`ಟಿಬೆಟನ್ ಧರ್ಮಗುರು ದಲಾಯಿ ಲಾಮಾರವರು ಅರುಣಾಚಲಕ್ಕೆ ಭೇಟಿ ನೀಡಬಾರದು; ಯಾಕೆಂದರೆ ಅರುಣಾಚಲ ಪ್ರದೇಶದ ಮೇಲೆ ನಾವಿನ್ನೂ ಹಕ್ಕು ಸಾಧಿಸುತ್ತಿದ್ದೇವೆ’ ಎಂದು ಚೀನಾ ಬಾಯಿ ಬಿಟ್ಟಿದೆ. ಇಷ್ಟು ದಿನ ಭಾರತದ ಹೊರಗೆ ದಲಾಯಿ ಲಾಮಾ ಪ್ರವಾಸ ಮಾಡಿದರೆ ಉರಿದೇಳುತ್ತಿದ್ದ ಚೀನಾ ಈಗ ಭಾರತದೊಳಗೇ ದಲಾಯಿ ಲಾಮಾ ಅಡ್ಡಾಡಬಾರದು ಎಂದು ಫರ್ಮಾನು ಹೊರಡಿಸಿದೆ! ದಲಾಯಿ ಲಾಮಾ ಎಲ್ಲಿಗೆ ಭೇಟಿ ನೀಡಬಾರದು ಎಂದು ನಿರ್ಧರಿಸುವುದು ಚೀನಾದ ಆಂತರಿಕ ವಿಷಯವಂತೆ.
ಅರುಣಾಚಲ ಭಾರತದ ಅವಿಭಾಜ್ಯ ಅಂಗ ಅಲ್ಲ ಎಂಬ ಚೀನಾದ ಹೇಳಿಕೆಯನ್ನು ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ತಳ್ಳಿಹಾಕಿದ್ದಾರೆ. ದಲಾಯಿ ಲಾಮಾ ಅರುಣಾಚಲದ ತವಾಂಗ್‌ಗೆ  ಹೋದಾಗ ಯಾವುದೇ ರಾಜಕೀಯ ಹೇಳಿಕೆ ನೀಡಬಾರದು ಎಂದು ಸಲಹೆ ಮಾಡಿದ್ದಾರೆ. ದಲಾಯಿ ಲಾಮಾ ಭಾರತದಲ್ಲೇ ದೇಶಭ್ರಷ್ಟ ಟಿಬೆಟನ್ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಅವರಿಗೆ ಭಾರತದಲ್ಲೇ ಟಿಬೆಟ್ ಬಗ್ಗೆ ಉಸಿರೆತ್ತುವಂತಿಲ್ಲ !
ವಿದೇಶಗಳ ಆಂತರಿಕ ವಿಷಯದಲ್ಲಿ ಮೂಗು ತೂರಿಸುವ ಚೀನಾಗೆ ತನ್ನ ಮಾನವ ಹಕ್ಕು ದಮನದ ವಿಷಯವನ್ನು ಯಾವುದೇ ದೇಶ ಎತ್ತಿದರೆ ವಿಪರೀತ ಸಿಟ್ಟು ಬರುತ್ತದೆ. ಚೀನಾದ ಆಂತರಿಕ ವಿಷಯ ಎಲ್ಲಿ ಎಲ್ಲಿಗೆ ಮುಗಿಯುತ್ತದೆ ಎಂದೇ ಗೊತ್ತಾಗುತ್ತಿಲ್ಲ ಎಂದು ನ್ಯೂಸ್ಟ್ರೈಟ್ ಟೈಮ್ಸ್‌ನ ಅಂಕಣಕಾರ ಫ್ರಾಂಕ್ ಚಿಂಗ್ ಅಣಕಿಸಿದ್ದಾರೆ.

ಟಿಬೆಟ್ ತನ್ನದೆಂದು ಕಬಳಿಸಿದ ಚೀನಾ ಅರುಣಾಚಲವನ್ನೂ ತನ್ನದು ಎಂದು ವಾದಿಸುತ್ತಿದೆ ಎಂಬುದೇ ಈ ಉದ್ವಿಗ್ನತೆಯ ಒಟ್ಟಾರೆ ಫಲಿತ. ಅಂದರೆ ಮಾವೋನ ನೀತಿಯೂ ಮುಕ್ಕಾಗಿಲ್ಲ; ಚೀನಾದ ಸಾಮ್ರಾಜ್ಯಶಾಹಿ ದುರ್ಗುಣವೂ ವಾಸಿಯಾಗಿಲ್ಲ.

