೨೦೦೮ರ ಈ ವರ್ಷಕ್ಕೆ ಟಿಬೆಟಿನಿಂದ ಒಂದು ಲಕ್ಷ ಟಿಬೆಟನ್ ಸಮುದಾಯವು ದೇಶಭ್ರಷ್ಟವಾಗಿ ಭಾರತಕ್ಕೆ ಬಂದು ೪೯ ಸುದೀರ್ಘ ವರ್ಷಗಳಾಗುತ್ತಿದೆ. ಗೌರವ ಮತ್ತು ಘನತೆಯೊಂದಿಗೆ ತಮ್ಮ ತಾಯ್ನಾಡಿಗೆ ಮರಳುವ ದಿನಕ್ಕಾಗಿ ಇವರೆಲ್ಲ ದೃಢನಿಶ್ಚಿತರಾಗಿ ಕಾಯುತ್ತಿದ್ದಾರೆ. ಕಮ್ಯುನಿಸ್ಟ್ ಚೀನಾದ ಟಿಬೆಟ್ ಆಕ್ರಮಣದಿಂದ ಟಿಬೆಟನ್ನರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ; ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಈವರೆಗೆ ೧೨ ಲಕ್ಷ ಟಿಬೆಟನ್ನರು ಜೀವ ತೆತ್ತಿದ್ದಾರೆ. ೬೦೦ಕ್ಕೂ ಹೆಚ್ಚು ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು, ಸ್ಮಾರಕಗಳು, ರಾಷ್ಟ್ರೀಯ ಪರಂಪರೆಯ ದ್ಯೋತಕಗಳು ನೆಲಸಮವಾಗಿವೆ. ವಿಶ್ವಸಂಸ್ಥೆಯ ೨೦ನೇ ಅಧಿವೇಶನದಲ್ಲಿ ಭಾರತದ ನಿಯೋಗದ ನಾಯಕರಾಗಿದ್ದ ಶ್ರೀ ಝಕಾರಿಯಾರವರೇ ‘ಟಿಬೆಟನ್ನರನ್ನು ಹೀಗೆಹೇಯವಾಗಿ ನಡೆಸಿಕೊಂಡ ಕೃತ್ಯವು ಜಗತ್ತಿನ ಇತಿಹಾಸದ ಪುಟಗಳಲ್ಲಿ ಅತ್ಯಂತ ವಿರಳವಾಗಿ ದಾಖಲಾಗಿರುವ ನಡೆ’ ಎಂದಿದ್ದಾರೆ.
ದೇಶಭ್ರಷ್ಟರಾದ ಮೇಲೂ ಟಿಬೆಟನ್ನರು ಮಹಾಮಹಿಮ ದಲಾಯಿ ಲಾಮಾರ ನೇತೃತ್ವದಲ್ಲಿ ತಮ್ಮ ವಿಶಿಷ್ಟ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಸಂರಕ್ಷಿಸಿಕೊಳ್ಳುವಲ್ಲಿ ಅಪಾರವಾದ ದೂರದೃಷ್ಟಿ, ತ್ಯಾಗ, ಧೈರ್ಯ ಮತ್ತು ಸಹನೆಯನ್ನು ತೋರಿದ್ದಾರೆ ; ತಮ್ಮ ನ್ಯಾಯಯುತ ಬೇಡಿಕೆಯನ್ನು ಜೀವಂತವಾಗಿ ಇಟ್ಟುಕೊಂಡು ಬಂದಿದ್ದಾರೆ. ಭಾರತು ನಮಗೆ ಉದಾರವಾದ ಆತಿಥ್ಯ, ಸ್ವಾತಂತ್ರ್ಯ ಮತ್ತು ಅವಕಾಶವನ್ನು ನೀಡಿದೆ ; ಇದಿಲ್ಲದೆ ಹೋಗಿದ್ದರೆ ಈ ಪುಟ್ಟ ದೇಶಭ್ರಷ್ಟ ಸಮುದಾಯಕ್ಕೆ ತನ್ನ ಚಹರೆ ಮತ್ತು ಬೇಡಿಕೆಯನ್ನು ಮುನ್ನಡೆಸಿಕೊಳ್ಳುವುದಕ್ಕೆ ಅತ್ಯಂತ ಕಷ್ಟವಾಗುತ್ತಿತ್ತು.
ಪ್ರತಿಯೊಬ್ಬ ದೇಶಭಕ್ತ ಭಾರತೀಯನಿಗೂ ಟಿಬೆಟಿನ ಪ್ರಶ್ನೆಯು ಕೇವಲ ಟಿಬೆಟನ್ ಜನರ ಬದುಕಿನ ದುಃಸ್ಥಿತಿಯ ಬಗೆಗಿನ ಕೇವಲ ಕಾಳಜಿ ಮಾತ್ರವಲ್ಲ ; ಭಾರತದ ಜೊತೆಗೆ ಟಿಬೆಟ್ ಹೊಂದಿರುವ ಸಾಂಸ್ಕೃತಿಕ ಹಾಗೂ ಧಾರ್ಮಿಕ ಬಂಧದ ಹೊರತಾಗಿ ಭಾರತದ ಭದ್ರತೆ ಮತ್ತು ಇತರೆ ಸೂಕ್ಷ್ಮ ಸಂಗತಿಗಳ ಮೇಲೂ ಈ ವಿದ್ಯಮಾನವು ನೇರ ಪರಿಣಾಮವನ್ನು ಹೊಂದಿದೆ.
