ಮುಳಬಾಗಿಲು.ಎಂಥ ಹೆಸರು ! ಕೇಳಿದ ಕೂಡಲೇ ಕೆಲವರಿಗೆ ಟೊಮಾಟೋ ಮಾರುಕಟ್ಟೆ ನೆನಪಾಗುತ್ತದೆ.ಕೆಲವರಿಗೆ ಕೋಮುಗಲಭೆ.ತಿರುಪತಿಗೆ ಹೋಗುವವರಿಗೆ ಸೌತೇಕಾಯಿ,ಶೇಂಗಾ ನಿಲ್ದಾಣವಾಗಿ ಕಾಣುತ್ತದೆ.ನಕ್ಸಲೀಯರಿಗೆ ಕ್ರಾಂತಿಯ ಹೊಸ ನೆಲೆ.ನನಗೆ ಮಾತ್ರ ಮುಳಬಾಗಿಲು ಎಂದರೆ ಮಾನನಷ್ಟ ಮೊಕದ್ದಮೆಯ ‘ನಿಗೂಢ ರಹಸ್ಯಗಳು’ ಬಿಚ್ಚಿಕೊಳ್ಳುತ್ತ ಹೋದ ಜಗತ್ತಿನ ಅತಿದೊಡ್ಡ ನ್ಯಾಯಾಂಗಣವಾಗಿ ಕಾಣುತ್ತದೆ.ಮುಳಬಾಗಿಲಿನಲ್ಲಿ ಇಳಿದ ಕೂಡಲೇ ನನಗೆ ಕಾಣುವುದು ಕೋರ್ಟು ಮಾತ್ರ.
ಅದಕ್ಕಿಂತ ಮುಂಚೆ ನನಗೆ ಅಲ್ಲಿ ಖ್ಯಾತ ತೆಲುಗು ಹೀರೋಯಿನ್ ಸೌಂದರ್ಯಳದು ಎನ್ನಲಾದ ಶ್ರೀ ರಾಮಕೃಷ್ಣ ಹೋಟೆಲ್ ಕಾಣುತ್ತದೆ.ಅದು ತಪ್ಪಿದರೆ ನನ್ನ ಗೆಳೆಯರ ಸಂಬಂಯ ಸೌಂದರ್ಯ ಪ್ಯಾರಡೈಸ್ ಕಾಣುತ್ತದೆ.ಅಲ್ಲಿ ಮಸಾಲೆ ದೋಸೆ ಕಾಣುತ್ತದೆ.ಕಾಫಿ ಕಾಣುತ್ತದೆ.ಬಿಲ್ಲು (ಪ್ಯಾರಡೈಸಿನಲ್ಲಿ ಪುಕ್ಕಟೆ ಅನ್ನಿ) ಕಾಣುತ್ತದೆ.ಆಮೇಲೆ ಎಂದಿನಂತೆ ಕೋರ್ಟು, ಕಕ್ಷಿದಾರರು, ಕಟಕಟೆ, ವಕೀಲರು, ನ್ಯಾಯಾಶರು, ಹೆಸರು ಕೂಗಿ ಕರೆಯುವವರು…ಎಲ್ಲರೂ ಕಾಣತೊಡಗುತ್ತಾರೆ.
ಆ ಕೋರ್ಟೇನು ಸಿನಿಮಾಗಳಲ್ಲಿ ತೋರಿಸುವ ಸೆಟ್‌ಗಳಂತೆ ಭವ್ಯವಾಗೇನೂ ಇರಲಿಲ್ಲ.ಅಲ್ಲಿ ಕೆಂಪು ಹಾಸುಗಂಬಳಿಯನ್ನು ಹಾಸಿರಲಿಲ್ಲ.ಕಡಪ ಕಲ್ಲನ್ನು ಜೋಡಿಸಲಾಗಿತ್ತು.ಅಲ್ಲಿ ನ್ಯಾಯಾಂಗಣವು ಬೆಳಕಿನಿಂದ ಕೋರೈಸುವುದಿರಲಿ, ಇದ್ದ ಒಂದು ಟ್ಯೂಬ್‌ಲೈಟು ಎಲ್ಲರಿಗೂ ಬೆಳಕು ಕೊಡಲು ಯಾತನೆ ಪಡುತ್ತಿತ್ತು.ಅಲ್ಲಿನ ಗೋಡೆ, ಕಂಬಗಳು ಹೊಚ್ಚ ಹೊಸ ಬಣ್ಣಗಳಿಂದ ಬೀಗುತ್ತಿರಲಿಲ್ಲ.ಹೆಂಚುಗಳು ಕೆಂಪಗೆ ಮಿರುಗುತ್ತಿರಲಿಲ್ಲ. ಆದರೂ ಅಲ್ಲಿ ನ್ಯಾಯ ವಿಚಾರಣೆ ನಡೆಯುವುದಕ್ಕೆ ಏನೂ ತೊಂದರೆ ಇರಲಿಲ್ಲ.ವಕೀಲರು ವಾದ, ಪ್ರತಿವಾದ ನಡೆಸಲಾಗಲೀ, ‘ಡೇಟ್’ ತೆಗೆದುಕೊಳ್ಳಲಾಗಲೀ, ನೂರಾರು ಪ್ರಕರಣಗಳು ದಿನವಹಿ ಜೀವ ತಳೆದು ಮತ್ತೆ ಕಡತಕ್ಕೆ ಸೇರಲಾಗಲೀ ಯಾವ ಅಡಚಣೆಯೂ ಇರಲಿಲ್ಲ.