ಕಳೆದ ವಾರ ಇದೇ ಅಂಕಣದಲ್ಲಿ ತದಡಿ ಯೋಜನೆಯ ಬಗ್ಗೆ ಲೇಖನ ಬಂದ ದಿನವೇ ನಾನು ತದಡಿಯಲ್ಲಿದ್ದೆ. ಅದಾಗಲೇ ತದಡಿಯ ಬಗೆಗಿನ ಎಲ್ಲ ಮಾಹಿತಿಯನ್ನೂ ಅಂತರಜಾಲದಲ್ಲಿ ಪಾತಾಳಗರಡಿ ಹಾಕಿ ಹುಡುಕಿ ತೆಗೆದು ಓದಿದ್ದೆ. ತದಡಿಯಲ್ಲಿ ಯೋಜನೆಯ ಪರ, ವಿರೋಧ ಇರುವ ಕೆಲವರನ್ನು ಭೇಟಿಯಾದೆ. ಪತ್ರಕರ್ತ ಮಿತ್ರರ ಜೊತೆ ಚರ್ಚಿಸಿದೆ. ಮುಖ್ಯವಾಗಿ ತದಡಿಯ ಈಗಿನ ವಿವಾದಿತ ಅಭಿವೃದ್ಧಿ ಮೀಸಲು ಜಾಗವನ್ನೂ ನೋಡಿದೆ. ಅದರ ಮೇಲೆ ಓಡಾಡಲಾಗಲಿಲ್ಲ; ಯಾಕೆಂದರೆ ಅದೆಲ್ಲವೂ ಗಜನಿ ಭೂಮಿ. ನೀರು ಏರುತ್ತ, ಇಳಿಯುತ್ತ ಹೋಗುತ್ತದೆ. ನುಸಿಕೋಟೆಯ ಜನರು ನಮ್ಮ ಜೊತೆ ಮಾತಾಡುವಾಗಲೇ ನೀರು ದಡ ಹತ್ತಿದ್ದು ಕಾಣಿಸಿತು. ದೂರದಲ್ಲಿ ಕೆಲವು ದೋಣಿಗಳಲ್ಲಿ ಚಿಪ್ಪು ಸಂಗ್ರಹಿಸುತ್ತಿದ್ದವರು ನಮ್ಮನ್ನು ಅಲ್ಲಿಂದಲೇ ಅಳೆದು ಸರಸರ ಹುಟ್ಟುಹಾಕಿ ದೂರವಾದರು. ಆಮೇಲೆ ಅವರ ಪರವಾಗಿ ಮಾತಾಡುವವರೂ ಸಿಕ್ಕಿದರು. ಅದಾದಮೇಲೆ ಸಾಣಿಕಟ್ಟೆಯ ಉಪ್ಪು ಸಹಕಾರ ಸಂಘವನ್ನು ದಾಟಿ ತದಡಿ ಬಂದರಿಗೂ ಹೋದೆವು.ಒಂದೂವರೆ ದಿನದಲ್ಲಿ ನನಗೆ ಸಿಕ್ಕ ಮಾಹಿತಿ, ನನ್ನ ಗ್ರಹಿಕೆಗೆ ಸಿಕ್ಕ ಅನುಮಾನಗಳನ್ನು ಗೆಳೆಯರ ಜೊತೆ ಹಂಚಿಕೊಂಡ ಮೇಲೆ ನನಗೆ ಅನ್ನಿಸಿದ್ದನ್ನೆಲ್ಲ ಇಲ್ಲಿ ಅತ್ಯಂತ ಸಂಕ್ಷಿಪ್ತವಾಗಿ ಪಟ್ಟಿ ಮಾಡುತ್ತಿದ್ದೇನೆ. ಒಂದು ರೀತಿಯಲ್ಲಿ ಇದು ತದಡಿ ಕಾರ್ಯಸೂಚಿ ಆಗಬೇಕೆನ್ನುವುದು ನನ್ನ ನಿರೀಕ್ಷೆ.
ತದಡಿಯಲ್ಲಿ ಕೂಡಲೇ ನಿಲ್ಲಿಸಬೇಕಾಗಿರುವುದೇನು?
