ಸ್ಥಾವರಕ್ಕಳಿವಿಲ್ಲ: ನಿಜ, ವಸುಂಧರೆಯ ಒಡಲಿನ ಮೇಲಿನ ಹುಣ್ಣಾದ ಛಿದ್ರ ಪರಮಾಣು ಸ್ಥಾವರಗಳಿಗೂ….

ಈ ಮನುಷ್ಯರು ಕೆಲವೊಮ್ಮೆ ಏನೆಲ್ಲ ದಾಖಲೆಗಳನ್ನು ಸ್ಥಾಪಿಸುತ್ತಾರೆ ಎಂದರೆ… ಮೂವತ್ತೊಂದು ವರ್ಷಗಳ ಹಿಂದೆ ಇಡೀ ಜಗತ್ತೇ ತತ್ತರಿಸುವಂತಹ ಚೆರ್ನೋಬಿಲ್‌ ಪರಮಾಣು ಸ್ಥಾವರ ಸ್ಫೋಟಕ್ಕೆ ಈ ಮನುಷ್ಯರೇ ಕಾರಣರಾದರು. ಸ್ಥಾವರದ ೨೦೦೦ ಟನ್‌ ಭಾರದ ಕವಚವೇ ಸಿಡಿದು, ಹಿರೋಶಿಮಾ ಬಾಂಬ್‌ಗಿಂತ ೯೦ ಪಟ್ಟು (ಇನ್ನೊಂದು ಸಾಕ್ಷ್ಯಚಿತ್ರದಲ್ಲಿ ೪೦೦ ಹಿರೋಶಿಮಾ ಬಾಂಬ್‌ಗೆ ಸಮ ಎಂಬ ಉಲ್ಲೇಖವಿದೆ) ಹೆಚ್ಚಿನ ಪ್ರಮಾಣದ ವಿಕಿರಣವು ಎಲ್ಲೆಡೆ ಆವರಿಸಿತ್ತು. ಅಧಿಕೃತವಾಗಿ ೨೫೦ ಚಿಲ್ಲರೆ ಜನರು ಸತ್ತರೆಂದು ರಶಿಯಾ ಪ್ರಕಟಿಸಿ ಕೈ ತೊಳೆದುಕೊಂಡಿತು. ನಿಜವಾಗಿ ಸತ್ತವರು ೫ ಸಾವಿರಕ್ಕೂ ಹೆಚ್ಚು ಜನರು. ಸ್ಫೋಟಗೊಂಡ ೪ ನೇ ಕ್ರಮಸಂಖ್ಯೆಯ ಸ್ಥಾವರದ ಮೇಲೆ ಅವಸರದಿಂದ ಒಂದು ಕವಚವನ್ನು ತೊಡಿಸಿತು. ಸುದ್ದಿಗಳನ್ನು ಹೊರಗೆ ಬಿಡದೆಯೇ ಐದು ವರ್ಷಗಳ ಕಾಲ ಮುಚ್ಚಿಟ್ಟಿತು. ಇದೀಗ ಇದೇ ಕವಚದ ಮೇಲೆ ಇನ್ನೊಂದು ಕವಚವನ್ನು ಹೊದಿಸಲಾಗಿದೆ. ಈ ಕವಚದ ತಂತ್ರಜ್ಞಾನದಲ್ಲಿ ಮುಖ್ಯ ಪಾತ್ರ ವಹಿಸಿದವರು ಫ್ರಾನ್ಸಿನವರು!

ಏನಾದರೂ ಇರಲಿ, ಮನುಕುಲ ಇರುವವರೆಗೆ ಈ ಬೃಹತ್‌ ಪರಮಾಣು ಹುಣ್ಣು ಮಾಸುವುದಿಲ್ಲ.

