ಅಕಾ! ಕವಾಗುಚಿ ಏಕಾಯ್ !!
ಕಲಿಯುವ ಗುಣ ಇದ್ದರೆ ಸಾಲದು, ಛಲವೂ ಬೇಕು ಎನ್ನುವುದಕ್ಕೆ ನಾನು ಇಂದು ಉದಾಹರಿಸುವುದು ನೂರಾ ಏಳು ವರ್ಷಗಳ ಹಿಂದಿನ ಒಂದು ಸಾಹಸಗಾಥೆಯನ್ನು.
ಟಿಬೆಟಿನ ಆಕಾಶದ ಮೇಲೆ ಆಗ ವಿಮಾನವೇ ಹಾರಿರಲಿಲ್ಲ (ವಿಮಾನ ಹಾರಿದಾಗ ಅದನ್ನು ಅಪಶಕುನ ಎಂದು ಟಿಬೆಟನ್ನರು ಬಗೆದದ್ದು ನಿಜವಾಗಿ ಚೀನಾ ದೇಶವು ಟಿಬೆಟನ್ನೇ ನುಂಗಿದ್ದು ಈಗ ಇತಿಹಾಸ). ರೈಲಂತೂ ನಿನ್ನೆ ಮೊನ್ನೆಯಷ್ಟೇ ಬಂದಿದೆ ತಾನೆ? ಟಿಬೆಟನ್ನು ಪ್ರವೇಶಿಸಿ ಲ್ಹಾಸಾ ನಗರದಲ್ಲಿ ಓಡಾಡುವುದು ಎಂದರೆ ಒಂದು ಯಮಸಾಧನೆಯೇ. ಹಾಗೆ ಲ್ಹಾಸಾ ನಗರವನ್ನು ಮುಟ್ಟಿ ಬರುವುದೇ ಒಂದು ದೊಡ್ಡ ಪಂಥಾಹ್ವಾನವಾಗಿತ್ತು.
ಇಂಥ ಗಳಿಗೆಯಲ್ಲಿ ಜಪಾನಿನಲ್ಲಿ ಹುಟ್ಟಿ ಬೆಳೆದ ಕವಾಗುಚಿ ಏಕಾಯ್ ಎಂಬ ವ್ಯಕ್ತಿ ಏಕಾಂಗಿಯಾಗಿ ಲ್ಹಾಸಾವನ್ನು ಪ್ರವೇಶಿಸಿ ಹದಿನಾಲ್ಕು ತಿಂಗಳುಗಳ ಕಾಲ ವಾಸಿಸಿಯೇ ಬಿಟ್ಟ. ಹಾಗೆ ಲ್ಹಾಸಾ ಸೇರಲು ಆತ ತೆಗೆದುಕೊಂಡದ್ದು ಒಂದೂವರೆ ವರ್ಷ. ಈ ದಿನಗಳಲ್ಲಿ ಕವಾಗುಚಿ ಅನುಭವಿಸಿದ ಯಾತನೆ, ದುರ್ಗಮ ಪ್ರದೇಶಗಳಲ್ಲಿ ಮಾಡಿದ ಪ್ರಯಾಣ, ದಾಟಿದ ನದಿ, ಕೊಳ್ಳ, ಗುಡ್ಡಗಳಿಗೆ ಲೆಕ್ಕವಿಲ್ಲ. ಅದಕ್ಕಿಂತ ಮುನ್ನ ಎರಡು ವರ್ಷ ಭಾರತದಲ್ಲೇ ತಯಾರಿ.
ಟಿಬೆಟಿನಲ್ಲಿ ಆಹಾರ ಸಿಗದೇ ಹೋದರೆ ಎಂಬ ಭಯದಿಂದ ಕವಾಗುಚಿ ಕೇವಲ ದಿನಕ್ಕೆ ಒಂದೇ ಊಟ ಮಾಡಿ ಬದುಕುವುದನ್ನು ಕಲಿತ. ವಿಶ್ವದ ಛಾವಣಿ ಎಂದೇ ಖ್ಯಾತವಾದ ಲ್ಹಾಸಾದಲ್ಲಿ ವಾಸಿಸಲು ಬೇಕಾದ ಗುಂಡಿಗೆಯನ್ನು ಹೊಂದಲು ಆತ ಟಿಬೆಟ್ – ನೇಪಾಳ ಗಡಿಯ ಹಳ್ಳಿಯಲ್ಲಿ ಉಳಿದು ನಿರಂತರ ಅಭ್ಯಾಸ ಮಾಡಿದ. ಎಂಥ ಅಭ್ಯಾಸ? ದಿನಾಲೂ ಕಲ್ಲಿನ ಮೂಟೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಗುಡ್ಡ ಹತ್ತಿ ಇಳಿಯುವುದು. ಇದಾವುದೋ ಸಂತ ತನ್ನ್ನೇ ತಾನು ದಂಡಿಸಿಕೊಳ್ಳುತ್ತಿದ್ದಾನೆ ಎಂದು ಆ ಹಳ್ಳಿಯ ಜನ ಮಾತಾಡಿಕೊಳ್ಳುತ್ತಿದ್ದರು.
