ಜಾಗತೀಕರಣದ ಬಗ್ಗೆ ಎಲ್ಲೆಲ್ಲೂ ಚಿಂತಕರು ಸಮಾನವಾಗಿ ಚಿಂತಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಡಾ|| ಚಂದ್ರಶೇಖರ ಕಂಬಾರರ `ಶಿಖರ ಸೂರ್ಯ’ ಎಂಬ ಕಾದಂಬರಿಯನ್ನೂ, ಮೆಲ್ ಗಿಬ್ಸನ್ನನ `ದಿ ಅಪೋಕೆಲಿಪ್ಸ್’ ಸಿನೆಮಾವನ್ನೂ ಹೋಲಿಸಿ ಒಂದು ಸುದ್ದಿಕಥೆಯನ್ನು ನಾನು `ಹೊಸದಿಗಂತ’ಕ್ಕಾಗಿ ಅರ್ಜೆಂಟಾಗಿ ಬರೆದಿದ್ದೆ. ಈ ವಿಚಾರಕ್ಕಾಗಿ ಕಂಬಾರರನ್ನು ಅಭಿನಂದಿಸಿಯೂ ಇದ್ದೆ. ತಿಳಿಗಡಲು ವಿಭಾಗದಲ್ಲಿ ಈ ಲೇಖನವನ್ನು ನೀವು ಓದಬಹುದು. ಈಗ ಈ ಪುಸ್ತಕದ ಬಗ್ಗೆಯೇ ಪ್ರತ್ಯೇಕವಾಗಿ ಬರೆಯುವಾ ಎಂದು ಹೊರಟಿದ್ದೇನೆ.
ಅಕ್ಷರ ಪ್ರಕಾಶನವು ಪ್ರಕಟಿಸಿದ, ನಾನು ಖರೀದಿಸಿದ ಈ ಕಾದಂಬರಿಯ ಪ್ರತಿಯಲ್ಲಿ ಕಂಡು ಬಂದ ನೂರಾರು ಭೀಕರ ಮಿಸ್ಟೇಕುಗಳಿಗೆ ಕಂಬಾರರು ಕಾರಣರಲ್ಲವೆಂದು ತಿಳಿದುಕೊಂಡು ಈ ವಿಮರ್ಶೆಯನ್ನು ಆರಂಭಿಸುವೆ. ಯಾಕೆಂದರೆ ಈ ಮುದ್ರಣಲೋಪಗಳು ಕಂಪ್ಯೂಟರಿನ ಅವಾಂತರದಿಂದ ಆದವು ಎಂಬುದು ಖಚಿತ. ಫಾಂಟುಗಳ ಕನ್ವರ್ಶನ್ ಸಮಸ್ಯೆಯು ಯಾವುದೇ ಶಿಸ್ತಿನ ಪ್ರಕಾಶಕನನ್ನೂ ಯಾಮಾರಿಸಬಹುದು ಎಂಬುದಕ್ಕೆ ಶಿಖರ ಸೂರ್ಯ ಒಂದು ಜ್ವಲಂತ (ಸುಡುಸುಡು) ನಿದರ್ಶನ! ಆದರೆ ಇಲ್ಲಿ ಹುಡುಕಿದರೆ ಸಾಮಾನ್ಯರೂ ತಿದ್ದಬಹುದಾಗಿದ್ದ ಹಲವು ತಪ್ಪುಗಳೂ ಢಾಳಾಗಿ ಕಾಣುತ್ತವೆ. ಪ್ರತೀ ಪುಟ ತಿರುವಿದಾಗಲೂ ಒಂದಲ್ಲ ಒಂದು ಪ್ರೂಫ್ ಮಿಸ್ಟೇಕ್ ಕಾಣುತ್ತದೆ ಎನ್ನಬಹುದು. ಇದಕ್ಕೆ ಮಾತ್ರ ನಾನು ಕಂಬಾರರನ್ನೇ ಹೊಣೆ ಮಾಡುತ್ತೇನೆ.