- ತದಡಿಯಲ್ಲಿ ಈಗ ಖಾಸಗಿ ಸಂಸ್ಥೆಗಳಿಂದ ಚಿಪ್ಪು ಸಂಗ್ರಹ, ಮಾರಾಟ ನಡೆಯುತ್ತಿದೆ. ದಿನವೂ ಲಕ್ಷಗಟ್ಟಳೆ ರೂಪಾಯಿಯ ಚಿಪ್ಪು ಖಾಸಗಿ ವ್ಯವಹಾರಸ್ಥರ ಮೂಲಕ ಮಾರುಕಟ್ಟೆಗೆ ಟ್ರಕ್ಕುಗಳಲ್ಲಿ ಸಾಗಣೆಯಾಗುತ್ತಿದೆ. ಈ ಸಂಸ್ಥೆಗಳು ಸ್ಥಳೀಯರನ್ನು ಕೆಲಸಕ್ಕೆ ಇಟ್ಟುಕೊಂಡಿವೆಯೇ ಹೊರತು ಮೀನಿನ ಉದ್ಯಮದ ಹಾಗೆ ಇದು ಕುಟುಂಬಗಳ ದಿನಗಳಿಕೆಯ ಕಸುಬಾಗಿಲ್ಲ. ಆಯಸ್ಟರ್ ಮುಂತಾದ ಆಹಾರಸಹಿತದ ಚಿಪ್ಪುಗಳನ್ನು ಮಾರುವವರೂ ಇದ್ದಾರೆ ನಿಜ; ಆದರೆ ಇಲ್ಲಿ ಮೃತಚಿಪ್ಪುಗಳ ಮಾರಾಟದ ವ್ಯವಹಾರದಲ್ಲಿ ಸ್ಥಳೀಕರು ದಿನಗೂಲಿ ಕಾರ್ಮಿಕರಾಗಿದ್ದಾರೆ. ಈ ಕೂಡಲೇ ಸರ್ಕಾರವು ಇಲ್ಲಿ ಖಾಸಗಿ ಸಂಸ್ಥೆಗಳನ್ನು ಚಿಪ್ಪು ಉದ್ಯಮದಿಂದ ಮತ್ತು ಇನ್ನಾವುದೇ ಸಮುದ್ರ ಉತ್ಪನ್ನ ಆಧಾರಿತ ಉದ್ಯಮಗಳಲ್ಲಿ ತಲೆ ಹಾಕದಂತೆ ಕಡ್ಡಾಯವಾಗಿ ತತ್‌ಕ್ಷಣವೇ ನಿಷೇಧಿಸಬೇಕು. ಉಪ್ಪು ಹಾಗೂ ಮೀನು ಉದ್ಯಮದಂತೆ ಚಿಪ್ಪು ಉದ್ಯಮವೂ ಒಂದೋ ಕುಟುಂಬಗಳ ಸಹಜ ಉತ್ಪನ್ನವಾಗಬೇಕು ಅಥವಾ ಸಹಕಾರಿ ಮಾದರಿಯ ಉದ್ಯಮವಾಗಬೇಕು. ಇದರಿಂದ ಸ್ಥಳೀಯ ಕುಟುಂಬಗಳ ವರಮಾನ ಹೆಚ್ಚಬಹುದಲ್ಲದೆ ಅವರೆಲ್ಲ ಸ್ವಾವಲಂಬಿಗಳಾಗಬಹುದು.
- ತದಡಿಯಲ್ಲಿ ಯಾವುದೇ ಖನಿಜ / ಅದಿರು ಆಧಾರಿತ ಉದ್ಯಮಗಳು ಬರಲೇಕೂಡದು. ಈ ಬಗ್ಗೆ ಸರ್ಕಾರವು ವಿಶೇಷ ಕಾಯ್ದೆ ರೂಪಿಸಬಹುದೆ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬಹುದೇ ಎಂದು ಯೋಚಿಸಬೇಕು.
ತದಡಿ ಯೋಜನೆಯನ್ನು ವಿರೋಧಿಸುವವರದು ಒಂದು ಸಮುದಾಯ, ಬೆಂಬಲಿಸುವವರದೇ ಒಂದು ಸಮುದಾಯ, – ಇತ್ಯಾದಿ ಜಾತಿ-ಕೋಮು ಆಧಾರದಲ್ಲಿ ಹೋರಾಟವನ್ನು ಒಡೆಯುವ ಮತ್ತು ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಎಲ್ಲ ಸಮುದಾಯದ ಸ್ಥಳೀಯರ ಬದುಕು – ಮನೆ – ಉತ್ಪನ್ನ – ಸಂಸ್ಕೃತಿ – ಎಲ್ಲವೂ ಈ ಯೋಜನೆಯಿಂದ ಸರ್ವನಾಶವಾಗಲಿದೆ. ದಯಮಾಡಿ ಜಾತಿ ವಿಷಯ ಮರೆಯಿರಿ.
ತದಡಿಯಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರವಂತೂ ಖಂಡಿತಾ ಅಲ್ಲಿನ ಸ್ಥಳೀಯರ ಬದುಕಿಗೇ ಮಾರಕವಾಗುತ್ತದೆ. ಯಾಕೆ?
