ಪ್ರಿಯ ಉಮಾರಾವ್ ಮೇಡಂ,
ಪ್ರಿಯ ಉಮಾರಾವ್ ಮೇಡಂ,
ನೀವು ನನ್ನನ್ನು ಹುಡುಕಿದ್ದೂ ಒಳ್ಳೆ ಅಚ್ಚರಿಯ ವಿಷಯ ! ಆದರೆ ನನಗೆ ಇತ್ತೀಚೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಎಂದರೇ ಅನಾಸಕ್ತಿಯ ವಿಷಯ. ಬಹುಶಃ ನನ್ನ ಪುಸ್ತಕವೇನಾದ್ರೂ ಮುಂದೆ ಬಿಡುಗಡೆಯಾಗೋದಿದ್ರೆ ಅದಕ್ಕೂ ಹೋಗಲ್ವೇನೋ!
ನೀವು, ನಿಹಲಾನಿ, ಕಾಯ್ಕಿಣಿ, ಎಂ ಪಿ ಪ್ರಕಾಶ್ – ಎಲ್ರೂ ಇದ್ದಮೇಲೆ ಬಿಡಕ್ಕಾಗಲಿಲ್ಲ. ಬಂದೆ. ಮಗನಿಗೆ ನನ್ನ ಹಿರಿಯ ಮಿತ್ರ ಎಂ ಪಿ ಪ್ರಕಾಶ್ ಪರಿಚಯ ಮಾಡ್ಸೋದೂ ನನ್ನ ದುರುದ್ದೇಶಗಳಲ್ಲಿ ಒಂದಾಗಿತ್ತು. ಪ್ರಕಾಶ್ ನನ್ನ ಮಗನಿಗೆ ಹ್ಯಾಂಡ್‌ಶೇಕ್ ಕೊಟ್ಟಾಗ ಅವನ ಮುಖ ನೋಡಬೇಕಿತ್ತು! ಪ್ರಕಾಶ್ ರಾಜಕಾರಣಿಯಾಗ್ತಾ ಇದ್ದ ದಿನಗಳಲ್ಲಿ ನಾನು ಹೂವಿನ ಹಡಗಲಿಯಲ್ಲಿ ಫಸ್ಟ್ ಪಿ ಯು ಸಿ ಓದ್ತಾ ಇದ್ದೆ. ಅವರ ಜೊತೆ ಸ್ನೇಹ, ಜಗಳ, ಎಲ್ಲವೂ ಇತ್ತು. ಗೋಕಾಕ ಚಳವಳಿಯಲ್ಲಿ ಅವರ ನಾಯಕತ್ವದಲ್ಲೇ ನಾವು ಸರದಿ ಉಪವಾಸ ಮಾಡಿದ್ದೆವು.
ಬಿಸಿಲುಕೋಲು ಓದಿದೆ. ತುಂಬಾ ಫಾಸ್ಟ್ ಆಗಿ ಓದಿಸಿಕೊಳ್ಳುತ್ತೆ.
ನನಗೆ ವಿ ಕೆ ಮೂರ್ತಿ ಅನ್ನೋವ್ರು ಇದ್ದರು,ಇದ್ದಾರೆ, ಬೆಂಗಳೂರಿನಲ್ಲೇ ಇದ್ದಾರೆ ಅಂತ ಗೊತ್ತಾಗಿದ್ದೇ ನಿಮ್ಮ ಫೋನ್ ಬಂದಮೇಲೆ. ನಾನು ಹಿಂದಿ ಹಾಡುಗಳನ್ನು ಕೇಳುವವ. ಅರ್ಥ ಮಾಡಿಕೊಳ್ಳಲು ಬರಲ್ಲ. ಯಾರೋ ಕೆಲವು ಗೆಳೆಯರು,ಗೆಳತಿಯರು ಕೆಲವು ಹಾಡುಗಳ ಅರ್ಥ ಹೇಳಿದ್ದಾರೆ ನಿಜ. ಆದರೆ ಹಿಂದಿ ಸಿನಿಮಾದ ಬಗ್ಗೆ,ಅವುಗಳ ನಿರ್ದೇಶಕರು,ಸಿನಿಮ್ಯಾಟೋಗ್ರಾಫರ್‌ಗಳ ಬಗ್ಗೆ ನಾನು ಅeನಿ. ಗ್ರೆಗರಿ ಪೆಕ್ ಗೊತ್ತು. ಜಾನ್ ಟ್ರವೋಲ್ಟಾ ಗೊತ್ತು. ಕ್ಯಾಮೆರೂನ್ ಗೊತ್ತು. ಆದ್ರೆ ವಿ ಕೆ ಮೂರ್ತಿ ಗೊತ್ತಿರ್‍ಲಿಲ್ಲ.