ಇನ್ನು ಕಾದಂಬರಿಯ ಬಗ್ಗೆ ಹೇಳುವುದಾದರೆ, ಕಂಬಾರರು ತಿದ್ದಿ ತೀಡಿದ ಪುಸ್ತಕವಿದಲ್ಲ ಎಂದು ಅನ್ನಿಸಿಬಿಟ್ಟಿತು. ಯಾಕೆಂದರೆ ಎಂಥ ಕಾಲಾತೀತ ಕಾದಂಬರಿಯಲ್ಲೂ ಟಾಲ್‌ಸ್ಟಾಯ್ ಬರುವುದಿಲ್ಲ; ಅಥವಾ ಪಾಪರಾಗಿದ್ದ ಎಂಬ ಪದವು ನುಸುಳುವುದಿಲ್ಲ. ಇದನ್ನು `ಆಧುನಿಕವಲ್ಲದ ಹಿಂದಿನ ಯಾವುದಾದರೂ ಕಾಲದ್ದೆಂದು’ ತಿಳಿಯಬೇಕು ಎಂದು ಕಂಬಾರರೇ ಹೇಳಿದ್ದಾರೆ. ಅಂದಮೇಲೆ ಇಲ್ಲಿ ಇಂಥ ಪದಗಳು ಬರುವುದಾದರೂ ಹೇಗೆ ಮತ್ತು ಯಾಕೆ?
ಈ ಕಥೆಯನ್ನು ಕಂಬಾರರು ಸ್ವತಃ ಕಲ್ಪಿಸಿಕೊಂಡು ಬರೆದದ್ದು. ಆದ್ದರಿಂದ ಈ ಕಥೆ ನಡೆಯುವ ಪ್ರದೇಶದ ವಿವರಣೆಯನ್ನು ಕಂಬಾರರು ಪಠ್ಯದಲ್ಲಿ ನೀಡಿದ್ದಾರೆ. ಬದಲಿಗೆ ಒಂದು ನಕಾಶೆಯನ್ನಾದರೂ ನೀಡಬಹುದಿತ್ತು. ಆದರೆ ನಾವು ಈ ಕಾದಂಬರಿಯ ಭೂಗೋಳವನ್ನು ಕಲ್ಪಿಸಿಕೊಂಡೇ ಓದಬೇಕು. ಅಲ್ಲದೆ ಕಾದಂಬರಿಯಲ್ಲಿ ಬರುವ ಪಾತ್ರಗಳು ಎಂತ ಕಾಲಘಟ್ಟದ್ದೆಂದು ತಿಳಿಯುವುದೇ ಕಷ್ಟ. ಆಧುನಿಕವಲ್ಲದಿದ್ದರೂ ಎಂಥ ಪ್ರಾಚೀನ ಪಾತ್ರಗಳಿವು ಎಂದು ನನಗಂತೂ ಗೊತ್ತಾಗಲಿಲ್ಲ. ಅದೇಈ ಕಾದಂಬರಿಯ ಯಶಸ್ಸೇ ಇದ್ದರೂ ಇರಬಹುದು.
ಮೊದಮೊದಲು ಒಂದು ಕಥೆಯಾಗಿ ಆರಂಭವಾಗುವ ಈ ಕಾದಂಬರಿಯು ಕೊನೆಗೆ ಅತ್ಯಂತ ಜಟಿಲ `ಜನಪದ ಕಥೆಯಾಗಿ ಮುಗಿದುಹೋಯಿತು’ ಎಂದು ಕಾದಂಬರಿಯ ನಿರೂಪಕನೇ ಒಪ್ಪಿಕೊಂಡಿದ್ದರಿಂದ ಓದುಗರು ಈ ಬಗ್ಗೆ ಹೊಂದಿರುವ ಅನುಮಾನಗಳನ್ನೂ ಎತ್ತುವಂತಿಲ್ಲ! ಇದು ಗೊತ್ತಿದ್ದೇ ಅನುಸರಿಸಿದ ತಂತ್ರ ಎಂದು ಎಷ್ಟೇ ಅಂದುಕೊಂಡರೂ ಕೊನೆಗೆ ಓದುಗರಿಗೆ ಸಿಗಬೇಕಾದದ್ದು ಏನು ಎಂಬ ಪ್ರಶ್ನೆ ಉಳಿದುಕೊಳ್ಳುತ್ತದೆ.
