ಲೈಂಗಿಕ ಶಿಕ್ಷಣ? ಮೊದಲು ಬದುಕೋದನ್ನು ಕಲಿಸ್ರೀ
ಸೆಕ್ಸ್ ಎಜುಕೇಶನ್ ಬೇಕೆ ಬೇಡವೆ ಎಂಬ ಚರ್ಚೆ ಬಹುದಿನಗಳಿಂದ ನಡೆಯುತ್ತಲೇ ಇದೆ. ನಾನೂ ಈ ವಿವಾದದ ಬೆಂಕಿಗೆ ತುಪ್ಪ ಸುರಿಯುತ್ತಿದ್ದೇನೆಯೆ? ಗೊತ್ತಿಲ್ಲ. ಆದರೆ ಸೆಕ್ಸ್ ಎಜುಕೇಶನ್ ಚರ್ಚೆಯು ನಮ್ಮ ಹುಡುಗರ ಮನಸ್ಸನ್ನು ಮತ್ತಷ್ಟು ಕೆಡಿಸುತ್ತಿದೆ ಎಂದಷ್ಟೆ ಹೇಳಬಲ್ಲೆ. ಭಾರತೀಯರು ಸೆಕ್ಸ್ ಬಗ್ಗೆ ದೇವಸ್ಥಾನಗಳಲ್ಲಿ ಹೇಳಿದ್ದನ್ನು ಮನೆಗಳಲ್ಲಿ ಹೇಳುವುದಿಲ್ಲ ಎಂಬ ಮಾತಿದೆ. ಈಗ ಶಾಲೆಗಳಲ್ಲಿ ಸೆಕ್ಸ್ ಬಗ್ಗೆ ಪಾಠ ಬೇಕು ಎಂದು ಒಂದು ಗುಂಪು ಬಲವಾಗಿ ವಾದಿಸುತ್ತಿದ್ದರೆ ಹಾಗೆ ಸೆಕ್ಸನ್ನೇ ಪಾಠ ಎಂಬಂತೆ ಹೇಳುವ ಬಗೆ ಸರಿಯಲ್ಲ ಎಂದು ಇನ್ನೊಂದು ಗುಂಪು ಹೇಳುತ್ತಿದೆ. ನಾನು ಯಾವ ಗುಂಪಿಗೂ ಸೇರದೆ ಇರಲು ಯತ್ನಿಸುವೆ.
ಯಾಕೆಂದರೆ ನಮಗೆ ಇನ್ನೂ ಲೈಂಗಿಕ ಶಿಕ್ಷಣ ಬೇಕೆ ಬೇಡವೆ ಎಂಬ ಚರ್ಚೆಯೇ ತೀರಾ ಪ್ರೌಢ ಎಂದು ಅನ್ನಿಸಿರುವುದೇ ತಪ್ಪು. ನಮ್ಮ ಹುಡುಗರು ಹುಡುಗಿಯರು ಬಾಲಿವುಡ್‌ನಿಂದಲೋ, ಟಿವಿ ಚಾನೆಲ್‌ಗಳ ಧಾರಾವಾಹಿಗಳಿಂದಲೋ ಬೇಕಾದಷ್ಟು ಸೆಕ್ಸ್ ಪಾಠ, ರೋಮಾನ್ಸ್ ಆಟಗಳನ್ನು ಕಲಿಯುತ್ತಾರೆ ಎನ್ನುವುದು ನಿಜ. ಆದರೆ ಬದುಕಿನ ಬಗ್ಗೆ ಅವರಿಗೆ ಇರುವ ತಿಳಿವಳಿಕೆ ಬಹುತೇಕ ಸೊನ್ನೆ. ನಗರದವರಿಗೆ ಹಳ್ಳಿಯ ಬದುಕಾಗಲೀ, ಹಳ್ಳಿಯವರಿಗೆ ನಗರದ ನೋವಾಗಲೀ ತಿಳಿದಿರುವುದೇ ಇಲ್ಲ. ಈ ಹಳ್ಳಿ ನಗರದ ಮಾತಿರಲಿ, ಬದುಕಿನ ವಿವಿಧ ಮಗ್ಗುಲುಗಳನ್ನು ನೋಡಿ ಕಲಿಯುವ ವಯಸ್ಸಿನಲ್ಲಿ ಸೆಕ್ಸ್ ಬಗ್ಗೆ ಮಾತಾಡುವುದೇ ವಯಸ್ಕರ ಬಾಲಿಶತನ.