ಟಿಬೆಟಿನಲ್ಲಿ ವಾಸ ಮಾಡಲು ಭಾಷೆ ಬರಲೇಬೇಕಲ್ಲ? ಕವಾಗುಚಿ ಎಲ್ಲ ಟಿಬೆಟನ್ನರ ಹಾಗೆ ಗ್ರಾಮ್ಯ ಟಿಬೆಟನ್ ಭಾಷೆಯನ್ನೂ ಮಾತಾಡುವುದ&am
p;#3
240;್ನು ರೂಢಿಸಿಕೊಂಡ. ತಿಂಗಳುಗಟ್ಟಳೆ ಸ್ನಾನ ಮಾಡದೆ ಬದುಕುವುದನ್ನೂ ಕವಾಗುಚಿ ಕಲಿತ.
ಜಪಾನಿನಲ್ಲಿ ಉನ್ನತ ಅಧ್ಯಯನ ಮಾಡಿದ್ದ ಈ ಪಂಡಿತನಿಗೆ ಇದಾವ ಹುಚ್ಚು? ಈತ ಯಾಕೆ ಇಷ್ಟೆಲ್ಲ ಶ್ರಮ ಹಾಕಿದ? ಸುಖಬದುಕಿಗೆ ವಿದಾಯ ಹೇಳಿ ಯಾತನೆಯ ಕ್ಷಣಗಳಿಗೆ ಮನಸೋತ?
ಈ ಕವಾಗುಚಿಯ ಪೈರು ಮೊಳಕೆಯಲ್ಲೇ ತನ್ನ ಛಾಪು ಮೂಡಿಸಿತ್ತು. ಹದಿನೈದರ ಹರೆಯದಲ್ಲೇ ಶೋಜಿನ್ ಕಟ್ಟುಪಾಡನ್ನು ಅನುಸರಿಸಿದ್ದ : ಮದ್ಯ, ಮಾನಿನಿ, ಮಾಂಸರಹಿತ ಬದುಕನ್ನು ಮೂರು ವರ್ಷ ಕಳೆದಿದ್ದ ಕವಾಗುಚಿ ೧೯ರ ಹರೆಯದಲ್ಲೇ ಸನ್ಯಾಸಿಯಾಗಿಬಿಟ್ಟ. ಇಡೀ ಜಪಾನ್ ಯುದ್ಧಪ್ರೀತಿಯಲ್ಲಿ ಮುಳುಗಿದ್ದರೆ, ಮನೆಯ ದೊಡ್ಡ ಮಗನಾಗಿಯೂ ಕವಾಗುಚಿ ಸನ್ಯಾಸಿಯಾದ. ಮತ್ತೆ ಮರಳಿ ವಿಶ್ವವಿದ್ಯಾಲಯದಲ್ಲಿ ಓದಿದ. ಚೀನೀ ತ್ರಿಪಿಟಕವನ್ನು ಜಪಾನೀ ಭಾಷೆಗೆ ಅನುವಾದಿಸಲು ಹೊರಟ. ಅರೆ, ಮೂಲ ಸಂಸ್ಕೃತ ತ್ರಿಪಿಟಕ ಟಿಬೆಟಿನಲ್ಲಿ ಇದೆಯಂತಲ್ಲ ಎಂದು ಅನ್ನಿಸಿದ್ದೇ ತಡ, ಟಿಬೆಟಿನತ್ತ ಹೊರಟ ನಮ್ಮ ಕವಾಗುಚಿ. ಏಕಾಂಗಿಯಾಗಿ. ಮುಂದಿನ ಹದಿನೇಳು ವರ್ಷಗಳ ಕಾಲ ಕವಾಗುಚಿ ಅನುಭವಿಸಿದ್ದೆಲ್ಲ ಈಗ ರಮ್ಯ ಇತಿಹಾಸವಾಗಿದೆ. ಮುಟ್ಟಲಾಗದ ನಗರ ಲ್ಹಾಸಾದಲ್ಲಿ ಇರುವ ಕನಸು ಕವಾಗುಚಿಯನ್ನು ಬಿಡಲೇ ಇಲ್ಲ.