ಮನುಷ್ಯನ ದುರಾಸೆಯ ಕುರವನ್ನು ಒಣಗಿಸಲು ಬರುವುದಿಲ್ಲ. ಇದರ ಬೀಜ ಒಡೆಯುವುದಿಲ್ಲ.  ಈ ಹುಣ್ಣಿನ ಕೀವು ಹೊರಗೆ ಹರಿಯುತ್ತಲೇ ಇದೆ. ಈ ಹೃದಯವಿದ್ರಾವಕ ಘಟನೆಗಳನ್ನೇ ನಿರೂಪಿಸಿದ ಸ್ವೆತ್ಲಾನಾ ಅಲೆಕ್ಸಿವಿಕ್‌ಗೆ ಇತ್ತೀಚೆಗೆ ಸಾಹಿತ್ಯದ ನೊಬೆಲ್‌ ಬಂತು. ಅಕರಾಳ ವಿಕರಾಳದ ಪ್ರಾಣಿಗಳು, ಪಕ್ಷಿಗಳು, ಹೂವುಗಳು, ಹಣ್ಣು – ತರಕಾರಿಗಳು, ಮನುಷ್ಯರು – ಎಲ್ಲರೂ ಹುಟ್ಟಿದ ಬಗ್ಗೆ ಹಲವು ಸಾಕ್ಷ್ಯಚಿತ್ರಗಳು ಬಂದಿವೆ. ಅವುಗಳಲ್ಲಿ ಒಂದು ಇಲ್ಲಿದೆ:   https://www.youtube.com/watch?v=zGhphEqmrHU

ಈ ಮನುಷ್ಯರು ಇನ್ನೂ ಎಷ್ಟು ವಿಚಿತ್ರ ಎಂದರೆ ಚೆರ್ನೋಬಿಲ್‌ ದುರಂತಕ್ಕಿಂತ ಮೊದಲೇ ಒಂದು ಸಿನೆಮಾವನ್ನು ನಿರ್ಮಿಸಿದ್ದರು. ಆಂದ್ರೆ ತರ್ಕೋವ್‌ಸ್ಕಿ ಎಂಬಾತ ೧೯೭೯ರಲ್ಲೇ ರಶಿಯಾದಲ್ಲೇ ನಿರ್ಮಿಸಿದ ಸ್ಟಾಕರ್‌ ಎಂಬ ಸಿನೆಮಾವನ್ನು ನೋಡಿದರೆ ನೀವು ಚೆರ್ನೋಬಿಲ್‌ನ್ನೇ ನೆನಪಿಸಿಕೊಳ್ಳುತ್ತೀರಿ! (https://en.wikipedia.org/wiki/Stalker_(1979_film))

ಚೆರ್ನೋಬಿಲ್‌ನಂಥ ಇನ್ನೊಂದು ದುರಂತವು ಜಪಾನಿನಲ್ಲಿ ೨೦೧೧ರಲ್ಲಿ ಭೀಕರ ತ್ಸುನಾಮಿಯೊಂದಿಗೆ ಘಟಿಸಿತು. ಫುಕುಶಿಮಾ ಪರಮಾಣು ಸ್ಥಾವರವು ಒಡೆದೇ ಹೋಯಿತು. (ಈ ಕುರಿತ ನನ್ನ ಹಳೆಯ ಲೇಖನ ಈ ಬ್ಲಾಗಿನ ಕೊನೆಯಲ್ಲಿದೆ. ಇದನ್ನೂ ಸೇರಿದಂತೆ ರೂಪಿಸಿದ ಒಂದು ಮ್ಯಾಗಜಿನ್‌ಗೆ ಇಲ್ಲಿ ಕ್ಲಿಕ್‌ ಮಾಡಿ: http://freebookculture.com/?p=77 ಮತ್ತು http://mitramaadhyama.co.in/archives/2667)

ಈಗ,ಆರು ವರ್ಷಗಳ ನಂತರ, ಫುಕುಶಿಮಾ ಹೇಗಿದೆ? ಇದನ್ನು ತಿಳಿಯಲು ಜಪಾನೀ ಪತ್ರಕರ್ತ ಪಿಯೋ ಡಿ ಎಮೀಲಿಯಾ ರೂಪಿಸಿದ ಈ ಸಾಕ್ಷ್ಯಚಿತ್ರವನ್ನು ನೋಡಿ:

https://moviesweekend.com/fukushima-nuclear-story-full-movie-download-free-720p-hdtv-english/

ಈಗ ಭಾರತಕ್ಕೆ ರಶಿಯಾದಿಂದಲೇ ಪರಮಾಣು ತಂತ್ರಜ್ಞಾನವು ಹರಿದುಬರಲಿದೆ. ಬಹುಶಃ ದುರಂತ ಘಟಿಸಿದ ಮೇಲೆ ಭಾರೀ ತೂಕದ ಉಕ್ಕಿನ ಕವಚವನ್ನು ಹೊದಿಸುವುದು ಹೇಗೆ ಎಂಬ ತಂತ್ರಜ್ಞಾನವನ್ನೂ ಅದು ಕಲಿಸಬಹುದು!