ದಶಕಗಳ ಕಾಲ ಸಾವಿರಾರು ಬಗೆಯ ವಿಷಪೂರಿತ ಪ್ಲಾಸ್ಟಿಕ್‌ಗಳನ್ನು ಶೋಧಿಸಿದವರು, ಅವನ್ನೆಲ್ಲ ಮಾರುಕಟ್ಟೆಗೆ ತಂದು ಸುರಿದವರು ಈ ವಯಸ್ಕರೇ. ಶತಮಾನಗಳ ಕಾಲ ಕಾಡು ಕಡಿದು ನೆಲ ಅಗೆದವರೂ ಈ ವಯಸ್ಕರೇ. ಸಿನೆಮಾದಂಥ ಪ್ರಭಾವಿ ಮಾಧ್ಯಮದಲ್ಲಿ ಸೆಕ್ಸ್ ಮಾತ್ರವೇ ವಿಜೃಂಭಿಸುವಂತೆ ಮಾಡಿದವರು ಈ ಹಿರಿಯರೇ. ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ತುಂಬಿದವರೂ ಇವರೇ. ಆದರೂ ಈಗ ಇವರೆಲ್ಲ ಪರಿಸರ ಕಾಳಜಿಯ ಬಗ್ಗೆ ಮಾತಾಡುತ್ತ
&#
3262;ರೆ; ಸಾವಯವ ಕೃಷಿಗೆ ಜಿಂದಾಬಾದ್ ಎನ್ನುತ್ತಾರೆ. ಹಸಿರು ನಮ್ಮ ಉಸಿರು ಎನ್ನುತ್ತಾರೆ. ಅಲ್ಲದೆ ಲೈಂಗಿಕ ಶಿಕ್ಷಣ ಬೇಕು ಬೇಡ ಎಂಬ ವಾದವನ್ನೂ ಮುಂದಿಡುತ್ತಾರೆ.
ನಮ್ಮ ಶಿಕ್ಷಣ ಪದ್ಧತಿ ಇಂಥ ಹಿರಿಯರಿಂದಲೇ ರೂಪಿತವಾಗಿದೆ. ಹದಿಹರೆಯದಲ್ಲಿ ಬದುಕನ್ನು ಬೆರಗುಗಣ್ಣುಗಳಿಂದ ನೋಡಬೇಕಾದ ವಯಸ್ಸಿನಲ್ಲಿ ಈ ಯುವಕ – ಯುವತಿಯರು ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳನ್ನು ಬರೆಯಬೇಕಿದೆ. ಅವರ ಹದಿಹರೆಯದ ಬಹು ಅಮೂಲ್ಯ ಕ್ಷಣಗಳಲ್ಲಿ ಅವರು ಕುಡುಮಿಗಳಾಗಿ ಪುಸ್ತಕ, ಗೈಡ್ ಹಿಡಿದು ಉರು ಹೊಡೆಯಬೇಕಾಗಿದೆ. ಹದಿಹರೆಯದ ಮೂರು ವರ್ಷಗಳು ಹೀಗೆಯೇ ಕಳೆದು ಹೋಗುತ್ತವೆ. ಈ ಮಧ್ಯೆ ದೈಹಿಕ ಬೆಳವಣಿಗೆಗಳೂ ಈ ವಯಸ್ಸಿನಲ್ಲೇ ಹೆಚ್ಚು. ಹಾರ್ಮೋನುಗಳು ಬಹುಬೇಗ ಪ್ರಚೋದಿಸುತ್ತವೆ. ಈ ವಯಸ್ಸಿನವರ ಸಂಕಷ್ಟ ನಮ್ಮ ಹಿರಿಯರಿಗೆ ಇನ್ನೂ ಗೊತ್ತಾಗಿಲ್ಲವೆ?
