೧೯೮೭ರಲ್ಲಿ ವಿಶ್ವವ್ಯಾಪಿ ಜಾಲವೇ (world wide web, www) ಇರಲಿಲ್ಲ.  ಆಗ  ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ವಿಜ್ಞಾನ ಬರವಣಿಗೆಗೆ ಹಚ್ಚಿದವರು `ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಎಸ್‌ ಆರ್‌ ರಾಮಸ್ವಾಮಿಯವರು. ಎರಡನೇ ಮಹಡಿಯಿಂದ ಮೆತ್ತಗೆ ಐದನೇ ಮಹಡಿಗೆ ಬಂದು ನನ್ನ ಮೇಜಿನ ಮೇಲೆ ಒಂದೆರಡು ಪತ್ರಿಕೆಗಳನ್ನು ಚೆಲ್ಲಿ `ಒಂದು ಲೇಖನ ಕೊಡಿ’ ಎಂದು ತಣ್ಣಗೆ ಹೇಳಿ ಹೊರಟುಹೋಗುತ್ತಿದ್ದರು. ನಾನು ಬರೆದ ಮೇಲೆ ಅದನ್ನು ತಿದ್ದಿ ಪ್ರಕಟಿಸುತ್ತಿದ್ದರು. ನನ್ನನ್ನು ವಿಜ್ಞಾನ ಲೇಖಕನನ್ನಾಗಿ ಮಾಡಿದವರೇ ಅವರು ಎಂದು ಈ ಹೊತ್ತಿನಲ್ಲೂ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ. ಈ ಲೇಖನದ ಚಿತ್ರವನ್ನೂ ಅವರೇ ನನ್ನಿಂದ ಬರೆಯಿಸಿದರು. ಈಗ, ೨೭ ವರ್ಷಗಳ ನಂತರ ಈ ಲೇಖನವನ್ನು ಓದಿದರೆ, ಪರವಾಗಿಲ್ಲ, ತಪ್ಪಾಗೇನೂ ಬರೆದಿಲ್ಲ; ಸ್ವಲ್ಪ ಭವಿಷ್ಯದ ದೃಷ್ಟಿಕೋನವನ್ನೂ ಒಳಗೊಂಡಿದೆ ಅನ್ನಿಸುತ್ತದೆ. ನೀವು ಓದಿ, ಪ್ರತಿಕ್ರಿಯಿಸಿ. ಹೀಗೆ ಬರೆದ ಇನ್ನೂ ಕೆಲವು ಲೇಖನಗಳನ್ನು ಡಿಜಿಟೈಸ್‌ ಮಾಡಿ ಪ್ರಕಟಿಸಲಿದ್ದೇನೆ. ಆಪ್ಟಿಕಲ್‌ ಫೈಬರ್‌ ಬಗ್ಗೆ ಬಂದ ಮೊದಲ ಲೇಖನವೇ ಇದಾಗಿರಬಹುದೇನೋ ಎಂಬ ಸಂಶಯವೂ ನನ್ನದು!
