ಅವಳೊಂದು ಗಿಡವಾಗಿದ್ದರೆ,
ಎಷ್ಟು ನಿಶ್ಯಬ್ದವಾಗಿ ಹುಟ್ಟಿದೆ ಗಿಡ
ಅರಳಿದೆ ಹೂವು ಎಷ್ಟು ದಿನಗಳು ಹೀಗೆ
ಕಳೆದಿವೆ ನನ್ನ ಎದೆಕವಾಟಗಳಿಗೆ
ಎಲ್ಲಿದ್ದಾಳೆ ನನ್ನ ಕರೆದವಳು ? ಎಷ್ಟು
ಹಗೂರಾಗಿ ತೆಗೆದುಕೊಂಡಳು
ನನ್ನ ಶಬ್ದಗಳನ್ನು
ಅವಳೊಂದು ಗಿಡವಾಗಿದ್ದರೆ, ಹೂವಾಗಿದ್ದರೆ
ನಾನು ದುಃಖವನ್ನು ಯಾಚಿಸುವ
ಅಂಚಿನವರೆಗೋ
ವಿಷಾದವನ್ನು ಪ್ರಕಟಿಸುವ
ಸಂಚಿನವರೆಗೋ
ಖಂಡಿತವಾಗಿ ಬರುತ್ತಿರಲಿಲ್ಲ ಅವಳು
ಶಬ್ದವಾಗಿದ್ದಾಳೆ ಅದಕ್ಕೆ
ಅಂದಮಾತ್ರಕ್ಕೆ ನನ್ನ ದ್ವೇಷ
ಅವಳ ತುಟಿಗಳ ಚಲನವಲನದ ಬಗ್ಗೆ
ನಾಲಿಗೆಯ ಹೇರ್‌ಪಿನ್ ತಿರುವುಗಳ ಬಗ್ಗೆ
ಮಾತುಗಳ ಕಾರ್ಯವೈಖರಿಯ ಬಗ್ಗೆ
ಇರುವುದಿಲ್ಲ ; ದುಃಖವನ್ನು
ಅಪ್ರಕಟಿತ ಸತ್ಯಗಳು ತರುತ್ತವೆ.
ಮಜಾ ಅಂದ್ರೆ
ಪ್ರಕಟವಾದ ಸತ್ಯವೂ ಬೇಜಾರು
ತರುತ್ತದೆ.