ಬೆಂಗಳೂರಿಗೆ ಭಾರತದ ಸಿಲಿಕಾನ್ ಸಿಟಿ ಎಂಬ ಹೆಸರು ಬರಲು ಕಾರಣರಾದ ಹಲವರಲ್ಲಿ ನನ್ನ ಹಿರಿಯ ಮಿತ್ರ ಶ್ರೀ ಮಂಜಪ್ಪ ಪ್ರೇಮ್ ಕುಮಾರ್ – ಎಂ ಪಿ ಕುಮಾರ್ ಪ್ರಮುಖರು. ಗ್ಲೋಬಲ್ಎಡ್ಜ್ ಸಾಫ್ಟ್‌ವೇರ್‌ ಸಂಸ್ಥೆಯನ್ನು (https://www.globaledgesoft.com)ಕಟ್ಟಿ ಬೆಳೆಸಿದ ಶ್ರೀ ಎಂ ಪಿ ಕುಮಾರ್ ಈಗ ಅಧಿಕೃತವಾಗಿ ಸಂಸ್ಥೆಗೆ ವಿದಾಯ ಹೇಳಿದ್ದಾರೆ. ಸದ್ಯಕ್ಕೆ ಅವರು ಸಂಸ್ಥೆಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವಾರ ಅವರ ಕಡೆಯ ದಿನದಂದು ಸಂಸ್ಥೆಯ ಸಿಬ್ಬಂದಿ ವರ್ಗವು ಅವರನ್ನು ಬೀಳ್ಕೊಟ್ಟ ವಿಡಿಯೋ ಇಲ್ಲಿದೆ. ಅದಾದ ಕೆಲವೇ ದಿನಗಳಲ್ಲಿ (ನಿನ್ನೆ!) ೩ ಗುರುಕುಲಗಳಿಗೆ ಒಟ್ಟು ೬ ಕೋಟಿ ರೂ.ಗಳನ್ನು ಅವರು ದಾನ ಮಾಡಿದ ಚಿತ್ರವೂ ಇಲ್ಲಿದೆ.

ಎಂಪಿಕೆ ಎಂದೇ ನಮಗೆಲ್ಲ ಪರಿಚಿತರಾಗಿರುವ ಎಂ ಪಿ ಕುಮಾರ್ ಎಂದರೆ ಇಷ್ಟೇ ಅಲ್ಲ. ಅವರ ಯಶಸ್ಸಿನ ಹಿಂದೆ ಅಪಾರ ಶ್ರಮವಿದೆ. ಶಿಕಾರಿಪುರದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ ಅವರು ಮೊದಲು ಸರ್ಕಾರಿ ಉದ್ಯಮವೊಂದರಲ್ಲಿ ಸಿಸ್ಟಂ ಅನಲಿಸ್ಟ್ ಆಗಿದ್ದರು. ಅದಕ್ಕಿಂತಲೂ ಮೊದಲು ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರೂ ಆಗಿದ್ದರು. ಕರ್ನಾಟಕದಿಂದ ವಿದ್ಯಾರ್ಥಿ ಪರಿಷತ್ತಿಗೆ ಪೂರ್ಣಾವಧಿ ಕಾರ್ಯಕರ್ತರಾಗಿ ಹೊರಟ ಮೊದಲ ಮೂವರಲ್ಲಿ ಅವರು ಒಬ್ಬರು (ಉಳಿದಿಬ್ಬರು: ಶ್ರೀ ಪಿ ಜಿ ಆರ್ ಸಿಂಧಿಯಾ ಮತ್ತು ಶ್ರೀ ದತ್ತಾತ್ರೇಯ ಹೊಸಬಾಳೆ)! ದತ್ತಾಜಿ ಅವರಂತೆಯೇ ಮುದ್ದಾದ ಕೈಬರಹ; ಅವರಂತೆಯೇ ರಾಷ್ಟ್ರೀಯ ಚಿಂತನೆ. ಅವರಂತೆಯೇ ಜೀವನ ನೋಟ. ದಾರಿ ಮಾತ್ರ ಬೇರೆ. ದತ್ತಾಜಿ ನಮ್ಮೆಲ್ಲರಿಗೆ ಸಮಾಜಸೇವೆಯಲ್ಲಿ ದೀಪಸ್ತಂಭವಾಗಿ ನಿಂತವರು (ಈಗಲೂ). ಎಂಪಿಕೆ ನಮ್ಮ ವೃತ್ತಿಜೀವನಕ್ಕೆ ಮಾದರಿಯಾದರು. ಇಂದಿರಾ ಹೇರಿದ ತುರ್ತು ಪರಿಸ್ಥಿತಿ ಮುಗಿದ ಮೇಲೆ ವಿದ್ಯಾರ್ಥಿ ಪರಿಷತ್ತನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ್ದರಲ್ಲಿ ಎಂಪಿಕೆ ಪಾತ್ರವೂ ಹಿರಿದು.