- ತದಡಿ ತಟವು ಮೀನುಗಳ ಮತ್ತು ಇತರೆ ಜಲಚರಗಳ ಸಂತಾನವೃದ್ಧಿಯ ಪ್ರಮುಖ ತಾಣವಾಗಿದೆ. ಈ ತಟದಲ್ಲಿ ಕಲ್ಲಿದ್ದಲು ಹಡಗುಗಳು ಬರುವ ಮೂಲಕ ಇಡೀ ತದಡಿಯ ಈ ಪರಿಸರ ಕಾಯಕವು ಸತ್ತೇಹೋಗುತ್ತದೆ.
- ತದಡಿಯ ಬಂದರನ್ನು ಆಧರಿಸಿ ಮೀನುಗಾರಿಕೆ ನಡೆಸುತ್ತಿರುವ ಕುಟುಂಬಗಳು ಅತ್ತ ಆಳ ಮೀನುಗಾರಿಕೆಗೂ ಬಂಡವಾಳ ಹೂಡಲಾರದೆ, ಇತ್ತ ದೋಣಿ ಮೀನುಗಾರಿಕೆಯನ್ನೂ ನಡೆಸಲು ಅವಕಾಶವಿಲ್ಲದೆ ನರಳುತ್ತವೆ. ಬಹುಶಃ ತದಡಿಯಲ್ಲಿ ಮೀನುಗಾರಿಕೆ ಆಧಾರಿತ ಕುಟುಂಬಗಳು ಕೆಲಸ ಕಳೆದುಕೊಳ್ಳುತ್ತವೆ. ಮೀನು ಸಹಕಾರ ಸಂಘ ಬಾಗಿಲು ಮುಚ್ಚುತ್ತದೆ. ಈಗಿನ ತದಡಿ ಬಂದರು ಕಲ್ಲಿದ್ದಲು ಇಳಿಸುವುದಕ್ಕೆ ಏನೇನೂ ಸಾಕಾಗುವುದಿಲ್ಲ. ಅಲ್ಲದೆ ಈ ಬಂದರು ಅತ್ಯಂತ ಚಿಕ್ಕದು. ಹೊಸ ಬಂದರು ಬಂದರೆ ಈಗಿನ ಬಂದರು ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ. ೧೯೯೨ರಲ್ಲಿ ಡ್ಯಾನಿಡಾ ನೆರವಿನ ಮೂಲಕ ಮೀನುಗಾರಿಕೆ ಬಂದರಾಗಿ ರೂಪುಗೊಂಡಿದ್ದ ತದಡಿ ಮುಂದೆ ಕಲ್ಲಿದ್ದಲಿನ ಸರಕುಕೇಂದ್ರವಾಗಿ ಕರಿಗಟ್ಟಲಿದೆ.
- ಗಜನಿ ಭೂಮಿಯಲ್ಲೇ ಈ ವಿದ್ಯುತ್ ಸ್ಥಾವರ ಸ್ಥಾಪನೆಯಾಗಲಿದೆ. ಅಂದರೆ ಅಘನಾಶಿನಿ ನದೀಮುಖಜ ಪ್ರದೇಶವೇ ಈ ಯೋಜನೆಗಾಗಿ ಉಧ್ವಂಸವಾಗುತ್ತದೆ. ನೈಸರ್ಗಿಕ ಕಾಂಡ್ಲಾವನಗಳೂ ಹೇರಳವಾಗಿರುವ ಇಂಥ ಪಾರಿಸರಿಕ ಬಿಸಿತಾಣವನ್ನು ಒರೆಸಿಹಾಕಿದರೆ, ಪರಿಣಾಮ ಭೀಕರ.
- ಮೊದಲೇ ಹೇಳಿದಂತೆ ಕಲ್ಲಿದ್ದಲಿನಿಂದ ಕಾರ್ಬನ್ ಡಯಾಕ್ಸೈಡ್, ರಂಜಕದ ಆಕ್ಸೈಡ್, ಸಾರಜನಕದ ಆಕ್ಸೈಡ್, ಪಾದರಸ, ವಿಕಿರಣಯುಕ್ತ ಖನಿಜಗಳು ಹೀಗೆ ಹತ್ತಾರು ಬಗೆಯ ವಿಷಗಳು ಉತ್ಪನ್ನವಾಗುತ್ತದೆ. ಇವು ಪಶ್ಚಿಮ ಘಟ್ಟದ ಕುತ್ತಿಗೆ ಹಿಸುಕುತ್ತವೆ ಎಂಬುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.
