ಕೊನೆಯ ಮಾತು
ಸದೃಢ ದಡದೆದುರು ರಾಚಿದ
ಅಲೆಯಲೆಗಳೆಲ್ಲ ಚೂರು ;
ಹನಿಗಿಂತ ಚಿಕ್ಕ ಬಿಂದುಗಳ ಚೂರು
ಅಂಥ ಕಣ್ಣುಗಳ ಮುಂದೆಲ್ಲ ಉರಿದುರಿದು ಹೋದ
ಚುಕ್ಕೆ ಚುಕ್ಕೆಗಳ ಬೆಳಕ ರಾಶಿಯು ಕೂಡ
ದೂರದೂರದ ಬೆಳ್ಳಿಚುಕ್ಕೆಗಳಂತೆ ನೂರುನೂರು
ಎಲ್ಲದರ ಮುಖದಲ್ಲೂ ಕ್ಷೀಣಿಸಿದ ಕ್ಷಾತ್ರ
ಮುದ ತರಲು ಮೈಸುತ್ತ ಒತ್ತಿದ
ಬಿಸಿ – ತಂಪು ಭಾವಗುಚ್ಛಗಳೆಲ್ಲ
ತಾಗಲೇ ಇಲ್ಲ ಗೆಳೆಯಾ,
ನಿನ್ನ ಮನಕೆ.
ಒಂದು ಸಲವಾದರೂ ಪ್ರತಿಧ್ವನಿಯ
ಹನಿ ತೊಟ್ಟಿಕ್ಕಲಿಲ್ಲ
ಗೆಳೆಯಾ…..
ಮೌನರಾಗದ ಬಯಕೆ ಯಾಕೆ ನಿನಗೆ ?
ನಿನ್ನನುರಾಗ ಬಯಸಿ ಬರೆದಂಥ
ಪವನ ಪತ್ರಗಳನ್ನೆಲ್ಲ ಹರಿದುಬಿಡುವಂಥ
ಎಂಥದೋ ಉನ್ಮಾದ ಯಾಕೆ ನಿನಗೆ ?
ನನ್ನ ಪದ – ಪದದ ಪದರು ಬದುಕಿನ
ಒಂದೆಡೆಯಲ್ಲಿಯಾದರೂ ಸಾಕು
ಹರಿಸದೇ ಬಿಡಬೇಡ ನಿನ್ನುತ್ತರವ,
ನನ್ನೊಳಗೆ ಗೆಳೆಯಾ….
ಇಷ್ಟೇ ಮಾತು
ಬದುಕ ಬಯಸುವ ನಿನ್ನ
ಬಯಸಿ ಬದುಕುವ ನನ್ನ
ಕೊನೆಯಾಗಬಹುದಾದ
ಕೊನೆಯ ಮಾತು