ನಮ್ಮ ಶಿಕ್ಷಣಪದ್ಧತಿಯಲ್ಲಿ ಈ ಮೂರು ವರ್ಷಗಳನ್ನು (೧೦ರಿಂದ ೧೨ನೇ ತರಗತಿ) ಯಾಕೆ ಇಷ್ಟು ಕ್ರೂರವಾಗಿ ರೂಪಿಸಿದ್ದಾರೆ ಎಂದು ನನಗಂತೂ ತಿಳಿಯುತ್ತಿಲ್ಲ. ಈ ವರ್ಷಗಳಲ್ಲಿ ಅವರೆಲ್ಲ ಕಣ್ಣರಳಿಸಿ ಬದುಕನ್ನು ಅನುಭವಿಸಬೇಕು. ಯೌವ್ವನದ ಹುಚ್ಚುಹೊಳೆಯ ಪ್ರವಾಹದ ನಡುವೆಯೇ ಬದುಕಿನ ಆಯಾಮಗಳನ್ನು ಅರಿಯಬೇಕು. ನಗರದ ಹುಡುಗರು ಹಲ್ಳಿಗೆ ಹೋಗಿ ಬದುಕಬೇಕು. ಹಳ್ಳಿಯವರು ನಗರಕ್ಕೆ ಬರಬೇಕು. ಕುಂಬಾರಿಕೆಯೋ, ಕಸೂತಿ ಕಲೆಯೋ, ಸೀರೆ ಹೆಣೆಯುವುದೋ, ಶಿಲ್ಪ ಕೆತ್ತುವುದೋ, ರೇಡಿಯೋ ತಯಾರಿಸುವುದೋ, ಸಾಫ್ಟ್‌ವೇರ್ ರೂಪಿಸುವುದೋ – ಯಾವುದು ಇಷ್ಟವೋ ಅದರ ಬಗ್ಗೆ ಹೆಚ್ಚೆಚ್ಚು ತಿಳಿಯಬೇಕು.
ಹೀಗಾಗಬಹುದೆ ಎಂದು ಯೋಚಿಸಿ: ಶಾಲೆಯ ಬದಲಿಗೆ ವಿದ್ಯಾರ್ಥಿಗಳು ವಿವಿಧ ರಂಗಗಳಲ್ಲಿ ಅನುಭವ ಇರುವವರ ಬಳಿ ಹೋಗಿ ಇರುತ್ತಾರೆ. ಅವರು ಹಳ್ಳಿಯಲ್ಲಿ – ನಗರದಲ್ಲಿ ಎಲ್ಲಾದರೂ ಇರಬಹುದು. ಪ್ರತಿ ಊರಿನಲ್ಲೂ ಇಂಥ ವಿದ್ಯಾರ್ಥಿಗಳಿಗಾಗಿ ಒಂದು ವಿದ್ಯಾರ್ಥಿ ನಿಲಯವೇ ಇರುತ್ತದೆ. ವಿದ್ಯಾರ್ಥಿಗಳು ತಂತಮ್ಮ ಆಸಕ್ತಿಗಳಿಗೆ ತಕ್ಕಂತೆ ಕಲಿಕಾ ಕೇಂದ್ರಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಪ್ರತಿಯ&#
3274