ಟಿಬೆಟಿನ ಈ ಸುದೀರ್ಘಕಾಲೀನ ಸಮಸ್ಯೆಗೆ ಪರಿಹಾರವನ್ನು ಹುಡುಕುವುದು ಚೀನಾ, ಭಾರತ ಮತ್ತು ಟಿಬೆಟ್ ದೇಶಗಳಿಗೇ ಒಳಿತು. ಅಲ್ಲದೆ ಈ ಪರಿಹಾರವು ಉಪಖಂಡದಲ್ಲಿ ಶಾಂತಿ ಮತ್ತು ಸ್ನೇಹದ ಸ್ಥಾಪನೆಗೂ ಹಿತ. ಮಹಾಮಹಿಮ ದಲಾಯಿ ಲಾಮಾರವರು ಮುಂದಿಟ್ಟ ಶಾಂತಿ ಪ್ರಸ್ತಾಪವು ಎಲ್ಲರ ಒಳಿತನ್ನು ಬಯಸುವ ಎಲ್ಲಾ ಸಂಗತಿಗಳಿಗೂ ಪರಿಹಾರ ಒದಗಿಸಿದೆ. ಅವರಿಗೆ ಕೇವಲ ಅಹಿಂಸೆಯ ಪ್ರಚಾರಕ್ಕೆ ನೋಬೆಲ್ ಪ್ರಶಸ್ತಿ ಸಿಕ್ಕಿದ್ದಷ್ಟೇ ಅಲ್ಲ ; ವಿಶ್ವನಾಯಕರು, ಸರ್ಕಾರಗಳು ಮತ್ತು ಸಂಸದರು ಈ ಪ್ರಸ್ತಾಪವು ಎಲ್ಲರಿಗೂ ಲಾಭದಾಯಕವಾಗುಇವ ಅತ್ಯಂತ ರಚನಾತ್ಮಕ ಪ್ರಸ್ತಾಪ ಎಂದು ಬೆಂಬಿಲಿಸಿದರು. ಸಿ ಪಿ ಐ ಸೇರಿದಂತೆ ಸರ್ವಪಕ್ಷಗಳನ್ನು ಪ್ರತಿನಿಧಿಸಿದ ಭಾರತದ ೨೧೨ ಸಂಸದರು ಈ ಉಪಕ್ರಮಗಳನ್ನು ‘ ನಾವು ಮಹಾಮಹಿಮ ದಲಾಯಿ ಲಾಮಾರ ಐದಂಶಗಳ ಶಾಂತಿಯೋಜನೆಯು ಟಿಬೆಟಿನ ಬಹುಮುಖ್ಯ ಪ್ರಶ್ನೆಯನ್ನು ಪರಿಹರಿಸುವಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಪರಿಗಣಿಸಿ, ಅದು ಟಿಬೆಟನ್ನರ ಯಾತನೆಯನ್ನು ನಿವಾರಿಸಿ ಪ್ರಾದೇಶಿಕ ಉದ್ವಿಗ್ನತೆಯನ್ನು ಶಮನಗೊಳಿಸುತ್ತದೆ ಎಂದು ಭಾವಿಸಿ, ಸಂಪೂರ್ಣವಾಗಿ ಬೆಂಬಲಿಸುತ್ತೇವೆ’ ಎಂದು ಹೇಳಿದ್ದಾರೆ.
ಭಾರತಕ್ಕೆ ಕಳವಳಕಾರಿಯಾದ ಅಂಶಗಳು
ಟಿಬೆಟಿನ ಜೊತೆಗೆ ಭಾರತದ ಸಂಬಂಧವು ಇತಿಹಾಸದ ಉದ್ದಕ್ಕೂ ಅತ್ಯಂತ ನಿಕಟವಾಗಿದೆ; ಸ್ನೇಹಯುತವಾಗಿದೆ. ಅದರಲ್ಲೂ ಭಾರತದಿಂದ ಏಳನೇ ಶತಮಾನದಲ್ಲಿ ಬೌದ್ಧ ದರ್ಮವು ಟಿಬೆಟಿಗೆ ಬಂದಾಗಿನಿಂದ ವಿಶೇಷವಾಗಿ ಹೆಚ್ಚಿದೆ.
ಟಿಬೆಟನ್ನು ಚೀನಾವು ಆಕ್ರಮಣ ಮಾಡಿದ ಮೇಲೆ ಇತಿಹಾಸದಲ್ಲೇ ಮೊದಲ ಬಾರಿಗೆ ಚೀನಾ ಮತ್ತು ಭಾರತದ ಸೇನೆಗಳು ಹಿಮಾಲಯದ ಗಡಿಯಲ್ಲಿ ಮೊಟ್ಟಮೊದಲ ಬಾರಿಗೆ ಮುಖಾಮುಖಿಯಾದವು. ಡಾ|| ರಾಜೇಂದ್ರ ಪ್ರಸಾದ್, ಡಾ|| ರಾಮ್ ಮನೋಹರ್ ಲೋಹಿಯಾ, ಲೋಕನಾಯಕ ಜಯಪ್ರಕಾಶ ನಾರಾಯಣ, ಡಾ|| ಬಿ.ಆರ್. ಆಂಬೇಡ್ಕರ್, ಸರ್ದಾರ್ ಪಟೇಲ್, ಪಂಡಿತ್ ದೀನದಯಾಳ ಉಪಾಧ್ಯಾಯ ಮತ್ತು ಹಲವು ಭಾರತೀಯ ಗಣ್ಯ ನಾಯಕರು ಟಿಬೆಟ್ ಬಗ್ಗೆ ಮತ್ತು ಭಾರತದ ಭದ್ರತೆಯ ಬಗ್ಗೆ ಅದು ಹೊಂದಿರುವ ಸಂಬಂಧದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ಹೊತ್ತಿನ ಹೊಸ ಭೂ-ರಾಜನೈತಿಕ ಹಾಗೂ ಭೂ-ವಐತ್ಮಕ ಸಂದರ್ಭದಲ್ಲಿ ಈ ಕೆಳಗಿನ ಸಂಗತಿಗಳು ಭಾರತದ ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ನೇರವಾದ ಪರಿಣಾಮವನ್ನು ಉಂಟುಮಾಡಲಿವೆ.
ಟಿಬೆಟನ್ ಪ್ರಸ್ಥಭೂಮಿಯ ಮಿಲಿಟರೀಕರಣ
ಚೀನಾವು ಭಾರತ ಹಾಗೂ ಚೀನಾದ ನಡುವಣ ಶಾಂತ – ಸಮರರಹಿತ ವಲಯವಾಗಿದ್ದ ಟಿಬೆಟನ್ನು ಒಂದು ಬೃಹತ್ ಮಿಲಿಟರಿ ವಲಯವನ್ನಾಗಿ ಪರಿವರ್ತಿಸಿದೆ. ಟಿಬೆಟನ್ ಪ್ರಸ್ಥಭೂಮಿಯ ಮಿಲಿಟರೀಕರಣವು ಈ ಪ್ರದೇಶದ ಭೂ-ರಾಜನೈತಿಕ ಸಮತೋಲನದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದರಿಂದ ಅಂತಾರಾಷ್ಟ್ರೀಯ ಉದ್ವಿಗ್ನತೆ ಉಂಟಾಗಲಿದೆ. ಅದರಲ್ಲೂ ವಿಶೇಷವಾಗಿ ಭಾರತ ಉಪಖಂಡದಲ್ಲಿ ಇದರ ಪರಿಣಾಮ ಗೋಚರಿಸಲಿದೆ.