ಕ್ಷಣ ಕ್ಷಣಕ್ಕೂ ಸಂಕೀರ್ಣವಾಗುತ್ತಿರುವ ಮಾನವನ ಬದುಕಿನಲ್ಲಿ ಸಂಪರ್ಕ ಮಾಧ್ಯಮಗಳ ಪಾತ್ರ ಹಿರಿದು, ಇಲ್ಲಿಯವರೆಗೆ ಆಗಿರುವ ಸಂಪರ್ಕ ಮಾಧ್ಯಮಗಳ ಸುಧಾರಣೆಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬರದಿದ್ದರೂ, ಹೊಸ ಸಂಪರ್ಕ ಮಾಧ್ಯಮವೊಂದರ ಅನ್ವೇಷಣೆಯಿಂದಾಗಿ ಸಾಧನಗಳಿಗೆ ಕಾಯಕಲ್ಪ ದೊರಕಿದಂತಾಗಿದೆ. ಸಂಪರ್ಕ ಕ್ಷೇತ್ರದ ಬಹುಪಾಲು ಸಮಸ್ಯೆಗಳನ್ನು ‘ಒಂದೇ ಏಟಿಗೆ’ ನಿವಾರಿಸಿದ ಜ್ಯೋತಿಸ್ತಂತುಗಳು ಮಾನವನ ಪ್ರಮುಖ ಅನ್ವೇಷಣೆಗಳಲ್ಲೊಂದಾಗಿದೆ. ಕೆಲವೇ ವರ್ಷಗಳಲ್ಲಿ ಎಲ್ಲೆಡೆಯೂ ಲಭ್ಯವಾಗುವ ಈ ತಂತುಗಳು ದೂರವಾಣಿಯ ಗ್ರಾಹಕರ ಸಮಸ್ಯೆಗಳನ್ನು ತಪ್ಪಿಸುತ್ತದೆ. ದೂರದರ್ಶನದ ಪ್ರಿಯವೀಕ್ಷಕರ ಏಕತಾನತೆಯನ್ನು ನಿವಾರಿಸುತ್ತವೆ. ಟೆಲೆಕ್ಸ್ ಗ್ರಾಹಕರು ಉಪಗ್ರಹಕ್ಕೆ ಕಾಯುವ ಪ್ರಮೇಯವನ್ನು ತಡೆಯುತ್ತದೆ.
ಬೆಳಕಿನ ಕೇಬಲ್
ಬೆಳಕನ್ನೂ ಸಂಪರ್ಕಮಾಧ್ಯಮವಾಗಿ ಉಪಯೋಗಿಸಬಹುದೆಂಬ ಸತ್ಯವನ್ನು ಈ ಶತಮಾನದ ಮೊದಲಲ್ಲೇ ಶೋಧಿಸಲಾಗಿತ್ತು. ದೂರವಾಣಿಯನ್ನು ಸೃಷ್ಟಿಸಿದ ಗ್ರಹಾಂಬೆಲ್ ಸೆಲೆನಿಯಮ್ ಲೋಹದಲ್ಲಿ ಬೆಳಕನ್ನು ಪ್ರತಿಫಲಿಸಿ ಶಬ್ದಗಳನ್ನು ಸಾಗಿಸುವ ವಿಧಾನವನ್ನು ಕಂಡುಹಿಡಿದಿದ್ದ. ದುರದೃಷ್ಟವಶಾತ್ ಅದರಲ್ಲಿ ಪ್ರಗತಿಯಾಗಲಿಲ್ಲ. ಆದರೆ ಕೆಲವೇ ದಶಕಗಳ ಹಿಂದೆ ಕಂಡು ಹಿಡಿದ ಜ್ಯೋತಿಸ್ತಂತುಗಳು ಈಗ ಸುಧಾರಿಸಲ್ಪಟ್ಟು ಮಾನವನಿಗೆ ಅತ್ಯಗತ್ಯವಾದ ವಿಜ್ಞಾನಶಾಸ್ತ್ರವಾಗಿ ಬೆಳೆದು ಬಂದಿದೆ.