ಬಿಸಿಲು ಕೋಲಿನ ಮೂಲಕ ನನಗೆ ಆ ಕಪ್ಪುಬಿಳುಪು ಚಿತ್ರಗಳ ಮಾಂತ್ರಿಕ ಯಾರೆಂದು ಗೊತ್ತಾಯಿತು. ಈಗ ಈ ಹಿಂದಿ ಚಿತ್ರಗಳು ದೊಡ್ಡ ಪರದೆಯಲ್ಲಿ ನೋಡಲು ಸಿಗಲ್ಲ ಅಲ್ವ?
ನಿಮ್ಮ ನಿರೂಪಣೆ ನನಗೆ ತುಂಬಾ ಇಷ್ಟವಾಯ್ತು. ಗತಕಾಲವನ್ನು ಕೇವಲ ಗತಕಾಲದ ಪುಟಗಳ ಹಾಗೆ ಮಡಿಸಿಡದೆ, ವರ್ತಮಾನದ ನೆನಪುಬೆಚ್ಚಗಿನ (ಉಗುರುಬೆಚ್ಚಗಿನ ಅನ್ನೋ ಹ&
amp;#3
262;ಗೆ) ಮಾತುಗಳನ್ನೂ ಎಷ್ಟು ಛಂದ ಬೆರೆಸಿದ್ದೀರಿ. ಹಾಗೆ ಖೋಟ್ ಮಾಡುವಾಗ ಅವರ ಪರಿಚಯವನ್ನೂ ಒಂದೇ ಪ್ಯಾರಾದಲ್ಲಿ ನೀಡಿದ್ದೀರಿ. ನಿಜಕ್ಕೂ ಈ ಶೈಲಿ ಕನ್ನಡಕ್ಕೆ ಲವಲವಿಕೆ ತಂದಿದೆ. ಜೀವನಚರಿತ್ರೆ ಬರೆಯೋ ವರ್ಗದವರಿಗೆ ಹೊಸ ಮಾದರಿ ನೀಡಿದೆ. ಕನ್ನಡದಲ್ಲಿ ಬಂದ ಶಿವರಾಮು ರವರ `ಆತ್ಮಾಹುತಿ' ಹಾಗೆ ನೋಡಿದರೆ ಅತಿ ಗಂಭೀರವಾದ ಶೈಲಿಯಲ್ಲಿ ಸಾವರ್ಕರ್ ಮೂಲಕವೇ ಕಥೆ ಹೇಳಿಸಿದ ಪುಸ್ತಕ. ವಾಸ್ತವವಾಗಿ ಈ ಪುಸ್ತಕ ಬಂದಾಗ ಸಾವರ್ಕರ್ ಇರಲಿಲ್ಲ. ಆದರೂ ಈ ಪುಸ್ತಕ ಅದರ ಕಥನದ ಶೈಲಿಯಿಂದಾಗಿ ನನ್ನ ಮಟ್ಟಿಗೆ ಕನ್ನಡದ ಅತ್ಯುತ್ತಮ ಥರ್ಡ್ ಪಾರ್ಟಿ ಕೃತ ಜೀವನಚರಿತ್ರೆಯ ಪುಸ್ತಕ.
ಬಿಸಿಲುಕೋಲಿನ ಮುಖ್ಯ ಆಕರ್ಷಣೆ ಎಂದರೆ ಅದರ ಸಂಭಾಷಣಾ ಶೈಲಿ ಮತ್ತು ಸಂಭಾಷಣೆಯಲ್ಲದ ವಾಕ್ಯಗಳು ಕಟ್ ಸೆಂಟೆನ್ಸ್ ರೂಪದಲ್ಲಿ ಇರುವುದು. ಇಡೀ ಪುಸ್ತಕದಲ್ಲಿ ಬೇಕಾದಷ್ಟು ಸಲ ಮೂರ್ತಿ ಮತ್ತು ಅವರ ಸ್ನೇಹಿತರು, ಬಂಧುಗಳು, ಶಿಷ್ಯರು ಮಾತಾಡ್ತಾರೆ. ಎಲ್ಲರೂ ಮೂರ್ತಿಯವರನ್ನು ನೋಡಿದ ರೀತಿಯನ್ನು ಹಾಗ್ಹಾಗೇ ಕೊಟ್ಟಿದೀರಿ. ಅಲ್ಲಿ ನಿಮ್ಮ ಆಬ್ಜೆಕ್ಟಿವಿಟಿ ಇಷ್ಟವಾಯ್ತು.