ಟಿಬೆಟಿನಲ್ಲಿ ಚೀನಾದ ಮಿಲಿಟರಿ ಬಲವು ಹೀಗಿದೆ(2004):
- ೩ ಲಕ್ಷದಿಂದ ೫ಕ್ಷದವರೆಗೆ ಸೇನಾಬಲ; ಇವರಲ್ಲಿ ಬಹುತೇಕ ಸೈನಿಕರನ್ನು ಭಾರತದ ಗಡಿಯಲ್ಲಿ ನಿಯೋಜಿಸಲಾಗಿದೆ.
- ೧೭ ರಹಸ್ಯ ರಾಡಾರ್ ಕೇಂದ್ರಗಳು
- ೧೪ ಮಿಲಿಟರಿ ವಿಮಾನ ನೆಲೆಗಳು
- ೮ ಕ್ಷಿಪಣಿ ನೆಲೆಗಳು. ಇವುಗಳಲ್ಲಿ
- ೮ ಐ ಬಿ ಸಿ ಎಂಗಳು (ಅಂತಾರಾಷ್ಟ್ರೀಯ ಚಿಮ್ಮು ಕ್ಷಿಪಣಿಗಳು)
- ೭೦ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು
- ೫೦ ಅಂತರ್ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು ಸೇರಿವೆ.
ಇದಲ್ಲದೆ ಚೀನಾವು ಟಿಬೆಟನ್ನು ತನ್ನ ರಾಸಾಯನಿಕ ಸಮರ ಅಭ್ಯಾಸಗಳಿಗೆ ಮತ್ತು ಇತರೆ ದೇಶಗಳಿಂದ ಭಾರೀ ಪ್ರಮಾಣದ ಹಣವನ್ನು ಪಡೆದು ಸ್ವೀಕರಿಸಿದ ಪರಮಾಣು ತ್ಯಾಜ್ಯವನ್ನು ಹುಗಿಯಲು ಬಳಸುತ್ತಿದೆ.
ಇಷ್ಟೇ ಅಲ್ಲ, ೧೯೫೯ರಿಂದ ಈಚೆಗೆ ಭಾರತ-ಟಿಬೆಟ್ ಗಡಿಯ ಉಸ್ತುವಾರಿಗಾಗಿ ಭಾರತವು ಪ್ರತಿವರ್ಷವೂ ಬಳಸುತ್ತಿರುವ ರಾಷ್ಟ್ರೀಯ ಸಂಪನ್ಮೂಲವು ಹೆಚ್ಚುತ್ತಲೇ ಹೋಗಿದೆ. ಪರಿಸ್ಥಿತಿ ಹೀಗಿಲ್ಲದಿದ್ದರೆ ಈ ಸಂಪನ್ಮೂಲವನ್ನು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಿತ್ತು.
ರೈಲು ಯೋಜನೆ ಮತ್ತು ಅದರಿಂದ ಭಾರತದ ಮೇಲಾಗುವ ಪರಿಣಾಮ
೨೦೦೧ರ ಜೂನ್ ೨೯ರಂದು ಚೀನಾವು ಗೊರ್ಮೊದಿಂದ ಟಿಬೆಟಿನ ಲ್ಹಾಸಾಗೆ ಸಂಪರ್ಕ ಕಲ್ಪಿಸುವ ೧೧೧೮ ಕಿಲೋಮೀಟರುಗಳಷ್ಟು ಉದ್ದದ ರೈಲುಹಳಿ ಯೋಜನೆಯನ್ನು ಆರಂಭಿಸಿದೆ. ಇಷ್ಟಲ್ಲದೆ ೨೦೦೧ರ ಆಗಸ್ಟ್ ೧೦ರಂದು ಆಗಿನ ಚೀನಾ ಅಧ್ಯಕ್ಷ ಜಿಯಾಂಗ್ ಜೆಮಿನ್ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಿಂದಾಗಿ ಚೀನಾವು ಈ ರೈಲು ಸಂಪರ್ಕವನ್ನು ನಿರ್ಮಿಸುವ ಪಣ ತೊಟ್ಟಿರುವುದು ಕೇವಲ ರಾಜಕೀಯ ಹಾಗೂ ಮಿಲಿಟರಿ ಅಗತ್ಯಗಳಿಗೆ ಎನ್ನುವುದು ಸ್ಪಷ್ಟವಾಗಿದೆ.
ಈ ಯೋಜನೆಯು ಟಿಬೆಟನ್ ಪ್ರಸ್ಥಭೂಮಿಯನ್ನು ಮಿಲಿಟರೀಕರಣಗೊಳಿಸುವ ಚೀನಾದ ಕ್ರಮವನ್ನು ಇನ್ನಷ್ಟು ವಿಸ್ತರಿಸಲಿದೆ. ಇದರಿಂದ ಭಾರತ ಮತ್ತು ಚೀನಾದ ನಡುವೆ ಶಸ್ತ್ರಸ್ಪರ್ಧೆ ಉಲ್ಬಣಗೊಳ್ಳಲಿದೆ ; ಇದರಿಂದಾಗಿ ದಕ್ಷಿಣ ಮತ್ತು ಆಗ್ನೇಯ ಏಶಿಯಾದ ಶಕ್ತಿಸಮತೋಲನವು ಸಂಪೂರ್ಣವಾಗಿ ಬದಲಾಗಲಿದೆ.
ಒಮ್ಮೆ ಗೊರ್ಮೊವನ್ನು ಲ್ಹಾಸಾದ ರೈಲುಮಾರ್ಗದ ಮೂಲಕ ಜೋಡಿಸಿದ ಮೇಲೆ ಗೊರ್ಮೊದಲ್ಲಿನ ಮಿಲಿಟರಿ ನೆಲೆಯನ್ನು ಹಲವು ಪಟ್ಟು ಹೆಚ್ಚಿಸಬಹುದು ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ. ಇದರಿಂದಾಗಿ ಕೊಂಗ್‌ಪೋ ಮತ್ತು ಭಾರತದ ಗಡಿಯಲ್ಲಿರುವ ಟಿಬೆಟಿನ ನೈಋತ್ಯ ಪ್ರದೇಶಗಳಲ್ಲಿ ಪಿ ಎಲ್ ಎ ನೆಲೆಗಳು ಹರಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ.
