ಕಲಿಯುಗ ಅಂಕಣ ಶುರುವಾಗಿ ಒಂದು ವರ್ಷ ಕಳೆದೇ ಹೋಗಿದೆ! ನನ್ನ ಅಂಕಣದ ನೀತಿಯನ್ನೇ ಮೊದಲ ಲೇಖನವಾಗಿ ಬರೆದಿದ್ದೆ. ಬಹುಶಃ ಅವೆಲ್ಲವನ್ನೂ ಪೂರೈಸಲು ಸಾಧ್ಯವಾಗಿಲ್ಲದಿರಬಹುದು; ಆದರೆ ಹಲವು ಬಾರಿ ರಾಜಕೀಯ ಮತ್ತು ವಿವಾದಾಸ್ಪದ ವಿಷಯಗಳ ಬಗ್ಗೆ ಬರೆಯುವ ಒತ್ತಡ ಒಳಗೊಳಗೇ ಮೂಡಿದ್ದರೂ, ಅವುಗಳನ್ನು ಮೀರಿ ನನ್ನ ಅಂಕಣದ ನೀತಿಯನ್ನು ಪಾಲಿಸಿದ್ದೇನೆ ಎಂಬ ಸಮಾಧಾನ ನನಗಿದೆ. ಈ ವರ್ಷ ಬರೆದ ಹಲವು ಲೇಖನಗಳು ಸಾಧಾರಣ ಮಟ್ಟದವು, ಕೆಲವು ಮಾತ್ರ ಹೆಚ್ಚು ಮಾಹಿತಿಪೂರ್ಣವಾಗಿದ್ದವು ಎಂಬ ಅರಿವೂ ನನಗಿದೆ. ಏನೇ ಇರಲಿ, ಓದುಗರಿಗೆ, ನನ್ನ ಅಂಕಣದ ಮೊದಲ ವರ್ಷದ ಶುಭಾಶಯಗಳು.
ಇನ್ನೊಂದು ಸಂತಸದ ವಿಷಯ: ಈಗ `ಕಲಿಯುಗ’ ಓದಿ ಈ ಮೈಲ್ ಮೂಲಕ ಪ್ರತಿಕ್ರಿಯೆ ಕಳಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇವರಲ್ಲಿ ಸಹಾಯ ಕೇಳಿ ಬಂದ
ಪತ್ರಗಳೇ ಹೆಚ್ಚು. ಪಿ೨ಪಿ ಲೇಖನ (ಕಡತ ಹಂಚಿಕೆ) ಹೆಚ್ಚು ಜನಪ್ರಿಯವಾಗಿದೆ ಎಂದೆನಿಸುತ್ತಿದೆ. ಈ ಬಾರಿ ನನ್ನ ಅಂಚೆ ವಿಳಾಸವನ್ನೂ ಇಲ್ಲಿ ಕೊಡುತ್ತಿದ್ದೇನೆ. ನೀವು ಪತ್ರ ಬರೆದೂ ಮಾಹಿತಿ ಕೇಳಬಹುದು; ಪ್ರತಿಕ್ರಿಯೆ ನೀಡಬಹುದು; ಟೀಕಿಸಬಹುದು.