ಅಲ್ಲಿ ಕೋರ್ಟು ಎಂದರೆ ಸಂತೆಗಿಂತ ಹೆಚ್ಚು ಜನಪ್ರಿಯವಾಗಿತ್ತು.ನಾನು ನನ್ನ ಮೇಲಿನ ಮಾನನಷ್ಟ ಮೊಕದ್ದಮೆಗಾಗಿ ಅಲ್ಲಿಗೆ ಹೋಗುತ್ತಿದ್ದ ನಾಲ್ಕೂವರೆ ವರ್ಷಗಳ ಕಾಲ ನನಗೆ ಮುಳಬಾಗಿಲಿನಲ್ಲಿ ಸಂತೆ ಯಾವತ್ತು ಎಂದು ಗೊತ್ತಾಗದಿರುವುದಕ್ಕೆ ಇದೇ ಕಾರಣ ! ಜನ, ಜನ, ಜನ. ಬೆಳಿಗ್ಗೆ ೧೧ ಗಂಟೆ ಆಗುವುದೇ ತಡ, ಕೋರ್ಟಿನ ಮುಂದೆ, ಅಕ್ಕ, ಪಕ್ಕ ಜನ ಜಮಾಯಿಸಿಬಿಡುತ್ತಾರೆ.ನಾನೂ ಬೆಳಿಗ್ಗೆ ಬೆಂಗಳೂರಿಂದ ಬಸ್ಸು ಹಿಡಿದು ಹೋಟೆಲಿನಲ್ಲಿ ದೋಸೆ ಕತ್ತರಿಸಿ ನೀಟಾಗಿ ಬಂದು ನಿಂತಿರುತ್ತೇನೆ.ಎಲ್ಲರಿಗೂ ನನ್ನ ಮೇಲೆ ಕನಿಕರ.ನನ್ನ ಮೇಲೆ ದಾವೆ ಹೂಡಿದ, ಹೂಡಿಸಿದ ಮಹಾಮಹಿಮರಿಗೂ!
“ನೋಡಿ, ನಮಗೆ ನಿಮ್ಮ ಮೇಲೆ ಯಾವ ಕೋಪಾನೂ ಇಲ್ಲ. ಆದರೆ, ಆ ಯಮ್ಮ ನೋಡಿ, ಸುಮ್ನೆ ರಾಜಿ ಆಗಾಣ ಅಂದ್ರೆ ಬಿಡದಿಲ್ಲ…ನೀವು ಈಗ ಬೆಂಗಳೂರಿಂದ ಬರಬೇಕಾಗಿದೆ..ಛೆಛೆ..” ಎಂದು ತೆಲುಗು ಮಿಶ್ರಿತ ಕನ್ನಡದಲ್ಲಿ ಲೊಚಗುಟ್ಟಿದಾಗ ನನಗೆ ಅವರ ಮೇಲೆ ಪ್ರೀತಿ ಹುಟ್ಟುವುದೇ ಇಲ್ಲ. ಯಾಕೆಂದರೆ ನನಗೆ ಮುಂದಿನ ಡೇಟ್‌ನಲ್ಲಾದರೂ ಈ ಪ್ರಕರಣ ಮುಂದೆ ಸಾಗುವುದೇ ಎಂಬ ಚಿಂತೆ.ನನ್ನ ವಕೀಲರು ಬರುತ್ತಾರೆ. ಅವರನ್ನು ನೋಡಿದ ಕೂಡಲೇ ಇವತ್ತು ಏನಾದರೂ ನಡೆದೇ ಬಿಡಲಿದೆ ಎಂಬ ಭರವಸೆ ತನ್ನಿಂತಾನೇ ಮೂಡುತ್ತದೆ ! ಅಷ್ಟು ನಾನು ಆಶಾವಾದಿಯಾಗುತ್ತೇನೆ.
೧೧ ದಾಟುತ್ತಲೇ ನ್ಯಾಯಾಶರ ಕೊಟಡಿಯ ಬಾಗಿಲು ‘ಲಟಕ್ ಲಟಕ್’ ಎಂದು ಮುಚ್ಚಿಕೊಳ್ಳುತ್ತದೆ.೧೫ ಸೆಕೆಂಡುಗಳ ನಂತರ ‘ಕಡಕ್ ಕಡಕ್’ ಎಂದು ನ್ಯಾಯಾಶರು ನ್ಯಾಯಾಂಗಣ ಪ್ರವೇಶಿಸುವ ಒಳಬಾಗಿಲು ತೆರೆದುಕೊಳ್ಳುತ್ತದೆ.ನಮಸ್ಕಾರಗಳ, ಗೌರವದ ವಿನಿಮಯವಾಗುತ್ತದೆ.ಎಲ್ಲರೂ ಕುಳಿತುಕೊಂಡ ಮೇಲೆ ಶುರುವಾಗೇ ಬಿಡುತ್ತದೆ…
‘ನಂಗಲಿ ಪೊಲೀಸ್…ಮುನಿರಾಮಪ್ಪ…ಮುನಿವೆಂಕಟಯ್ಯ, ಮುನಿಯಮ್ಮ, ಕೆನರಾಬ್ಯಾಂಕ್…. ಮುನಿಸ್ವಾಮಿ, ವೆಂಕಟಪ್ಪ, ಶಬೀರ್, ಗೌಸ್, ನಾರಾಯಣಪ್ಪ…. ನಂಗಲಿ ಪೊಲೀಸ್….’
