ಎರಡು ವಾರಗಳ ಕೆಳಗೆ ಪಿ೨ಪಿ ಎಂಬ ಕಡತ ಹಂಚಿಕೆ ವಿಷಯದ ಬಗ್ಗೆ ಬರೆದಿದ್ದೆ. ನಾವು ಯಾವುದೇ ಸಿನೆಮಾವನ್ನು ಹೇಗೆ ಖಾಸಗಿ ಬಳಕೆಗೆ ಜಗತ್ತಿನ ಇನ್ನೊಂದು ಗಣಕದಿಂದ ಪಡೆಯಬಹುದು, ಕದಿಯುವುದಕ್ಕೆ ಸಮಾನವೇ ಆದರೂ ಹೇಗೆ ಈ ಬಳಕೆಯಿಂದ ನಮ್ಮ ಗಣಕದಲ್ಲೇ ಜಗತ್ತಿನ ಎಲ್ಲ ಪುಸ್ತಕಗಳನ್ನು ಇಳಿಸಿಕೊಳ್ಳಬಹುದು, ಇತ್ಯಾದಿ ವಿವರಿಸಿದ್ದೆ. ಹಂಚಿ ಉಂಡರೆ ಹಸಿವಿಲ್ಲ ಎಂದೂ ಬರೆದಿದ್ದೆ.
ಹೌದು, ಮಹಾರಾಯ್ರೆ, ನಿಮ್ಮ ಕಂಪ್ಯೂಟರನ್ನು ಬಳಸಿಕೊಳ್ಳಲು ನಮಗೂ ಬಿಡಿ, ಜಗತ್ತಿನ ಒಳಿತಿಗಾಗಿ ನಮ್ಮ ಸಂಶೋಧನೆಗೆ ನಿಮ್ಮ ಕಂಪ್ಯೂಟರನ್ನು ನಾವು ಬಳಸುವೆವು ಎಂದು ಯಾವುದಾದರೂ ಸಂಸ್ಥೆ ಕೇಳಿಕೊಂಡರೆ?
ಇಂಥ ನೂರಾರು ಪ್ರಯತ್ನಗಳು, ಪ್ರಕಲ್ಪಗಳು ನಡೆಯುತ್ತಲೇ ಇವೆ.
೨೩೨,೫೮೨,೬೫೭-೧ ಎಂಬ ಸಂಖ್ಯೆ ಯಾವುದು ಗೊತ್ತೆ? ಇದು ಜಗತ್ತಿನಲ್ಲಿ ಇದುವರೆಗೆ ಗೊತ್ತಾಗಿರೋ ೪೩ನೇ ಅತಿ ದೊಡ್ಡ ಪ್ರೈಮ್
ಸಂಖ್ಯೆ (ಅವಿಭಾಜ್ಯ ಸಂಖ್ಯೆ). ಅಂದರೆ ಇದನ್ನು ಇದೇ ಸಂಖ್ಯೆ ಮತ್ತು ಕೇವಲ ೧ರಿಂದ ಮಾತ್ರ ವಿಭಜಿಸಬಹುದು. ಇದರಲ್ಲಿ ೯,೮೦೮,೩೫೮ ಅಂಕೆಗಳಿವೆ. ಈ ಸಂಖ್ಯೆ ಸಿಕ್ಕಿದ್ದೇ ಇಂಥ ವಿಶ್ವವ್ಯಾಪಿ ಗಣಕಗಳನ್ನು ಬಳಸಿದ ಸಂಶೋಧನೆಯಿಂದ. ದಿ ಗ್ರೇಟ್ ಇಂಟರ್‌ನೆಟ್ ಮರ್ಸೆನ್ ಪ್ರೈಮ್ ಸರ್ಚ್ (GIMPS) ಎಂಬ ಈ ಅಂತರಜಾಲ ಸಂಶೋಧನೆಗೆ ನೀವೂ ಕೊಡುಗೆ ಸಲ್ಲಿಸಬಹುದು.
ಈ ಯೋಜನೆಯ ಜಾಲತಾಣದಿಂದ ಒಂದು ಪುಟ್ಟ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಗಣಕದಲ್ಲಿ ಸ್ಥಾಪಿಸಿ; ಬಳಸಿ. ಸಂಶೋಧನಾ ಜಾಲತಾಣವು ನೀಡುವ ಸೂಚನೆಗಳನ್ನು ಗಮನಿಸಿ. ಅಕಸ್ಮಾತ್ ನೀವು (ಅಂದರೆ ನಿಮ್ಮ ಗಣಕ) ಒಂದು ಕೋಟಿ ಅಂಕೆಗಳನ್ನು ದಾಟುವ ಪ್ರೈಮ್ ಸಂಖ್ಯೆಯನ್ನು ಹುಡುಕುವ ಯತ್ನದಲ್ಲಿ ಭಾಗಿಯಾಗಿದ್ದರೆ, ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಶನ್ ಪ್ರಕಟಿಸಿದ ಒಂದು ಲಕ್ಷ ಡಾಲರ್ ಬಹುಮಾನದಲ್ಲಿ ಪಾಲು ಪಡೆಯುವಿರಿ!
ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೆ: ನಿಮ್ಮ ಗಣಕವು ಇಂಟರ್‌ನೆಟ್ ಸಂಪರ್ಕ ಹೊಂದಿದ್ದರೆ, ಅದನ್ನು ಸದಾ ಆನ್ ಮಾಡಿಡಿ. (ಪಿ೨ಪಿ ಕಡತ ಹಂಚಿಕೆಯಲ್ಲಿ ನಿಮ್ಮ ಗಣಕವನ್ನು ಸದಾ ಆನ್ ಮಾಡಿ ಇಡುವುದು ಒಂದು ಮುಖ್ಯ ಅಗತ್ಯ ಎಂಬುದು ನಿಮಗೆ ಗೊತ್ತಿದೆ ತಾನೆ?) ನಿಮ್ಮ ಗಣಕದ ರ್‍ಯಾಂಡಮ್ ಆಕ್ಸೆಸ್ ಮೆಮೊರಿಯ ಒಂದು ಭಾಗ ಮತ್ತು ನಿಮ್ಮ ಹಾರ್ಡ್‌ಡಿಸ್ಕ್‌ನ ಒಂದಷ್ಟು ಪಾಲಿನಲ್ಲಿ ಈ ತಂತ್ರಾಂಶ ಕೂತುಗೊಂಡು ತನ್ನಷ್ಟಕ್ಕೆ ತಾನೇ ಸಂಶೋಧನಾ ಕೇಂದ್ರದ ಜೊತೆ ಮಾತಾಡಿಕೊಳ್ಳುತ್ತ ಕೆಲಸ ಮಾಡುತ್ತದೆ. ನಿಮ್ಮ ಪಾಡಿಗೆ ನೀವು ನಿಮ್ಮ ಗಣಕ ಕಾರ್ಯಾಚರಣೆಗಳನ್ನು ಮಾಡಿಕೊಂಡು ಹೋಗಬಹುದು. ತೆರೆಮರೆಯಲ್ಲಿ ನಿಮ್ಮ ಗಣಕದ ವ್ಯರ್ಥವಾಗಬಹುದಾದ ಬ್ಯಾಂಡ್‌ವಿಡ್ತ್ (ನೀವು ಬಳಸಲು ನಿಗದಿಯಾದ, ಆದರೆ ನೀವು ಬಳಸದೇ ಇರುವ ದತ್ತಾಂಶದ ಹರಿವು, ಡಾಟಾಫ್ಲೋ)ನ್ನು ಈ ತಂತ್ರಾಂಶವು ಬಳಸಿಕೊಳ್ಳುತ್ತದೆ. ಒಂಥರ ನೀವು ಕದಿಯಲು ಅನುಮತಿ ನೀಡಿದಂತೆ
ಸರ್ಚ್ ಫಾರ್ ಎಕ್ಸ್‌ಟ್ರಾಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್ (SETI)ಎಂಬ ಇನ್ನೊಂದು ಯೋಜನೆಯಿದೆ. ಇಲ್ಲೂ ಅಷ್ಟೆ. ನೀವು ಈ ಸಂಸ್ಥೆಗೆ ನಿಮ್ಮ ಗಣಕದ ಉಳಿಕೆ ಸಾಮರ್ಥ್ಯವನ್ನು ಬಳಸಿಕೊಳ್ಳಲು ಬಿಟ್ಟರೆ ಬೇರೆ ಜಗತ್ತಿನಲ್ಲಿ ಜೀವಿಗಳಿದ್ದಾರೆಯೇ ಎಂಬ ಸಂಶೋಧನೆಯಲ್ಲಿ ನೀವೂ ಭಾಗಿಯಾದಂತೆಯೇ.
