ಟುಡೇ ಐ ವಿಲ್ ಪ್ರಿಪೇರ್ ಟೀ ಎಂದು ವಾಸುದೇವನ್ ಅಲ್ಯುಮಿನಿಯಂ ಟೀಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟು ನೀರು ಹಾಕಿದಾಗಲೇ ಸುಧಾಕರ ನಿಧಾನವಾಗಿ ರೂಮಿನ ಚಹರೆ ಹೀರತೊಡಗಿದ.
ಕಾಟನ್‌ಪೇಟೆಯ ಆ ಭವ್ಯವಾದ ಸಿಂಗಲ್ ಬೆಡ್‌ರೂಮಿನಲ್ಲಿ ಕೆಲವೇ ವಸ್ತುಗಳಿದ್ದರೂ ಅವಕ್ಕೆಲ್ಲ ಒಂಥರ ಕೇರಳದ ಗಾಳಿ ಬೀಸಿದ ಹಾಗಿದೆ. ಬಗೆಬಗೆಯ ದಢಿಗಳಿದ್ದ ಬಿಳಿ ಪಂಚೆಗಳು ರಾಶಿರಾಶಿಯಾಗಿ ನ್ಯಾಲೆಯ ಮೇಲೆ ನೇತಾಡುತ್ತಿವೆ. ದೊಗಳೆ ಜುಬ್ಬಾಗಳಿಗಂತೂ ಲೆಕ್ಕವೇ ಇಲ್ಲ. ಮಸಿ ಹಿಡಿದ ಗೋಡೆಯಲ್ಲಿ ಸುಣ್ಣದ ಪ್ಯಾಚುಗಳು ಇಣುಕುತ್ತಿವೆ.
`ನಾಳೆ ಹೋಗೋಣವಾ?, ಭಾನುವಾರ ಬನ್ನೇರುಘಟ್ಟ ರಸ್ತೆಯಲ್ಲಿ ರಶ್ ಇರಲ್ಲ’ ವಾಸುದೇವನ್ ಮತ್ತೆ ತನ್ನ ಕರಿಮುಖದೊಳಗಣ ಬಿಳಿಗಣ್ಣನ್ನು ಡೈನಾಸೋರಿನ ನಾಲಗೆ ಥರ ಹೊರಗೆ ಚಾಚುತ್ತ ಕೇಳಿದಾಗ ಸುಧಾಕರ ಒಮ್ಮೆಲೆ ನಡುಗಿದ.
ಆದರೆ ಈ ಒಪ್ಪಂದಕ್ಕೆ ಬೆಲೆ ಇದೆ. ವಿನಾಯಕನಿಗೂ ಈ ಬೆಲೆ ಗೊತ್ತಿದೆ.
ನಾಳೆ ಇವನ ಜೊತೆಗೆ ವ್ಯವಹಾರ ಮಾಡಲೇಬೇಕು. ಯಾವತ್ತಾದರೂ ದುಡ್ಡು ಮಾಡುವುದು ಅಂದರೆ ಅಷ್ಟು ಸುಲಭವಾ…… ಇವನ ಜೊತೆ ಟೀ ಕುಡೀತ ಮಾತಾಡೋದೇ ಎಷ್ಟೋ ವಾಸಿ… ಸ್ವಲ್ಪ ಇಂಟಿಮಸಿ ಬೆಳೆಸ್ಕೋಬೇಕು ಎಂದು ಸುಧಾಕರ ಸುಧಾರಿಸಿಕೊಂಡು ನಸುನಕ್ಕ.
ವೆಂಕಟೇಶ್ ಎಂಬ ಹೆಸರಿನ ವಿನಾಯಕ ಬಂದೇ ಬರ್‍ತಾನೆ….. ಅವನ ಜೊತೆಗೆ ಬನ್ನೇರುಘಟ್ಟ ರಸ್ತೆಗೆ ಹೋಗಿ ಅಲ್ಲಿಂದ ಆ ಮೂರನೇ ತಿರುವಿನಲ್ಲಿ ಎಡಕ್ಕೆ ವಾಲಿಕೊಂಡು ಮೂರು ಕಿಲೋಮೀಟರ್ ಹೋಗುತ್ತೇವೆ. ಎಡಗಡೆ ಆಲದ ಮರ ಸಿಕ್ಕಿದ ಕೂಡಲೇ ಇರುವ ಗೋಡೌನ್‌ನಲ್ಲಿ ಇರುವ ಅನಧಿಕೃತ ಔಷಧಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ. ಆಮೇಲೆ ಕದಿರೇನಹಳ್ಳಿಯ ಆ ಕ್ರಾಸಿನಲ್ಲಿ ಇರೋ ಆ ಹೆಂಗಸಿನ ಮನೆ ಹುಡುಕಿ ಅವಳ ಮನೆಗೆ ಯಾರ್‍ಯಾರು ಬರ್‍ತಿದಾರೆ ಎಂಬುದನ್ನು ಪತ್ತೆ ಹಚ್ಚುತ್ತೇವೆ. ಆಮೇಲೆ ಕನಿಂಗ್‌ಹ್ಯಾಮ್‌ರಸ್ತೆಯ ಆ ಮೂಲೆಯಲ್ಲಿರೋ ಆ ಕಟ್ಟಡದ ಮೂರನೇ ಮಹಡಿಯಲ್ಲಿ ಇರೋ ಆಫೀಸಿಗೆ ಹೋಗಿ ಅಲ್ಲಿ ಇರುವ ಆ ಖದೀಮನ ಚಹರೆಯನ್ನು ಗುರುತು ಹಿಡಿಯುತ್ತೇವೆ. ಅಲ್ಲಿಂದ ಆಲಿ ಆಸ್ಕರ್ ರಸ್ತೆಯಲ್ಲಿರೋ ಅವನ ಮನೆಗೆ ಒಮ್ಮೆ ಗಸ್ತು ಹಾಕಿ ಅಲ್ಲಿಗೆ ಬರೋ ಕಾರುಗಳ ನಂಬರ್ ಪಟ್ಟಿ ಮಾಡುತ್ತೇವೆ. ಅಲ್ಲಿಂದ…..
ನಾನು ನಾಳೆ ಬೆಳಗ್ಗೆಯೇ ಅವಳ ಮನೆಗೆ ಹೋಗಿ ನನ್ನೆಲ್ಲ ಜೀವಕೋಶಗಳನ್ನೂ ಚೆಲ್ಲುತ್ತೇನೆ. ಅವಳು ನನ್ನ ಅಣುರೇಣುಗಳಲ್ಲಿ ಪ್ರವೇಶಿಸುತ್ತಾಳೆ. ಹೊರಗೆ ಗಡಿಬಿಡಿ ಜನ ಕುದಿಯುತ್ತ ಸಿಟಿಬಸ್‌ಕಾಯುತ್ತಿರುತ್ತಾರೆ. ನಾನು ಮಾತ್ರ ತಣ್ಣಗೆ ಮುಲುಗುತ್ತೇನೆ.
ಯಾರೂ ಈ ಜಗತ್ತಿನಲ್ಲಿ ಅವಳ ಹಾಗೆ ಇಲ್ಲ.
ಈ ತನಿಖೆ, ಈ ದಾಳಿ ಯಾಕಾಗಿ ಎಂದು ಸುಧಾಕರ ತನ್ನನ್ನು ತಾನೇ ಹಲವು ಬಾರಿ ಪ್ರಶ್ನಿಸಿಕೊಂಡಿದ್ದೂ ಇದೆ. ವಾಸುದೇವನ್ ತಣ್ಣಗೆ ಕೂತು ಯಾವುದೋ ಮಲೆಯಾಳಿ ಮ್ಯಾಗಜಿನ್ ತಿರುವಿ ಹಾಕುತ್ತಿದ್ದಾನೆ. ಇಂಗ್ಲಿಶ್ ಗ್ರಾಮರ್ ಎಂದರೆ ಗಂಟೆಗಟ್ಟಳೆ ಕೊರೆಯುವ ಈತನ ಬದುಕಿನ ವೈಖರಿಯೇ ವಿಚಿತ್ರ ಎಂದು ಸುಧಾಕರನಿಗೆ ಹಲವು ಸಲ ಅನ್ನಿಸಿದೆ. ಆದರೆ ಬೆಂಗಳೂರಿನ ಕೆಲವು ಕ್ರೈಮ್ ಪತ್ತೆ ಹಚ್ಚುವುದರಲ್ಲಿ ವಾಸುದೇವನ್ ನಿಷ್ಣಾತ.
ವಾಸುದೇವನ್ ಕಪಾಟಿನಲ್ಲಿ ಇರೋದೆಲ್ಲ ಯೆಲ್ಲೋಪೇಜ್‌ಗಳೇ. ಗೆಟ್‌ಇಟ್, ಡೆಕ್ಕನ್, ಒಂದಲ್ಲ, ಎರಡಲ್ಲ… ಈ ಮನುಷ್ಯನಿಗೆ ಡಿಕ್ಷನರಿಗಳೇ ಥ್ರಿಲ್ ಕೊಡುತ್ತವೆ ಎಂದಮೇಲೆ ಜೆಫ್ರಿ ಆರ್ಚರ್ ಖಂಡಿತ ಮೂರ್ಛೆ ಬೀಳಿಸ್ತಾನೆ ಅನ್ನಿಸುತ್ತೆ.
