ಸಮತೆ – ಸಾಕ್ಷರತೆ
೯-೯-೯೦
ಬಳ್ಳಾರಿ
ಕೋಟಿ ಸೂರುಗಳ ಬರಿಯೊಡಲೊಳಗೆ
ಹೊಲೆತನ ತೊಟ್ಟವರಿದ್ದಾರೆ
ಅಗಣಿತ ನಕ್ಷತ್ರಗಳಂತೇನೇ
ಅಕ್ಷರ ಬರೆದವರಿದ್ದಾರೆ.
ಹೆಬ್ಬೆಟ್ಟಿನ ಅರೆಗೆರೆಗಳ ಜತೆಗೇ
ಹೊಲಮನೆ ಕೊಟ್ಟವರಿದ್ದಾರೆ
ದಾರಿದೀಪಗಳ ಬೆಳಕಿನ ಕೆಳಗೆ
ಕತ್ತಲು ಹೊದ್ದವರಿದ್ದಾರೆ.
ಕನಸಿಗೆ ಕಾಣದ ಮನಸಿಗೆ ಮೂಡದ
ಸುಖಗಳ ಸುಟ್ಟವರಿದ್ದಾರೆ.
ದಲಿತರಾಗಿ ನಿರ್ವೇಶಿತರಾಗಿ
ದಹಿಸಿದ ಮನುಷ್ಯರಿದ್ದಾರೆ.
ತುತ್ತಿನ ಚೀಲವೆ ಬದುಕಿನ ಗುರಿಯೆ?
ಇತ್ತಲ್ಲವೆ ಸಂತೃಪ್ತಿಯ ಹೊತ್ತು?
ಕಾಲಮಾನಗಳು ಬೆಳೆದಿವೆ ಧುತ್ತನೆ
ಕಲ್ಕಿಯ ರೂಪವ ಹೊತ್ತು.
ಎಲೆ ಹಸಿರಿಲ್ಲವೆ? ನೆಲಕುಸಿರಿಲ್ಲವೆ?
ಜಲಕ್ಕಿಲ್ಲವೆ ಜೀವನದೃಷ್ಟಿ?
ನಮಗಿಲ್ಲವೆ ಹೃದಯ? ಇಲ್ಲವೆ ಮನ?
ಮತ್ತೇನದು ಜಾತಿಯ ಸೃಷ್ಟಿ?
ದುಡಿಯುವ ದುಸ್ತರ ಜೀವಿಗಳೆಡೆಗೆ
ನಮಗಿಲ್ಲವೆ ಕಿರುನೋಟ?
ಎಲ್ಲರಂತೆ ಎದ್ದೇಳುವ ಹಾಗೆ
ಅಕ್ಷರ ಕಲಿಕೆಯ ಪಾಠ?
ಹಳ್ಳಿಹಳ್ಳಿಗಳ ಹೃದಯಗಳಲ್ಲಿ
ಅಕ್ಷರಗಳ ತೆನೆ ಬೆಳೆಯೋಣ
ಮುಟ್ಟುವ ಮನೆಗಳ, ಮೌನದ ಮನಗಳ
ಅಸ್ಪೃಶ್ಯತೆಯನು ಅಳಿಸೋಣ
ಬಿಡಿ ಮಾತೇತಕೆ, ಬರಿಯಳಲೇತಕೆ?
ಬನ್ನಿ ಭೇದಗಳ ಮರೆಯೋಣ
ಹೊಲೆತನವೇತಕೆ? ಹಿರಿತನವೇತಕೆ?
ಸುಖ ಬದುಕಿನ ಕಥೆ ಬರೆಯೋಣ.
ಹುಯ್ಯಲಿ ಧೋ ಮಳೆ ಹರಿಯಲಿ ನೀರು
ಮೌಲ್ಯದ ದಾರಿಯ ತೊಳೆದು
ಬೀಸಲಿ ಬಾಂಧವ್ಯದ ಮೆದುಗಾಳಿ
ದ್ವೇಷದ ಧೂಳನು ಕಳೆದು
ಸರ್ವಜಗತ್ತಿನ ಜನಸಾಮಾನ್ಯರಿಗೆ
ಬೇಕಿದೆ ಸಾಮಾಜಿಕ ಸಮತೆ
ಜೀವ ಸೌಂದರ್ಯ ಗೌರವ ಪಡೆಯಲಿ
ಬೆಳಗಲಿ ಸಾಕ್ಷರತಾ ಹಣತೆ.