ರಾಘವೇಂದ್ರ ಪಾಟೀಲರ ಮೊದಲ ಕಥೆಗಳು ಇಂದಿಗೂ ಆಧುನಿಕ, ತತ್‌ಸಾಮಯಿಕ
ರಾಘವೇಂದ್ರ ಪಾಟೀಲರ ಮೊದಲ ಕಥೆಗಳು ಇಂದಿಗೂ ಆಧುನಿಕ, ತತ್‌ಸಾಮಯಿಕ
ಇತ್ತೀಚೆಗೆ `ಫೋನ್ ಬೂತ್' ಎಂಬ ಸಿನೆಮಾ ಬಂದಿದೆ. ಅದರ ಕತೆ ಇಷ್ಟೆ: ಮಾಡೆಲ್ ವ್ಯವಹಾರದಲ್ಲಿ ಇರುವ
ಒಬ್ಬಾತ ಬೀದಿ ಬದಿಯ ಸಾರ್ವಜನಿಕ ಟೆಲಿಫೋನ್ ಬೂತಿಗೆ ಬಂದು ತನ್ನ ಪ್ರಿಯತಮೆಗೆ ಒಂದು ಕಾಲ್ ಮಾಡುತ್ತಾನೆ.
ಅದನ್ನು ಮುಗಿಸುತ್ತಿದ್ದ ಹಾಗೆಯೇ ಅದೇ ಬೂತಿಗೆ ಒಂದು ಕರೆ ಬರುತ್ತೆ. ಅದನ್ನು ಆತ ಅಕಸ್ಮಾತ್ತಾಗಿ ಸ್ವೀಕರಿಸುತ್ತಾನೆ.
ಅವನಿಗೇ ಆ ಕರೆ ಬಂದಿರುತ್ತೆ. ಕರೆಗಾರನ ಬೇಡಿಕೆ ಇಷ್ಟೆ: ನಾಯಕ ಟೆಲಿಫೋನನ್ನು ಕೆಳಗೆ ಇಡಬಾರದು. ಇಟ್ಟರೆ
ಅವನ ಕಥೆ ಮುಗಿದಂತೆ. ಇಡೀ ಸಿನೆಮಾ ಒಂದು ಫೋನ್‌ಬೂತಿನ ಸುತ್ತ ನಡೆಯುತ್ತದೆ. ಅದರ ಕಥೆ ಹಾಗಿರಲಿ,
ಸಿನೆಮಾವನ್ನು ಚಿತ್ರೀಕರಿಸಿದ ರೀತಿಯೂ ಹೊಸತೇ. ಒಂದು ಕಥೆ ಅಕಸ್ಮಾತ್ತಾಗಿ ಮೂಡುವ ಬಗೆ ಇದು.
ರಾಘವೇಂದ್ರ ಪಾಟೀಲರ ಎರಡು ಕಥಾಸಂಕಲನಗಳನ್ನು ಓದಿದಾಗ ಥಟ್ಟನೆ ಈ ಸಿನೆಮಾ ನೆನಪಾಗಿದ್ದರೆ ಅದಕ್ಕೆ
ಪಾಟೀಲರೇ ಹೊಣೆ. ಕಥೆ ಹೇಗೆ ಮೂಡುತ್ತೆ, ಅದು ಹೇಗೆ ನಮ್ಮೊಳಗೇ ಹರಡಿಕೊಳ್ಳುತ್ತ ಹೋಗುತ್ತೆ, ಕಥೆಗಾರ ಹೇಗೆ
ಈ ಕಥೆಯನ್ನು ನಮ್ಮೊಳಗೆ ಹದವಾಗಿ ಚೆಲ್ಲುತ್ತಾನೆ – ಎಂಬೆಲ್ಲ ಸಂಗತಿಗಳ ಬಗ್ಗೆ ನಾನು ಯಾವಾಗಲೂ ಕುತೂಹಲಿ.
