೊತ್ತಿರದ ಇನ್ನೂ ನೂರಾರು ಸಂಗತಿಗಳು ನನ್ನ ಸುತ್ತಮುತ್ತಲೇ ನಡೀತಿವೆ ಎಂಬ ಅರಿವು ನನ್ನಲ್ಲಿದೆ. ಗೊತ್ತಿಲ್ಲ ಅಂತ ಗೊತ್ತಿರೋದೇ ಉತ್ತಮವಂತೆ. ಅಷ್ಟಾದ್ರೂ ಸಾಕು ಅಲ್ವೆ?
ಬನ್ನಿ ಬೇಕಾದ್ರೆ ಆನ್ ಲೈನ್ ಚೆಸ್ ಆಡುವಾ…
Share.
Leave A Reply Cancel Reply
Exit mobile version