ಅವರು
೧೮-೫-೮೬
ಬೆಂಗಳೂರು
ನನ್ನ ಜತೆ ನಡೆದವರು, ಕಾಫಿ ಕುಡಿದವರು
ಅಂಗೈಗೆ ಮುತ್ತುಕೊಟ್ಟವರು
ಯಾರೆಂದು ಕೇಳುತ್ತೀರಾ?
ಕೇಳಿ, ಪರವಾಯಿಲ್ಲವಾದರೂ ಒಂದೇ
ಒಂದು ವಿಷಯ: ಅವರು ನನ್ನೊಳಗಿಲ್ಲ
ನನಗವರ ನೆನಪಷ್ಟಿಲ್ಲ; ಇಷ್ಟು
ದುಃಖಗಳ ಸರಾಗ ಹೊತ್ತವರಲ್ಲ; ಅಥವಾ
ಒಟ್ಟಾರೆ ಹೇಳೋದಾದರೆ
ನನ್ನ ಕಣ್ಣುಗಳಲ್ಲವರ ಬಿಂಬವಿಲ್ಲ.
ಅವರು ನನ್ನೆದೆಯೊಳಗೆ ಕೈ ಚಾಚಲಿಲ್ಲ-
ನನ್ನ ಸುಖಗಳ ಮೇಲೆ ಹೆಜ್ಜೆಯಿಡಲಿಲ್ಲವಾದರೂ
ನಾನೊಬ್ಬ ಒರಟನಾಗಿದ್ದೇನೆ; ಅವರ ಬೆನ್ನುಗಳ
ಅಣಕದಲ್ಲೇ ಹೀಗೆ ಹಿಂದುಳಿದಿದ್ದೇರೆ.
ಹೀಗಾಗಿ, ನಡೆದಂತೆ ಎದೆಗಟ್ಟಿಯಾಗುವ
ರಸ್ತೆಗಳಂತೆ ನಿಶ್ಶಬ್ದನಾಗಿ, ಈಗಿರುವ ತುಟಿಗೆ
ಜತೆಗಾರನಾಗಿದ್ದೇನೆ, ಇವೆಲ್ಲ ನಿಮಗೆ ತೀರ
ಬೇಜಾರಾಗಿದ್ದಲ್ಲಿ, – ಕ್ಷಮಿಸಿ
ನಾನೊಬ್ಬ ಹಾಡುಗಾರ, ನನ್ನಷ್ಟಕ್ಕೆ.
*
ಮಾತು ಬೆಳೆದರೆ ಕಾಲಿಗೆ ದಾರಿ ತಾಗುವುದಿಲ್ಲ
ಕಣ್ಣಿನಲ್ಲಿ ಸಿನೆಮಾ ಕಾಣುವುದಿಲ್ಲ, ತುಟಿಗೆ
ಚಹದ ಗುರುತಾಗುವುದಿಲ್ಲ. ಮುಖ್ಯ…
ಹೃದಯಕ್ಕೆ ಬಡಿತವಿರೋದಿಲ್ಲ.
ನನ್ನ ನೋಡಿದ್ದೀರಿ ದಯವಿಟ್ಟು;
ಧನ್ಯವಾದಗಳು, `ಹೋಗಿ ಬನ್ನಿ'
ಎನ್ನುವುದಿಲ್ಲ.
ಯಾಕೆಂದರೆ
ಹೋದವರು ಮರಳಿ ಬರೋದಿಲ್ಲವಾದರೂ
ಬಂದರೆ ಕರೆಯುವಷ್ಟು ಸಹೃದಯತೆ
ಈಗಿಲ್ಲ.