ಅದರಲ್ಲೂ ಮೂರ್ತಿಯವರ ಮಗಳು, ಮದುವೆಯ ಬಗ್ಗೆ ಇರೋ ಒಂದು ಅಧ್ಯಾಯಾನ ನಾನು ಮೊದಲು ಓದಿದೆ. ಕಾರಣ ಇಷ್ಟೆ: ನಾನು ನಿಮ್ಮ ಆಟೋಗ್ರಾಫ್ ತೆಗೆದುಕೊಂಡ ಮೇಲೆ ಸ್ಟೇಜ್ ಮೇಲೆ ಹೋಗಿ ನಿಹಲಾನಿಯವರಿಗೆ ಸಹಿ ಕೇಳಿದೆ. ಅವರು ಛಾಯಾರವರನ್ನು ಮಾತಾಡಿಸ್ತಾ ಇದ್ರು. ಮೂರ್ತಿಯವರೂ ಅಲ್ಲೇ ಇದ್ದರು. ನನಗೆ ಆಕೆ ಯಾರು ಎಂಬ ಕುತೂಹಲ ಹುಟ್ಟಿ, ರಾತ್ರಿಯಿಡೀ ರಪರಪ ಎಲ್ಲಾ ಅಧ್ಯಾಯಗಳನ್ನು ತಿರುವಿ ಹಾಕಿದೆ. ಆಗ ಛಾಯಾ ಬಗ್ಗೆ ವಿವರ ಸಿಗ್ತು. ಅಂದ್ರೆ ನೀವು ಎಷ್ಟು ಚೆನ್ನಾಗಿ ನಮ್ಮ ಅಗತ್ಯಗಳನ್ನು ಅರ್ಥ ಮಾಡ್ಕೊಂಡು ಬರೆದಿದೀರಿ ಅಂತ ಗೊತ್ತಾಗುತ್ತೆ. ತುಂಬಾ ಥ್ಯಾಂಕ್ಸ್.
ಈಗ ನನ್ನ ಟೀಕೆಗಳ ಟೇಕ್!
೧) ಇಡೀ ಪುಸ್ತಕದಲ್ಲಿ ಮೂರ್ತಿಯವರ ಸಂಗೀತದ ಬಗ್ಗೆ ಉಲ್ಲೇಖವಿದೆ. ಒಂದಷ್ಟು ಮಾಹಿತಿಯೂ ಇದೆ. ಆದರೆ ಸಂಗೀತದ ಬಗ್ಗೆ ಅವರ ಖಾಸಾ ಖಾಸಾ ಅನುಭವ, ಪ್ರೀತಿ, ಅಧ್ಯಯನ,ಅಭ್ಯಾಸ, ಸಂಪರ್ಕ – ಇವೆಲ
್ಲವನ್ನೂ ನೀವು ಈ ಪುಸ್ತಕದಲ್ಲಿ ಕ್ಯಾಮೆರಾದ ಛಾಯೆಯಾಗಿ ತರಬಹುದಿತ್ತೇನೋ. ಈಗ ಒಬ್ಬ ಸಂಗೀತದ ವಿದ್ಯಾರ್ಥಿಯಾಗಿ ನನಗೆ ಹೀಗನ್ನಿಸಿದೆ ಎಂದುಕೊಳ್ಳಬೇಡಿ. ಕಾರ್ಯಕ್ರಮದಲ್ಲಿ ವಿಜಯಾರವರೂ ಈ ಮಾತು ಹೇಳಿದ್ರು ತಾನೆ? ಮಾತೆತ್ತಿದರೆ ಸಂಗೀತ ಅಂತಾರೆ ಮೂರ್ತಿ,ಕ್ಯಾಮೆರಾದ ಬಗ್ಗೆ ಮಾತಾಡೋದೇ ಇಲ್ಲ ಅಂತ…
೨) ಹಾಗೇನೇ ಅವರ ಸಿನಿಮ್ಯಾಟೋಗ್ರಫಿಗೂ, ಸಂಗೀತದ ತಿಳಿವಳಿಕೆಗೂ ಯಾವುದೋ ಸಂಬಂಧ ಇದೆ ಅಂತ ನೀವು ತೋರಿಸಿದ ಡಾಕ್ಯುಮೆಂಟರಿಯಲ್ಲಿ ಅನ್ಸುತ್ತೆ. ಈ ಬಂಧ ಯಾವುದು? ಒಂದೊಂದು ಹಾಡಿನಲ್ಲೂ ಅವರು ಹೇಗೆ ಹಾಡಿನ ಭಾವಕ್ಕೆ ತಕ್ಕಂತೆ ಕ್ಯಾಮೆರಾ ಚಲಿಸಿದರು, ಪ್ಯಾನ್ ಮಾಡಿದರು,ಝೂಮ್ ಮಾಡಿದರು (ಇನ್ ಅಥವಾ ಔಟ್), ಯಾಕೆ ಕ್ಲೋಸಪ್‌ಗೆ ಬಂದರು – ಇವನ್ನೆಲ್ಲ ಒಂದೆರಡು ಹಾಡುಗಳ ವಿವಿಧ ಶಾಟ್‌ಗಳ ವಿವರಣೆ ಮೂಲಕ ಕೊಡಬಹುದಿತ್ತೇನೋ.