ನಮ್ಮ ಹೊಸ ಕಥೆಗಾರರು ರಾಘವೇಂದ್ರ ಪಾಟೀಲರ ಕಥೆಗಳನ್ನು ಅಭ್ಯಾಸದ ದೃಷ್ಟಿಯಿಂದಲಾದರೂ ಸರಿ, ಒಳ್ಳೆಯ
ಕಥೆಗಳು ಎಂಬ ನೆಲೆಯಲ್ಲಾದರೂ ಸರಿ, ಒಮ್ಮೆ ಓದಲೇಬೇಕು ಎಂದು ನನಗನ್ನಿಸಿದೆ. ಎಪ್ಪತ್ತರ ದಶಕದಿಂದಲೂ
ಕಥೆಗಳನ್ನು ಬರೆಯುತ್ತಿರುವ ಪಾಟೀಲರು ಇವತ್ತಿನ ಕಥೆಗಾರರನ್ನು ಬೆಚ್ಚಿಬೀಳಿಸುವಷ್ಟು ಫ್ರೆಶ್ ಕಥೆಗಳನ್ನು ಕೊಟ್ಟಿದ್ದಾರೆ.
ಪಾಟೀಲರ ಮೊದಲ ಸಂಕಲನ `ಒಡಪುಗಳು' ಒಳಗಿನ `ನೀನು, ಕೆಮಿಲಿಯಾನ್ ಮತ್ತು ಸಾಪೇಕ್ಷತೆ' ಕಥೆಯಿಂದಲೇ
ನೋಡಿ. ದ್ವಿತೀಯ ಪುರುಷದಲ್ಲಿ ಬರೆದಿರುವ ಈ ಕಥೆ ಮೂರು ಪುಟಗಳಷ್ಟು ಚಿಕ್ಕದು. ಇವತ್ತು `ಚೆನ್ನಾಗಿ ಕಥೆ
ಬರೀತಾರೆ' ಅನ್ನೋ ಹೆಸರು ಪಡೆದŅ
3;
ರ ಕಥೆಗಳು ಎಷ್ಟು ಉದ್ದ ಇರುತ್ತವೆ ಎಂಬುದನ್ನೂ ನೀವು ನೆನಪು ಮಾಡಿಕೊಳ್ಳಿ.
ಮೂರೇ ಪುಟಗಳಲ್ಲಿ ನಿಮ್ಮೊಳಗೆ ಆತಂಕ ಹುಟ್ಟಿಸುವ ಹಾಗೆ ಸನ್ನಿವೇಶಗಳನ್ನು ಬೆಳೆಸುತ್ತ ಹೋಗುವ ಪಾಟೀಲರನ್ನು
ಮರೆಯುವುದು ಸಾಧ್ಯವೇ ಇಲ್ಲ. `ಮರುಕದಂತೆ ದ್ವೇಷವೂ ನಿನ್ನ ಮೂಲರೂಪದ ಮೇಲೆ ನೆರಳನ್ನು ಚೆಲ್ಲುತ್ತದೆ' ಎಂಬ
ಕಟು ವಾಕ್ಯಗಳಿಂದ ಕಥೆಗಾರ ನಿಂದನೆಗೆ ಒಳಗಾಗುತ್ತಾನೆ. ಇಡೀ ಕಥೆಯನ್ನು ಫ್ಲಾಶ್‌ಬ್ಯಾಕ್ ಬಳಸಿಯೂ ಸಮರ್ಥವಾಗಿ
ವರ್ತಮಾನದಲ್ಲೇ ಹಿಡಿದು ನಿಲ್ಲಿಸುವ ಪಾಟೀಲರ ಶೈಲಿ `ಕ್ಲಾಸಿಕ್'. ಅದೇ ಸಂಕಲನದ `ಬೆತ್ತಲು' ಕಥೆಯೂ ಅಷ್ಟೆ.
ಕಥೆಯ ಕೊನೆಗೇ ಪಂಚ್ ಇರುವುದು ಸಾಮಾನ್ಯ ಶೈಲಿ ಎಂದು ಅನ್ನಿಸುವುದಾದರೂ ಒಟ್ಟಾರೆ ಕಥೆ ಕಟ್ಟಿಕೊಡುವ
ಅನುಭವ ತಾಜಾ. ಅದಾದ ಮೇಲೆ ಇರೋ `ಬ್ಯಾಟ್ಸ… ಬ್ಯಾಟ್ಸ…' ಕಥೆಯಂತೂ ಫ್ಯಾಂಟಸಿಯ ದೃಶ್ಯಗಳನ್ನು
ಚಕಚಕನೆ ಮೂಡಿಸುತ್ತದೆ. `ಆಶಾ ಮೇಡಂ' ಕಥೆಯು ತೀರಾ ಸಾಮಾನ್ಯವಾದ ಕಥಾಹಂದರ ಎಂಬಂತೆ ಅನ್ನಿಸಿದರೂ
ಪಾಟೀಲರು ಕಟ್ಟುವ ದೃಶ್ಯಗಳ ಸುಗ್ಗಿಯಲ್ಲಿ ಕಥೆ ನಮ್ಮನ್ನು ಕಟ್ಟಿಡುತ್ತದೆ.
