ಅಬ್ಬಬ್ಬಬ್ಬಬ್ಬಬ್ಬ…. ಅಂತೂ ಈ ಸಲ ಬೆಂಗಳೂರಿನಲ್ಲಿ ಭಯೋತ್ಪಾದನೆ ಇಲ್ವಲ್ಲಪ್ಪ…. ಯಾಕಂದ್ರೆ ಈ ಬೆಂಗಳೂರು ಹಬ್ಬ ಅನ್ನೋ ಕಾಸ್ಮೋಭಯಂಕರ ವಿಕೃತಿಗೆ ಉಗ್ರಗಾಮಿಗಳ ಕಾಟ ಅಂತ ಸರ್ಕಾರವೇ ಹೇಳಿದೆ. ಅಂತೂ ಒಂದೇ ವಾರದಲ್ಲಿ ಎರಡೂವರೆ ಕೋಟಿ ರೂಪಾಯಿ ಪಂಗನಾಮ ಹಾಕೋ ಪ್ರಯತ್ನ ಎಂಥದ್ದೋ ಭಯದಿಂದ ನಿಂತೇ ಹೋಯ್ತು!
ಕನ್ನಡವೇ ಸತ್ಯ ಅಂತ ಕೂಗ್ತಿದ್ದ ಸಿ ಅಶ್ವಥ್‌ರಂಥವ್ರೇ ಈ ಹಬ್ಬ ಅನ್ನೋ ಗಬ್ಬು ಪ್ರಯತ್ನದ ವಿರುದ್ಧ ದನಿ ಎತ್ತಿದ್ದೇ ಇದಕ್ಕೆ ಕಾರಣವೆ? ಕನ್ನಡ ರಕ್ಷಣಾ ವೇದಿಕೆಯ ಅಬ್ಬರದ ಟೀಕೆಯೇ ಹಬ್ಬದ ಗಬ್ಬಕ್ಕೆ ಎರವಾಯ್ತೆ? ನಿಜಕ್ಕೂ ಭಯೋತ್ಪಾದಕರು ಫೋನ್ ಮಾಡಿ ಹಬ್ಬ ಹಾರಿಸ್ತೀವಿ ನಿಮ್ಮುನ್ನ ಅಂತ ಹೇಳಿದ್ರೆ? ಅಥವಾ ಹಬ್ಬ ಘೋಷಣೆಯಾದ ಮೇಲೇನೇ ಭಯ ಹುಟ್ಕೊಳ್ತೆ? ಅರೆರೆರೆರೆರೆ, ಈ ಹಬ್ಬಕ್ಕೆ ಇಂಥ ಗತಿ ಯಾಕೆ ಬಂತು?
ನಾನೂ ಈ ಹಬ್ಬದಲ್ಲಿ ನಡೆಯೋ ಕಾರ್ಯಕ್ರಮಾನ ನೋಡಿದೀನಿ. ಒಂದ್ಸಲ ಹೀಗಾಯ್ತು… ಫಯಾಜ್ ಖಾನ್ ಕಾರ್ಯಕ್ರಮ ಕೊಟ್ಟ ಮೇಲೆ ಅವರಿಗೆ ಒಂದೂ ಹೂಗುಚ್ಛಕೊಡೋವ್ರೇ ಇರ್‍ಲಿಲ್ಲ! ಯಾಕಂದ್ರೆ ಕಲಾವಿದರಿಗೆ ದುಡ್ಡು ಕೊಟ್ಟ ಮೇಲೆ ಮುಗೀತು ನಮ್ಮ ಕೆಲ್ಸ, ಕಲಾವಿದ್ರು ಹಾಡಿದ ಮೇಲೆ ಅವರ ಕೆಲಸಾನೂ ಮುಗೀತು, ಕಂಟ್ರಾಕ್ಟೂ ಖತಂ ಅಂತ ಈ ಹಬ್ಬ ನಡ್ಸೋವ್ರು ತಿಳ್ಕೊಂಡಿದ್ರು. ಫಯಾಜ್ ಖಾನ್ ಬಿಡಲಿಲ್ಲ. ಕೊನೆಗೂ ಯಾವುದೋ ಗುಲಾಬಿ ಹೂವಾ ತಂದು ತನ್ನೆಲ್ಲ ಸಹಕಲಾವಿದರಿಗೆ ಕೊಟ್ಟು ವೇದಿಕೆ ಬಿಟ್ರು… ಅವರ ಮುಖದಲ್ಲಿ ಇದ್ದ ಆ ಆತಂಕ…. ಬೆಂಗಳೂರಿನ ಕಲಾವಿದರಿಗೆ ಇದ್ದ ಎಲ್ಲ ಆತಂಕದ ಪ್ರತಿಬಿಂಬವಾಗಿತ್ತು. ಹೋಗ್ಲಿ, ಈ ಫಯಾಜ್ ಖಾನ್ ಸಾರಂಗಿ, ತಬಲಾ, ಗಾಯನ ಎಲ್ಲದರಲ್ಲೂ ದೇಶದಲ್ಲೇ ಪ್ರಖ್ಯಾತ. ಆದ್ರೂ ಇವರಿಗೆ ಎಷ್ಟು ಹಣ ಕೊಟ್ರು ಈ ಹಬ್ಬದ ಜನ ಅಂತ ಯಾರಿಗೆ ಗೊತ್ತು?