ಶಬ್ದವನ್ನಾಗಲಿ, ಅಕ್ಷರವನ್ನಾಗಲಿ, ಚಿತ್ರಗಳನ್ನಾಗಲಿ ಬೆಳಕಿನ ರೂಪದ ವಿದ್ಯುತ್ ಕಾಂತಿಯ ಅಲೆಗಳನ್ನಾಗಿ ಪರಿವರ್ತಿಸಬಹುದುದಷ್ಟೇ..? ಇಂತಃ ಪರಿವರ್ತಿತ ಬೆಳಕಿನ ಸೂಕ್ಷ್ಮ ಕಿರಣಗಳನ್ನೂ (ಸಾಮಾನ್ಯವಾಗಿ ಲೇಸರ್) ಒಂದು ನಿರ್ದಿಷ್ಟವಾದ ಕೋನದಲ್ಲಿ ಶುದ್ದವಾದ ಗಾಜಿನ ಎಳೆಯೊಳಗೆ (ಸಾಮಾನ್ಯವಾಗಿ ಸಿಲಿಕಾನ್ ಗಾಜು ) ಹಾಯಿಸಿದರೆ ಅವು ಗಾಜಿನ ಒಳಮೈಯಲ್ಲಿ ಆಂತರಿಕವಾಗಿ ಪ್ರತಿಫಲನಗೊಳ್ಳುತ್ತಾ ಚಕಚಕನೆ ಮುಂದೆ ಸಾಗುತ್ತವೆ. ಹೀಗೆ ಸಾಗಿದ ಬೆಳಕನ್ನು ಯಥಾವತ್ ಶಬ್ದ – ಚಿತ್ರ – ಅಕ್ಷರಗಳನ್ನಾಗಿ ಪರಿವರ್ತಿಸಿದರೆ ನಮ್ಮ ಕೆಲಸ ಮುಗಿದಂತೆ ಇಂತಹ ನೂರಾರು ಸೂಕ್ಷ್ಮ ಜ್ಯೋತಿಸ್ತಂತುಗಳನ್ನು ಒಟ್ಟುಗೂಡಿಸಿ ‘ನಾರು’ ರೂಪದಲ್ಲಿ ಜೋಡಿಸಿ ರಕ್ಷಕ ಹೊದಿಕೆ ಕೊಟ್ಟು ‘ಕೇಬಲ್ ‘ ಮಾಡಿದರಾಯಿತು ; ನಮ್ಮ ನವೀನ ಸಂಪರ್ಕ ಮಾಧ್ಯಮ ಸಿದ್ದ. ತಂತಿಕೆರೆಗಳನ್ನು ಸಾಗಿಸುವ ತಾಮ್ರದ ತಂತಿಗಳಂತೇ ಈ ಬೆಳಕಿನ ಕೇಬಲ್ ಗಳನ್ನು ನೆಲದಲ್ಲಿ ಹುಗಿಯಬೇಕು. ಹೀಗಾಗಿ ತಾಪತ್ರಯವೇ ಇಲ್ಲ. ಬದಲಿಗೆ ಇದರ ಉಪಯೋಗಗಳೇ ಹೆಚ್ಚು.
ಹೆಚ್ಚುಗಾರಿಕೆ
ಮೊದಲನೆಯದಾಗಿ ಈ ಜ್ಯೋತಿಸ್ತಂತುಗಳು ನಶಿಸುವ, ತುಂಡಾಗುವ ಸಾಧ್ಯತೆಗಳು ತೀರಾ ಕಡಿಮೆ. ಹೀಗಾಗಿ ಪದೇಪದೇ ಹೊಸ ಕೇಬಲ್ ಗಳನ್ನು ಹಾಕುವ ಅಗತ್ಯವಿಲ್ಲ. ಆರ್ಥಿಕವಾಗಿ ಸಾಕಷು ಉಳಿತಾಯ ಸಾಧಿಸಬಹುದು.