ನಿಜ. ಮುಳಬಾಗಿಲಿನಲ್ಲಿ ‘ಮುನಿ’ ಎಂಬ ಪೂರ್ವಪದ ಇಲ್ಲದ ಹೆಸರುಗಳು ತುಂಬಾ ಕಡಿಮೆ.ಎಲ್ಲರೂ ‘ಮುನಿ’ದುಕೊಂಡವರೇ ! ಬಹುತೇಕ ದಾವೆ ಹೂಡುವವರು, ಆರೋಪಕ್ಕೆ ಗುರಿಯಾದವರು, ಈ ‘ಮುನಿ’ ವರ್ಗಕ್ಕೆ ಸೇರುತ್ತಾರೆ.ನನಗೆ ಮೊದಲು ಎಲ್ಲವೂ ಒಂದೇ ಪ್ರಕರಣವೋ ಎಂದು ಭಾಸವಾಗಿಬಿಟ್ಟಿತ್ತು.ಆಮೇಲೆ ಗಿನ್ನೆಸ್ ದಾಖಲೆಯಷ್ಟೇ ಸಮಪ್ರಮಾಣದಲ್ಲಿ ಮುಳಬಾಗಿಲಿಗೆ ಹೋಗಿಬಂದ ಮೇಲೆ ಈ ‘ಮುನಿ’ದವರ ಪ್ರಕರಣಗಳು ಬೇರೆ ಬೇರೆ ಎಂದು ಅರಿವಾಯಿತು. ಕೊನೆಗೆ ನಾನು ಎಷ್ಟು ಪರಿಣತಿ ಸಾಸಿದ್ದೆ ಎಂದರೆ, ಯಾವ ಪ್ರಕರಣ ಎಂದು ಗೊತ್ತಾಗುತ್ತಲೇ ಇದರಲ್ಲಿ ಯಾರ್‍ಯಾರು ‘ಮುನಿ’ ಪೂರ್ವಪದ ಹೊಂದಿದವರು ಎಂದು ಊಹಿಸಿಬಿಡುತ್ತಿದ್ದೆ. ಆದರೇನು ಮಾಡಲಿ, ನನ್ನ ಮೇಲೆ ದಾವೆ ಹೂಡಿದವರೂ ಮುನಿದವರೇ ! ಅವರ ಮುನಿಸಿಗೂ ಕಾರಣವಿತ್ತು ಅನ್ನಿ.
ಅವರು ಒಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದವರು.ಅವರು ಊರಿನ ಒಂದು ಬೆಲೆಬಾಳುವ ಬೇವಿನ ಮರವನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಿಸಿದ್ದಾರೆ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷೆಯೊಬ್ಬರು ಆರೋಪ ಮಾಡಿದ್ದರು.ಅದನ್ನು ಒಂದೆರಡು ಪತ್ರಿಕೆಗಳು ಪ್ರಕಟಿಸಿದವು .ಹರ್ಷದ್ ಮೆಹ್ತಾನೇ ಪ್ರಧಾನಮಂತ್ರಿ ಮೇಲೆ ಕೋಟಿ ರೂಪಾಯಿ ಲಂಚದ ಆರೋಪ ಹೊರಿಸಿದ್ದನ್ನು ಪ್ರಕಟಿಸಿದ ಮೇಲೆ ಪತ್ರಿಕೆಗಳು ಈ ಜುಜುಬಿ ಮರ ಕಡಿದ ಆರೋಪವನ್ನು ಪ್ರಕಟಿಸಲು ಹಿಂಜರಿಯುತ್ತವೆಯೆ ?! ಆದರೆ ಆ ಮಾನ್ಯರಿಗೆ ಅದು ಪ್ರಿಯವಾಗಲಿಲ್ಲ. ತಡವಾಗಿಯಾದರೂ ನಿರಾಕರಣೆ ಹೇಳಿಕೆಯನ್ನು ನೀಡಿ ಸುಮ್ಮನಾಗುವಷ್ಟು ವಿಶಾಲವಾದ ಮನೋಭಾವವನ್ನು ತೋರಿಸಲು ಅವರೇನು ನರಸಿಂಹರಾಯರೆ ? ಅಲ್ಲದೆ ಆರೋಪ ಮಾಡಿದವರು, ಆರೋಪಕ್ಕೆ ಒಳಗಾದವರು ರಾಜ್ಯದ ಪ್ರಮುಖ ವಿರೋ ರಾಜಕೀಯ ಪಕ್ಷಗಳಿಗೆ ಸೇರಿದವರು. ಸೀದಾ ಲಾಯರನ್ನು ಹಿಡಿದು ನೋಟೀಸು ಕಳಿಸಿದರು. ತಮಗೆ ಮಾನ ನಷ್ಟವಾಗಿದೆ ಎಂದೂ, ಅದಕ್ಕೆ ಇಂತಿಷ್ಟು ಪರಿಹಾರ ಕೊಡಬೇಕೆಂದೂ ಕೇಳಿಯೇ ಬಿಟ್ಟರು.ಪ್ರಕರಣ ನ್ಯಾಯಾಲಯಕ್ಕೆ ಹೋಯಿತು.ನನಗೆ ವಾರಂಟು ಬಂದಾಗಲೇ ಗೊತ್ತಾಗಿದ್ದು, ಇದು ಒಂದು ರಾಷ್ಟ್ರೀಯ ವಿಷಯವಾಗಿದೆ ಎಂದು.
ಏನು ಮಾಡುವುದು ? ಜಾಮೀನು ಪಡೆಯುವುದು ಸಾಮಾನ್ಯವೆ ? ಬೆಂಗಳೂರಿನ ನಮ್ಮ ವಕೀಲರಿಂದ ಮುಳಬಾಗಿಲಿನ ಒಬ್ಬ ಪರಿಚಿತರ ವಿಳಾಸ ಪಡೆದು ಧಾವಿಸಿದೆ.ಅವರು ಸಿಕ್ಕದ್ದೇ ತುಂಬಾ ಉತ್ಸಾಹ ತುಂಬಿದರು. ಏನೂ ಭಯ ಪಡಬೇಡಿ ಎಂದರು. ನನ್ನ ಮೇಲೇ ಇಂತಿಷ್ಟು ಕೇಸುಗಳಿವೆ ಎಂದು ನನ್ನನ್ನು ಸಮಾಧಾನಪಡಿಸಿದಾಗ ನನಗೆ ಮುಳಬಾಗಿಲಿನ ಜನತೆಯ ಕಾನೂನು ಪ್ರeಯ ಬಗ್ಗೆ ಅಷ್ಟಾಗಿ eನೋದಯವಾಗಲಿಲ್ಲ.ವಕೀಲರು ದೊರೆತರು.ಜಾಮೀನು ಸಿಕ್ಕಿತು.ಆಮೇಲೆ ಕೇಳಬೇಕೆ ? ನಾನು ಮುಳಬಾಗಿಲಿಗೆ ಹೋಗತೊಡಗಿದೆ.