ರೈಲ್ವೆ ಮಾರ್ಗವು ಕೊನೆಗೊಂಡ ಮೇಲೆ ಭಾರತೀಯ ಮಾರುಕಟ್ಟೆಯು ಅಗ್ಗದ ಚೀನೀ ನಿರ್ಮಿತ ವಸ್ತುಗಳ ಭಾರೀ ಪ್ರವಾಹಕ್ಕೆ ತುತ್ತಾಗಲಿದೆ. ಇದರಿಂದ ಭಾರತದ ಗೃಹ ಉದ್ಯಮಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ನೆಲ ಕಚ್ಚಲಿವೆ.
ಪರಿಸರ ನಾಶ
ವಿಶ್ವದ ಛಾವಣಿ ಎಂದೇ ಹೆಸರಾದ ಟಿಬೆಟ್ ಏಶಿಯಾಖಂಡದ ಹೃದಯಭಾಗದಲ್ಲಿದೆ. ಅದು ಎಲ್ಲಾ ಪ್ರಮುಖ ನದಿಗಳಿಗೆ ಮೂಲವಾಗಿದೆ. ಈ ನದಿಗಳೇ ಭಾರತ, ಚೀನಾ, ನೇಪಾಳ, ಭೂತಾನ, ಬಾಂಗ್ಲಾದೇಶ, ಪಾಕಿಸ್ಥಾನ, ಮ್ಯನ್ಮಾನ್, ಥೈಲ್ಯಾಂಡ್, ಲಾವೋಸ್, ಕ್ಯಾಂಬೋಡಿಯಾ ಮತ್ತು ವಿಯೆಟ್ನಾಮ್ ದೇಶಗಳ, ಅಂದರೆ ಏಶಿಯಾ ಖಂಡದ ಅಧರದಷ್ಟು ಜನಸಂಖ್ಯೆಯ ಬದುಕಿಗೆ ಆಧಾರವಾಗಿವೆ.
ಚೀನೀ ಆಡಳಿತದಲ್ಲಿ ಟಿಬೆಟಿನ ಪರಿಸರವನ್ನು ವ್ಯವಸ್ಥಿತವಾಗಿ, ಅಭೂತಪೂರ್ವವಾಗಿ ನಾಶ ಮಾಡಲಾಗುತ್ತಿದೆ. ಅಲ್ಲಿನ ಸಂಪದ್ಭರಿತ ವನ್ಯಜೀವಿ ಸಂಕುಲ, ಕಾಡುಗಳು, ಸಸ್ಯಗಳು, ಖನಿಜಗಳು, ಜಲಮೂಲಗಳು – ಎಲ್ಲವೂ ಇನ್ನಿಲ್ಲದಂತೆ ನಷ್ಟ ಮತ್ತು ಶೈಥಿಲ್ಯಕ್ಕೆ ಒಳಗಾಗಿವೆ. ಟಿಬೆಟಿನ ಸೂಕ್ಷ್ಮ ಜೈವಿಕ ಸಮತೋಲನವು ತೀವ್ರ ಆಘಾತಕ್ಕೆ ಒಳಗಾಗಿದೆ.
೧೯೮೫ರ ಹೊತ್ತಿಗೆ ಚೀನಾ ಆಡಳಿತವು ಟಿಬೆಟಿನ ಅರಣ್ಯ ಸಂಪತ್ತಿನಿಂದ ೫೪ ಬಿಲಿಯ ಡಾಲರ್‌ಗಳಷ್ಟು ಬೆಲೆಯ ಮರಮುಟ್ಟುಗಳನ್ನು ಕತ್ತರಿಸಿ ಸಾಗಿಸಿದೆ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಬರಿ ಅಮ್‌ದೋ ಪ್ರಾಂತವೊಂದರಲ್ಲೇ ೧೯೫೫ರಿಂದೀಚೆಗೆ ೫೦ ಮಿಲಿಯ ಮರಗಳನ್ನು ಕಡಿದು ಉರುಳಿಸಲಾಗಿದೆ. ಟಿಬೆಟಿನ ಉಳಿದ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಇಂಥದೇ ಸ್ಥಿತಿ ಉಂಟಾಗಿದೆ.
ಟಿಬೆಟಿನ ಅರಣ್ಯನಾಶವು ನದಿಗಳಲ್ಲಿ ಹೂಳಿಗೆ ಕಾರಣವಾಗಿದೆ ; ಚೀನಾವೂ ಸೇರಿದಂತೆ ನೆರೆದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ೧೯೮೭-೮೮ರಲ್ಲಿ ಬ್ರಹ್ಮಪುತ್ರ ನದಿಯು ಭಾರತದ ನೆರೆ ಪ್ರಮಾಣದಲ್ಲಿ ಶೇ. ೩೫ರಷ್ಟು ಪಾಲು ಹೊಂದಿತ್ತು. ಟಿಬೆಟಿನ ಅರಣ್ಯನಾಶವು ಮುಂಗಾರಿನ ಅಸಮತೋಲನಕ್ಕೂ ಕಾರಣವಾಗುತ್ತದೆ. ಇದರಿಂದಾಗಿ ಭಾರತದ ಕೃಷಿಯ ಮೇಲೆ ದುರಂತದ ಛಾಯೆ ಮೂಡಬಹುದಾಗಿದೆ.
ಚೀನಾವು ಈಗಾಗಲೇಬ್ರಹ್ಮಪುತ್ರ ನದಿಯ ಪಾತ್ರವನ್ನು ಬದಲಿಸುವ ತನ್ನ ಯೋಜನೆಯನ್ನು ಪ್ರಕಟಿಸಿದೆ. ಮುಂದಿನ ಪಾಳಿ ಸಿಂಧೂ ನದಿಯದಾಗಿರಬಹುದು. ಆಮೇಲೆ ಸಟ್ಲೆಜ್. ಭೌತಿಕವಾಗಿ ಅಸಾಧ್ಯ ಎನ್ನುವವರೆಗೆ ಚೀನಾವು ಭಾರತವನ್ನು ದುರ್ಬಲಗೊಳಿಸಲು ಮತ್ತು ನಿಯಂತ್ರಣದಲ್ಲಿ ಇಡುವ ಅಭಿಯಾನದಲ್ಲಿ ಯಾವುದೇ ಮಾರ್ಗವನ್ನೂ ಚೀನಾವು ಬಳಸದೆ ಬಿಡದು.