ಎಷ್ಟೋ ಸಲ ಜಗತ್ತಿನಲ್ಲಿ ಮುಂದೇನಾಗುತ್ತದೆ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ. ಅದಕ್ಕೆ ಭವಿಷ್ಯವಾಣಿಯನ್ನು ಅವಲಂಬಿಸಬೇಕಿಲ್ಲ. ವಿಶ್ವದ ಹ
ಲವು ಸಂಶೋಧನಾ ಸಂಸ್ಥೆಗಳು ವಿವಿಧ ವಿಷಯಗಳಲ್ಲಿ, ರಂಗಗಳಲ್ಲಿ ಮುಂದೇನಾಗುತ್ತದೆ ಎಂಬ ವರದಿಗಳನ್ನು ತಯಾರಿಸುತ್ತಲೇ ಇರುತ್ತವೆ. ಈ ವರದಿಗಳನ್ನು ಎಲ್ಲಾ ಸಲವೂ ನಂಬುವಂತಿಲ್ಲ; ಹಾಗಂತ ಬಿಟ್ಟರೂ ಕೆಟ್ಟೆವು! ಉದಾಹರಣೆಗೆ ಮುಂದಿನ ಕೆಲವೇ ತಿಂಗಳುಗಳಲ್ಲಿ ರಸಗೊಬ್ಬರದ ಬೆಲೆಯು ವಿಪರೀತವಾಗಿ ಹೆಚ್ಚಲಿದೆ ಎಂದು ವಿಶ್ವಸಂಸ್ಥೆಯ ವರದಿ ಎಚ್ಚರಿಸಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದ್ದನ್ನು ಹಲವು ದಿನಪತ್ರಿಕೆಗಳು ಮರುವರದಿ ಮಾಡಿವೆ. ಈ ಮೂಲ ವರದಿ ಇನ್ನಷ್ಟೇ ಪ್ರಕಟವಾಗಬೇಕಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಇನ್ನೂ ಎರಡು ವರದಿಗಳನ್ನು ನಾನು ಸಂಗ್ರಹಿಸಿದ್ದೇನೆ. ನನ್ನ ಗೂಗಲ್‌ಪೇಜಸ್ ಪುಟಗಳಲ್ಲಿ ಈ ವರದಿಯನ್ನು ನೀವು ಕಾಣಬಹುದು; ಸಾಧ್ಯವಾದರೆ ಡೌನ್‌ಲೋಡ್ ಮಾಡಿಕೊಂಡು ಓದಿ.
ಲಿಂಕ್:
http://beluru.googlepages.com/mitramaadhyama
ಶಿಕ್ಷಣ ರಂಗದಲ್ಲಿ ಇರುವ ಸಮಸ್ಯೆಗಳೇನು? ಮುಂದಿನ ದಿನಗಳಲ್ಲಿ ಶಿಕ್ಷರಂಗದಲ್ಲಿ ಏನೇನಾಗಬೇಕು? ಈ ಬಗ್ಗೆ ಪಾರ್ಕರ್ ರಾಸ್‌ಮನ್ ಎಂಬ ಪತ್ರಕರ್ತ, ಲೇಖಕ ಚಿಂತನೆ ನಡೆಸಿ ತನ್ನ ಜಾಲತಾಣದಲ್ಲಿ ಹಲವು ಚಿಂತನಯೋಗ್ಯ ಲೇಖನಗಳನ್ನು ಪ್ರಕಟಿಸಿದ್ದಾನೆ. ಶಿಕ್ಷಣರಂಗದ ಬಗ್ಗೆ ಯೋಚಿಸುತ್ತಿರುವವರು ಈ ಲೇಖನಗಳತ್ತ ಒಮ್ಮೆ ಗಮನ ಹರಿಸಬಹುದು.
ಲಿಂಕ್: http://ecolecon.missouri.edu/globalresearch
ಹಾಗೇ ಭಾರತದ ರಾಷ್ಟ್ರೀಯ ಜ್ಞಾನ ಆಯೋಗ ಗೊತ್ತಿರಬೇಕಲ್ಲ? ಸ್ಯಾಮ್ ಪಿತ್ರೋಡಾ ನೇತೃತ್ವದ ಈ ಸಂಸ್ಥೆ ನಿಜಕ್ಕೂ ಮುಂದಿನ ಪೀಳಿಗೆಗಾಗಿ ಶಿಕ್ಷಣ ಮತ್ತು ಜ್ಞಾನ ಪ್ರಸರಣ ಮಾಡುವ ಕ್ರಮಗಳ ಬಗ್ಗೆ ಗಂಭೀರವಾಗಿ ತಲೆ ಕೆಡಿಸಿಕೊಂಡಿದೆ. ಮಕ್ಕಳನ್ನು ಗಣಿತ ಮತ್ತು ವಿಜ್ಞಾನದ ವಿಷಯಗಳಿಗೆ ಹೇಗೆ ಸೆಳೆಯಬೇಕು, ಸಾಂಪ್ರದಾಯಿಕ ವೈದ್ಯಪದ್ಧತಿಯನ್ನು ರಕ್ಷಿಸಲು ಏನು ಮಾಡಬೇಕು, ಮುಕ್ತ ಮತ್ತು ದೂರಶಿಕ್ಷಣದ ನೀತಿ ಏನಾಗಿರಬೇಕು, ಗ್ರಂಥಾಲಯಗಳನ್ನು ಹೇಗೆ ಸುಧಾರಿಸಬೇಕು?- ಇವೇ ಮುಂತಾದ ಸಂಗತಿಗಳ ಬಗ್ಗೆ ಚರ್ಚಾಟಿಪ್ಪಣಿಗಳನ್ನು ಈ ಆಯೋಗವು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ನೀವು ಖಂಡಿತವಾಗಿಯೂ ಓದಲೇಬೇಕಾದ ದಾಖಲೆಗಳಿವು. ಉದಾಹರಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಈ-ಗವರ್ನೆನ್ಸ್ ವಿಷಯದಲ್ಲಿ ಓಪನ್‌ಸೋರ್ಸ್ ತಂತ್ರಾಂಶಗಳನ್ನೇ ಬಳಸಬೇಕು ಎಂದು ಸ್ಯಾಮ್ ಪಿತ್ರೋಡಾ ಈ-ಗವರ್ನೆನ್ಸ್ ಸಂಬಂಧಿತ ನಿರೂಪಣೆಯಲ್ಲಿ ಪ್ರತಿಪಾದಿಸಿದ್ದಾರೆ. ಈ-ಗವರ್ನೆನ್ಸ್ ಬಗ್ಗೆ ವೃಥಾ ಪುಂಖಾನುಪುಂಖ ಬೊಗಳೆ ಬಿಡುತ್ತಿರುವ ಸರ್ಕಾರಗಳು ಈ ಬಗ್ಗೆ ಹೆಚ್ಚು ಗಮನ ನೀಡಬಹುದು. ಇದರಿಂದ ಮೈಕ್ರೋಸಾಫ್ಟ್ ಸಂಸ್ಥೆಗೆ ಈಗಲೂ ನೀಡುತ್ತಿರುವ ಕೋಟಿಗಟ್ಟಳೆ ರೂಪಾಯಿಯನ್ನು ಉಳಿಸಬಹುದು. (ಈ ಜಾಲತಾಣದಲ್ಲಿ ಕನ್ನಡದಲ್ಲೂ ಮಾಹಿತಿ ಇದೆ ಎನ್ನುವುದು ನಿಮಗೆ ಇನ್ನಷ್ಟು ಆಸಕ್ತಿ ಹುಟ್ಟಿಸಬಹುದೆ?)
ಲಿಂಕ್ : http://knowledgecommission.gov.in
೨೦೦೯ನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ವರ್ಷ ಎಂದು ಘೋಷಿಸಿದೆ ಎಂಬುದು ನಇಮಗೆ ಗೊತ್ತೆ? ಈ ವರ್ಷ ವಿಶ್ವದೆಲ್ಲೆಡೆ ಹಲವು ಬಗೆಯ ಕಾರ್ಯಕ್ರಮಗಳು, ಕಾರ್ಯಾಗಾರಗಳು ನಡೆಯಲಿವೆ. ಭಾರತದಲ್ಲೂ ಈ ವರ್ಷವನ್ನು ಸಡಗರದಿಂದ ಆಚರಿಸಲು ಸಿದ್ಧತೆಗಳು ನಡೆದಿವೆ. ಬೆಂಗಳೂರೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಈ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ಲಿಂಕ್‌ಗೆ ಭೇಟಿ ನೀಡಿ:
ಲಿಂಕ್ : http://www.iucaa.ernet.in/~iya09ind
ಕನ್ನಡಭಾಷೆಯ ರಕ್ಷಣೆಯ ಬಗ್ಗೆ ನಾವೆಲ್ಲ ಮಾತನಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಭಾಷೆಗಳು ಹೇಗಿರುತ್ತವೆ? ಬದಲಾಗುತ್ತವೆಯೆ? ಯಾವುದೋ ಒಂದು ಭಾಷೆಯು ಪ್ರಭುತ್ವ ಸಾಧಿಸುತ್ತದೆಯೆ? ಶಿಕಾಗೋ ವಿಶ್ವವಿದ್ಯಾಲಯದ ಸಲಿಕೋಕೋ ಎಂ. ಮುಫ್‌ವೀನ್ ೨೦೦೨ರಲ್ಲೇ ಬರೆದ ೪೮ ಪುಟಗಳ ಪ್ರಬಂಧವನ್ನು ಆಸಕ್ತರು ಓದಬಹುದು. ಅದೂ ನನ್ನ ಗೂಗಲ್ ಪುಟಗಳಲ್ಲಿ ಇದೆ.
