ಮರೆಯಬೇಡ
೧೦-೭-೮೮ ಬೆಂಗಳೂರು
ಬಹಳ ಮನುಷ್ಯರು ಭ್ರಷ್ಟರಾದರು
ಹಳೆ ಟಿಕೆಟ್ಟುಗಳ ಕೊಟ್ಟು
ಕೆಟ್ಟಿತಲ್ಲ ಈ ಕ್ರಿಕೆಟ್ಟು
ವಿಕೆಟ್ಟು ಕೊಟ್ಟು ಕೊಟ್ಟು
ಮದುವೆ ದಿಬ್ಬಣದ ಮುಲಾಜಿನಲ್ಲಿ
ಕಾಂಜೀವರಂ ತೊಟ್ಟು
ಅಂಗಾಂಗದಲ್ಲಿ ಸೃಷ್ಟಿಯಾಯಿತೇ
ಬೆವರು ತೊಟ್ಟು ತೊಟ್ಟು
ಛಿಟಿಲ್ಲೆಂದಿತೇ ಸತ್ತ ಶಿರಕವಚ
ಅಗ್ನಿಯೊಡಲಿನಲಿ ಸುಟ್ಟು
ಗಳಿಕೆಯೇರಿತೇ ಗ್ಯಾರೇಜಿನಲ್ಲಿ
ಲೂನಾ ಕೆಟ್ಟು ಕೆಟ್ಟು?
ಬೀದಿಯ ಹುಡುಗರು ಬದುಕು ತುಂಬಿದರು
ಬಕೆಟ್ಟು ಸುಟ್ಟು ಸುಟ್ಟು
ತಾಳಕುಟ್ಟಿದರು ತಕಲೀಭಟ್ಟರು
ಬಜೆಟ್ಟು ಜುಟ್ಟು ಬಿಟ್ಟು
ದಿವಾಳಿಯಾದವು ಹುಡುಗುಬುದ್ಧಿಗಳು
ಕೊಕೈನು ಕೊಟ್ಟು ಕೊಟ್ಟು
ಡಿಸೈನು ಬರೆಯಿತು ಸಪ್ತವರ್ಣಗಳ
ರಟ್ಟಿನ ಗುಟ್ಟು ಬಿಟ್ಟು
ಸೂಕ್ಷ್ಮವಾದನೇ ಸಮಾಜವಾದಿ
ಸಿಗರೇಟಿನ ತುದಿ ಸುಟ್ಟು?
ಮುಖವೇಷದೊಂದಿಗೆ ಮುಕ್ತವಾಯಿತೇ
ಶುದ್ಧ ಕುಂಕುಮದ ಬೊಟ್ಟು?
ನಿನ್ನೆದುರಿಗೀಗ ಹೇಳಿದ ಮಾತು
ಸತ್ಯದ ಹೊರಗಿನ ಹೊಟ್ಟು
ಮರೆಯಬೇಡ ಮರೆತಿದ್ದೇ ಆದರೆ
ಹೊರಡು ನೆನಪುಗಳ ಕಟ್ಟಿಟ್ಟು