ಅಮರ್ ಬೋಸ್: ಕಿವಿಗೆ ಇನಿದನಿ, ಕಾರಿಗೆ ಸಮತಲ ತಂದರು
ಫೋರ್ಬ್ ಸಂಸ್ಥೆಯು ಪ್ರಕಟಿಸುವ ಅಮೆರಿಕಾದ ಸಿರಿವಂತರ ಪಟ್ಟಿಯಲ್ಲಿ ಅಮರ್ ಬೋಸ್ ಇದ್ದಾರೆ ಎಂಬ ಖುಷಿಗೆ ಈ ಅಂಕಣ ಬರೆಯುತ್ತಿಲ್ಲ. ಡಿಜಿಟಲ್ ಯುಗದಲ್ಲಿ ನಮ್ಮ ಕಿವಿಗಳಿಗೆ ಸಂಗೀತವು ಸುಶ್ರಾವ್ಯವಾಗಿ ಹರಿಯುವುದಕ್ಕೆ ಕಾರಣವಾದ ಬೋಸ್ ಆಡಿಯೋ ತಂತ್ರಜ್ಞಾನವನ್ನು ಅಮರ್ ಬೋಸ್ ಕಂಡು ಹಿಡಿದು ದಶಕಗಳೇ ಕಳೆದವು. ೪೩ ವರ್ಷಗಳ ಹಿಂದೆ ಅವರು ಸ್ಥಾಪಿಸಿದ ಬೋಸ್ ಟೆಕ್ನಾಲಜಿ ಸಂಸ್ಥೆಯು ಈಗ ಐ ಪಾಡ್ ನಿಂದ ಹಿಡಿದು ಹಲವು ಸುಪ್ರಸಿದ್ಧ ಬ್ರಾಂಡ್‌ಗಳ ಹಿಂದಿನ ಧ್ವನಿವ್ಯವಸ್ಥೆಯನ್ನು "ಇನಿದನಿ''ಯಾಗಿಸಿದೆ. ಸೋನಿ, ಕೆನ್‌ವುಡ್‌ನಂಥ ಶ್ರವಣ ತಂತ್ರಜ್ಞಾನ ಸಂಸ್ಥೆಗಳೂ ಬೋಸ್‌ಗೆ ತಲೆಬಾಗುತ್ತವೆ.
ಅಮರ್ ಬೋಸ್‌ರವರ ಅಪ್ಪ ನಾನಿ ಗೋಪಾಲ್ ಬೋಸ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ; ಕ್ರಾಂತಿಕಾರಿ. ಬ್ರಿಟಿಶರಿಂದ ತಪ್ಪಿಸಿಕೊಳ್ಳಲು ಫಿಲಡೆಲ್‌ಫಿಯಾಗೆ ಹೋದವರು ಅಲ್ಲಿಯೇ ನೆಲೆಸಿದರು. ಹೈಸ್ಕೂಲಿನಲ್ಲಿದ್ದಾಗಲೇ ಮನೆಗೆ ವರಮಾನ ತರಲು ಅಮರ್ ಬೋಸ್ ರೇಡಿಯೋ ರಿಪೇರಿಯಲ್ಲಿ ತೊಡಗಿದರು. ಆಮೇಲೆ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂ ಐ ಟಿ) ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಿ ಅಲ್ಲಿಯೇ ಗಣಿತಶಾಸ್ತ್ರದ ನಾನ್ ಲೀನಿಯರ್ ಸಿಸ್ಟಂನಲ್ಲಿ ಪಿ ಎಚ್ ಡಿಯನ್ನೂ ಪೂರ್ಣಗೊಳಿಸಿದರು. ಅಲ್ಲಿರುವಾಗಲೇ ಬೋಸ್ ಒಂದು ಸ್ಟೀರಿಯೋ ಖರೀದಿಸಿದ್ದರು. ಅದರ ಕಳಪೆ ಧ್ವನಿ ಬೋಸ್‌ರನ್ನು ನಿರಾಶೆಗೊಳಿಸಿತು. ಅದೇ ಅವರ ಸಂಶೋಧನೆಗಳಿಗೆ ನಾಂದಿಯಾಯಿತು. ಎಂ ಐ ಟಿ ಯ ಪ್ರೊಫೆಸರ್ ವೈ. ಡಬ್ಲ್ಯು ಲೀಯವರ ಹಣಕಾಸಿನ ನೆರವಿನಿಂದ ಬೋಸ್ ಸಂಸ್ಥೆಯನ್ನು ೧೯೬೪ರಲ್ಲಿ ಸ್ಥಾಪಿಸಿದ ಮೇಲೆ ಅವರು ನಡೆದದ್ದೇ ಹಾದಿ. ಹಾಡಿದ್ದೆಲ್ಲ ಸ್ಫಟಿಕ ಶುದ್ಧ ಡಿಜಿಟಲ್ ಪದ.