ಡಾ|| ಯು.ಆರ್. ಅನಂತಮೂರ್ತಿಯವರ `ದಿವ್ಯ’ ಕಾದಂಬರಿಯ ಬಗ್ಗೆ ಡಾ|| ಸುಮತೀಂದ್ರ ನಾಡಿಗರು ಒಂದು ಕಟುವಾದ ವಿಮರ್ಶೆಯನ್ನು ಬರೆದಾಗ ಅದು `ವಿಜಯ ಕರ್ನಾಟಕ’ದಲ್ಲಿ ನನ್ನ ಸಂಪಾದಕತ್ವದಲ್ಲಿದ್ದ ಮ್ಯಾಗಜಿನ್‌ನಲ್ಲಿ ಪ್ರಕಟವಾಗಿತ್ತು. ಆಗ ಕಂಬಾರರು ನನಗೆ ಕರೆ ಮಾಡಿ `ದಿವ್ಯ’ ಕಾದಂಬರಿಯು ಎಂಥೆಂಥ ಸಂದೇಶಗಳನ್ನು ಒಳಗೊಂಡಿದೆ ಎಂದು ಅರ್ಧ ಗಂಟೆ ವಿವರಿಸಿದ್ದರು. ಅವೆಲ್ಲವೂ ನನಗೆ ಅಂಥ ನೆನಪಿಲ್ಲ. ಆದರೆ `ಶಿಖರಸೂರ್ಯ’ ಕಾದಂಬರಿಯಲ್ಲೂ ಇಂಥದ್ದೇ ಸಂದೇಶಗಳಿವೆ ಎಂಬುದನ್ನು ನನ್ನಂಥ ಪಾಮರರ ತಲೆಗೆ ಹೋಗದ ಮುನ್ನುಡಿಯಲ್ಲಿ ಎಚ್.ಎಸ್.ಶಿವಪ್ರಕಾಶರು ಬರೆದಿದ್ದಾರೆ. ಬ್ಲರ್ಬಿನಲ್ಲೇ ಇರುವ ವಾಕ್ಯಗಳ ಮೂಲಕ ನವೋದಯದ ಉತ್ಪ್ರೇಕ್ಷಾ ದೃಷ್ಟಿ, ನವ್ಯದ ದಿಸ್ತೋಪಿಯನ್ ದೃಷ್ಟಿ ಹಾಗೂ ಬಂಡಾಯದ ಸರಳೀಕೃತ ಯುತೋಪಿಯನ್ ದೃಷ್ಟಿಗಳನ್ನು ಈ ಕಾದಂಬರಿ ಹೊಂದಿದೆ ಎಂದು ತಿಳಿಯಬಹುದು. ಇನ್ನೂ ಅರ್ಥವಾಗದಿದ್ದರೆ ಈ ಕಾದಂಬರಿಯಲ್ಲಿ ಗ್ಲೋಬಲೈಸೇಶನ್ ವಿಚಾರಗಳನ್ನು ಶಿಖರಸೂರ್ಯ ಎಂಬ ಪಾತ್ರದ ಮೂಲಕ ಬಿಂಬಿಸಲಾಗಿದೆ. ಕಂಬಾರರ ಕೃತಿಗಳನ್ನು ಅರಿಯುವುದಕ್ಕೆ ಪಾಂಡಿತ್ಯದ ಆಶ್ರಯ ಬೇಕಿಲ್ಲ, ಸುಲಿದ ಬಾಳೆಯ ಹಣ್ಣಿನಂತೆ ಎಂದೂ ಶಿವಪ್ರಕಾಶರು ಹೇಳಿದ್ದಾರೆ.