ನಾನು ವಿದ್ಯಾರ್ಥಿ ಪರಿಷತ್ತಿನ ಕಚೇರಿಯಲ್ಲಿ ದತ್ತಾಜಿ ಮತ್ತು ಇತರರ ನೆರವಿನಿಂದ ಉಳಿಯಲು ಆರಂಭಿಸಿ ವಿದ್ಯಾರ್ಥಿ ಪಥ ಮ್ಯಾಗಜಿನ್ ನೋಡಲು ಒಪ್ಪಿಕೊಂಡಾಗ ಎಂಪಿಕೆ ಪರಿಚಯ ಆಯಿತು. ಆಗ ಅವರದ್ದೊಂದು ಸ್ಕೂಟರ್. ಪಥದ ಸಂಚಿಕೆ ಯೋಜನಾ ಸಭೆಗೆ ಬರುವಾಗೆಲ್ಲ ಅವರ ಸ್ಕೂಟರ್ ಕೆಡುತ್ತಿದ್ದುದು ಸಾಮಾನ್ಯವಾಗಿತ್ತು! ಆದರೆ ಒಮ್ಮೆ ಬಂದಮೇಲೆ ಅವರ ಹಸನ್ಮುಖ ಮಾತುಕತೆಯಿಂದ ನನ್ನ ಉತ್ಸಾಹ ಹೆಚ್ಚುತ್ತಿತ್ತು.

ಅದಾಗಿ ಕೆಲದಿನಗಳಲ್ಲೇ ಅವರು ಸೃಜನಾ ಕ್ರಿಯೇಶನ್ಸ್ ಎಂಬ ಚಿಕ್ಕ ಸಾಫ್ಟ್‌ವೇರ್‌ ಸಂಸ್ಥೆಯನ್ನು ಈಗಿನ ಡಾ. ರಾಜ್‌ಕುಮಾರ್ ರಸ್ತೆಯ ಆರಂಭದಲ್ಲಿ (ರಾಮಕುಮಾರ್ ಮಿಲ್ ಬದಿ) ಸ್ಥಾಪಿಸಿದರು. ನಮಗೆಲ್ಲ ಅವರ ಕಚೇರಿಗೆ ಹೋಗುವುದೇ ದೊಡ್ಡ ಸಂಭ್ರಮ. ಅಲ್ಲಿದ್ದ ಹತ್ತಾರು ಕಂಪ್ಯೂಟರುಗಳನ್ನು ದೂರದಿಂದ ನೋಡಿಯೇ ಸೋಜಿಗಪಡುತ್ತಿದ್ದೆವು. ಚೌತಿಹಬ್ಬ ಮುಂತಾದ ದಿನಗಳಲ್ಲಿ ಅವರು ರಾಜಾಜಿನಗರ ಭಾಷ್ಯಂ ಸರ್ಕಲ್ ಬಳಿ ಇದ್ದ ಮನೆಗೆ ಕರೆದು ಸತ್ಕಾರ ಮಾಡುತ್ತಿದ್ದರು. ನಮ್ಮಂತಹ ಏಕಾಂಗಿ ಸಮಾಜಜೀವಿಗಳಿಗೆ ಅವರು ಬೆಂಬಲವಾಗಿ ನಿಂತಿದ್ದು ನೆನಪಿಸಿಕೊಂಡರೆ ತುಂಬಾ ಖುಷಿಯಾಗುತ್ತದೆ.