ಈ ಅವಕಾಶವನ್ನು ನಾನು ಬಿಡಲಿಲ್ಲ.ನಿಯಮಿತವಾಗಿ ಬೆಳಿಗ್ಗೆ ೬ ಕ್ಕೆ ಏಳತೊಡಗಿದೆ.ಭಾಷ್ಯಂ ಸರ್ಕಲ್ಲಿನ ಕಾಫಿ ಸೆಂಟರಿನಲ್ಲಿ ಎರಡು ವಡೆ ತಿನ್ನುವುದು, ಒಂದು ಕಾಫಿ ಹೀರುವುದು, ಸ್ಕೂಟರನ್ನು ಬಸ್ ನಿಲ್ದಾಣದ ಉಸ್ತುವಾರಿಯಲ್ಲಿ ಬಿಡುವುದು, ತಿರುಪತಿಗೆ ಹೋಗುವ ಬಸ್ಸನ್ನು ಭಕ್ತಿಯಿಂದ ಹತ್ತುವುದು,ವಾಕ್‌ಮನ್ ತಗಲಿಸಿಕೊಂಡು ಅಡ್ಡಾಗುವುದು, ಮುಳಬಾಗಿಲು ತಲುಪಿದ ಕೂಡಲೇ ಹೋಟೆಲು ತಲುಪಿ ಮೂತ್ರಖಾನೆಯನ್ನು ಪರಿಶೀಲಿಸುವುದು, ಮುಖ ತೊಳೆದುಕೊಂಡು ಬಂದು ಮಸಾಲೆ ದೋಸೆ ತಿನ್ನುವುದು, ಕೋರ್ಟಿಗೆ ಬಂದು ನಿಲ್ಲುವುದು, ಕೈಗೆ ಸಿಕ್ಕಿದ ಮ್ಯಾಗಜೀನ್ ಹಿಡಿದು ಬಿಸಿಲಿನಲ್ಲಿ ಕೂತು ಉಳಿದವರಿಗೆ ನಾನು ಒಬ್ಬ ನಗರಜೀವಿ ಎಂಬ ಪೋಸು ಕೊಡುವುದು,ಕರೆದ ಕೂಡಲೇ ಒಳಗೆ ಹೋಗಿ ಕೈ ಮುಗಿಯುವುದು, ವಿಚಾರಣೆ ನಡೆದರೆ ವಕೀಲರು ಹೇಳಿದಂತೆ ನಡೆದುಕೊಳ್ಳುವುದು, ಇಲ್ಲವಾದರೆ ಮುಂದಿನ ಡೇಟ್ ಯಾವುದೆಂದು ತಿಳಿದುಕೊಳ್ಳುವುದು, ಹೊರಗೆ ಬಂದು ಬ್ಯಾಗಿನಲ್ಲಿ ಶೇಂಗಾಬೀಜವನ್ನು ತುಂಬಿಸಿಕೊಳ್ಳುವುದು, ಬಸ್ಸು ಹತ್ತುವುದು….ಮತ್ತೆ ಮನೆ ಸೇರಿ ಒಂದು ಒಳ್ಳೆಯ ಸ್ನಾನ ಮಾಡುವುದು…ಎಲ್ಲವೂ ವಿಲಿಖಿತ ಎಂದುಕೊಂಡು ಇರುವುದು….ನಾಲ್ಕೂವರೆ ವರ್ಷ ಈ ಕಾಯಕವನ್ನು ನಡೆಸಿಕೊಂಡು ಬಂದ ಹೆಮ್ಮೆ ಅಥವಾ ಕರ್ಮ ನನ್ನದು !
