ಅಕ್ಷರಗಳು ಜೀವಪಡೆದ ಸೌಭಾಗ್ಯದ ದಿನಗಳಲ್ಲಿ

ನನ್ನ ಹೆಸರು ಬರದಿದ್ದರೆ ದುಃಖಿಸಲಾರೆ
ಅವರ ಮೌನ ಮಾತುಗಳಲಿ ಮರೆಯದಂಥ ಮುಖಗಳಲ್ಲಿ
ನನ್ನ ನೆನಪು ಇರದಿದ್ದರೆ ದುಃಖಿಸಲಾರೆ.

ಹುಡುಗುತನದ ಹಾದಿಯಲ್ಲಿ ವೇದನೆಗಳ ಹಾಡಿನಲ್ಲಿ
ನಾನು ಭಾಗಿಯಾಗಲಾರೆ, ನಾನು ಹಾಗೆಯೇ.
ಸ್ನೇಹಭರಿತ ನಾಡಿನಲ್ಲಿ ಮನೆಗಳ ಕಾಡಿನಲ್ಲಿ
ಭಾವಾಂಕಿತ ಭವಿಯಾಗುವೆ. ನಾನು ಹೀಗೆಯೇ.

ನನ್ನಳುವಿಗೆ ಜತೆಯಾಗುವ ಕಲ್ಲಂಚಿನ ಗೆಳೆಯರೇ
ಎದುರಾಗುವ ಅಡೆತಡೆಗಳು ನನ್ನೊಳಗಿರಲಿ.
ನಗುವಿಗೆ ನೆರವಾಗುವಂತ ಸಂಜೆಯ ಸಂದರ್ಭಗಳೇ
ನಿಮಗೆ ನನ್ನ ನಮಸ್ಕಾರ, ಪ್ರೀತಿಯರಳಲಿ.

ನೆರಳಿಗಿರುವ ನಷ್ಟಗಳಿಗೆ, ಬೆರಳಿಗಿರುವ ಕಷ್ಟಗಳಿಗೆ
ಹಣೆಗಂಟಿದ ಬೆವರಿನ ಹನಿ ಸಾಕ್ಷಿಯಾಗಲಿ.
ಅಂಗಾಂಗದ ನೋವುಗಳಿಗೆ, ನಲಿವುಗಳಿಗೆ, ನಾಳೆಗಳಿಗೆ
ನನಗಂಟಿದ ಕರ್ಮದ ಕರೆ ಪಾತ್ರವಾಗಲಿ.

Share.
Leave A Reply Cancel Reply
Exit mobile version