ಸೃಜನಾದಿಂದ ಆರಂಭಿಸಿದ ಅವರ ಸಾಫ್ಟ್‌ವೇರ್‌ ಯಾತ್ರೆ ೧೯೯೨ರಲ್ಲಿ ಗ್ಲೋಬಲ್ಎಜ್ ಸಾಫ್ಟ್‌ವೇರ್‌ ಸಂಸ್ಥೆಯನ್ನು ಸ್ಥಾಪಿಸುವುದರೊಂದಿಗೆ ಇನ್ನೊಂದು ಮಜಲು ತಲುಪಿತು. ಅದೀಗ ಭಾರತದ ಗುಣಮಟ್ಟದ ಸಾಫ್ಟ್‌ವೇರ್‌ ಸಂಸ್ಥೆಗಳಲ್ಲಿ ಒಂದಾಗಿದೆ.

20 ನೆ ಶತಮಾನದ ಆರಂಭದ ಡಾಟ್‌ಕಾಮ್‌ ಗುಳ್ಳೆಯ ಸಂದರ್ಭದಲ್ಲಿ ಅವರು ಭಾಗಿಯಾಗಿದ್ದ ಐಸ್ಟೇಶನ್‌ ಎಂಬ ಇಮೈಲ್‌ ಸಾಧನವು ಡಾಟ್‌ಕಾಮ್‌ ಗುಳ್ಳೆಯ ಹಾಗೆಯೇ ಟಪ್‌ ಎಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಅದನ್ನೊಂದು ಅಬೆರೇಶನ್‌ ಎಂದೇ ಕರೆಯಬೇಕು.

ನಾಡಿನ ಪರಂಪರೆ, ವೈವಿಧ್ಯ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಪಾರ ಜ್ಞಾನ ಮತ್ತು ಕಾಳಜಿ ಹೊಂದಿರುವ ಎಂಪಿಕೆ ಮುಂದಿನ ದಿನಗಳಲ್ಲಿ ಇನ್ನೂ ಹಲವು ಯೋಜನೆಗಳಲ್ಲಿ ಭಾಗಿಯಾಗುತ್ತಾರೆ ಎಂಬುದಕ್ಕೆ ತಮ್ಮ ನಿವೃತ್ತಿಯ ತಕ್ಷಣದಲ್ಲೇ ೬ ಕೋಟಿ ರೂ. ದಾನ ಮಾಡಿದ್ದೇ ಮೊದಲ ಉದಾಹರಣೆ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಭಾಗಿಯಾಗುವ ಅವಕಾಶಗಳನ್ನು ಅವರು ನಿಷ್ಠುರವಾಗಿ ಬದಿಗೆ ಸರಿಸಿದರು ಎಂಬುದು ಒಂದು ರೀತಿಯಲ್ಲಿ ನನಗೆ ಸರಿ ಎನ್ನಿಸದ ಸಂಗತಿ. ಆದರೂ, ಅವರೇ ಹೇಳುವಂತೆ, ಸಮಾಜಕ್ಕಾಗಿ ದುಡಿಯಲು ರಾಜಕಾರಣವೇ ಮುಖ್ಯವಲ್ಲ ಎಂಬುದೂ ನಿಜ. ಇಂತಹ ಮೇಧಾವಿ ವ್ಯಕ್ತಿಗಳ ಅನುಭವ ಮತ್ತು ಸಮಯಾವಕಾಶವನ್ನು ಸಮಾಜವು ಸದುಪಯೋಗ ಮಾಡಿಕೊಳ್ಳುತ್ತದೆ ಎಂಬ ಆಶಯ ನನ್ನದು. ಯಾವುದೇ ಯೋಜನೆ / ಸಲಹೆಯನ್ನು ಅವರೊಂದಿಗೆ ಹಂಚಿಕೊಂಡರೆ, ಅವರು ಸೀದಾ ಇದನ್ನು ಕಾರ್ಯಗತಗೊಳಿಸುವ ಮಾತಿಗೇ ಬರುತ್ತಾರೆಯೇ ಹೊರತು, ತಾರ್ಕಿಕ ಜಂಜಡದಲ್ಲೇ ಉಳಿಯುವುದಿಲ್ಲ. ಮೂರು ವರ್ಷಗಳ ಹಿಂದೆ ಭಾರತದಲ್ಲಿ ಮಾರಾಟವಾಗುವ ಎಲ್ಲ ಐಟಿ ಸಾಧನಗಳಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಅಳವಡಿಸಿರಬೇಕು ಎಂಬ ಸಾರ್ವಜನಿಕ ಹೋರಾಟ ಮಾಡಿದಾಗ ಅದನ್ನು ಬೆಂಬಲಿಸಿ ನನ್ನನ್ನು ದಿಲ್ಲಿಗೆ ಕಳಿಸಿ ಹಲವು ಸಚಿವರ ಭೇಟಿ ಮಾಡಿಸಿದ್ದು ಎಂಪಿಕೆ ಅವರೇ.