ಅಥವಾ ಸೀದಾ ಸಂಗೀತ ಮಾಸ್ಟರರ ಬಳಿ ಹೋಗಿ ಗಿಟಾರ್ ಪ್ರಾಕ್ಟೀಸ್ ಮಾಡಲೆ ಎಂದು ಸುಧಾಕರ ಹಾಗೇ ಗೋಡೆಗೆ ಒರಗಿಕೊಂಡೇ ಯೋಚಿಸಿದ. ಆದರೆ ಇದೆಲ್ಲ ಒಂಥರ ಇರ್ರಿವರ್ಸಿಬಲ್ ರಿಯಾಕ್ಷನ್. ಈ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡ ಕೂಡಲೇ….. ಮತ್ತೆ ಮತ್ತೆ ಅವಳ ಕೂಡುವ ಮತ್ತು ಬರುವ, ನಿದ್ದೆಗೆಡಿಸುವ, ಉಸಿರೆಲ್ಲವೂ ಹಬೆಯಾಗಿ ಹೋಗುವ ಎಂಥ ಸ್ಥಿತಿಯದು ಎಂದೆಲ್ಲ ಮತ್ತೆ ಯೋಚಿಸುತ್ತಲೇ ಇದ್ದ ಸುಧಾಕರನ ಮುಂದೆ ವಾಸುದೇವನ್ ದೊಡ್ಡ ಲೋಟದಲ್ಲಿ ಚಹಾ ತಂದಿಟ್ಟ.
`ಹಾಗಾದ್ರೆ ನಾವೆಲ್ಲರೂ ಹೋಗೋದ ಅಲ್ಲಿಗೆ? ವೆಂಕಟೇಶ್ ಬರ್‍ತಾರಾ? ನಾನು ಇವತ್ತು ಇಲ್ಲಿ ಕುಕಿಂಗ್ ಮಾಡೋದೇ ಬೇಡವಾ?’ ವಾಸುದೇವನ್ ಪ್ರಶ್ನೆಗಳಿಗೆ ಉತ್ತರ ಕೊಡದಿದ್ದರೂ ನಡೆಯುತ್ತದೆ. ಎಷ್ಟು ಸಲ ನಾವು ಮೂವರೂ ಈ ಬಗ್ಗೆ ಹೋಟೆಲ್‌ಗಳಿಗೆ ಹೋಗಿ ಗೋಬಿ ಮಂಚೂರಿ ಕಡಿದಿಲ್ಲ? ಎಷ್ಟು ಸಲ ರಾಜಾಜಿನಗರದ ಆ ಮರಳುಗಾಡಿನ ವಿನ್ಯಾಸದ ಪುಟ್ಟ ಬಾರಿನಲ್ಲಿ ತಿರುಗಣಿ ಮೆಟ್ಟಿಲು ಹತ್ತಿ ಕೂತು ಅಚ್ಚ ಮಳೆಯ ನಡುವೆ ಪ್ಲಾಟ್ ಹಾಕಿಲ್ಲ……. ಮತ್ತೆ ವಾಸುದೇವನ್ ಕೇಳುವ ಈ ಪ್ರಶ್ನೆಗಳ ಹಿಂದೆ ಮತ್ತೇನಾದರೂ ಅರ್ಥ ಇದೆಯೆ? ಅಥವಾ ವಿನಾಯಕನ ಬಗ್ಗೆ ಅವನಿಗೆ ಏನಾದ್ರೂ ಅನುಮಾನ ಬಂದಿದೆಯೆ?
ಹೆಸರುಗಳಲ್ಲಿ ಯಾವುದೇ ಅರ್ಥವೂ ಇಲ್ಲ ಎಂದು ಸುಧಾಕರನಿಗೆ ಈ ಮೊದಲೇ ಅನ್ನಿಸಿದೆ. ಈ ವೆಂಕಟೇಶ್ ಕೆಲವೇ ತಿಂಗಳುಗಳ ಹಿಂದೆ ರಾಮನಾಥನಾಗಿ ನನ್ನ ಜೊತೆಗೆ ಕಾಮರಾಜ್ ರಸ್ತೆಯ ಆ ವಜ್ರಾಭರಣದ ಅಂಗಡಿಗೆ ಬಂದಿದ್ದನಲ್ಲವೆ? ಇವತ್ತು ವೆಂಕಟೇಶ. ನಾಳೆ ಸುಬ್ಬಯ್ಯ ಆಗಬಹುದು.
ಸುಧಾಕರ ಬಿಸಿ ಚಹಾವನ್ನು ಹೀರತೊಡಗುತ್ತಿದ್ದಂತೆ ವಾಸುದೇವನ್ ಪಕ್ಕದ ಬಾತ್‌ರೂಮಿಗೆ ಹೋಗಿ ಸ್ನಾನಕ್ಕೆ ಇಳಿದ. ಯಾವುದೋ ಮಲೆಯಾಳಿ ಹಾಡಿನ ಗುನುಗಿನಲ್ಲಿದ್ದಾನೆ. ಇವತ್ತು ಕನಿಷ್ಠ ಐನೂರು ರೂಪಾಯಿ ಕೀಳುತ್ತಾನೆ ಅನ್ನಿಸುತ್ತೆ.
ತನ್ನ ಹೆಸರು, ಕುಲ ಗೋತ್ರ ಎಲ್ಲವೂ ಬದಲಾಗದ ಸ್ಥಿತಿಗೆ ಬಂದಿವೆ.
ತಾನು ಗೊತ್ತುಗುರಿಯಿಲ್ಲದೆ ಕಂಡಕಂಡ ಕೆಲಸ ಮಾಡುತ್ತಿದ್ದೇನೆ. ಮೆಡಿಕಲ್ ರೆಪ್ರೆಸೆಂಟಟಿವ್ ಕೂಡಾ ಆಗಿದ್ದ ದಿನಗಳು ಮರೆತೇ ಹೋಗಿವೆ. ಹೂವಿನ ಅಂಗಡಿಯಲ್ಲಿ ಮ್ಯಾನೇಜರ್; ಪೆಟ್ರೋಲ್ ಬಂಕ್ ಆಪರೇಟರ್ ; ಸಿನೆಮಾ ಪತ್ರಕರ್ತ ; ರಿಯಲ್ ಎಸ್ಟೇಟ್ ವ್ಯವಹಾರ…. ಬೆಂಗಳೂರಿಗೆ ಬೇಕಾದ ಎಲ್ಲ ವೇಷಗಳನ್ನೂ ಧರಿಸಿಯiಗಿದೆ.
ಯಾಕೋ ವಾಸುದೇವನ್ ಥರ ವೈವಿಧ್ಯಮಯ ವ್ಯಕ್ತಿ ಆಗಲೇ ಇಲ್ಲ.
ಬೆಂಗಳೂರಿಗೆ ಬಂದ ಸಾವಿರಾರು ಬಡಪಾಯಿಗಳ ಹಾಗೆ ಫುಟ್‌ಪಾತ್ ಸುತ್ತಿ ಬಳಸಿದ್ದೇನೆ.
ಆದರೆ ವಾಸುದೇವನ್ ಥರ ಬೆಂಗಳೂರಿನ ಅಂಡರ್‌ವರ್ಲ್ಡ್ ಪರಿಚಯವಾಗಲಿಲ್ಲ.
ವಾಲ್‌ರೈಟಿಂಗ್ ಮಾಡಿ ,ಪೋಸ್ಟರ್ ಹಚ್ಚಿ ಊರಿನ ಗೋಡೆಗಳನ್ನೆಲ್ಲ ಅಳೆದಿದ್ದೇನೆ. ಕಾಂಪೌಂಡ್‌ಗಳನ್ನು ಸುತ್ತಿದ್ದೇನೆ.
ಆದರೂ ವಾಸುದೇವನ್ ಥರ ಓಣಿಗಳಲ್ಲಿ ನಡೆಯೋ ದಂಧೆಗಳ ಪರಿಚಯ ಆಗಲೇ ಇಲ್ಲ. ನಡುರಾತ್ರಿಯಲ್ಲಿ ಗಾಂಧಿ ಬಜಾರಿನಲ್ಲಿ ಸುತ್ತಿದ್ದರೂ ಅಲ್ಲಿ ನಡೆದ ಪಾತಕಿಗಳ ಸಭೆ ನನಗೆ ತಿಳಿಯಲಿಲ್ಲ.
ಒಂದು ದಿನ ನ್ಯೂಸ್‌ಪ್ರಿಂಟ್ ರೋಲನ್ನು ರೂಮಿಗೆ ತಂದು ಬಿಚ್ಚಿ ಬರೆದಿದ್ದೆ…….
ಯೂ ಲಿಬರೇಟ್ ಯುವರ್‌ಸೆಲ್ಫ್ ಎಂದು ಬರೆದ ಆ ಮಾರಗಲ ಕಾವ್ಯದ ಕಾಗದ ಇನ್ನೂ ಹಳೆ ಫೈಲಿನಲ್ಲಿ ಉಳಿದುಕೊಂಡಿದೆ. ಬಾಲ್‌ಪೆನ್‌ನಿಂದ ಬರೆದ ಮೇಲೆ ಅದನ್ನು ತೆಳು ಬಣ್ಣಗಳ ಕ್ರೇಯಾನ್ ಪೇಸ್ಟೆಲ್‌ಗಳಿಂದ ತೀಡಿ ಬ್ಯಾಕ್‌ಗ್ರೌಂಡ್ ಕೊಟ್ಟಿದ್ದೆ. ಆ ಹುಡುಗಿ ಲಿಬರೇಟ್ ಆಗಿ ಆಸ್ಟ್ರೇಲಿಯಾದಲ್ಲಿ ಇದಾಳೆ. ಅವಳ ಹೆಸರೇನಾಗಿತ್ತೋ…
ರಾಜಶ್ರೀ…..
ಅವಳ ಮಡಿಲಲ್ಲಿ ಕಾಂಗರೂ ಥರ ಒಂದು ಮಗು ಮಲಗಿರಬಹುದು.