ಕಥೆಯೊಂದನ್ನು ಹೇಳುವಾಗ ಅನುಭವವನ್ನು ಬಳಸುವುದು ಸಹಜ. ಪಾಟೀಲರ ಅನುಭವಗಳು ಅವರ ಕಥೆಗಳಲ್ಲೂ
ಸೇರಿಕೊಂಡಿವೆ. ಆದರೆ ಅವರ ಅನುಭವ ಯಾವುದು, ಕಥೆಗಳಲ್ಲಿ ಕಟ್ಟಿದ ಕಲ್ಪನೆಗಳ ಹಂದರ ಯಾವುದು ಎಂದು
ಗೊತ್ತಾಗದಂತೆ ರಚಿಸುವುದರಲ್ಲಿ ಪಾಟೀಲರು ಯಶ ಪಡೆದಿದ್ದಾರೆ.
ಇತ್ತೀಚೆಗೆ `ತೇರು' ಕಾದಂಬರಿ ಬರೆದು ತನ್ನ ಅಪ್ಪಟ ಕಥನ ಶೈಲಿಯನ್ನು ಮತ್ತೆ ತೋರಿಸಿಕೊಟ್ಟಿರುವ ಪಾಟೀಲರನ್ನು
ಇಷ್ಟೆಲ್ಲ ಹೊಗಳಿ ವಿಮರ್ಶೆ ಮಾಡಬೇಕೆ?
ಹೌದು. ಯಾಕೆಂದರೆ ಪಾಟೀಲರು ಬರೆಯುವಾಗ ಇದ್ದ ಆಧುನಿಕತೆಗೂ, ಇವತ್ತು ನಾವು ಕಾಣೋ ಆಧುನಿಕತೆಗೂ
ತೀರಾ ವ್ಯತ್ಯಾಸವಿದೆ. ಅವರು ಅಂಥ `ಆಧುನಿಕ' ವಸ್ತುಗಳನ್ನು ಆಧುನಿಕ ಶೈಲಿಯಲ್ಲಿ ಬರೆವಾಗ ನಾನು, ನನ್ನ
ಸರೀಕರು ಪ್ರಾಥಮಿಕ ತರಗತಿಯಲ್ಲಿದ್ದವರು! ಅಂದರೆ ೩೦ ವರ್ಷಗಳ ನಂತರವೂ ಅವರ ಕಥೆಗಳು ವಸ್ತುವಿನ ಮತ್ತು
ಶೈಲಿಯ ದೃಷ್ಟಿಯಲ್ಲಿ ಆಧುನಿಕವೇ ಆಗಿವೆ ಎಂಬುದು &
amp;
#3207;ಂದಿನ `ಆಧುನಿಕ' ವಾತಾವರಣದಲ್ಲಿರುವ ನನಗೂ
ಅನ್ನಿಸುವುದಾದರೆ, ನೀವೇ ಯೋಚಿಸಿ. ಅಥವಾ ಅವರ ಕಥಾಸಂಕಲನಗಳನ್ನು ನೀವೂ ಓದಿ ನೀವೂ ಒಂದು
ನಿರ್ಧಾರಕ್ಕೆ ಬನ್ನಿ. ನಿಮಗೆ `ಆಧುನಿಕತೆ' ಪದ ಇಷ್ಟವಾಗದಿದ್ದರೆ `ತತ್‌ಸಾಮಯಿಕ' (ಟಾಪಿಕಲ್) ಅಂತಲೂ
ಹೇಳಬಹುದು.