ಫುಕುಷಿಮಾ : ಒಂದೇ ವರ್ಷದ ಕಥೆ (ಇದು ೨೦೧೨ರಲ್ಲಿ ಬರೆದ ಬ್ಲಾಗ್‌)

೨೦೧೧ರ ಮಾರ್ಚ್ ೧೧ರ ಆ ಶನಿವಾರದ ಕಥೆ ಯಾರಿಗೆ ಗೊತ್ತಿಲ್ಲ? ಜಪಾನಿಗೆ ಅಪ್ಪಳಿಸಿದ ಸುನಾಮಿಗೆ ಇಡೀ ದ್ವೀಪವೇ ನಡುಗಿತು. ಸಾವು, ನೋವು, ಯಾತನೆ – ಎಲ್ಲವೂ ವರದಿಯಾದವು. ಜೊತೆಗೆ ಅಲ್ಲಿನ ಫುಕುಷಿಮಾ ದಾಯ್‌ಚಿಯ ಪರಮಾಣು ವಿದ್ಯುತ್ ಸ್ಥಾವರವೂ ತತ್ತರಿಸಿ, ಒಡೆದು, ವಿಕಿರಣ ಸೋರಿಕೆಯಾಗಿ… ಅಬ್ಬಾ, ಒಂದು ವರ್ಷ ಕಳೆದಿದೆಯಲ್ಲ…

ಪರಮಾಣು ಸ್ಥಾವರಗಳು ನರಕದ ಟೈಂಬಾಂಬ್‌ಗಳು ಎಂಬುದು ಅಲ್ಲಿ ಖಚಿತವಾಯಿತು. ರಶ್ಯಾದ ಚೆರ್ನೋಬೈಲಿನಂಥ ದೊಡ್ಡ ಪ್ರದೇಶವೀಗ ವಸ್ತುಶಃ ವಿಷಪೂರಿತ ನಿರ್ಜೀವ ತಾಣ. ಅಲ್ಲೀಗ ರೌರವ ಮೌನ. ಇಪ್ಪತ್ತು ಕಿಲೋಮೀಟರ್ ಫಾಸಲೆಯಲ್ಲಿ ಯಾವ ಮನುಷ್ಯನೂ ಇರುವಂತಿಲ್ಲ. ೩೦ ಕಿಮೀವರೆಗಿನ ಜನರು ವಿಕಿರಣ ತಾಗದಂತೆ ಎಚ್ಚರಿಕೆಯಿಂದ ಬದುಕಬೇಕು.

ಪುಟ್ಟ ದೇಶಕ್ಕೆ ದೊಡ್ಡ ಪಾಠ

ವಿಶ್ವದಲ್ಲೇ ಅತ್ಯಂತ ಕ್ರಿಯಾಶೀಲ ದೇಶವಾದ ಜಪಾನ್‌ಗೆ ಫುಕುಷಿಮಾ ಒಂದು ದೊಡ್ಡ ಪಾಠ. ಅದಕ್ಕೇ ಅಲ್ಲಿನ ೫೨ ಪರಮಾಣು ಸ್ಥಾವರಗಳ ಪೈಕಿ ಈಗ ಕೇವಲ ಎರಡು ಸ್ಥಾವರಗಳು ವಿದ್ಯುತ್ ಉತ್ಪಾದಿಸುತ್ತಿವೆ. ಜಪಾನಿನ ಪ್ರಧಾನಿ ಯೊಶಿಹಿಕೋ ನೋಡಾ `ನಾವು ಈ ದುರಂತದಿಂದ ಹಲವು ಪಾಠಗಳನ್ನು ಕಲಿಯುತ್ತಿದ್ದೇವೆ ಎಂದು ಹೇಳುತ್ತಲೇ ನಾವು ಅನುಭವಿಸಿದ್ದನ್ನು ಜಗತ್ತಿಗೆ ತಿಳಿಸಿದರೇನೇ ನಾವು ಪರಮಾಣು ಸುರಕ್ಷತೆ ಬಗ್ಗೆ ನಮ್ಮದೂ ಕೊಡುಗೆ ನೀಡಿದಂತೆ ಎನ್ನುತ್ತಾರೆ.