ಎರಡನೇಯದಾಗಿ ಜ್ಯೋತಿಸ್ತಂತುಗಳು ಕಾರ್ಯಸಾಮರ್ಥ್ಯ ‘ವಿಪರೀತ ೧’ ತಾಮ್ರದ ತಂತಿಗಳಿಗಿಂತ ಕಡಿಮೆ ಸ್ಥಳಾವಕಾಶದಲ್ಲಿ ಸಾವಿರಾರು ಪಟ್ಟು ಹೆಚ್ಚು ಸಂದೇಶಗಳನ್ನು ‘ಕ್ಷಣಾರ್ಧ’ಕ್ಕಿಂತ ಕಡಿಮೆ ಸಮಯದಲ್ಲಿ ಸಾಗಿಸಬಹುದು. ಇದರಿಂದಾಗಿ ಸಂಪರ್ಕ ಮಾಧ್ಯಮದ ಸಾಮರ್ಥ್ಯ ಹೆಚ್ಚುತ್ತದೆ. ಎಷ್ಟಾದರೂ ದೂರವಾಣಿಗಳನ್ನು ಗ್ರಾಹಕರಿಗೆ ನಿರಾಯಾಸವಾಗಿ ಒದಗಿಸಬಹುದು. ದೂರದರ್ಶನದ ಎಲ್ಲಾ ಚಾನೆಲ್ ಗಳನ್ನು ದೇಶದೆಲ್ಲೆಡೆಯೂ ಒಯ್ಯಬಹುದು. ಸುದ್ದಿಗಳನ್ನಂತೂ ಎತ್ತಬೇಕೆಂದರಲ್ಲಿ ಎತ್ತಿ ಒಗೆಯಬಹುದು!
ಮೂರನೆಯದಾಗಿ ಶುದ್ದತೆ ಜ್ಯೋತಿಸ್ತಂತುಗಳಿಗೆ ಉಪಯೋಗಿಸುವ ಗಾಜು ಅತ್ಯಂತ ಶುದ್ಧವಾಗಿರುತ್ತದೆ. ಸಂದೇಶವಾಹಕ ಬೆಳಕೂ ಶುದ್ಧವೆಂದು ಬೇರೆ ಹೇಳಬೇಕಾಗಿಲ್ಲ. ಹೀಗಾಗಿ ಗ್ರಾಹಕ ಕೇಂದ್ರಕ್ಕೆ ತಲುಪುವ ಸಂದೇಶದಲ್ಲಿ ಅತ್ಯಂತ ನಿಖರತೆ ಸಾಧ್ಯ.ಬೆಳಕೇ ಸಂಪರ್ಕ ಮಾಧ್ಯಮವಾಗಿರುವುದರಿಂದ ಸಮಯದಲ್ಲೂ ಉಳಿತಾಯ ಸಾಧನೆ. ಈ ಜ್ಯೋತಿಸ್ತಂತುಗಳನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಸಂಪರ್ಕಕ್ಕೆ ಒಳಪಡಿಸಬಹುದಾದ್ದರಿಂದ ಸಂದೇಶವು ಯಾವುದೇ ದಲ್ಲಾಳಿ (ಎಕ್ಸ್ ಚೇಂಜ್ ಗಳು , ಉಪಗ್ರಹಗಳು ಇತ್ಯಾದಿ ಕೇಂದ್ರಗಳು) ಯ ಸಹಾಯವಿಲ್ಲದೆ ನೇರವಾಗಿ ತಲುಪುತ್ತದೆ.
ನಾಲ್ಕನೆಯದಾಗಿ ಖರ್ಚು – ವೆಚ್ಚದಲ್ಲಿ ಭಾರಿ ಇಳಿತ. ಸಂದೇಶಗಳನ್ನು ಬೆಳಕನ್ನಾಗಿ ಮತ್ತು ಬೆಳಕನ್ನು ಸಂದೇಶವನ್ನಾಗಿ ಪರಿವರ್ತಿಸುವ ಕೆಲಸ ಬಿಟ್ಟರೆ ಬೇರೆ ಯಾವುದಕ್ಕೂ ವಿದ್ಯುತ್ ಇನ್ನಿತರ ಶಕ್ತಿಯ ಅಗತ್ಯವಿಲ್ಲ. ಇದರಿಂದಾಗಿ ಗ್ರಾಹಕರಿಗೆ ಬರುವ ಬಿಲ್ , ಶಾಕ್ ಕೊಡುವಷ್ಟು ಕಡಿಮೆಯಾಗಿರುತ್ತದೆ.