ಪಾಟೀಲರ ಎರಡನೇ ಕಥಾ ಸಂಕಲನ `ಪ್ರತಿಮೆಗಳು'. ಈ ಸಂಕಲನದಲ್ಲಿ ನನಗೆ ತುಂಬಾ ಖುಷಿ ಕೊಟ್ಟ ಕಥೆ `ಡುಂ
– ಡುಮಕ್'. ಪ್ರಥಮ ಪುರುಷದಲ್ಲಿ ನಡೆಯುವ ಈ ಕಥೆಯ ಕಥಾವಸ್ತು ಸಾಮಾನ್ಯ. ಒಬ್ಬ ವೇಶ್ಯೆಯ ಕಥೆ. ಅವಳ
ಮಾತುಗಳಲ್ಲೇ ಕಥೆ ನಡೆಯುತ್ತದೆ. ಆಕೆಯ ಮಾತುಗಳನ್ನು ಅನುಭವಿಸುವುದೇ ಒಂದು ಮಜಾ ; ಒಂದು ವೇದನೆ
ಕೂಡಾ. ಅವಳ ಮಾತುಗಳಿಗೆ ಶಹಬ್ಬಾಸ್ ಅನ್ನಬೇಕೋ, ಅವಳ ಸ್ಥಿತಿಗೆ ಮರುಕಪಡಬೇಕೋ ಎಂಬ ದ್ವಂದ್ವ ನಿಮ್ಮನ್ನು
ಆವರಿಸುತ್ತೆ. ಅಷ್ಟು ಒಳ್ಳೆಯ ಭಾಷೆ, ಶೈಲಿ ಪಾಟೀಲರದು. `ಜೈಲಿನಲ್ಲಿ' ಕಥೆಯೂ ಒಂದು ಬಗೆಯ ಅಚ್ಚರಿಯ
ದೃಶ್ಯಗಳ ಜೋಡಣೆ. `ಕನಸುಗಳೇ ಹಾಗೆ….'ಬಹುಶಃ ಪಾಟೀಲರ ಆವರೆಗಿನ ಚಿಕ್ಕ ಕಥೆ. ಈ ಪುಟ್ಟ ಕತೆ ತೀರಾ
ಚಿಕ್ಕದಾಯಿತು ಎಂದೆನಿಸುತ್ತದೆ.
ಇದೇ ಸಂಕಲನದಲ್ಲಿ `ಬಸತ್ತಿ' ನೀಳ್ಗತೆ ಇದೆ. ಪಾಟೀಲರ ಸಮಾಜಮುಖಿ ಚಿಂತನೆಗಳನ್ನು ಒಟ್ಟಾಗಿ
ತಿಳಕೋಬೇಕೆಂದರೆ ಈ ಕಥೆ ಓದಬೇಕು. ಯಾಕೆಂದರೆ ಅವರ ಹಲವು ಕಥೆಗಳಲ್ಲಿ ಈ ಬಗೆಯ ಸಮಾಜಮುಖಿ
ಚಿಂತನೆಗಳು ಇದ್ದೇ ಇವೆ. ಶೋಷಣೆ, ಹಳ್ಳಿ ರಾಜಕೀಯ, ಬಡತನ ಇತ್ಯಾದಿ ಚಿಂತನೆಗಳು ಎಪ್ಪತ್ತರ ದಶಕದಲ್ಲಿ
ಹಲವು ಯುವಲೇಖಕರನ್ನು ಕಾಡಿದ ಹಾಗೆಯೇ ಪಾಟೀಲರನ್ನೂ ಕಾಡಿದೆ. ಅವುಗಳು ಹಲವು ಕಥೆಗಳ ವಸ್ತುಗಳೂ
ಆಗಿವೆ. ಆದರೆ ಎಲ್ಲೂ ಪಾಟೀಲರ ಕಥೆಗಳು ಸಿದ್ಧಾಂತಗಳ ಬೆನ್ನು ಹಿಡಿದು ಜಾಳಾಗಿಲ್ಲ ಎನ್ನುವುದು ಸಮಾಧಾನದ
ಸಂಗತಿ. ಶೋಷಣೆಯನ್ನು ಕುರಿತ, ಸಮಾಜದ ಸಂಬಂಧಗಳನ್ನು ಕುರಿತ ಸಾಹಿತ್ಯ ಶಿಷ್ಟವಾಗಿರಬೇಕು, ಕಟು
ಸತ್ಯಗಳನ್ನು ಮೃದುವಾಗಿ ಹೇಳಬೇಕು ಎಂದು ಯಾರೂ ಹೇಳಲಾಗದು. ಆದರೆ, ಹಾಗೆ ಬಂದ ಸಾಹಿತ್ಯದಲ್ಲಿ ಸಹಜತೆ
ಇರಬೇಕು. ಪಾಟೀಲರು ತಮ್ಮ ಸ್ಥಾನಿಕ ಅನುಭವದ ಹಿನ್ನೆಲೆಯಲ್ಲಿ ಜೋಡಿಸಿದ ಕಥಾಹಂದರಗಳು ನ್ಯಾಚುರಲ್ ಆ&
amp;
#3223;ಿವೆ.