ಅವಳು ಪಕ್ಕದ ತೋಟದಲ್ಲಿ ನಿಂತುಕೊಂಡು ಅವಳಪ್ಪನ ಹತ್ತಿರ ಮಾತನಾಡುತ್ತಿದ್ದ ಹಾಗೆ ತಾನೂ ನೆಲಗಡಲೆ ಹೊಲಕ್ಕೆ ನೀರು ಹನಿಸುತ್ತ ನಿಂತಿದ್ದೆ. ಕಾಲೇಜಿನಲ್ಲಿ
ಅವಳ ಜೊತೆಗೆ ಕನ್ನಡ ಲಾಂಗ್ವೇಜ್ ಪೇಪರಿನಲ್ಲಿ ಳಿಗೂ ನನಗೂ ಕಾಂಪಿಟಿಶನ್. ಕೊನೆಗೆ ಅವಳು ಸೋತಿದ್ದಳು.
ಹದಿನೈದು ವರ್ಷಗಳ ಆ ನೆನಪು ಈಗ ಯಾಕೆ ಕಾಡಬೇಕು… ಅದರಲ್ಲೂ ಇಲ್ಲಿ ಸುಷ್ಮಾ ಇದ್ದಾಳೆ. ನಾಳೆಯಾದರೆ ಸಾಕು, ನಾನು ಇವಳ ಮಡಿಲಿನಲ್ಲಿ ಸೇರಿಕೊಂಡು ಹಾಗೇ ಮಲಗಿಬಿಡಬಹುದು. ಯಾರೂ ಏನೂ ಹೇಳಲ್ಲ.
ಇದೊಂದು ಆಪರೇಶನ್ ಮುಗಿದರೆ ಸಾಕು.
ನಾನು ಮತ್ತೆ ಏನೂ ಸಂಪಾದನೆ ಮಾಡಬೇಕಿಲ್ಲ. ಸುಧಾಕರ ಟೀ ಮುಗಿಸೋದಕ್ಕೂ ವೆಂಕಟೇಶ್ ಉರುಫ್ ವಿನಾಯಕ ಬರೋದಕ್ಕೂ ಸರಿ ಹೋಯ್ತು. ವಾಸುದೇವನ್ ಈಗ ಮಿರಿ ಮಿರಿ ಮಿಂಚುತ್ತ ಬಂದು ಅದೇ ಬಿಳಿ ಪಂಚೆಯೊಳಗೆ ಸೇರಿಕೊಂಡ. ನಾವು ಮೂವರೂ ಸೇರಿ ಯಾವುದೋ ವಿಚಿತ್ರ ಮಾಟ ಮಾಡಿಸಲು ಹೋಗುತ್ತಿದ್ದೇವೇನೋ ಎಂದು ಸುಧಾಕರನಿಗೆ ಈಗ ಅನ್ನಿಸಿ ಕೊಂಚ ನಗುವೂ ಬಂತು. ಆದರೆ ಸಮಾಜಕ್ಕೇ ಮಾಟ ಮಾಡಸ್ತಾ ಇದೀವಲ್ಲ ಎಂದೂ ಅನ್ನಿಸಿ ವಿನಾಯಕನನ್ನೇ ನೋಡುತ್ತ `ವೆಂಕಟೇಶ್, ವಾಸುದೇವನ್ ಡಿಕ್ಷನರಿಗಳನ್ನ ಎಷ್ಟು ಚೆನ್ನಾಗಿ ಓದ್ತಾನೆ ಗೊತ್ತ?’ ಎಂದ. ವೆಂಕಟೇಶನಾದ ವಿನಾಯಕ `ಹೌದಾ… ವಾಸುದೇವನ್, ನೀವು ಇಂಗ್ಲೀಶ್ ಭಾಷೆಯನ್ನೇ ಬೈಹಾರ್ಟ್ ಮಾಡ್ಕೊಂಡ ಹಾಗಿದೆ’ ಎಂದು ನಗತೊಡಗಿದ. ಆದರೆ ವಾಸುದೇವನ್ ನಗಲಿಲ್ಲ. ನಾನು ಈಗ ಐದು ನಿಮಿಷ ಪೂಜೆ ಮುಗಿಸಿ ಬರುವೆ ಎಂದು ಅಲ್ಲೇ ಕುಳಿತ.
ಸುಧಾಕರ, ವಿನಾಯಕ / ವೆಂಕಟೇಶ್ ಇಬ್ಬರೂ ಹೆಚ್ಚು ಮಾತಾಡುವ ಗೋಜಿಗೆ ಹೋಗದೆ ಚಾಪೆಯುದ್ದಕ್ಕೂ ಕಾಲು ಚಾಚಿ ಕೂತರು. ವಿನಾಯಕ / ವೆಂಕಟೇಶ್ ಅಲ್ಲಿದ್ದ ಆಕ್ಸ್‌ಫರ್ಡ್ ಲರ್ನರ್ಸ್ ಡಿಕ್ಷನರಿಯ ಪುಟ ತಿರುವುತ್ತ ಕೂತ. ಸುಧಾಕರನೂ ವಿಧಿಯಿಲ್ಲದೆ ವಾಸುದೇವನ್ ಪೂಜಿಸುತ್ತಿದ್ದ ಚಿತ್ರಪಟಗಳನ್ನು ನೋಡತೊಡಗಿದ.
————-
ಬೆಂಗಳೂರಿನ ಮೂಗಿನ ಹೊಳ್ಳೆಯ ಹಾಗೆ ಬನ್ನೇರುಘಟ್ಟದಲ್ಲಿ ಹೊಗೆಯೇಳುತ್ತ್ತಿದ್ದ ಆ ಸಮಯದಲ್ಲಿ ಮೂವರೂ ಸ್ಕೂಟರ್, ಬೈಕ್ ಸವಾರಿ ಮಾಡಿ ಆ ತಿರುವಿನ ಹತ್ತಿರ ಬಂದರು. ಅಲ್ಲಿ ಯಾರಿಗೂ ಅನುಮಾನ ಮೂಡದ ಹಾಗೆ ಸ್ಕೂಟರ್ ಕೆಟ್ಟುಹೋದ ಹಾಗೆ ವಿನಾಯಕ / ವೆಂಕಟೇಶ್ ನಿಂತುಕೊಂಡ. ಸುಧಾಕರ ಮತ್ತು ವಾಸುದೇವನ್ ಬೈಕ್‌ನಿಂದ ಇಳಿದು ನಿಧಾನವಾಗಿ ಅತ್ತ ಇತ್ತ ನಡೆಯತೊಡಗಿದರು. ಆ ಗೋದಾಮಿನ ಹತ್ತಿರದಲ್ಲೇ ಒಬ್ಬ ವಾಚ್‌ಮನ್ ಇದಾನೆ ಎಂಬುದು ಗೊತ್ತಾಗಿ ಇಬ್ಬರೂ ಸುಮ್ಮನೆ ವಾಕಿಂಗ್ ಮಾಡಿದವರಂತೆ ನಟಿಸಿದರು.
ಅಲ್ಲಿಂದ ಮೂವರೂ ಕದಿರೇನಹಳ್ಳಿಗೆ ಬಂದರು. ರೊಯರೊಯಗುಡುವ ಲಾರಿಗಳನ್ನು ದಾಟಿ ಆ ಇಳುಕಲಿನಲ್ಲಿ ಬರುತ್ತಿದ್ದಂತೆ ಸುಧಾಕರನಿಗೆ ಹುಟ್ಟೂರಿನ ಹಾದಿ ನೆನಪಾಯಿತು. ಎಂಥ ಸುಮಧುರ ಮಣ್ಣಿನ ವಾಸನೆ ಅದಾಗಿತ್ತಲ್ಲ….. ಹಾಗೆ ಏರಿಯಿಂದ ಇಳೀತಿದ್ದ ಹಾಗಯೇ ಇಕ್ಕೆಲಗಳಲ್ಲೂ ಕೆರೆ. ಜೊಂಡುಬೆಳೆದ ಆ ಕೆರೆಗಳಲ್ಲಿ ಎಮ್ಮೆಗಳು ಹ್ಯಾಗೆ ಮುಳುಗಿ ಕೂತಿದ್ದವು. ಆಮೇಲೆ ಬಿದ್ದುಹೋದ ಮಾವಿನ ಮರದ ಬೊಡ್ಡೆ ದಾಟಿ ಬಂದರೆ ಊರಿನ ಕ್ರಾಸ್ ಸಿಗುತ್ತದೆ. ಅಲ್ಲಿ ಕುರಿತಲೆ ಮಾವಿನ ಹಣ್ಣಿನ ಮರವಿದೆ. ಕುರಿ ತಲೆಯ ಹಾಗೆ ದೊಡ್ಡ ಗಾತ್ರ. ಒಳಗೆ ಪುಟ್ಟ ಓಟೆ. ಯಾರೋ ಕಸಿ ಮಾಡಿರಲೂಬಹುದು. ಆದರೆ ಆ ಮರ ಮಾತ್ರ ಈಗಲೂ ಊರಿಗೆ ಬಂದವರಿಗೆ ಧುತ್ತನೆ ಕಾಣಿಸಿಕೊಳ್ಳುತ್ತದೆ. ಆ ಮರ ಅಲ್ಲಿಂದ ಆರನೇ ಮನೆಯಲ್ಲಿದ್ದ ತನ್ನ ಅಜ್ಜನಿಗೆ ಸೇರಿದ್ದು.
