ನಿಕೋಲಾಸ್ ಕೇಜ್ ನನ್ನ ನೆಚ್ಚಿನ, ಮೊದಲ ದರ್ಜೆಯ ಹಾಲಿವುಡ್ ನಟ. ಅವನಿಗೆ ತುಂಬಾ ಅಭಿಮಾನಿಗಳಿದ್ದಾರೆ. ನೋಡಲು ಹಾಲಿವುಡ್ ಫಾರ್ಮುಲಾದ ಸ್ಫುರದ್ರೂಪಿಯಾಗೇನೂ ಕಾಣುವುದಿಲ್ಲ. ಕೆಲವೊಮ್ಮೆ ಬೋಳು ಬೋಳು ತಲೆ ಕಾಣಿಸುವುದೂ ಇದೆ. ಏನೇ ಹೇಳಿ, ನಿಕೋಲಾಸ್ ಕೇಜ್ ನಿಜಕ್ಕೂ ಅದ್ಭುತ ಕಲಾವಿದ. ಅವನ ೮ಎಂಎಂ ಸಿನಿಮಾ ನೋಡಿದರೆ ನಿಮಗೆ ಕಣ್ಣೀರು ಬರದಿದ್ದರೆ ಕೇಳಿ ಅಥವಾ ಕಾನ್ ಏರ್ನಲ್ಲಿ ಅವನ ಸಾಹಸಗಳು ನಿಮ್ಮ ಮೈ ನವಿರೇಳಿಸದಿದ್ದರೆ ಕೇಳಿ. ಅಥವಾ ಫೇಸ್ ಆಫ್ ನಲ್ಲಿ ಜಾನ್ ಟ್ರವೋಲ್ಟಾನಿಗೆ ಸವಾಲೊಡ್ಡಿದ ಅವನ ಪರಿಗೆ ನೀವು ಮೆಚ್ಚದಿದ್ದರೆ ಕೇಳಿ.
ಈಗ ‘ನೋಯಿಂಗ್’ (knowing) ಸಿನಿಮಾ ಬಂದಿದೆ. ಅದರಲ್ಲೂ ನಿಕೋಲಾಸ್ ಕೇಜ್‌ನ ಛಾಪಿದೆ ; ಅವನು ಪಾತ್ರಗಳಲ್ಲಿ ಒಳಗೊಳ್ಳುವ ಆಗುವ ಬಗೆಯೇ ನನಗೆ ಮೆಚ್ಚುಗೆ. ಮನೋಜ್ ನೈಟ್ ಶ್ಯಾಮಲನ್ ಫಾರ್ಮುಲಾ ಥರ ಕಾಣುವ ನೋಯಿಂಗ್ ಸಿನಿಮಾದ ಕಥೆಯ ಹಂದರ ಸಾಧಾರಣ. ಒಂಥರ ಫೈನಲ್ ಡೆಸ್ಟಿನೇಶನ್ ಸಿನಿಮಾ ಸರಣಿಯ ಇನ್ನೊಂದು ವೇರಿಯೇಶನ್ ಇರಬಹುದೇ ಎಂಬ ಅನುಮಾನವೂ ಕಾಡುತ್ತೆ ; ಜೊತೆಗೆ ಬಾಹ್ಯಾಕಾಶ ಜೀವಿಗಳೂ ಇರೋದ್ರಿಂದ ಸ್ಪೀಲ್‌ಬರ್ಗ್‌ನ ತುಣುಕುಗಳನ್ನೂ ಇಲ್ಲಿ ನೋಡಬಹುದು!
ರೈನ್ ಡೌಗ್ಲಾಸ್ ಪಿಯರ್ಸನ್ ಬರೆದ ಕಥೆಯನ್ನು ಆಧರಿಸಿದ ಈ ಸಿನಿಮಾದ ಸಾರಾಂಶ ಇದು: (ನಾನು ಸಿನಿಮಾದ ಕುತೂಹಲವನ್ನು ಹಾಳು
ಮಾಡುವ ಸ್ಪಾಯ್ಲರ್ ಅಂತ ತಿಳ್ಕೊಂಡ್ರೆ ಇಲ್ಲಿಗೇ ನಿಮ್ಮ ಓದು ನಿಲ್ಲಿಸಿ ಸಿನಿಮಾ ನೋಡಿ).
1959ರಲ್ಲಿ ಬೋಸ್ಟನ್‌ನ ಶಾಲೆಯ ಹೊಸ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಶಾಲಾ ಮಕ್ಕಳು ಮುಂದಿನ 50 ವರ್ಷಗಳಲ್ಲಿ ಏನಾಗಬಹುದು ಎಂದು ಚಿತ್ರ ಬಿಡಿಸಿ ಒಂದು ಕಾಲಕೋಶದಲ್ಲಿ ತುಂಬಿಸುತ್ತಾರೆ. ಅದನ್ನು 2009 ರಲ್ಲಿ ಹೊರತೆಗೆಯುತ್ತಾರೆ. ಅದರಲ್ಲಿ ಲುಸಿಂಡಾ ಎಂಬ ಹುಡುಗಿ ಬರೆದ ಹಾಳೆಯಲ್ಲಿ ಬರೀ ಅಂಕಿಗಳಿರುತ್ತವೆ. ಹಾಳೆ ತುಂಬಾ!