ಆದರೆ `ಜಪಾನ್ ಸರ್ಕಾರವು ಈ ದುರಂತದ ಅತಿ ಗಂಭೀರ ವಿಶ್ಲೇಷಣೆಗಳನ್ನು ಮುಚ್ಚಿಟ್ಟಿದೆ ಎಂದು ರಿಬಿಲ್ಡ್ ಜಪಾನ್ ಇನಿಶಿಯೇಟಿವ್ ಫೌಂಡೇಶನ್ ಎಂಬ ಸ್ವತಂತ್ರ ಸಮಿತಿಯು ಸರ್ಕಾರವನ್ನು ಟೀಕಿಸಿದೆ. ಅದು ಮಾರ್ಚ್ ೧೧ರಂದು ತನ್ನದೇ ಸ್ವತಂತ್ರ ವರದಿಯನ್ನು ಬಿಡುಗಡೆ ಮಾಡಿದೆ. ಇಂಥ ದುರಂತ ಘಟಿಸಿದರೆ ಇಡೀ ಟೋಕಿಯೋದ ಜನರನ್ನೆಲ್ಲ ಸ್ಥಳಾಂತರ ಮಾಡಬೇಕು ಎಂಬುದೂ ಅಘೋಷಿತ ಪೂರ್ವಸಿದ್ಧತೆ ಆಗಿತ್ತಂತೆ.

ಮಾರ್ಚ್ ೧೧ರ ದಿನ ಜಗತ್ತಿನೆಲ್ಲೆಡೆಯ ಜನ ಫುಕುಷಿಮಾ ದುರಂತವನ್ನು ಸ್ಮರಿಸಿಕೊಂಡಿದ್ದಾರೆ. ಭಿಕ್ಷುಗಳು ಮೆರವಣಿಗೆ ನಡೆಸಿ ಶಾಂತಿಮಂತ್ರ ಜಪಿಸಿದ್ದಾರೆ. ಜಪಾನಿನಲ್ಲಿ ಅವತ್ತು ಮತ್ತೊಮ್ಮೆ ಜಪಾನೀಯರು ಅಭ್ಯುದಯದ ಪಣ ತೊಟ್ಟಿದ್ದಾರೆ.

ಅಮೆರಿಕನ್ ನ್ಯೂಕ್ಲಿಯರ್ ಸೊಸೈಟಿಯು ಮಾರ್ಚ್ ೮ರಂದೇ ವಿಶೇಷ ವರದಿಯೊಂದನ್ನು ಬಿಡುಗಡೆ ಮಾಡಿದೆ. ಪರಮಾಣು ಸ್ಥಾವರಗಳ ಸುರಕ್ಷತೆಗೆ ಇದರಲ್ಲಿ ಒತ್ತು.

ಈ ಅವಘಡದಲ್ಲಿ ಸೋರಿಕೆಯಾದ ಅಣುವಿಕಿರಣವು ಅಲ್ಲಿನ ಗಾಳಿ, ನೀರು, ಬೆಳೆ, ಆಹಾರ ಎಲ್ಲೆಲ್ಲೂ ಸೇರಿಕೊಂಡಿದೆ. ೧೯೪೫ರ ಹಿರೋಶಿಮಾ ನಾಗಾಸಾಕಿಯ ಬಾಂಬ್ ದಾಳಿ ಗೊತ್ತಲ್ಲ, ಅದಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಪ್ರಮಾಣದ ಜಲಜನಕವು ಈ ದುರಂತದಲ್ಲಿ ಬಿಡುಗಡೆಯಾಯಿತು.  ಈ ಅಣುಸ್ಥಾವರಗಳನ್ನು ಯಥಾಸ್ಥಿತಿಗೆ ತರಲು ಜಪಾನ್ ಸರಕಾರಕ್ಕೆ ಒಂಬತ್ತು ತಿಂಗಳುಗಳೇ ಬೇಕಾದವು. ನೂರು ಬಿಲಿಯ ಡಾಲರ್‌ಗಳನ್ನು (೫ ಲಕ್ಷ ಕೋಟಿ ರೂಪಾಯಿ) ಖರ್ಚು ಮಾಡಿ ಮುಂದಿನ ಮೂವತ್ತು ವರ್ಷಗಳ ಕಾಲ ಶ್ರಮಪಟ್ಟರಷ್ಟೇ ಇದನ್ನು ಸ್ವಚ್ಛಗೊಳಿಸಲು ಸಾಧ್ಯ.

