ಎಚ್ಚರಿಕೆ
೨೯-೧-೮೭ / ಬೆಂಗಳೂರು
ಯಾರಲ್ಲಿ ದಾರಿಬಿಡಿ ನನ್ನ ಕವನಗಳಲ್ಲಿ
ಮೀಸಲು ನಾನು ತೊಂಬತ್ತೊಂಬತ್ತು
ಒಂದು ಅಂದರೆ ಅದರಲ್ಲಿ ನೂರು
ಮುಖಗಳನ್ನು ಬರೆಯಲೂ ನನಗೆ ಗೊತ್ತು.
ಪಿಸುಗುಟ್ಟದಿರಿ ಸಲಹೆ ಸೂಚನೆ ಜೋಕೆ
ಶಬ್ದಗಳ ಪೋಣಿಸುವ ಹಕ್ಕು ನನಗೆ
ಕೊಡುವುದಿದ್ದರೆ ನಿಮ್ಮ ಚರ್ಮದ ಜೀವ
ಕೋಶ ಕಾಯಿಲೆ ಬಿಟ್ಟು ಬನ್ನಿ ಒಳಗೆ.
ಪ್ರಕಟಿಸಲು ನಿಮ್ಮ ಜವಾಬ್ದಾರಿಯೇ ಬೇಡ
ಸ್ವಯಂ ಪ್ರಕಾಶವಿದೆ ನನ್ನ ಮಹಾಕಾವ್ಯಕ್ಕೆ
ನೂರಾರು ಶತಮಾನಗಳ ಕಾಲ ಚಿಂತಿಸಬೇಡಿ
ಸೂರ್ಯ ಮಲಗಲಿ ಕನಸು ಕಾಣಲಿಕ್ಕೆ
ಮುನ್ನುಡಿಯೇ ಕೊನೆಯ ಮಾತಾಗಲಿದೆ ಗಮನಿಸಿ
ತಿದ್ದುಪಡಿ ಮುಖಪುಟದ ಚಿತ್ರ
ನನ್ನೆದೆಗೇ ಅರ್ಪಿಸಿಕೊಂಡು ಬೀಗುವೆನಿಲ್ಲಿ
ಬೇಕಿಲ್ಲ ನಿಮ್ಮ ಪಾತ್ರ