- ತದಡಿ ಯೋಜನೆಯಲ್ಲಿ ಕಾರ್ಬನ್ ಡಯಾಕ್ಸೈಡ್ ಎಂಬ ವಿಷಾನಿಲವನ್ನು ಸಂಗ್ರಹಿಸಿ ದೂರ ಸಾಗಿಸುವ ಯೋಜನೆ ಇಲ್ಲವೇ ಇಲ್ಲ. ಇದನ್ನು ಕಾರ್ಬನ್ ಕ್ಯಾಪ್ಚರ್ ಎಂದು ಕರೆಯುತ್ತಾರೆ. ಈ ವ್ಯವಸ್ಥೆಯನ್ನು ಅಳವಡಿಸುವಂಥ ಸ್ಥಾವರವನ್ನೇ ಸ್ಥಾಪನೆ ಮಾಡಿದರೂ, ಈ ವಿಷಾನಿಲವನ್ನು ಸಾಗಿಸುವುದಕ್ಕೆ ಪ್ರತ್ಯೇಕ ಪೈಪ್‌ಲೈನ್ ಹಾಕಬೇಕು. ಇದಕ್ಕೆ ಯೋಜನೆಯ ವೆಚ್ಚದ ಶೇ. ೩೦-೬೦ರಷ್ಟು ಖರ್ಚು ಬರುತ್ತದೆ; ವಿದ್ಯುತ್ ದರವೂ ಹೆಚ್ಚುತ್ತದೆ. ಒಟ್ಟು ೩೦೭ ಕಿಮೀ ಉದ್ದದ ವಿಷಾನಿಲ ಕೊಳವೆಯನ್ನು ಕರಾವಳಿಗುಂಟ ಹಾಸಿ ಪ್ರತಿಕ್ಷಣವೂ ಸಂರಕ್ಷಿಸಬೇಕಾಗುತ್ತದೆ. ಈ ವ್ಯವಸ್ಥೆ ಇಲ್ಲವೆಂದರೆ ಟನ್ನುಗಟ್ಟಳೆ ವಿಷಾನಿಲವು ಪ್ರತಿದಿನವೂ ಪಶ್ಚಿಮಘಟ್ಟದ ನೆತ್ತಿಯ ಮೇಲೆ ಸುರಿಯುತ್ತದೆ. ಈ ತಂತ್ರಜ್ಞಾನವು ಎಂಥ ಬೋಗಸ್ ಎಂದು ಪರಿಸರ ಅಭಿಯಾನ ಸಂಸ್ಥೆ `ಗ್ರೀನ್‌ಪೀಸ್’ ೪೪ ಪುಟಗಳ ಒಂದು ಪುಸ್ತಕವನ್ನೇ ಪ್ರಕಟಿಸಿದೆ. `ಫಾಲ್ಸ್ ಹೋಪ್ – ವೈ ಕಾರ್ಬನ್ ಕ್ಯಾಪ್ಚರ್ ಎಂಡ್ ಸ್ಟೋರೇಜ್ ವೋಂಟ್ ಸೇವ್ ದಿ ಕ್ಲೈಮೇಟ್’ ಎಂಬ ಈ ಪುಸ್ತಕವನ್ನು ತದಡಿ ವಿದ್ಯುತ್ ಯೋಜನೆಯನ್ನು ತರುವವರು ಓದಬೇಕು. ಈ ತಂತ್ರಜ್ಞಾನವನ್ನು ಅಳವಡಿಸಿಯೂ ಪರಿಸರ ನಾಶವೇನೂ ತಪ್ಪುವುದಿಲ್ಲ ಎಂಬುದೇ ಈ ವರದಿಯ ತಾತ್ಪರ್ಯ.