ಭೌತಶಾಸ್ತ್ರ, ಗಣಿತ, ಕಲೆ, ಇಂಟರ್‌ನೆಟ್, ಸಂಕೇತಶಾಸ್ತ್ರ, ಜೀವಶಾಸ್ತ್ರ, ಆಟಗಳು, ಖಗೋಳಶಾಸ್ತ್ರ, ಭೂವಿಜ್ಞಾನ, ಹೀಗೆ ಯಾವುದೇ ವಿಷಯದಲ್ಲಿ ಆಸಕ್ತಿ ಹೊಂದಿದ್ದರೆ, ಈ ರಂಗಗಳಲ್ಲಿ ಹೀಗೆ ‘ವಿತರಿತ ಗಣಕ’ (ಡಿಸ್ಟ್ರಿಬ್ಯೂಟೆಡ್ ಕಾಂಪ್ಯೂಟಿಂಗ್)ಗಳ ಮೂಲಕ ಸಂಶೋಧನೆ ನಡೆಸಲು ನಿಮ್ಮ ಗಣಕದ ಮೂಲಕ ಭಾಗಿಯಾಗಬಹುದು. ಕ್ಯಾನ್ಸರ್ ಸಂಶೋಧನೆಯಲ್ಲಿ ನಿಮ್ಮದೇ ಕೊಡುಗೆಯನ್ನು ನೀಡಬಹುದು. ಭೂಮಿಗೆ ಹತ್ತಿರವಿರುವ ವಸ್ತುಗಳಿಂದ ಏನು ಅಪಾಯ ಕಾದಿದೆ ಎಂದು ಲೆಕ್ಕ ಹಾಕಬಹುದು. ಜೀವವಿಕಾಸ ಹೇಗಾಯಿತು ಎಂದು ತರ್ಕಿಸಬಹುದು. ೨೧ನೇ ಶತಮಾನದಲ್ಲಿ ವಿಶ್ವ ಪರಿಸರ ಹೇಗೆ ಬದಲಾಗುತ್ತದೆ ಎಂದು ಅಧ್ಯಯನ ನಡೆಸಬಹುದು. ಅಮೆರಿಕಾದ ಬರ್ಕಲಿ ಓಪನ್ ಇನ್‌ಫ್ರಾಸ್ಟ್ರಕ್ಚರ್ ಫಾರ್ ನೆಟ್‌ವರ್ಕ್ ಕಾಂಪ್ಯೂಟಿಂಗ್ (BOINC) ವಿಭಾಗವು ೪೦ಕ್ಕೂ ಹೆಚ್ಚು ಇಂಥ ಪ್ರಯೋಗಗಳಲ್ಲಿ ತೊಡಗಿದೆ. (ಸೇಟಿ ಯೋಜನೆಯೂ ಈ ಸಂಸ್ಥೆಯದೇ).
ಇಂಥ ಹಲವು ಯೋಜನೆಗಳನ್ನು ಈಗಾಗಲೇ ಹಲವು ಸಂಸ್ಥೆಗಳು ನಡೆಸುತ್ತಿವೆ. ಲಕ್ಷಗಟ್ಟಳೆ ಗಣಕಗಳ ನೆರವಿನಿಂದ ಅಸಂಖ್ಯ ಸಂಶೋಧನಾ ಎಳೆಗಳನ್ನು ಬಿಡಿಸುತ್ತಿವೆ.
ನಿಮಗೆ ಗೊತ್ತಿರಲಿ, ಪಿ೨ಪಿ ಗಣಕಗಳ ಶಕ್ತಿಯ ಮುಂದೆ ಜಗತ್ತಿನ ಸೂಪರ್ ಕಂಪ್ಯೂಟರಿನ ಶಕ್ತಿ ಕೇವಲ ಶೇ. ೧ ಮಾತ್ರ! ಸೂಪರ್‌ಕಂಪ್ಯೂಟರುಗಳಿಗಿಂತ ನೂರು ಪಟ್ಟು ಶಕ್ತಿಯುತವಾಗಿರುವ ಈ ಸಾರ್ವಜನಿಕ ಗಣಕಗಳ ಸಂಚಯಿತ ಶಕ್ತಿಗೆ ನಮಿಸೋಣ! ಮನುಕುಲಕ್ಕೆ ನಮ್ಮ ಗಣಕಗಳಿಂದ ಮತ್ತುಷ್ಟು ಒಳಿತಾಗಲಿ ಎಂದು ಹಾರೈಸೋಣ.
