ಹರಪನಹಳ್ಳಿಯಲ್ಲಿ ಮಳೆ
ರಾಚುತ್ತವೆ….
ಮರಳುಗಳು ಮತ್ತು
ಹರಳುಗಳು
ಅಂಬವ್ವನ ಬೋಂಡದಂಗಡಿಯನೆತ್ತಿ
ನೆತ್ತಿಗೇರಿದ ಬಿಸಿಲ ಬದಿಗೊತ್ತಿ
ಲಮಾಣಿಯರ ಸೌದೆ ಹೊರೆಗಳ ಹಾರಿಸಿ
ಊರ ಧೂಳನ್ನೆಲ್ಲ ಮನೆಯ ಮೇಲಿರಿಸಿ
ಸಿರಿವಂತರ ಮನೆಬಾಗಿಲ ಇಕ್ಕಿಸಿ
ನಾಯಿಗೆ ತುಂಡುಮೂಳೆಯ ನೆಕ್ಕಿಸಿ
ಬೀದಿಗಳ ಮಂದಿಗಳ ಗುಡಿಸಲುಗಳ ತೂರಿಸಿ
ಕುರುಬರೆದೆಗಳ ಕುರುಡುಗಂಟೆಗಳ ಮಾಡಿ,
ಬೀದಿಯಲೆಯುವ ಯುವಕರಿಗೆಲ್ಲ ನೊರೆಯುಕ್ಕಿಸಿ
ಹಳೆ ಹಳ್ಳಗಳ ಕೊರೆದು,
ಕ್ರೌರ್‍ಯದುಸಿರಾಡಿ,
ಆಡಿ, ಮರಳುಗಳ ಮತ್ತು ಹರಳುಗಳ
ರಾಚಿಸಿ
ಆಸೆಗಣ್ಣುಗಳ ವಂಚಿಸಿ, ಹಾರುತ್ತದೆ,
ಮಳೆ
ಹರಪನಹಳ್ಳಿಯಲ್ಲಿ.