ಅಣುಶಕ್ತಿಗೆ ಹಿನ್ನಡೆ

ಫುಕುಷಿಮಾ ದುರಂತದ ನಂತರ ಜರ್ಮನಿಯಂತೂ ಇನ್ನು ಹತ್ತು ವರ್ಷಗಳಲ್ಲಿ ತನ್ನೆಲ್ಲಾ ಪರಮಾಣು ಸ್ಥಾವರಗಳನ್ನು ಮುಚ್ಚಲು ನಿರ್ಧರಿಸಿದೆ. ಸ್ವಿಜರ್‌ಲ್ಯಾಂಡ್, ಸ್ಪೈನ್, ತೈವಾನ್, ಬೆಲ್ಜಿಯಂ, ಮೆಕ್ಸಿಕೋ ದೇಶಗಳು ತಮ್ಮ ಪರಮಾಣು ಶಕ್ತಿ ಯೋಜನೆಗಳನ್ನು ಮುಚ್ಚಲು ಅಥವಾ ಕ್ರಮೇಣವಾಗಿ ಕಡಿತಗೊಳಿಸಲು ನಿರ್ಧರಿಸಿವೆ.

ಭಾರತ?

ತಮಿಳುನಾಡಿನ ಕೂಡಂಕುಳಂನಲ್ಲಿ ಸ್ಥಾಪನೆಯಾಗುತ್ತಿರುವ ಪರಮಾಣು ಸ್ಥಾವರದ ಕೆಲಸವನ್ನು ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದಕ್ಕೆಂದೇ ಅಲ್ಲಿ ಹೋರಾಟ ಮಾಡುತ್ತಿರುವ ಎಲ್ಲ ಸಂಸ್ಥೆಗಳೂ ವಿದೇಶಿ ಕುಮ್ಮಕ್ಕಿನಿಂದ ಕುತಂತ್ರ ನಡೆಸಿವೆ ಎಂದು ಪ್ರಧಾನಿ ಮನಮೋಹನ್ ಸಿಂಗ್‌ರವರೇ ಹೇಳಿದ್ದಾರೆ. ಈ ಸ್ಥಾವರವನ್ನು ರಶ್ಯಾ ದೇಶವೇ ತಂತ್ರಜ್ಞಾನ ಒದಗಿಸಿ ಸ್ಥಾಪಿಸುತ್ತಿದೆ.

ನಮ್ಮ ದೇಶದಲ್ಲಿ ಎಷ್ಟೇ ಹೆಣಗಾಡಿದರೂ ಪರಮಾಣು ಸ್ಥಾವರಗಳಿಂದ ೬೦ ಗಿಗಾವಾಟ್ ವಿದ್ಯುತ್ತನ್ನು ಮಾತ್ರ  ಉತ್ಪಾದಿಸಬಹುದು. ಆದರೆ ನವೀಕರಿಸಬಲ್ಲ ಗಾಳಿ ಗಿರಣಿಗಳು, ಜೈವಿಕ ಇಂಧನ, ಕಿರು ಜಲವಿದ್ಯುತ್ ಯೋಜನೆಗಳಿಂದಲೇ ೧೫೦ ಗಿಗಾವಾಟ್ ವಿದ್ಯುತ್ ಪಡೆಯಬಹುದು. ಸ್ವಲ್ಪ ಶ್ರಮಪಟ್ಟರೆ ಸೌರ ಶಕ್ತಿಯಿಂದಲೇ ೭೦೦ ಗಿಗಾವಾಟ್ ವಿದ್ಯುತ್ ಎತ್ತಬಹುದು. ವಿಷವೂ ಇಲ್ಲ, ಸಾವೂ ಇಲ್ಲ. ಇದು ಪರಿಸರ ವಾದಿಗಳ ಪ್ರತಿಪಾದನೆ. ಅದೆಲ್ಲ ಖರ್ಚು ವಿಪರೀತ, ಪರಮಾಣುವೇ ಪರಮ ಮಾರ್ಗ ಎಂದು ಸರ್ಕಾರ ಹೇಳುತ್ತದೆ.