- The combined CO2 emissions from all nine projects can be estimated at 213 MtCO2 /yr. The annual CO2 emissions from the nine operating UMPPs is therefore expected to equate to around 0.8% of total current (as of 2005) global greenhouse gas emissions, and are therefore highly significant. The lifetime emissions from all nine UMPPs without CCS would be 9.6 GtCO2 – after each plant has been in operation for 40 years. ವಿಶ್ವದ ಕಾರ್ಬನ್ ಡಯಾಕ್ಸೈಡ್‌ನ ಶೇ. ೦.೮ಕ್ಕೆ ಕಾರಣವಾಗುವ ಈ ಒಂಬತ್ತೂ ಯು ಎಂ ಪಿ ಪಿ ಯೋಜನೆಗಳಿಂದ ೪೦ ವರ್ಷಗಳಲ್ಲಿ ೯.೬ ಗೈಗಾಟನ್‌ಗಳಷ್ಟು ಕಾರ್ಬನ್ ಡಯಾಕ್ಸೈಡ್ ಉತ್ಪಾದನೆಯಾಗುತ್ತದೆ; ಇದು ಗಮನಾರ್ಹ ಎಂದು ಬ್ರಿಟಿಶ್ ಹೈಕಮಿಶನ್ ಮೂಲಕ ನೇಮಕವಾದ ಖಾಸಗಿ ಸಂಸ್ಥೆಯೊಂದರ ೮೬ ಪುಟಗಳ ವರದಿಯೇ ಹೇಳಿರಬೇಕಾದರೆ ಈ ಯೋಜನೆಯ ಇತರೆ ವಿಷತ್ಯಾಜ್ಯಗಳೂ ಸೇರಿದರೆ ಆಗುವ ಅಪಾಯವನ್ನು ನೀವೇ ಊಹಿಸಿಕೊಳ್ಳಿ.
- ತದಡಿಯ ಗಜನಿ ಭೂಮಿಯಲ್ಲಿ ಕಗ್ಗ ಎಂಬ ಭತ್ತ ಬೆಳೆಯುತ್ತಿತ್ತು. ಅದೀಗ ಕಾಣೆಯಾಗಿದೆ. ಕರಿ ಕಗ್ಗವಂತೂ ಉಪ್ಪುನೀರಿನಲ್ಲೇ ಬೆಳೆಯುವ ವಿಶಿಷ್ಟ ತಳಿಯಾಗಿದ್ದು ಅನೇಕ ವೈದ್ಯಕೀಯ ಗುಣಗಳನ್ನೂ ಹೊಂದಿದೆ. ಈ ಬಗ್ಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪಾರಿಸರಿಕ ಅಧ್ಯಯನ ಕೇಂದ್ರದ ಪಾರಿಸರಿಕ ಮಾಹಿತಿ ವ್ಯವಸ್ಥೆಯು ಡಾ. ಮಾಧವ ಗಾಡಗೀಳರ ನೇತೃತ್ವದಲ್ಲಿ ರೂಪಿಸಿದ `ಕರ್ನಾಟಕ ಸ್ಟೇಟ್ ಎನ್‌ವಿರಾನ್‌ಮೆಂಟ್ ರಿಪೋರ್ಟ್ ಎಂಡ್ ಆಕ್ಷನ್ ಪ್ಲಾನ್ (ಜೀವವೈವಿಧ್ಯ ರಂಗ)’ – ಈ ವರದಿಯಲ್ಲಿ ಸ್ಪಷ್ಟವಾದ ಕಾರ್ಯಯೋಜನೆಯೇ ಇದೆ. ಕಗ್ಗವನ್ನು ಬೆಳೆಸುವುದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಈ ವರದಿ ಹೇಳಿದೆ. ನಾಡಿನ ಜೀವವೈವಿಧ್ಯವನ್ನು ಉಳಿಸಿ ಬೆಳೆಸುವುದು ಸರ್ಕಾರದ ಪ್ರಮುಖ ಕರ್ತವ್ಯ; ಜೀವವೈವಿಧ್ಯವ ರಾಜಧಾನಿಯಾದ ತದಡಿಯನ್ನೇ ಪೂರ್ಣವಾಗಿ ಹಿಸುಕುವುದು ಅಪರಾಧ.
- ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಕಾರ್ಬನ್ ಕ್ಯಾಪ್ಚರ್ ಮತ್ತು ಸ್ಟೋರೇಜ್ (ಸಿಸಿಎಸ್) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡದೇ ಇದ್ದರೆ, ಅಂಥ ಯೋಜನೆಗಳನ್ನು ಮುಂದಿನ ಹತ್ತು ವರ್ಷಗಳ ಕಾಲ ಕೈಗೆತ್ತಿಕೊಳ್ಳಲೇಬಾರದು, ಮೊರಟೋರಿಯಮ್ ವಿಧಿಸಬೇಕು ಎಂದು ಗ್ಲೋಬಲ್ ವಾರ್ಮಿಂಗ್ (ಜಾಗತಿಕ ತಾಪಮಾನ ಏರಿಕೆ) ತಜ್ಞ ಹಾಗೂ ಕಳೆದ ವರ್ಷ ನೊಬೆಲ್ ಪ್ರಶಸ್ತಿ ಪಡೆದ ಅಲ್ ಗೋರೆಯವರ ಸಲಹೆಗಾರ, ನಾಸಾ ಸಂಸ್ಥೆಯೊಂದರ ನಿರ್ದೇಶಕ ಜೇಮ್ಸ್ ಹ್ಯಾನ್ಸೆನ್ ಅಭಿಯಾನ ನಡೆಸಿದ್ದಾರೆ. ವಿಶ್ವಮಟ್ಟದಲ್ಲೇ ಇಂಥ ಯೋಜನೆಗಳ ಬಗ್ಗೆ ತೀವ್ರ ಚರ್ಚೆ ಎದ್ದಿರುವಾಗ ಜಾಗತಿಕ ಪಾರಿಸರಿಕ ಹಾಟ್‌ಸ್ಪಾಟ್‌ನಲ್ಲಿ ಈ ಯೋಜನೆಯನ್ನು ಎಬ್ಬಿಸುವುದು ಎಂಥ ಬೇಜವಾಬ್ದಾರಿತನ ಎಂಬ ಅರಿವು ನಮ್ಮ ಸರ್ಕಾರದ ನೀತಿ ನಿರೂಪಕರಿಗೆ ಇರಬೇಕು.