ಅಲ್ಲಿದ್ದಸಣ್ಣ ಕೆರೆಯಲ್ಲಿ ಅಡುಗೆಮನೆಗೆ ಬೇಕಾದ ಜೊಂಡು ಹುಲುಸಾಗಿ ಬೆಳೆದಿರುತ್ತಿತ್ತು. ಮಾವಿನ ಮರದಲ್ಲಿ ಕಪ್ಪುಹಾರುಬೆಕ್ಕು ಆಗಾಗ್ಗೆ ಕಾಣಿಸಿಕೊಂಡು ……..
ಬಿಳಿಪಟ್ಟಿ ಇಲ್ಲದ ಹಂಪನ್ನು ಹಠಾತ್ತಾಗಿ ನೋಡಿದ ಸುಧಾಕರ ಬ್ರೇಕ್‌ಹಾಕಿದ. ಮತ್ತೆ ಟ್ರಾಫಿಕ್ ಎಂಬ ಗೋಜಲಿನಲ್ಲಿ ಎಲ್ಲರೂ ಸಿಲುಕಿದ್ದಾರೆ.
ಆ ಮಾವಿನ ಮರ ಹತ್ತಲಾಗದೆ ಊರಿನವರೆಲ್ಲ ಮಾವು ಬೀಳಲಿ ಎಂದು ಕಾಯುತ್ತಾರೆ. ಬೇಸಗೆ ಮಳೆಯ ಹೊತ್ತಿನಲ್ಲಿ ಬ್ರಾಹ್ಮಣ – ಹೊಲೆಯ ಭೇದಭಾವವಿಲ್ಲದೆ ಎಲ್ಲರೂ ಕತ್ತೆತ್ತಿ ನಿಲ್ಲುತ್ತಾರೆ. ಗಾಳಿ ಬೀಸಿದ ಕೂಡಲೇ ತೊಟ್ಟು ಕಳಚಿ ಬೀಳುವ ಹಣ್ಣಿಗೆ ಕೈ ಹಾಕಲು ಓಡುತ್ತಾರೆ. ಪಕ್ಕದ ಅಡಕೆ ತೋಟದಲ್ಲೂ ಕೆಲವು ಕಾಯುತ್ತಾರೆ. ಅಷ್ಟಿಷ್ಟು ಸೀಳುಬಿಟ್ಟರೂ ಪರವಾಯಿಲ್ಲ, ಕುರಿತಲೆ ಎಂದರೆ ಕುರಿತಲೆಯೇ.
ಬಹುಶಃ ಈಗಲೂ ಯಾರದೋ ತಲೆಗೆ ಏಟು ಹಾಕಲು ಹೋಗುತ್ತಿರೋದಕ್ಕೆ ಇದೆಲ್ಲ ನೆನಪಾಗುತ್ತಿದೆಯೆ ಎಂದು ಸುಧಾಕರ ತನ್ನನ್ನೇ ಕೇಳಿಕೊಳ್ಳುತ್ತ ಲಾರಿಗಳ ನಡುವೆಯೇ ಬೈಕನ್ನು ನುಗ್ಗಿಸತೊಡಗಿದ. ಈ ತಲೆಯನ್ನು ಉರುಳಿಸಿದರೆ ತನಗೆಷ್ಟು ಸಿಗಬಹುದು ಎಂದು ಲೆಕ್ಕಾಚಾರ ಹಾಕುತ್ತಲೇ ತಲೆ ಹಾಳಾಗಿಹೋಗಿದೆ. ಇನ್ನೂ ಹದಿನಾಲ್ಕು ಸೈಟ್‌ಗಳಲ್ಲಿ ವೀಕ್ಷಣೆ ನಡೆಸಬೇಕು. ಯಾರ್‍ಯಾರು ಎಲ್ಲೆಲ್ಲಿದ್ದಾರೆ, ಎಲ್ಲೆಲ್ಲಿ ಪುತು ಪುತು ಅಡಗಿಕೊಂಡಿದ್ದಾರೆ, ಅವರನ್ನೆಲ್ಲ ಕುರಿತಲೆ ಥರ ತೊಟ್ಟು ಕಳಚಿಟ್ಟುಬಿಡಬೇಕು. ಈ ಬೆಂಗಳೂರಿನಲ್ಲಿ ಎಂಥೆಂಥ ಜನರಿದ್ದಾರೆ… ಎಂಥೆಂಥ ವ್ಯವಹಾರ ಮಾಡುತ್ತಾರೆ. ಪತ್ರಿಕೆಗಳಲ್ಲಿ ಎಂಥೆಂಥ ಕೆಟ್ಟ ಸುದ್ದಿಗಳು ಬಂದರೂ ಜನ ಹ್ಯಾಗೆ ಮಾಲುಗಳಲ್ಲಿ, ಥಿಯೇಟರುಗಳಲ್ಲಿ, ಹೋಟೆಲ್‌ಗಳಲ್ಲಿ, ದರ್ಶಿನಿಗಳಲ್ಲಿ ಖುಷಿಯಾಗಿ ಮಾತಾಡಿಕೊಂಡಿರುತ್ತಾರೆ.
ಕದಿರೇನಹಳ್ಳಿಯ ಆ ಮನೆಯೂ ಮುಗಿಯಿತು. ಕನಿಂಗ್‌ಹ್ಯಾಮ್ ರಸ್ತೆಯ ಕಚೇರಿಯೂ ಮುಗಿಯಿತು. ಮರೆತೇಹೋಗಿದ್ದ ಅಲಸೂರು ರಸ್ತೆಯ ಆ ಅಪಾರ್ಟ್‌ಮೆಂಟ್ ತನಿಖೆಯೂ ಮುಗಿಯಿತು. ಆಲಿ ಆಸ್ಕರ್ ರಸ್ತೆಯಲ್ಲೂ ಸ್ಕೂಟರ್ ಕೆಟ್ಟಿದ್ದಾಯಿತು. ಇನ್ನು ದಾಳಿ.
————-
ಅದೇ ಕ್ಯಾಂಟೀನಿನಲ್ಲಿ ಅವಳ ಜೊತೆ ಮಿಸಾಳಭಾಜಿ ತಿನ್ನುತ್ತ ಕೂತುಕೊಂಡಿದ್ದು ನೆನಪಾಗಿ ಸುಧಾಕರನಿಗೆ ಕಣ್ಣುಕ್ಕಿತು. ಯಾಕೆ ಇನ್ನೂ ಅವಳ ನೆನಪೇ ಈಗಲೂ ಎದೆಯೊಳಗಿನ ಗೋಡೆಗಳನ್ನು ತಾಕುತ್ತಿದೆ ಎಂದು ಸುಧಾಕರ ಮತ್ತೆ ಮತ್ತೆ ತನ್ನನ್ನೇ ಕೇಳಿಕೊಳ್ಳುತ್ತ ಆಮ್ಲೆಟ್ ದೋಸೆಯನ್ನು ಬಾಯಿಗಿಟ್ಟುಕೊಂಡ. ಹೌದಲ್ಲ ಮೊನ್ನೆ ಅವಳ ಜೊತೆ ಉಳ್ಳಾಲ ಬೀಚಿನ ರುದ್ರರಮಣೀಯ ಕೊರಕಲುಗಳನ್ನು ನಿರುಕಿಸುತ್ತ ನಡೆದದ್ದೂ ನೆನಪಾಗುತ್ತಿದೆ. ಅವಳ ಜೊತೆ ಅವತ್ತು ತಣ್ಣೀರುಬಾವಿಯಲ್ಲಿ ಹಡಗು ಒಡೆಯುವುದನ್ನೇ ನೋಡುತ್ತ ಕೂತ ಗಳಿಗೆಗಳೂ ನೆನಪಾಗುತ್ತಿವೆ. ಅವಳು ಇಲ್ಲಿ ಇದ್ದಿದ್ದರೆ ಎಷ್ಟು ಛಂದ ಅವಳ ಭುಜ ಹಿಡಿದು ಮಾತಾಡಬಹುದಿತ್ತು ಎಂದು ಸುಧಾಕರ ತಣ್ಣಗೆ ನೆನಪಿಸಿಕೊಳ್ಳುತ್ತ ….