ಮೊದಲು ದಾರ್ಜಲಿಂಗಿಗೆ ಬಂದು ಸೂರತ್ ಚಂದ್ರ ದಾಸ್ ಎಂಬ ಟಿಬೆಟನ್‌ವಿದ್ವಾಂಸನನ್ನು ಭೇಟಿಯಾದ. ಸೂರತ್ ಚಂದ್ರ ದಾಸ್ ಬೇರಾರೂ ಅಲ್ಲ, ರುಡ್‌ಯಾರ್ಡ್ ಕಿಪ್ಲಿಂಗ್‌ನ ಕಿಮ್ ಕಾದಂಬರಿಯ ಹರಿಬಾಬು ಪಾತ್ರದ ಸ್ಫೂರ್ತಿ.
ಹೀಗೆ ಟಿಬೆಟ್‌ಗೆ ಹೋಗುವ ಮುನ್ನ ಸಾಕಷ್ಟು ಪೂರ್ವ ತಯಾರಿ ನಡೆಸಿದ ಕವಾಗುಚಿ ಮೊದಲು ತನ್ನ ಯಾನವನ್ನು ಆರಂಭಿಸಿದಾಗ ಅನುಭವಿಸಿದ್ದು ಉಸಿರಾಟದ ತೊಂದರೆ, ಆಮ್ಲಜನಕದ ಕೊರತೆ. ಅದನ್ನು ಮೆಟ್ಟಿನಿಂತ ಕವಾಗುಚಿ. ಒಮ್ಮೆ ನದಿಯಲ್ಲಿ ತೇಲಿಹೋಗುವ ಭೀಕರ ಸನ್ನಿವೇಶ. ಮೇಲೆ ೬೮ ಡಿಗ್ರಿ ತಾಪಮಾನದಲ್ಲಿ ಉರಿಯುತ್ತಿರುವ ಸೂರ್ಯ. ಮುಂದೆ ನದಿ. ಲವಂಗದ ಎಣ್ಣೆಯನ್ನು ಮೈಗೆ ಸವರಿಕೊಂಡ ಕವಾಗುಚಿ ಪೂರ್ಣ ಬತ್ತಲಾಗಿ ನದಿ ದಾಟಿದ. ಹೇಗೋ ತನ್ನ ಹೊರೆಯನ್ನು ತಲೆಯ ಮೇಲೆ ಹೇರಿಕೊಂ&
;#32
33;ು ಬದುಕುಳಿದ.
ಕೊನೆಗೂ ಲ್ಹಾಸಾದ ಹತ್ತಿರದಲ್ಲೇ ಎರಡು ತಿಂಗಳು ಉಳಿದುಕೊಂಡು, ಲ್ಹಾಸಾವನ್ನು ಮುಟ್ಟಿದ ಕವಾಗುಚಿ ಅಲ್ಲಿ ಬುದ್ಧನ ಮೂರ್ತಿಗೆ ಸಾಷ್ಟಾಂಗ ನಮಿಸಿದ. ವೈದ್ಯ, ಪಂಡಿತ ಕವಾಗುಚಿ ಅಲ್ಲಿನ ಸೆರಾ ಬೌದ್ಧಾಲಯದಲ್ಲಿ ಹದಿನಾಲ್ಕು ತಿಂಗಳು ಉಳಿದು ಧಾರ್ಮಿಕ ಅಧ್ಯಯನ ಮಾಡಿದ. ಆದರೆ ಅಲ್ಲಿನ ರೋಗಿಗಳಿಗೆ ಔಷಧ ನೀಡುವುದರಲ್ಲೆ ಹೆಚ್ಚು ಸಮಯ ಕಳೆದ ಕವಾಗುಚಿ ಕೊನೆಗೆ ಸೆರಾ ನಗರದ ಪ್ರಸಿದ್ಧ ವೈದ್ಯನಾಗಿಬಿಟ್ಟ. ಅವನ ಹೆಸರು ಹದಿಮೂರನೆಯ ದಲಾಯಿ ಲಾಮಾ ತ್ಯುಪ್ದೆನ್ ಗ್ಯಾತ್ಸೋವರೆಗೂ ಹೋಯಿತು. ಅಲ್ಲಿಂದ ಬುಲಾವ್ ಬಂದಾಗ ಕವಾಗುಚಿ ಸಣ್ಣಗೆ ನಡುಗಿದ. ತನಗಿನ್ನು ಸೆರೆಮನೆಯೇ ಗತಿ ಎಂದು ಭಾವಿಸಿದ. ಆದರೆ ದಲಾಯಿ ಲಾಮಾ ಚೀನೀ ಭಾಷೆಯಲ್ಲಿ ಮಾತಾಡಲಿಲ್ಲ. ಕವಾಗುಚಿವ ಟಿಬೆಟನ್ ಛದ್ಮವೇಷ ಹಾಗೆಯೇ ಉಳಿಯಿತು. ಟಿಬೆಟನ್ ಸರ್ಕಾರಿ ವೈದ್ಯನ ಹುದ್ದೆಯನ್ನು ಸ್ವೀಕರಿಸಲು ದಲಾಯಿ ಲಾಮಾ ಆಹ್ವಾನ ನೀಡಿದರು!