ನೀವು ಟಿಬೆಟಿಗೆ ಹೋದರೆ ಗೊತ್ತಾಗುತ್ತದೆ: ಚೀನಾ ಹೇಗೆ ತನ್ನ ಹಾನ್ ಜನಾಂಗದವರನ್ನು ಸಾವಿರಗಟ್ಟಳೆ ಸಂಖ್ಯೆಯಲ್ಲಿ ಸಾಗಿಸಿ ಅಲ್ಲಿ ಟಿಬೆಟನ್ನರನ್ನೇ ಅಲ್ಪಸಂಖ್ಯಾತರನ್ನಾಗಿ ಮಾಡಿತು ಎಂದು. ಅಷ್ಟೇ ಅಲ್ಲ, ಟಿಬೆಟಿನ ಎಲ್ಲ ನೈಸರ್ಗಿಕ ಸಂಪನ್ಮೂಲಗಳನ್ನೂ ಚೀನಾ ಬಹುತೇಕ ದೋಚಿದೆ. ಇತ್ತೀಚೆಗೆ ಆರಂಭವಾದ ಹೊಸ ರೈಲುಮಾರ್ಗ ಇರೋದೇ ಟಿಬೆಟನ್ನು ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಸಂಪೂರ್ಣ ಚೀನೀಕರಣಗೊಳಿಸಲು. ಆ ಕೆಲಸ ಮುಗಿಯುತ್ತಿದ್ದಂತೆ ಅರುಣಾಚಲದತ್ತ ಚೀನಾ ಕಣ್ಣು ಹಾಕಿದೆ.
ಒಲಿಂಪಿಕ್ ಪದಕಗಳನ್ನು ಬಾಚಿಕೊಳ್ಳಲು ಎಲ್ಲ ವಯಸ್ಸಿನ ಕ್ರೀಡಾಳುಗಳನ್ನು ರೊಬೋಟ್‌ಗಳಂತೆ ತಯಾರು ಮಾಡಿದ ಚೀನಾಗೆ ಮನುಷ್ಯರು ಎಂದರೆ ಶ್ರಮವಹಿಸಿ ಉತ್ಪನ್ನ ತಯಾರಿಸುವ ಯಂತ್ರಗಳು. ಮನುಷ್ಯ ಬದುಕಿದ್ದರೆ ಊಟದ ಪರಿವೆ ಇಲ್ಲದೆ ಶ್ರಮಿಸಬೇಕು; ಸತ್ತರೆ ಅವನ ಕಿಡ್ನಿ ಮಾರಾಟ ಮಾಡಬೇಕು. ಐವತ್ತರ ದಶಕದಲ್ಲಿ ಕಬ್ಬಿಣ ತಯಾರಿಸುವ ತರಾತುರಿಯಲ್ಲಿ ಇಡೀ ದೇಶವೇ ಕುಲುಮೆಯಾಗಿ ಮನುಕುಲದ ಅತಿ ದೊಡ್ಡ ಮಾನವನಿರ್ಮಿತ ಕ್ಷಾಮ ತಲೆದೋರಿ ಕೋಟಿಗಟ್ಟಳೆ ಜನ ಸತ್ತರು. ೬೦ರ ದಶಕದ ಸಾಂಸ್ಕೃತಿಕ ಕ್ರಾಂತಿಯಲ್ಲಿ ಮಾವೋನ ಅತ್ಯಂತ ನಿಕಟವರ್ತಿಗಳಿಗೂ ಚಪ್ಪಲಿ ಹಾರ ಹಾಕಿ ಸಾರ್ವಜನಿಕವಾಗಿ ಥಳಿಸಲಾಯಿತು; ಮಾವೋನ ಲಾಂಗ್ ಮಾರ್ಚ್‌ನಲ್ಲಿ ಭಾಗವಹಿಸಿದ್ದ ಸಾವಿರಾರು ಅಮಾಯಕ ಚೀನೀಯರನ್ನು ಬಂಧಿಸಿ ಯಾತನಾಶಿಬಿರಗಳಿಗೆ ತಳ್ಳಲಾಯಿತು. ೭೦ದ ದಶಕದಲ್ಲಿ ಮುದುಕನಾಗಿದ್ದರೂ ಮಾವೋ ತನ್ನ ಸಹವರ್ತಿಗಳನ್ನು ಸಾಯಿಸುವ ಸಂಚು ರೂಪಿಸುತ್ತಲೇ ಇದ್ದ. ಅವನ ಮರಣದ ನಂತರ ಬಂದ ಡೆಂಗ್ ಶಿಯಾವೋ ಪಿಂಗ್ ಕೂಡಾ ಸಾಕಷ್ಟು ಕಾಲ ಸೆರೆಮನೆಯಲ್ಲಿದ್ದ! ೮೦ರ ದಶಕದಲ್ಲಿ ಚೀನಾದೊಳಗೆ ಹಬ್ಬಿದ ಪ್ರಜಾತಂತ್ರ ಹಕ್ಕಿನ ಹೋರಾಟವನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು; ಟಿಯಾನನ್‌ಮನ್ ಚೌಕದಲ್ಲಿ ಸತ್ತ ಯುವಕ – ಯುವತಿಯರ ಲೆಕ್ಕ ಇಟ್ಟವರಾರು? ೯೦ರ ದಶಕದಲ್ಲಿ ಚೀನಾ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗತೊಡಗಿತು. ಇಪ್ಪತ್ತೊಂದನೇ ಶತಮಾನದಲ್ಲಿ ಒಲಿಂಪಿಕ್ ಕ್ರೀಡೋತ್ಸವವನ್ನು ಸಂಘಟಿಸಿ ತಾನೂ ಇತರರಂತೆ ಒಳ್ಳೆ ದೇಶ ಎಂದು ಬಿಂಬಿಸುವ ಯತ್ನ ನಡೆಯಿತು.
ಎಷ್ಟೆಂದರೂ ಚೀನಾದ ಕರಾಳ ಮನಸ್ಥಿತಿಯನ್ನು ಅಡಗಿಸಲು ಬರುವುದಿಲ್ಲ. ತನ್ನ ದೇಶದ ಎಲ್ಲ ಪರಂಪರೆ, ಸಾಂಸ್ಕೃತಿಕ ಸಾಕ್ಷ್ಯಗಳನ್ನು ನೆಲಸಮ ಮಾಡಿದ ದೇಶಕ್ಕೆ ಟಿಬೆಟನ್ ಸಮಾಜ ಭ್ರಷ್ಟವಾಗಿ ೬೦ ವರ್ಷಗಳಾದರೂ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿದ್ದನ್ನು ಸಹಿಸಲಾಗುತ್ತಿಲ್ಲ. ಇಡೀ ಟಿಬೆಟನ್ನು ಒರೆಸಿಹಾಕಿದರೆ ಜಗತ್ತು ತಿರಸ್ಕಾರ ಮಾಡುತ್ತದೆ. ಆದ್ದರಿಂದಲೇ ಚೀನಾ ಹಸಿದ ಹುಲಿಯಂತೆ ಹೊಂಚು ಹಾಕುತ್ತಿದೆ. ಯಾವಾಗಲಾದರೂ ಅದು ಮನುಕುಲದ ಮೇಲೆ ನೆಗೆಯುತ್ತದೆ.
ನಾಸ್ಟ್ರಾಡಾಮಸ್ ಹೇಳಿದ್ದನಂತೆ: ಹಳದಿ ಬಣ್ಣದವರ ಅಟಾಟೋಪ ವಿಪರೀತ ಆಗುತ್ತೆ ಎಂದು. ಅವನ ಅದೃಷ್ಟಕ್ಕೋ, ನಮ್ಮ ದುರದೃಷ್ಟಕ್ಕೋ, ಚೀನಾ ಈಗ ಬಾಯ್ತೆರೆದು ನಿಂತಿರುವುದಂತೂ ನಿಜ.
ಇಪ್ಪತ್ತೊಂದನೇ ಶತಮಾನದ ಜಗತ್ತಿನ ಆರ್ಥಿಕ ವರದಿಗಳನ್ನು ಓದಿದರೆ ಒಂದು ಸ್ಪಷ್ಟವಾಗುತ್ತದೆ: ಎಲ್ಲ ವರದಿಗಳಲ್ಲೂ ಚೀನಾ – ಭಾರತದ ಪ್ರಗತಿ ಒಟ್ಟೊಟ್ಟಿಗೇ ದಾಖಲಾಗುತ್ತಿದೆ. ನಿಜ, ಭಾರತದ ಪ್ರಗತಿಯ ಪ್ರಮಾಣ ಚೀನಾಕ್ಕಿಂತ ಸಾಕಷ್ಟು ಕಡಿಮೆ. ಎಲ್ಲ ಗ್ರಾಫ್‌ಗಳಲ್ಲೂ ಚೀನಾದ್ದೇ ಮುಂದಾಳುತ್ವ. ಆದರೆ ಒಂದು ಹೊತ್ತಿನ ಊಟವನ್ನೂ ಸರಿಯಾಗಿ ಕೊಡದೆ ದುಡಿಸುವ ಚೀನಾ ಎಲ್ಲಿ, ಭ್ರಷ್ಟಾಚಾರದ ನಡುವೆಯೂ ಹೇಗಾದರೂ ಬದುಕುವ ಖುಷಿಯನ್ನು ಕೊಟ್ಟ ಭಾರತವೆಲ್ಲ? ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ, ಮೀಸಲಾತಿಯನ್ನಾದರೂ ನೀಡಿ ಹಿಂದುಳಿದ ಸಮುದಾಯಗಳನ್ನು ಮೇಲೆ ತರುವ ಭಾರತವೆಲ್ಲಿ, ಕೇವಲ ಹಾನ್ ಜನಾಂಗವನ್ನೇ ಮುಂದು ಮಾಡಿ ಉಳಿದೆಲ್ಲ ಸಮುದಾಯಗಳನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡುತ್ತಿರುವ ಚೀನಾ ಎಲ್ಲಿ? ೬೩ ವರ್ಷಗಳಾದರೂ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಂಡು ಬಂದ ಭಾರತವೆಲ್ಲಿ, ಸರ್ವಾಧಿಕಾರದ ಕಮ್ಯುನಿಸ್ಟ್ ಪಾರ್ಟಿಯ ಏಕಾಧಿಪತ್ಯ ಇರುವ ಚೀನಾ ಎಲ್ಲಿ?
ಭಾರತದ ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಏನೇ ಊನ ಇರಬಹುದು, ಅದನ್ನು ಸರಿಪಡಿಸಲು ಸಾಧ್ಯವಿದೆ. ಅದಿಲ್ಲದಿದ್ದರೆ ಬೆಂಗಳೂರಿನ ಒಂದು ಅಜ್ಜಿಯ ದೂರಿನ ಪರಿಣಾಮವಾಗಿ ನಗರಗಳಲ್ಲಿ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ನೀಡುತ್ತಿರಲಿಲ್ಲ. ನಮ್ಮ ದೇಶದ ವ್ಯವಸ್ಥೆಯಲ್ಲಿ ತಪ್ಪಿಲ್ಲ; ಅದನ್ನು ನಿಯಂತ್ರಿಸುತ್ತಿರುವ ಜನರಲ್ಲಿ ದೋಷಗಳಿವೆ. ಇಂಥ ವ್ಯವಸ್ಥೆಯಲ್ಲೂ ಪ್ರಜಾತಂತ್ರವನ್ನು ಎತ್ತಿಹಿಡಿದ ನೂರಾರು ಉದಾಹರಣೆಗಳು ನಮ್ಮಲ್ಲಿವೆ. ಆದರೆ ಚೀನಾದಲ್ಲಿ ಏನಿದೆ? ಸಿದ್ಧಾಂತದ ಸೋಗಿನಲ್ಲಿ ಜನಾಂಗಗಳ ನಾಶ, ಕಾರ್ಮಿಕವರ್ಗದ ಹೆಸರಿನಲ್ಲಿ ಏಕಪಕ್ಷೀಯ ಭ್ರಷ್ಟಾಚಾರದ ಆಡಳಿತ; ಹೆಚ್ಚುತ್ತಿರುವ ಜನಸಂಖ್ಯೆಯಿಂದ ಇನ್ನಷ್ಟು ದುಡಿಸಿಕೊಳ್ಳುವ ಅಗತ್ಯಕ್ಕಾಗಿ ಸಾಮ್ರಾಜ್ಯ ವಿಸ್ತರಣೆಯ  ಕುತಂತ್ರಿ ವ್ಯವಸ್ಥೆ. ಮನುಷ್ಯನ ಎಲ್ಲ ಸೃಜನಶೀಲ ವರ್ತನೆಗಳಿಗೂ ಯಾಂತ್ರಿಕತೆಯ ಮುಖವಾಡ ಹಾಕುವ ಚೀನಾದ ಮಾವೋವಾದವನ್ನು ಮನುಕುಲ ವಿರೋಧಿ ನೀತಿ ಎಂದೇ ಕರೆಯಬೇಕು.