ಏನೋ, ಮುನ್ನುಡಿಯನ್ನೇ ಇಷ್ಟೆಲ್ಲ ಉದ್ದುದ್ದ ಬರೆಯಬೇಕಾಯಿತಲ್ಲ ಎಂದು ನನಗೂ ಬೇಸರವಿದೆ. ಆದರೆ ಇಂಥ ಮುನ್ನುಡಿಯನ್ನು ಓದಿ, ಮಿಸ್ಟೇಕುಗಳನ್ನು ಸಹಿಸಿಕೊಂಡು ಕಾದಂಬರಿಯನ್ನು ಓದಿ ಮುಗಿಸಿದ ಮೇಲೆ, ಗ್ಲೋಬಲೈಸಶನ್ ಬಗ್ಗೆ ತಿಳಿಯಬೇಕೆಂದರೆ ಹೀಗೆ ಮಿಥ್ಯಾಚರಿತ್ರೆಯನ್ನು ಬರೆದೇ ತಿಳಿಯಬೇಕೇ ಎಂಬ ಪ್ರಶ್ನೆ ನನ್ನನ್ನು ಕಾಡಿದೆ.
ಇಂದು ಕನ್ನಡ ಸಾಹಿತ್ಯದಲ್ಲಿ ಜಾಗತೀಕರಣವನ್ನು ಕಂಡು ಬರೆಯುವವರಲ್ಲಿ ಕೆಲವು ವಿಧಗಳಿವೆ. ಬಂಡಾಯದ ಕಡುಬಣ್ಣ ಹೊಂದಿರುವ ಡಾ|| ಬರಗೂರು ರಾಮಚಂದ್ರಪ್ಪನವರು ಕೊನೆಗೆ ಬರೆದದ್ದು `ಕಾಂಟೆಸ್ಸಾದಲ್ಲಿ ಕಾವ್ಯ’ವನ್ನು. ಸಿದ್ದಲಿಂಗಯ್ಯನವರು ಜಾಗತೀಕರಣದ ಬಗ್ಗೆ ಬರೆಯುವ ಗೋಜಿಗೇ ಹೋಗಲಿಲ್ಲ. ತಮ್ಮ ಬದುಕನ್ನೇ ತೆರೆದಿಟ್ಟು ಊರುಕೇರಿಯ ದರ್ಶನ ಮಾಡಿಸಿದ್ದಾರೆ. ನಮ್ಮ ಕೆಲವು ಕಥೆಗಾರರು ಇಂಟರ್‌ನೆಟ್, ನಗರೀಕರಣ, ಗ್ಲೋಬಲ್ ಸಂಬಂಧಗಳು, ಹೊಸ ಹೊಸ ಬದುಕಿನ ಪುಟಗಳನ್ನು ಕಥೆಯನ್ನಾಗಿ ಮಾಡಿದ್ದಾರೆ. ಕೆಲವರು ಪ್ರಬಂಧಗಳನ್ನು ಬರೆದಿದ್ದಾರೆ. ಆದರೆ ಇಂಥ ಯುವಕರೆಲ್ಲರೂ ಗ್ಲೋಬಲೈಸೇಶನ್‌ನ್ನು ಅನುಭವಿಸಿ ಬರೆಯುತ್ತಿರುವವರು. ಬಹುಶಃ ಇವರಲ್ಲಿ ಅನೇಕರು ಯಾವುದೇ ಬಗೆಯ ಜಾನಪದೀಯ ಸಾಹಿತ್ಯ ಹಿನ್ನೆಲೆಯನ್ನು ಹೊಂದಿಲ್ಲ. ಅವರು ಬರೆದದ್ದು ನೇರವಾದ ಕಥೆಗಳು. ಎಲ್ಲೂ ನೀವು ಮಿಥ್ಯಾಲೋಕವನ್ನು ಪ್ರವೇಶಿಸುವುದಿಲ್ಲ. ಯಾಕೆಂದರೆ ಇಂದಿನ ವಾಸ್ತವವು ನಾವು ಕಲ್ಪಿಸಿಕೊಳ್ಳುವ ಗರಿಷ್ಠ ಪ್ರಮಾಣದ ಕಲ್ಪನೆಗಿಂಥ ಎಷ್ಟೋಪಟ್ಟು ಭೀಕರವಾಗಿದೆ ಎಂಬುದು ಅವರಿಗೆಲ್ಲ ಗೊತ್ತಾಗಿದೆ. ತಮಗೆ ಕಂಡ ದೃಶ್ಯಗಳನ್ನು ಸಾಕಷ್ಟು ಸಂಯಮದಿಂದ ಬರೆದಿದ್ದಾರೆ. ಅವರೇನಾದರೂ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಹೀಗೆ ಜಾಗತೀಕರಣವನ್ನು ಕಂಡಹಾಗೆ ಬರೆದಿದ್ದರೆ ಕಾದಂಬರಿಗಳೇ ಬೇಕಿರಲಿಲ್ಲ ಎನಿಸುತ್ತದೆ.