ಕೈಲಾಸ – ಮಾನಸ ಸರೋವರ
ಟಿಬೆಟಿನ ಇತರೆ ಭಾಗಗಳಂತೆ ಪವಿತ್ರ ಕೈಲಾಸ – ಮಾನಸ ಸರೋವರ ಪ್ರದೇಶವನ್ನೂ ಮಿಲಿಟರಿ ನೆಲೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಕೈಲಾಸ – ಮಾನಸ ಸರೋವರ ಪ್ರದೇಶವುಭಾರತದ ಹಲವು ಮಹಾನ್ ನದಿಗಳ ಉಗಮಪ್ರದೇಶವಾಗಿರುವುದರಿಂದ ಚೀನಾವು ಈ ಪ್ರದೇಶದ ಸಮೃದ್ಧ ನೈಸರ್ಗಿಕ ಸಂಪನ್ಮೂಲಗಳನ್ನು ಶೋಷಿಸಿ ಈ ಪವಿತ್ರ, ಪುಣ್ಯಕ್ಷೇತ್ರವನ್ನು ಅಪವಿತ್ರಗೊಳಿಸುತ್ತಿದೆ. ಕೈಲಾಸ – ಮಾನಸ ಸರೋವರಕ್ಕೆ ಭೇಟಿ ನೀಡಬಯಸುವ ಭಾರತೀಯ ತೀರ್ಥಯಾತ್ರಿಗಳಿಗೆ ಚೀನಾವು ಎಲ್ಲಾ ಬಗೆಯ ನಿರ್ಬಂಧಗಳನ್ನು ಹೇರಿ ಅವರಿಗೆ ಭೇಟಿ ನೀಡುವುದಕ್ಕೇ ಸಮಸ್ಯೆಗಳನ್ನು ಉಮಟುಮಾಡುತ್ತಿದೆ.
ಚೀನೀ ಜನಸಂಖ್ಯೆಯ ವರ್ಗಾವಣೆ
ಭಾರೀ ಪ್ರಮಾಣದಲ್ಲಿ ಚೀನೀಯರನ್ನು ಟಿಬೆಟಿಗೆ ವರ್ಗಾವಣೆ ಮಾಡುವ ಮತ್ತು ಟಿಬೆಟನ್ ಮಹಿಳೆಯರಿಗೆ ಬಲವಂತವಾಗಿ ಗರ್ಭಪಾತ ಮಾಡುವ ಮತ್ತು ಸಂತಾನಹರಣ ಶಸ್ತ್ರ ಚಿಕಿಸ್ತೆ ಮಾಡುವ ‘ಚೀನೀಕರಣ’ವು ಭಾರತದ ಮೇಲೆ ತೀವ್ರವಾದ ಋಣಾತ್ಮಕ ಭೂರಾಜನೈತಿಕ ಪರಿಣಾಮ ಉಂಟು ಮಾಡಲಿದೆ ; ಭೂ-ವ್ಯೂಹಾತ್ಮಕ ಪರಿಣಾಮವೂ ಕಂಡುಬರಲಿದೆ. ಒಮ್ಮೆ ಟಿಬೆಟ್ ಚೀನೀಯರಿಂದ ತುಂಬಿಹೋದರೆ ಸಾಕು, ಅದು ಈ ಹಿಂದೆ ಶಾಂತಿವಲಯವಾಗಿತ್ತು ಎಂಬ ಐತಿಹಾಸಿಕ ಸ್ಥಾನಮಾನವೇ ಕಾಯಂ ಆಗಿ ಮರೆಯಾಗುತ್ತದೆ.
ಇಂದು ಟಿಬೆಟಿನಲ್ಲಿ ಟಿಬೆಟನ್ನರ ಸಂಖ್ಯೆ ೬೦ ಲಕ್ಷ ; ಆದರೆ ಚೀನೀಯರ ಸಂಖ್ಯೆ ೭೫ ಲಕ್ಷ. ಲ್ಹಾಸದಲ್ಲಿ ೧೯೫೦ರಲ್ಲಿ ಚೀನೀಯರು ಇದ್ದಿದ್ದೇ ತೀರಾ ಅಪರೂಪ. ಇಂದು ಅಲ್ಲಿ ಚೀನೀಯರು ಮತ್ತು ಟಿಬೆಟನ್ ಜನಸಂಖ್ಯೆ ಅನುಪಾತ ೩:೧.
ಟಿಬೆಟನ್ನು ಅಹಿಂಸೆಯ ವಲಯವನ್ನಾಗಿ ಮಾಡುವ ಅನಿವಾರ್ಯತೆಯ ಬಗ್ಗೆ ಜಾಗೃತಿಯನ್ನು ಉಂಟುಮಾಡುವುದು, ಟಿಬೆಟಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ಟಿಬೆಟಿನ ವಿಶಿಷ್ಟ ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಪರಂಪರೆಯನ್ನು ವ್ಯವಸ್ಥಿತವಾಗಿ ಹರಣ ಮಾಡುತ್ತಿರುವುದು, ಟಿಬೆಟಿನ್ ಪ್ರಸ್ಥಬೂಮಿಯಲ್ಲಿ ಪರಿಸರದ ನಾಶಕ್ಕೆ, ಶೈಥಿಲ್ಯಕ್ಕೆ ಕಾರಣವಾಗಿ ಇಡೀ ಹಿಮಾಲಯ ಪ್ರದೇಶದ ಹಾಗೂ ದಕ್ಷಿಣ ಹಾಗೂ ಆಗ್ನೇಯ ಏಶಿಯಾದ ದೇಶಗಳ ಭವಿಷ್ಯಕ್ಕೆ ಬಾರೀ ಗಂಡಾಂತರವನ್ನು ತಂದಿರುವುದು, ಸಾಂಪ್ರದಾಯಿಕವಾಗಿ ಶಾಂತಿಯ ಪ್ರದೇಶವೇ ಆಗಿದ್ದ ಟಿಬೆಟಿನಲ್ಲಿ ಭಾರೀ ಪ್ರಮಾಣದಲ್ಲಿ ಪರಮಾಣು ಹಾಗೂ ಕ್ಷಿಪಣಿ ಸಾಮರ್ಥ್ಯವನ್ನು ಸ್ಥಾಪಿಸಿರುವುದು, – ಇವು ಈಗಿನ ಮುಖ್ಯ ಸಂಗತಿಗಳಾಗಿವೆ.