ಕೊನೆಗೆ ಕಲ್ಕತ್ತದಿಂದ ಬಂದಿದ್ದ ಒಬ್ಬ ಟಿಬೆಟನ್ನನಿಂದ ಕವಾಗುಚಿಯ ಜಪಾನೀ ಮೂಲ ಬಯಲಾಯಿತು. ಆದರೆ ಕವಾಗುಚಿ ಸ್ನೇಹಿತರ ನೆರವಿನಿಂದ ಯಾವುದೇ ಅಪಾಯವನ್ನೂ ಎದುರಿಸದೆ ಟಿಬೆಟಿನಿಂದ ಭಾರತಕ್ಕೆ ಬಂದು ಜಪಾನಿಗೆ ಮರಳಿದ.
ಇಲ್ಲಿಗೆ ಈ ಕಥೆ ಮುಗಿಯಲಿಲ್ಲ. ಹದಿನೈದು ವರ್ಷಗಳ ನಂತರ, ೧೯೧೩ರಲ್ಲಿ ಮತ್ತೆ ಟಿಬೆಟಿನತ್ತ ಕವಾಗುಚಿ ಪ್ರಯಾಣಿಸಿದ. ಮತ್ತೆ ಲಾಮಾರನ್ನು ಕಂಡು ಅವರಿಗೆ ಕಾಣಿಕೆ ಕೊಟ್ಟ.
ಮೊದಲ ಭೇಟಿಯ ಹಾಗೆಯೇ ಈಗಲೂ ನೂರಾರು ಸಂಸ್ಕೃತ ಗ್ರಂಥಗಳನ್ನು ಸಂಗ್ರಹಿಸಿ ಮತ್ತೆ ಜಪಾನಿಗೆ ಮರಳಿದ.
ಬೆಂಗಳೂರಿನ ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ಖರೀದಿಸಿದ ಸ್ಕಾಟ್ ಬೆರ್ರಿ ಬರೆದ `ಎ ಸ್ಟ್ರೇಂಜರ್ ಇನ್ ಟಿಬೆಟ್' ಪುಸ್ತಕವೇ ಈಗ ನನ್ನ ಮುಂದಿದೆ. ಅದರಿಂದಲೇ ಈ ಮಾಹಿತಿಗಳನ್ನು ಆಯ್ದು ನಿಮ್ಮ ಮುಂದೆ ಇರಿಸಿದ್ದೇನೆ. ಉಳಿದಂತೆ ಒಂಬತ್ತು ವರ್ಷಗಳಿಂದ ಕವಾಗುಚಿ ಬಗ್ಗೆ ನಾನು ಕಲೆಹಾಕಿದ ಮಾಹಿತಿಗಳು ಕವಾಗುಚಿಯ ಕಲಿಕೆಯ ಛಲವನ್ನು ಸದಾ ನೆನಪಿಸುತ್ತವೆ. ಅವನು ಸಂಗ್ರಹಿಸಿದ ಗ್ರಂಥಗಳ
ಪಟ್ಟಿಯೇ ಒಂದು ಪುಸ್ತಕವಾಗುತ್ತದೆ. ಅವನೇ ಬರೆದ `ಥ್ರೀ ಯಿಯರ್ಸ್ ಇನ್ ಟಿಬೆಟ್' ಎಂಬ ಪುಸ್ತಕವನ್ನು ಮದ್ರಾಸಿನ ಥಿಯಸಾಫಿಕಲ್ ಸೊಸೈಟಿಯು ಪ್ರಕಟಿಸಿದ್ದರೂ ಅದರ ಪ್ರತಿಗಳೀಗ ಸಿಗುತ್ತಿಲ್ಲ.
ಈಗ ಜಪಾನಿನಲ್ಲಿ ಮೂರ್ತಿಯೊಂದು ನಿಂತಿದೆ. ಕವಾಗುಚಿ ಏಕಾಯ್.. ಅವನ ಕಲಿಕೆಯ ಗುಣಕ್ಕೆ ಮತ್ಸರಪಡೋಣವೆ? ಅಥವಾ ಒಂದಷ್ಟಾದರೂ ಕಲಿಯುವ ಮನಸ್ಸನ್ನು ಬೆಳೆಸಿಕೊಳ್ಳೋಣವೆ?