ಈ ಕಾಲಕೋಶವನ್ನು ತೆಗೆದ ಮೇಲೆ ಅದರಲ್ಲಿರೋ ಚಿತ್ರಗಳನ್ನು ಶಾಲಾ ಮಕ್ಕಳಿಗೆ ಕೊಡುತ್ತಾರೆ. ಲುಸಿಂಡಾ ಬರೆದ ಹಾಳೆ ಕಾಲೆಬ್ ಎಂಬ ಹುಡುಗನಿಗೆ ಸಿಗುತ್ತದೆ. ಅವನ ಅಪ್ಪ ಜಾನ್‌ನ ಪಾತ್ರವೇ ನಿಕೋಲಾಸ್ ಕೇಜ್‌ದು. ಕ್ಯಾಲೆಬ್‌ನೂ ಲುಸಿಂಡಾ ಥರಾನೇ ಒಂಥರ ಟ್ರಾನ್ಸ್‌ಗೆ ಒಳಗಾಗಿ ಏನೇನೋ ಗೀಚುತ್ತಾನೆ. ಇದೆಲ್ಲವನ್ನು ಗಮನಿಸಿದ ಜಾನ್ ತನಿಖೆ ಆರಂಭಿಸುತ್ತಾನೆ. ಎಷ್ಟೆಂದ್ರೂ ಅವನು ಎಂ ಐ ಟಿ ಯ ಪ್ರೊಫೆಸರ್. ಲುಸಿಂಡಾಳ ಮಗಳು ಡಯಾನಾಳನ್ನು ಹುಡುಕಿ ಮಾತನಾಡಿಸಿದ ಜಾನ್ ಅವಳನ್ನೂ ತನಿಖೆಯಲ್ಲಿ ಸೇರಿಸಿಕೊಳ್ತಾನೆ. ಇಷ್ಟರಲ್ಲೇ ಹಲವು ಅಪಘಾತಗಳು ನಡೆಯುತ್ತವೆ. ಈ ಅಪಘಾತಗಳಿಗೂ, ಲುಸಿಂಡಾ ಬರೆದ ಸಂಖ್ಯಾ ಗೋಜಲುಗಳಿಗೂ ಸಂಬಂಧವಿರೋದನ್ನು ಜಾನ್ ಮನಗಾಣುತ್ತಾನೆ.
ಕಥೆ ಇನ್ನೂ ಇದೆ. ಈ ಸಂಬಂಧ ಏನು, ಕೊನೆಗೆ ಜಾನ್ ಏನಾದ ಎಂದೆಲ್ಲ ನೀವು ತಿಳ್ಕೋಬೇಕಂದ್ರೆ ಸಿನಿಮಾ ನೋಡಬೇಕು!
ಆದ್ರೂ ನನಗೆ, ಮತ್ತು ಹಲವು ಸಿನಿಮಾ ವಿಮರ್ಶಕರಿಗೆ ಇದರ ಮುಕ್ತಾಯ ಇಷ್ಟವಾಗಲಿಲ್ಲ. ನಿರ್ದೇಶಕನಿಗೆ ತಲೆ ಬಿಸಿಯಾಗಿ ಏನು ಮಾಡಬೇಕೆಂದು ತೋಚದೆ ಅಂತೂ ಇಂತೂ ಒಂದು ಗತಿ ಕಾಣಿಸಿದ್ದಾನೆ. ಎರಡು ರೇಖೆಗಳು ಸಿನಿಮಾದಲ್ಲಿ ನಿರ್ದೇಶಕ ಕೊನೆಗೆ ಸರಿತಾಳನ್ನು ವಿದೇಶಕ್ಕೆ ಕಳಿಸಿ ಗೀತಾಗೆ ಶ್ರೀನಾಥ್‌ನನ್ನು ಉಳಿಸಿಕೊಡಲ್ವೆ… ಹಾಗೆ.