;ಂದೂ ರಂಗದ ಬಗ್ಗೆ ಸರ್ಕಾರವು ಸೂಕ್ತ ಮಾಹಿತಿ ಕೊಡುತ್ತದೆ. ಎಲ್ಲ ರಂಗಗಳೂ ಹೇಗೆ ಬದುಕಿನಲ್ಲಿ ಪರಸ್ಪರ ಪೂರಕ ಎಂದು ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳು ಅಭಿಯಾನ ಮಾಡುತ್ತವೆ. ಸಿವಿಲ್ ಇಂಜಿನಿಯರಿಂಗ್ ಮಾಡುವುದಾಗಲೀ, ಚಿತ್ರಕಲೆ ಕಲಿತು ಒಳಾಲಂಕಾರಕ್ಕೆ ಕಲಾಕೃತಿಗಳನ್ನು ಒದಗಿಸುವುದಾಗಲೀ ಎಷ್ಟು ಪೂರಕ ಎಂದು ಈ ಮಾಹಿತಿಗಳು ತಿಳಿಸುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಎಲ್ಲ ಬಗೆಯ ನೌಕರಿಗಳೂ ಹೇಗೆ ಬದುಕಿನಲ್ಲಿ ಮುಖ್ಯ ಎಂದು ತಿಳಿಯುತ್ತಾರೆ. ತಮಗೆ ಆಸಕ್ತಿ ಇರುವ ವೃತ್ತಿಯ ಬಗ್ಗೆ ಮೊದಲು ಕ್ಷೇತ್ರದಲ್ಲಿ ಮಾಹಿತಿ ಪಡೆಯುತ್ತಾರೆ. ಬೇಸರ ಬಂದರೆ ಬೇರೆ ರಂಗಕ್ಕೆ ವರ್ಗಾವಣೆಗೊಳ್ಳುತ್ತಾರೆ.
ಹೀಗೆ ಮೂರು ವರ್ಷ ಬದುಕಿನ ಬಗ್ಗೆ ಅರಿತ ಮೇಲೆ ಅವರು ಮತ್ತೆ ಶಾಲೆಗೆ / ಕಾಲೇಜಿಗೆ ಮರಳುತ್ತಾರೆ. ತಮ್ಮ ಆಸಕ್ತಿಯ ವಿಷಯದ ಬಗ್ಗೆ ಔಪಚಾರಿಕ ಶಿಕ್ಷಣವನ್ನು ಪಡೆಯುತ್ತಾರೆ. ಈ ಶಿಕ್ಷಣವು ಕ್ಷೇತ್ರದಲ್ಲಿ ಪಡೆದ ಅನುಭವಕ್ಕೆ ಪೂರಕವಾಗಿರುತ್ತದೆ. ಆಸಕ್ತಿ ಇರುವ ವಿಷಯವನ್ನೇ ವಿದ್ಯಾರ್ಥಿಗಳು ಕಲಿಯುತ್ತಾರೆ. ಬದಲಿಗೆ ಈಗ ಇರುವಂತೆ ಮೊದಲು ಕಲಿತು ಆಮೇಲೆ ಆಸಕ್ತಿ ಬೆಳೆಸಿಕೊಳ್ಳುವುದಿಲ್ಲ.