ಆದ್ದರಿಂದಲೇ ಅವರು ಬಹುಶಃ ಅಂಥ ದೊಡ್ಡ ದನಿಯೆತ್ತದ `ಎಡಪಂಥೀಯ'ರಾಗಿದ್ದಾರೆ ಅನ್ನಿಸುತ್ತದೆ. ಅಥವಾ ಅವರಿಗ
ಎಡಪಂಥೀಯ ಎಂಬ ಹಣೆಪಟ್ಟಿ ಹಚ್ಚುವುದೇ ಸರಿಯಲ್ಲ ಎನ್ನಿಸುತ್ತದೆ.
ಪ್ರಥಮ ಸಂಕಲನಗಳ ಸಹಜ ಲಕ್ಷಣಗಳೆಂದರೆ ಸಾಮಾನ್ಯವಾಗಿ ಈ ಕಥೆಗಳ ಲೊಕೇಶನ್‌ಗಳು ಒಂದೋ ಹುಟ್ಟಿ ಬೆಳೆದ
ಹಳ್ಳಿಗಳಾಗಿರುವುದು, ಅಥವಾ ಕಾಲೇಜು ಕ್ಯಾಂಪಸ್‌ಗಳಾಗಿರುವುದು. ಈ ಎರಡುಸಂಕಲನಗಳಲ್ಲಿ ಇರುವ ಕಥೆಗಳಲ್ಲಿ
ನಾಲ್ಕು ಕಥೆಗಳು ಕಾಲೇಜು ಕ್ಯಾಂಪಸ್ ದೃಶ್ಯಗಳನ್ನು ಒಳಗೊಂಡಿದ್ದರೆ ಬಹುತೇಕ ಕಥೆಗಳು ಹಳ್ಳಿ, ಪಟೇಲ, ಸೂಳೆ,
ಕೆಳವರ್ಗ ಇತ್ಯಾದಿ ಕಥಾಹಂದರಗಳನ್ನು ಒಳಗೊಂಡಿವೆ.
ನಿಜವಲ್ಲದಂತೆ ಕಾಣುವ ದೃಶ್ಯಗಳನ್ನು ಹೊಂದಿರುವ ಕಥೆಗಳು ಮೊದಲ ಸಂಕಲನವಾದ `ಒಡಪುಗಳು'ನಲ್ಲೇ
ಹೆಚ್ಚಾಗಿವೆ. ಮೊದಲ ಕಥೆಗಳಲ್ಲಿ ಪಾಟೀಲರು ಶೈಲಿಗೆ, ನಿರೂಪಣೆ ಅಚ್ಚರಿಗಳಿಗೆ ಹುಡುಕಾಡಿದಷ್ಟು ಎರಡನೇ
ಸಂಕಲನದಲ್ಲಿ ಹುಡುಕಾಡಿಲ್ಲ ಎಂದೆನಿಸುತ್ತದೆ. `ಪ್ರತಿಮೆಗಳು'ನಲ್ಲಿ `ಜೈಲಿನಲ್ಲಿ' ಕಥೆಯೊಂದೇ ಇಂಥ ಹುಡುಕಾಟ
ಪಾಟೀಲರಲ್ಲಿ ಇದೆ ಎನ್ನುವುದಕ ನಿದರ್ಶನ.`ಒಡಪುಗಳು' ಬಂದಿದ್ದು ೧೯೭೮ರಲ್ಲಿ. `ಪ್ರತಿಮೆಗಳು' ಬಂದದ್ದು
೧೯೮೨ರಲ್ಲಿ.