ಆದರೆ ಕಂಬಾರರಂಥ ಹಿರಿಯರಿಗೆ ಈ ಗ್ಲೋಬಲೈಸೇಶನ್ ಕಣ್ಣಿಗೆ ಕಾಣುತ್ತದಾದರೂ, ಕೈಗೆ ಎಟುಕುವುದಿಲ್ಲ. ಅವರ ನೇರ ಅನುಭವಕ್ಕೆ ದಕ್ಕುವುದಿಲ್ಲ. ಹಾಗಂತ ಅವರು ಅದನ್ನು ತಿಳಿದುಕೊಳ್ಳಲಾರರು ಎಂದು ನಾನು ಹೇಳುತ್ತಿಲ್ಲ. ಅವರು ಈ ಜಾಗತೀಕರಣದ ಕಟು ದೃಶ್ಯಗಳಿಗೆ ನೇರವಾಗಿ ಪಕ್ಕಾಗದೇ ಇದ್ದುದರಿಂದ ಅವರು ಮಿಥ್ಯಾಲೋಕದ ಮೊರೆ ಹೋಗುತ್ತಾರೆ ಎಂದು ನನಗೆ ಅನ್ನಿಸುತ್ತದೆ. ಜಾಗತೀಕರಣವನ್ನು ಇನ್ನೂ ರಮ್ಯವಾಗಿ ಅನುಭವಿಸುತ್ತಿರುವ ಪರಿ ಇದು ಎಂಬುದು ನನ್ನ ಅನಿಸಿಕೆ. ಬುಡದಲ್ಲೇ ಬಂದಿರುವ ಆಹಾರ ಮಳಿಗೆಗಳು, ವಾತಾನುಕೂಲಿ ತರಕಾರಿ ಮಳಿಗೆಗಳು, ಅಂಗಿಗೊಂದು, ಚೆಡ್ಡಿಗೊಂದು ಬಹುಮಹಡಿ ಕಟ್ಟಡಗಳು ಎದ್ದಿರುವಾಗ, ನಮಗೆ ಜಾನಪದ ಲೋಕದ ಕಥೆಯ ಮೂಲಕ ಜಾಗತೀಕರಣ ಅರ್ಥವಾಗಬೇಕೆ? ಬಾಲಿವುಡ್‌ನ ಮೂಲಕ ಪಡ್ಡೆ ಹುಡುಗರಿಗೆ ಪ್ರೇಮದ ಪಾಠವೇ ನಡೆಯುತ್ತಿರುವಾಗ ನಮಗೆ ಜಾನಪದ ಕಥೆಯ ಮೂಲಕ, ವಿಷಕನ್ಯೆಯ ಮೂಲಕ ಯಾವುದೋ ಸಂದೇಶದ ಅರಿವಾಗಬೇಕೆ? ಅಥವಾ ಅಂಥ ಅರಿವಿನಿಂದ ಯಾರು ಪ್ರಯೋಜನ ಪಡೆಯುತ್ತಾರೆ?