ಟಿಬೆಟ್ : ಒಂದು ಪಕ್ಷಿನೋಟ
- ವಿಸ್ತೀರ್ಣ: ೨.೫ ದಶಲಕ್ಷ ಚದರ ಕಿಮೀ; ಅಂದರೆ ಈಗಿನ ಚೀನಾದ ಶೇ. ೨೬.೦೪ರಷ್ಟು ಪ್ರದೇಶ.
- ರಾಜಧಾನಿ: ಲ್ಹಾಸಾ
- ಜನಸಂಖ್ಯೆ ೬೦ ಲಕ್ಷ ಟಿಬೆಟನ್ನರು ಮತ್ತು ಚೀನೀ ಆಕ್ರಮಣದಲ್ಲಿ ಲೆಕ್ಕಕ್ಕೆ ಸಿಗದ ಅಸಮಖ್ಯೆ ಜನರು.
- ಧರ್ಮ: ಬೌದ್ಧ, ಬಾನ್ ಮತ್ತು ಇಸ್ಲಾಮ್
- ಭಾಷೆ: ಟಿಬೆಟನ್ (ಅಧಿಕೃತ ಭಾಷೆ) ; ಆಕ್ರಮಿತ ಟಿಬೆಟಿನಲ್ಲಿ ಈಗ ಚೀನೀ ಭಾಷೆ.
- ಪ್ರಮುಖ ಪಾರಿಸರಿಕ ಸಮಸ್ಯೆ : ಬೇಕಾಬಿಟ್ಟಿ ಅರಣ್ಯನಾಶ, ಬೃಹತ್ ಸಸ್ತನಿಗಳ ಬೇಟೆ
- ಸರಾಸರಿ ಎತ್ತರ: ೧೪,೦೦೦ ಅಡಿಗಳು
- ಉನ್ನತ ಶಿಖರ : ಚೋಮೋಲುಂಗ್‌ಮಾ / ಸಾಗರಮಾತಾ / ಮೌಂಟ್ ಎವರೆಸ್ಟ್, ೨೯,೦೨೪ ಅಡಿಗಳು
- ಸರಾಸರಿ ತಾಪಮಾನ: ಜುಲೈ: ೫೮ ಡಿಗ್ರಿ ಫ್ಯಾರನ್‌ಹೀಟ್, ಜನವರಿ : ೪ ಡಿಗ್ರಿ ಫ್ಯಾ.
- ಪ್ರಮುಖ ನದಿಗಳು: ತ್ಸಾಂಗ್‌ಪೋ (ಬ್ರಹ್ಮಪುತ್ರ) ಯಾಂಗ್‌ತ್ಸೆ, ಮಿಕಾಂಗ್, ಸಲ್ವೀನ್, ಹುವಾಂಗ್ ಹೊ ಮತ್ತು ಇಂಡಸ್ ಹಾಗೂ ಸಟ್ಲೆಜ್
- ಪ್ರಾಂತಗಳು: ಯು-ತ್ಸಾಂಗ್, ಅಮ್ದೋ ಮತ್ತು ಖಾಮ್
- ಗಡಿದೇಶಗಳು: ಒಳ ಮಂಗೋಲಿಯಾ, ಪೂರ್ವ ತುರ್ಕಮೆನಿಸಸ್ತಾನ್, ಭಾರತ, ನೇಪಾಳ, ಭೂತಾನ್, ಬರ್ಮಾ ಮತ್ತು ಚೀನಾ
- ಆಡಳಿತದ ಮುಖ್ಯಸ್ಥರು : ಮಹಾಮಹಿಮ ದಲಾಯಿಲಾಮಾ
- ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಜೊತೆಗಿನ ಸಂಬಂಧ: ವಸಾಹತು
ಟಿಬೆಟ್ ಸ್ವಾಯತ್ತ ಪ್ರಾಂತ ಎಂದರೇನು? ( ಟಿ ಎ ಆರ್)
೧೯೬೫ರಲ್ಲಿ ರಚಿತವಾದ ತಥಾಕಥಿತ ಟಿಬೆಟ್ ಆಟೋನಾಮಸ್ ರೀಜನ್ ಎಂಬುದು ಟಿಬೆಟಿನ ಅರ್ಧದಷ್ಟು ಪ್ರದೇಶ ಹಾಗೂ ಟಿಬೆಟಿನ ಮೂರನೇ ಒಂದು ಭಾಗದಷ್ಟು ಜನರನ್ನು ಒಳಗೊಂಡ ಪ್ರಾಂತ. (ನಿಜ ಅರ್ಥದಲ್ಲಿ ಟಿಬೆಟ್ ಎಂದರೆ ಯು-ತ್ಸಾಂಗ್, ಆಮ್‌ದೋ ಹಾಗೂ ಖಾಮ್ ಪ್ರಾಂತಗಳನ್ನು ಒಳಗೊಂಡದ್ದು. ಟಿಬೆಟ್ ಎಂದರೆ ಕೇವಲ ಟಿಬೆಟ್ ಆಟೋನಾಮಸ್ ರೀಜನ್ ಎಂದು ತಪ್ಪು ತ ಇಳಿಯಬಾರದು)
ಭೂಪ್ರದೇಶ
ಉ-ತ್ಸಾಂಗ್, ಖಾಮ್ ಹಾಗೂ ಆವ ಪ್ರಾಂತವನ್ನು ಒಳಗೊಂಡಂತೆ ಟಿಬೆಟಿನ ವಿಸ್ತೀರ್ಣ ೨.೫ ದಶಲಕ್ಷ ಚದರ ಕಿಮೀ. ಉ-ತ್ಸಾಂಗ್ ಹಾಗೂ ಖಾಮ್ ಪ್ರಾಂತದ ಒಂದಷ್ಟು ಭಾಗವನ್ನು ಒಳಗೊಂಡ ಟಿಬೆಟ್ ಆಟೋನಾಮಸ್ ರೀಜನ್ ಕೇವಲ ೧.೨ ಚದರ ಕಿಮೀ. ವಿಸ್ತೀರ್ಣವನ್ನು ಹೊಂದಿದೆ. ಟಿಬೆಟಿನ ಬಹುಭಾಗವು ಈ ಟಿ ಎ ಆರ್‌ನ ಹೊರಗೆ ಇದೆ.