ಅದೇನೇ ಇದ್ರೂ ನಿಕೋಲಾಸ್ ಕೇಜ್‌ನ ನಟನೆಗೆ ಶಹಭಾಶ್ ಎನ್ನಲೇಬೇಕು. ಸಿನಿಮಾದಲ್ಲಿ ಪೂರಾ ಮಗ್ನವಾಗಿ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಕೆಲವೇ ನಟರಲ್ಲಿ ಈತನೂ ಒಬ್ಬ. ಅವನ ಉದ್ವೇಗ, ಮಗನನ್ನು ಉಳಿಸಿಕೊಳ್ಳಲು ನಡೆಸುವ ಯತ್ನಗಳು, ಹುಡುಕಾಟಕ್ಕೊಂದು ಅರ್ಥ ಸಿಕ್ಕಾಗ ಮುಖದಲ್ಲಿ ಮೂಡುವ ಭಾವಗಳು-ಎಲ್ಲವೂ ಒಳ್ಳೆಯ ಅನುಭವ ಕೊಡುತ್ತವೆ. ಅಪಘಾತಗಳ ಚಿತ್ರೀಕರಣವಂತೂ ಸಾಕಷ್ಟು ನೈಜವಾಗಿವೆ ; ಕೆಲವೊಮ್ಮೆ ಆತಂಕ ಹುಟ್ಟಿಸುತ್ತವೆ. ದೊಡ್ಡ ಥಿಯೇಟರಿನಲ್ಲಿ ಈ ಸಿನಿಮಾ ನೋಡುವಾಗ ಮಕ್ಕಳನ್ನು ಕರೆದೊಯ್ಯದಿರೋದು ಸೂಕ್ತ. ಶಬ್ದಕ್ಕೆ ಹೆದರುವವರು ಈ ಸಿನಿಮಾ ನೋಡುವುದು ಅನಪೇಕ್ಷಣೀಯ.
ಹಾಗೆ ನಿಮಗೆ ನಿಕೋಲಾಸ್‌ನ ನಟನೆಯೂ ಚೆನ್ನಾಗಿರಬೇಕು, ಸಿನಿಮಾ ಕಥೆಯೂ ಪೊಗದಸ್ತಾಗಿರಬೇಕು ಅಂದ್ರೆ ಮೊದಲೇ ಹೇಳಿದ ಹಾಗೆ ಫೇಸ್ ಆಫ್, ಕಾನ್ ಏರ್ (ಆಕ್ಷನ್ ಥ್ರಿಲ್ಲರ್), ೮ಎಂಎಂ (ಹಾರರ್ ಥ್ರಿಲ್ಲರ್) ನೋಡಿ. ಇನ್ನೂ ಬೇಕಾದಷ್ಟು ಸಿನಿಮಾಗಳಿವೆ. ಅವನ ನೆಕ್ಸ್ಟ್ (೨೦೦೭) ಕೂಡಾ ಒಂದು ಮಾಸ್ಟರ್ ಪೀಸ್ ಎನ್ನಬಹುದು.
ನೆಕ್ಸ್ಟ್ ಕೂಡಾ ನಿಕೋಲಾಸ್‌ನ ಅದ್ಭುತ ನಟನೆಗೆ ಒಂದು ಉದಾಹರಣೆ. ಮುಂದಿನ ಕೆಲ ನಿಮಿಷಗಳಲ್ಲಿ ಏನಾಗುತ್ತದೆ (ಮುಂದಿನ ವರ್ಷಗಳಲ್ಲಿ ಅಲ್ಲ) ಎಂಬುದನ್ನು ಮೊದಲೇ ತಿಳಿಯುವ ಮ್ಯಾಜಿಶಿಯನ್ ಆಗಿ ನಿಕೋಲಾಸ್ ಎದುರಿಸೋ ತಾಪತ್ರಯಗಳು ನಿಜಕ್ಕೂ ಮಜಾ ಕೊಡುತ್ತವೆ. ಇಲ್ಲೂ ಚಿತ್ರದ ಕೊನೆಯ ಭಾಗ ಕೊಂಚ ಕನ್‌ಫ್ಯೂಸಿಂಗ್.
ಏನೇ ಇರಲಿ, ನನ್ನ ಫೇವರೇಟ್ ನಿಕೋಲಾಸ್ ಕೇಜ್‌ನ ಬಗ್ಗೆ ಬರೆಯುತ್ತಲೇ ಸಾಂಗತ್ಯದ ಅಂಕಣಕಾರನಾಗ್ತಿರೋದಕ್ಕೆ ಖುಷಿಯಾಗ್ತಿದೆ.
ನನ್ನ ಕಾಲಂನಲ್ಲಿ ಈ ಥರ ಲೇಖನಗಳನ್ನು ಓದಬಹುದು:
1. ನಾನು ಮೆಚ್ಚಿದ ಹಳೆಯ ಹಾಲಿವುಡ್ ಸಿನಿಮಾಗಳ ಪರಿಚಯ ; ನಾನು ಕಂಡಂತೆ ವಿಮರ್ಶೆ
2. ಡಾಕ್ಯುಮೆಂಟರಿಗಳ ಪರಿಚಯ
3. ಭಾರತದಲ್ಲಿ ಬಿಡುಗಡೆಯಾಗೋ ಸಿನಿಮಾಗಳ ಬಗ್ಗೆ ಮೊದಲೇ ಪರಿಚಯ ; ಸಿನಿಮಾ ಕುರಿತ ವಿಮರ್ಶೆ.
1 Comment
ನಿಕೋಲಸ್ ನ ಬಗ್ಗೆ ಮಾಹಿತಿ ನೀಡಿದುದ್ದಕ್ಕೆ ಥ್ಯಾಂಕ್ಸ್. ಲೇಖನ ತುಂಬಾ ಸೊಗಸಾಗಿ ಮೂಡಿ ಬಂದಿದೆ.
— ಸಂತೋಷ್ ಅನಂತಪುರ