ಆಮ್ಲೆಟ್‌ದೋಸೆಯನ್ನು ಕಟ್ ಮಾಡತೊಡಗಿದ. ಹೊರಗೆ ಮಳೆ ರಪರಪ ಜಡಿಯುತ್ತಿದೆ. ಮಂಗಳೂರಿನ ಎಲ್ಲ ಕಟ್ಟಡಗಳೂ ಒದ್ದೆಯಾಗಿ ಗೋಡೆ, ಕಾಂಪೌಂಡುಗಳ ಮೇಲೆ ಹಸಿರು ಹಾವಸೆ ಬೆಳೆದಿದೆ. ಎಷ್ಟೋ ಓಣಿಗಳಲ್ಲಿ ನಡೆಯುವುದೆಂದರೆ ಜಾರುವುದನ್ನು ತಪ್ಪಿಸಿಕೊಳ್ಳುವ ಆಟವಾಗಿದೆ. ಅವಳ ಮನೆಗೆ ಹೋಗುವಾಗ ತಾನು ಹಾಗೆ ಜಾರಿದಾಗ ಅವಳ ಹ್ಯಾಗೆ ತನ್ನ ರಟ್ಟೆ ಹಿಡಿದು ಎಬ್ಬಿಸಿದ್ದಳು. ಮಳೆಯ ಹನಿಗಳ ನಡುವೆ ಅವಳ ನಗುವಿನಲ್ಲಿ ಎಂಥ ಹದವಿತ್ತು….. ಅವಳ ಒದ್ದೆ ಚೂಡಿದಾರದಲ್ಲಿ ಎಂಥ ಆರ್ದ್ರತೆಯಿತ್ತು…. ಅವಳ ಹಣೆಯಲ್ಲಿ ಆ ಅರಶಿನ ಬಣ್ಣದ ಬಿಂದಿ ಹ್ಯಾಗೆ ಮೆದು ಹಾಸಿಗೆಯ ವೆಲ್ವೆಟ್ ಹಾಸಿನ ಮೆದು ಸ್ಪರ್ಶವನ್ನು ನೆನಪಿಸುತ್ತಿತ್ತು……
ಸುಧಾಕರ ಹಾಗೆಯೇ ನೆನಪಿಗೆ ಜಾರಿದ. ಅಲ್ಲಿ ಹಲವರು ತನಗೆಂದೂ ಅರ್ಥವಾಗದ ತುಳು ಭಾಷೆಯಲ್ಲಿ ಮಾತನಾಡುತ್ತ ಪನರ್ಪುಳಿ ಕುಡಿಯುತ್ತಿದ್ದರು. ಯಾರಿಗೂ ಅವಳು ಯಾರೆಂದು ಗೊತ್ತಾಗುವ ಚಾನ್ಸೇ ಇಲ್ಲ. ನನಗಾದರೂ ಅವಳ ಪರಿಚಯ ಅಷ್ಟಿದೆ… ಎಲ್ಲೋ ಒಂದು ದಿನ ಶಿರಸಿಯ ಬಸ್‌ನಿಲ್ದಾಣದಲ್ಲಿ ಕಾಯುತ್ತ ಕುಳಿತ ನನಗೆ ಸಿಕ್ಕಿದ ಆ ಹುಡುಗಿ ಯಾಕೆ ಇವರಿಗೆಲ್ಲ ನೆನಪಾಗಬೇಕು…….
ಸುಧಾಕರ ಒಮ್ಮೆ ತನ್ನೊಳಗೇ ಸಣ್ಣಗೆ ನಗುತ್ತ ಪನರ್ಪುಳಿಯ ಇನ್ನೊಂದು ಬಾಟಲಿಗೆ ಆರ್ಡರ್ ಮಾಡಿದ. ಪಕ್ಕದ ಜ್ಯೋತಿ ಥಿಯೇಟರಿನಲ್ಲಿ ಯಾವುದಾದರೂ ಇಂಗ್ಲಿಶ್ ಸಿನೆಮಾ ನೋಡುವುದಕ್ಕೂ ಸಮಯ ಇದೆ ಎನ್ನಿಸಿತು.
ಅವಳು ಯಾರಿಗೆ ಏನಾಗಬೇಕು, ನನಗಾದರೂ ಅವಳು ಯಾರು ಅಂತ ಈಗಲೂ ಗೊತ್ತಿಲ್ಲ. ಅವಳ ಮನೆಗೆ ಹೋಗಿದ್ದು ನಿಜ, ಅವಳ ಜೊತೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಸ್ಟೂಡೆಂಟ್ ಎಂದು ಪರಿಚಯಿಸಿಕೊಂಡಿದ್ದೂ ನಿಜ. ಅವಳ ಅಮ್ಮನ ಜೊತೆ ಹರಟಿದ್ದು ನಿಜ, ಅವಳ ಅಣ್ಣನ ಹತ್ತಿರ ಚೆಸ್ ಆಡಿ ಸೋತಿದ್ದೂ ನಿಜ. ಆದರೆ ಇವೆಲ್ಲವನ್ನೂ ಮೀರಿದ ಅಪರಿಚಿತತೆ ನನ್ನ ಅವಳ ನಡುವೆ ಇದ್ದೇ ಇತ್ತಲ್ಲವೆ ಎಂದು ಸುಧಾಕರ ಮತ್ತೆ ಮತ್ತೆ ತನ್ನನ್ನೇ ಪ್ರಶ್ನಿಸಿಕೊಳ್ಳುತ್ತ….. ಆಗತಾನೇ ಕೈಗೆ ಬಂದ ಪನರ್ಪುಳಿಯ ಬಾಟಲಿ ತೆರೆದು ಗಟಗಟ ಕುಡಿದ.
ಮೆಡಿಕಲ್ ರೆಪ್ರೆಸೆಂಟೆಟಿವ್ ಎಂದಮೇಲೆ ಊರು ತಿರುಗಬೇಕು. ಎಲ್ಲ ಡಾಕ್ಟರುಗಳನ್ನು ಭೇಟಿ ಮಾಡಿ ನಿಮ್ಮ ಚೀಟೀಲಿ ನಮ್ಮ ಔಷಧಗಳನ್ನೇ ಬರೀರಿ ಎಂದು ಗೋಗರೆಯಬೇಕು. ಅವರಿಗೆ ಗಿಫ್ಟುಗಳನ್ನು ಕೊಡಬೇಕು. ಸೆಮಿನಾರ್‌ನೆಪದಲ್ಲಿ ಗುಂಡು ಹಾಕಿಸಬೇಕು. ಆಮೇಲೆ ನಾನೂ ಫ್ರೀ ಟೈಮ್ ಹುಡುಕುತ್ತ ಹೇಗಾದರೂ ಯಾರಾದರೂ ಸಿಗಬಹುದೇ ಎಂದು ಕಣ್ಣು ಹಾಯಿಸಬೇಕು. ಅದಕ್ಕಾಗಿ ನನಗೆ ಫ್ರೀ ಟೈಂ ಸಿಗೋದಾದ್ರೂ ಎಲ್ಲಿ… ಬಸ್ ಸ್ಟಾಪಿನಲ್ಲಿ….. ಸ್ಟ್ಯಾಂಡಿನಲ್ಲಿ…. ಹೋಟೆಲುಗಳಲ್ಲಿ….
ಹಾಗಂತ ಸುಷ್ಮಾ ಸಿಕ್ಕಿದ್ದು ಮಾತ್ರ ತೀರಾ ಆಕಸ್ಮಿಕವೇನೂ ಅಲ್ಲ. ಅವಳೂ ತಾನೂ ಒಂದೇ ಬಸ್ಸಿಗೆ ಕಾಯುತ್ತಿದ್ದೆವು ಅಂತ ಬಸ್ಸಿನಲ್ಲಿ ಸೀಟು ಹಿಡಿದಾಗಲೇ ಗೊತ್ತಾಗಿದ್ದು. ಅಲ್ಲೀವರೆಗೆ ಅವಳು ಕಲ್ಲಿನ ಬೆಂಚಿನಲ್ಲಿ ಕೂತು ಯಾವುದೋ ಪುಸ್ತಕ ಓದುತ್ತಿದ್ದಳು. ಅದೊಂದು ಕಥಾಸಂಕಲನ ಅಂತ ಗೊತ್ತಾಗಿದ್ದೇ ಅವಳು ಪಕ್ಕದ ಸೀಟಿಗೆ ಬಂದು ಕೂತಾಗ. ತನಗೂ ಕಥೆಗಳೆಂದರೆ ಹುಚ್ಚು. ಮನೆಯಲ್ಲಿ ಒದು ಲೈಬ್ರರೀನೇ ಇಟ್ಟುಕೊಂಡಿದೀನಿ.
ಸುಧಾಕರನಿಗೆ ಈಗ ಎಲ್ಲವೂ ನೆನಪಾಗುತ್ತಿದೆ. ಅವತ್ತು ಆತ ಮಂಗಳೂರಿನ ಸರಹದ್ದಿನ ಆ ಹಳ್ಳಿ ಥರ ಕಾಣೋ ಬಡಾವಣೆಯಲ್ಲಿ ಹೇಗೆ ಮೆತ್ತಗೆ ಕುಳಿತಿದ್ದೆ. ಅಗಲಗಲ ಮೆಟ್ಟಿಲುಗಳ ಏಣಿ ಹತ್ತುವುದಕ್ಕೇ ಭಯವಾಗಿಹೋಗಿತ್ತು. ಮೇಲೆ ಹೋದರೆ ಎಂಥ ದೊಡ್ಡ ಹಜಾರ. ಮಾರುಮಾರಿಗೆ ತೊಲೆಗಳು. ಭಾರೀ ಕಂಭಗಳ ಬೃಹತ್ ಸಾಲು. ಇದೇನು ಮನೆಯೋ, ಕಲ್ಯಾಣಮಂಟಪವೋ ಎಂದು ಸುಧಾಕರ ಅಚ್ಚರಿಪಟ್ಟಿದ್ದ.
ಆಮೇಲೆ ಅಲ್ಲಿ ಎಲ್ಲರ ಜೊತೆಗೆ ಹೊಂದಿಕೊಂಡು ಒಂದು ವಾರ ಇದ್ದ ಸುಧಾಕರ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ. ಆದರೆ ಸುಷ್ಮಾ ಯಾವಾಗಲೂ ಕೆಳಗೆ ಅಮ್ಮನ ಜೊತೆಗೇ ಇದ್ದಳಲ್ಲ…… ತಾನು ಏನಿದ್ದರೂ ಅಪರಿಚಿತ ಎಂಬ ಭಾವನೆ ಬಂದು ಯಾರೊಂದಿಗೂ ಮಾತನಾಡದೇ ಹೋದ ಸ್ಥಿತಿ ಹುಟ್ಟಿಕೊಂಡು ಹೇಗೆ ಅನಾಥನ ಹಾಗೆ ಹೊರಬಿದ್ದಿದ್ದೆ….. ತನ್ನಂಥ ಅಪರಿಚಿತನನ್ನು ಅವರೆಲ್ಲರೂ ಹೇಗೆ ನೋಡಿಕೊಂಡರಲ್ಲ ಎಂಬ ಕೃತಜ್ಞತೆ ಯಾವತ್ತೂ ಮೂಡಲಿಲ್ಲ… ಯಾಕೆಂದು ಗೊತ್ತಾಗುತ್ತಿಲ್ಲ.