೧೯೬೮ರಲ್ಲಿ ಅಮರ್ ಬೋಸ್ ಆವಿಷ್ಕರಿಸಿದ್ದು ೯೦೧ (ಆರ್)ಡೈರೆಕ್ಟ್ / ರಿಫ್ಲೆಕ್ಟಿಂಗ್ (ಆರ್) ಸ್ಪೀಕರ್ ವ್ಯವಸ್ಥೆಯನ್ನು. ಈ ವ್ಯವಸ್ಥೆಯು ಕೇವಲ ದನಿಯನ್&
amp;
#3240;ು ಹೊರಡಿಸುವುದಿಲ್ಲ. ಬದಲಿಗೆ ದನಿಯು ಆವರಿಸುವ ಸ್ಥಳವನ್ನೂ ಬಳಕೆ ಮಾಡಿಕೊಳ್ಳುತ್ತದೆ. ವಿಶ್ವದಾದ್ಯಂತ ಈ ತಂತ್ರಜ್ಞಾನ ಜನಪ್ರಿಯವಾಯಿತು ಎಂಬುದೆಲ್ಲ ಈಗ ಇತಿಹಾಸ, ವರ್ತಮಾನ ಮತ್ತು ಭವಿಷ್ಯ!
ಈಗ ಅಮರ್ ಬೋಸ್ ಕೈಯಲ್ಲಿ ಎರಡು ಡಜನ್ ಇಂಥ ಬಳಕೆ ಯೋಗ್ಯ ಸಂಶೋಧನೆಗಳ ಪೇಟೆಂಟ್‌ಗಳಿವೆ. ಒಲಿಂಪಿಕ್ ಕ್ರೀಡೆಗಳು ನಡೆಯುವ ಸ್ಟೇಡಿಯಂಗಳಲ್ಲಿ, ನಾಸಾದ ಸ್ಪೇಸ್ ಶಟಲ್‌ನಲ್ಲಿ, ಜಪಾನೀಸ್ ನ್ಯಾಶನಲ್ ಥಿಯೇಟರಿನಲ್ಲಿ – ಅಥವಾ ಎಲ್ಲ ಸುವಿಖ್ಯಾತ ಸ್ಥಳಗಳಲ್ಲಿ ಎನ್ನಿ, – ಬೋಸ್ ಸಾಧನಗಳ ಗುಂಜನವಿದೆ. ಹೋಮ್ ಥಿಯೇಟರ್, ಕಾರ್ ಸ್ಟೀರಿಯೋಗಳಲ್ಲಿ ಬೋಸ್ ವ್ಯವಸ್ಥೆಯನ್ನು ಮಾತ್ರ ಕಣ್ಣು ಮುಚ್ಚಿ ಖರೀದಿಸಬಹುದು ಎಂಬ ಮಾತೇ ಪ್ರಚಲಿತವಾಗಿದೆ. ನಿಜ, ಈ ಸಾಧನಗಳು ಮಧ್ಯಮವರ್ಗಕ್ಕೆ, ಮೇಲ್ ಮಧ್ಯಮ ವರ್ಗಕ್ಕೆ ಎಟುಕದ ಬೆಲೆಯಲ್ಲಿವೆ. ಆದರೆ ದಶಕಗಟ್ಟಳೆ ಕಾಲಾವಧಿ ತಪಸ್ಸು ಮಾಡಿ ಗಳಿಸಿದ ತಂತ್ರಜ್ಞಾನಕ್ಕೆ ಇಂದಿನ ಕಾಲದಲ್ಲಿ ಬೆಲೆ ಕಟ್ಟಲೇಬೇಕಲ್ಲವೆ? (ರೇಡಿಯೋ ಕಂಡು ಹಿಡಿದ ನಮ್ಮ ಸರ್ ಜಗದೀಶ್ ಚಂದ್ರ ಬೋಸ್ ಇಂಥ ಹಕ್ಕುಸ್ವಾಮ್ಯಗಳಾವುವೂ ನನಗೆ ಬೇಡ; ಅವೆಲ್ಲ ಮನುಕುಲದ ಏಳಿಗೆಗಾಗಿ ಮಾಡಿದ್ದಷ್ಟೇ ಹೊರತು ಬೇರೇನಿಲ್ಲ ಎಂದು ಕವಿಶ್ರೇಷ್ಠ ರಬೀಂದ್ರನಾಥ ಟಾಗೋರರಿಗೆ ಕಾಗದ ಬರೆದದ್ದು ಈಗ ನೆನಪಾಗುತ್ತಿದೆ.)
ಅದೆಲ್ಲ ಬಿಡಿ, ಈಗ ಅಮರ್ ಬೋಸ್ ಕಾರಿನಲ್ಲಿ ಬಳಸುವ ಸಸ್ಪೆನ್ಶನ್ ಕುರಿತಂತೆ ೨೪ ವರ್ಷಗಳ ಕಾಲ ಸಂಶೋಧನೆ ನಡೆಸಿ ಒಂದು ಕ್ರಾಂತಿಕಾರಿ ಆವಿಷ್ಕಾರ ಮಾಡಿದ್ದಾರೆ ಎಂಬುದು ಗೊತ್ತೆ? ಈ ವಿಷಯವು ಪ್ರಕಟವಾಗಿದ್ದೇ ಇತ್ತೀಚೆಗೆ.
ಕಾರನ್ನು ಚಲಿಸುವಾಗ, ತಗ್ಗು ದಿಣ್ಣೆಗಳಿದ್ದರೆ, ಅಥವಾ ತಿರುವುಗಳಿದ್ದರೆ ಕಾರಿನ ಸಮತಲದಲ್ಲಿ ಏರಿಳಿತವಾಗುತ್ತದೆ. ಟಯರುಗಳಿಗೆ ಸಸ್‌ಪೆನ್ಶನ್ ಹಾಕಿದ್ದರೂ ಈ ಕುಲುಕಾಟ ತಪ್ಪಿದ್ದಲ್ಲ. ಈ ಸಸ್‌ಪೆನ್ಶನ್ ಸ್ಪ್ರಿಂಗ್ ಮತ್ತು ಶಾಕ್ ಅಬ್ಸಾರ್ಬರ್ ಮಾದರಿಯದು. ಆದರೆ ಬೋಸ್ ಕಂಡುಹಿಡಿದ ಮಾಯಾಚಾಪೆ ತಂತ್ರಜ್ಞಾನದಿಂದ ಈ ಸಮಸ್ಯೆಯೂ ಪರಿಹಾರವಾಗಿದೆ. ಹಲವು ಕಲಿಷ್ಟ ಗಣಿತಸೂತ್ರಗಳ&#
3265
;, ಎಲೆಕ್ಟ್ರೋಮ್ಯಾಗ್ನೆಟಿಕ್ ತಂತ್ರಜ್ಞಾನಗಳು ಈ ಸಂಶೋಧನೆಯಲ್ಲಿ ಅಡಕವಾಗಿವೆ.