ಈ ಪ್ರಕರಣಕ್ಕೆ ಕಾರಣವಾದ ಹೇಳಿಕೆಯನ್ನು ನಮ್ಮ ಪತ್ರಿಕೆಗೆ ಕಳಿಸಿದ ವರದಿಗಾರ ಮಹಾಶಯ ಪಕ್ಕದ ಹಳ್ಳಿಯವನು.ಮೊದಮೊದಲು ಬಸ್ ನಿಲ್ದಾಣದಲ್ಲೇ ನಿಂತು ನನ್ನನ್ನು ಸ್ವಾಗತಿಸುತ್ತಿದ್ದ.ದಾವೇ ಹೂಡಿದಾತ ಕರುಬುವಂತೆ ಅವನ ಎದುರಿಗೇ ನನಗೆ ಪೆಪ್ಸಿ ಕುಡಿಸುತ್ತಿದ್ದ. ಮ್ಯಾಗಜೀನ್ ತಂಡುಕೊಡುತ್ತಿದ್ದ.ಒಂದು ಸಲವಂತೂ ನನ್ನನ್ನು ಮನೆಗೆ ಒಯ್ದು ಅರ್ಧತಾಸು ಮಲಗಲೂ ಅವಕಾಶ ಮಾಡಿಕೊಟ್ಟಿದ್ದ. ಆದರೆ ದಿನ ಕಳೆಯುತ್ತಲೇ ಅವನ ಆಸಕ್ತಿಯೂ ಕಡಿಮೆ ಆಗುತ್ತಾ ಬಂತು.ಎಷ್ಟೆಂದರೂ ಕಟಕಟೆಯಲ್ಲಿ ನಿಲ್ಲಬೇಕಾಗಿರು ವವನು ಸಂಪಾದಕನೇ ಹೊರತು ವರದಿಗಾರನಲ್ಲವಲ್ಲ ! ಆತ ಬರುವುದೇ ಕಡಿಮೆ ಮಾಡಿದ. ಪ್ರಕರಣ ಶುರುವಾದಾಗ ವರದಿ ಮಾಡುವುದರ ಜೊತೆಗೆ ಟೊಮಾಟೋ ವರ್ತಕನೂ ಆಗಿದ್ದ ಆತ ನನಗೆ ಕೆಲವೊಮ್ಮೆ ತರಕಾರಿಯನ್ನು ಚೀಲದಲ್ಲಿ ತುಂಬಿ ಕಳಿಸಿದ್ದೂ ಇದೆ. ಪ್ರಕರಣ ಮುಗಿವ ಹೊತ್ತಿಗೆ ಆತ ಟ್ರಾಕ್ಟರುಗಳ ಕಂಟ್ರಾಕ್ಟುದಾರನಾಗಿ ರೂಪಾಂತರ ಗೊಂಡಿದ್ದ.ಇಷ್ಟಾಗಿಯೂ ಆತ ‘ನನಗೆ ಹಾಯ್ ಬೆಂಗಳೂರ್‌ಗೆ ವರದಿ ಮಾಡಲು ಅವಕಾಶ ಮಾಡಿಕೊಡಿ, ಆ ದೈನಿಕಕ್ಕೆ ವರದಿ ಮಾಡುತ್ತೇನೆ’ ಎಂದು ಹೇಳುವುದನ್ನು ಬಿಟ್ಟಿರಲಿಲ್ಲ. ಮುಳಬಾಗಿಲಿನ ಬಗ್ಗೆ ಆತ ಹೇಳುತ್ತಿದ್ದ ಮಾತುಗಳು ತತ್ವeನಿಯ ಮಾತುಗಳಂತಿದ್ದವು.ತನ್ನ ವರದಿಯು ಹುಟ್ಟಿಸಿದ ಈ ಕೋಲಾಹಲದ ಬಗ್ಗೆ ಮಾತ್ರ ಅವನ ನಿಲುವು ಅಚಲವಾಗಿತ್ತು. ದಾವೆದಾರನ ಜೊತೆ ಹಲವಾರು ಸಲ ಆತ ವಾಗ್ವಾದಕ್ಕೆ ಇಳಿದದ್ದೂ ಇದೆ.ನಾನು ಒಮ್ಮೆ ನ್ಯಾಯಾಲಯದ ಹೊರಗೆ ರಾಜಿ ಆಗಿಬಿಡೋಣ, ನಿಮ್ಮ ಊರಿನ ರಾಜಕೀಯಕ್ಕೆ ನಾನು ಯಾಕೆ ಅಲೆದಾಡಬೇಕು ಎಂದು ಹೇಳಿದ್ದೂ ಇದೆ. ಆದರೆ ದೇಶದ ರಾಜಕೀಯದ ಸ್ಥಿತಿಯನ್ನು ಮುಳಬಾಗಿಲಿನಲ್ಲಿ ಬಿಂಬಿಸಬೇಕಾದ ಕರ್ತವ್ಯಪ್ರeಯಿಂದ ಜಾಗ್ರತರಾಗಿದ್ದ ಅವರು ನನ್ನ ಮನವಿಗೆ ಓಗೊಡಲಿಲ್ಲ. ನಾನು ಮತ್ತೆ ಮ್ಯಾಗಜೀನಿನತ್ತ ಮುಖ ತಿರುಗಿಸಬೇಕಾಯಿತು.ಹೀಗೆ ನಾನು ಮುಳಬಾಗಿಲಿನ ಜನತೆಗೆ ಗೊತ್ತಿಲ್ಲದಂತೆಯೇ ಅವರ ನಿತ್ಯ ಜೀವನದ ಒಂದು ಭಾಗವಾದೆ.ಕೋರ್ಟಿನಲ್ಲಿ ಹೆಸರು ಕೂಗುವವನಿಂದ ಹಿಡಿದು ಮುಖ್ಯರಸ್ತೆಯಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವವರನ್ನು ಹುಡುಕುವ ಏಜೆಂಟನವರೆಗೆ ಎಲ್ಲರೂ ನನ್ನನ್ನು ಒಬ್ಬ ಅಪರಿಚಿತನಂತೆ ಕಾಣುವುದನ್ನು ನಿಲ್ಲಿಸಿದರು. ಇತರೆ ವಕೀಲರೂ ನನ್ನನ್ನು ಕಂಡು ನಸುನಗೆ ಬೀರಿ ತಮ್ಮ ಕನಿಕರವನ್ನು ಪ್ರಕಟಿಸುತ್ತಿದ್ದರು.
