ಕತ್ತಲಿನ ಬೆಳಕು
ಕತ್ತಲಿನ ಬೆಳಕು
ನನ್ನ ಕವನದ ಒಳಗೆ ಬರಬೇಡ ಕತ್ತಲೇ
ದಯಮಾಡಿ ಕ್ಷಮಿಸಿಬಿಡು ನನ್ನ.
ಅವಳ ಮಾತುಗಳಿಗೆ ಕಪ್ಪಂಚು ತೊಡಿಸದಿರು
ಈ ಸಂಜೆ ಕ್ಷಮಿಸಿಬಿಡು ಅವಳ
ಬಿಸಿಲುಕೋಲಿಗೆ ನೀನು ತೊಡಿಸದಿರು ಕೋಳ
ದಯಮಾಡಿ ಬಿಟ್ಟುಬಿಡು ಪ್ಲೀಸ್.
ಬೆಳಕಿನಂಗಳದಲ್ಲಿ ಹರಡದಿರು ಹೀಗೆ
ಈ ಸಂಜೆ ಬಿಟ್ಟುಬಿಡು ನನಗೆ….
ಮರಗಳಂತರದಲ್ಲಿ ಹರಿವ ಫೋಟಾನುಗಳ
ದಯಮಾಡಿ ಓಡಿಸದಿರು.
ಸೂರ್ಯಕಾಂತಿಯ ಹೂವು ನಗುತಿರಲಿ ಹೀಗೆಯೇ
ಈ ಸಂಜೆ ಬಾಡಿಸದಿರು.
ಮೋಡಗಳ ನಡುವೆದ್ದ ಪ್ಲಸ್ಸು ಮೈನಸ್ಸುಗಳ
ದಯಮಾಡಿ ಕದಡದಿರು ಕತ್ತಲೇ
ಬಯಲುದಾರಿಗಳಲ್ಲಿ ಕಾಣೊ ಹೆಜ್ಜೆಗಳಲ್ಲಿ
ಎಲ್ಲರೂ ಬರಿ ಬತ್ತಲೆ.
ಗೆರೆಗಳಂಚಲ್ಲೀಗ ಕೂರದಿರು ಸುಮ್ಮನೇ
ದಯಮಾಡಿ ನಿರ್ಗಮಿಸು ಬೇಗ.
ನನ್ನ ಬೆರಳುಗಳೀಗ ಬೆಳಕಿನುಂಗುರ ತೊಟ್ಟು
ಅಕ್ಷರಕೂ ಕೋರೈಸೋ ಯೋಗ.
ಮಾತುಕತೆ ಮಾಡೋಣ ಬಂದು ಬಿಡು ನಾಳೆ
ದಯಮಾಡಿ ಜತೆಗಿರಲಿ ದುಃಖ
ಬೆಳಕನ್ನು ಬದಿಗಿಟ್ಟು ಹುಡುಕೋಣ ಹಾದಿಗಳ
ಈ ಸಂಜೆ ಯಾವ ಲೆಕ್ಕ ?
೧೮.೪.೨೦೦೨ /ಬೆಂಗಳೂರು / ರಾತ್ರಿ