ಈ ಕಥೆಗಳ ಶೈಲಿಯನ್ನು ಹೇಳುವಾಗ ಇನ್ನೂ ಒಂದು ಮಾತನ್ನು ಹೇಳಬೇಕು. ಕೆಲವು ಕಡೆಗಳಲ್ಲಿ ಪಾಟೀಲರು
ಹೈಫೆನ್‌ಗಳನ್ನು ಬಳಸುವುದು ಕಥೆಯ ಓದಿಗೆ ಕೊಂಚ ತೊಡಕಾಗುತ್ತದೆ. ಹಾಗೆಯೇ ಪೂರ್ಣವಿರಾಮಗಳನ್ನು ಏಳೆಂಟು
ಬಾರಿ ಬಳಸುವ ವಿಧಾನವೂ ಕೆಲವೊಮ್ಮೆ ಛೆಂದ ಅನ್ನಿಸುವುದಿಲ್ಲ. ಓದುಗರಿಗೆ ಕಥೆಯ ಮೇಲೆ ಲಕ್ಷವಿರುತ್ತದೆಯೇ
ಹೊರತು, ಅವರೆಲ್ಲ ವ್ಯಾಕರಣದ ಸೂತ್ರಗಳನ್ವಯ ಭಾವನೆಗಳನ್ನು ಹೊಂದುವುದು ಅಷ್ಟೇನೂ ಒಳ್ಳೆಯ ಕ್ರಮವಲ್ಲ.
ಪಾಟೀಲರ ಮೊದಲ ಎರಡು ಸಂಕಲನಗಳನ್ನು ಮಾತ್ರ ಇಲ್ಲಿ ಇಣುಕಿದ್ದೇನೆ. ನಮ್ಮ ನಡುವೆ ಅತ್ಯಂತ ಆಧುನಿಕ
ಮನಸ್ಸಿನ, ದೇಶಿ ಚಿಂತನೆಯ ಕಥೆಗಾರರಾಗಿ ಪಾಟೀಲರು ಚುರುಕಾಗಿ ಇದ್ದಾರೆ ಅನ್ನೋ ಸಮಾಧಾನ ನನ್ನದು.
ಅವರ ಕೃತಿಗಳನ್ನು ಓದಿದರೆ ನೀವು ಕೂಡಾ ಈ ಅಭ&#
3263
;ಪ್ರಾಯಕ್ಕೆ ಬರಬಹುದು ಎಂಬ ವಿಶ್ವಾಸ ನನಗಿದೆ!
ಇಷ್ಟು ಹೇಳಿದ ಮೇಲೆ ಈ ಪುಸ್ತಕಗಳಿಗೆ ಬರೆದಿರುವ ಮುನ್ನುಡಿಗಳೂ ಈ ಕಥೆಗಳ ವಿಮರ್ಶೆಗೆ ಇನ್ನೊಂದಿಷ್ಟು ಸರಕನ್ನು
ಒದಗಿಸುತ್ತವೆ ಎಂಬುದನ್ನೂ ಹೇಳಲೇಬೇಕು. `ಒಡಪುಗಳು' ಸಂಕಲನಕ್ಕೆ ಮುನ್ನುಡಿಯನ್ನು ಬರೆದವರು ಪ್ರೊ||
ಎಲ್.ಎಸ್.ಶೇಷಗಿರಿರಾವ್. ಅವರ ಪ್ರಕಾರ `ಅಂತರಗಂಗೆ' ಹಾಗೂ `ಬ್ಯಾಟ್ಸ… ಬ್ಯಾಟ್ಸ…' ಕಥೆಗಳಲ್ಲಿ
ಸೂಚ್ಯವಾಗಿ ನಿರೂಪಿಸಬೇಕಾದ್ದನ್ನು ವಾಚ್ಯವಾಗಿ ನಿರೂಪಿಸಿದ ಅಪಾಯ. ಆದರೂ `ಚಮತ್ಕಾರವನ್ನು ಮೋಹಿಸದೆ,
ಸುತ್ತ ಆಗುತ್ತಿರುವ ಮಾರ್ಪಾಡುಗಳನ್ನು ಗುರುತಿಸಿ ಆ ಆವರಣದಲ್ಲಿ ವ್ಯಕ್ತಿಯ ಒಳಜಗತ್ತಿನ ವ್ಯಾಪಾರಗಳನ್ನು ಭಾಷೆಯ
ಮೂಲಕ ಬಿಡಿಸಿ ಕಾಣುವ ಪ್ರಯತ್ನವನ್ನು ಯಶಸ್ವಿಯಾಗಿ ಹಲವು ಕಥೆಗಳಲ್ಲಿ ಸಾಧಿಸಿರುವ ಕಥೆಗಾರರು ಕಥಾಸಾಹಿತ್ಯದಲ್ಲಿ
ಇನ್ನೂ ಬಹುದೂರ ಹೋಗಬಲ್ಲರು' ಎಂಬ ನಿರೀಕ್ಷೆಯನ್ನೂ ಅವರು ತೋರಿದ್ದರು. ಈ ಮಟ್ಟಿಗೆ ಶೇಷಗಿರಿರಾಯರ ನಿರೀಕ್ಷೆ
ಹುಸಿಯಾಗಿಲ್ಲ!