ಜಾನಪದದ ಕಥೆಗಳನ್ನು ಹೆಣೆದು, ಜಾಗತೀಕರಣದ ಪರಿಣಾಮಗಳನ್ನು ಸಾಂಕೇತಿಕವಾಗಿ ಹೇಳುವ ಪರಿಯೇ ತೀರಾ ಪ್ರಾಚೀನ ಎಂದು ನನಗನ್ನಿಸಿದೆ. ಇಂಥ ಕಾದಂಬರಿಯನ್ನು ಕೇವಲ ಕಾದಂಬರಿಕಾರರ ಈವರೆಗಿನ ಸಾಹಿತ್ಯ ಚರಿತ್ರೆಯನ್ನು ಓದಿದವರು ಮುಂದಿನ ಅಧ್ಯಯನಕ್ಕಾಗಿ ಓದಬೇಕೇ ವಿನಃ ಇಂದಿನ ಯುವಪೀಳಿಗೆಯು ಅರಿಯುವಂಥ ಯಾವ ನೇರ ಸಂದೇಶಗಳೂ ಇದರಲ್ಲಿಲ್ಲ. `ದಿವ್ಯ’, `ಶಿಖರ ಸೂರ್ಯ’ನ ಥರದ ಕಾದಂಬರಿಗಳ ಕಾಲ ಮುಗಿದಿದೆ. ರಮ್ಯಲೋಕವನ್ನು ಕಟ್ಟಿಕೊಡುವುದಿದ್ದರೆ `ತೇರು’ ಮಾತ್ರವೇ ಲೇಸು. ವಾಸ್ತವದ ತಳಹದಿಯಿರುವ ಯಾವುದೇ ರಮ್ಯತೆಯೂ ನಮ್ಮನ್ನು ಕೊಂಚವಾದರೂ ಸೆಳೆಯುತ್ತದೆ. ಆದ್ದರಿಂದಲೇ ಪೂರಾ ವಾಸ್ತವ ಕಾಲಘಟ್ಟದ್ದಾಗಿದ್ದರೂ ಒಂದು ಬಗೆಯ ಕಾಲದ ವಾಸನೆಯನ್ನು ಹಿಡಿದಿಡುವ, ಸಂಸ್ಕೃತಿಯ ಕುರುಹುಗಳನ್ನು ದಾಖಲಿಸುವ, ಆಧುನಿಕವಲ್ಲದಿದ್ದರೂ ಆಧುನಿಕ ಕಥಾಹಂದರ ಮತ್ತು ಶೈಲಿಯನ್ನು ಹೊಂದಿರುವ ವಿವೇಕ ಶಾನಭಾಗರ `ಒಂದು ಬದಿ ಕಡಲು’ ಒಂದು ಒಳ್ಳೆಯ ಮತ್ತು ಮಹತ್ವದಕಾದಂಬರಿ ಎಂದು ನನಗೆ ಅನ್ನಿಸಿದ್ದು.
ಅಂದರೆ ನನಗೆ `ಸಾಕ್ಷಿ’, `ದಿವ್ಯ’, `ಗಾಂಧಿ ಬಂದ’ದ ನಂತರ ಈ ಕಾದಂಬರಿಯೂ ಒಂದು ದೊಡ್ಡ ಡಾಕ್ಯುಂಬರಿಯಾಗಿ ಕಾಣುತ್ತದೆ. ಜಾಗತೀಕರಣದ ಮಾಹಿತಿಗಳನ್ನು, ಕೊಳ್ಳುಬಾಕತನವನ್ನು ವಿವರಿಸಲು ಕಂಬಾರರು ಎಷ್ಟೆಲ್ಲ ಹೆಣಗಿದ್ದಾರೆ ಎಂದರೆ ಕೆಲವೆಡೆ ಕಥೆಯು ಕೇವಲ ಕಾದಂಬರಿಕಾರರ ನೆರವಿನಿಂದಲೇ ಹರಿಯುತ್ತದೆಯೇ ಹೊರತು ತನ್ನದೇ ಆದ ವೇಗವನ್ನು ಪಡೆಯುವುದೇ ಇಲ್ಲ. ನಾಟಕೀಯವಾದ ಸಂಭಾಷಣೆಗಳು, ಅನಗತ್ಯವಾದ ವಿವರಣೆಗಳು, ಕಥೆಯನ್ನು ಬೆಳೆಸಲಿಕ್ಕೆಂದೇ ಬರೆದ ಅಧ್ಯಾಯಗಳು…. ಹೀಗೆ ಕಾದಂಬರಿಯು ನಿಜಕ್ಕೂ ನನಗಂತೂ ಬೋರ್ ಹಿಡಿಸಿದೆ. ಜಾಗತೀಕರಣದ ಬಗ್ಗೆ ಒಂದು ಕಾಳಜಿಯುಕ್ತ ಪ್ರಬಂಧವನ್ನು ಬರೆದಿದ್ದರೆ ಸಾಕಾಗಿತ್ತೇನೋ ಎಂದು ನನಗೆ ಕಾಣುತ್ತದೆ.