ಯಾಕೆಂದರೆ ಇವತ್ತು ವೈದ್ಯರಾದವರು ವರದಿಗಾರರು ಮತ್ತು ಗಿಟಾರ್ ಕಲಾವಿದರಾದದ್ದು, ಮ್ಯಾನೇಜ್‌ಮೆಂಟ್ ಗುರು ಎಂದು ಪ್ರಖ್ಯಾತವಾಗಿದ್ದವರು ಪ್ರವಾಸಿ ಗೈಡ್ ಆಗಿದ್ದು, ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪತ್ರಕರ್ತರಾಗಿದ್ದು, ಹಿಂದಿಯಲ್ಲಿ ಡಾ|| ಯು.ಆರ್. ಅನಂಂತಮೂರ್ತಿ ಬಗ್ಗೆ ಪಿ ಎಚ್ ಡಿ ಮಾಡಿ ಆಮೇಲೆ ಜಾಹೀರಾತು ಸಂಸ್ಥೆಯಲ್ಲಿ ಎಕ್ಸಿಕ್ಯೂಟಿವ್ ಆಗಿದ್ದು, – ಎಲ್ಲವೂ ಇಂಥ ಉದಾಹರಣೆಗಳೇ. ಇವರೆಲ್ಲ ಮೊದಲು ಯಾವುದೋ ವೃತ್ತಿ ಮಾಡಿದವರು. ಈಗ ಹಠಾತ್ತಾಗಿ ವೃತ್ತಿಯನ್ನೇ ಬದಲಿಸಿದವರು. ಕೆಲವು ಖುಷಿಗಾಗಿ. ಕೆಲವು ಅನಿವಾರ್ಯತೆಯಿಂದ ಎಂಬ ಮಾತೂ ಇದೆ ಅನ್ನಿ. ಅದಿರಲಿ, ತಾವು ಮಾಡುತ್ತಿರುವ ವೃತ್ತಿಯನ್ನೇ ಸದಾ ದ್ವೇಷಿಸುವವರನ್ನೂ ನಾವು ನೋಡಬಹುದು. ಇದಕ್ಕೆಲ್ಲ ನಮ್ಮ ಶಿಕ್ಷಣ ವ್ಯವಸ್ಥೆಯ&#
3240
;್ನು ದೂರದೇ ಇನ್ನೇನು ಮಾಡಲಾದೀತು?
ಹರೆಯದ ಬದುಕಿನಲ್ಲಿ ಇಷ್ಟೆಲ್ಲ ಬಗೆಯ ಕಲಿಕೆಯ ಸರ್ಕಸ್ ಮಾಡಬೇಕಿರುವಾಗ ಸೆಕ್ಸ್ ಎಜುಕೇಶನ್ ಬಗ್ಗೆಯೇ ಮಾತೆತ್ತಿ ಚರ್ಚೆ ಎಬ್ಬಿಸಿ ಗಲಾಟೆ ಮಾಡುವುದು ಎಷ್ಟು ಸರಿ ಎಂಬುದು ನನ್ನ ಪ್ರಶ್ನೆ. ನಿಜಕ್ಕೂ ನಮ್ಮ ಹುಡುಗರು / ಹುಡುಗಿಯರು ಕೆಟ್ಟುಹೋಗಿದ್ದಾರೆ ಎಂದು ಯಾಕೆ ಭಾವಿಸಬೇಕು? ವೃತ್ತಿಶಿಕ್ಷಣಕ್ಕಿಂತ ಹೆಚ್ಚಾಗಿ ಸೆಕ್ಸ್ ಬಗ್ಗೆ ಮಾತನಾಡಿದರೆ ಇವರೆಲ್ಲ ಸೆಕ್ಸ್ ಕೂಡಾ ಒಂದು ವೃತ್ತಿಯೇಎಂದು ಪರಿಗಣಿಸಿದಂತಿದೆ!! ಹದಿಹರೆಯವನ್ನು ದಾಟುತ್ತಿರುವ ನಮ್ಮ ಯುವಕರಿಗೆ, ಯುವತಿಯರಿಗೆ ಸೆಕ್ಸ್ ಶಿಕ್ಷಣವನ್ನು ಅವರ ತಂದೆ ತಾಯಂದಿರು ಕೊಡದ ಹೊರತು ಪರಿಣಾಮ ಕಷ್ಟ. ಸಾಮೂಹಿಕವಾಗಿ ಸೆಕ್ಸ್ ಪಾಠ ಹೇಳುವುದು ಶಿಕ್ಷಕರಿಗೂ ಕಷ್ಟ; ಮಕ್ಕಳಿಗೂ ಮುಜುಗರ ಎಂಬ ಒಂದು ಗುಂಪಿನ ವಾದ ಮಾತ್ರ ಸರಿಯೇ.