ಈ ಪುಸ್ತಕಕ್ಕೆ `ಕಥೆ ಹೇಳುವ ಮೊದಲು' ಎಂಬ ಲೇಖಕರ ಮಾತಿದೆ. ಅದರಲ್ಲಿ ಪಾಟೀಲರು ಹೇಳಿರುವ ಮಾತುಗಳನ್ನು
ಗಮನಿಸಿ:
/ಒಂದಷ್ಟು ಅನುಭವಗಳು ಒಗಟಾದಾಗ ಆ `ಒಡಪು' ಗಳಿಗೆ ಉತ್ತರ ಹುಡುಕಲು ತಡಕಾಡಿದಾಗ ಈ ಕಥೆಗಳು
ಸಿಕ್ಕಿವೆ. / / ನನ್ನ ಮನಸ್ಥಿತಿಯನ್ನು ಕಾಡುವ ಕೀಟಗಳು ಉತ್ತರಗಳ ಮೇಲೆಲ್ಲ ತಮ್ಮ ನೆರಳು ಚಾಚಿವೆ. ಅದರಲ್ಲೆಲ್ಲ
ತೀವ್ರವಾದವುಗಳೇ ಕಾಮ ಮತ್ತು ಹಿಪಾಕ್ರಸಿ./ / ನನ್ನ ಕಥೆಗಳಲ್ಲಿ ಕಥಾವಸ್ತುವಿಗಿಂತ ಒಂದು ಪರಿಸ್ಥಿತಿಯೇ
ಪ್ರಮುಖವಾಗುತ್ತದೆ ಅನಿಸುತ್ತದೆ./
ಪಾಟೀಲರು ಹೇಳುವುದು ನಿಜ. ಅವರ ಕಥೆಗಳಲ್ಲಿ ಕಥಾವಸ್ತುವಿಗಿಂತ ಆ ಸನ್ನಿವೇಶಗಳೇ ಹೆಚ್ಚಾಗಿ ಕಾಡಿವೆ.
ಓದುಗರನ್ನೂ ಅವು ಕಾಡುತ್ತವೆ. ಅದಕ್ಕೇ ನಾನು ಮೊದಲೇ ಹೇಳಿರುವೆ: ಪಾಟೀಲರು ನಿಜಕ್ಕೂ ತತ್‌ಸಾಮಯಿಕ
ಕಥೆಗಾರ.
ಇನ್ನು `ಪ್ರತಿಮೆಗಳು' ಸಂಕಲನಕ್ಕೆ ಮುನ್ನುಡಿ ಬರೆದ ಡಾ|| ಯು.ಆರ್. ಅನಂತಮೂರ್ತಿಯವರು `ಕಾಣಿಸದ
ಕ್ರಮ ಹೊಸತಾಗದ ಹೊರತು ಯಾವ ಕೃತಿಯೂ ಹೊಸ ಅನುಭವವನ್ನು ಕ&
#327
4;ಡಲಾರದು' ಎಂದಿದ್ದಾರೆ. ಅವರೂ ಕಥೆ
ಹೇಳುವ ಕ್ರಮದಲ್ಲಿ ಪಾಟೀಲರು ಗಾಢ ಆಸಕ್ತಿಯನ್ನು ಹೊಂದಿರುವುದನ್ನು ಸರಿಯಾಗಿಯೇ ಗುರುತಿಸಿದ್ದಾರೆ. `ಬಸತ್ತಿ'
ಕನ್ನಡದ ಒಂದು ಒಳ್ಳೆಯ ಕಥೆ ಎಂದೂ ಶ್ಲಾಘಿಸಿದ್ದಾರೆ. ಅವರೂ ಶೇಷಗಿರಿರಾಯರ ಹಾಗೆ `ನಿಮ್ಮಿಂದ ಕನ್ನಡಕ್ಕೆ
ತುಂಬ ಮುಖ್ಯ ಕಥೆಗಳು ಬರಲಿವೆ ಎಂಬ ನಂಬಿಕೆ ನನಗಿದೆ' ಎಂದಿದ್ದಾರೆ.