ಫುಕುಷಿಮಾ ದುರಂತದ ಮೊದಲ ವರ್ಷದ ನೆನಪಿನಲ್ಲಾದರೂ ನಾವು ಒಂದು ಅಭಿಪ್ರಾಯ ತಾಳೋಣ. ಮನೆಯಲ್ಲಿ, ಕಚೇರಿಯಲ್ಲಿ ವಿದ್ಯುತ್ ಬಳಸುವ ಮುನ್ನ ಅದು ಬೇಕೆ ಎಂದು  ವಿವೇಚಿಸಿ ಬಳಸೋಣ.

ಅಷ್ಟರಮಟ್ಟಿಗೆ ನಾವು ದುರಂತಗಳನ್ನು ತಪ್ಪಿಸಬಹುದು.

ನೀವೇ ಹೇಳಿ… ಸ್ಥಾವರಕ್ಕಳಿವುಂಟೆ?

ಬಿಜಾಪುರದ ಆಲಮಟ್ಟಿ ಅಣೆಕಟ್ಟಿನಲ್ಲಿ ನೀರಿಲ್ಲ. ರೈತರಿಗೆ ಹೊಲಕ್ಕೆ ಬಿಡಿ, ಜೀವ ಉಳಿಸಿಕೊಳ್ಳಲೂ ನೀರಿಲ್ಲ. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಲು ಕರ್ನಾಟಕದ ಮುಖ್ಯಮಂತ್ರಿಯವರು ವಿನಂತಿ ಮಾಡಿಕೊಂಡಿದ್ದಾರೆ.

ರಾಯಚೂರಿನ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರ ನಡೆಸಲು ನೀರಿಲ್ಲ. ಈ ಸಂಚಿಕೆ ಪ್ರಕಟವಾಗುವ ಹೊತ್ತಿಗೆ ಇಡೀ ಸ್ಥಾವರವೇ ತನ್ನ ಕೆಲಸವನ್ನು ನಿಲ್ಲಿಸಬಹುದು. ಏಕೆಂದರೆ ಕೃಷ್ಣಾ ನದಿಯಲ್ಲಿ ನೀರಿಲ್ಲ. ಮೊದಲೇ ಈ ಸ್ಥಾವರವು ತ್ರಿಶಂಕು ನರಕ. ಕಲ್ಲಿದ್ದಲು ಎಲ್ಲಿಂದಲೋ ರೈಲಿನಲ್ಲಿ ಬರಬೇಕು. ಅದೂ ದಾಸ್ತಾನಿಲ್ಲ. ಸ್ಥಾವರವು ಉಗುಳುವ ಹಾರುಬೂದಿಯ ನಿರ್ವಹಣೆ ? ಕೃಷ್ಣಾರ್ಪಣ (ಕೃಷ್ಣಾ ನದಿಗೆ ತೇಲಿಬಿಡುವುದು) ಮಾಡುವುದಷ್ಟೆ ಹೊರತು ವೈಜ್ಞಾನಿಕ ನಿಯಂತ್ರಣವೇ ಇಲ್ಲ.

ಇಷ್ಟಾಗಿಯೂ ನಮಗೆ ಕೂಡಿಗಿಯಲ್ಲಿ ಇನ್ನೊಂದು ವಿದ್ಯುತ್ ಸ್ಥಾವರ ಬೇಕು. ಅದಕ್ಕೂ ಛತ್ತೀಸ್‌ಗಢದಿಂದಲೋ, ಇನ್ನೆಲ್ಲಿಂದಲೋ ಕಲ್ಲಿದ್ದಲನ್ನು ರೇಕುಗಳಲ್ಲು ತರಬೇಕು. ನೀರು? ಇದೆಯಲ್ಲ ಆಲಮಟ್ಟಿ ಅಣೆಕಟ್ಟು ಎನ್ನುತ್ತದೆ ಸರ್ಕಾರ.

