ಸೂರ್ಯಕುಮಾರ ಚಂದ್ರಕುಮಾರಿ
ಕಾಯುತ್ತಿದ್ದಂತೆ ಯೋಚಿಸುತ್ತೇನೆ :
ಸೂರ್ಯಕುಮಾರ ಚಂದ್ರಕುಮಾರಿಯನ್ನು
ಮುಟ್ಟಲಾರ, ಮದುವೆಯಾಗಲಾರ
ಎಂಬುದಾಗಿ
ಹುಡುಗರು
ಚಂದ್ರಿಕಾಳನ್ನು ತಬ್ಬುತ್ತಾರೆ
ಹುಡುಗಿಯರು ಸೂರ್ಯನೆದೆಯಲ್ಲಿ ಮೆತ್ತಗೆ
ತುಟಿಯಿಡುತ್ತಾರೆ.
ನೆಲಮಾತ್ರ ನೆಲವಾಗಿಯೇ….
ನೆಲಕಚ್ಚುತ್ತದೆ.
ನಾನು ಕಡ್ಲೇಕಾಯಿ ತಿನ್ನುತ್ತೇನೆ.
ಬಸ್ಸು ಬಂದರೆ ಹತ್ತುತ್ತೇನೆ.
ನೆಲವನ್ನೊತ್ತಿ ಆಕಾಶ ನೋಡುತ್ತೇನೆ
ಚಂದ್ರಕುಮಾರಿಯ ಹಗಲು ಬತ್ತಲು ಸೇವೆ….
ಯಾರದ್ದೋ ವಿರಹ ಈ ತರಹ
ರಂಗಪ್ರವೇಶ ಮಾಡಿದ್ದಿರಬಹುದು
ಅಂದುಕೊಳ್ಳುತ್ತೇನೆ.
ಬಸ್ಸು ಖಂಡಿತ ಬರುತ್ತದೆ
ನೆತ್ತಿಗೆ ಬಂದ ಸೂರ್ಯ
ಫುಟ್ಪಾತಿನಲ್ಲಿ ಭಿಕ್ಷೆ ಕೇಳುವ
ನೆನಪನ್ನು ಸುಟ್ಟರೆ,
ತಗಡಿನ ಕೆಳಗೆ ನಿಂತು
ನಿರಂತರ ಸುಖಿಸುತ್ತೇನೆ.
ಇಲ್ಲ, ಬಸ್ಸೂ ಬರುವುದಿಲ್ಲ.
ನೆನಪೂ ಸುಡುವುದಿಲ್ಲ.