ಆಡಳಿತ
ಚೀನೀ ಆಡಳಿತದಲ್ಲಿ ಟಿಬೆಟನ್ನು ಈ ಕೆಳಕಂಡಂತೆ ಆಡಳಿತಾತ್ಮಕ ಘಟಕಗಳನ್ನಾಗಿ ವಿಂಗಡಿಸಲಾಗಿದೆ:
೧) ಟಿಬೆಟ್ ಆಟೋನಾಮಸ್ ರೀಜನ್
೨) ಖಿಂಗಾಯ್ ಪ್ರಾಂತ
೩) ತಿಯಾನ್‌ಝು ಟಿಬೆಟನ್ ಆಟೋನಾಮಸ್ ಕೌಂಟಿ ಮತ್ತು ಗಾನ್‌ಸು ಪ್ರಾಂತದಲ್ಲಿ ಗನ್ನಾನ್ ಆಟೋನಾಮಸ್ ಪ್ರಿಫೆಕ್ಚರ್.
೪) ಸಿಚುವಾನ್ ಪ್ರಾಂತದಲ್ಲಿ ಅಬಾ ಟಿಬೆಟನ್ – ಖಿಯಾಂಗ್ ಆಟೋನಾಮಸ್ ಪ್ರಿಫೆಕ್ಚರ್ ಮತ್ತು ಮಿಲಿ ಟಿಬೆಟನ್ ಆಟೋನಾಮಸ್ ಕೌಂಟಿ.
೫) ಯುನ್ನಾನ್ ಪ್ರಾಂತದಲ್ಲಿ ಡೆಚೆನ್ ಟಿಬೆಟನ್ ಆಟೋನಾಮಸ್ ಪ್ರಿಫೆಕ್ಚರ್.
ಜನಸಂಖ್ಯೆ:
ಟಿಬೆಟಿನ ಒಟ್ಟು ಜನಸಂಖ್ಯೆ ೬೦ ಲಕ್ಷ. ಇವರಲ್ಲಿ ೨.೦೩ ದಶಲಕ್ಷ ಜನರು ಟಿ ಎ ಆರ್‌ನಲ್ಲಿದ್ದಾರೆ.ಉಳಿದವರು ಟಿ ಎ ಆರ್ ಹೊರಗಿನ ಪ್ರದೇಶಗಳಲ್ಲಿ ಇದ್ದಾರೆ.
ದೇಶಭ್ರಷ್ಟ ಟಿಬೆಟನ್ನರು:
ಜನಸಂಖ್ಯೆ: ಸುಮಾರು ೧೧೧,೧೭೦ (ಜಾಗತಿಕ ಹಂಚಿಕೆ: ಬಾರತದಲ್ಲಿ ಟಿಬೆಟನ್ನರ ಸಂಖ್ಯೆ: ೮೫,೦೦೦). ನೇಪಾಳ : ೧೪,೦೦೦, ಭೂತಾನ: ೧೬೦೦. ಸ್ವಿಜರ್‌ಲ್ಯಾಂಡ್: ೧೫೪೦, ಯೂರೋಪಿನ ಉಳಿದ ಭಾಗದಲ್ಲಿ: ೬೪೦, ಸ್ಕಾಂಡಿನೇವಿಯಾ: ೧೦೦೦, ಅಮೆರಿಕಾ ಮತ್ತು ಕೆನಡಾ: ೭೦೦೦, ಆಸ್ಟ್ರೇಲಿಯಾ ಮತ್ತು ನ್ಯೂಝೀಲ್ಯಾಂಡ್: ೨೨೦. (ಧರ್ಮಶಾಲೆಯು ಮಾಡಿದ ೧೯೯೮ರ ಟಿಬೆಟನ್ ಜನಸಂಖ್ಯಾ ಸಮೀಕ್ಷೆ ಆಧಾರಿತ)
ದೇಶಭ್ರಷ್ಟ ಟಿಬೆಟನ್ ಸರ್ಕಾರ: ಟಿಬೆಟನ್ ಮೌಲ್ಯಗಳ ಆಧಾರಿತ ಪ್ರಜಾತಾಂತ್ರಿಕ ರಾಜಕೀಯದ ಆಡಳಿತ. ಇಲ್ಲಿ ಸ್ವತಂತ್ರ ನ್ಯಾಯಾಂಗವಿದೆ. ನೇರವಾಗಿ ಆಯ್ಕೆಯಾದ ಶಾಸಕಾಂಗವಿದೆ; ಸಂಸತ್ತಿಗೆ ನೇರವಾಗಿ ಹೊಣೆಗಾರಿಕೆ ಹೊಂದಿರುವ ಸಚಿವ ಸಂಪುಟವಿದೆ.
ಸಂವಿಧಾನ: ಚಾರ್ಟರ್ ಆಫ್ ಟಿಬೆಟನ್ ಇನ್ ಎಕ್ಸೈಲ್.
ಪ್ರಮುಖ ಸರ್ಕಾರೇತರ ಸಂಸ್ಥೆಗಳು: ಟಿಬೆಟನ್ ಯೂಥ್ ಕಾಂಗ್ರೆಸ್, ಟಿಬೆಟನ್ ವುಮೆನ್ಸ್ ಅಸೋಸಿಯೇಶನ್, ಟಿಬೆಟನ್ ಸೆಂಟರ್ ಫಾರ್ ಹ್ಯುಮನ್ ರೈಟ್ಸ್ ಎಂಡ್ ಡೆಮಾಕ್ರಸಿ, ಎನ್ ಡಿ ಪಿ ಟಿ, ಟಿಬೆಟನ್ ಯುನೈಟೆಡ್ ಅಸೋ, ಗು-ಚು-ಸುಮ್-ದೊ-ತೋ ಅಸೋ, ದೊ-ಮೇ ಅಸೋ, ಉ-ತ್ಸಾಂಗ್ ಅಸೋ, ಎನ್‌ಗಾರಿ ಅಸೋ
ಟಿಬೆಟ್ ಕಚೇರಿಗಳು: ಟಿಬೆಟಿನ ರಾಯಭಾರ ಕಚೇರಿಗಳು ಹೊಸದಿಲ್ಲಿ, ಕಾಠ್ಮಂಡು, ನ್ಯೂಯಾರ್ಕ್, ಲಂಡನ್, ಪ್ಯಾರಿಸ್, ಜಿನೀವಾ, ಬುಸೆಲ್ಸ್, ಬುಡಾಪೆಸ್ಟ್, ಮಾಸ್ಕೋ, ಕ್ಯಾನ್‌ಬೆರ್ರಾ, ಟೋಕಿಯೋ, ಪ್ರಿಟೋರಿಯಾ ಮತ್ತು ತಾಯ್‌ಪೀಗಳಲ್ಲಿ ಇವೆ.
