ನಾವು ಭೇಟಿಯಾದದ್ದು ಕೊಂಚ
ತಡವಾಯಿತಾದರೂ ನೋಡು ಬೈಟು
ಚಾಗೆ ಮೋಸವಿಲ್ಲ ಇಲ್ಲಿ ಮಾತು
ಆರುವುದಿಲ್ಲ ಬೆಂಚಿನ ಮೇಲೆ ಮೌನ
ಕೂತುಗೊಳ್ಳುವುದಿಲ್ಲ.
ನಮ್ಮ ವಾಸನಾಯುಕ್ತ ವಾಕ್ಯಗಳನ್ನು ಇಲ್ಲೇ
ಹಿಂಡಿಬಿಡೋಣ ಮಾರಾಯ್ತಿ ಹೊರಗೆ
ಮಳೆ ಜಡೀತಾ ಇದೆಯೆಂದ ಮೇಲೆ ಹೇಗೆ
ಒಣಗಿಸೋಣ ಹೇಳು ಥಂಡಿ ಪ್ರೀತಿಯನ್ನು?
ಈ ಮೇಜಿನ ಕಪ್ಪು ಮುಖದಲ್ಲಿ ನಿನ್ನ
ಬಿಂಬ ಹೊಳೆಯುತ್ತಾ ನಾನು ಮರೆಯಬಹುದು
ಕಣೆ ನಿಲುವು ತೋರಿಸೋ ಕನ್ನಡಿಗಳನ್ನು
ಅಳೆಯಬಹುದು ಮುಖಗಳ ನಡುವಿನಂತರವನ್ನು.
ತಗೋ ಈ ಅವಲಕ್ಕಿ ಜಗೀತಾ ಮಸೆ
ನಿನ್ನ ದ್ವೇಷದ ಹಲ್ಲುಗಳನ್ನು ಮಾತ್ರ
ಹಸಿಮೆಣಸು ಖಾರ ಹುಷಾರು
ಸುಡಬಹುದು ನಿನ್ನ ಹೆಂಗರುಳನ್ನು
ಕುಡಿಮಿಂಚಿಗೆ ಬೆದರಬೇಡವೆ ಹುಡುಗಿ
ಈ ಕ್ಯಾಂಟೀನಿನ ಮೇಲೆ ನಿಂತಿರೋ
ಕಬ್ಬಿಣದ ಕವೆ ತುಕ್ಕು ಹಿಡಿದಿದ್ದರೂ
ಹುಗಿಯುತ್ತದೆ ಸಿಡಿಲನ್ನು.
ಭದ್ರವಾಗಿಡು ಕಾಲುಗಳನ್ನು.
ಹೊಳವಾದ ಮೇಲೆ ಇನ್ನೂ ಹರಿಯುತ್ತೆ
ನೀರು ಎಡವಿದರೇನೇ ಗತಿ? ಇರು
ಇನ್ನೈದು ನಿಮಿಷ ಪ್ರೇಮದ
ಠರಾವು ಸ್ವೀಕರಿಸೋಣ ಇದ್ದಾನಲ್ಲ ಈ
ಮಾಣಿ ದಿವ್ಯಸಾಕ್ಷಿಯಾಗಿ.
ನಾವು ಭೇಟಿಯಾದದ್ದು ಕೊಂಚ
ತಡವಾಯಿತಾದರೂ ನೋಡು
ಮಾತಿಗೆ ಮೋಸವಿಲ್ಲ ಇಲ್ಲಿ ಚಾ
ಆರುವುದಿಲ್ಲ.
ಬೆಂಚಿನ ಮೇಲೆ ಮೌನ ಕೂತಿದ್ದೊಂದೇ ಬದಲು.
ಅಲ್ಲವೇನೇ?
೩೦-೯-೯೬ ಬೆಂಗಳೂರು