————-
ಗುಳಿಗೆ ಮಾರುವ ದರಿದ್ರ ಕೆಲಸ ಬೇಡ ಎಂದು ನಿರ್ಧರಿಸಿದ್ದ ಸುಧಾಕರ ಮತ್ತೆ ಸೇರಿದ್ದು ಯಾವುದೋ ವಾರಪತ್ರಿಕೆ. ಅಲ್ಲೇ ಅವನಿಗೆ ವಾಸುದೇವನ್ ಪರಿಚಯವಾಗಿದ್ದು. ಪತ್ರಿಕೆಯ ಕಛೇರಿಗೆ ಬರುತ್ತಿದ್ದ ವಾಸುದೇವನ್ ಹೇಳ್ತಾ ಇದ್ದಿದ್ದೆಲ್ಲ ಕ್ರಿಮಿನಲ್ ಸಂಗತಿಗಳೇ. ಆ ಬಡಾವಣೆಯಲ್ಲಿ ಇಂಥಿಂಥ ರೌಡಿಗಳು ಇದ್ದಾರೆ. ಇವತ್ತು ಈತ ಜೈಲಿಗೆ ಹೋದ. ಇವತ್ತು ಜೆ ಪಿ ನಗರದಲ್ಲಿ ಸಿಕ್ಕಿದ ಮಂಜುನಾಥನನ್ನು ಹೆಣ ಮಾಡಿದವರು ಇಂಥಿಂಥವರು, ನಾಳೆ ಯಾವ ಬಡಾವಣೆಯಲ್ಲಿ ಯಾರ್‍ಯಾರು ಯಾರಿಗೆ ಲಾಂಗ್‌ಹಾಕ್ತಾರೆ….. ವಾಸುದೇವನ್ ಹೇಳುತ್ತಿರುವ ಸುದ್ದಿಗಳು ಮರುದಿನವೋ, ಮೂರ್‍ನಾಲ್ಕು ದಿನಗಳ ನಂತರವೋ ಪ್ರಮುಖ ದಿನಪತ್ರಿಕೆಗಳಲ್ಲಿ ಸೆಕೆಂಡ್ ಪೇಜ್ ಕ್ರೈಮ್ ಸುದ್ದಿಗಳಾಗಿ ಪ್ರಕಟವಾಗುತ್ತಿದ್ದುದನ್ನು ಕಂಡು ಸುಧಾಕರ ಒಮ್ಮೆ ಈ ವಾಸುದೇನ್ ಕೂಡಾ ಒಬ್ಬ ಅಂಡರ್‌ವರ್ಲ್ಡ್ ಡಾನ್ ಇರಬಹುದೇಎಂದು ಸಂಶಯಿಸಿದ್ದೂ ಇತ್ತು. ಆದರೆ ವಾಸುದೇವನ್ ಮಾತು ಬೆಂಗಳೂರಿನ ಅನಕ್ಷರಸ್ತ ಹುಡುಗರ ಹಾಗೆ. ಓಯ್ತವ್ನೆ, ಬರ್‍ತವ್ನೆ, ಔದ?, ಕೇಸ್ ಆಕ್ತಾರಾ? … ಹೀಗೆ ವಾಸುದೇವನ್ ಒಮ್ಮೆ ತೀರಾ ಅಡ್ನಾಡಿಯ ಹಾಗೆ ಕನ್ನಡ ಮಾತಾಡುವುದು ಕೇಳಿ ಸುಧಾಕರ ಈತ ಗುಗ್ಗು ಎಂದೇ ಬಗೆದಿದ್ದ. ಆದರೆ ಒಮ್ಮೆ ಕುತೂಹಲಕ್ಕೆ ವಾಸುದೇವನ್ ರೂಮಿಗೆ ಹೋದಾಗ ಅವನ ಡಿಕ್ಷನರಿ ಪ್ರೇಮ ನೋಡಿ ಬೆಚ್ಚಿದ್ದ. `ನಾನು ಬೆಂಗ್ಳೂರಲ್ಲಿ ಹೀಗೇ ಮಾತಾಡೋದು, ಆದ್ರೆ ಇಂಗ್ಲಿಶ್ ಚೆನ್ನಾಗಿ ಬರುತ್ತೆ…. ದಿನಾನೂ ರಾತ್ರಿ ಬೇಕರಿಗೆ ಹೋದಾಗ ಅಲ್ಲಿ ಬಿಬಿಸಿ ಕೇಳ್ತೀನಿ, ಈ ಟ್ರಾನ್ಸಿಸ್ಟರ್‌ನಲ್ಲಿ ಬಿಬಿಸಿ ಚೆನ್ನಾಗಿ ಬರುತ್ತೆ ಎಂದು ವಾಸುದೇವನ್ ತನ್ನ ಚಿತ್ರವಿಚಿತ್ರ ಚಹರೆಗಳನ್ನು ಬಿಡಿಸಿಡುತ್ತಲೇ ಎಗ್ ಮಸಾಲಾ ಮಾಡಿದ್ದ. ಕೊನೆಗೆ ಇಬ್ಬರೂ ಗುಂಡುಹಾಕಿ ಬಿದ್ದುಕೊಂಡಿದ್ದರು. ಆಗಲೇ ವಾಸುದೇವನ್ ಈ ವ್ಯಾಪಾರಿಯ ಬ್ಲಾಕ್‌ಮನಿ ಬಗ್ಗೆ ಮಾತಾಡಿದ್ದು. ಅದನ್ನು ತಾನು ಕಮಕ್ಕೆನ್ನದೆ ಕೇಳಿ ವಿನಾಯಕನಿಗೆ ಹೇಳಿದ್ದೆ. ಮುಂದಿನದೆಲ್ಲ ಬರೀ ತನಿಖೆ. ತೆರಿಗೆ ದಾಳಿ. ಪತ್ರಿಕೆಗಳಲ್ಲಿ ಸಿಂಗಲ್ ಕಾಲಂ ಸುದ್ದಿಯಾಗಿ ಬಂದ ಆ ಘಟನೆಯಿಂದ ತನ್ನ ಜೀವನವೇ ಸುಧಾರಿಸಿದೆ. ಈಗ ತಾನು ಸಣ್ಣ ಮನೆಯನ್ನು ಲೀಸ್‌ಗೆ ಹಿಡಿದಿದ್ದೇನೆ. ಯಾರಿಗೂ ಸಲಾಮು ಹಾಕುವ ಪ್ರಶ್ನೆಯಿಲ್ಲ.
ವಾಸುದೇವನ್ ಬಂದಾಗೆಲ್ಲ ಅನಾಸಕ್ತಿ ತೋರಿಸುತ್ತೇನೆ. ಒಂದು ಚಾ ಕೊಟ್ಟು ಸಾಗಹಾಕುತ್ತೇನೆ.
————
ಸುಷ್ಮಾ ಇಲ್ಲಿ ಇದ್ದಿದ್ದರೆ ನಾನು ಅವಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳಬಹುದಿತ್ತು ಎಂದು ಸುಧಾಕರನಿಗೆ ಈಗಲೂ ಅನ್ನಿಸುತ್ತದೆ. ಸುಧಾಕರ ಈಗ ನಿಧಾನವಾಗಿ ಕಾಟನ್‌ಪೇಟೆಯ ಅದೇ ಫೇವರಿಟ್ ಥಿಯೇಟರಿಗೆ ಹೋಗುತ್ತಾನೆ. ಬಾಲ್ಕನಿಯಲ್ಲಿ ಹಿಂದಿನಿಂದ ಎರಡನೇಸಾಲಿನ ೧೩ನೇ ಸೀಟಿನಲ್ಲಿ ಕೂತುಗೊಳ್ಳುತ್ತಾನೆ. ಯಾವುದೋ ಹಳೆ ಹಾಲಿವುಡ್ ಸಿನಿಮಾ ಬಿಚ್ಚಿಕೊಳ್ಳುತ್ತದೆ. ಅಕಸ್ಮಾತ್ ಇದ್ದರೆ ಒಂದೆರಡು ಬ್ಲೂಫಿಲ್ಮ್‌ಗಳನ್ನೂ ಆತ ತುರುಕುವುದನ್ನು ಸುಧಾಕರನೇನೂ ಗಮನಿಸುವುದಿಲ್ಲ.
ಆ ಕತ್ತಲಿನಲ್ಲಿ ಎರಡು ಗಂಟೆ ಕೂತು ತನ್ನ ಬದುಕು, ಭವಿಷ್ಯವನ್ನೇ ಆತ ಯೋಚಿಸುತ್ತಾನೆ. ಏನಾದರಾಗಲಿ, ಈ ಬದುಕಿನಲ್ಲಿ ಮಜಾ ಇಲ್ಲವಲ್ಲ ಎಂದು ಮತ್ತೆ ಮತ್ತೆ ಕೇಳಿಕೊಳ್ಳುತ್ತ ಮೆಜೆಸ್ಟಿಕ್ಕಿನ ಬಾರುಗಳಲ್ಲಿ ಕೂತು ಬೀರು ಹೀರುತ್ತಾನೆ. ಶ್ರೀನಿವಾಸ ನಗರದ ಆ ಮನೆಯನ್ನು ಬಿಟ್ಟು ರಾಜಾಜಿನಗರದಲ್ಲಿ ಒಂದು ಮನೆ ಹಿಡಿಯಬೇಕು. ಇಲ್ಲಿ ಬೇಕಾದಷ್ಟು ವರ್ತಕರ ಮನೆಗಳಿವೆ. ಒಂದಲ್ಲ ಒಂದು ದಿನ ಒಬ್ಬರಲ್ಲ ಒಬ್ಬರು ಸಿಗುತ್ತಾರೆ. ಅವರನ್ನು ಫಾಲೋ ಮಾಡುತ್ತೇನೆ. ಅವರ ದಂಧೆ ತಿಳಿಯುವುದು, ವಾಸುದೇವನ್ ಥರ ಮಾಹಿತಿ ಕಲೆ ಹಾಕೋದು. ಆಮೇಲೆ ಹೇಗೂ ವಿನಾಯಕ ಇದ್ದೇ ಇದಾನೆ… ಹೀಗೇ ಮೂರ್‍ನಾಲ್ಕು ಕೇಸು ಆದಮೇಲೆ ಬಂದ ಕಮಿಶನ್ ಹಣವನ್ನೆಲ್ಲ ಬ್ಯಾಂಕಿನಲ್ಲಿಟ್ಟು, ಸುಷ್ಮಾಳನ್ನು ಕರೆದುಕೊಳ್ಳುತ್ತೇನೆ.