ಲಿಂಕ್: http://beluru.googlepages.com/vl4n2COLONIZATION-GLOBALIZATION.pdf
ಕಂಪ್ಯೂಟರ್ ಬಳಕೆ ಹೆಚ್ಚಾಗ್ತಾ ಇರೋ ಈ ದಿನಗಳಲ್ಲಿ ಈ-ವೇಸ್ಟ್ ಅಂದರೆ ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ವಿಲೇವಾರಿ ಮಾಡೋ ಬಗೆ ಹೇಗೆ? ಈ ಬಗ್ಗೆ ಹೆಚ್ಚಿನ ನೀತಿ-ನಿಯಮಗಳನ್ನು ರೂಪಿಸಲು `ಸಾಲ್ವಿಂಗ್ ದಿ ಈ ವೇಸ್ಟ್ ಪ್ರಾಬ್ಲಮ್’ ಎಂಬ ವಿಶ್ವಸಂಸ್ಥೆ ಬೆಂಬಲಿತ ಸಂಸ್ಥೆಯು ಕೆಲಸ ಮಾಡುತ್ತಿದೆ. ಭಾರತವೂ ಪ್ರಮುಖ ಈ-ವೇಸ್ಟ್ ತಾಣವಾಗೋ ಅಪಾಯ ಇರೋದ್ರಿಂದ ಈ ಬಗ್ಗೆ ಹೆಚ್ಚು ತಿಳಿದುಕೊಂಡರೆ ತಪ್ಪಿಲ್ಲ.
ಲಿಂಕ್: http://www.step-initiative.org/index.php
ಅದೆಲ್ಲ ಸರಿ, ಈ ವಿಶ್ವದ ಭವಿಷ್ಯವೇನು? ಕೊನೆಗೊಮ್ಮೆ ಈ ಜಗತ್ತು, ಬ್ರಹ್ಮಾಂಡ, ಎಲ್ಲವೂ ಏನಾಗುತ್ತದೆ? ಎಲ್ಲಿಗೆ ಈ ಕಥೆ ಕೊನೆಗೊಳ್ಳುತ್ತದೆ? ಇದನ್ನೂ ನೀವು ತಿಳಿದುಕೊಳ್ಳಬಹುದು! ವಿಕಿಪೀಡಿಯಾದಲ್ಲಿ ಇರುವ ಈ ಪುಟವನ್ನು ಒಮ್ಮೆ ಓದಿ. ಅದರಲ್ಲಿರುವ ಇತರೆ ಲಿಂಕ್‌ಗಳಿಗೂ ಭೇಟಿ ನೀಡಿ.
ಲಿಂಕ್ : http://en.wikipedia.org/wiki/Ultimate_fate_of_the_universe
ನೋಡಿ, ಕಲಿಯಲು ಎಷ್ಟೆಲ್ಲ ವಿಷಯಗಳಿವೆ… ನೀವು ನಿಮಗೆ ಆಸಕ್ತಿ ಇರುವ ವಿಷಯವನ್ನು ಓದಿ ತಿಳಿದುಕೊಳ್ಳಲೇ ಎಷ್ಟೋ ದಿನಗಳು, ವಾರಗಳು ಬೇಕು… ಕಲಿಯುಗದ ಅನಿವಾರ್ಯತೆ ಎನ್ನಿ!