ದೈತ್ಯ ಶಕ್ತಿ
ಈ ತಂತುಗಳ ಸಾಮರ್ಥ್ಯವೈಶಾಲ್ಯವನ್ನು ಹೀಗೆ ಹೇಳುವುದಕ್ಕಿಂತ ಒಂದು ಚಿಕ್ಕ ಉದಾಹರಣೆ ಹೆಚ್ಚು ಉಪಯುಕ್ತವಾದೀತು. ಒಂದು ‘ಬೆಳಕಿನ ನಾರು’ (Optical Fibre) ಬ್ರಿಟಾನಿಕಾ ಸೂಕ್ಷ್ಮ ವಿವರಗಳನ್ನು ಸೆಕೆಂಡಿಗೆ ನೂರಹದಿನೇಳು ಕಿ. ಮೀ ಗಳಷ್ಟು ದೂರ ಒಯ್ಯುತ್ತದೆ…!
ಈ ಜ್ಯೋತಿಸ್ತಂತುಗಳು ಒಂದೇ ಒಂದು ಚಿಕ್ಕ ತೊಡಕಾದ ಸಂದೇಶವಾಹಕ ಬೆಳಕಿನ ಅತ್ಯಲ್ಪ ನಷ್ಟವನ್ನು ತಡೆಯಲು ಅತೀ ಶುದ್ಧವಾದ ಗಾಜಿನ ಶೋಧನೆ ನಡೆದಿದೆ. ಬೆಳಕನ್ನು ಹಾಯಿಸುವ ಮತ್ತು ಸಂಗ್ರಹಿಸುವ ಉಪಕರಣಗಳ ಮುಖ್ಯಾಂಗಗಳಾದ ಲೇಸರ್ ಮತ್ತು ಡಯೋಡ್ ಗಳನ್ನೂ ಸುಧಾರಿಸಲಾಗುತ್ತಿದೆ. ಇತ್ತೀಚಿಗೆ ತಂತುಗಳಲ್ಲಿ “೧” ಮತ್ತು “O” ಅಂಕಸಂದೇಶಗಳನ್ನು ಇನ್ನಷ್ಟು (ಡಿಜಿಟಲ್ ಸಿಗ್ನಲ್ ) ಬೆಳಕನ್ನೇ ಪ್ರವಹಿಸಲಾಗುತ್ತಿದೆ. ಇದರಿಂದಾಗಿ ಸಂದೇಶಗಳನ್ನು ಇನ್ನಷ್ಟು ಕರಾರುವಾಕ್ಕಾಗಿ, ಸ್ಪಷ್ಟವಾಗಿ ಅರ್ಥೈಸಲು (de-coding) ಸಾಧ್ಯವಾಗಿದೆ.
ಅಮೇರಿಕಾದ ಪೂರ್ವ ಸಮುದ್ರತೀರದ ಬಹುಪಾಲು ನಗರಗಳು ಜ್ಯೋತಿಸ್ತಂತುಗಳ ಸಂಪರ್ಕ ಪಡೆದಿದೆ. ಜಪಾನ್ ಸಹ ಈ ವಿಜ್ಞಾನ ಸಮುದ್ರತಳದಲ್ಲಿ ಈ ಕೇಬಲ್ ಗಳನ್ನು ಹಾಸಿ ಅಮೇರಿಕಾ – ಯುರೋಪ್ ಸಂಪರ್ಕ ಕಲ್ಪಿಸುವ ಯೋಜನೆ ಕಾರ್ಯಗತವಾಗಲಿದೆ.
ಕಾಲದ ವಿರುದ್ದದ ಪ್ರಗತಿಯ ಓಟದಲ್ಲಿ ಜ್ಯೋತಿಸ್ತಂತುಗಳ ಅನ್ವೇಷಣೆ ಒಂದು ದೈತ್ಯ ಹೆಜ್ಜೆ.
(ಉತ್ಥಾನದಲ್ಲಿ ಪ್ರಕಟಿತ July 1987)
Share.
Leave A Reply Cancel Reply
Exit mobile version