- ಇನ್ನು ಈ ಯೋಜನೆ ಬಂದರೆ ಉತ್ಪಾದನೆಯಾಗುವ ಎಲ್ಲಾ ೪೦೦೦ ಮೆಗಾವಾಟ್ ವಿದ್ಯುತ್ತೂ ಕರ್ನಾಟಕಕ್ಕೇ ದಕ್ಕುತ್ತದೆ ಎಂದು ನೀವು ತಿಳಿದಿದ್ದರೆ ತಪ್ಪು. ಇದರಲ್ಲಿ ರಾಜಸ್ಥಾನಕ್ಕೆ ೩೦೦, ಮಹಾರಾಷ್ಟ್ರಕ್ಕೆ ೧೦೦೦, ತಮಿಳುನಾಡಿಗೆ ೧೦೦೦, ಕೇರಳಕ್ಕೆ ೨೦೦ ಮೆಗಾವಾಟ್ ಕೊಟ್ಟ ಮೇಲೆ ಉಳಿದ ೧೫೦೦ ಮೆಗಾವಾಟ್ ಮಾತ್ರ ಕರ್ನಾಟಕಕ್ಕೆ ಸಿಗುತ್ತದೆ. ಆದ್ದರಿಂದ ಇದೊಂದೇ ಯೋಜನೆಯಿಂದ ರಾಜ್ಯದ ವಿದ್ಯುತ್ ಉತ್ಪಾದನೆ ಇಮ್ಮಡಿಯಾಗುವ ಮಾತು ದೂರವೇ ಉಳಿದಂತಾಗಿದೆ. ಈ ೧೫೦೦ ಮೆಗಾವಾಟ್‌ನಲ್ಲಿ ನಗರಗಳಿಗೆ ಸಿಗೋದೆಷ್ಟು, ಹಳ್ಳಿಗಳಿಗೆ ಉಳಿಯೋದೆಷ್ಟು, ಉತ್ತರಕನ್ನಡಕ್ಕೆ ದಕ್ಕೋದೆಷ್ಟು ಎಂಬ ಲೆಕ್ಕಾಚಾರ ಇನ್ನೂ ಮಾಡಿಲ್ಲ ಬಿಡಿ.
ತದಡಿ ಯೋಜನೆ ಬಂದೇ ಬರುವ ಅಪಾಯ ಹೆಚ್ಚು. ಯಾಕೆಂದರೆ….
- ಹಲವು ದೊಡ್ಡ ಹಣಕಾಸು ಸಂಸ್ಥೆಗಳು ಈ ಯೋಜನೆಗೆ ಸಾಲ ನೀಡಲು ಉತ್ಸುಕವಾಗಿವೆ. ಪವರ್ ಫೈನಾನ್ಸ್ ಕಾರ್ಪೋರೇಶನ್ ಈಗಾಗಲೇ ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದೆ.
-
ಕೋಸ್ಟಲ್ ಕರ್ನಾಟಕ ಪವರ್ ಲಿಮಿಟೆಡ್ ಎಂಬ ಸಂಸ್ಥೆಯು ಇದೇ ಉದ್ದೇಶಕ್ಕಾಗಿ ಹುಟ್ಟಿಕೊಂಡಿದೆ.