ಅಮೆರಿಕಾ ಮತ್ತು ಐರೋಪ್ಯ ದೇಶಗಳು ಈಗಲೂ ಚೀನಾದ ಜೊತೆ ಸರಸವಾಡುತ್ತಿವೆ; ಕೊಳ್ಳುಬಾಕ ಸಂಸ್ಕೃತಿಯ ವೈಪರೀತ್ಯಕ್ಕೆ, ವಸಾಹತುಶಾಹಿ ಇತಿಹಾಸಕ್ಕೆ, ಆಫ್ರಿಕಾದ ಕರಿಯರನ್ನು ಮಾರಿದ ಕುಖ್ಯಾತಿಗೆ ಈ ದೇಶಗಳು ಹೆಸರುವಾಸಿ. ಈಗಲೂ ಅಮೆರಿಕಾ, ಇಂಗ್ಲೆಂಡಿನಲ್ಲಿ, ದೂರದ ಆಸ್ಟ್ರೇಲಿಯಾದಲ್ಲಿ ಭಾರತ ವಿರೋಧಿ ನಿಲುವು ಪ್ರಕಟವಾಗುತ್ತಿದೆ. ಶತಮಾನಗಳ ಕಾಲ ಭಾರತ ಉಪಖಂಡ, ಆಫ್ರಿಕಾ ಖಂಡಗಳ ಸಂಪತ್ತನ್ನು ಲೂಟಿ ಮಾಡಿ ಐಭೋಗ ಅನುಭವಿಸಿದ ಈ ದೇಶಗಳಿಂದ ಭಾರತವು ಯಾವ ಪಾಠವನ್ನೂ ಕಲಿಯಬೇಕಿಲ್ಲ. ಹಾಗೆಯೇ ಪ್ರಗತಿಯ ಬಗ್ಗೆ ಭಾರತಕ್ಕೆ ಚೀನಾ ಮಾದರಿಯಾಗಬೇಕಿಲ್ಲ. ನಮಗೆ ನಾವೇ ಮಾದರಿಯಾಗುವ ಅನಿವಾರ್ಯತೆಯೂ ಇದೆ. ಅರ್ಹತೆಯೂ ಇದೆ.
ಅಮೆರಿಕಾವು ನಿಧಾನವಾಗಿ ಇರಾಖ್, ಇರಾನ್, ಅಫಘಾನಿಸ್ತಾನ, ಪಾಕಿಸ್ತಾನ – ಹೀಗೆ ಭಾರತದ ಬಲ ಪಕ್ಕೆಯನ್ನು ದುರ್ಬಲಗೊಳಿಸುತ್ತಿದೆ. ಎಡದಲ್ಲಿ ಚೀನಾ ಗುರುಗುಟ್ಟುತ್ತಿದೆ. ಮಿತ್ರದೇಶ ರಶ್ಯಾ ದುರ್ಬಲವಾಗಿದೆ. ಸುದೃಢ ರಕ್ಷಣಾ ವ್ಯವಸ್ಥೆಯನ್ನು ಭಾರತ ರೂಪಿಸಿಕೊಳ್ಳದಿದ್ದರೆ ಮುಂದಿನ ದಶಕದಲ್ಲಿ ಮಹಾನ್ ದುರಂತಗಳು ತಪ್ಪಿದ್ದಲ್ಲ.
ಹೊಸ ದಶಕವನ್ನು ತನ್ನದಾಗಿಸಿಕೊಳ್ಳಲು ಚೀನಾ ಪೀಠಿಕೆ ಹಾಕಿದೆ, ಅಷ್ಟೆ.
(ಮುಗಿಯಿತು)

————————————————————-
ಉದಯವಾಣಿಯಲ್ಲಿ ೧೮.೯.೨೦೦೯ರಂದು ಪ್ರಕಟವಾದ ಲೇಖನ

Share.
Leave A Reply Cancel Reply
Exit mobile version