ನಾಲ್ಕೂವರೆ ವರ್ಷಗಳ ಅವ ಎಂದರೆ ಏನು ಮಹಾ ಎಂದು ನೀವು ಮೂಗೆಳೆದರೆ ತಪ್ಪು. ಈ ಅವಯಲ್ಲಿ ಮುಳಬಾಗಿಲಿನ ಚಹರೆಯೇ ಬದಲಾಯಿತು.ಕೋರ್ಟಿನ ಆವರಣದಲ್ಲಿದ್ದ ಮರಗಳನ್ನು ಕಡಿದು ಮೂರೂ ಬದಿಗೆ ಸಂಕೀರ್ಣಗಳನ್ನು ಕಟ್ಟಲಾಯಿತು.ಒಂದು ನ್ಯಾಯಾಲಯಕ್ಕೆ.ಇನ್ನೆರಡು ವರ್ತಕರಿಗೆ, ಬಾಡಿಗೆಗೆ.ಅವುಗಳಲ್ಲಿ ಹತ್ತಾರು ಅಂಗಡಿಗಳು ತಮ್ಮ ವ್ಯವಹಾರವನ್ನು ಶುರು ಮಾಡಿಯೂ ಆಯಿತು.ಒಂದು ಗೋಲಿಬಾರ್ ಪ್ರಕರಣ ನಡೆದು ಮೂವರು ಸತ್ತರು.ಮುಳಬಾಗಿಲಿಗೆ ಹೆಚ್ಚುವರಿ ನ್ಯಾಯಾಶರು ಬಂದರು.ಕೆ.ಆರ್. ಪುರಂ ನ ಸೇತುವೆಯನ್ನು ಕೆಡವಿ ಹೊಸ ಸೇತುವೆಯ ಕೆಲಸ ನಡೆಯಲಾರಂಭಿಸಿತು. ಮೂರು ಲೋಕಸಭಾ ಚುನಾವಣೆಗಳು, ಒಂದು ವಿಧಾನಸಭಾ ಚುನಾವಣೆ ನಡೆದವು.ನಾನು ಸದರಿ ಹೇಳಿಕೆ ಪ್ರಕಟಿಸಿದ ಪತ್ರಿಕೆಯಿರಲಿ, ಇನ್ನೊಂದು ಪತ್ರಿಕೆಯನ್ನು ಸೇರಿ ಬಿಟ್ಟು ಎರಡು ವರ್ಷಗಳಾದವು ! ಒಂದು ಸಹಸ್ರಮಾನವೇ ಕಳಚಿಕೊಳ್ಳುವ ಕೊನೆಯ ವರ್ಷವೂ ಬಂತು !! ನ್ಯಾಯಾಶರು ಬದಲಾದರು.ನನ್ನ ಕೇಸು ಮಾತ್ರ ಮುಗಿಯುವ ಲಕ್ಷಣ ಕಾಣಲಿಲ್ಲ.ಅದಿರಲಿ, ವಾದಿಯೂ, ಸಹಪ್ರತಿವಾದಿಯೂ ಯಾವಾಗಲೂ ಏನಾದರೂ ಹರಟುತ್ತಾ ಕಾಲ ಕಳೆಯತೊಡಗಿದರು. ನಾನು ಅವಡುಗಚ್ಚಿ ನಿಂತುಕೊಳ್ಳುತ್ತಿದ್ದೆ.
ಇಲ್ಲಿ ಬೆಂಗಳೂರಿನಲ್ಲಿ ನನ್ನ ಗೆಳೆಯರೂ ಮುಳಬಾಗಿಲಿನ ಬಗ್ಗೆ ತಮ್ಮ ಅಲಕ್ಷ್ಯವನ್ನು ಕಡಿಮೆ ಮಾಡತೊಡಗಿದರು.ಬೆಂಗಳೂರಿನಲ್ಲಿ ಯಾವುದೇ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮ ಇರಲಿ,ಅಂದೇ ಮುಳಬಾಗಿಲು ನನ್ನನ್ನು ಕರೆಯುತ್ತಿತ್ತು. ಇಂಥ ಕಾರ್ಯಕ್ರಮಗಳಿಂದ ತಪ್ಪಿಸಿಕೊಳ್ಳಲು ನನಗೆ ಇದು ಒಂದು ಕಾರಣವೂ ಆಗಿ ಸಹಕಾರಿ ಯಾಯಿತು.ಭಾಷಣಗಳಿಂದ ಕೊರೆಸಿಕೊಳ್ಳುವುದಕ್ಕಿಂತ ಮುಳಬಾಗಿಲಿಗೆ ಹೋಗಿ ಒಳ್ಳೆಯ ಪುಸ್ತಕ ಓದುವುದೇ ಯೋಗ್ಯವಾದ ಕೆಲಸ ಎಂದು ನನಗೆ ಅನ್ನಿಸಿತ್ತು. ಡಜನ್ನುಗಟ್ಟಲೆ ಪುಸ್ತಕಗಳನ್ನು ಓದಿದೆ.ನೂರಾರು ಹಾಡುಗಳನ್ನು ಕೇಳಿದೆ.
ಒಮ್ಮೆ ಡೇಟು.ಇನ್ನೊಮ್ಮೆ ಅಲ್ಪ ವಿಚಾರಣೆ.ಒಮ್ಮೆ ಕೋಲಾರ ಜಿಲ್ಲೆಯೊಳಗಿನ ನ್ಯಾಯಾಲಯದ ಕಟಕಟೆಯಲ್ಲೇ ಒಬ್ಬ ವಿಷ ಕುಡಿದು ಸತ್ತ (ನಾನಲ್ಲ) ಕಾರಣದಿಂದಾಗಿ ಕಲಾಪ ರದ್ದು.ಇನ್ನೊಮ್ಮೆ ವಕೀಲರ ಮುಷ್ಕರ. ಕಾರಣ ? ಕೋಲಾರ ಜಿಲ್ಲೆಯ ನ್ಯಾಯಾಲಯಗಳಿಗೆ ವರ್ಷಕ್ಕೆ ಕನಿಷ್ಠ ೨೪ ಪ್ರಕರಣಗಳನ್ನು ಇತ್ಯರ್ಥಗೊಳಿಸಲೇಬೇಕು ಎಂಬ ಪಾಳಿಯನ್ನು ಮತ್ತೊಂದು ವರ್ಷ ಮುಂದುವರೆಸಿದ್ದನ್ನು ವಿರೋಸಿ ! ಒಮ್ಮೆ ನ್ಯಾಯಾಶರಿಗೆ ರಜೆ.ಇನ್ನೊಮ್ಮೆ ವಕೀಲರಿಗೆ.ಒಮ್ಮೆ ವಾದಿಯ ಸಂಬಂಕರ ಮದುವೆ.ಇನ್ನೊಮ್ಮೆ ನನ್ನ ಸಹ ಪ್ರತಿವಾದಿಯ ಸಂಬಂಕರ ಗೃಹಪ್ರವೇಶ.ನಾನೂ ನನ್ನದೇ ಕಾರಣಗಳಿಗಾಗಿ ಗೈರು ಹಾಜರಾಗಿದ್ದೂ ಇದೆ ಎನ್ನಿ.ಇನ್ನು ನನ್ನ ಕೇಸು ಮುಗಿಯುವುದಾದರೂ ಹೇಗೆ ?