ಜೀವನಾಧಾರ: ಕೃಷಿ, ಕೃಷಿ ಸಂಬಂಧಿ ಉದ್ಯಮ, ಸ್ವೆಟರ್ ಮಾರಾಟ, ಕರಕುಶಲ ವಸ್ತುಗಳ ಮಾರಾಟ, ಸೇವಾ ರಂಗ.
ಶಿಕ್ಷಣ: ಟಿಬೆಟಿನ ಶಾಲಾ ದಾಖಲಾತಿಯು ಶಾಲಾವಯಸ್ಕ ಮಕ್ಕಳ ಶೇ. ೮೦ರಿಂದ ೯೦ರಷ್ಟಿದೆ. ಈಗ ೧೦೬ ಶಿಶುವಿಹಾರಗಳು, ೮೭ ಪ್ರಾಥಮಿಕ ಶಾಲೆಗಳು, ೪೪ ಮಾಧ್ಯಮಿಕ ಶಾಲೆಗಳು, ೨೧ ಸೆಕಂಡರಿ ಮಟ್ಟದ ಶಾಲೆಗಳು, ೧೩ ಹಿರಿಯ ಸೆಕಂಡರಿ ಮಟ್ಟದ ಶಿಕ್ಷಣಸಂಸ್ಥೆಗಳು ಇವೆ. ಒಟ್ಟು ೨೫೦೦೦ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.
ಟಿಬೆಟ್‌ನಲ್ಲಿ ಚೀನಾ ಆಡಳಿತ: ಒಂದು ಪಕ್ಷಿನೋಟ
- ೧೨ ಲಕ್ಷಕ್ಕೂ ಹೆಚ್ಚು ಟಿಬೆಟನ್ನರು ಸಾವಿಗೀಡಾಗಿದ್ದಾರೆ.
- ೬೦೦೦ಕ್ಕೂ ಹೆಚ್ಚು ಬೌದ್ಧಾಲಯಗಳನ್ನು ನಾಶಪಡಿಸಲಾಗಿದೆ.
- ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸಿದ್ದಕ್ಕಾಗಿ ಸಾವಿರಾರು ಟಿಬೆಟನ್ನು ಇನ್ನೂ ಸೆರೆಮನೆಗಳಲ್ಲಿ ಇದ್ದಾರೆ.
- ಟಿಬೆಟಿನ ನೈಸರ್ಗಿಕ ಸಂಪನ್ಮೂಲ ಹಾಗೂ ಸೂಕ್ಷ್ಮ ಜೈವಿಕ ಪರಿಸರವನ್ನು ಇನ್ನೆಂದೂ ಸರಿಮಾಡಲಾಗದಂತೆ ಹಾಳುಗೆಡವಲಾಗಿದೆ.
- ಟಿಬೆಟನ್ನು ಪರಮಾಣು ತ್ಯಾಜ್ಯವನ್ನು ಎಸೆಯಲು ಬಳಸುತ್ತಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ.
- ಟಿಬೆಟಿನಲ್ಲೇ ಟಿಬೆಟನ್ನೇ ( ೬೦ ಲಕ್ಷ) ಚೀನೀಯರಿಗಿಂತ (೭೫ ಲಕ್ಷ) ಕಡಿಮೆ ಸಂಖ್ಯೆಯಲ್ಲಿದ್ದಾರೆ.
- ಒಂದು ಕಾಲದಲ್ಲಿ ಶಾಂತಿ ಹಾಗೂ ಸಮರರಹಿತ ವಲಯವಾಗಿದ್ದ ಟಿಬೆಟ್ ಈಗ ಬೃಹತ್ ಸೇನಾನೆಲೆಯಾಗಿದೆ.
ನೀವು ಇಂದು ಟಿಬೆಟಿಗಾಗಿ ಏನು ಮಾಡಬಹುದು?
- ನಿಮ್ಮ ಪ್ರದೇಶದಲ್ಲಿ ಟಿಬೆಟನ್ ಬೆಂಬಲ ಗುಂಪನ್ನು ಸ್ಥಾಪಿಸಿ ಮತ್ತು ನಿಮ್ಮ ಸುತ್ತಮುತ್ತಲಿನ ಜನರಿಗೆ ಟಿಬೆಟ್ ಹಾಗೂ ಟಿಬೆಟನ್ ಜನತೆಯ ಬಗ್ಗೆ ಮಾಹಿತಿ ನೀಡಿ.
- ವೃತ್ತಪತ್ರಿಕೆ ಹಾಗೂ ಮ್ಯಾಗಜಿನ್‌ಗಳಲ್ಲಿ ಟಿಬೆಟನ್ ಜನರ ಸ್ವಾತಂತ್ರ್ಯದ ಹಾಗೂ ನ್ಯಾಯಯುತ ಹಕ್ಕುಗಳ ಬಗ್ಗೆ ಲೇಖನ ಬರೆದು ಈ ಸಂಗತಿಗಳನ್ನು ಬೆಂಬಲಿಸಿ.
- ನಿಮ್ಮ ಸಂಸತ್ಸದಸ್ಯರಿಗೆ ಕಾಗದ ಬರೆದು ಸಂಸತ್ತಿನಲ್ಲಿ ಟಿಬೆಟ್ ವಿಷಯವನ್ನು ಎತ್ತುವಂತೆ ಕೇಳಿಕೊಳ್ಳಿ.
- ನಿಮ್ಮ ಸಂಸತ್ಸದಸ್ಯರನ್ನು ಹಾಗೂ ಸರ್ಕಾರವನ್ನು ಟಿಬೆಟ್ ಕುರಿತ ದಲಾಯಿಲಾಮಾರವರ ಶಾಂತಿ ಉಪಕ್ರಮಗಳನ್ನು ಬೆಂಬಲಿಸಲು ಕೇಳಿಕೊಳ್ಳಿ.
- ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಹಾಗೂ ಟಿಬೆಟ್ ದೇಶಭ್ರಷ್ಟ ಸರ್ಕಾರದ ನಡುವೆ ಅರ್ಥಪೂರ್ಣ ಮಾತುಕತೆ ನಡೆಸುವಂತೆ ಅನುವು ಮಾಡಿಕೊಡಲು ಯತ್ನಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿ.