ಇಂದು ಎಲ್ಲೆಡೆಯೂ ಜಲಸಂರಕ್ಷಣೆಯ ಮಾತು ಕೇಳಿಬರುತ್ತಿದೆ. ಜಲಸಂರಕ್ಷಣೆ ಎಂದರೇನು? ಮುಂದಿನ ಪೀಳಿಗೆಗಳೂ ನಮ್ಮ ಹಾಗೆಯೇ ನೀರನ್ನು ಬಳಸುವುದಕ್ಕೆ ಅವಕಾಶ ಮಾಡಿಕೊಡುವುದೇ ಜಲಸಂರಕ್ಷಣೆ ಎಂದು ಸರಳವಾಗಿ ಹೇಳಬಹುದು.
ಜಲಸಂರಕ್ಷಣೆ ಯಾಕೆ ಬೇಕು? ನಮ್ಮ ಬದುಕಿನಲ್ಲಿ ನೀರಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ. ಇಂಥ ನೀರೇ ಸಿಗದೆ ಹೋದರೆ ಬದುಕು ಬರಡಾಗುತ್ತದೆ. ನೀರಿಗಾಗಿ ಇಂದು ಎಲ್ಲೆಡೆ ಹಾಹಾಕಾರ ಕೇಳಿಬರುತ್ತಿದ. ನಗರಗಳಲ್ಲಿ ನೀರಿನ ಸರಬರಾಜು ಅಸ್ತವ್ಯಸ್ತವಾಗುತ್ತಿದೆ. ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಇನ್ನು ಹೊಲಗದ್ದೆಗಳಿಗೆ ಬೇಕಾದ ನೀರಂತೂ ಸಿಗುವುದೇ ಕಷ್ಟವಾಗಿದೆ.
ಹಾಗೆಂದು ನೀರು ಹೆಚ್ಚಾಗುತ್ತಲೂ ಇಲ್ಲ; ಕಡಿಮೆಯೂ ಆಗುವುದಿಲ್ಲ. ಭೂಮಿಯ ನೀರಿನ ಪ್ರಮಾಣ ಕಡಿಮೆಯಾಗದಿದ್ದರೂ, ನೀರು ಸಿಗದೆ ಹೋಗುತ್ತದೆ; ಬರಗಾಲ ಹೆಚ್ಚಾಗುತ್ತದೆ. ಆದ್ದರಿಂದಲೇ ಜಲಸಂರಕ್ಷಣೆಗೆ ಮಹತ್ವ ಬಂದಿದೆ.
ಜಲಸಂರಕ್ಷಣೆಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಮುಖ್ಯವಾದವು ಮಳೆನೀರು ಸಂಗ್ರಹ ಮತ್ತು ಛಾವಣಿ ನೀರು ಸಂಗ್ರಹ. ವರ್ಷದಲ್ಲಿ ಮೂರ್‍ನಾಲ್ಕು ತಿಂಗಳುಗಳ ಕಾಲ ಬೀಳುವ ಮಳೆನೀರನ್ನು ಸಂಗ್ರಹಿಸಿದರೆ ಇಡೀ ವರ್ಷವೂ ನೀರಿನ ಸಮಸ್ಯೆ ಇಲ್ಲದೆ ಬಾಳಬಹುದು. ಈಗಾಗಲೇ ದೇಶದ ಹಲವು ನಗರ – ಹಳ್ಳಿಗಳಲ್ಲಿ ಈ ಪ್ರಯೋಗವು ಯಶಸ್ವಿಯಾಗಿ ನಡೆದಿದೆ. ಇದನ್ನು ಮಳೆ ಕೊಯ್ಲು ಎಂದು ಕರೆಯುತ್ತಾರೆ.
ಕೇವಲ ನೀರಿನ ಸಂಗ್ರಹವೇ ಜಲಸಂರಕ್ಷಣೆ ಆಗುವುದಿಲ್ಲ. ನಮ್ಮ ಮನೆಗಳಲ್ಲಿ ಬಳಸುವ ನೀರಿನ ಮಿತವ್ಯಯದ ಬಗ್ಗೆ ಗಮನ ಕೊಡುವುದು, ನೀರು ಪೋಲಾಗದಂತೆ ಎಚ್ಚರ ವಹಿಸುವುದು, ಸಾರ್ವಜನಿಕ ಜಲ ಸರಬರಾಜು ವ್ಯವಸ್ಥೆಗಳಲ್ಲಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳುವುದು, ನೀರು ಬಳಕೆಯ ಬಗ್ಗೆ ನಿರಂತರವಾಗಿ ಜನಜಾಗೃತಿ ಮಾಡುವುದು – ಇವೆಲ್ಲವೂ ಜಲಸಂರಕ್ಷಣೆಯ ವಿವಿಧ ಮಾರ್ಗಗಳು.
ಇಂದು ಜಲಸಂರಕ್ಷಣೆಯ ಚಳವಳಿ ವ್ಯಾಪಕವಾಗಿ ಹಬ್ಬಿದೆ. ಕರ್ನಾಟಕದಲ್ಲಿ ನೀರಿನ ಬಗ್ಗೆ ಶ್ರೀ ಪಡ್ರೆಯವರು ಮಾಡುತ್ತಿರುವ ಜಾಗೃತಿಯಿಂದಾಗಿ ಸಾರ್ವಜನಿಕರು ಈ ಬಗ್ಗೆ ಗಮನ ನೀಡುತ್ತಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಉತ್ತಮ ಲೇಖನಗಳು ಬರುತ್ತಿವೆ. ನೀರನ್ನು ಸಂರಕ್ಷಿಸುವ ಬಗ್ಗೆ ಜನಜಾಗೃತಿ ಮಾಡಿದ ವ್ಯಕ್ತಿಗಳಿಗೆ ಸಮಾಜದ ಮಾನ್ಯತೆ ಸಿಗುತ್ತಿದೆ. ಇಷ್ಟಾಗಿಯೂ ಜಲಸಂರಕ್ಷಣೆಯ ಬಗ್ಗೆ ಉಚ್ಚ ಸ ಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಸಮಾಜದ ಎಲ್ಲ ವರ್ಗಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿದಾಗಲೇ ಜಲಸಂರಕ್ಷಣೆಯು ನಿಜವಾಗಿ ಜಾರಿಯಾಗುತ್ತದೆ. ಸಮಾಜವು ಹಸನಾಗುತ್ತದೆ.