ಸುಧಾಕರನಿಗೆ ಅಲ್ಲೇ ಬರ್ಮಾ ಬಜಾರಿಗೆ ಹೋಗಿ ಗಿಟಾರ್ ಕಲೆಕ್ಷನ್‌ನ ಹೊಸ ಡಿಸ್ಕ್ ಖರೀದಿಸಿ ಮನೆಗೆ ಬಂದು ಮಲಗಿದ್ದಷ್ಟೇ ಗೊತ್ತು. ಮರುದಿನ ಗೇಟಿನ ಮುಂದೆ ಢಣ್ ಢಣ್ ಎಂದು ಅಜ್ಜ ಬಂದು ತಿರುಪತಿ ಶ್ರೀನಿವಾಸಾ ಎಂದಾಗಲೇ ಶನಿವಾರವೂ ಆಗಿಹೋಯ್ತು ಎಂದು ದಿಗಿಲಾಯಿತು. ಅಜ್ಜನಿಗೆ ಎರಡು ರೂಪಾಯಿ ಕೊಟ್ಟು ನಮಸ್ಕಾರ ಮಾಡಿದ. ಶ್ರೀನಿವಾಸಾ,ವೆಂಕಟೇಶಾ ಎಂದು ಅಜ್ಜ ತನ್ನ ಗಂಟೆಯನ್ನು ಅಡ್ಡಡ್ಡ ಮಲಗಿಸಿ ಆಶೀರ್ವಾದ ಮಾಡಿದ. ಶನಿವಾರವೆಲ್ಲ ಈ ದೃಶ್ಯ ಮರುಕಳಿಸುತ್ತಿರುತ್ತದೆ ಎಂದು ಸುಧಾಕರ ಒಳಗೆ ಬಂದ. ಬ್ರಶ್ ಮಾಡುತ್ತಲೇ ಗೇಟಿನ ಮುಂದೆ ಬಿದ್ದಿದ್ದ ದಿನಪತ್ರಿಕೆಯನ್ನು ತಂದಿಟ್ಟುಕೊಂಡು ರೇಡಿಯೋ ಹಾಕಿ ಓದತೊಡಗಿದ.
ಅರೆ ಇವತ್ತೇ ಜನವರಿ ಹದಿನಾಲ್ಕು.
ಪುಟ ೫.
ಎಂಟನೇ ಕಾಲಮ್ಮಿನ ಕೆಳಮೂಲೆ.
ಅಲ್ಲಿ ಸುಷ್ಮಾಳ ಚಿತ್ರ ಇದೆ. ನಿನ್ನ ಸ್ಮರಣೆಯಲ್ಲೇ ನಾವಿದ್ದೇವೆ ಎಂದು ಅವಳ ತಂದೆ, ತಾಯಿ, ಅಣ್ಣ ಎಲ್ಲರೂ ಹೇಳಿಕೊಂಡಿದ್ದಾರೆ. ಅಲ್ಲಿ ಸುಷ್ಮಾ ನಗುತ್ತಿದ್ದಾಳೆ.
ಬಹುಶಃ ಫ್ಯಾಮಿಲಿ ಫೋಟೋ ಆಲ್ಬಮ್‌ನಿಂದ ಆರಿಸಿದ ಚಿತ್ರ.
`ನಂಗೆ ಗೊತ್ತು ಸುಧೀ, ನಾನು ಅವನನ್ನ ಹಾಗೆ ಪ್ರೀತಿಸಬಾರದಾಗಿತ್ತು. ಯಾವುದೋ ವಿಷಗಳಿಗೆಯಲ್ಲಿ ಅವನ ಹತ್ತಿರ ಹೋದೆ. ಅವತ್ತು ನಿಜಕ್ಕೂ ಬಿಸಿಲು ನನ್ನ ಎದೆಯೊಳಗೆ ಹಾದುಹೋಗಿತ್ತು’ ಎಂದು ಅವತ್ತು ಸುಷ್ಮಾ ಸಾಹಿತ್ಯದ ಭಾಷೆಯಲ್ಲಿ ಕನವರಿಸುತ್ತಿದ್ದಳು.
`ನನ್ನ ವರ್ತನೆಯೇ ಹಾಗೆ. ಚೆಲ್ಲುಚೆಲ್ಲಾಗಿ ಮಾತನಾಡುತ್ತೇನೆ. ನಿಮಗೆ ಕೊಂಚ ಎಕ್ಸ್‌ಪೋಸ್ ಎನ್ನಬಹುದಾದ ಉಡುಗೆ ತೊಡ್ತೇನೆ. ಮಾತುಮಾತಿಗೆ ನಗುತ್ತೇನೆ. ತಲೆಗೂದಲನ್ನು ಸರಿಸಿ ಕಣ್ಣು ಹಾಯಿಸಿ ಪ್ರೀತಿಯ ಬುಗ್ಗೆ ಹರಿಸುತ್ತೇನೆ. ಅದೇ ನನಗೆ ಮುಳುವಾಗುತ್ತೇನೋ’ ಎಂದು ಸುಷ್ಮಾ ಹೇಳುತ್ತಿದ್ದಳು.
`ನಾನು ನಿನ್ನನ್ನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತೇನೆ ಸುಧೀ. ನೀನು ನನ್ನ ಬದುಕಿನಲ್ಲಿ ಬಂದ ಗಳಿಗೆಯಿಂದ ನಾನು ಚೇತರಿಸಿಕೊಂಡಿದೇನೆ. ಚಿತ್ರದುರ್ಗದ ಆ ಹುಡುಗನ ಪ್ರೀತಿಯೆಂಬೋ ದ್ವೇಷದಿಂದ ತಪ್ಪಿಸಿಕೊಳ್ಳಲು ನೀನು ಮಾಡಿದ ಉಪಕಾರವನ್ನು ನಾನು ಎಂದಿಗೂ ಮರೆಯಲಾರೆ’ ಎಂದು ಸುಷ್ಮಾ ಹೇಳುತ್ತಿದ್ದಳು.
ಸುಧಾಕರ ಬ್ರಶ್ ಮಾಡುತ್ತ ಮಾಡುತ್ತ ಪೇಸ್ಟಿನ ಜೊಲ್ಲು ಬೀಳುವಂತಾಯಿತು. ಪೇಪರಿನ ಮೇಲೇ ಚೆಲ್ಲಿದರೆ ಸುಷ್ಮಾ ಬೇಜಾರು ಮಾಡಿಕೊಳ್ಳುತ್ತಾಳೇನೋ…….. ಥತ್ ಇದರ ಎಂದುಕೊಂಡು ವಾಶ್ ಬೇಸಿನ್‌ನತ್ತ ನಡೆದ. ಅಲ್ಲಿಯೂ ಟ್ರೋಫಿ ಹಿಡಿದ ಸುಷ್ಮಾಳ ಚಿತ್ರವಿದೆ.
ಅವಳ ಪೂರಾ ಪರ್ಸನಲ್ ಆಲ್ಬಮ್ ನನ್ನ ಹತ್ರಾನೇ ಇದೆಯಲ್ಲ…. ಅವತ್ತು ಮಂಗಳೂರಿನ ಆ ಹೋಟೆಲಿನಲ್ಲಿ ನಾವು ಯಾವುದೋ ಹೆಸರಿನಿಂದ ಉಳಿದುಕೊಂಡಿದ್ದೆವು. ದಿನವಿಡೀ ಪ್ರೀತಿ ಪ್ರೇಮದ ಕಥೆ ಹೇಳಿಕೊಂಡಿದ್ದೆವು. ಆಮೇಲೆ ಮಾತು ಎಲ್ಲೆಲ್ಲಿಗೋ ತಿರುಗಿತ್ತು. ಅವಳು ಈ ಹಿಂದೆ ಯಾರದೋ ಜೊತೆ ಪ್ರೀತಿ ಪ್ರೇಮ ಅಂತೆಲ್ಲ ಓಡಾಡಿದ್ದನ್ನು ಹೇಳಿದ್ದಳು. ತಾನು ಅದನ್ನು ಎಷ್ಟೆಲ್ಲ ಸಹನೆಯಿಂದ ಕೇಳಿದ್ದರೂ ಒಂದು ಸಲ ಮಾತ್ರ ಯಾಕೋ ಇನ್ನು ಇವಳೊಂದಿಗೆ ಪ್ರೀತಿಯ ಬದುಕಿರಲಿ, ಪುಟ್ಟ ಕಥೆಯನ್ನೂ ಕಟ್ಟಲಾರೆ ಎಂದೆನ್ನಿಸಿ, ಒಂದೇ ಕ್ಷಣ….
