ಮೌನವೂ ನನಗೇ
ನಿನ್ನ ಅನುಮಾನದ ಬೀಜ ಬಲಿತ ಮೇಲೆ
ನಾನು ಮರವಾಗಿದ್ದು ವ್ಯರ್ಥ.
ನೆರಳು ಕೊಡಬೇಕೆಂದಿದ್ದೆ ಈಗ
ಮುಳ್ಳೇ ನನ್ನೊಳಗೆ ನೆಟ್ಟ ಹಾಗೆ.
ನಿನ್ನ ಹತಾಶೆಯ ರೆಕ್ಕೆ ಹರಡಿದ ಮೇಲೆ
ನಾನು ಬೆಚ್ಚಗಿನ ಗೂಡಾಗಿದ್ದು ವ್ಯರ್ಥ.
ಹಣೆ ತಟ್ಟಿ ಮಲಗಿಸುವ ಬಯಕೆ ಸತ್ತು
ಗರಿ ಕಿತ್ತ ಕಿಟಕಿ.ಬದುಕೆ ಹೀಗೆ.
ನಿನ್ನ ಮಾತಿನ ಹಿಂದೆ ಅಡಗಿರೋ ತ್ವೇಷ
ಹುಟ್ಟಡಗಿಸಿದೆ ನನ್ನ ಪ್ರೀತಿಯರ್ಥ.
ನಡುಗೊ ಕೈಗಳಿಂದ ನಿನ್ನ ಹಬ್ಬಿದ
ಕ್ಷಣಗಳೆಲ್ಲವೂ ಚಿತ್ರಹೀನ.
ನಿನ್ನ ಅನುಮಾನದ ಹೊಗೆ ದಟ್ಟವಾಗುತ್ತಲೇ
ನಾನು ಮಸಕಾಗಿದ್ದು ನಿಜ ಕಣೆ.
ಕಣ್ಣಹನಿಗಳು ಮಾತ್ರ ಹಾಗೇ ಉಪ್ಪುಪ್ಪು
ಎದೆಸಮುದ್ರ ಬತ್ತುವುದೇನೆ?
ನಿನ್ನ ಮಾತಿನ ಅಂಚು ಗೀರಿದ ಭಾವ
ದಿಕ್ಕೆಡಿಸಿದೆ ಎಂದಷ್ಟೆ ಹೇಳಬಲ್ಲೆ.
ಬಿಡು ಹೀಗೆಯೇ ಇದ್ದುಬಿಡೋಣ
ನಮ್ಮಷ್ಟಕ್ಕೆ ನಾವೇ ಗೊತ್ತಿಲ್ಲದೆ.
ನಾಳೆಗಳಲ್ಲಿ ನಿನ್ನ ಗುರುತು ಬಿಡದಿರು
ಇರಲಿ ನನ್ನದೇ ಚೂರು ಭವಿಷ್ಯ.
ಎಷ್ಟೇ ಹೀಗೆ ಕೊರಗಿದರೂ ಗೊತ್ತು
ನಮ್ಮ ಬದುಕೇ ಹೀಗೆ ಅನಿರ್ದಿಷ್ಟ.
ಹಾಡುಗಳ ಬರೆದಿಟ್ಟು ಹೋಗಿರುವೆ
ಸರಿ. ರಾಗಗಳೂ ಬೇಕಿಲ್ಲ ನನಗೆ.
ಮಾತೇ ಕಳೆದಿರುವಾಗ ಸುಮ್ಮನೆ
ನಿಂತಿರಬೇಡ. ಮೌನವೂ ನನಗೇ.