ಕಂಬಾರರ ಈ ಹಿಂದಿನ ಕೃತಿಗಳನ್ನು, ಕಾವ್ಯವನ್ನು ನೋಡಿದ ಮೇಲೆ ಯಾಕೆ ಕಂಬಾರರು ಇಂಥ ಲೋಪಯುಕ್ತ ಕಾದಂಬರಿಯನ್ನು ಬರೆದಿದ್ದಾರೆ ಎಂದು ಬೇಸರವಾಗುತ್ತದೆ. ಭಾಷೆಯ ಬಿಗುವಿಲ್ಲದೆ, ಹೇಳಬೇಕಾದ ಜಾಗತೀಕರಣದ ಮಾಹಿತಿಯನ್ನು ಸೃಜನಶೀಲವಾಗಿ ಹೇಳಲಾಗದೆ ಕಾದಂಬರಿಯು ಹೀನಾಯವಾಗಿ ಸೋಲುತ್ತದೆ; ಕಥೆಯಲ್ಲಿ, ಶೈಲಿಯಲ್ಲಿ, ಭಾಷೆಯಲ್ಲಿ, ಕೊನೆಗೆ ಏನನ್ನಾದರೂ ನೆನಪಿಡುವಂತೆ ಮಾಡುವಲ್ಲಿ. ನೆನಪುಳಿಯುವುದು ಕೇವಲ ಪ್ರೂಫ್ ಮಿಸ್ಟೇಕುಗಳು ಮತ್ತು ವಿವಿಧ ಪಾತ್ರಗಳ ವಿಚಿತ್ರ ಡಯಲಾಗ್‌ಗಳು. ಇದನ್ನು ಮಹಾಕಾವ್ಯ ಎಂದೂ ಮುನ್ನುಡಿಯಲ್ಲಿ ಶಿವಪ್ರಕಾಶರು ಬರೆದಿರುವುದನ್ನು ನೋಡಿದರೆ ಕಂಬಾರರನ್ನು ದಾರಿ ತಪ್ಪಿಸಲೆಂದೇ ಹೀಗೆ ಬರೆದಿದ್ದಾರಾ ಎಂದೆನಿಸುತ್ತದೆ.
ಜಾಗತೀಕರಣದ ಗಾಳಿ ಬೀಸುತ್ತಿರುವಾಗಲೇ ಗಟ್ಟಿಯಾದ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟಿದವರು ಕಂಬಾರರು. ಕಲ್ಲು ಕುಟ್ಟಿ ಸಂಸ್ಕೃತಿಯ ಅಧ್ಯಯನಕ್ಕೆ ನಾಂದಿ ಹಾಡಿದವರು. ಆದರೆ ಅದಾಗಿ ಹಲವು ವರ್ಷಗಳು ಕಳೆದ ಮೇಲೆ ಅವರು ಬರೆದಿರುವ ಈ ಕಾದಂಬರಿಯು ಅವರ ಈ ಸಾಮರ್ಥ್ಯವನ್ನೂ ತೋರಿಸುತ್ತಿಲ್ಲ ಎಂದು ವಿಷಾದದಿಂದಲೇ ಹೇಳಬೇಕಿದೆ.