ಗಮನಿಸಿ: ಪಿ೨ಪಿಗೆ ಸಾಕಷ್ಟು ವಿರೋಧವೂ ಇದೆ ಎಂಬುದನ್ನು ಗಮನಿಸಬೇಕು. ಪಿ೨ಪಿ ಕಡತ ಹಂಚಿಕೆಯಿಂದ ಜನ ಸಂಗೀತದ ಆಲ್ಬಮ್‌ಗಳನ್ನು, ದುಬಾರಿ ಪುಸ್ತಕಗಳನ್ನು ಕದಿಯುತ್ತಾರೆ, ಸಿನೆಮಾಗಳನ್ನು ಕದ್ದು ಪುಕ್ಕಟೆಯಾಗಿ ನೋಡುತ್ತಾರೆ ಎನ್ನುವುದು ನಿಜವೇ. ಆದರೆ ಇದು ತಂತ್ರಜ್ಞಾನದ ಅನಿವಾರ್ಯ ಬೆಳವಣಿಗೆ. ಎಂ ಪಿ ೩ ಸ್ವರೂಪದ ಹಾಡುಗಳನ್ನು ಮೊದಲು ಸಂಗೀತದ ಆಲ್ಬಮ್ ತಯಾರಿಕೆ ಸಂಸ್ಥೆಗಳು ವಿರೋಧಿಸಿದ್ದವು; ಈಗ ಅವೇ ಸಂಸ್ಥೆಗಳು ಎಂಪಿ೩ ಫಾರ್ಮಾಟಿನಲ್ಲಿ ಸಿಡಿಗಳನ್ನು ಬಿಡುಗಡೆ ಮಾಡುತ್ತಿವೆಯಲ್ಲವೆ? ನೀವು ತಂತ್ರಜ್ಞಾನವನ್ನು ಹುಟ್ಟುಹಾಕಿ ಅದು ಲಾಭ ಸಂಸ್ಥೆಗಳ ಲಾಭಕ್ಕೆ ಏಟು ಹಾಕುತ್ತದೆ ಎಂದಾದಕೂಡಲೇ ವಿರೋಧಿಸುವುದು ಎಷ್ಟು ಸರಿ? ತಂತ್ರಜ್ಞಾನ ಇರೋದೇ ಮನುಕುಲದ ಒಳಿತಿಗಾಗಿ ಎಂದು ತಿಳಿದು, ವಾಣಿಜ್ಯೇತರ ಮತ್ತು ಸಮಾಜವಿರೋಧಿಯಲ್ಲದ ಬಳಕೆಗಾಗಿ ಯಾವುದೇ ತಂತ್ರಜ್ಞಾನವನ್ನು ಬಳಸಿದರೆ ಅದರಲ್ಲಿ ತಪ್ಪಿಲ್ಲ ಎಂಬುದೇ ನನ್ನ ಪ್ರತಿಪಾದನೆ.
ಈ ಬಗ್ಗೆ ಡಿಜಿಟಲ್ ರೈಟ್ಸ್ ಮ್ಯಾನೇಜ್‌ಮೆಂಟ್ ಎಂಬ ಹೊಸ ಹತ್ತಿಕ್ಕುವ ತಂತ್ರಜ್ಞಾನವೇ ಬಂದಿರುವುದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಆದ್ದರಿಂದ ಡಿಜಿಟಲ್ ಯುಗದಲ್ಲಿ ಹೊಸ ಕಾನೂನು ಬರೆಯಬೇಕಿದೆ. ಹಳೆಯ, ಜಡ್ಡುಗಟ್ಟಿದ ಕಾಯ್ದೆಗಳನ್ನು ಹರಿದುಹಾಕಬೇಕಿದೆ.
——–
ಆಸಕ್ತಿಯಿದ್ದಲ್ಲಿ ಈ ಕೆಳಗಿನ ಜಾಲತಾಣಗಳನ್ನು ನೀವು ನೋಡಬಹುದು.
ವಿತರಿತ ಕಾಂಪ್ಯೂಟಿಂಗ್ ಯೋಜನೆಗಳ ಪಟ್ಟಿ ಇರುವ ವಿಕಿಪೀಡಿಯಾ ಪುಟ:
http://en.wikipedia.org/wiki/List_of_distributed_computing_projects
ವಿಕಿಪೀಡಿಯಾದಲ್ಲಿ ಇರುವ ಪಿ೨ಪಿ ಮಾಹಿತಿ ಪುಟ:
http://en.wikipedia.org/wiki/Peer-to-peer
ಹೊರಜಗತ್ತಿನ ಜೀವಿಗಳ ಬಗೆಗಿನ ಸಂಶೋಧನೆಗಳ ಜಾಲತಾಣ
http://setiathome.berkeley.edu/ಪ್ರೈಮ್ ಸಂಖ್ಯೆಗಳ ಸಂಶೋಧನಾ ಜಾಲತಾಣ
http://www.mersenne.org