ಎಂಪಿಕೆ ಅವರೊಂದಿಗೆ ಜಗಳ ಆಡುವುದಾಗಲೀ, ಹರಟೆ ಕೊಚ್ಚುವುದಾಗಲೀ ತುಂಬಾ ಹಿತವಾದ ಅನುಭವ ಕೊಡುತ್ತದೆ. ಏಕೆಂದರೆ ಎಲ್ಲವನ್ನೂ ಅವರು ತಮ್ಮ ಸಿಗ್ನೇಚರ್ ನಗುವಿನೊಂದಿಗೆ ಸಮಾರೋಪ ಮಾಡುತ್ತಾರೆ. ಅವರೊಂದಿಗೆ ಕೆಲವೊಮ್ಮೆ ಗಂಟೆಗಟ್ಟಲೆ ಎಡಬಿಡದೆ ಮಾತನಾಡಿದ್ದೇನೆ; ಅವರೊಬ್ಬ ಅತ್ಯುತ್ತಮ ಕೇಳುಗ.

ಸಂಘಟನೆಯ,ಸಂವಾದದ ಸೂತ್ರಗಳನ್ನು ಅರಿತರೆ ಕೇವಲ ಸಮಾಜಸೇವಾ ಸಂಸ್ಥೆಗಳನ್ನಷ್ಟೇ ಅಲ್ಲ, ಆಧುನಿಕ ಸಂಸ್ಥೆಗಳನ್ನೂ ಹೊಸದಾಗಿ – ಯಶಸ್ವಿಯಾಗಿ ಕಟ್ಟಬಹುದು ಎಂಬುದಕ್ಕೆ ಎಂಪಿಕೆ ಅತ್ಯುತ್ತಮ ಉದಾಹರಣೆ.

ಈವರೆಗಿನ ಸಾಧನೆಗೆ ಅವರನ್ನು ಹಾರ್ದಿಕವಾಗಿ ಅಭಿನಂದಿಸೋಣ! ಮುಂದಿನ ಹಾದಿಗೆ ಶುಭ ಕೋರೋಣ!

Share.

1 Comment

  1. Narendra Kumar S S on

    ಸೃಜನ ಟೆಕ್ನಾಲಜೀಸ್ ಪ್ರಾರಂಭಿಸಿದ್ದು 1992ರಲ್ಲಿ. ಅದು ಗ್ಲೋಬಲ್ ಟೆಕ್ನಾಲಜೀಸ್ ಆಗಿದ್ದು 2002ರಲ್ಲಿ.
    ನೀವು ತಿಳಿಸಿರುವ ಪ್ರತಿಯೊಂದು ಪದ, ವಾಕ್ಯವನ್ನೂ ಒಪ್ಪುತ್ತೇನೆ. ನಾನು ಅವರ ಕಂಪನಿಯಲ್ಲಿ 4 ವರ್ಷಗಳ ಕಾಲ ಕೆಲಸ ಮಾಡಿದೆ. 8 ವರ್ಷಗಳ ಕಾಲ ಪ್ರಚಾರಕನಾಗಿ ಕೆಲಸ ಮಾಡಿ ವಾಪಸ್ ಬಂದ ನನಗೆ, ವೃತ್ತಿ ಜೀವನಕ್ಕೆ ಪ್ರವೇಶ ನೀಡಿದವರು ಅವರು. ಕಂಪನಿಯ ಸಿ.ಇ.ಓ ಆಗಿದ್ದರೂ, ಅತ್ಯಂತ ಸರಳವಾಗಿ, ಎಲ್ಲರೊಡನೆಯೂ ನಗುನಗುತ್ತಾ ಮಾತನಾಡುತ್ತಿದ್ದರು. ಅವರಿಗೆ ನಾನು ಚಿರಋಣಿ.

Leave A Reply Cancel Reply
Exit mobile version