ಒಂದು ಕ್ಷಣದಲ್ಲಿ ನೀನು ನನ್ನನ್ನು ಬೈದುಕೊಳ್ಳುತ್ತೀಯೆ
ಎಂಥ ಕಟುಹೃದಯಿ, ಅಶಾಂತ, ನಿರ್ದಯಿ ಎದೆ
ಒಳಗೆ ಘನವಾಗಿ ಹರಿಯುತ್ತಿದೆ ಯಾವುದೋ ದ್ವೇಷ.
ನೀನೇನಂಥ ಮೆದು ಹುಡುಗನಲ್ಲ, ಬರಿಯ ಕಲ್ಲು.
ಒಂದು ದಿನವೂ ನೀನು ಹೀಗೆ ಕರ್ಟನು ಸರಿಸಿದವನಲ್ಲ,
ಒಂದು ಹುಸಿಜೋಕಿಗೂ ನಕ್ಕವನಲ್ಲ,
ಬೆಳಗ್ಗೆ ಎದ್ದು ಹದವಾಗಿ ಮಾತಾಡುವುದಿಲ್ಲ
ಚಾ ಕುಡಿವಾಗ ಕಣ್ಣು ವಾರೆನೋಟಕ್ಕೂ ಗತಿಯಿಲ್ಲದಂತೆ
ಪೇಪರಿಗೆ ಅಂಟಿಕೊಂಡಿರುತ್ತೆ. ಆ ಪೇಪರಿನಲ್ಲಿ ಯಾರದ್ದೋ
ರಕ್ತ, ಪೋಲಿಯೋ ಲಸಿಕೆ ಎಲ್ಲ ರಾಡಿ.
ನೀನು ತಣ್ಣಗೆ ಲೋಟ ಎತ್ತಿಕೊಂಡ ಮೇಲೆ
ನಾನು ಹಾಗೇ ಜಾರಿಕೊಳ್ಳುತ್ತೇನೆ
ಮೆತ್ತಗೆ, ಬೆಳ್ಳಂಬೆಳಗ್ಗೆಯೇ ಕಾಣಬೇಕಾದ ಕನಸಿಗೆ.
ಡೈನಿಂಗ್ ಟೇಬಲ್ಲಿನ ಮೇಲೆ ಅರಳುತ್ತಿರೋ ಎಲೆಗೂ
ಕಿಟಕಿಯಾಚೆ ಇಣುಕುತ್ತಿರೋ ಮಂಗಕ್ಕೂ
ರಸ್ತೆಯಾಚೆ ಬರುತ್ತಿರೋ ಕಸದ ಗಾಡಿಗೂ
ಸಂಬಂಧ ಕಲ್ಪಿಸುತ್ತ ನಗುತ್ತೇನೆ, ಒಬ್ಬಂಟಿಯಾಗಿ.
ನೀನು ಥಟ್ಟನೆ ಹೊರಟು ಕಂಪ್ಯೂಟರಿನಲ್ಲಿರೋ
ಯಾರ್‍ಯಾರೋ ಬರೆದ ಪತ್ರಗಳನ್ನು ಸೀರಿಯಸ್ಸಾಗಿ ನೋಡುತ್ತ
ಕೂತ ಮೇಲೆ ನನಗಿನ್ನೇನು ಕೆಲಸ ಹೇಳು
ಕಾವಲಿಯಲ್ಲಿ ದೋಸೆ ಹುಯ್ಯೋದು ಬಿಟ್ಟು.
ಈ ಬದುಕು ಈ ಕವನದಷ್ಟೇ ಸಿಂಪಲ್
ಇರಬಹುದಾಗಿತ್ತು. ಈ ಗಳಿಗೆ
ನಿನ್ನೊಳಗೆ ಯಾವುದೋ ಅರ್ಜೆಂಟ್ ಟಾಸ್ಕ್
ಇಣುಕಿರಬಹುದು ಯಾವುದೋ ಮೀಟಿಂಗಿನ
ಸ್ಪ್ರೆಡ್‌ಶೀಟ್. ಸಹಜತೆಗಳನ್ನು ಸುತ್ತಿರಬಹುದು ಹೀಗೆ
ಡಾಕ್ಯುಮೆಂಟ್‌ಗಳನ್ನು ನೀನು ತಿದ್ದುತ್ತಿರಬಹುದು……
ನನ್ನ ಕಣ್ಣೆಲ್ಲ ಮಂಜಾಗಿ….. ಹುಡುಗ
ನೀನು ಎಷ್ಟು ಛಂದ ಈ ವರ್ಚುಯಲ್ ಬದುಕು
ಅನುಭವಿಸುತ್ತೀಯ… ಶೇವಿಂಗ್ ಮಾಡುತ್ತಲೇ
ದುಬಾಯಿ ಹುಡುಗಿಯ ಜೊತೆ ಹರಟುತ್ತೀಯ.
ಚಡ್ಡಿಯನ್ನೂ ಹಾಕಿಕೊಳ್ಳದೆ ಎಷ್ಟು ಮಗ್ನ…
ಒಳಗೂ ಹೊರಗೂ ಎಷ್ಟೊಂದು ನಗ್ನ ನಿನ್ನ ಹೃದಯ
ಅದನ್ನೇ ಟ್ರಾನ್ಸ್‌ಪರೆಂಟ್ ಎಂದು ಕರೆದುಬಿಡಲೆ ಎನ್ನಿಸುತ್ತಿದೆ…..
ನಾಳೆ ಜಿ ಎಂ ಟಿ ಒಂದೂವರೆಗೆ ಹಾಲು ತರೋದಕ್ಕೆ
ಹೋಗಿರ್‍ತೇನೆ ಶಂಕರನಾಗ್ ವೃತ್ತಕ್ಕೆ.
ದಯಮಾಡಿ ಬೋಲ್ಟ್ ಹಾಕಬೇಡ.
ಮಂಗ ಒಳಗೆ ಬರುತ್ತೆ ಕಣೋ.