ಕ್ರಿಯಾಪದ್ಯ
ಒಂದು ಪತ್ರ ಬರ್‍ದಿದೇನೆ
ಅಲ್ಲಿ ಸೂರ್ಯನಂತೆ ಉರ್‍ದಿದೇನೆ
ಎದೆಗೂಡಿನಲ್ಲಿ ಪುಟ್ಟ ದೀಪವಾಗಿದ್ದ
ನೆನಪು ಮಾತ್ರ ಉಳಿಸಿದೇನೆ.
ಒಂದು ಕವನ ಬರ್‍ದಿದೇನೆ
`ರೆಕ್ಕೆ ಬಂದ ಹಕ್ಕಿ' ಎಂದು ಕರೆದಿದೇನೆ.
ಕವನದ ಭಾಷೆಯೇ ಆದ
ದ್ವೇಷವನ್ನೇ ವರ್ಣಿಸಿದ್ದೇನೆ.
ಒಮ್ಮೆ ಅವಳಿಗೆ ಕೀಟಲೆ ಮಾಡಿದೆ
ಈಗ ಬೇಜಾರು ಪಡ್ತಿದೇನೆ.
ಮುತ್ತುಕೊಟ್ಟು ತಗೊಂಡ ತುಟಿಯಲ್ಲಿ
ಸಿಗರೇಟು ಸುಟ್ಟಿದೇನೆ.
ಐದು ಕಡೆ ಕೆಲಸ ಮಾಡಿದೆ
ಮೂರು ಬಾರಿ ಲವ್ ಮಾಡಿದೆ
ಎಡಪಂಥಕ್ಕೂ ಎಡತಾಕಿದೆ
ಎಲ್ಲದರ ಲೆಕ್ಕವಿಟ್ಟಿದೇನೆ.
ಮನೆಯನ್ನು ಮರೆತಿದೇನೆ
ಮನಸ್ಸನ್ನು ಕೂಡಾ ಮರೆತು
ಮುಖೇಡಿಯಾಗ್ತಿದೇನೆ
ಅಥವಾ ಏನಾಗಿದೇನೆ ?!
ಅಜ್ಞಾನಿ ನನಗೆ ಗೆಳೆಯರು
ಯಾರು ಗೆಳತಿಯರು ಯಾರು
ಕಿರಿಯರು, ಹಿರಿಯರು ಗೊತ್ತಿಲ್ಲ
ಆದರೂ ಮಾತನಾಡ್ತೇನೆ.
ಬನ್ನಿ ನನಗೆ ಬುದ್ಧಿಕೊಡಿ
ಹೃದಯಕ್ಕೊಂದು ಕೆಲಸಕೊಡಿ
ನಿಮ್ಮನ್ನು ದಿನಾ ತೊಳೆದು
ನಾನೂ ಶುದ್ಧವಾಗ್ತೇನೆ.