ಐಡಿಬಿಐ ಬ್ಯಾಂಕಿನ ಒಂದು ದಾಖಲೆಯಲ್ಲಿ ತದಡಿ ಸ್ಥಳದ ಬಗ್ಗೆ ಇನ್ನೂ ಸರ್ಕಾರ ಖಚಿತ ನಿಲುವು ಪ್ರಕಟಿಸಿಲ್ಲ ಎಂದಿದ್ದರೆ, ಪ್ರೇಸ್‌ವಾಟರ್‌ಕೂಪರ್‌ಹೌಸ್‌ನ ಒಂದು ದಾಖಲೆಯಲ್ಲಿ ತದಡಿಯ ಹೆಸರು ನಿಚ್ಚಳವಾಗಿದೆ. ಕೇಂದ್ರ ಸರ್ಕಾರದ ವಿವಿಧ ವರದಿಗಳಲ್ಲೂ ತದಡಿ ಯೋಜನೆಯನ್ನು ಉಲ್ಲೇಖಿಸಲಾಗಿದೆ. -
ಒಳನಾಡಿನಲ್ಲಿ ಇಂಥ ಯುಎಂಪಿಪಿಗಳನ್ನು ಸ್ಥಾಪಿಸುವ ಇರಾದೆಯೇ ಕೇಂದ್ರಸರ್ಕಾರಕ್ಕೆ ಇಲ್ಲವಾದ್ದರಿಂದ ಈ ಯೋಜನೆಯು ಬಿಜಾಪುರ ಜಿಲ್ಲೆಗೆ ವರ್ಗಾವಣೆಯಾಗುವುದು ಆಗದ ಮಾತು.
-
About 1900-2000 acres of barren/ plain land is available for main plant out of which about 1450 acres is already in possession of Karnataka Industrial Areas Development Board (KIADB) which is vacant and free of encroachments. This land is without any forest and very thin habitation. An additional about 500 acres of land at village Poojageri is available at a distance of about 3 Kms from Ankola for township. – ಅಂದರೆ ಈ ಗಜನಿ ಭೂಮಿಯಲ್ಲಿ ಜನವಸತಿ ವಿರಳವೆಂದೂ (ನೀರಿನ ಮೇಲೆ ಮನೆ ಕಟ್ಟುವವರಿಲ್ಲ ತಾನೆ?), ಇಲ್ಲಿ ಕಾಡೂ ಇಲ್ಲ (ಕಾಡು ಮಾತ್ರ ಪರಿಸರ ಎಂಬ ತಿಳಿವಳಿಕೆ), ಇದು ಬಂಜರು ಭೂಮಿ (ಅಘನಾಶಿನಿ ನದಿ ಮುಖಜ ಪ್ರದೇಶವು ಬಂಜರು ಭೂಮಿ ಎಂಬ ಹೇಳಿಕೆಯನ್ನು ಇಲ್ಲಿ ಮಾತ್ರ ಕಾಣಬಹುದು) – ಎಂದೆಲ್ಲ ಕೇಂದ್ರ ಸರ್ಕಾರ ತನ್ನ ದಾಖಲೆಗಳಲ್ಲಿ ಹೇಳುತ್ತ ಬಂದಿದೆ ಎಂಬುದನ್ನು ಗಮನಿಸಿ. ಸರ್ಕಾರದ ಇಂಥ ಬೇಜವಾಬ್ದಾರಿ ಮಾತುಗಳನ್ನು ಇಡೀ ನಾಡಿನ ಜನರೇ ಖಂಡಿಸಬೇಕಲ್ಲವೆ? ಪ್ರಪಂಚದಲ್ಲಿ ಇರುವ ಕೇವಲ ೩೪ ಹಾಟ್‌ಸ್ಪಾಟ್‌ಗಳಲ್ಲಿ ಪಶ್ಚಿಮಘಟ್ಟವೂ ಒಂದೆಂಬುದನ್ನು ಸರ್ಕಾರ ಮರೆತಿದೆ!
-
ಈ ಕೂಡಲೇ ಆಗಬೇಕಾದ್ದೇನು?