ಬೋಸ್ ಕಂಡುಹಿಡಿದ ಈ ಮೋಟಾರುಗಳು ಕಾರಿನ ಎಲ್ಲಾ ಗಾಲಿಗಳಿಗೂ ಜೋಡಣೆಯಾಗಿರುತ್ತವೆ. ಇವು ಕಾರಿನ ಹಾದಿಯಲ್ಲಿ ಇರುವ ಎಲ್ಲಾ ತಗ್ಗುದಿಣ್ಣೆಗಳನ್ನೂ ಗಮನಿಸಿ ಅದಕ್ಕೆ ತಕ್ಕಂತೆ ಕಾರಿನ ಸಮತಲವನ್ನು ಕಾಪಾಡುವುದಕ್ಕೆ ಸೂಕ್ತ ನಿರ್ದೇಶಗಳನ್ನು ನೀಡುತ್ತವೆ. ಹಾಗಂತ ಕಾರಿನ ಚಾಲಕನಿಗೆ ಇದರ ಅನುಭವವೂ ಆಗುವುದಿಲ್ಲ. ಅದು ಬಿಡಿ, ಕ್ಲಿಷ್ಟಕರ ತಿರುವುಗಳಲ್ಲಿ ಚಾಲಕನೂ ಒಂದು ಬದಿಗೆ ಸರಿಯುವುದನ್ನು ನೀವು ಗಮನಿಸಿರುತ್ತೀರಿ ತಾನೆ? ಅಮರ್ ಬೋಸ್ ಈ ಸಮಸ್ಯೆಯನ್ನೂ ಪರಿಹರಿಸಿದ್ದಾರೆ.
೧೯೮೦ರಲ್ಲಿ ಈ ಕುರಿತು ಸಂಶೋಧನೆ ಆರಂಭಿಸಿದ ಬೋಸ್ ಸಾಂಪ್ರದಾಯಿಕ ಹೈಡ್ರಾಲಿಕ್ ವ್ಯವಸ್ಥೆಯನ್ನೂ ಬದಿಗೆ ಸರಿಸಿಯೇ ಕೆಲಸ ಶುರು ಮಾಡಿದರು. ೧೯೮೯ರಲ್ಲಿ ಕ್ಷೇತ್ರ ಪ್ರಯೋಗಗಳು ನಡೆದವು. ಸಾಂಪ್ರದಾಯಿಕ ಕಾರಿನ "ಸುಖ" ಅನುಭವಿಸಿದವರು ಇದರಲ್ಲಿ ಅನುಭವಿಸಿದ್ದು ಸ್ವರ್ಗಸುಖ! ಎಲ್ಲೂ ಕುಲುಕಾಟದ ಮಾತಿಲ್ಲ. ಏರಿಳಿತಗಳಿಲ್ಲ.
ಎಂ ಐ ಟಿಯಲ್ಲಿ ಬೋಸ್ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ. ಅವರು ಉಪನ್ಯಾಸಕ್ಕೆ ಬಂದ ಕೂಡಲೇ ಸಭಾಂಗಣದಲ್ಲಿ ಬರೀ ಮೌನ; ಅವರ ಮಾತುಗಳಿಗಾಗಿ ಕಾತರ.
"ನಾನೇನೂ ಹಣ ಮಾಡಬೇಕು ಎಂದು ಈ ಕ್ಷೇತ್ರಕ್ಕೆ ಬಂದವನಲ್ಲ; ಈ ಹಿಂದೆ ಮಾಡಿರದಂಥ ಸಂಶೋಧನೆಗಳನ್ನು ಮಾಡಿ ಬದುಕಿನಲ್ಲಿ ಬಳಕೆಗೆ ತರುವುದಕ್ಕೆ ಪ್ರಯತ್ನಿಸಿದೆ, ಅಷ್ಟೆ'' ಎಂದು ಅಮರ್ ಬೋಸ್ ಹೇಳುತ್ತಾರೆ.