ನೋಡಿ: ಕುಡಿಯಲು, ರೈತರ ಹೊಲಗಳಿಗೆ ಹನಿಸಲು ಅಣೆಕಟ್ಟುಗಳಲ್ಲಿ ನೀರಿಲ್ಲ.  ಆದರೆ ರಕ್ಕಸಗಾತ್ರದ ಕಲ್ಲಿದ್ದಲು ಸ್ಥಾವರಗಳಿಗೆ ಈ ಅಣೆಕಟ್ಟುಗಳಿಂದಲೇ ನೀರು ಕೊಡಬೇಕಂತೆ. ಅಣೆಕಟ್ಟುಗಳನ್ನು ಕಟ್ಟಿದ ಮೂಲ ಮತ್ತು ಅಧಿಕೃತ ಉದ್ದೇಶವೇ ರೈತರಿಗೆ ಕೃಷಿಭೂಮಿಗೆ ಕನಿಷ್ಠ ನೀರು ಒದಗಿಸಲು. ನೆನಪಿಡಿ: ಅಣೆಕಟ್ಟುಗಳನ್ನು  ಕಟ್ಟುವುದು ಐಷಾರಾಮಿ ನೀರಾವರಿಗಲ್ಲ; ಎಲ್ಲರಿಗೂ ಕನಿಷ್ಠ ನೀರು ಒದಗಿಸಿ ಹೆಚ್ಚು ಬೆಳೆ ತೆಗೆಯುವುದು.

ಹಾಗಾದರೆ ಕಲ್ಲಿದ್ದಲು ಸ್ಥಾವರಗಳಿಗೆ ನೀರು ಕೊಡಬೇಕೆ? ಖಂಡಿತ ಕೂಡದು. ನಮ್ಮ ರೈತರ ಭೂಮಿಯನ್ನು ವಶಪಡಿಸಿಕೊಂಡು ಸ್ಥಾವರ ಕಟ್ಟಿ, ಅಲ್ಲಿಗೆ ನೀರು ಕೊಡಲು ಇನ್ನಷ್ಟು ಸಾವಿರ ರೈತರ ಹೊಲಗಳನ್ನು ಒಣಗಿಸುವುದು ಪ್ರಜಾತಂತ್ರವೆ? ಇನ್ನು ಪರಿಹಾರ ಪಡೆದ ರೈತರು ಹಣ ಉಳಿಸಲು, ಬೆಳೆಸಲು ಹೋಗಿ ಏನೇನೋ ಸಾಮಾಜಿಕ ಪರಿಣಾಮಗಳಾಗುವುದನ್ನು ತಪ್ಪಿಸಲಾದೀತೆ?

ರಾಷ್ಟ್ರೀಯ ಹೆದ್ದಾರಿ ೫೦ ಒಂದು ಬದಿಯಲ್ಲಿರುವ ಆಲಮಟ್ಟಿ ಅಣೆಕಟ್ಟು ಅಭಿವೃದ್ಧಿಯ ಸ್ಥಾವರಕ್ಕೆ ಸಾಕ್ಷಿಯಾದರೆ, ಇನ್ನೊಂದು ಬದಿಯಲ್ಲಿರುವ ಕೂಡಲ ಸಂಗಮವು ಬಸವಣ್ಣನವರ ಐಕ್ಯತಾಣ. ಯಾವುದು ಬೇಕು? ಅಮವಾಸ್ಯೆಯ ದಿನದಂದು ಕೂಡಲಸಂಗಮಕ್ಕೆ ಭಕ್ತಿ ಪರವಶತೆಯಿಂದ ಬರುವ ಜನರು ಮುಂದಿನ ದಿನಗಳಲ್ಲಿ ಕಲ್ಲಿದ್ದಲಿನ ರಾಡಿಯನ್ನೇ ಬಳಿದುಕೊಂಡು ಬದುಕಬೇಕಾದೀತು. ನಿತ್ಯವೂ ನೀರಿಲ್ಲದ, ಕಾಳಿಲ್ಲದ, ಕೆಲಸವಿಲ್ಲದ ಅಮವಾಸ್ಯೆಯಾದೀತು.

ನಮ್ಮ ಸ್ಥಾವರಗಳು ಯಾವುದಿರಬೇಕು ಎಂದು ತೀರ್ಮಾನಿಸುವುದು ಅಂತಿಮವಾಗಿ ಜನರಿಗೆ ಬಿಟ್ಟ ವಿಚಾರ. ಆದರೆ ನಮ್ಮ ವಿಜ್ಞಾನದ ಅರಿವು ನಮ್ಮ ಬದುಕನ್ನು ಹಸನುಗೊಳಿಸುವ ಬದಲಿಗೆ ರಣಬದುಕಿಗೆ ತಳ್ಳುವುದನ್ನು ಸಹಿಸಿಕೊಳ್ಳಬೇಕೆ? ಯೋಚಿಸಿ.

Share.
Leave A Reply Cancel Reply
Exit mobile version