ಈ ದಿನಗಳಲ್ಲಿ ನಾನು ಮುಳಬಾಗಿಲಿನ ಜನತೆಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದೆ.ಬೆಂಗಳೂರಿಂದ ತಿರುಪತಿಗೆ ಹೋಗುವಾಗ ಮೊದಲು ನಿಮಗೆ ಲಾರಿ, ಕಾರು ಜೀಪು, ಮೆಟಾಡರುಗಳು, ಶವಾಗಾರದಲ್ಲಿ ಅಸ್ತವ್ಯಸ್ತವಾಗಿ ಬಿದ್ದುಕೊಂಡ ಹಾಗೆ ಕಾಣಿಸಿದ ಊರು ಕಂಡರೆ ಅನುಮಾನ ಬೇಡ, ಅದೇ ಹೊಸಕೋಟೆ, ಅಫಘಾತಗಳ ಸ್ವರ್ಗ! ನಿಮಗೆ ಒಂದು ಮಿನಿ ಜಾತ್ರೆಯೇ ಇರಬಹುದು ಎಂದು ಭಾಸವಾಗುವ ಸ್ಥಳ ಕಂಡರೆ, ಬಿಳಿ ಕುರುಚಲು ಗಡ್ಡ, ಹೆಗಲ ಮೇಲೆ ಒಂದು ಛೋಟಾ ಟರ್ಕಿ ಟವೆಲು, ಮುಡುಗು ಮುಡುಗಾದ ಬಿಳಿ ಪಂಚೆ, ಬಿಳಿ ಪೂರ್ಣತೋಳಿನ ಅಂಗಿ, ಕೈಯಲ್ಲಿ ಬೀಡಿ ಅಥವಾ ಸಿಗರೇಟು ಹಿಡಿದು ನಾಲ್ಕು ಜನ ಒಟ್ಟಾಗಿ ಸುಮ್ಮನೆ ನಿಂತಿರುತ್ತಾರೆ, ಯಾರೂ ಪರಸ್ಪರ ಮಾತಾಡುವುದಿಲ್ಲ ಎಂದು ನಿಮಗೆ ಎಲ್ಲಾದರೂ ಕಾಣಿಸಿದರೆ ಅನುಮಾನ ಬೇಡ, ಅದೇ ಮುಳಬಾಗಿಲು !
ಹೀಗೆ ನಾನು ಹೇಳುವಾಗ ಮುಳಬಾಗಿಲಿನ ಜನತೆಯನ್ನು ಸುಮ್ಮನೇ ಅಲ್ಲಗಳೆಯುತ್ತಿಲ್ಲ. ನಮ್ಮ ಊರುಗಳು ಹೇಗೆ ಈ ನಗರೀಕರಣದಿಂದ ಬದಲಾಗಿವೆ ಎಂಬ ಚಿಕ್ಕ ನಿದರ್ಶನ ಕೊಡುತ್ತಿದ್ದೇನೆ ಅಷ್ಟೆ.ಊರು ಚಿಕ್ಕದಾದರೂ ಅದು ನಗರದ ಪ್ರಭಾವಗಳಿಂದ ಬಿಡಿಸಿಕೊಳ್ಳುವುದು ಕಷ್ಟ.ಹೆದ್ದಾರಿಯ ಸಂಕಟಗಳಿಂದ ಹೊಸಕೋಟೆಯು ಹೇಗೆ ಮುಕ್ತ ವಾಗಿರಲಿಲ್ಲವೋ ಹಾಗೆಯೇ ಆಧುನಿಕತೆಯ ಸೆಳವುಗಳಿಂದ, ನಗರೀಕರಣದ ತರಲೆಗಳಿಂದ ಮುಳಬಾಗಿಲು ಹೊರತಾಗಿರಲಿಲ್ಲ.
ಹೀಗೆ ಮುಳಬಾಗಿಲಿನ ಜೊತೆ ನನ್ನ ಜೀವನವು ಬೆಸೆದುಕೊಂಡಿತು ಎನ್ನುವಾಗಲೇ ಒಂದು ದುರಂತ ಘಟಿಸಿತು.ಆ ಹೊತ್ತಿಗೆ ನನ್ನ ಕೇಸಿನ ವಿಚಾರಣೆ ಮುಗಿದು ಇನ್ನೇನು ತೀರ್ಪು ಹೊರಗೆ ಬರುವುದರಲ್ಲಿತ್ತು.ಮತ್ತೆ ವಕೀಲರು ಅದೇ ಹಳೆಯ ರೋಸ್ಟರ್ ಕಾರಣಕ್ಕಾಗಿ ಅನಿರ್ದಿಷ್ಟ ಮುಷ್ಕರ ಆರಂಭಿಸಿದರು.ನಾನು ಗಾಬರಿ ಬೀಳಲಿಲ್ಲ. ಈ ಮುಷ್ಕರ ಯಾವಾಗ ಮುಗಿಯುತ್ತದೆ ಎಂದು ತಣ್ಣಗೆ ನನ್ನ ವಕೀಲರನ್ನು ಕೇಳಿದೆ. ಗೊತ್ತಿಲ್ಲ ಎಂಬ ಉತ್ತರ ಬಂತು.
ಇವಾವುದೂ ದುರಂತ ಅಲ್ಲ. ಈ ಮುಷ್ಕರ ನಡೆಯುತ್ತಿರುವಾಗಲೂ ನನ್ನ ಪ್ರಕರಣ ವಿಚಾರಣೆಗೆ ಬಂತು.ಅವತ್ತು ನ್ಯಾಯಾಂಗಣದಲ್ಲಿ ನ್ಯಾಯಾಶರು, ಅವರ ಕೆಳಗಿನ ಸಿಬ್ಬಂದಿಗಳು ಬಿಟ್ಟರೆ ಯಾರೂ ಇರಲಿಲ್ಲ.ಹೊರಗೆ ಯಾವ ಕಕ್ಷಿದಾರರೂ ಇರಲಿಲ್ಲ.ನಂಗಲಿಯಿಂದ ಬಂದ ಕೋಳ ತೊಟ್ಟ ಕಳ್ಳತನದ ಆರೋಪ ಹೊತ್ತವರು ಇರಲಿಲ್ಲ. ಪೇದೆಗಳು ಅಲ್ಲಿ ತೂಕಡಿಸುತ್ತ ಕುಳಿತಿರಲಿಲ್ಲ.ವಕೀಲರು ಕಪ್ಪು ಕೋಟು ತೊಟ್ಟಿರಲಿಲ್ಲ.ಎಲ್ಲರೂ ಹೊರಗೆ ವಾರ್ತಾಲಾಪ ನಡೆಸುತ್ತಿದ್ದರು.
ನನಗೆ ಕರೆ ಬಂತು ! ಒಳಗೆ ಹೋದ ಕೂಡಲೇ ನ್ಯಾಯಾಶರು ತೀರ್ಪು ಓದಿದರು. ನನ್ನತ್ತ ತಿರುಗಿ ‘ ನಿಮ್ಮನ್ನ ಬಿಟ್ಟಿದೀವಿ, ಹೋಗಿ’ ಎಂದರು !
ಎಂಥ ದುರಂತ ! ಮುಳಬಾಗಿಲಿಗೂ ನನಗೂ ನಡುವೆ ಬೆಳೆದಿದ್ದ ಸಂಬಂಧಕ್ಕೆ ಕೊನೆ.ಇದು ಬಿಡುಗಡೆಯೋ ಗಡೀಪಾರೋ ತಿಳಿಯಲಿಲ್ಲ. ವಿಚಾರಣೆ ಇಲ್ಲದೆ ನಾನು ಮುಳಬಾಗಿಲಿಗೆ ಬರುವುದಾದರೂ ಹೇಗೆ ?
ನಾನು ಏನೂ ಮಾಡುವಂತಿರಲಿಲ್ಲ.ವಕೀಲರಿಗೆ ವಿದಾಯ ಹೇಳಿದೆ.ಹೆಸರು ಕೂಗುವವನಿಗೆ ಥ್ಯಾಂಕ್ಸ್ ಹೇಳಿದೆ. ನನ್ನ ವರದಿಗಾರ ಕಾಣಿಸಲೇ ಇಲ್ಲ. ದೂರು ಕೊಟ್ಟಾತನೂ ಇರಲಿಲ್ಲ,ಹೋಟೆಲಿಗೆ ಬಂದೆ. ಇನ್ನು ಯಾವಾಗ ಬರುತ್ತೀರಿ ಎಂದು ಕೇಳಿದಾಗ ಕಕ್ಕಾಬಿಕ್ಕಿಯಾಯಿತು.ಯಾವಾಗ ಬರಬೇಕು ? ಗೊತ್ತಿಲ್ಲ.
ಅಂಧ್ರದಿಂದ ಬಂದ ಒಂದು ಲಡಕಾಸಿ ಬಸ್ಸು ಹಿಡಿದು ಬೆಂಗಳೂರಿಗೆ ಹೊರಟೆ.ಮಾನನಷ್ಟ ಮೊಕದ್ದಮೆಯ ಮೊದಲ ಹಂತ ಮುಗಿಯಿತು.ಅವರು ಮುಂದೆ ಮೇಲ್ಮನವಿ ಹೋಗಬಹುದು.ಮತ್ತೆ ವಿಚಾರಣೆ ನಡೆಯಬಹುದು.ಆದರೆ ಈ ಸಲ ಬೆಂಗಳೂರಿನಲ್ಲಿ. ಅವರು ಬೆಂಗಳೂರಿಗೆ ಬಂದಾಗ ನಾನು ಮುಳಬಾಗಿಲಿನಲ್ಲಿ ಅನುಭವಿಸಿದ ಭಾವನೆಗಳನ್ನು ಅನುಭವಿಸುವರೆ ? ನಾನೂ ಅವರಂತೆ ಹಟ ತೊಡುವೆನೆ ?
ನಾನಂತೂ ಈ ಪ್ರಶ್ನೆಗೆ ಉತ್ತರ ಸಿಗುವುದೇ ಎಂದು ಕಾಯುತ್ತಿದ್ದೇನೆ.
—–
1 Comment
ತುಂಬಾ ಖುಶಿಕೊಟ್ಟಿತು. ಪುಕ್ಕಟ್ಟೆ ಮುಳಬಾಗಿಲು ದರ್ಷನ ಮಾಡಿಸಿ ಕೋರ್ಟಿನ ಮಾಹಿತಿ ಒದಗಿಸಿದ್ದಕ್ಕೆ ಅನಂತ ಧನ್ಯವಾದಗಳು
http://shreeshum.blogspot.com