ಅವರ ಸಹೋದ್ಯೋಗಿ ಕೆನ್ ಜೇಕಬ್ ಮತ್ತು ತಂಡವು ರೂಪಿಸಿದ ಬೋಸ್ ಆಡಿಶನರ್ ಪ್ರೋಗ್ರಾಮನ್ನೇ ನೋಡಿ: ಯಾವುದೇ ದೊಡ್ಡ ಕಟ್ಟಡದಲ್ಲಿ ಎಲ್ಲಿ ಕುಳಿತುಕೊಂಡರೆ ಎಂಥ ಧ್ವನಿ ಯಾವ ಪ್ರಮಾಣದಲ್ಲಿ ಕೇಳಿಸುತ್ತದೆ ಎಂದು ಗಣಕದಲ್ಲೇ ಅರಿಯಬಹುದು. ಲಾಸ್ ಎಂಜಲಿಸ್‌ನ ಸ್ಟೇಪಲ್ ಸೆಂಟರಿನಲ್ಲಿ, ಮೆಕ್ಕಾದ ಮಸ್‌ಜಿದ್ ಅಲ್ ಹರಾಮ್ ಮಸೀದಿಯಲ್ಲಿ ಧ್ವನಿವ್ಯವಸ್ಥೆಯನ್ನು ಅಳವಡಿಸಲು ಇದೇ ತಂತ್ರಜ್ಞಾನ ಬಳಕೆಯಾಗಿದೆ. ಅಲ್ 
50
;ಿ ಈವರೆಗೂ ಎಲ್ಲ ಯತ್ನಗಳೂ ವಿಫಲವಾಗಿದ್ದವು ; ಎಲ್ಲೆಲ್ಲೂ ಪ್ರತಿಧ್ವನಿಯೇ ಕೇಳಿಬರುವ ಕಟ್ಟಡದಲ್ಲೂ ಬೋಸ್ ಗೆದ್ದಿದ್ದರು!
ಅಪ್ಪನಂತೆಯೇ ಅಮರ್ ಬೋಸ್ ಕ್ರಾಂತಿಕಾರಿ! ಅವರ ಮಗನೂ. ಅಮರ್ ಬೋಸ್‌ರವರ ಮಗ ವನು ಬೋಸ್ ಕೂಡಾ ಧ್ವನಿಪಂಡಿತ! ಇಂಟರ್‌ನೆಟ್, ಮೊಬೈಲ್ ರಂಗದಲ್ಲಿ ಬೇಕಾದ ರೇಡಿಯೋ ತಂತ್ರಜ್ಞಾನವನ್ನು ಅವರು ರೂಪಿಸಿದ್ದಾರೆ.
ಪ್ರತಿದಿನ ಮುಂಜಾನೆ ನದೀತಟದಲ್ಲಿ ಅಹಿರ್ ಭೈರವ್ ರಾಗದ ಹಾದಿಯಲ್ಲಿ. ವೇದಮಂತ್ರಗಳನ್ನು ಕರಾರುವಾಕ್ ಏರಿಳಿತಗಳಲ್ಲಿ ಪಠಿಸಿದ ನಮ್ಮ ಹಿರಿಯರಂತೆಯೇ ಬೋಸ್ ಕೂಡಾ ದಶಕಗಳ ತಪಸ್ಸನ್ನು ಧಾರೆ ಎರೆದು ನಮ್ಮ ಬದುಕನ್ನು ಹಸನುಗೊಳಿಸುತ್ತಿದ್ದಾರೆ. ನಿಖರ ಮತ್ತು ಕರ್ಣಾನಂದಕರ ಧ್ವನಿಯ ಹುಡುಕಾಟದ ನಮ್ಮ ಪರಂಪರೆಗೆ ಕೊಂಡಿಯಾಗಿದ್ದಾರೆ.