ಪ್ರತಿನಾಯಕ
ನೆನಪುಗಳ ಜೋಕಾಲಿ ಮುರಿದು
ಬಲಮುರಿಯ ಹೊಕ್ಕು ಸೆಳೆತಕ್ಕೆ ಸೋತು
ಬದುಕು ಬಯಲುಗಳ – ವಿಭ್ರಾಂತ ವೃತ್ತಗಳ
ದಿಗ್ಭಮೆಯ ದಾರಿಗಳ, ವಿಫಲ ಯತ್ನಗಳ
ಮನಸೊಳಗೆ ಝಕ್ಕಾ ಝಕ್ಕನೆ ದಾಟಿ
ಯಾರದ್ದೊ ಮಾತು, ಎಲ್ಲಿಂದಲೋ ಬರುವ ಕೂಗು
ನೊರೆಯಲೆಯ ಭರತ – ಮೊರೆತಕ್ಕೆ ಬೆದರಿ
ಸುಳಿಗೆ ಸಿಕ್ಕವನೇ……
ಇದ್ದಾನೆ ಕಣೋ….. ನಿನಗೊಬ್ಬ ಪ್ರತಿನಾಯಕ ;
ಎಳೆಯೆಳೆಯ ದೇಹಕ್ಕು ಇರಿದಿಕ್ಕುವಂತಂಥ
ಅಪ್ರತ್ಯಕ್ಷ ಪ್ರತಿಮಾಯೋಗಿ.
ಬದುಕು ವಿಪ್ಲವದ ಹಾದಿ ನೂರಿರಬಹುದು,
ಘಟನೆಗಳ ಹಾರ ಆಕಾಶದುದ್ದಕ್ಕೆ ಬೆಳೆದಿರಬಹುದು,
ನಿನ್ನೆದೆಯನ್ನು ಒಪ್ಪಿ ಅಪ್ಪುವ
ನಿನ್ನ ಪ್ರೇಮದ ಹುಡುಗಿ ಕಾಯುತ್ತಿರಬಹುದು,
ಎಲ್ಲಕ್ಕೂ ಪ್ರತಿಷೇಧವೊಡ್ಡಿ
ಧೃತಿಗೆಡಿಸಿ,
ಗತಿಗೆಡಿಸಿ,
ಸ್ಥಿತಿಯ ಕಣವನ್ನೆಲ್ಲ ಆಪೋಷಿಸಿ,
ನಿನ್ನ ಬಾಳಿನ ದಾರಿ ಶೂನ್ಯಕ್ಕೆ ಮುಖಮಾಡಿ
ಬೆಳಕಿಗೆಡೆಯಿರದಂಥ ಊರನ್ನ ಹೊಕ್ಕು
ನೀನಿಲ್ಲವಾದಾಗ – ವಿಕಟನಗೆಯನ್ನ ನಕ್ಕು
ನನಗಾಗಿ ಕಾಯುತ್ತ ಕುಳಿತಿರುವ
ಪ್ರತಿನಾಯಕ ಚಿರಂಜೀವಿ ಕಣೋ…..
ಇಂಥ ಮಾತುಗಳೆಲ್ಲ ನಿನಗೆ ಮೌನ
ನನ್ನ ಬದುಕಲ್ಲೆಲ್ಲ ನಿನ್ನ ಧ್ಯಾನ