`ಅರ್ಥ’ಗಳು ನವ್ಯಕಥೆ ಕಟ್ಟುವ ಮೊದಲು
`ಅರ್ಥ’ಗಳು ನವ್ಯಕಥೆ ಕಟ್ಟುವ ಮೊದಲು `ಅನರ್ಥ’ಗಳು
ಪುರಾಣ ಸೃಷ್ಟಿಸಿದವು ; ನನಗೆ ಗೊತ್ತಿರುವಂತೆ ಈ
ಶಬ್ದಗಳು ಹುಟ್ಟುವ ಮೊದಲೇ ಇವು ಇದ್ದವು.
ಮನುಷ್ಯ ಕಲ್ಲಿನಿಂದ ಗೆಬರಿ ಗೆಣಸು ಕೀಲುವ,
ತಲೆಯೊಡೆಯುವ, ಗುಹೆಗಳಲ್ಲಿ ಕುಣಿದು ಚಿತ್ರಬರೆಯುವ
– `ವ’ಗಳಲ್ಲಿ ಇವು ಇದ್ದವು.
ಆಮೇಲೆ ಸಿಕಂದರನ ದಂಡಯಾತ್ರೆಯಲ್ಲಿ ಹಾಗೂ
ಕ್ರಿಸ್ತನನ್ನು ಶಿಲುಬೆಗೇರಿಸುವುದರಲ್ಲಿ ಮತ್ತು
ಕಾಳಿದಾಸನು ಬರೆದ ನಾಟಕಗಳಲ್ಲಿಯೂ ಹಾಗೆಯೇ
ಶೇಕ್ಸ್‌ಪಿಯರನ ಕೃತಿಗಳಲ್ಲಿಯೂ
– ಎಲ್ಲೆ`ಲ್ಲಿ’ಯೂ ಇವು ಕಂಡವು
ಜೋನಳನ್ನು ಸುಟ್ಟ ಕಟ್ಟಿಗೆಯ ಒಳಗೆ
ಗಾಂಧಿಯನ್ನು ಕೊಂದ ಗುಂಡಿನೊಳಗೆ
ಹಿಟ್ಲರನ ಹೊಸ ಮಾದರೀ ಮೀಸೆಯೊಳಗೆ
ಅಥವಾ ಕಾರ್ಲನ ಕ್ಯಾಪಿಟಲ್ಲಿನಲ್ಲಿ, ಲೋಹಿಯಾ
ಕನ್ನಡಕದಲ್ಲಿ, ಕೊನೆಗೆ ನನ್ನೀ ಹುಡುಗಿ ತುಟಿಗಳಲ್ಲಿ
ತೊಡೆಗಳಲ್ಲಿ, ಕಣ್ಣರೆಪ್ಪೆಗಳಲ್ಲಿ
ಇವು ಕೂತು ಕಡ್ಲೆಪುರಿ ತಿಂದಿದ್ದಕ್ಕೆ ಸಾಕ್ಷಿಗಳಿವೆ.
ಹೆಚ್ಚು ಕಡಿಮೆಯಾದರೂ ಪರವಾಯಿಲ್ಲ ಎನ್ನುವಿರಾದರೆ
ಈ ಮೊದಲ ಸಾಲುಗಳೊಳಗೂ ಇವು `ಗೂ’ವಾಗಿವೆ.