ಇತರೆ ಟಿಪ್ಪಣಿಗಳು: 1) ಈ ಕಾದಂಬರಿಯಲ್ಲಿ ಸೀಳುನಾಯಿಗಳೊಂದಿಗೆ ಹೊಡೆದಾಡುವ ಒಂದು ದೃಶ್ಯವಂತೂ ನನಗೆ `ದಿ ಗ್ಲೇಡಿಯೇಟರ್’ ಸಿನೆಮಾದಲ್ಲಿನ ಸಿಂಹದ ಜೊತೆಗಿನ ಗುದ್ದಾಟವನ್ನು ನೆನಪಿಗೆ ತಂದಿತು.
2) ಚಂದ್ರಶೇಖರ ಕಂಬಾರರು ನನ್ನನ್ನು ಎತ್ತಿ ಆಡಿಸಿದ ಕವಿ. ಸಾಗರದ ಎಲ್ ಬಿ ಕಾಲೇಜಿನಲ್ಲಿ ಅವರು ಲೆಕ್ಚರರ್ ಆಗಿದ್ದಾಗ ನನ್ನ ಅಪ್ಪ ಅಲ್ಲೇ ಕಾಲೇಜು ಕ್ಯಾಂಟೀನ್ ಮಾಡಿಕೊಂಡಿದ್ದರು. ಆಗ ಡಾ|| ಎಂ. ಗೋಪಾಲಕೃಷ್ಣ ಅಡಿಗರು ಮತ್ತು ಕಂಬಾರರು ಬಂದು ನನ್ನನ್ನು ಮುದ್ದಾಡುತ್ತಿದ್ದರಂತೆ. ಹಾಗೆಂದು ಕಂಬಾರರೂ `ಕಂಬಾರ ೬೦’ ಕಾರ್ಯಕ್ರಮದ ಸಂದರ್ಭದಲ್ಲಿ ನನ್ನೆದುರು ಹೇಳಿಕೊಂಡಿದ್ದರು. ಆಮೇಲೆ ಕಂಬಾರರು ನನ್ನನ್ನು ಮನೆಗೆ ಕರೆದು ಕೆಂಪುಚಟ್ನಿ – ದೋಸೆ ತಿನ್ನಿಸಿದ್ದರು. ಅವರು ನನಗೆ ಇವತ್ತೂ ಗೌರವಾನ್ವಿತರೇ. ಅವರ ಬಗ್ಗೆ ನನ್ನ ಪ್ರೀತಿ ಇವತ್ತಿಗೂ ಕಡಿಮೆಯಾಗಿಲ್ಲ. ರೇಡಿಯೋ, ಟಿವಿ ಬಂದಮೇಲೆ ಇಂಟರ್‌ನೆಟ್ ಎಂಬುದು ಹೇಗೆ ಉಳ್ಳವರ ಆಸ್ತಿಯಾಗಿದೆ, ಬದುಕಿನಲ್ಲಿ ಹೇಗೆ ಕಂದರಗಳು ಹೆ ಚ್ಚಿವೆ ಎಂದು ಅವರು ನನಗೆ ಹೇಳಿದ್ದು ಇವತ್ತೂ ಅಚ್ಚೊತ್ತಿದೆ. ಅವರನ್ನು ಸಂದರ್ಶಿಸಿ ಬರೆದ `ಹೇಳತೇನ ಕೇಳ’ ಲೇಖನವೂ ಅವರನ್ನು ಮೆಚ್ಚಿಯೇ ಬರೆದದ್ದು.
ಆದ್ದರಿಂದ ಈ ವಿಮರ್ಶೆಯನ್ನು ಅವರೂ ಹುಚ್ಚು ಹುಡುಗ ಏನೋ ಗೊತ್ತಿಲ್ಲದೆ ಬರೆದಿದ್ದಾನೆ ಎಂದುಕೊಂಡು ಕ್ಷಮಿಸಬೇಕೆಂದು ಕೋರುವೆ!