ಅವಳನ್ನು ಉಸಿರುಗಟ್ಟಿಸಿ ಮಲಗಿಸಿ ತಣ್ಣಗೆ ಹೊರಬಿದ್ದಿದ್ದೆ. ಅವಳ ಬಟ್ಟೆ – ಬರೆ, ಸರ್ಟಿಫಿಕೇಟ್‌ಗಳು, ಆಲ್ಬಮ್‌ಗಳಿಂದ ಹಿಡಿದು ಎಲ್ಲವನ್ನೂ ಸೂಟ್‌ಕೇಸಿನಲ್ಲಿ ತುರುಕಿಕೊಂಡು ಯಾವುದೋ ಮೀಟಿಂಗ್‌ಗೆ ಹೋಗುವ ಹಾಗೆ ನಟಿಸುತ್ತ ಹೊರಬಿದ್ದಿದ್ದೆ.
ಐದು ವರ್ಷಗಳಾಗಿವೆ. ಸುಷ್ಮಾ ಅಂತೂ ಇಲ್ಲಿ ತನ್ನ ಮುಂದೆ ಚಿತ್ರವಾಗಿದ್ದಾಳೆ. ಎಂಥ ನಗು. ಆದರೆ ಅವಳು ಹಾಗೆ ಮಾಡಬಾರದಿತ್ತು. ತನ್ನನ್ನು ಕೆಣಕಬಾರದಿತ್ತು.
ತನ್ನ ಜೀವ ಅವಳಿಗಾಗಿ ಕಾತರಿಸುತ್ತಿದೆ. ಇವತ್ತು ಅವಳಿದ್ದಿದ್ದರೆ ನಾನು ಈ ಛಳಿಯಲ್ಲಿ ಹೀಗೆ ಅನಾಥನ ಹಾಗೆ ಇರುತ್ತಿರಲಿಲ್ಲ. ಅವಳೇ ಈ ಅವಕಾಶ ಕಳೆದುಕೊಂಡಳೆ? ನಾನಾದರೂ ಯಾಕೆ ಅವಳನ್ನು ಉಸಿರುಗಟ್ಟಿಸಿ…….
ತಾನು ಕೊಲೆಗಾರನೆ? ತಲೆ ಮರೆಸಿಕೊಂಡಿದ್ದೇನೆಯೆ?
ಸುಧಾಕರನಿಗೆ ಅವೆಲ್ಲ ಗೊತ್ತಾಗುತ್ತಿಲ್ಲ. ಸುಮ್ಮನೆ ಕನ್ನಡಿ ನೋಡಿಕೊಳ್ಳುತ್ತ ಶೇವ್ ಮಾಡಿಕೊಳ್ಳುತ್ತಿದ್ದಾನೆ. ಲಾಟುಗಟ್ಟಳೆ ಹುಡುಗಿಯರನ್ನು ಕ್ಷಣಮಾತ್ರದಲ್ಲಿ ಸೆಳೆದುಕೊಳ್ಳುವ ಶೇವಿಂಗ್ ಕ್ರೀಮಿನ ನೊರೆ ಅವನ ಕೆನ್ನೆಯನ್ನು ಆವರಿಸಿಕೊಂಡಿದೆ. ಅವನ ಕಣ್ಣಿನಲ್ಲಿ ಮಾತ್ರ ಸುಷ್ಮಾ ಕೂತಿದ್ದಾಳೆ. ಕನ್ನಡಿಯ ಮೂಲೆಗೆ ನಿಂತುಕೊಂಡು ನಗುತ್ತಿದ್ದಾಳೆ.
————-
ಸುಧಾಕರ ಸ್ನಾನ ಮಾಡಿದವನೇ ಬೈಕ್ ಹತ್ತಿ ಸೀದಾ ದರ್ಶಿನಿಯ ಚೌಚೌ ಬಾತ್ ತಿಂದು ರಾಜಾಜಿನಗರದ ಆರನೇ ಬ್ಲಾಕಿನ ಅರವತ್ತೊಬತ್ತನೇ ಕ್ರಾಸಿನಲ್ಲಿದ್ದ ಆ ಅರಮನೆ ಥರದ ಮನೆಗೆ ಹೋಗಿ ಬೆಲ್ ಮಾಡಿದ.
`ನೀವು ….. ಅಲ್ವ? ನಿಮ್ಮ ಹತ್ರ ಕೊಂಚ ಬ್ಯುಸಿನೆಸ್ ಡೀಲ್ ಮಾತಾಡಬೇಕಿತ್ತು. ನಾನು ನಿನ್ನೆ ನಿಮಗೆ ಫೋನ್ ಮಾಡಿದ್ನಲ್ಲ, ರಾಘವೇಂದ್ರರಾವ್…’ ಎನ್ನುತ್ತ ಆ ದಢೂತಿ ವ್ಯಕ್ತಿಗೆ ಕೈ ಚಾಚಿ ನಸುನಕ್ಕ.
ವಿಶಾಲವಾದ ಹಜಾರದಲ್ಲಿ ಅವನ ಹೆಂಡತಿ ಮಕ್ಕಳು ಯಾವುದೋ ಸೀರಿಯಲ್ ನೋಡುತ್ತ ನಗುತ್ತಿದ್ದರು. ಪಕ್ಕದ ಇಕ್ಕಟ್ಟಿನ ಶೆಡ್‌ನಲ್ಲೇ ತೂರಿಕೊಂಡಿದ್ದ ಕಪ್ಪು ಆಕ್ಸೆಂಟ್ ಕಾರನ್ನು ಯಾವುದೋ ಹುಡುಗ ಮಿರಿ ಮಿರಿ ಮಿಂಚುವಂತೆ ತೊಳೆಯುತ್ತಿದ್ದ. ಕಾರನ್ನು ತೊಳೆದ ನೀರು ಇಳಿಜಾರಾದ ಆ ಕ್ರಾಸಿನಲ್ಲಿ ಹರಿದು ಕೆಳಗಿನ ಸ್ಲಂನೊಳಗೆ ಪ್ರವೇಶಿಸುತ್ತಿತ್ತು. ಅಲ್ಲಿದ್ದ ಕಲ್ಲಿನ ಅಡ್ಡಾದಿಡ್ಡಿ ಬೆಂಚುಗಳ ಮೇಲೆ ಊದಿನಕಡ್ಡಿಗಳು ಒಣಗುತ್ತಿದ್ದವು. ಕೆಲವು ಮುದುಕರು ಬೀಡಿ ಸೇದುತ್ತ ಎಳೆಬಿಸಿಲಿನಲ್ಲಿ ನಿಂತು ಹಿತ ಅನುಭವಿಸುತ್ತಿದ್ದರು. ಅಲ್ಲೇ ಇದ್ದ ಕೆಮಿಕಲ್ ಘಟಕದಿಂದ ಯಾವುದೋ ವಿಷವೂ ಪೌಡರಿನ ಸುವಾಸನೆಯ ಹಾಗೆ ಪರಿಮಳ ಬೀರುತ್ತಿತ್ತು. ಬಗೆಬಗೆಯ ಯೂನಿಫಾರ್ಮಿನಲ್ಲಿದ್ದು ಹುಡುಗರು, ಹುಡುಗಿಯರು ಶಾಲೆಗಳಿಗೆ ಹೋಗತೊಡಗಿದ್ದರು. ಸೊಪ್ಪಿನ ಗಾಡಿಯವರು, ಮೀನು ಮಾರುವವರು, ಹಳೆ ಪೇಪರ್ ಖರೀದಿಯವರು ಅಲ್ಲಲ್ಲಿ ಕಿರುಚುತ್ತಿದ್ದರು. ಮೂಲೆಯಲ್ಲಿದ್ದ ಸ್ಕೂಟರ್ ಗ್ಯಾರೇಜಿನಲ್ಲಿ ಇಬ್ಬರು ಹುಡುಗರು ಬೈಕಿನ ಗಾಲಿ ತೆಗೆದು ಪಂಚರ್ ಹಾಕುತ್ತಿದ್ದರು. ಅಪ್‌ಸೆಟ್ ಪ್ಲೇಟ್ ಮೇಕರ್ ಶಾಪಿನ ಮಾಲೀಕ ಅಲ್ಲೇ ಸಿಗರೇಟ್ ಎಳೆಯುತ್ತ ಪ್ಲೇಟ್‌ಗಳು ಸರಿಯಾಗಿ ಎಕ್ಸ್‌ಪೋಸ್ ಆಗಿವೆಯೇ ಎಂದು ನಿರುಕಿಸುತ್ತಿದ್ದ. ಭಾಷ್ಯಂ ವೃತ್ತದ ಇಕ್ಕಟ್ಟಾದ ರಸ್ತೆಯನ್ನು ಹಾದು ಬಂದ ಬಿ ಎಂ ಟಿ ಸಿ ಬಸ್ಸುಗಳು ಯಾರ್‍ಯಾರನ್ನೋ ಏರಿಸಿ,ಇಳಿಸಿ ಭರಭರ ಪ್ರಸನ್ನ ಥಿಯೇಟರಿನತ್ತ ಇಳಿಯುತ್ತಿದ್ದವು.
ರಾಘವೇಂದ್ರರಾವ್‌ರವರನ್ನು ಆ ವ್ಯಕ್ತಿ ಹಾರ್ದಿಕವಾಗಿ ಸ್ವಾಗತಿಸಿ ಕೈಹಿಡಿದೇ ಒಳಗೆ ಕರೆದುಕೊಂಡು ಹೋದ.
(ಮುಗಿಯಿತು)