ತದಡಿ ಯೋಜನೆ ವಿರುದ್ಧ ಹೋರಾಟ ನಡೆಸಲು ರೂಪುಗೊಂಡ ಸಮಿತಿಯೊಂದಿದೆ; ಅದರಲ್ಲಿ ಹಲವು ಸ್ವಾಮೀಜಿಗಳಿದ್ದಾರೆ; ರಾಜಕಾರಣಿ – ಜನಪ್ರತಿನಿಧಿಗಳಿದ್ದಾರೆ; ಸಾಮಾಜಿಕ ಕಾರ್ಯಕರ್ತರಿದ್ದಾರೆ. ಈ ಸಮಿತಿಯಿಂದ ಇನ್ನಷ್ಟು ಪ್ರಖರವಾದ ಮತ್ತು ಜನತೆಗೆ ನಿಷ್ಠವಾದ ಹೋರಾಟವನ್ನು ನಿರೀಕ್ಷಿಸೋಣ; -
ತದಡಿಯ ಉಪ್ಪು ಸಹಕಾರಿ ಉದ್ಯಮದಂತೆ ಚಿಪ್ಪಿನ ಉದ್ಯಮವೂ ಖಾಸಗೀಕರಣದ ಬಿಗಿಮುಷ್ಠಿಯಿಂದ ಹೊರಬರಲು ಈ ಸಮಿತಿಯು ಗಂಭೀರ ಚಿಂತನೆ ನಡೆಸುತ್ತದೆ ಎಂದು ಆಶಿಸೋಣ. ಯಾಕೆಂದರೆ ದೊಡ್ಡ ಭೂತವನ್ನು ಓಡಿಸುವ ಗಡಿಬಿಡಿಯಲ್ಲಿ ಚಿಕ್ಕಭೂತಗಳನ್ನು ಮರೆಯುವ ಜಾಣತನವೂ ನಮ್ಮಲ್ಲಿದೆ!
-
ಅಭಿವೃದ್ಧಿ ಯೋಜನೆಗಳಿಂದ ಆಗುವ ಅಪಾಯವನ್ನು ತಡೆಯುವುದರ ಜೊತೆಗೇ ಸ್ಥಳೀಯ ಜನತೆಯ ಅಭ್ಯುದಯವನ್ನು ಬಯಸುವುದೂ ಒಂದು ಹೋರಾಟದ ಭಾಗವಾಗಬೇಕು. ಆಗಲೇ ಇಂಥ ಹೋರಾಟಗಳು ಸಂಘ-ಸಂಸ್ಥೆ-ಜಾತಿ-ಭಾಷೆ ಎಲ್ಲವನ್ನೂ ಮೀರುತ್ತವೆ. ಆದ್ದರಿಂದಲೇ ಯೋಜನೆ ವಿರೋಧಿ ಹೋರಾಟದಲ್ಲಿ ಚಿಪ್ಪು ಉದ್ಯಮವನ್ನು ಕುಟುಂಬಗಳಿಗೆ ವರ್ಗಾಯಿಸುವ ಪರ್ಯಾಯ ಅಭ್ಯುದಯ ಮಾರ್ಗವನ್ನೂ ಸಮಿತಿಯು ತುರ್ತಾಗಿ ಪರಿಗಣಿಸಬೇಕು.
-
ತದಡಿ – ಪಶ್ಚಿಮ ಘಟ್ಟದ ಜೀವನಾಡಿ. ಅದನ್ನು ಜನರಿಗಾಗಿ ಉಳಿಸಿಕೊಳ್ಳುವ ಹಕ್ಕು ನಮ್ಮದು; ಕರ್ತವ್ಯವೂ ನಮ್ಮೆಲ್ಲರದು.
ಹೆಚ್ಚುವರಿ ಮಾಹಿತಿಗೆ: ಮಾಧವ ಗಾಡಗೀಳರ ವರದಿ, ಜೇಮ್ಸ್ ಹ್ಯಾನ್ಸೆನ್ ಪ್ರತಿಪಾದನೆ, ವಿಶ್ವ ಪಾರಿಸರಿಕ ಹಾಟ್‌ಸ್ಪಾಟ್‌ಗಳ ನಕಾಶೆ, ಸರ್ಕಾರವು ಯು ಎಂ ಪಿ ಪಿ ಯೋಜನೆಗಳ ಬಗ್ಗೆ ಪ್ರಕಟಿಸಿದ ಟಿಪ್ಪಣಿ, `ಗ್ರೀನ್‌ಪೀಸ್’ ಸಂಸ್ಥೆ ಪ್ರಕಟಿಸಿದ `ಫಾಲ್ಸ್ ಹೋಪ್’ ಪುಸ್ತಕ ಮತ್ತು ಪ್ರಶ್ನಾವಳಿ, ತದಡಿ ಯೋಜನೆಯ ಸ್ಥಳನಕಾಶೆ, ಇವೆಲ್ಲವನ್ನೂ http://www.mediafire.com/?nkdcwhxu2zu ಈ ಜಾಲತಾಣದಲ್ಲಿ ಪ್ರಕಟಿಸಿದ್ದೇನೆ. ನಾನು ಸಂಗ್ರಹಿಸಿರುವ ಇತರೆ ನೂರಾರು ಪುಟಗಳ ತಾಂತ್ರಿಕ ದಾಖಲೆಗಳನ್ನು ಅಗತ್ಯ ಇರುವವರಿಗೆ ಕಳಿಸಿಕೊಡಲು ಯತ್ನಿಸಬಲ್ಲೆ.