೩) ಇಡೀ ಪುಸ್ತಕದಲ್ಲಿ ಕೆಲವೆಡೆ ನೀವೂ ಕಾಣಿಸಿಕೊಂಡಿದ್ದೀರಿ. ಮೂರ್ತಿಯವರ ಚಿತ್ರಸಂಪುಟವನ್ನು ಕೊಡದೆ ಅದನ್ನು ಎಲ್ಲಾ ಪುಟಗಳಲ್ಲಿ ಸ್ಪ್ರೆಡ್ ಮಾಡಿದ್ದು ಸರಿ. ಆದರೆ ಪುಸ್ತಕಕ್ಕಾಗಿ ನೀವು ಮಾಡಿದ ಓಡಾಟವನ್ನೂ ಮೂರ್ತಿಯವರ ಚಿತ್ರಗಳೊಂದಿಗೇ ಸೇರಿಸಿರುವುದು ನನಗೆ ಸರಿ ಕಾಣಿಸಲಿಲ್ಲ. ಅವನ್ನೆಲ್ಲ ಅನುಬಂಧದ ಹಾಗೆ ಕೊನೆಯಲ್ಲಿ ಒಟ್ಟಿಗೇ ಕೊಡಬಹುದಿತ್ತೇನೋ.
೪) ಪುಸ್ತಕದ ವಿನ್ಯಾಸದಲ್ಲಿ ಇನ್ನಷ್ಟು ಶಿಸ್ತು ಬೇಕಿತ್ತೇನೋ. ಪಠ್ಯದ ನಡುವೆ ಯಾವುದೇ ವಿನ್ಯಾಸಸಂಬಂಧ ಇಲ್ಲದ ಆಕಾರಗಳ ಚಿತ್ರಗಳಿವೆ. ಮುಖಪುಟದ ಶಿಸ್ತು ಒಳಪುಟಗಳಲ್ಲಿ ಇಲ್ಲ. ಕೆಲವು ಟೈಪೋ ಎರರ್‌ಗಳನ್ನು ನೀವು ಗಮನಿಸಿಲ್ಲ ಅಂತ ಕಾಣುತ್ತೆ. ಬಹುಶಃ ಅವು ಬಟರ್‌ಶೀಟ್‌ನಲ್ಲಿ ಬಂದಿರಬೇಕು (ಸಾಂಸ್ಕೃತಿಕ ಅನ್ನೋ ಕಡೆಗಳಲ್ಲಿ ಸಾಂಸ ತಿಕ ಆಗಿದೆ! ಕೊಂಚ ಎಡವಟ್ಟು ಪದ). ಅಥವಾ ಅವನ್ನೆಲ್ಲ ಫಾಂಟ್ ಕನ್ವರ್ಟ್ ಮಾಡೋವಾಗ ಆಗಿರಬೇಕು.
ನೀವು ಕರೆದ ತಪ್ಪಿಗೆ ಇಷ್ಟು ಬರೆದಿದ್ದೀನಿ! ಮತ್ತೊಂದ್ಸಲ ನಿಮಗೆ ಥ್ಯಾಂಕ್ಸ್. … ಮೂರು ವರ್ಷಗಳಲ್ಲಿ ಬರೆಯವುದನ್ನೇ ಮರೆತ ನನ್ನನ್ನು ಇಷ್ಟು ಬರೆಯಲು ಹಚ್ಚಿದ್ದಕ್ಕೆ…..
ಮರ&#
3270
;ತಿದ್ದೆ. ಕಾಯ್ಕಿಣಿ ನಿರೂಪಣೆ ಮತ್ತು ಅಲ್ಲಿ ಅರೇಂಜ್ ಮಾಡಿದ್ದ ಊಟ ಎರಡೂ ರುಚಿಯಾಗಿದ್ದವು.
(ಬೇಳೂರು ಸುದರ್ಶನ) ೩ ಜನವರಿ ೨೦೦೫
ಬಿಸಿಲು ಕೋಲು: ಸಿನಿ ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರ ಕುರಿತು ನೆರಳು ಬೆಳಕಿನ ಪಯಣ
ಲೇಖಕಿ: ಉಮಾರಾವ್ ದೂರವಾಣಿ: ೨೬೬೬೧೩೫೧
ಪ್ರಕಟಣೆ ಪ್ರಿಸಮ್ ಬುಕ್ಸ್ ಪ್ರೈ.ಲಿ., ದೂರವಾಣಿ: ೨೬೭೧೩೯೭೯
೩೩೪ ಪುಟ, ೨೭೫ ರೂ. ಡೆಮಿ ೧/೮ ಅಳತೆ
ಒಂದು ಖಾಸಗಿ ವಿಮರ್ಶೆ