ಮಾಹಿತಿ ತಂತ್ರeನದ ಭರಾಟೆಯ ಕಾಲದಲ್ಲಿ ನಾನು ಸೇರಿದ್ದ ಒಂದು ಟಿವಿ ಚಾನೆಲ್ ಬೀಳುತ್ತಿದ್ದಂತೆ ನಾವು ಕೆಲವು ಶಾಣ್ಯಾರು ಪ್ರಾವಿಡೆಂಟ್ ಫಂಡ್ ಕಚೇರಿಗೆ ಹೋಗಿ ದೂರು ಕೊಟ್ಟೆವು. ಆದರೆ ಆ ಟಿವಿ ಸಂಸ್ಥೆಯಲ್ಲಿ ಇದ್ದ ಬಹುತೇಕ ರೋಮ್ಯಾಂಟಿಕ್ ಹುಡುಗ – ಹುಡುಗಿಯರಿಗೆ ಕಾರ್ಮಿಕ ಇಲಾಖೆ ಎಂಬುದೊಂದಿದೆ, ಪ್ರಾವಿಡೆಂಟ್ ಫಂಡ್ ಕಚೇರಿಗೆ ಕೆಲವು ಶಾಸನಬದ್ಧ ಅಧಿಕಾರಗಳಿವೆ ಎಂಬುದೇ ಗೊತ್ತಿರಲಿಲ್ಲ! ಅ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವಳೂ ಕರೆ ಮಾಡಿ `ಪಿ ಎಫ್ ಕಚೇರಿ ಎಲ್ಲಿದೆ?' ಎಂದು ಕೇಳಿದಾಗ ನಾನು ಸುಸ್ತ್ತು! ಈ ಯುವಕರು ಹೈಟೆಕ್ ಕೆಲಸ ಹಿಡಿದರೇ ಹೊರತು ಕಾನೂನು ತಿಳಿಯಲಿಲ್ಲ. ಇವರೆಲ್ಲರ ಪಿ ಎಫ್ ಬಂದಿದ್ದು ನನಗಂತೂ ಗೊತ್ತಾಗಲಿಲ್ಲ. ಅವರೆಲ್ಲರೂ ಕಲಿತಿದ್ದ ಆಧುನಿಕತೆಯ ಪಾಠ, ಕಾಮದ ರೋಚಕ ಅನುಭವ ಉಪಯೋಗಕ್ಕೆ ಬರಲಿಲ್ಲ. ಈಗ ಅವರೆಲ್ಲ ಹೇಗೋ ಯಾವುದೋ ಕೆಲಸದಲ್ಲಿ ತೂರಿಕೊಂಡು ಬದುಕುತ್ತಿದ್ದಾರೆ.
ಸೆಕ್ಸ್ ಎಂದರೆ ಅದನ್ನು ಕಲೆಯಾಗಿ ನೋಡಬೇಕೆ? ಸಾಮಾಜಿಕ ಜವಾಬ್ದಾರಿಯಾಗಿ ನೋಡಬೇಕೆ? ಅಥವಾ ವೈeನಿಕ ಮಾಹಿತಿಯಾಗಿ ಕಾಣಬೇಕೆ? ಅಥವಾ ಗು&
amp;
#3242;್ತ ಸಮಾಲೋಚನೆಯಾಗಿ ಪರಿಗಣಿಸಬೇಕೆ? – ಈ ಸ್ಪಷ್ಟತೆಯೇ ನಮ್ಮಲ್ಲಿಲ್ಲ. ನಮ್ಮ ಬಹುಮುಖೀ ಬದುಕಿನ ಬಗ್ಗೆ ಪ್ರೀತಿ ಹುಟ್ಟಬೇಕು; ಹೊರತು ಕಾಮದ ತಿಳಿವಳಿಕೆಯೊಂದೇ ಎಲ್ಲ ಸಮಸ್ಯೆಗೂ ಪರಿಹಾರ ಎಂದು ತಿಳಿದರೆ ಮೂರ್ಖತನ.