ಅದಿರ್‍ಲಿ… ಬೆಂಗಳೂರು ಹಬ್ಬದ ಹೆಸರಿನಲ್ಲಿ ಕರೆಯೋದಾದ್ರೂ ಯಾರನ್ನ? ಈ ಹಬ್ಬಕ್ಕೆ ಕಲೆಕ್ಟ್ ಆಗಿರೋ ಹಣ, ಕಲಾವಿದರಿಗೆ ಕೊಟ್ಟ ಹಣ, ವೇದಿಕೆ-ಪ್ರಚಾರಕ್ಕೆ ಖರ್ಚಾದ ಹಣದ ಲೆಕ್ಕಾನ ಈ ಹಬ್ಬದ ಜನ ಎಂದಾದ್ರೂ ಸಾರ್ವಜನಿಕವಾಗಿ ಪ್ರಕಟಿಸಿದಾರ? ಇಷ್ಟೆಲ್ಲ ಭಾನಗಡಿ ಮಂದಿ ಅಂತ ಗೊತ್ತಿದ್ದೂ ಸರ್ಕಾರ ಇವರಿಗೆ ಎರಡೂವರೆ ಕೋಟಿ ಕೊಟ್ಟು ತುಲಾಭಾರ ನಡೆಸೋದಕ್ಕೆ ಹೊರಟಿತ್ತಲ್ಲ…. ಇದಕ್ಕೆ ಏನು ಹೇಳೋಣ? ಈ ಹಬ್ಬಕ್ಕೆ ಇಷ್ಟು ದಿನ ಹಣ ಕಕ್ಕಿದ ಕಾರ್ಪೋರೇಟ್ ಕಂಪನಿಗಳೆಲ್ಲ ಈ ಸಲ ಎದ್ದೋಗಿದ್ವಾ ಏನ್ ಕಥೆ?
ಈ ಹಬ್ಬದ ಬದಲು ರಾಜ್ಯದಲ್ಲಿ ಇರೋ ಸಾವಿರಾರು ಕಲಾವಿದರಿಗೆ ಹಣ ಕೊಟ್ರೆ ಏನಾಗುತ್ತೆ? ಸರ್ಕಾರ ರಾಜ್ಯದ ವಿವಿಧ ಅಕಾಡೆಮಿಗಳಿಗೆ ಕೊಡೋದೇ ಇಪ್ಪತ್ತು – ಮೂವತ್ತು ಲಕ್ಷ ಚಿಲ್ರೆ ಹಣ. ಅದೂ ವರ್ಷಕ್ಕೊಮ್ಮೆ!!! ಆದ್ರೆ ಈ ಖಾಸಗಿ ಮಂದಿ ನಡೆಸೋ ಹಬ್ಬಕ್ಕೆ ಮಾತ್ರ ಎರಡೂವರೆ ಕೋಟಿ……. ಇದಕ್ಕಿಂಥ ವಿಚಿತ್ರ ಉಂಟೆ ಮಹಾಸ್ವಾಮಿ ಓದುಗರೆ?
ನಮ್ಮ ಸಂಗೀತ ಅಕಾಡೆಮಿ ಅಧ್ಯಕ್ಷ ನರಸಿಂಹಲು ವಡಿವಾಟಿಯವರು ಬೀದೀಲಿ ಹಾಡಿಕೊಂಡು ಹೋಗೋರಿಗೂ ಮಾಸಾಶನ ಕೊಡಬೇಕು ಅನ್ನೋ ಚಿಂತನೆ ಮಾಡ್ತಿದಾರೆ… ಆದ್ರೆ ಸರ್ಕಾರ ಮಾತ್ರ ವರ್ಷಕ್ಕೊಮ್ಮೆ ಹಾರಿಬಂದು ವೈಯ್ಯಾರ ಮಾಡೋ ಸಂಘಟಕರಿಗೆ ಎರಡೂವರೆ ಕೋಟಿ ಕೊಡೋದಕ್ಕೆ ಹೊರಟಿತ್ತು!! ಅಬ್ಬಬ್ಬಬ್ಬಬ್ಬ…. ಸದ್ಯ ಬಚಾವಾಯ್ತಲ್ಲಪ್ಪ ಸಾರ್ವಜನಿಕ ಹಣ!