ನನ್ನ ಕವನ ಓದಬೇಡ ಯಾಕೆ ಗೊತ್ತ ಹುಡುಗೀ
ಅಕ್ಷರಗಳ ಆಟದಲ್ಲಿ ನಾನು ಇರುವುದಿಲ್ಲ.
ಪದಗಳಲ್ಲಿ ಪವನಪತ್ರ ನೋಡಿ ನಲಿಯಬೇಡ
ನದಿ ಹರಿಸುವೆ, ನಾನು ತೇಲಿ ಬರುವುದಿಲ್ಲ.
ಯಾವುದೋ ವಿಷಾದಗಾನ ಎದೆಯ ತೀಡಿದಾಗ ಸಖೀ
ನೆಲದ ಮೇಲೆ ಮಲಗುವಾಸೆ ಅದೂ ನಡೆವುದಿಲ್ಲ.
ಎಲ್ಲಿಯೋ ಕಳೆದ ನೆನಪು ಎದೆಯ ತುಂಬಿದಾಗ ಈಗ
ಬಿಲ ಸೇರುವ ಬಯಕೆ ಗೊತ್ತ, ಬಯಲೆ ಇಲ್ಲಿ ಎಲ್ಲ ?
ಅವರ ಇವರ ಮಾತುಗಳಿಗೆ ಕಥೆ ಕಟ್ಟುವೆ ಸುಮ್ಮನೇ
ಗೀತೆಗಳಿಗೆ ಪೊಳ್ಳುಹರುಷ ತುಂಬಲೆಣಿಸಿ ಇಷ್ಟು.
ಹುಸಿಗನಸಿನ ಅರಮನೆಯಲಿ ಸುತ್ತುವುದೂ ಸುಮ್ಮನೇ
ಬಿಸಿಯೇರದ ಭಾವಗಳಿಗೆ ಕೃತಕತೆಗಳ ಕಟ್ಟು.
ಇದೇ ಕವನ, ಇದೇ ರಾಗ, ಇದೂ ಅದೇ ದಹನ.
ಇದೇ ಮಾತು, ಇದೇ ಮೌನ, ನಾನೇ ಇಲ್ಲಿ ಕವನ.