ಈ ಎರಡೂ ಸಂಕಲನಗಳಲ್ಲಿ ಡಾ||ಎಚ್. ಎಸ್. ವೆಂಕಟೇಶಮೂರ್ತಿಯವರ ನೆರವನ್ನು ಪಾಟೀಲರು
ನೆನಪಿಸಿಕೊಂಡಿದ್ದಾರೆ. ಬಹುಶಃ ಎರಡೂ ಸಂಕಲನಗಳ ಮುಖಪುಟಗಳನ್ನು ಬರೆದವರು ಎಚ್ ಎಸ್ ವಿಯವರೇ
ಇರಬೇಕು. ಕಥೆಗಾರನೊಬ್ಬನಿಗೆ ಸಿಗಬಹುದಾದ ಪ್ರೋತ್ಸಾಹ ಹೀಗಿರಬೇಕು.
ಇನ್ನೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು ಎನಿಸಿದೆ. `ಒಡಪುಗಳು' ಪುಸ್ತಕವನ್ನು ಪ್ರಕಟಿಸಿದ್ದು
ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸಂಘ. ಆಗ ಅದರ ಪ್ರಾಚಾರ್ಯರಾಗಿದ್ದವರು ಆರೆಸೆಸ್‌ನ ಪ್ರಮುಖರೂ ಆಗಿದ್ದ
ವಿ.ವೈ.ಸೋಮಯಾಜುಲುರವರು. ಇಂಥ ಕಾಂಬಿನೇಶನ್ ಈ ಕಾಲದಲ್ಲಿ ಸಿಗುವುದು ಸ್ವಲ್ಪ ಕಷ್ಟವೆ! ಜೀವನಪ್ರೀತಿಯೇ
ಮುಖ್ಯವಾದಾಗ ಸಿದ್ಧಾಂತಗಳ ಚೌಕಟ್ಟು ಸಡಿಲವಾಗುವುದು ಸಹಜವೇ. ನನಗೆ ಈ ಪುಸ್ತಕ ಪ್ರಕಟಣೆಯ ಹಿಂದಿರುವ
ವ್ಯಕ್ತಿಗಳ ನಡುವಿನ ಸಂಬಂಧಗಳು ಹೇಗಿದ್ದವು ಎಂಬ ಅರಿವಿಲ್ಲ. ಆದರೆ ಒಟ್ಟಾರೆ ಪಾಟೀಲರ ಕತೆಗಳ ಬಗ್ಗೆ ಅಗ್ದಿ
ಪ್ರೀತಿಯಿದ್ದಿದ್ದರಿಂದಲೇ ಅದು ಪ್ರಕಟವಾಯಿತು ಎಂಬುದನ್ನು ಅದರ ಪ್ರೊಡಕ್ಷನ್ ವಿವರಗಳಿಂದಲೇ ತಿಳಿಯಬಹುದು.
ಈಗ ರಾಘವೇಂದ್ರ ಪಾಟೀಲರೇ ಸ್ವತಃ ಪ್ರಕಾಶಕರು. ಅವರಿಂದ ಇನ್ನಷ್ಟು ಯುವ ಲೇಖಕರು ಬೆಳಕಿಗೆ ಬಂದರೆ ಅದೇ
ಸಂತೋಷದ ಸಂಗತಿ.
– ಬೇಳೂರು ಸುದರ್ಶನ
( ಇದರ ಸಂಪಾದಿತ ಆವೃತ್ತಿಯು "ಸಂಚಯ"ಪತ್ರಿಕೆಯಲ್ಲಿದೆ)